ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸಾಧನೆ - 2020
ಪರಿಶಿಷ್ಟ ಜಾತಿಯ ಪದವಿ ನಂತರದ ವಿದ್ಯಾರ್ಥಿವೇತನದಲ್ಲಿ ಮಹತ್ವದ ಬದಲಾವಣೆಗೆ ಸಂಪುಟದ ಅನುಮೋದನೆ
5 ವರ್ಷಗಳಲ್ಲಿ 4 ಕೋಟಿಗೂ ಅಧಿಕ ಪರಿಶಿಷ್ಟ ಜಾತಿಯ (ಎಸ್ ಸಿ) ವಿದ್ಯಾರ್ಥಿಗಳಿಗೆ 59 ಸಾವಿರ ಕೋಟಿ ಅನುಮತಿ
ಪ್ರಯಾಗ್ ರಾಜ್ ನಲ್ಲಿ ದಿವ್ಯಾಂಗರು ಮತ್ತು ಹಿರಿಯ ನಾಗರಿಕರಿಗೆ ದೈನಂದಿನ ಜೀವನ ಸಾಧನ ಮತ್ತು ಸಲಕರಣೆ ವಿತರಣೆ ಪ್ರಧಾನಿ ನರೇಂದ್ರ ಮೋದಿ
2019ರ ತೃತಿಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣಾ) ಕಾಯ್ದೆ ಜಾರಿ
ತೃತಿಯ ಲಿಂಗಿ ವ್ಯಕ್ತಿಗಳ ಕುರಿತಾದ ರಾಷ್ಟ್ರೀಯ ಪೋರ್ಟಲ್ ಆರಂಭ
ಬಂಡವಾಳ ಹೂಡಿಕೆ ನಿಧಿ ಎಸ್ ಸಿಎಸ್ (ಎಎಸ್ ಐಐಎಂ) ಅಡಿಯಲ್ಲಿ ಅಂಬೇಡ್ಕರ್ ಸಾಮಾಜಿಕ ಅನ್ವೇಷಣಾ ಮತ್ತು ಸಂಪೋಷಣಾ ಮಿಷನ್ ಆರಂಭ
ವಾರದ ಏಳೂ ದಿನ, ದಿನದ 24ಗಂಟೆಗಳೂ ಉಚಿತ ಸಲಹೆ ನೀಡಲು ಮಾನಸಿಕ ಆರೋಗ್ಯ ಪುನರ್ ವಸತಿ ಸಹಾಯವಾಣಿ (1800-599-0019) ಕಾರ್ಯಾರಂಭ
ಭಾರತೀಯ ಸಂಜ್ಞಾ ಭಾಷೆಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ಪರಿವರ್ತಿಸಲು ಎನ್ ಸಿಇಆರ್ ಟಿ ಮತ್ತು ಐಎಸ್ ಎಲ್ ಆರ್ ಟಿಸಿ ನಡುವೆ ಐತಿಹಾಸಿಕ ಒಡಂಬಡಿಕೆಗೆ ಸಹಿ
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆ ಅಡಿ ಮಹತ್ವದ ಸುಧಾರಣೆಗಳು
Posted On:
01 JAN 2021 7:17PM by PIB Bengaluru
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ನಿರ್ದಿಷ್ಟ ಗುಂಪುಗಳ ಉತ್ಪಾದಕತೆ ಹೆಚ್ಚಳಕ್ಕೆ, ಸುರಕ್ಷತೆ ಮತ್ತು ಗೌರವಯುತ ಬಾಳ್ವೆ ನಡೆಸುವಂತಾಗಲು ಸೂಕ್ತ ಬೆಂಬಲದ ನೆರವಿನೊಂದಿಗೆ ಅವರ ಬೆಳವಣಿಗೆ ಮತ್ತು ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿದೆ. ಅದು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಹಾಗೂ ಪುನರ್ ವಸತಿ ಕಾರ್ಯಕ್ರಮಗಳ ಮೂಲಕ ಅಗತ್ಯವಿರುವೆಡೆ ನಿರ್ದಿಷ್ಟ ಗುಂಪುಗಳಿಗೆ ಹಲವು ಕಾರ್ಯಕ್ರಮಗಳ ಮೂಲಕ ಬೆಂಬಲ ಹಾಗೂ ಸಬಲೀಕರಣ ಗುರಿಯನ್ನು ಹೊಂದಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮಾಜದ ಈ ವರ್ಗಗಳ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ. ಅವುಗಳೆಂದರೆ (i)ಪರಿಶಿಷ್ಟ ಜಾತಿ (ii) ಇತರೆ ಹಿಂದುಳಿದ ವರ್ಗ (iii) ಹಿರಿಯ ನಾಗರಿಕರು (iv) ಮದ್ಯಪಾನ ಮತ್ತು ಇತರೆ ಮಾದಕದ್ರವ್ಯಗಳ ಸಂತ್ರಸ್ತರು (v) ತೃತೀಯ ಲಿಂಗಿ ವ್ಯಕ್ತಿಗಳು (vi) ಭಿಕ್ಷುಕರು (vii) ಅಧಿಸೂಚಿತ ಮತ್ತು ಅಲೆಮಾರಿ ಬುಡಕಟ್ಟು ವರ್ಗದವರು (ಡಿಎನ್ ಟಿಎಸ್) (viii) ಆರ್ಥಿಕವಾಗಿ ಹಿಂದುಳಿದ ವರ್ಗಗಳು (ಇಬಿಸಿಎಸ್) ಮತ್ತು (xi) ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲ್ಯೂಎಸ್).
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ (ಡಿಇಪಿಡಬ್ಲ್ಯೂಡಿ) ಅನ್ನು ಮೇ 2012ರಲ್ಲಿ ಸ್ಥಾಪಿಸಲಾಯಿತು. ಇದರ ಉದ್ದೇಶ ವಿಶೇಷಚೇತನ ವ್ಯಕ್ತಿಗಳ ಸೇರ್ಪಡೆ ಮತ್ತು ಸಬಲೀಕರಣಕ್ಕೆ ಅಗತ್ಯ ನೆರವು ನೀಡುವುದು ಹಾಗೂ ವಿಶೇಷಚೇತನ ವ್ಯಕ್ತಿಗಳು ಅಂದರೆ ದಿವ್ಯಾಂಗರ ಅಭಿವೃದ್ಧಿಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುವುದು. ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಅಂತರ ಶಿಸ್ತೀಯ ಪ್ರಕ್ರಿಯೆಯಾಗಿದ್ದು, ಇದರಲ್ಲಿ ನಿಯಂತ್ರಣ, ತ್ವರಿತ ಪತ್ತೆ, ಮಧ್ಯ ಪ್ರವೇಶ, ಶೈಕ್ಷಣಿಕ, ಆರೋಗ್ಯ, ವೃತ್ತಿಪರ ತರಬೇತಿ, ಪುನರ್ ವಸತಿ ಮತ್ತು ಸಾಮಾಜಿಕ ಐಕ್ಯತೆ ಮತ್ತಿತರ ಹಲವು ಅಂಶಗಳು ಒಳಗೊಂಡಿವೆ. ಈ ಇಲಾಖೆಯ ಮುನ್ನೋಟ ಮತ್ತು ಉದ್ದೇಶ ಹಾಗೂ ಕಾರ್ಯತಂತ್ರಗಳು ಹೀಗಿವೆ.
ಮುನ್ನೋಟ: ವಿಶೇಷಚೇತನ ವ್ಯಕ್ತಿಗಳ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಮಾನ ಅವಕಾಶಗಳನ್ನು ಸೃಷ್ಟಿಸಿ, ಅವರನ್ನೊಳಗೊಂಡ ಸಮಾಜವನ್ನು ಸೃಷ್ಟಿಸುವುದು, ಆ ಮೂಲಕ ಅವರು ಉಪಯುಕ್ತ ರೀತಿಯಲ್ಲಿ ಸುರಕ್ಷಿತ ಮತ್ತು ಗೌರವಯುತ ಬಾಳ್ವೆ ನಡೆಸಲು ಸಹಕರಿಸುವುದು. ಮಿಷನ್: ಕಾಯ್ದೆಗಳು/ ಸಂಸ್ಥೆಗಳು ಕೇಂದ್ರಗಳ ಮೂಲಕ ವಿಕಲಚೇತನ ವ್ಯಕ್ತಿಗಳ ಸಬಲೀಕರಣಗೊಳಿಸುವುದು ಮತ್ತು ಅವರ ಪುನರ್ ವಸತಿಗೆ ಯೋಜನೆಗಳನ್ನು ರೂಪಿಸುವುದು ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಸಮಾನ ಅವಕಾಶಗಳನ್ನು ಹಾಗೂ ಪೂರಕ ವಾತಾವರಣವನ್ನು ಸೃಷ್ಟಿಸುವುದು ಮತ್ತು ಅವರು ಸಮಾಜದಲ್ಲಿ ಉಪಯುಕ್ತ ಸದಸ್ಯರಂತೆ ಮತ್ತು ಸ್ವತಂತ್ರವಾಗಿ ಭಾಗವಹಿಸಲು ನೆರವು ನೀಡುವುದು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಕೈಗೊಂಡಿರುವ ಪ್ರಮುಖ ಸುಧಾರಣಾ ಚಟುವಟಿಕೆಗಳು ಈ ಕೆಳಗಿನಂತಿವೆ:
- ಪರಿಶಿಷ್ಟ ಜಾತಿಯ ಪೋಸ್ಟ್ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ ಯೋಜನೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಕೇಂದ್ರ ಸಂಪುಟ ಒಪ್ಪಿಗೆ; 5 ವರ್ಷಗಳಲ್ಲಿ 4 ಕೋಟಿಗೂ ಅಧಿಕ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪದವಿ ನಂತರದ ವಿದ್ಯಾರ್ಥಿ ವೇತನ ಯೋಜನೆಗೆ 59,000 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡುವ ಮೂಲಕ ಸರ್ಕಾರದಿಂದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿ, ಕೇಂದ್ರ ಸರ್ಕಾರ ಪ್ರಾಯೋಜಿತ ‘ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳ ಪೋಸ್ಟ್ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ (ಪಿಎಂಎಸ್-ಎಸ್ ಸಿ)’ಯೋಜನೆ ಅಡಿ ಮಹತ್ವದ ಬದಲಾವಣೆಗಳನ್ನು ತರಲು ಅನಮೋದನೆ ನೀಡಿತು. ಇದರಿಂದ ಮುಂದಿನ ಐದು ವರ್ಷಗಳಲ್ಲಿ 4 ಕೋಟಿಗೂ ಅಧಿಕ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಅವರು ಯಶಸ್ವಿಯಾಗಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಬಹುದಾಗಿದೆ. ಸಚಿವ ಸಂಪುಟ 59,048 ಕೋಟಿ ರೂ.ಗಳ ಒಟ್ಟು ಹೂಡಿಕೆಗೆ ಅನುಮೋದನೆ ನೀಡಿದೆ. ಇದರಲ್ಲಿ ಕೇಂದ್ರ ಸರ್ಕಾರ 35,534 ಕೋಟಿ ರೂ.(ಶೇ.60) ಮತ್ತು ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಖರ್ಚು ಮಾಡಲಿವೆ. ಇದು ಹಾಲಿ ಇರುವ ‘ಬದ್ಧತೆಯ ಹೊಣೆಗಾರಿಕೆ’ ವ್ಯವಸ್ಥೆಯನ್ನು ಬದಲಾಯಿಸಲಿದೆ ಮತ್ತು ಈ ಮಹತ್ವದ ಯೋಜನೆಯಲ್ಲಿ ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗುವಂತೆ ಮಾಡಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪೋಸ್ಟ್ ಮೆಟ್ರಿಕೆ ವಿದ್ಯಾರ್ಥಿವೇತನ ಯೋಜನೆಯಿಂದ ಸರ್ಕಾರವೇ ಶಿಕ್ಷಣದ ವೆಚ್ಚ ಭರಿಸಲಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು 11ನೆಯ ತರಗತಿಯ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲು ನೆರವಾಗಲಿದೆ. ಕೇಂದ್ರ ಸರ್ಕಾರ ಇದಕ್ಕೆ ಹೆಚ್ಚಿನ ಒತ್ತು ನೀಡಲು ಬದ್ಧವಾಗಿದೆ ಮತ್ತು ಆ ಮೂಲಕ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಜಿಇಆರ್(ಉನ್ನತ ಶಿಕ್ಷಣ) ಪ್ರಮಾಣವನ್ನು ಐದು ವರ್ಷಗಳಲ್ಲಿ ರಾಷ್ಟ್ರೀಯ ಮಾನದಂಡಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸಿದೆ.
- ತೃತೀಯ ಲಿಂಗಿ ವ್ಯಕ್ತಿಗಳ(ಹಕ್ಕುಗಳ ರಕ್ಷಣೆ) ಕಾಯ್ದೆ 2019 ಜಾರಿ:
ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ 2019, 2020ರ ಜನವರಿ 10ರಿಂದ ಜಾರಿಗೆ ಬಂದಿತು. ಇದು ತೃತೀಯ ಲಿಂಗಿ ವ್ಯಕ್ತಿಗಳ ಕಲ್ಯಾಣ ನಿಟ್ಟಿನಲ್ಲಿ ಕೈಗೊಂಡ ಮೊದಲ ಸಮಗ್ರ ಹೆಜ್ಜೆಯಾಗಿದೆ. ಕಾಯ್ದೆಯ ಅಂಶಗಳನ್ನು ಜಾರಿಗೊಳಿಸಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತೃತೀಯ ಲಿಂಗಿ ವ್ಯಕ್ತಿಗಳ(ಹಕ್ಕಗಳ ರಕ್ಷಣೆ) ನಿಯಮ 2020 ಕುರಿತು ಅಧಿಸೂಚನೆಯನ್ನು ಭಾರತೀಯ ಗೆಜೆಟ್ ನಲ್ಲಿ ಪ್ರಕಟಿಸಿತು. ಈ ನಿಯಮದ ಅನ್ವಯ ತೃತೀಯ ಲಿಂಗಿ ಸಮುದಾಯಕ್ಕೆ ಸಮಗ್ರ ಕಲ್ಯಾಣ ಕಾರ್ಯಕ್ರಮಗಳು ಖಾತ್ರಿಪಡಿಸುವುದಲ್ಲದೆ, ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಅಗತ್ಯ ನೆರವು ನೀಡಲಾಗುವುದು. ಅವರ ಹಕ್ಕು ಮತ್ತು ಪ್ರಕ್ರಿಯೆಯಲ್ಲಿ ತೃತೀಯ ಲಿಂಗಿಗಳಿಗೆ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ವಿತರಿಸುವ ಅಂಶಗಳು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ತೊಂದರೆ ಇಲ್ಲದೆ ತೃತೀಯ ಲಿಂಗಿ ವ್ಯಕ್ತಿಗಳು ಸ್ವತಂತ್ರವಾಗಿ ಗುರುತಿನ ಚೀಟಿಗಳನ್ನು ಪಡೆಯಲು ಅನುಕೂಲವಾಗುವಂತೆ ಸುಗಮ ಹಾಗೂ ಅಡೆತಡೆ ರಹಿತ ವ್ಯವಸ್ಥೆಯನ್ನು ರೂಪಿಸಲಾಗಿದೆ.
- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ‘ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಪೋರ್ಟಲ್’ ಆರಂಭ (2020ರ ನವೆಂಬರ್ 25)
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ‘ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಪೋರ್ಟಲ್’ ಅನ್ನು ಆರಂಭಿಸಿತು. ಈ ರಾಷ್ಟ್ರೀಯ ಪೋರ್ಟಲ್ ಅನ್ನು ತೃತೀಯ ಲಿಂಗಿ ವ್ಯಕ್ತಿಗಳ(ಹಕ್ಕುಗಳ ರಕ್ಷಣೆ) ಕಾಯ್ದೆ 2020 ಅನ್ನು ಸೆಪ್ಟೆಂಬರ್ 29ರಂದು ಅಧಿಸೂಚನೆ ಹೊರಡಿಸಲಾಯಿತು. ಆನಂತರ ಕೇವಲ ಎರಡು ತಿಂಗಳಲ್ಲಿ ಪೋರ್ಟಲ್ ರೂಪಿಸಲಾಯಿತು. ಇದು ತೃತೀಯ ಲಿಂಗಿ ವ್ಯಕ್ತಿಗಳಿಗೆ ಅತ್ಯಂತ ಉಪಯುಕ್ತ ಪೋರ್ಟಲ್ ಆಗಿದ್ದು, ಅವರು ದೇಶದ ಯಾವುದೇ ಮೂಲೆಯಿಂದ ಬೇಕಾದರೂ ಡಿಜಿಟಲ್ ವಿಧಾನದಲ್ಲಿ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಗಳನ್ನು ಪಡೆಯಬಹುದಾಗಿದೆ. ಇದರಿಂದ ಆಗುವ ಪ್ರಮುಖ ಪ್ರಯೋಜನವೆಂದರೆ ತೃತೀಯ ಲಿಂಗಿ ವ್ಯಕ್ತಿಗಳು ಯಾವುದೇ ಕಚೇರಿಗೆ ಭೇಟಿ ನೀಡದೆ ಮತ್ತು ಭೌತಿಕವಾಗಿ ಉಪಸ್ಥಿತರಿರದೆ ತಮ್ಮ ಗುರುತಿನ ಚೀಟಿಗಳನ್ನು ಪಡೆಯಬಹುದಾಗಿದೆ. ಈ ಪೋರ್ಟಲ್ ಮೂಲಕ ತೃತೀಯ ಲಿಂಗಿಗಳು ತಮ್ಮ ಅರ್ಜಿಗಳ ಸ್ಥಿತಿಗತಿ ಕುರಿತು ಮಾಹಿತಿಯನ್ನು ಪಡೆಯಬಹುದಲ್ಲದೆ, ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುತ್ತದೆ. ಯಾವುದೇ ವಿಳಂಬವಿಲ್ಲದೆ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಗಳನ್ನು ವಿತರಿಸುವ ಪ್ರಕ್ರಿಯೆಯ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳೂ ಸಹ ನಿರ್ದಿಷ್ಟ ಕಾಲಮಿತಿಯನ್ನು ಪಾಲಿಸಬೇಕಾಗಿದೆ. ಒಮ್ಮೆ ಪ್ರಮಾಣಪತ್ರ ಮತ್ತು ಐಡಿ ಕಾರ್ಡ್ ಗಳನ್ನು ವಿತರಿಸಿದರೆ ಅರ್ಜಿದಾರರು ಪೋರ್ಟಲ್ ನಿಂದಲೇ ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಒಂದು ವೇಳೆ ವಿಳಂಬ ಅಥವಾ ತಿರಸ್ಕೃತವಾದರೆ ಅರ್ಜಿದಾರರಿಗೆ ತಮ್ಮ ಕುಂದುಕೊರತೆಗಳನ್ನು ವೆಬ್ ಸೈಟ್ ಮೂಲಕವೇ ಸಲ್ಲಿಸಲು ಅವಕಾಶವಿದ್ದು, ಅದನ್ನು ಸಂಬಂಧಿಸಿದ ವ್ಯಕ್ತಿ ಆದಷ್ಟು ಶೀಘ್ರ ವಿಲೇವಾರಿ ಮಾಡಲಿದ್ದಾರೆ. ಈ ಡ್ಯಾಶ್ ಬೋರ್ಡ್ ಮೂಲಕ ವಿತರಣಾ ಅಧಿಕಾರಿಗಳು ಎಷ್ಟು ಅರ್ಜಿಗಳನ್ನು ಸ್ವೀಕರಿಸಿದ್ದಾರೆ, ಎಷ್ಟು ಅರ್ಜಿಗಳನ್ನು ಅನುಮೋದಿಸಿದ್ದಾರೆ ಹಾಗೂ ಎಷ್ಟು ಬಾಕಿ ಇವೆ ಅಥವಾ ಎಷ್ಟನ್ನು ತಡೆಹಿಡಿಯಲಾಗಿದೆ ಎಂಬುದನ್ನು ನೋಡಬಹುದಾಗಿದ್ದು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ. ಈ ಪೋರ್ಟಲ್ ಸಮುದಾಯದ ಸಾಕಷ್ಟು ಮಂದಿಗೆ ಅಭಿವೃದ್ಧಿ ಹೊಂದಲು ಸಹಾಯಕವಾಗಲಿದೆ ಮತ್ತು ತಮ್ಮ ತೃತೀಯ ಲಿಂಗಿ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಗಳನ್ನು ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ಪ್ರಕಾರ ಪಡೆಯಲು ಅನುಕೂಲವಾಗಿದೆ.
ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ರೂಪಿಸಿರುವ ರಾಷ್ಟ್ರೀಯ ಪೋರ್ಟಲ್ ನಲ್ಲಿ ಮೊದಲಿನಿಂದ ಕೊನೆಯವರೆಗೂ ಆನ್ ಲೈನ್ ಪ್ರಕ್ರಿಯೆ ಒಳಗೊಂಡಿದೆ. ತೃತೀಯ ಲಿಂಗಿ ವ್ಯಕ್ತಿಗಳು ದೇಶದ ಯಾವುದೇ ಮೂಲೆಯಿಂದ ಬೇಕಾದರೂ ಪೋರ್ಟಲ್ ಮೂಲಕ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಸಮುದಾಯದ ಸಾಕಷ್ಟು ಮಂದಿ ಮುಂದೆ ಬಂದು ತೃತೀಯ ಲಿಂಗಿ ವ್ಯಕ್ತಿಗಳು(ಹಕ್ಕುಗಳ ರಕ್ಷಣಾ ಕಾಯ್ದೆ) 2019 ಪ್ರಕಾರ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಗಳನ್ನು ಪಡೆದುಕೊಳ್ಳಲು ನೆರವಾಗಿದೆ.
- ನಶಮುಕ್ತ ಭಾರತ: ಹೆಚ್ಚು ಬಾಧಿತವಾಗಿರುವ 272 ಜಿಲ್ಲೆಗಳಿಗೆ ವಾರ್ಷಿಕ ಕ್ರಿಯಾ ಯೋಜನೆ (2020-21)ಗೆ ಚಾಲನೆ; ಮಾದಕದ್ರವ್ಯ ಮತ್ತು ಕಳ್ಳ ಸಾಗಾಣೆ ವಿರೋಧಿ ಅಂತಾರಾಷ್ಟ್ರೀಯ ದಿನ(26 ಜೂನ್ 2020) ದಂದು ಚಾಲನೆ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಮಾದಕದ್ರವ್ಯ ಮತ್ತು ಕಳ್ಳಸಾಗಾಣೆ ಅಂತಾರಾಷ್ಟ್ರೀಯ ವಿರೋಧಿ ದಿನದ ವೇಳೆ “ನಶಮುಕ್ತ ಭಾರತ: ಅತಿ ಹೆಚ್ಚು ಬಾಧಿತ 272 ಜಿಲ್ಲೆಗಳಿಗೆ ವಾರ್ಷಿಕ ಕ್ರಿಯಾ ಯೋಜನೆ (2020-21)”ಗೆ ಚಾಲನೆ ನೀಡಿತು. ನಶಮುಕ್ತ ಭಾರತ ವಾರ್ಷಿಕ ಕ್ರಿಯಾ ಯೋಜನೆ 2020-21 ಅಡಿಯಲ್ಲಿ ಭಾರತ ಅತ್ಯಂತ ಬಾಧಿತ 272 ಜಿಲ್ಲೆಗಳಿಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಮತ್ತು ಮಾದಕದ್ರವ್ಯ ಕಳ್ಳಸಾಗಾಣೆ, ಸಾಮಾಜಿಕ ನ್ಯಾಯ ಸಚಿವಾಲಯದಿಂದ ಜನಸಂಪರ್ಕ/ಜಾಗೃತಿ ಹಾಗೂ ಆರೋಗ್ಯ ಸಚಿವಾಲಯದಿಂದ ಚಿಕಿತ್ಸೆ ಈ ಮೂರು ಹಂತದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕ್ರಿಯಾ ಯೋಜನೆಯಲ್ಲಿ ಈ ಕೆಳಗಿನ ಅಂಶಗಳು ಒಳಗೊಂಡಿವೆ. ಜಾಗೃತಿ ಮೂಡಿಸುವ ಕಾರ್ಯಕ್ರಮಗಳು; ಉನ್ನತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯದ ಆವರಣಗಳು ಮತ್ತು ಶಾಲೆಗಳಿಗೆ ಹೆಚ್ಚಿನ ಒತ್ತು; ಜನಸಂಪರ್ಕ ಅಭಿಯಾನ ಮತ್ತು ಅವಲಂಬಿತ ಜನಸಂಖ್ಯೆಯನ್ನು ಗುರುತಿಸುವುದು; ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯಗಳಿಗೆ ಗಮನಹರಿಸುವುದು ಮತ್ತು ಸೇವೆ ಒದಗಿಸುವವರ ಸಾಮರ್ಥ್ಯವೃದ್ಧಿ ಕಾರ್ಯಕ್ರಮಗಳು.
ಸಚಿವಾಲಯ, ಮಾದಕದ್ರವ್ಯ ವ್ಯಸನಿಗಳನ್ನು ಪತ್ತೆಹಚ್ಚಲು ಅವರಿಗೆ ಚಿಕಿತ್ಸೆ ಮತ್ತು ಪುನರ್ ವಸತಿ ಸೇವೆಗಳನ್ನು ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಕ್ರಮಗಳನ್ನು ಕೈಗೊಂಡಿದೆ. ಅದು ಮಾದಕ ವ್ಯಸನ ನಿಯಂತ್ರಣ ಕೇಂದ್ರಗಳನ್ನು ನಡೆಸುತ್ತಿರುವ ದೇಶಾದ್ಯಂತ ಇರುವ ಸರ್ಕಾರೇತರ ಸಂಸ್ಥೆಗಳಿಗೆ ಆರ್ಥಿಕ ಸಹಾಯಧನವನ್ನು ನೀಡುತ್ತಿದೆ. ಅಲ್ಲದೆ ಸಚಿವಾಲಯ, ಮಾದಕ ವಸ್ತುಗಳ ಸಂತ್ರಸ್ತರಿಗೆ ಅವರ ಕುಟುಂಬ ಮತ್ತು ಒಟ್ಟಾರೆ ಸಮಾಜಕ್ಕೆ ಸಹಾಯ ಮಾಡಲು ವಾರದ ಏಳು ದಿನ, ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುವ ವ್ಯಸನಮುಕ್ತ ರಾಷ್ಟ್ರೀಯ ಉಚಿತ ದೂರವಾಣಿ ಸಂಖ್ಯೆ 1800110031 ಆರಂಭಿಸಿದೆ.
ಮಾದಕದ್ರವ್ಯ ವ್ಯಸನ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ನಾನಾ ಹಂತಗಳಲ್ಲಿ ಸಮಗ್ರ ಗಂಭೀರ ಕ್ರಮಗಳ ಅಗತ್ಯತೆಯನ್ನು ಮನಗಂಡು ಸಚಿವಾಲಯ ರಾಜ್ಯಗಳಿಗೆ ಸ್ಥಳೀಯ ಸ್ಥಿತಿಗತಿಗಳನ್ನು ಆಧರಿಸಿ ನಿರ್ದಿಷ್ಟ ಉಪಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸುವಂತೆ ಕೇಳಿದೆ. ಅಲ್ಲದೆ ನಿರ್ದಿಷ್ಟ ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಮಾದಕವಸ್ತುಗಳ ಬೇಡಿಕೆಗಳನ್ನು ತಗ್ಗಿಸಲು ಸೂಕ್ತ ಹಾಗೂ ನಿರ್ದಿಷ್ಟ ಕಾರ್ಯತಂತ್ರಗಳನ್ನು ರೂಪಿಸುವಂತೆ ಸೂಚಿಸಿದೆ. ಎನ್ಎಪಿಡಿಡಿಆರ್ ಅಡಿಯಲ್ಲಿ ಕೈಗೊಂಡಿರುವ ಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮೇಲ್ವಿಚಾರಣೆ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳನ್ನು ಸೇರಿಸಿಕೊಳ್ಳಲಾಗಿದೆ.
- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಪರಿಶಿಷ್ಟ ಜಾತಿಯವರಿಗಾಗಿ ಬಂಡವಾಳ ಹೂಡಿಕೆ ನಿಧಿ (ಎಎಸ್ಐಐಎಂ) ಅಡಿಯಲ್ಲಿ ಅಂಬೇಡ್ಕರ್ ಸಾಮಾಜಿಕ ಅನ್ವೇಷಣಾ ಮತ್ತು ಸಂಪೋಷಣಾ ಮಿಷನ್ ಗೆ ಚಾಲನೆ (2020ರ ಸೆಪ್ಟೆಂಬರ್ 30)
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಪರಿಶಿಷ್ಟ ಜಾತಿಯವರಿಗಾಗಿ ಬಂಡವಾಳ ಹೂಡಿಕೆ ನಿಧಿ(ಎಎಸ್ಐಐಎಂ) ಅಡಿಯಲ್ಲಿ ಅಂಬೇಡ್ಕರ್ ಸಾಮಾಜಿಕ ಅನ್ವೇಷಣಾ ಮತ್ತು ಸಂಪೋಷಣಾ ಮಿಷನ್ ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿತು. ಈ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಲ್ಲಿ ಆವಿಷ್ಕಾರ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ವೆಂಚರ್ ಕ್ಯಾಪಿಟಲ್ ಫಂಡ್ (ವಿಸಿಎಫ್-ಎಸ್ ಸಿ) ಅನ್ನು 2014-15ರಲ್ಲಿ ಆರಂಭಿಸಿತು. ಆ ಮೂಲಕ ಪರಿಶಿಷ್ಟ ಜಾತಿ/ದಿವ್ಯಾಂಗ ಯುವಜನತೆಯಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಮತ್ತು ಅವರನ್ನು ‘ಉದ್ಯೋಗ ನೀಡುವವರನ್ನಾಗಿ’ ರೂಪಿಸುವುದಾಗಿದೆ. ಈ ನಿಧಿಯ ಉದ್ದೇಶ ಪರಿಶಿಷ್ಟ ಜಾತಿಯ ಉದ್ದಿಮೆದಾರರ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಆರ್ಥಿಕ ನೆರವು ಒದಗಿಸುವುದು. ಈ ನಿಧಿಯಡಿ ಪರಿಶಿಷ್ಟ ಜಾತಿಯ ಉದ್ದಿಮೆದಾರರು ಸ್ಥಾಪಿಸಿರುವ 117 ಕಂಪನಿಗಳಿಗೆ ತಮ್ಮ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು ಆರ್ಥಿಕ ನೆರವನ್ನು ಅನುಮೋದಿಸಲಾಗಿದೆ. “ಅಂಬೇಡ್ಕರ್ ಸಾಮಾಜಿಕ ಅನ್ವೇಷಣಾ ಸಂಪೋಷಣಾ ಮಿಷನ್(ಎಎಸ್ಐಐಎಂ)” ಅಡಿಯಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ 1,000 ಪರಿಶಿಷ್ಟ ಜಾತಿಯ ಯುವಕರನ್ನು ಗುರುತಿಸಲಾಗುವುದು ಮತ್ತು ಅವರಿಗೆ ನವೋದ್ಯಮದ ಚಿಂತನೆಗಳ ಮೂಲಕ ತಂತ್ರಜ್ಞಾನ ವ್ಯವಹಾರ ಸಂಪೋಷಣಾ ಕೇಂದ್ರಗಳನ್ನು(ಟಿಬಿಐಎಸ್) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಮೂರು ವರ್ಷಗಳಲ್ಲಿ ಸುಮಾರು 30 ಲಕ್ಷ ರೂ. ಗಳವರೆಗೆ ನೆರವು ನೀಡಲಾಗುವುದು. ಆ ಮೂಲಕ ನವೋದ್ಯಮದ ಚಿಂತನೆಗಳನ್ನು ವಾಣಿಜ್ಯ ಹೂಡಿಕೆಯನ್ನಾಗಿ ಪರಿವರ್ತಿಸಲು ಅವಕಾಶ ಸಿಗಲಿದೆ. ಯಶಸ್ವಿ ಉದ್ದಿಮೆದಾರರಿಗೆ ಪರಿಶಿಷ್ಟ ಜಾತಿಯ ವೆಂಚರ್ ಕ್ಯಾಪಿಟಲ್ ನಿಧಿಯಡಿ 5 ಕೋಟಿಯ ವರೆಗೆ ನೆರವು ಪಡೆಯಲು ಅರ್ಹವಾಗುತ್ತವೆ.
ಸಚಿವಾಲಯ ಪರಿಶಿಷ್ಟ ಜಾತಿಯವರಿಗಾಗಿ ವೆಂಚರ್ ಕ್ಯಾಪಿಟಲ್ ನಿಧಿಯನ್ನು(ವಿಸಿಎಫ್ಎಸ್ ಸಿ) ಎಎಸ್ಐಐಎಂ ಮೂಲಕ ಆರಂಭಿಸಲು ನಿರ್ಧರಿಸಿತು. ಅದರ ಧ್ಯೇಯೋದ್ದೇಶಗಳೆಂದರೆ ಪರಿಶಿಷ್ಟ ಜಾತಿಯ ಯುವ ಜನಾಂಗದಲ್ಲಿ ದಿವ್ಯಾಂಗರಿಗೆ ವಿಶೇಷ ಒತ್ತು ನೀಡಿ, ಉದ್ಯಮ ಶೀಲತೆಯನ್ನು ಉತ್ತೇಜಿಸುವುದು. 2024ರ ವರೆಗೆ ತಂತ್ರಜ್ಞಾನ ವ್ಯಾಪಾರ ಸಂಪೋಷಣಾ ಕೇಂದ್ರಗಳು(ಟಿಬಿಐಎಸ್) ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 1,000 ನವೀನ ಚಿಂತನೆಗಳನ್ನು ಬೆಂಬಲಿಸುವುದು; ನವೋದ್ಯಮ ಚಿಂತನೆಗಳನ್ನು ಕೈಹಿಡಿದು ಬೆಂಬಲಿಸಿ, ಉತ್ತೇಜನ ನೀಡಿ ಅವು ವಾಣಿಜ್ಯ ಹಂತ ತಲುಪವವರೆಗೆ ಸಮಾನ ಬೆಂಬಲ ನೀಡುವುದು ಮತ್ತು ಆವಿಷ್ಕಾರಿ ಮನೋಭಾವದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಯೋಜನೆಗಳ ಮೂಲಕ ವಿಶ್ವಾಸ ತುಂಬಿ ಉದ್ಯಮಶೀಲರನ್ನಾಗಿ ಮಾಡುವುದು. ವಿಸಿಎಫ್-ಎಸ್ ಸಿ ಅಡಿಯಲ್ಲಿ ಈ ಪರಿಶಿಷ್ಟ ಜಾತಿಯ ಯುವ ಜನಾಂಗದಲ್ಲಿ ಅನ್ವೇಷಣೆಯನ್ನು ಉತ್ತೇಜಿಸುವುದು ಮತ್ತು ಅವರು ಉದ್ಯೋಗ ಬಯಸುವವರಾಗದೆ ಉದ್ಯೋಗ ನೀಡುವಂತಹವರನ್ನಾಗಿ ಮಾಡಲು ಸಹಾಯ ನೀಡುವುದು ಹಾಗೂ ಪ್ರಧಾನಮಂತ್ರಿಗಳ ಕರೆಯಂತೆ ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಗೆ ಮತ್ತಷ್ಟು ಪುಷ್ಠಿ ನೀಡುವುದು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಲ್ಲಿ ಆವಿಷ್ಕಾರ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಾವಿನ್ಯ ಚಿಂತನೆಗಳನ್ನು ಗುರುತಿಸುವ ಅಗತ್ಯವಿದೆ ಮತ್ತು ವಿನೂತನ ಹಾಗೂ ತಂತ್ರಜ್ಞಾನ ಆಧಾರಿತ ವ್ಯವಹಾರಿಕ ಚಿಂತನೆಗಳನ್ನು ಹೊಂದಿರುವ ಯುವ ಉದ್ಯಮಿಗಳಿಗೆ ಬೆಂಬಲ ನೀಡಲು ಹೆಚ್ಚಿನ ಗಮನಹರಿಸುವುದು. ತಂತ್ರಜ್ಞಾನ ಆಧಾರಿತ ವಾಣಿಜ್ಯ ಚಿಂತನೆಗಳಿಗೆ ಅಥವಾ ತಂತ್ರಜ್ಞಾನ ವ್ಯವಹಾರಿಕ ಸಂಪೋಷಣಾ ಕೇಂದ್ರಗಳಿಗೆ(ಟಿಬಿಐಎಸ್)ಗಳಿಗೆ ಸಹಾಯ ಮಾಡಿ ಅವರು ಯಶಸ್ವಿ ವಾಣಿಜ್ಯ ಉದ್ದಿಮೆಗಳಾಗಲು ನೆರವು ನೀಡುವುದು. ಇಂತಹ ಕ್ರಮಗಳಿಂದಾಗಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಆವಿಷ್ಕಾರ ಮತ್ತು ಉದ್ಯಮಶೀಲರಾಗಲು ಉತ್ತೇಜನ ದೊರಕುವುದಲ್ಲದೆ, ಸರ್ಕಾರದ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ಮತ್ತಷ್ಟು ಪುಷ್ಠಿ ಸಿಗಲಿದೆ.
500 ಕೋಟಿ ರೂ. ಬಂಡವಾಳದೊಂದಿಗೆ 2016ರಲ್ಲಿ ಎಎಸ್ಐಐಎಂ ಅಡಿಯಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ವೆಂಚರ್ ಕ್ಯಾಪಿಟಲ್ ನಿಧಿ(ವಿಸಿಎಫ್-ಎಸ್ ಸಿ) ಜಾರಿಗೊಳಿಸಲಾಯಿತು. ಇದು ಆರಂಭವಾದ ನಂತರ ಸುಮಾರು 118 ಕಂಪನಿಗಳಿಗೆ 444.14 ಕೋಟಿ ರೂ.ಗಳನ್ನು ವಿಸಿಎಫ್-ಎಸ್ ಸಿ ಅಡಿಯಲ್ಲಿ ಆರ್ಥಿಕ ನೆರವು ನೀಡಲಾಗಿದೆ. ಆವಿಷ್ಕಾರಿ ಉದ್ಯಮಿಗಳು, ನವೋದ್ಯಮಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ಸಲುವಾಗಿ ಮೆಸರ್ಸ್ ಎಸ್ ಜಿ & ಇ ಅಡಿಯಲ್ಲಿ ವಿಸಿಎಫ್-ಎಸ್ ಸಿಗೆ ಮಾರ್ಗಸೂಚಿಗಳನ್ನು ಮಾರ್ಪಾಡು ಮಾಡಲಾಗಿದ್ದು, ಅನ್ವೇಷಣಾ ಹಾಗೂ ತಂತ್ರಜ್ಞಾನ ಆಧಾರಿತ ಚಿಂತನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಯುವ ಪರಿಶಿಷ್ಟ ಜಾತಿಯ ಉದ್ದಿಮೆದಾರರಿಗೆ ಕಂಪನಿಗಳು ಹಾಗೂ ಸಂಸ್ಥೆಗಳನ್ನು ಆರಂಭಿಸಲು ಬೆಂಬಲ ನೀಡುವುದಕ್ಕೆ ಆದ್ಯತೆ ನೀಡಲಾಗಿದೆ.
ವಿಸಿಎಫ್-ಎಸ್ ಸಿ ಅಡಿಯಲ್ಲಿ ನಿರ್ದಿಷ್ಟ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು / ಯುವ ಉದ್ದಿಮೆದಾರರು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಬಲಿತ ತಂತ್ರಜ್ಞಾನ ವಾಣಿಜ್ಯ ಸಂಪೋಷಣಾ ಕೇಂದ್ರಗಳು(ಟಿಬಿಐಎಸ್) ಸೇರಿದಂತೆ ತಂತ್ರಜ್ಞಾನ ಸಂಸ್ಥೆಗಳು ಮತ್ತು ವಾಣಿಜ್ಯ/ನಿರ್ವಹಣಾ ಶಾಲೆಗಳಿಗೆ ನೆರವು ನೀಡಲಾಗುವುದು. ವಿಸಿಎಫ್-ಎಸ್ ಸಿಯ ಯುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು / ಯುವ ಉದ್ದಿಮೆದಾರರ ಸಂಸ್ಥೆಗಳಿಗೆ ಮೂರು ವರ್ಷಗಳ ಅವಧಿಗೆ 30 ಲಕ್ಷ ರೂ.ಗಳವರೆಗೆ ನೆರವು ನೀಡಲಾಗುವುದು. ಮುಂದಿನ ನಾಲ್ಕು ವರ್ಷಗಳ ಅವಧಿಗೆ ಎಎಸ್ಐಐಎಂ ಅಡಿಯಲ್ಲಿ 19320 ರೂ.ಗಳನ್ನು ಬಜೆಟ್ ನಲ್ಲಿ ತೆಗೆದಿರಿಸಲಾಗಿದೆ.
- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಮಾನಸಿಕ ಆರೋಗ್ಯ ಪುನರ್ ವಸತಿಗಾಗಿ 24x7 ಉಚಿತ ಸಹಾಯವಾಣಿ ಸಂಖ್ಯೆ ಕಿರಣ್ ಆರಂಭ -(1800-599-0019) (2020ರ ಸೆಪ್ಟೆಂಬರ್ 7)
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಮಾನಸಿಕ ಆರೋಗ್ಯ ಪುನರ್ ವಸತಿಗಾಗಿ 24x7 ಉಚಿತ ಸಹಾಯವಾಣಿ ಸಂಖ್ಯೆ ಕಿರಣ್ ಆರಂಭಿಸಲಾಗಿದೆ(1800-599-0019) ವರ್ಚುವಲ್ ಮಾದರಿಯಲ್ಲಿ ವೆಬ್ ಕಾಸ್ಟ್ ಮಾದರಿಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿರುವವರಿಗೆ ಪರಿಹಾರ ಮತ್ತು ನೆರವು ನೀಡಲಾಗುವುದು. ಡಿಇಪಿಡಬ್ಲ್ಯೂಡಿ/ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಮಾನಸಿಕ ಖಿನ್ನತೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇದನ್ನು ಆರಂಭಿಸಲಾಗಿದೆ.
ಕಿರಣ್ ಸಹಾಯವಾಣಿ ಮೂಲಕ ಮಾನಸಿಕ ಆರೋಗ್ಯ ಪುನರ್ ವಸತಿ ಸೇವೆಗಳನ್ನು ನೀಡಲಾಗುತ್ತಿದ್ದು, ತ್ವರಿತ ಪತ್ತೆ, ಪ್ರಾಥಮಿಕ ಚಿಕಿತ್ಸೆ, ಮನಃಶಾಸ್ತ್ರಜ್ಞರ ಬೆಂಬಲ, ಸಂಕಷ್ಟ ನಿರ್ವಹಣೆ, ಮಾನಸಿಕ ಆರೋಗ್ಯ ರಕ್ಷಣೆ, ಸಕಾರಾತ್ಮಕ ನಡವಳಿಕೆ ಉತ್ತೇಜನ, ಮಾನಸಿಕ ಬಿಕ್ಕಟ್ಟು ನಿರ್ವಹಣೆ ಇತ್ಯಾದಿಗಳನ್ನು ಒದಗಿಸಲಾಗುವುದು. ಇದರಡಿ ಒತ್ತಡ, ಆತಂಕ, ಖಿನ್ನತೆ, ಭಯದ ದಾಳಿಗಳು, ಹೊಂದಾಣಿಕೆಯಾಗದ ಸಮಸ್ಯೆಗಳು, ಒತ್ತಡದಿಂದಾಗುವ ನ್ಯೂನತೆಗಳು, ಆತ್ಮಹತ್ಯೆಯ ಚಿಂತನೆಗಳು, ಸಾಂಕ್ರಾಮಿಕದಿಂದಾದ ಮಾನಸಿಕ ಮತ್ತು ದೈಹಿಕ ಆರೋಗ್ಯ ತುರ್ತುಗಳಿಗೆ ಸೇವೆಗಳನ್ನು ಒದಗಿಸಲಾಗುವುದು. ಇದು ಮೊದಲ ಹಂತದ ಸಲಹೆ ಮತ್ತು ಮಾರ್ಗದರ್ಶನದ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 13 ಭಾಷೆಗಳಲ್ಲಿ ಸಾರ್ವಜನಿಕರಿಗೆ, ಕುಟುಂಬಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ, ಪಾಲಕರ ಸಂಘಗಳಿಗೆ, ವೃತ್ತಿಪರ ಸಂಸ್ಥೆಗಳಿಗೆ, ಪುನರ್ ವಸತಿ ಕೇಂದ್ರಗಳಿಗೆ, ಆಸ್ಪತ್ರೆಗಳಿಗೆ ಅಥವಾ ದೇಶದ ಯಾವುದೇ ಅಗತ್ಯವಿರುವವರಿಗೆ ಸೇವೆಗಳನ್ನು ಒದಗಿಸುತ್ತಿದೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ವ್ಯಕ್ತಿಗಳ ಕುಟುಂಬಗಳಿಗೆ ಇದು ಅತ್ಯಂತ ಉಪಕಾರಿ ಎಂದು ಸಚಿವರು ಹೇಳಿದರು.
ಈ ಉಚಿತ ದೂರವಾಣಿ ಸಹಾಯವಾಣಿ ಬಿಎಸ್ಎನ್ಎಲ್ ನ ತಾಂತ್ರಿಕ ಸಮನ್ವಯದೊಂದಿಗೆ ವಾರದ ಏಳು ದಿನ ದಿನದ 24 ಗಂಟೆಗಳು ಕಾರ್ಯ ನಿರ್ವಹಣೆ ಮಾಡಲಿದೆ. 8 ರಾಷ್ಟ್ರೀಯ ಸಂಸ್ಥೆಗಳೂ ಸೇರಿದಂತೆ 25 ಸಂಸ್ಥೆಗಳು ಈ ಸಹಾಯವಾಣಿ ಕಾರ್ಯದಲ್ಲಿ ಒಳಗೊಂಡಿವೆ. ಇದಕ್ಕೆ 660 ಕ್ಲಿನಿಕಲ್/ಪುನರ್ ವಸತಿ ಮನಃಶಾಸ್ತ್ರಜ್ಞರು ಮತ್ತು 668 ಮನೋವೈದ್ಯರು ನೆರವು ನೀಡುತ್ತಿದ್ದಾರೆ. ಇದು ಹಿಂದಿ, ಅಸ್ಸಾಮಿ, ತಮಿಳು, ಮರಾಠಿ, ಒಡಿಯಾ, ತೆಲುಗು, ಮಲಯಾಳಂ, ಗುಜರಾತಿ, ಪಂಜಾಬಿ, ಕನ್ನಡ, ಬೆಂಗಾಲಿ, ಉರ್ದು ಮತ್ತು ಇಂಗ್ಲಿಷ್ ಸೇರಿ 13 ಭಾಷೆಗಳ ವ್ಯಾಪ್ತಿಯನ್ನು ಒಳಗೊಂಡಿದೆ.
ಈ ಸಹಾಯವಾಣಿ ಸಂಖ್ಯೆ ಈ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಭಾರತದ ಯಾವುದೇ ಮೂಲೆಯಿಂದ ಯಾವುದೇ ದೂರಸಂಪರ್ಕ ಜಾಲದ ಸ್ಥಿರ ಅಥವಾ ಮೊಬೈಲ್ ದೂರವಾಣಿಯಿಂದ 1800-599-0019 ಸಂಖ್ಯೆಗೆ ಕರೆ ಮಾಡಬಹುದು. ಸ್ವಾಗತ ಸಂದೇಶದ ನಂತರ ಸೂಕ್ತ ಬಟನ್ ಒತ್ತಿ, ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು, ಭಾಷೆ ಆಯ್ಕೆಯ ನಂತರ ರಾಜ್ಯ/ಕೇಂದ್ರಾಡಳಿತ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು. ಆನಂತರ ನೀವು ಸ್ಥಳೀಯ ಸಹಾಯವಾಣಿ ಕೇಂದ್ರದ ಜೊತೆ ಸಂಪರ್ಕ ಹೊಂದಲಿದ್ದೀರಿ ಅಥವಾ ಅಪೇಕ್ಷಿತ ರಾಜ್ಯದ ಮಾನಸಿಕ ಆರೋಗ್ಯ ತಜ್ಞರ ಸಂಪರ್ಕ ಪಡೆಯುತ್ತೀರಿ. ಅವರು ಸಮಸ್ಯೆಯನ್ನು ಬಗೆಹರಿಸುತ್ತಾರೆ ಅಥವಾ ಬಾಹ್ಯ ಸಹಾಯಕ್ಕೆ (ಕ್ಲಿನಿಕಲ್ ತಜ್ಞರು, ಪುನರ್ ವಸತಿ ಮನಃಶಾಸ್ತ್ರಜ್ಞರು/ಮನೋವೈದ್ಯರು) ಸಂಪರ್ಕ ಕಲ್ಪಿಸುತ್ತಾರೆ. ಈ ಸಹಾಯವಾಣಿಯ ಉದ್ದೇಶವೆಂದರೆ ಮುಂಚಿತವಾಗಿಯೇ ತಪಾಸಣೆ; ಪ್ರಾಥಮಿಕ ಚಿಕಿತ್ಸೆ; ಮಾನಸಿಕ ಬೆಂಬಲ; ಸಂಕಷ್ಟ ನಿರ್ವಹಣೆ; ಮಾನಸಿಕ ಆರೋಗ್ಯ ರಕ್ಷಣೆ; ವಿಚಿತ್ರ ನಡವಳಿಕೆಗಳ ನಿಯಂತ್ರಣ; ಮಾನಸಿಕ ಬಿಕ್ಕಟ್ಟು ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ತಜ್ಞರ ನೆರವು ಈ ಸಹಾಯವಾಣಿಯನ್ನು ಒತ್ತಡ; ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ಆತ್ಮಹತ್ಯೆ; ಖಿನ್ನತೆ; ಭಯದ ದಾಳಿಗಳು; ಹೊಂದಾಣಿಕೆ ಸ್ವಭಾವ ಇಲ್ಲದಿರುವುದು; ಒತ್ತಡದಿಂದಾಗುವ ನ್ಯೂನತೆಗಳು, ಮತ್ತಿತರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಈ ಸಹಾಯವಾಣಿ ಸಂಖ್ಯೆ ಸಂಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡಲಿದೆ. ಜೊತೆಗೆ ಸಾಂಕ್ರಾಮಿಕದಿಂದ ಒತ್ತಡಕ್ಕೊಳಗಾದವರಿಗೆ ಅದನ್ನು ನಿವಾರಿಸಿ ಮಾನಸಿಕ ಆರೋಗ್ಯ ತುರ್ತು ಸೇವೆಗಳನ್ನು ಒದಗಿಸಲಿದೆ.
- ಭಾರತೀಯ ಸಂಜ್ಞಾ ಭಾಷೆಗೆ ಶೈಕ್ಷಣಿಕ ಸಾಮಗ್ರಿಗಳನ್ನು ಪರಿವರ್ತಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಡಿ ಬರುವ ಎನ್ ಸಿಇಆರ್ ಟಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಬರುವ ಐಎಸ್ಎಲ್ಆರ್ ಟಿಸಿ ನಡುವೆ ಐತಿಹಾಸಿಕ ಒಪ್ಪಂದ (2020ರ ಅಕ್ಟೋಬರ್ 6)
ಕಿವುಡ ಮಕ್ಕಳಿಗೆ ತಮ್ಮ ಆಯ್ಕೆಯ ರೂಪದಲ್ಲಿ ಸಂವಹನಕ್ಕೆ ಅನುಕೂಲವಾಗುವಂತೆ ಭಾರತೀಯ ಸಂಜ್ಞಾ ಭಾಷೆಗೆ ಶೈಕ್ಷಣಿಕ ಸಾಮಗ್ರಿಗಳನ್ನು ಪರಿವರ್ತಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಡಿ ಬರುವ ಎನ್ ಸಿಇಆರ್ ಟಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಬರುವ ಐಎಸ್ಎಲ್ಆರ್ ಟಿಸಿ ನಡುವೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದಕ್ಕೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ಥಾವರ್ ಚಂದ್ರ ಗೆಹ್ಲೋಟ್ ಮತ್ತು ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ವರ್ಚುವಲ್ ಸಮಕ್ಷಮದಲ್ಲಿ ಸಹಿ ಹಾಕಲಾಯಿತು.
ಎನ್ ಸಿಇಆರ್ ಟಿ ಪಠ್ಯಗಳನ್ನು ಭಾರತೀಯ ಸಂಜ್ಞಾ ಭಾಷೆ (ಐಎಸ್ಎಲ್) ಮೂಲಕ ಶ್ರವಣ ದೋಷವುಳ್ಳ ಮಕ್ಕಳಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಈ ಒಪ್ಪಂದ ಐತಿಹಾಸಿಕ ಹೆಜ್ಜೆಯಾಗಿದೆ ಮತ್ತು ಶ್ರವಣದೋಷವುಳ್ಳ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕರು, ಪೋಷಕರು ಮತ್ತು ಶ್ರವಣದೋಷವುಳ್ಳ ಸಮುದಾಯಕ್ಕೆ ಅಗತ್ಯ ಸಂಪನ್ಮೂಲ ಒದಗಿಸುವ ಮಹತ್ವದ ಕ್ರಮವಾಗಿದೆ. ಇದರಿಂದ ದೇಶದಲ್ಲಿ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಣದ ಮೇಲೆ ಭಾರೀ ಪರಿಣಾಮವಾಗಲಿದೆ. ಈ ಒಪ್ಪಂದದ ನಂತರ ಎನ್ ಸಿಇಆರ್ ಟಿ ಪಠ್ಯ ಪುಸ್ತಕಗಳು ಮತ್ತು ಸಾಮಗ್ರಿಗಳು ಭಾರತದಾದ್ಯಂತ ಭಾರತೀಯ ಸಂಜ್ಞಾ ಭಾಷೆಗಳಲ್ಲಿ ಲಭ್ಯವಾಗಲಿದ್ದು, ಪೂರ್ವ ಅಥವಾ ಪಶ್ಚಿಮ, ಅಥವಾ ಉತ್ತರ ಅಥವಾ ದಕ್ಷಿಣ ಸೇರಿದಂತೆ ಭಾರತದಾದ್ಯಂತ ಎಲ್ಲ ಶ್ರವಣದೋಷವುಳ್ಳ ಮಕ್ಕಳಿಗೆ ಭಾರತೀಯ ಸಂಜ್ಞಾ ಭಾಷೆಯಲ್ಲಿ ಎನ್ ಸಿಇಆರ್ ಟಿ ಪಠ್ಯ ಪುಸ್ತಕಗಳು ಲಭ್ಯವಾಗಲಿವೆ. ಭಾರತೀಯ ಸಂಜ್ಞಾ ಭಾಷೆ ವಿವಿಧೆಯಲ್ಲಿ ಏಕತೆಯನ್ನು ಬಿಂಬಿಸುವುದಲ್ಲದೆ, ಅವುಗಳನ್ನು ಕೈಯಿಂದ ವಿವರಿಸಲಾಗುವುದು ಮತ್ತು ಕಣ್ಣಿನಿಂದ ಅರ್ಥೈಸಿಕೊಳ್ಳಲಾಗುವುದು ಮತ್ತು ಇದರಿಂದ ನಮ್ಮ ದೇಶದ ಎಲ್ಲೆಡೆ ಇರುವ ಶ್ರವಣದೋಷವುಳ್ಳ ಮಕ್ಕಳನ್ನು ಬೆಸೆದಂತಾಗುತ್ತದೆ.
ಈ ಒಡಂಬಡಿಕೆ 2016ರ ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ(ಆರ್ ಪಿ ಡಬ್ಲ್ಯೂಡಿ) ಮತ್ತು ಹೊಸ ಶಿಕ್ಷಣ ನೀತಿ 2020 ಉದ್ದೇಶಗಳ ಗುರಿ ಸಾಧನೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಒಡಂಬಡಿಕೆಯಲ್ಲದೆ ಎನ್ ಸಿಇಆರ್ ಟಿ ಪಠ್ಯಕ್ರಮಗಳು, ಶಿಕ್ಷಕರ ಕೈಪಿಡಿ, ಪೂರಕ ಸಾಮಗ್ರಿಗಳು, ಒಂದರಿಂದ 10ನೇ ತರಗತಿ ವರೆಗಿನ ಎಲ್ಲ ವಿಷಯಗಳ ಪಠ್ಯಗಳು ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಭಾರತೀಯ ಸಂಜ್ಞಾ ಭಾಷೆಗೆ ಪರಿವರ್ತನೆಗೊಂಡು ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದೆ. ಎನ್ ಸಿಇಆರ್ ಟಿ ಮತ್ತು ಐಎಸ್ಎಲ್ ಆರ್ ಟಿಸಿ ನಡುವಿನ ಒಡಂಬಡಿಕೆಯಿಂದಾಗಿ ಎನ್ ಸಿಇಆರ್ ಟಿ ಪಠ್ಯಕ್ರಮಗಳು ಭಾರತೀಯ ಸಂಜ್ಞಾ ಭಾಷೆಗೆ ಪರಿವರ್ತನೆಗೊಳ್ಳಲಿದ್ದು, ಇದರಿಂದಾಗಿ ನೂತನ ಶಿಕ್ಷಣ ನೀತಿ 2020(ಎನ್ಇಪಿ) ಅಡಿಯಲ್ಲಿ ನಿಗದಿಪಡಿಸಲಾಗಿರುವ ಭಾರತೀಯ ಸಂಜ್ಞಾ ಭಾಷೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಖಾತ್ರಿಗೆ ನೆರವಾಗಲಿದೆ. ಈ ಒಡಂಬಡಿಕೆ ದೇಶದ ನಮ್ಮ ಶ್ರವಣದೋಷವುಳ್ಳವರನ್ನು ಸಬಲೀಕರಣಗೊಳಿಸುತ್ತದೆ. ನೂತನ ಶಿಕ್ಷಣ ನೀತಿ 2020 ಸಮಗ್ರವಾಗಿದ್ದು, ಅದು ದೇಶವನ್ನು ಪರಿವರ್ತಿಸಲಿದೆ ಎಂಬ ಭರವಸೆ ಮೂಡಿದೆ.
ಮಕ್ಕಳ ಬಾಲ್ಯದ ದಿನಗಳಲ್ಲಿ ಮಕ್ಕಳ ಅರವಿನ ಕೌಶಲ್ಯಗಳು ಅಭಿವೃದ್ಧಿ ಹೊಂದುತ್ತಿರುತ್ತದೆ. ಅವರ ಕಲಿಕೆಗೆ ಅನುಗುಣವಾಗಿ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವುದು ಅತ್ಯಗತ್ಯವಾಗಿರುತ್ತದೆ. ಈವರೆಗೆ ಶ್ರವಣದೋಷವುಳ್ಳ ಮಕ್ಕಳು ಕೇವಲ ಮಾತಿನ ಅಥವಾ ಬರವಣಿಗೆಯ ಮಾಧ್ಯಮದ ಮೂಲಕ ಮಾತ್ರ ಕಲಿಕೆ ಮಾಡುತ್ತಿದ್ದರು. ಆದರೆ ಈ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಅವರು ಭಾರತೀಯ ಸಂಜ್ಞಾ ಭಾಷೆಯ ಮೂಲಕ ಕಲಿಯಬಹುದಾಗಿದೆ. ಇದರಿಂದ ಅವರ ವಾಕ್ ಚಾತುರ್ಯ ವೃದ್ಧಿಯಾಗುವುದಲ್ಲದೆ, ಪಠ್ಯವನ್ನು ಅರ್ಥೈಸಿಕೊಳ್ಳುವ ಅವರ ಸಾಮರ್ಥ್ಯ ಹೆಚ್ಚಾಗಲಿದೆ. ಯುನಿಸೆಫ್ ನ ಉಪಕ್ರಮ ‘ಸರ್ವರಿಗೂ ಡಿಜಿಟಲ್ ಪಠ್ಯಪುಸ್ತಕಗಳ ಲಭ್ಯತೆ’ ಉಪಕ್ರಮ ಆಧರಿಸಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಮತ್ತು ಇದು ಐತಿಹಾಸಿಕ ನಿರ್ಧಾರವಾಗಿದೆ.
- ಕೋವಿಡ್-19 ಪರೀಕ್ಷಾ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಿವ್ಯಾಂಗರಿಗೆ ಮೂಲಸೌಕರ್ಯ ಒದಗಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಪತ್ರ (2020ರ ಏಪ್ರಿಲ್ 29)
ಕೋವಿಡ್-19 ಪರೀಕ್ಷಾ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಿವ್ಯಾಂಗರಿಗೆ ಮೂಲಸೌಕರ್ಯ ಒದಗಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಪತ್ರ ಮುಖೇನ ಸೂಚಿಸಿತ್ತು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಡಿಇಪಿಡಬ್ಲ್ಯೂಡಿ ಪತ್ರ ಬರೆದು, ಹಲವು ಕೋವಿಡ್-19 ಕೇಂದ್ರಗಳಲ್ಲಿ ಸಾಂಕ್ರಾಮಿಕದ ಪರಿಣಾಮಗಳನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕು. ನಿರ್ಬಂಧಿತ ವಲಯಗಳಲ್ಲಿ, ಐಸೋಲೇಷನ್ ಚಿಕಿತ್ಸಾ ಕೇಂದ್ರಗಳಲ್ಲಿ ಹಾಗೂ ಪರೀಕ್ಷಾ ಪ್ರಯೋಗಾಲಯಗಳಲ್ಲಿ, ವೈದ್ಯಕೀಯ ಉದ್ದೇಶಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು. ಸದ್ಯದ ಬಿಕ್ಕಟ್ಟಿನಿಂದಾಗಿ ಕಡಿಮೆ/ರಾಜಿಯಾದ ರೋಗ ನಿರೋಧಕ ಶಕ್ತಿಯಿಂದಾಗಿ ದಿವ್ಯಾಂಗ ಜನರಿಗೆ ಹೆಚ್ಚಿನ ಅಪಾಯ ಎದುರಾಗಿತ್ತು. ಅವರಿಗೆ ಭೌತಿಕ ಪರಿಸರಕ್ಕೆ ಮತ್ತು ಜೈವಿಕ ವ್ಯವಸ್ಥೆಗೆ ಹೊಂದಿಕೊಳ್ಳುವಂತಹ ಲಭ್ಯತಾ ಅಂಶಗಳು ಇಲ್ಲದ ಕಾರಣ ಅವರಿಗೆ ತೊಂದರೆಯಾಗಿತ್ತು.
- ಕೋವಿಡ್ ಲಾಕ್ ಡೌನ್ ವೇಳೆ ಒಂದು ಕೋಟಿಗೂ ಅಧಿಕ ನಿರಾಶ್ರಿತರು / ಭಿಕ್ಷುಕರು / ಆಶ್ರಯರಹಿತ ವ್ಯಕ್ತಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಕೋವಿಡ್ ಲಾಕ್ ಡೌನ್ ವೇಳೆ ಒಂದು ಕೋಟಿಗೂ ಅಧಿಕ ನಿರಾಶ್ರಿತರು / ಭಿಕ್ಷುಕರು / ಆಶ್ರಯರಹಿತ ವ್ಯಕ್ತಿಗಳಿಗೆ ಪ್ರಮುಖ ಮುನಿಸಿಪಲ್ ಕಾರ್ಪೊರೇಷನ್ ಗಳ ನೆರವಿನಿಂದ ಉಚಿತ ಊಟದ ವ್ಯವಸ್ಥೆಯನ್ನು ಮಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಕಲ್ಪಿಸಿತ್ತು. ಸಚಿವಾಲಯ ತನ್ನ ಯೋಜನೆಯಲ್ಲಿ ಹತ್ತು ನಗರಗಳನ್ನು ಆಯ್ಕೆ ಮಾಡಿತ್ತು. ಅವುಗಳೆಂದರೆ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದ್ರಾಬಾದ್, ಬೆಂಗಳೂರು, ಲಖನೌ, ನಾಗ್ಪುರ, ಪಾಟ್ನಾ ಮತ್ತು ಇಂದೋರ್ ಈ ನಗರಗಳಲ್ಲಿ ಸಮಗ್ರ ಪುನರ್ ವಸತಿ ಪ್ಯಾಕೇಜ್ ಗಳನ್ನು ಅನುಷ್ಠಾನಗೊಳಿಸಲಾಯಿತು. ಅದರಲ್ಲಿ ಭಿಕ್ಷುಕರನ್ನು ಗುರುತಿಸುವುದು, ಪುನರ್ ವಸತಿ ಕಲ್ಪಿಸುವುದು, ವೈದ್ಯಕೀಯ ಸೌಕರ್ಯ ಒದಗಿಸುವುದು, ಮಾರ್ಗದರ್ಶನ ಶೈಕ್ಷಣಿ ಕೌಶಲ್ಯಾಭಿವೃದ್ಧಿ ಮತ್ತು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು/ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಜೊತೆಗೂಡಿ ನೆರವು ನೀಡಲಾಯಿತು. ಈ ಯೋಜನೆ ಅಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನೆ ಅನುಷ್ಠಾನಕ್ಕಾಗಿ ಶೇ.100ರಷ್ಟು ನೆರವು ನೀಡಲಾಯಿತು.
