ಪ್ರಧಾನ ಮಂತ್ರಿಯವರ ಕಛೇರಿ
ನೀಲಿ ಆರ್ಥಿಕತೆ ಆತ್ಮನಿರ್ಭರ ಭಾರತದ ಪ್ರಮುಖ ಮೂಲ
ಕರಾವಳಿ ಪ್ರದೇಶಗಳ ಅಭಿವೃದ್ಧಿ ಮತ್ತು ಶ್ರಮಿಕ ಮೀನುಗಾರರ ಕಲ್ಯಾಣ ಸರ್ಕಾರದ ಪ್ರಮುಖ ಆದ್ಯತೆ: ಪ್ರಧಾನಿ ನರೇಂದ್ರ ಮೋದಿ
Posted On:
05 JAN 2021 4:28PM by PIB Bengaluru
ಕರಾವಳಿ ಪ್ರದೇಶಗಳ ಅಭಿವೃದ್ಧಿ ಮತ್ತು ಕಷ್ಟಪಟ್ಟು ದುಡಿಯುವ ಮೀನುಗಾರರ ಕಲ್ಯಾಣವು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಚ್ಚಿ - ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಅನ್ನು ರಾಷ್ಟ್ರಕ್ಕೆ ಸರ್ಪಿಸಿದ ನಂತರ ಮಾತನಾಡಿದ ಅವರು, ಕರಾವಳಿ ಪ್ರದೇಶದ ಅಭಿವೃದ್ಧಿಗಾಗಿ ನೀಲಿ ಆರ್ಥಿಕತೆಯಲ್ಲಿ ಪರಿವರ್ತನೆ, ಕರಾವಳಿ ಮೂಲಸೌಕರ್ಯಗಳ ಸುಧಾರಣೆ ಮತ್ತು ಸಮುದ್ರ ಪರಿಸರ ವ್ಯವಸ್ಥೆಯ ರಕ್ಷಣೆ ಸೇರಿದಂತೆ ಬಹುಮುಖಿ ಯೋಜನೆಗಳನ್ನು ವಿವರಿಸಿದರು.
ಎರಡು ಕರಾವಳಿ ರಾಜ್ಯಗಳ ಬಗ್ಗೆ ಮಾತನಾಡಿದ ಪ್ರಧಾನಿ, ತ್ವರಿತವಾದ ಮತ್ತು ಸಮತೋಲಿತವಾದ ಕರಾವಳಿ ಪ್ರದೇಶದ ಅಭಿವೃದ್ಧಿಯ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಕರಾವಳಿ ರಾಜ್ಯಗಳಾದ ಕರ್ನಾಟಕ, ಕೇರಳ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ನೀಲಿ ಆರ್ಥಿಕತೆಯ ಅಭಿವೃದ್ಧಿಗೆ ಸಮಗ್ರ ಯೋಜನೆ ಜಾರಿಯಲ್ಲಿದೆ ಎಂದು ಅವರು ಹೇಳಿದರು. ಆತ್ಮನಿರ್ಭರ ಭಾರತದ ಪ್ರಮುಖ ಮೂಲವೆಂದರೆ ನೀಲಿ ಆರ್ಥಿಕತೆ. ಮಲ್ಟಿ-ಮೋಡಲ್ ಸಂಪರ್ಕವನ್ನು ಕೇಂದ್ರೀಕರಿಸಿ ಬಂದರುಗಳು ಮತ್ತು ಕರಾವಳಿ ರಸ್ತೆಗಳನ್ನು ಸಂಪರ್ಕಿಸಲಾಗುತ್ತಿದೆ. ನಮ್ಮ ಕರಾವಳಿ ಪ್ರದೇಶವನ್ನು ಸುಲಭ ಜೀವನ ಮತ್ತು ಸುಲಭ ವ್ಯಾಪಾರದ ಮಾದರಿಯನ್ನಾಗಿಸುವ ಉದ್ದೇಶದಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.
ಸಾಗರ ಸಂಪತ್ತಿನ ಮೇಲೆ ಅವಲಂಬಿತವಾಗಿರುವುದು ಮಾತ್ರವಲ್ಲದೆ, ಆ ಸಂಪತ್ತಿನ ಪಾಲಕರಾಗಿರುವ ಕರಾವಳಿ ಮೀನುಗಾರ ಸಮುದಾಯಗಳ ಬಗ್ಗೆ ಪ್ರಧಾನಿ ಮಾತನಾಡಿದರು. ಇದಕ್ಕಾಗಿ ಕರಾವಳಿ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಸಮೃದ್ಧಗೊಳಿಸಲು ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಆಳ ಸಮುದ್ರದ ಮೀನುಗಾರಿಕೆಗೆ ಮೀನುಗಾರರಿಗೆ ಸಹಾಯ ಮಾಡುವುದು, ಪ್ರತ್ಯೇಕ ಮೀನುಗಾರಿಕೆ ಇಲಾಖೆ, ಮೀನುಗಾರರಿಗೆ ಕೈಗೆಟುಕುವ ಸಾಲವನ್ನು ಒದಗಿಸುವುದು ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ನೀಡುವುದು ಮುಂತಾದ ಕ್ರಮಗಳು ಉದ್ಯಮಿಗಳು ಮತ್ತು ಸಾಮಾನ್ಯ ಮೀನುಗಾರರಿಗೆ ಸಹಾಯ ಮಾಡುತ್ತಿವೆ ಎಂದರು.
20 ಸಾವಿರ ಕೋಟಿ ರೂ. ಮೌಲ್ಯದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ಮತ್ಸ್ಯ ಸಂಪದ ಯೋಜನೆ ಕುರಿತು ಪ್ರಧಾನಿ ಮಾತನಾಡಿದರು. ಮೀನುಗಾರಿಕೆ ಸಂಬಂಧಿತ ರಫ್ತುಗಳಲ್ಲಿ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಭಾರತವನ್ನು ಗುಣಮಟ್ಟದ ಸಂಸ್ಕರಿಸಿದ ಸಮುದ್ರ-ಆಹಾರ ಕೇಂದ್ರವನ್ನಾಗಿ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಡಲಕಳೆ ಕೃಷಿ ಮಾಡಲು ರೈತರನ್ನು ಪ್ರೋತ್ಸಾಹಿಸುತ್ತಿರುವುದರಿಂದ ಹೆಚ್ಚುತ್ತಿರುವ ಕಡಲಕಳೆಯ ಬೇಡಿಕೆಯನ್ನು ಈಡೇರಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ತಿಳಿಸಿದರು.
***
(Release ID: 1686275)
Visitor Counter : 292
Read this release in:
Malayalam
,
Telugu
,
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil