ಪ್ರಧಾನ ಮಂತ್ರಿಯವರ ಕಛೇರಿ

ರಾಜ್‌ಕೋಟ್‌ ಏಮ್ಸ್ ಶಿಲಾನ್ಯಾಸ: ಪ್ರಧಾನಮಂತ್ರಿ ಭಾಷಣ

Posted On: 31 DEC 2020 3:09PM by PIB Bengaluru

ನಮಸ್ಕಾರ !

ನೀವೆಲ್ಲ ಹೇಗಿದ್ದೀರಿ!. ಗುಜರಾತಿನಲ್ಲಿ ಚಳಿಗಾಲದ ಚಳಿ ಇದೆಯೇ ಅಥವಾ ಇಲ್ಲವೇ? ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ ಜೀ, ಮುಖ್ಯಮಂತ್ರಿ ಶ್ರೀ ವಿಜಯ ರೂಪಾನಿ ಜೀ, ವಿಧಾನ ಸಭೆ ಸ್ಪೀಕರ್ ಶ್ರೀ ರಾಜೇಂದ್ರ ತ್ರಿವೇದಿ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ಜೀ, ಉಪಮುಖ್ಯಮಂತ್ರಿ ಭಾಯಿ ನಿತಿನ್ ಪಟೇಲ್ ಜೀ, ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾಗಿರುವ ಶ್ರೀ ಅಶ್ವಿನೀ ಚೌಭೇ ಜೀ, ಮನ್ಸುಖ್ ಭಾಯಿ ಮಾಂಡವೀಯ ಜೀ, ಪರಷೋತ್ತಮ ರೂಪಾಲಾ ಜೀ, ಗುಜರಾತ್ ಸರಕಾರದ ಸಚಿವರಾದ ಶ್ರೀ ಭುಪೇಂದ್ರ ಸಿಂಗ್ ಚೌಡಾಸಮ ಜೀ ಮತ್ತು ಶ್ರೀ ಕಿಶೋರ್ ಕನ್ನನ್ ಜೀ, ಹಾಗು ಎಲ್ಲಾ ಸಚಿವರೇ, ಸಂಸತ್ ಸದಸ್ಯರೇ ಮತ್ತು ಇತರ ಎಲ್ಲಾ ಗಣ್ಯರೇ.

ಸಹೋದರರೇ ಮತ್ತು ಸಹೋದರಿಯರೇ,

ಹೊಸ ವರ್ಷ ಹೊಸ್ತಿಲಲ್ಲಿದೆ. ಇಂದು ದೇಶದ ವೈದ್ಯಕೀಯ ಮೂಲಸೌಕರ್ಯವನ್ನು ಬಲಪಡಿಸಲು ಇನ್ನೊಂದು ಕೊಂಡಿಯನ್ನು ಸೇರಿಸಲಾಗುತ್ತಿದೆ. ರಾಜ್ ಕೋಟ್ ನಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಗೆ ಶಿಲಾನ್ಯಾಸ ನಡೆಸಿರುವುದರಿಂದ ಗುಜಾರಾತಿನಲ್ಲಿ ಮತ್ತು ದೇಶವ್ಯಾಪ್ತಿಯಲ್ಲಿ ಆರೋಗ್ಯ ಹಾಗು ವೈದ್ಯಕೀಯ ಶಿಕ್ಷಣ ಜಾಲಕ್ಕೆ ಬಲ ಹಾಗು ವೇಗ ದೊರಕಿದಂತಾಗಿದೆ. ಸಹೋದರರೇ ಮತ್ತು ಸಹೋದರಿಯರೇ ಹೊಸ ರಾಷ್ಟ್ರೀಯ ಆರೋಗ್ಯ ಸೌಲಭ್ಯಗಳೊಂದಿಗೆ 2020ಕ್ಕೆ ವಿದಾಯ ಹೇಳುವಾಗ ವರ್ಷದ ಸವಾಲುಗಳನ್ನು ಮತ್ತು ಹೊಸ ವರ್ಷದ ಆದ್ಯತೆಗಳನ್ನು ಪರಿಗಣಿಸುವ ಅಗತ್ಯವಿದೆ. ವರ್ಷವು ಆರೋಗ್ಯಕ್ಕೆ ಸಂಬಂಧಿಸಿ ಅಭೂತಪೂರ್ವ  ಸವಾಲುಗಳನ್ನು ಇಡೀ ವಿಶ್ವಕ್ಕೆ ಒಡ್ಡಿತು. ವರ್ಷ ನಮ್ಮ ಪೂರ್ವಜರು ಯಾಕೆ ಆರೋಗ್ಯವೇ ಭಾಗ್ಯ ಎಂಬುದನ್ನು ಪದೇ ಪದೇ ಹೇಳುತ್ತಿದ್ದರು ಎಂಬುದರ ಮೌಲ್ಯವನ್ನು ಅನಾವರಣ ಮಾಡಿತು. 2020 ನಮಗೆ ಬಹಳ ಸ್ಪಷ್ಟವಾಗಿ ತಿಳಿಸಿದೆ -ಏನೆಂದರೆ, ಆರೋಗ್ಯಕ್ಕೆ ತೊಂದರೆ ಆದಾಗ ಜೀವನದ ಬೇರೆ ಎಲ್ಲಾ ಅಂಗಗಳೂ ದಯನೀಯವಾಗಿ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮತ್ತು ಅದು ಕುಟುಂಬಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ, ಇಡೀಯ ಸಾಮಾಜಿಕ ವಲಯದ ಮೇಲೂ ಅದು ಪರಿಣಾಮ ಬೀರುತ್ತದೆ. ಆದುದರಿಂದ ವರ್ಷದ ಕೊನೆಯ ದಿನವೂ, ನಾವು ಭಾರತದ ಮಿಲಿಯಾಂತರ ವೈದ್ಯರು, ಆರೋಗ್ಯ ವಾರಿಯರ್ ಗಳನ್ನು, ಆರೋಗ್ಯ ಕಾರ್ಯಕರ್ತರನ್ನು, ಕೆಮಿಸ್ಟರನ್ನು ಮತ್ತು ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರನ್ನು ನೆನಪಿಸಿಕೊಳ್ಳಬೇಕು. ಅವರು ಮಾನವತೆಯನ್ನು ರಕ್ಷಿಸಲು ತಮ್ಮ ಜೀವವನ್ನು ಪಣವಾಗಿಟ್ಟು ಹೋರಾಟ ಮಾಡಿದರು. ಕರ್ತವ್ಯದ ತಮ್ಮ ಹಾದಿಯಲ್ಲಿ ತಮ್ಮ ಜೀವವನ್ನು ಅರ್ಪಣೆ ಮಾಡಿದವರಿಗೆ  ಇಂದು ನಾನು ಅತ್ಯಂತ ಗೌರವ ಪೂರ್ವಕವಾಗಿ ನಮಿಸುತೇನೆ. ಇಂದು ದೇಶವು ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತರಾದ  ಸಹೋದ್ಯೋಗಿಗಳನ್ನು, ವಿಜ್ಞಾನಿಗಳನ್ನು, ವೈದ್ಯಕೀಯ ಮೂಲಸೌಕರ್ಯವನ್ನು ಸೃಷ್ಟಿ ಮಾಡಲು  ಹಗಲು ರಾತ್ರಿ ದುಡಿದ ಸಿಬ್ಬಂದಿಗಳನ್ನು ನೆನಪಿಸಿಕೊಳ್ಳುತ್ತದೆ. ಕಠಿಣ ಸಮಯ ಮತ್ತು ಸಂದರ್ಭದಲ್ಲಿ ಆಹಾರ ಮತ್ತು ಇತರ ಸೌಲಭ್ಯಗಳನ್ನು ಬಡವರಿಗೆ ಒದಗಿಸುವ ಕಾರ್ಯದಲ್ಲಿ ಅರ್ಪಣಾಭಾವದಿಂದ ತೊಡಗಿಕೊಂಡವರಿಗೆ ಮೆಚ್ಚುಗೆ ವ್ಯಕ್ತಪಡಿಸುವ ದಿನವಿದು. ಇಂತಹ ಧೀರ್ಘ ಅವಧಿಯಲ್ಲಿಯೂ , ದೊಡ್ಡ ಆಪತ್ತಿನ ನಡುವೆಯೂ, ಸಾಮೂಹಿಕ ಬಲ, ಸೇವೆ ಮತ್ತು ಸಮಾಜದ ಸೂಕ್ಷ್ಮತ್ವ ದಿಂದಾಗಿ ದೇಶವಾಸಿಗಳು ಇಂತಹ  ಕಠಿಣ ಸಂದರ್ಭದಲ್ಲಿಯೂ ಯಾವುದೇ ಬಡವರು ರಾತ್ರಿ ಹಸಿವೆಯಿಂದ ಬಳಲದಂತೆ ನೋಡಿಕೊಂಡರು. ಅವರೆಲ್ಲರಿಗೂ ಶಿರಬಾಗಿದ ನಮಸ್ಕಾರ ಮತ್ತು ಗೌರವ ಸಲ್ಲಬೇಕು.

ಸ್ನೇಹಿತರೇ,

ಸಂಕಷ್ಟದ ವರ್ಷವು ಭಾರತವು ಒಗ್ಗೂಡಿ ಇದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಎಷ್ಟು ಸಮರ್ಪಕವಾಗಿ ನಿಭಾಯಿಸಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ. ಇದಕ್ಕೆ ಕಾರಣ ಭಾರತವು ಸಕಾಲದಲ್ಲಿ ಏಕೀಕೃತವಾಗಿ ಕೈಗೊಂಡ ದೃಢ ಕ್ರಮಗಳು. ಇದರಿಂದಾಗಿ ನಾವಿಂದು ಉತ್ತಮ ಪರಿಸ್ಥಿತಿಯಲ್ಲಿದ್ದೇವೆ. ಜನಸಂಖ್ಯೆ ದಟ್ಟವಾಗಿರುವ ದೇಶದಲ್ಲಿ, 130 ಕೋಟಿಗೂ ಅಧಿಕ  ಜನರಿರುವ ದೇಶದಲ್ಲಿ, ಒಂದು ಕೋಟಿ ಜನರು ರೋಗದ ವಿರುದ್ಧ ಯಶಸ್ವೀ ಹೋರಾಟ ಮಾಡಿದರು. ಕೊರೊನಾ ಪೀಡಿತ ಸಹೋದ್ಯೋಗಿಗಳನ್ನು ರಕ್ಷಿಸುವಲ್ಲಿ ಭಾರತದ ದಾಖಲೆ ವಿಶ್ವದಲ್ಲಿಯೇ ಬಹಳ ಉತ್ತಮವಾಗಿದೆಈಗ ಸೋಂಕಿನ ಪ್ರಕರಣಗಳಲ್ಲಿಯೂ ಭಾರತದಲ್ಲಿ ಸಂಖ್ಯೆ ಸತತವಾಗಿ ಕಡಿಮೆಯಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

2020ನೇ ವರ್ಷದಲ್ಲಿ ಸೋಂಕಿನ ಬಗ್ಗೆ ಚಿಂತೆ ಮತ್ತು ಕಳವಳಗಳಿದ್ದವು. ಅಲ್ಲಿ ಪ್ರಶ್ನಾರ್ಥಕ ಚಿಹ್ನೆಗಳಿದ್ದವು ಮತ್ತು ಅವುಗಳು 2020 ಗುರುತಾಗಿದ್ದವು. 2021 ಚಿಕಿತ್ಸೆಯ ಭರವಸೆಯೊಂದಿಗೆ ಬರುತ್ತಿದೆ. ಭಾರತದಲ್ಲಿ ಲಸಿಕಾ ಕಾರ್ಯಕ್ರಮಕ್ಕಾಗಿ ಎಲ್ಲಾ ಅವಶ್ಯ ಸಿದ್ಧತೆಗಳು ನಡೆಯುತ್ತಿವೆ. ಪ್ರತೀ ಅವಶ್ಯ ವರ್ಗಕ್ಕೂ ಭಾರತೀಯ ಲಸಿಕೆ ತ್ವರಿತವಾಗಿ ತಲುಪುವಂತೆ ಮಾಡಲು ಪ್ರಯತ್ನಗಳು ಅಂತಿಮ ಹಂತದಲ್ಲಿವೆ. ವಿಶ್ವದ ಅತಿ ದೊಡ್ಡ ಲಸಿಕಾ ಕಾರ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಭಾರತ ತಯಾರಾಗುತ್ತಿದೆ. ವರ್ಷದಲ್ಲಿ ಸೋಂಕು ಹರಡುವಿಕೆ ತಡೆಗೆ ನಾವು ಏಕೀಕೃತ ಪ್ರಯತ್ನಗಳನ್ನು ಮಾಡಿರುವಂತೆಯೇ, ಇಡೀ ಭಾರತ ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ಅದೇ ಸ್ಪೂರ್ತಿಯಿಂದ ದುಡಿಯುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸ, ಭರವಸೆ ಇದೆ.

ಸ್ನೇಹಿತರೇ,

ಸೋಂಕು ತಡೆಗೆ ಸಂಬಂಧಿಸಿ ಗುಜರಾತಿನಲ್ಲಿ ಶ್ಲಾಘನೀಯ ಕೆಲಸ ಮಾಡಲಾಗಿದೆ ಮತ್ತು ಈಗ ಲಸಿಕಾ ಕಾರ್ಯಕ್ರಮಕ್ಕಾಗಿ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಅಭಿವೃದ್ಧಿ ಮಾಡಲಾದ ವೈದ್ಯಕೀಯ ಮೂಲಸೌಕರ್ಯಗಳ ಫಲದಿಂದಾಗಿ ಗುಜರಾತ್ ಕೊರೊನಾ ಸವಾಲನ್ನು ಉತ್ತಮವಾಗಿ ನಿಭಾಯಿಸಿತು. ...ಎಂ.ಎಸ್. ರಾಜ್ ಕೋಟ್  ಗುಜರಾತಿನ ಆರೋಗ್ಯ ಜಾಲವನ್ನು ಇನ್ನಷ್ಟು ಬಲಪಡಿಸಲಿದೆ. ಈಗ ರಾಜ್ ಕೋಟ್ ನಲ್ಲಿ ಗಂಭೀರ ಖಾಯಿಲೆಗಳ ಚಿಕಿತ್ಸೆಗೆ ಆಧುನಿಕ ಸೌಲಭ್ಯಗಳು ದೊರೆಯಲಿವೆ. ಚಿಕಿತ್ಸೆ ಮತ್ತು ಶಿಕ್ಷಣವಲ್ಲದೆ ಅದು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಸುಮಾರು 5,000 ನೇರ ಉದ್ಯೋಗಗಳು ಹೊಸ ಆಸ್ಪತ್ರೆಯಲ್ಲಿ ಲಭ್ಯವಾಗಲಿವೆ. ಇದೇ ವೇಳೆ ಆಹಾರ, ಸಾರಿಗೆ, ಮತ್ತು ಇತರ ವೈದ್ಯಕೀಯ ಸವಲತ್ತುಗಳಿಗೆ ಸಂಬಂಧಿಸಿದ  ಕ್ಷೇತ್ರಗಳಲ್ಲಿ ಹಲವು ಅಪರೋಕ್ಷ ಉದ್ಯೋಗಗಳೂ ಇಲ್ಲಿ ಲಭಿಸಲಿವೆ ಮತ್ತು ನಾವು ನೋಡಿದ್ದೇವೆ ದೊಡ್ಡ ಅಸ್ಪತ್ರೆ ಬರುವ ಸ್ಥಳದ ಹೊರಗೆ ಸಣ್ಣ ನಗರವೊಂದು ನಿರ್ಮಾಣ ಆಗಿರುವುದನ್ನು.

ಸಹೋದರರೇ ಮತ್ತು ಸಹೋದರಿಯರೇ,

ಗುಜರಾತಿನ ವೈದ್ಯಕೀಯ ವಲಯದ ಯಶಸ್ಸಿಗೆ ಎರಡು ದಶಕಗಳ ಅವಿರತ ಪ್ರಯತ್ನ, ಅರ್ಪಣಾಭಾವ, ಮತ್ತು ದೃಢ ನಿರ್ಧಾರಗಳು ಕಾರಣವಾಗಿವೆ. ಗುಜರಾತ್ ಖಂಡಿತವಾಗಿಯೂ ಚಿಕಿತ್ಸೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಕಳೆದ ಆರು ವರ್ಷಗಳಲ್ಲಿ ಇಡೀ ದೇಶದಲ್ಲಾಗಿರುವ ಭಾರೀ ಪ್ರಮಾಣದ ಕೆಲಸಗಳಿಂದ ಲಾಭಗಳನ್ನು ಪಡೆಯಲಿದೆ.

ಸ್ನೇಹಿತರೇ,

ದೊಡ್ಡ ಆಸ್ಪತ್ರೆಗಳ ಸ್ಥಿತಿ-ಗತಿ ಮತ್ತು ಅವುಗಳ ಮೇಲಣ ಒತ್ತಡದ ಬಗೆಗೆ ತಮಗೆ ತಿಳಿದಿದೆ. ಸ್ವಾತಂತ್ರ್ಯ ಬಂದು ಹಲವು ದಶಕಗಳಾದರೂ ಪರಿಸ್ಥಿತಿ ಮುಂದುವರೆದಿತ್ತು. ದೇಶದಲ್ಲಿ ಬರೇ 6 ...ಎಂ.ಎಸ್. ಗಳಿದ್ದವು. 2003 ರಲ್ಲಿ ಅಟಲ್ ಜೀ ಸರಕಾರ ಮತ್ತೆ ಆರು ...ಎಂ.ಎಸ್.ಗಳನ್ನು ಸ್ಥಾಪಿಸಲು ಕ್ರಮಗಳನ್ನು ಕೈಗೊಂಡರು. ಅವುಗಳನ್ನು  ಪೂರ್ಣಮಾಡಲು 9 ವರ್ಷಗಳಷ್ಟು ಕಾಲಾವಕಾಶ ಬೇಕಾಯಿತು. 2012ರಲ್ಲಿ ಅವು ಪೂರ್ಣಗೊಂಡವುಕಳೆದ ಆರು ವರ್ಷಗಳಲ್ಲಿ 10 ಹೊಸ ...ಎಂ.ಎಸ್. ಗಳನ್ನು ಆರಂಭಿಸಲಾಗಿದೆ, ಇವುಗಳಲ್ಲಿ ಹಲವು ಪೂರ್ಣವಾಗಿ ಕಾರ್ಯಾರಂಭ ಮಾಡಿವೆ. ...ಎಂ.ಎಸ್. ಜೊತೆಗೆ  ...ಎಂ.ಎಸ್. ಗಳಂತಹದೇ 20 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನೂ ದೇಶಾದ್ಯಂತ ನಿರ್ಮಾಣ ಮಾಡಲಾಗುತ್ತಿದೆ.

ಸ್ನೇಹಿತರೇ,

2014ಕ್ಕೆ ಮೊದಲು, ನಮ್ಮ ಆರೋಗ್ಯ ವಲಯ ಬೇರೆ ಬೇರೆ ದಿಕ್ಕುಗಳಲ್ಲಿ ಕೆಲಸ ಮಾಡುತ್ತಿತ್ತು. ವಿವಿಧ ಧೋರಣೆಗಳಿದ್ದವು. ಪ್ರಾಥಮಿಕ ಆರೋಗ್ಯ ಸೇವೆ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿತ್ತು. ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಸೌಲಭ್ಯಗಳು ಬಹುತೇಕ ಶೂನ್ಯ ಎಂಬಂತ್ತಿತ್ತು ಪರಿಸ್ಥಿತಿ. ನಾವು ಆರೋಗ್ಯ ವಲಯದಲ್ಲಿ ಸಮಗ್ರ ನೆಲೆಯಲ್ಲಿ ಕೆಲಸ ಮಾಡಲು ತೊಡಗಿದೆವು. ಒಂದೆಡೆ ರೋಗ ನಿಯಂತ್ರಣ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಲೇ, ನಾವು ಆಧುನಿಕ ಚಿಕಿತ್ಸಾ ಸೌಲಭ್ಯಗಳಿಗೂ ಆದ್ಯತೆ ನೀಡಿದೆವು. ಬಡವರ ಚಿಕಿತ್ಸಾ ವೆಚ್ಚದ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದೆವು. ಇನ್ನೊಂದೆಡೆ ವೈದ್ಯರ ಸಂಖ್ಯೆಯನ್ನೂ ಹೆಚ್ಚಿಸುವುದಕ್ಕೆ ಆದ್ಯತೆ ನೀಡಿದೆವು.

ಸ್ನೇಹಿತರೇ,

ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ದೇಶದ ದುರ್ಗಮ ಮತ್ತು ದೂರದ ಪ್ರದೇಶಗಳಲ್ಲಿ ನಿರ್ಮಾಣ ಮಾಡುವ ಕೆಲಸ ತ್ವರಿತಗತಿಯಿಂದ ಸಾಗುತ್ತಿದೆ. ಇದುವರೆಗೆ 50,000 ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ ಮತ್ತು ಅವು ಸೇವೆ ನೀಡುತ್ತಿವೆ. ಅವುಗಳಲ್ಲಿ ಸುಮಾರು 5,000 ಕೇಂದ್ರಗಳು ಗುಜರಾತಿನಲ್ಲಿವೆ. ದೇಶದ ಸುಮಾರು 1.5 ಕೋಟಿ ಬಡವರು  ಯೋಜನೆ ಅಡಿಯಲ್ಲಿ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಯೋಜನೆ ಹೇಗೆ ಬಡ ಸಹೋದರರು ಮತ್ತು ಸಹೋದರಿಯರಿಗೆ ಬಹಳ ದೊಡ್ಡ ಸಹಾಯ ಮಾಡಿದೆ ಎಂಬುದನ್ನು ನಾನು ಅಂಕಿ ಅಂಶಗಳ ಮೂಲಕ ಹೇಳಲಿಚ್ಛಿಸುತ್ತೇನೆ.

ಸ್ನೇಹಿತರೇ,

ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಬಡವರು ಸುಮಾರು 30,000 ಕೋ.ರೂ.ಗಳನ್ನು ಉಳಿತಾಯ ಮಾಡಿದ್ದಾರೆ. 30,000 ಕೋ.ರೂ. ದೊಡ್ಡ ಮೊತ್ತ. ಯೋಜನೆ ಬಡವರನ್ನು ಬಹಳ ದೊಡ್ಡ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದೆ ಎಂಬುದನ್ನು ನೀವು ಕಲ್ಪಿಸಿಕೊಳ್ಳಿ. ನನ್ನ ದೇಶದ ಬಡ ಜನರು ಕ್ಯಾನ್ಸರ್, ಹೃದಯ ಸಮಸ್ಯೆ, ಕಿಡ್ನಿ ತೊಂದರೆಗಳು ಮತ್ತು ಇತರ ಹಲವಾರು ಗಂಭೀರ ಸಮಸ್ಯೆಗಳಿಗೆ ಉತ್ತಮ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ.

ಸ್ನೇಹಿತರೇ,

ರೋಗಗಳ ಸಂದರ್ಭದಲ್ಲಿ ಬಡವರಿಗೆ ಇನ್ನೊಂದು ರಕ್ಷಣೆ ಇದೆ. ಜನೌಷಧಿ ಕೇಂದ್ರಗಳು. ಸುಮಾರು 7,000 ಜನೌಷಧಿ ಕೇಂದ್ರಗಳು ದೇಶದಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ಒದಗಿಸುತ್ತಿವೆ. ಜನೌಷಧಿ ಕೇಂದ್ರದಲ್ಲಿ ಔಷಧಿಗಳು ಸುಮಾರು 90% ನಷ್ಟು ಅಗ್ಗ. ಅಂದರೆ 100 ರೂಪಾಯಿ ಬೆಲೆಯ ಔಷಧಿಗಳು ಹತ್ತು ರೂಪಾಯಿಗಳಿಗೆ ಸಿಗುತ್ತವೆ. 3.5 ಲಕ್ಷಕ್ಕೂ ಅಧಿಕ ಬಡವರು ಪ್ರತೀ ದಿನ ಜನೌಷಧಿ ಕೇಂದ್ರಗಳಿಂದ ಕಡಿಮೆ ದರದಲ್ಲಿ ಔಷಧಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಬಡವರು ಪ್ರತೀ ವರ್ಷ ಸುಮಾರು 3,600 ಕೋ.ರೂ. ಖರ್ಚನ್ನು ಉಳಿತಾಯ ಮಾಡುತ್ತಿದ್ದಾರೆ. ಇದು ಎಷ್ಟು ದೊಡ್ಡ ಸಹಾಯ ಎಂಬುದನ್ನು ನೀವು ಕಲ್ಪಿಸಿಕೊಳ್ಳಬಹುದು. ಕೆಲ ಜನರು ಪ್ರಶ್ನೆ ಮಾಡಬಹುದು -ಸರಕಾರ ಯಾಕೆ ಚಿಕಿತ್ಸಾ ವೆಚ್ಚವನ್ನು ಮತ್ತು ಔಷಧಿಗಳ ದರವನ್ನು ಕಡಿಮೆ ಮಾಡುತ್ತಿದೆ?.

ಸ್ನೇಹಿತರೇ,

ನಮ್ಮಲ್ಲಿ ಬಹುತೇಕ ಮಂದಿ ಅದೇ ಹಿನ್ನೆಲೆಯವರು. ಚಿಕಿತ್ಸೆಯ ವೆಚ್ಚ ಬಡವರು ಮತ್ತು ಮಧ್ಯಮವರ್ಗದವರಿಗೆ ಬಹಳ ಚಿಂತೆ ನೀಡುವಂತಹದ್ದು. ಬಡವರು ಗಂಬೀರ ಖಾಯಿಲೆಗಳಿಂದ ಪೀಡಿತರಾದಾಗ, ಅವರು ಚಿಕಿತ್ಸೆಗೆ ಹೋಗದೇ ಇರುವ ಸಾಧ್ಯತೆಯೇ ಹೆಚ್ಚು. ಚಿಕಿತ್ಸೆಗೆ ಹಣಕಾಸಿನ ಕೊರತೆ, ಇತರ ಮನೆ ಖರ್ಚುಗಳು, ಮತ್ತು ತನ್ನ ಜವಾಬ್ದಾರಿಯ ಕಳವಳಗಳು, ವ್ಯಕ್ತಿಯ ವರ್ತನೆಯನ್ನು ಬದಲಾಯಿಸುತ್ತವೆ. ಬಡವರು ಖಾಯಿಲೆ ಪೀಡಿತರಾದಾಗ ಮತ್ತು ಅವರ ಬಳಿ ಹಣ ಇಲ್ಲದೇ ಹೋದಾಗ ಅವರು ಏನು ಮಾಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಅವರು ತಾಯಿತ, ರಕ್ಷಾಯಂತ್ರ ಮೊದಲಾದವುಗಳ ಮೊರೆ ಹೋಗುತ್ತಾರೆ ಮತ್ತು ಮೂರ್ತಿ ಪೂಜೆ ಮಾಡುತ್ತಾರೆ. ಅವರು ಮೂಲಕ ತಮ್ಮ ರಕ್ಷಣೆಯಾಗಬಹುದು ಎಂದು ಭಾವಿಸುತ್ತಾರೆ. ಅವರು ಅಲ್ಲಿಗೆ ಹೋಗುವುದಕ್ಕೆ ಕಾರಣಸರಿಯಾದ ಸ್ಥಳಕ್ಕೆ ಹೋಗಲು ಅವರ ಬಳಿ ಹಣ ಇಲ್ಲದೇ ಇರುವುದು, ಬಡತನ ಅವರನ್ನು ಕಾಡುತ್ತಿರುತ್ತದೆ.