- 2020-21ನೇ ಆಯ್ಕೆ ವರ್ಷದಿಂದ ಅನ್ವಯವಾಗುವಂತೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆ ಅಡಿ ಪ್ರಮುಖ ಸುಧಾರಣೆಗಳು(2020ರ 13ನೇ ಆಗಸ್ಟ್)
2020-21ನೇ ಆಯ್ಕೆ ವರ್ಷದಿಂದ ಅನ್ವಯವಾಗುವಂತೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆ ಅಡಿ ವಾರ್ಷಿಕ ಕುಟುಂಬದ ಆದಾಯ ಮಿತಿಯನ್ನು 6 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಳ ಮಾಡಲಾಯಿತು. ಉನ್ನತ ಶ್ರೇಯಾಂಕದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳೊಂದಿಗೆ ಪ್ರಾಶಸ್ತ್ರ್ಯ ನೀಡಲಾಯಿತು. ಕನಿಷ್ಠ ಅರ್ಹತಾ ಅಂಕಗಳನ್ನು ಶೇ.55ರಿಂದ ಶೇ.60ಕ್ಕೆ ಹೆಚ್ಚಿಸಲಾಯಿತು. ಅಭ್ಯರ್ಥಿಗಳ ಪ್ರಗತಿಯನ್ನು ಅವರ ನಿರ್ವಹಣಾ ಶುಲ್ಕದೊಂದಿಗೆ ಸಂಯೋಜಿಸಲಾಯಿತು. ಹಲವು ಪರಿಶೀಲನಾ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಲಾಯಿತು. ಪೊಲೀಸ್ ಪರಿಶೀಲನೆಯನ್ನು ಕೈಬಿಡಲಾಯಿತು ಮತ್ತು ಸ್ವಯಂ ದೃಢೀಕರಣವನ್ನು ಪರಿಚಯಿಸಲಾಯಿತು.
ಈ ಬದಲಾವಣೆಗಳನ್ನು ಪರಿಚಯಿಸುವುದರೊಂದಿಗೆ ಆಯ್ಕೆ ಪ್ರಕ್ರಿಯೆ ಸರಳೀಕರಣಗೊಂಡಿದೆ ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತ್ಯಲ್ಪ ಅವಧಿಯಲ್ಲಿಯೇ ಎಲ್ಲಾ ಸೀಟುಗಳು ಭರ್ತಿಯಾಗುವ ಸಾಧ್ಯತೆ ಇದೆ.
- ಡಿಇಪಿಡಬ್ಲ್ಯೂಡಿಯಿಂದ 14 ದಿವ್ಯಾಂಗ ಯುಜನರಿಗೆ ಗುಜರಾತ್ ನ ಏಕತಾ ಪ್ರತಿಮೆಯ ಸ್ಥಳಕ್ಕೆ ಲಭ್ಯ ಪ್ರವಾಸೋದ್ಯಮದ ಅನುಭವ ಪಡೆಯಲು ಭೇಟಿ ಆಯೋಜನೆ (2020ರ ಜನವರಿ 29)
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಡಿ ಬರುವ ವಿಶೇಷ ಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ (ಆರ್ ಪಿ ಡಬ್ಲ್ಯೂಡಿ), ಭಾರತದಾದ್ಯಂತ 14 ದಿವ್ಯಾಂಗ ಯುಜನರಿಗೆ ಗುಜರಾತ್ ನ ವಡೋದರಾದಲ್ಲಿನ ಏಕತಾ ಮೂರ್ತಿ ಸ್ಥಳಕ್ಕೆ ಲಭ್ಯ ಪ್ರವಾಸೋದ್ಯಮ ಅನುಭವ ಪಡೆಯಲು ಭೇಟಿ ಆಯೋಜಿಸಿತ್ತು. ಈ ಭೇಟಿ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಅವರು 2015ರಲ್ಲಿ ಆರಂಭಿಸಿದ ಇಲಾಖೆಯ ಲಭ್ಯ ಭಾರತ ಅಭಿಯಾನದಡಿ ಆಯೋಜಿಸಲಾಗಿತ್ತು. 2016ರ ಆರ್ ಪಿಡಬ್ಲೂಡಿ ಕಾಯಿದೆಯ ಪ್ರಕಾರ ಸ್ಮಾರಕಗಳು, ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲ ಸಾರ್ವಜನಿಕ ಮೂಲಸೌಕರ್ಯಗಳಲ್ಲಿ, ಆಸ್ಪತ್ರೆಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ, ರೈಲ್ವೆ. ವಿಮಾನ ನಿಲ್ದಾಣ, ಸಾರ್ವಜನಿಕ ಸಾರಿಗೆ, ಕ್ರೀಡಾ ಸೌಕರ್ಯಗಳು ಮತ್ತಿತರ ಕಡೆ 2022ರೊಳಗೆ ಕಡ್ಡಾಯವಾಗಿ ದಿವ್ಯಾಂಗರಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ಸಾಂಸ್ಕೃತಿಕ ಕೇಂದ್ರಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಪ್ರವಾಸೋದ್ಯಮ ಸ್ಥಳಗಳು ಎಲ್ಲರಿಗೂ ಲಭ್ಯವಾಗುವಂತಹ ಮೂಲಕಸೌಕರ್ಯಗಳಿದ್ದರೆ, ಆಗ ದೇಶದ ಹಾಗೂ ವಿದೇಶದ ಪ್ರವಾಸಿಗಳ ಸಂಖ್ಯೆ ಹೆಚ್ಚಾಗಲಿದೆ.
ನರ್ಮದಾ ಜಿಲ್ಲೆಯಲ್ಲಿನ ಏಕತಾ ಮೂರ್ತಿ, ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಬಿಂಬಿಸುತ್ತದೆ, ಅದು 182 ಮೀಟರ್ ಎತ್ತರವಿದೆ, ಅದನ್ನು ಎಸ್ಕಲೇಟರ್, ವಾಕಿಂಗ್ ಕನ್ವೇಯರ್ ಬೆಲ್ಟ್ಸ್, ಲಿಫ್ಟ್ , ಲಭ್ಯ ಶೌಚಾಲಯ, ramps ಮತ್ತು ಗಾಲಿ ಕುರ್ಚಿಗಳ ಮೂಲಕ ವೀಕ್ಷಿಸಬಹುದು.
- ದಿವ್ಯಾಂಗ ಕರಕುಶಲ ಕರ್ಮಿಗಳು ಮತ್ತು ಉದ್ದಿಮೆದಾರರ ಉತ್ಪನ್ನಗಳ ಉತ್ತೇಜನಕ್ಕೆ ಒಂದು ವಾರದ ‘ಏಕಂ ಮೇಳ’ ಆಯೋಜನೆ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 82 ದಿವ್ಯಾಂಗ ಕರಕುಶಲ ಕರ್ಮಿಗಳು ಮತ್ತು ಉದ್ದಿಮೆದಾರರು ತಮ್ಮ ಉತ್ಪನ್ನ ಮತ್ತು ಕಲೆಗಳನ್ನು ಪ್ರದರ್ಶಿಸಿದರು. (2020 ಮಾರ್ಚ್ 2)
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಬರುವ ರಾಷ್ಟ್ರಿಯ ವಿಶೇಷಚೇತನರ ಹಣಕಾಸು ಅಭಿವೃದ್ಧಿ ನಿಗಮ (ಎನ್ ಎಚ್ ಎಫ್ ಡಿಸಿ) ದಿಂದ ಒಂದು ವಾರದ ವಸ್ತು ಪ್ರದರ್ಶನ ಮತ್ತು ಮಾರಾಟ ‘ಏಕಂ ಮೇಳ’ ವನ್ನು ನವದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದ ರಾಜ್ಯ ಎಂಪೋರಿಯಾ ಸಂಕೀರ್ಣದಲ್ಲಿ 2020ರ ಮಾ.2ರಿಂದ ಆಯೋಜಿಸಲಾಗಿತ್ತು. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ರಸ್ತೆ ಹೆದ್ದಾರಿ ಮತ್ತು ಎಂಎಸ್ ಎಂಇ ಸಚಿವ ಶ್ರೀ ನಿತಿನ್ ಜೈರಾಮ್ ಗಡ್ಕರಿ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜವಳಿ ಸಚಿವೆ ಶ್ರೀಮತಿ ಸೃತಿ ಇರಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ಕೃಷ್ಣ ಪಾಲ್ ಗುರ್ಜಾರ್ ಮತ್ತು ಶ್ರೀ ರತನ್ ಲಾಲ್ ಕಟಾರಿಯಾ ಅವರೂ ಸಹ ಪಾಲ್ಗೊಂಡಿದ್ದರು.
ಒಂದು ವಾರ ಪೂರ್ತಿ ನಡೆದ ಈ ಮೇಳೆ 2020ರ ಮಾ.2ರಿಂದ 9ವರೆಗೆ ಬೆಳಿಗ್ಗೆ 11ರಿಂದ ರಾತ್ರಿ 9 ಗಂಟೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು. ಏಕಂ ಮೇಳದಲ್ಲಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 82 ಕ್ಕೂ ಅಧಿಕ ದಿವ್ಯಾಂಗರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು. ಇವರಲ್ಲಿ 44 ಪುರುಷರು ಮತ್ತು 38 ಮಹಿಳೆಯರೂ ಸೇರಿದ್ದಾರೆ. ಮೇಳದಲ್ಲಿ ದಿವ್ಯಾಂಗ ಕಲಾವಿದರು ಮತ್ತು ಹೆಸರಾಂತ ವೃತ್ತಿಪರರಿಂದ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು. ದಿವ್ಯಾಂಗ ವೃತ್ತಿಪರರ ಸಂದೇಶಗಳು ಮತ್ತು ಜೋತಿಷ್ಯ ಸಲಹೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾದವು.
- ಪ್ರಯಾಗ್ ರಾಜ್ ನಲ್ಲಿ ನಡೆದ ಆರ್ ವಿವೈ ಮತ್ತು ಎಡಿಐಪಿ ದೊಡ್ಡ ಅತಿದೊಡ್ಡ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳಿಂದ ಹಿರಿಯ ನಾಗರಿಕರಿಗೆ ಮತ್ತು ದಿವ್ಯಾಂಗರಿಗೆ ಸಾಧನ ಮತ್ತು ಸಲಕರಣಗಳನ್ನು ವಿತರಿಸಿದರು. (2020ರ ಫೆ.29)
ಹಿರಿಯ ನಾಗರಿಕರು ಮತ್ತು ದಿವ್ಯಾಂಗ ಜನರಿಗೆ ಸಹಾಯಕ ಸಾಧನ ಮತ್ತು ಸಲಕರಣೆಗಳನ್ನು ವಿತರಿಸುವ ಅತಿದೊಡ್ಡ ಸಮಾಜಿಕ ಅಧಿಕಾರಿತ್ವ ಶಿವಿರ್ ಅನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಪ್ರವಿತ್ರ ನಗರದಲ್ಲಿ ನಡೆಸಲಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ.ಥಾವರ್ ಚಂದ್ ಗೆಹ್ಲೋಟ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ಕೃಷ್ಣ ಪಾಲ್ ಗುರ್ಜಾರ್, ಶ್ರೀ ರಾಮದಾಸ್ ಅಠಾವಳೆ, ಶ್ರೀ ರತನ್ ಲಾಲ್ ಕಟಾರಿಯಾ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಶ್ರೀ ಕೇಶವ್ ಪ್ರಸಾದ್ ಮೌರ್ಯ, ಉತ್ತರಪ್ರದೇಶ ಸರ್ಕಾರದ ಹಲವು ಸಚಿವರು ಮತ್ತು ಸ್ಥಳೀಯ ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಿಇಪಿಡಬ್ಲೂಡಿ ಕಾರ್ಯದರ್ಶಿ ಶ್ರೀಮತಿ ಶಕುಂತಲಾ ಡಿ.ಗಾಮ್ಲಿನ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಉತ್ತರ ಪ್ರದೇಶದ ಅಧಿಕಾರಿಗಳೂ ಸಹ ಪಾಲ್ಗೊಂಡಿದ್ದರು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ದಿವ್ಯಾಂಗ ಜನರಿಗೆ ಎಡಿಐಪಿ ಅಡಿಯಲ್ಲಿ ಮತ್ತು ಹಿರಿಯ ನಾಗಕರಿಗೆ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿಯಲ್ಲಿ ಒಟ್ಟು 26874 ಫಲಾನುಭವಿಗಳಿಗೆ 56905 ಸಾಧನ ಮತ್ತು ಸಲಕರಣೆಗಳನ್ನು ವಿತರಿಸಲಾಯಿತು, ಇವರಲ್ಲಿ 10,419 ದಿವ್ಯಾಂಗರು ಮತ್ತು 16,458 ಹಿರಿಯ ನಾಗರಿಕರು ಸೇರಿದ್ದಾರೆ. ಒಟ್ಟಾರೆ ವಿತರಿಸಿದ ಸಾಧನ ಮತ್ತು ಸಲಕರಣೆಗಳ ಮೌಲ್ಯ 19,37,76,980 ರೂ.ಗಳು.
- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಬರುವ ಡಿಇಪಿಡಬ್ಲೂಡಿ ದಿವ್ಯಾಂಗರ ಕುಂದುಕೊರತೆಗಳನ್ನು ನೀಗಿಸಲು ಸಹಾಯವಾಣಿ ಸಂಖ್ಯೆಗಳ ಮೂಲಕ ಕ್ರಮ (2020ರ ಜುಲೈ 29)
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಬರುವ ವಿಶೇಷ ಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ (ಡಿಇಪಿಡಬ್ಲೂಡಿ) ತನ್ನ ಹಲವು ಸಂಸ್ಥೆಗಳ ಮೂಲಕ ವಿಶೇಷ ಚೇತನ ವ್ಯಕ್ತಿಗಳ (ದಿವ್ಯಾಂಗರ) ಕುಂದು ಕೊರತೆಗಳನ್ನು ನೀಗಿಸಲು ಅವರ ಪುನರ್ ವಸತಿ ಮತ್ತು ಸೇರ್ಪಡೆಗೆ ಹಲವು ಕಾರ್ಯಕ್ರಮ ಕೈಗೊಂಡಿತು.
ಕೃತಕ ಕಾಲು ಉತ್ಪಾದನಾ ನಿಗಮ (ಎಎಲ್ ಐಎಂಸಿಒ), ದಿವ್ಯಾಂಗ ಜನರಿಗೆ ಅನುಕೂಲವಾಗುವ ಸಾಧನ ಮತ್ತು ಸಲಕರಣೆಗಳ ದುರಸ್ತಿ ಸೇರಿದಂತೆ ಅವರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲು ಸಹಾಯವಾಣಿಯನ್ನು ಆರಂಭಿಸಿತು. ಅಂತೆಯೇ ರಾಷ್ಟ್ರೀಯ ವಿಶೇಷಚೇತನರ ಹಣಕಾಸು ಅಭಿವೃದ್ಧಿ ನಿಗಮ (ಎನ್ ಎಚ್ ಎಫ್ ಡಿಸಿ) ದಿವ್ಯಾಂಗರಿಗೆ ರಿಯಾಯ್ತಿ ಬಡ್ಡಿ ದರದಲ್ಲಿ ಸಾಲಗಳನ್ನು ನೀಡುವ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪ್ರಚುರಪಡಿಸಲು ಸಹಾಯವಾಣಿ ಸೇವೆಯನ್ನು ಆರಂಭಿಸಿತು. ಹಾಗೆಯೇ ಸಿಕಂರದಾಬಾದ್ ನಲ್ಲಿನ ಬೌದ್ಧಿತ ನೂನ್ಯತೆಗಳುಳ್ಳ ವಿಶೇಷ ಚೇತನ ವ್ಯಕ್ತಿಗಳ ಸಬಲೀಕರಣ ರಾಷ್ಟ್ರೀಯ ಸಂಸ್ಥೆ (ಎನ್ ಐಇಪಿಐಡಿ) ನಿರ್ದಿಷ್ಟ ಉಚಿತ ಸಹಾಯವಾಣಿ ಸಂಖ್ಯೆಯ ಮೂಲಕ ವಿಶೇಷ ಶಿಕ್ಷಣ, ವೃತ್ತಿಪರ ಚಿಕಿತ್ಸೆ ತರಬೇತಿ, ಪಿಜಿಯೋಥೆರಪಿಗೆ ಸಂಬಂಧಿದ ಮಾಹಿತಿಯನ್ನು ಒದಗಿಸುತ್ತಿದೆ.
ಡಿಇಪಿಡಬ್ಲ್ಯೂಡಿ ಅಡಿಯಲ್ಲಿ ಬರುವ ಸಂಸ್ಥೆಗಳು
|
ಸಹಾಯವಾಣಿ ಸಂಖ್ಯೆ
|
ಉದ್ದೇಶ
|
ಸಮಯ
|
ಬೌದ್ಧಿಕ ನ್ಯೂನತೆಗಳನ್ನು ಹೊಂದಿರುವ ವ್ಯಕ್ತಿಗಳ ಸಬಲೀಕರಣ ರಾಷ್ಟ್ರೀಯ ಕೇಂದ್ರ (ಎನ್ಐಇಪಿಐಡಿ), ಸಿಕಂದರಾಬಾದ್
|
18005726422
|
ಮಾಹಿತಿಯ ವಿವರ :-
1. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು
2.ವಿಶೇಷ ಶಿಕ್ಷಣ. 3.ಸಂಬಂಧಿಸಿದ ವೃತ್ತಿಪರ ಚಿಕಿತ್ಸೆಗಳು.
4. ವೃತ್ತಿಪರ ಮಾರ್ಗದರ್ಶನ.
5. ಧ್ವನಿ ಚಿಕಿತ್ಸೆ.
6. ಫಿಜಿಯೋಥೆರಪಿ ಇತ್ಯಾದಿ.
|
ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ
|
ಕೃತಕ ಕಾಲು ಉತ್ಪಾದನಾ ನಿಗಮ
(ಎಎಲ್ಐಎಂಸಿಒ)
|
18001805129
|
ವಿಶೇಷಚೇತನರಿಗೆ ಸಹಾಯಕ ಸಾಧನ ಮತ್ತು ಸಲಕರಣೆಗಳು
|
ಬೆಳಗ್ಗೆ 9.30 ರಿಂದ ಸಂಜೆ 5.00ರ ವರೆಗೆ
|
ರಾಷ್ಟ್ರೀಯ ವಿಕಲಚೇತನರ ಹಣಕಾಸು ಅಭಿವೃದ್ಧಿ ನಿಗಮ
|
1800114515
|
ಎ. ಸಾಲ ಯೋಜನೆಗಳ ಮಾಹಿತಿ ಮತ್ತು ಮಾರ್ಗದರ್ಶನ
ಬಿ. ಕೌಶಲ್ಯ ತರಬೇತಿ ಮಾಹಿತಿ ಮಾರ್ಗದರ್ಶನ.
ಸಿ. ವಿದ್ಯಾರ್ಥಿವೇತನ ಯೋಜನೆಗಳ ಮಾಹಿತಿ.
ಡಿ. ದಿವ್ಯಾಂಗ ಜನ್ ಸ್ವಾವಲಂಬನಾ ಯೋಜನೆ ಮಾಹಿತಿ
ಇ. ವಿಶೇಷ ಕಿರು ಹಣಕಾಸು ಯೋಜನೆಯ ಮಾಹಿತಿ ಮತ್ತು ಮಾರ್ಗದರ್ಶನ
|
30AM ರಿಂದ ಸಂಜೆ 5.00ರ ವರೆಗೆ
|
- ‘ನಶಮುಕ್ತ ಭಾರತ್ ಅಭಿಯಾನ’ಕ್ಕಾಗಿ 272 ಜಿಲ್ಲಾ ಕಲೆಕ್ಟರ್ ಗಳು ಮತ್ತು 32 ರಾಜ್ಯಗಳ ಕಾರ್ಯದರ್ಶಿಗಳನ್ನು ಉದ್ದೇಶಿಸಿ ವೆಬ್ ಕಾಸ್ಟ್ ಮೂಲಕ ಮಾತನಾಡಿದ ಶ್ರೀ ಥಾವರ್ ಚಂದ್ ಗೆಹ್ಲೋಟ್ (2020ರ ಆಗಸ್ಟ್ 13)
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಶ್ರೀ ಥಾವರ್ ಚಂದ್ ಗೆಹ್ಲೋಟ್, ನಶಮುಕ್ತ ಭಾರತ್ ಅಭಿಯಾನ’ಕ್ಕಾಗಿ 272 ಜಿಲ್ಲಾ ಕಲೆಕ್ಟರ್ ಗಳು ಮತ್ತು 32 ರಾಜ್ಯಗಳ ಕಾರ್ಯದರ್ಶಿಗಳನ್ನು ಉದ್ದೇಶಿಸಿ ವೆಬ್ ಕಾಸ್ಟ್ ಮೂಲಕ ಮಾತನಾಡಿದರು, 500ಕ್ಕೂ ಅಧಿಕ ಸರಕಾರೇತರ ಸಂಸ್ಥೆಗಳು/ಸ್ವಯಂಸೇವಾ ಸಂಸ್ಥೆಗಳು, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು, ಎನ್ ಡಿಡಿಟಿಸಿಯ ವೈದ್ಯರು ಮತ್ತು ವೃತ್ತಿಪರರು, ಏಮ್ಸ್ ಮತ್ತು ಜಿಲ್ಲೆಗಳಲ್ಲಿ ಅಭಿಯಾನದಲ್ಲಿ ಸೇರಿಸಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ಕೃಷ್ಣ ಪಾಲ್ ಗುರ್ಜಾರ್, ಶ್ರೀ ರಾಮದಾಸ್ ಅಠಾವಳೆ ಮತ್ತು ಶ್ರೀ ರತನ್ ಕಾಲ್ ಕಟಾರಿಯಾ ಅವರೂ ಸಹ ಸಂದೇಶಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಪವರ್ ಪಾಯಿಂಟ್ ಪ್ರಾತ್ಯಕ್ಷಿಕೆ ಮೂಲಕ ನಶಮುಕ್ತ ಭಾರತ್ ಅಭಿಯಾನದ ಕ್ರಮಗಳನ್ನು ಪ್ರದರ್ಶಿಸಲಾಯಿತು, ಅವುಗಳಲ್ಲಿ ಅಭಿಯಾನದ ಅವಧಿಯಲ್ಲಿ ಕೈಗೊಳ್ಳಲಾದ ಚಟುವಟಿಕೆಗಳನ್ನು ಬಿಂಬಿಸಲಾಯಿತು.
ಇದೇ ವೇಳೆ ಶ್ರೀ ಗೆಹ್ಲೋಟ್ ಅವರು ನವದೆಹಲಿಯ ದ್ವಾರಕದಲ್ಲಿ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಕೇಂದ್ರ(ಎನ್ ಐಎಸ್ ಡಿ)ಯ ನೂತನ ಕಟ್ಟಡವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. 2002ರ ಜು.15ರಿಂದ ಎನ್ ಐಎಸ್ ಡಿ ಸ್ವಾಯತ್ತ ಸಂಸ್ಥೆಯಾಗಿದ್ದು, ಸಾಮಾಜಿಕ ರಕ್ಷಣಾ ವಲಯದಲ್ಲಿ ಸಂಶೋಧನಾ ಮತ್ತು ತರಬೇತಿ ಕೇಂದ್ರವಾಗಿದೆ. ಈ ಸಂಸ್ಥೆ ಮುಖ್ಯವಾಗಿ ಮಾದಕ ದ್ರವ್ಯ ನಿಯಂತ್ರಣ, ಹಿರಿಯ ನಾಗರಿಕರು ಮತ್ತು ತೃತಿಯ ಲಿಂಗಿಗಳ ಕಲ್ಯಾಣ, ಭಿಕ್ಷಾಟನೆ ನಿರ್ಮೂಲನೆ ಮತ್ತು ಇತರೆ ಸಾಮಾಜಿಕ ರಕ್ಷಣಾ ವಿಚಾರಗಳಲ್ಲಿ ಅಗತ್ಯ ಮಾನವ ಸಂಪನ್ಮೂಲವನ್ನು ಸೃಷ್ಟಿಸಲಿದೆ. ಇದು ಭಾರತ ಸರ್ಕಾರದ ಸಾಮಾಜಿಕ ರಕ್ಷಣಾ ಕಾರ್ಯಕ್ರಮಗಳಿಗೆ ಒತ್ತು ನೀಡುವ ಜೊತೆಗೆ ಕ್ಷೇತ್ರದಲ್ಲಿ ತರಬೇತಿಗಳನ್ನು ಮತ್ತು ಸಂಶೋಧನೆಯನ್ನು ನಡೆಸಲಿದೆ, ಇದು ಮಾದಕ ದ್ರವ್ಯ ಬೇಡಿಕೆ ತಗ್ಗಿಸುವ ಕುರಿತಂತೆ ರಾಷ್ಟ್ರೀಯ ಕ್ರಿಯಾ ಯೋಜನೆ ಅಡಿಯಲ್ಲಿ ಮತ್ತು ಹಿರಿಯ ನಾಗರಿಕರ ರಾಷ್ಟ್ರೀಯ ಕ್ರಿಯಾ ಯೋಜನೆ ಅನುಸಾರ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿದೆ.
- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ 2020-21ನೇ ಸಾಲಿನ ಎಲ್ಲ ಯೋಜನೆಗಳನ್ನು ಒಳಗೊಂಡ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಿದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಎಸ್ ಜೆ ಮತ್ತು ಇಲಾಖೆಯಲ್ಲಿ ಫಲಾನುಭವಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. (2020 ಸೆಪ್ಟಂಬರ್ 9)
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾರದ ಶ್ರೀ ಥಾವರ್ ಚಂದ್ ಗೆಹ್ಲೋಟ್, 2020ರ ಸೆಪ್ಟಂಬರ್ 7ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ 2020-21ನೇ ಸಾಲಿನ ಎಲ್ಲ ಯೋಜನೆಗಳನ್ನು ಒಳಗೊಂಡ 33 ಅಂಶಗಳ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿದರು. ಇದೇ ಮೊದಲ ಬಾರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಪ್ರತಿಯೊಂದು ಯೋಜನೆಗಳಿಗೆ ಸಂಬಂಧಿಸಿದಂತೆ 2020-21ನೇ ಸಾಲಿನ ಸಮಗ್ರ ವಾರ್ಷಿಕ ಕ್ರಿಯಾ ಯೋಜನೆಗಳನ್ನು ರೂಪಿಸಿದೆ ಮತ್ತು ಅದರ ಉದ್ದೇಶ ರಾಜ್ಯ ಸರಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಮೂಲಕ ತಲುಪಬೇಕಾದ ಸ್ಪಷ್ಟ ಗುರಿಗಳು ಮತ್ತು ಸಚಿವಾಲಯದ ಮೈಲಿಗಲ್ಲು ಸ್ಥಾಪಿಸುವುದಾಗಿತ್ತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಎಲ್ಲ ಯೋಜನೆಗಳ 33 ವಾರ್ಷಿಕ ಕ್ರಿಯಾ ಯೋಜನೆಗಳ ಸಂಗ್ರಹವಾದ ಈ ಪುಸ್ತಕದಲ್ಲಿ ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗ (ಒಬಿಸಿ) ಮತ್ತು ಹಿರಿಯ ನಾಗರಿಕರು, ಮಾದಕ ದ್ರವ್ಯ ಸಂತ್ರಸ್ತರು, ತೃತೀಯ ಲಿಂಗಿಗಳು, ಅಧಿಸೂಚಿತ ಮತ್ತು ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುವಾಸಿಗಳು ಸೇರಿ ಎಲ್ಲದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಬಲೀಕರಣ ಸಾಧಿಸುವುದಾಗಿದೆ.
- “ಕೋವಿಡ್ 19 ಮೀರಿದ ಮಾನಸಿಕ ಆರೋಗ್ಯ’ ಕುರಿತ ಅಂತಾರಾಷ್ಟ್ರೀಯ ಸಮಾವೇಶವನ್ನು ವರ್ಚುವಲ್ ರೀತಿಯಲ್ಲಿ ಉದ್ಘಾಟಿಸಿದ ಶ್ರೀ ಥಾವರ್ ಚಂದ್ ಗೆಹ್ಲೋಟ್ (2020ರ ಅಕ್ಟೋಬರ್ )
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಶ್ರೀ ಥಾವರ್ ಚಂದ್ ಗೆಹ್ಲೋಟ್ ವಿಡಿಯೋ ಕಾನ್ಫರೆನ್ಸ್ ಮೂಲಕ “ಕೋವಿಡ್-19 ಮೀರದ ಮಾನಸಿಕ ಆರೋಗ್ಯ’ ಕುರಿತ ಅಂತಾರಾಷ್ಟ್ರೀಯ ವರ್ಚುವಲ್ ಸಮಾವೇಶವನ್ನು ಉದ್ಘಾಟಿಸಿದರು. ಆಸ್ಟ್ರೇಲಿಯಾ-ಭಾರತ ಸಂಸ್ಥೆಯ ನಿರ್ದೇಶಕ ಪ್ರೊ. ಕ್ರೇಗ್ ಜರ್ಫಿ ಸಹ ಅಧ್ಯಕ್ಷತೆವಹಿಸಿದ್ದರು. ಉದ್ಘಾಟನಾ ಭಾಷಣ ಮಾಡಿದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಜಗತ್ತಿನಾದ್ಯಂತ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯತೆ ಬಗ್ಗೆ ತಿಳಿಸಿದರು. ಅಲ್ಲದೆ, ಅವರು ಭಾರತ ಸರ್ಕಾರ, ಇತ್ತೀಚೆಗೆ ಮಧ್ಯಪ್ರದೇಶದ ಸೆಹೋರ್ ನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ ವಸತಿ ಕೇಂದ್ರದ ಸ್ಥಾಪನೆ ಮತ್ತು ಮಾನಸಿಕ ಆರೋಗ್ಯ ವಿಷಯಗಳಿಗೆ ಸಂಬಂಧಿಸಿದಂತೆ ಕುಂದುಕೊರತೆ ನೀಗಿಸಲು ಕಿರಣ್ ಮಾನಸಿಕ ಆರೋಗ್ಯ ಪುನರ್ ವಸತಿ ಸೇರಿದಂತೆ ಹಲವು ಕ್ರಮಗಳ ಬಗ್ಗೆ ವಿವರ ನೀಡಿದರು.
- ದೇಶಾದ್ಯಂತ ಅತ್ಯುತ್ಸಾಹದಿಂದ ಸಂವಿಧಾನ ದಿನ ಆಚರಣೆ: ರಾಷ್ಟ್ರವ್ಯಾಪಿ ರಾಷ್ಟ್ರಪತಿಗಳ ನೇತೃತ್ವದಲ್ಲಿ ಸಂವಿಧಾನದ ಪೀಠಿಕೆ ಓದು: ಪ್ರಧಾನಮಂತ್ರಿಗಳಿಂದ ಗುಜರಾತ್ ನ ಕೆವಾಡಿಯಾದಲ್ಲಿ ನಡೆದ 80ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಶೃಂಗಸಭೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಭಾಷಣ (2020 ನವೆಂಬರ್ 26)
ದೇಶಾದ್ಯಂತ ಸಂವಿಧಾನದ ದಿನವನ್ನು 2020ರ ನವೆಂಬರ್ 26ರಂದು ಅತ್ಯುತ್ಸಾಹದಿಂದ ಆಚರಿಸಲಾಯಿತು, ಸಾಮಾಜಿಕ ನ್ಯಾಯ ಸಚಿವಾಲಯ ಇದರ ನೋಡಲ್ ಸಚಿವಾಲಯವಾಗಿ ಕಾರ್ಯನಿರ್ವಹಿಸಿತು. ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಪೀಠಿಕೆ ಓದು ಆರಂಭವಾಯಿತು ಮತ್ತು ಗುಜರಾತ್ ನ ಕೆವಾಡಿಯಾದಲ್ಲಿ ನಡೆದ 80ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮಾವೇಶದ ಸಮಾರಂಭವನ್ನುದ್ದೇಶಿಸಿ ಪ್ರಧಾನಮಂತ್ರಿ ಮಾತನಾಡಿದರು. ಅವರು ಪ್ರಸ್ತಾಪಿಸಿದ ಪ್ರಮುಖ ವಿಚಾರಗಳು ಈ ಕೆಳಗಿನಂತಿವೆ.
ಪೀಠಾಸೀನ ಅಧಿಕಾರಿಗಳ ಸಮಾವೇಶದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡುತ್ತಾ ಅಧಿಕಾರಿಗಳ ಕರ್ತವ್ಯದ ಪ್ರಾಮುಖ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು ಮತ್ತು ಕರ್ತವ್ಯಗಳು, ಹಕ್ಕುಗಳು, ಗೌರವ ಹಾಗೂ ಆತ್ಮವಿಶ್ವಾಸದ ಮೂಲವೆಂದು ಪರಿಗಣಿಸಬೇಕು ಎಂದರು. ಪ್ರಧಾನಮಂತ್ರಿಗಳು ಮಹಾತ್ಮ ಗಾಂಧೀಜಿ ಅವರು ಹಕ್ಕುಗಳು ಮತ್ತು ಕರ್ತವ್ಯದ ಬಗ್ಗೆ ನಿಕಟ ಸಂಪರ್ಕವಿರುವುದನ್ನು ಕಂಡಿದ್ದರು ಮತ್ತು ನಾವು ನಮ್ಮ ಕರ್ತವ್ಯಗಳನ್ನು ಮಾಡಿದಾಗ ಸಹಜವಾಗಿಯೇ ನಮ್ಮ ಹಕ್ಕುಗಳು ರಕ್ಷಣೆಯಾಗುತ್ತವೆ ಎಂದು ಹೇಳಿದ್ದರು. ಪ್ರಧಾನಮಂತ್ರಿ ಅವರು ಡಿಜಿಟಲ್ ಸುರಕ್ಷತೆಯ ಪ್ರಮುಖ ಅಂಶ ಎಂದರೆ ಕೆವೈಸಿ – ನಿಮ್ಮ ಗ್ರಾಹಕರನ್ನು ತಿಳಿಯಿರಿ ಎಂಬುದಾಗಿದ್ದು, ಅಂತೆಯೇ ಸಾಂವಿಧಾನಿಕ ರಕ್ಷಣೆಗೆ ನಾವು ಕೆವೈಸಿ – ಸಂವಿಧಾನವನ್ನು ತಿಳಿಯಿರಿ ಎಂಬುದು ಬಹುಮುಖ್ಯವಾಗುತ್ತದೆ ಎಂದು ಹೇಳಿದ್ದರು. ನಮ್ಮ ಕಾನೂನುಗಳ ಭಾಷೆ ಸರಳವಾಗಿರಬೇಕು ಮತ್ತು ಅದು ಸಾಮಾನ್ಯ ಜನರಿಗೆ ಲಭ್ಯವಾಗುವಂತಿರಬೇಕು, ಹಾಗಾದಾಗ ಮಾತ್ರ ಅವರು ಪ್ರತಿಯೊಂದು ಕಾನೂನಿನ ಬಗ್ಗೆ ನೇರ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದರು. ಕೆಲವೊಂದು ಕಠಿಣ ಕಾಯ್ದೆಗಳನ್ನು ಸರಳೀಕರಣಗೊಳಿಸುವ ಪ್ರಕ್ರಿಯೆಯಾಗಬೇಕು ಎಂದ ಅವರು, ನಾವು ಕಾನೂನುಗಳನ್ನು ತಿದ್ದುಪಡಿ ಮಾಡಿದ ಕೂಡಲೇ ಸಹಜವಾಗಿ ಹಳೆಯ ಕಾನೂನುಗಳು ನಿರಶನವಾಗುವಂತಹ ವ್ಯವಸ್ಥೆ ಇರಬೇಕು ಎಂದು ಸಲಹೆ ಮಾಡಿದರು. ಈ ಸಮಾವೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಉದ್ಘಾಟನಾ ದಿನ ಮಾತನಾಡಿದ್ದರು.
- ಮಲ ಹೊರುವವರನ್ನು ಮತ್ತು ಶೌಚಾಲಯಗಳ ದತ್ತಾಂಶ ಗುರುತಿಸಿ ಜಿಯೊಟ್ಯಾಗ್ ಅಳವಡಿಕೆಗೆ ಸ್ವಚ್ಛತಾ ಅಭಿಯಾನದ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿದ ಶ್ರೀ ಥಾವರ್ ಚಂದ್ ಗೆಹ್ಲೋಟ್ (24, ಡಿಸೆಂಬರ್ 2020)
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು, “ಸ್ವಚ್ಛತಾ ಅಭಿಯಾನ”ದ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿದರು. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ರಾಮ್ ದಾಸ್ ಅಠವಳೆ ಮತ್ತು ಶ್ರೀ ಕೃಷ್ಣ ಪಾಲ್ ಗುರ್ಜಾರ್ ಅವರು ಭಾಗವಹಿಸಿದ್ದರು. ಒಳಚರಂಡಿ ಮಾರ್ಗಗಳ ಸ್ಥಳಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲದ ಕಾರಣ ಎನ್ ಜಿಒಗಳು ಮತ್ತು ಸಾಮಾಜಿಕ ಸಂಸ್ಥೆಗಳು ಹಾಗು ಸಾರ್ವಜನಿಕರ ಸಹಾಯದಿಂದ ದತ್ತಾಂಶವನ್ನು ಸಂಗ್ರಹಿಸುವ ಕೆಲಸವನ್ನು ಕೈಗೊಳ್ಳಲು ನಿರ್ಧರಿಸಲಾಯಿತು.
“ಸ್ವಚ್ಛತಾ ಅಭಿಯಾನ” ಮೊಬೈಲ್ ಆಪ್ ಅನ್ನು ಈ ಉದ್ದೇಶಕ್ಕಾಗಿ ಅಭಿವೃದ್ಧಿ ಪಡಿಸಲಾಗಿದೆ. ಈ ಮೊಬೈಲ್ ಆಪ್ ಅನ್ನು ‘ಗೂಗಲ್ ಪ್ಲೇ ಸ್ಟೋರ್’ನಿಂದ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
***
(Release ID: 1685980)
Visitor Counter : 2683