ಸ್ನೇಹಿತರೇ,

ಬಡವರಿಗೆ ರಕ್ಷಣಾ ಕವಚವನ್ನು ಕೊಟ್ಟರೆ, ಹಣಕಾಸಿನ ಕೊರತೆಯಿಂದ ಬದಲಾಗುವ ವರ್ತನೆಯಲ್ಲಿ ಭರವಸೆ, ಧೈರ್ಯ ತುಂಬಿರುತ್ತದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಬಡವರಿಗೆ ಚಿಕಿತ್ಸೆ ಕಳವಳವನ್ನು ಯಶಸ್ವಿಯಾಗಿ ಬದಲಾಯಿಸಿದೆ ಮತ್ತು ಜನರ ನಡವಳಿಕೆಯನ್ನು ಬದಲಾಯಿಸಿದೆ. ಹಣಕಾಸಿನ ಕೊರತೆಯಿಂದ ಅವರು ತಮ್ಮ ಚಿಕಿತ್ಸೆಗಳಿಗಾಗಿ ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ. ಕೆಲವೊಮ್ಮೆ ನಾನು ನೋಡಿದ್ದೇನೆ ಹಿರಿಯರು ಅಥವಾ 45-50 ವರ್ಷ ವಯಸ್ಸಿನವರು ಸಾಲದ ಭಯದಿಂದ ಮತ್ತು ಅದನ್ನು ತಮ್ಮ ಮಕ್ಕಳು ಪಾವತಿಸಬೇಕಾಗುತ್ತದೆ, ಇದರಿಂದ ಅವರ ಬದುಕು ಹಾಳಾಗುತ್ತದೆ ಎಂಬ ಭಯದಿಂದ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಹಲವಾರು ಮಂದಿ ಪೋಷಕರು ಜೀವಮಾನವಿಡೀ ನೋವು ಅನುಭವಿಸುತ್ತಾ, ಅದರಿಂದಲೇ ಸಾಯುತ್ತಿದ್ದರು, ತಮ್ಮ ಮಕ್ಕಳು ಸಾಲದಲ್ಲಿ ಬೀಳಬಾರದು ಎಂಬ ಕಾರಣದಿಂದ. ಅವರು ಚಿಕಿತ್ಸೆಗೆ ಹೋಗದಿರಲು ಮುಖ್ಯ ಕಾರಣ ಸಾಲದ ಸಹವಾಸ ಬೇಡ ಎನ್ನುವುದು. ಮತ್ತು ಅದಕ್ಕಾಗಿ ಅವರು ನೋವು ತಿನ್ನಲು ತಯಾರಾಗಿರುತ್ತಿದ್ದರು. ಬಡವರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ಮೊದಲು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ ಎಂಬುದೂ ಅಷ್ಟೇ ಸತ್ಯ. ಆಯುಷ್ಮಾನ್ ಭಾರತ್ ಬಳಿಕ ಪರಿಸ್ಥಿತಿಯಲ್ಲಿ ಬದಲಾವಣೆ ಆಗಿದೆ.

ಸ್ನೇಹಿತರೇ,

ಆರೋಗ್ಯದ ಬಗ್ಗೆ ಸುರಕ್ಷಾ ಭಾವನೆ ಮತ್ತು ಚಿಕಿತ್ಸಾ ವೆಚ್ಚಕ್ಕಾಗಿ ಹಣದ ಕೊರತೆಯ ಕಳವಳ, ಚಿಂತೆ ಇಲ್ಲದೇ ಇರುವ ಭಾವನೆ ಸಮಾಜದ ಮನಸ್ಥಿತಿಯನ್ನು ಬದಲು ಮಾಡಿದೆ. ಮತ್ತು ಅದರ ಪರಿಣಾಮವನ್ನು ನಾವು ಕಾಣುತ್ತಿದ್ದೇವೆ. ಇಂದು, ಅಲ್ಲಿ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ಜಾಗೃತಿ ಮತ್ತು ಗಂಭೀರತೆ ಬಂದಿದೆ. ಇದು ನಗರಗಳಲ್ಲಿ ಮಾತ್ರವೇ ಸಂಭವಿಸುತ್ತಿರುವುದಲ್ಲ. ನಾವು ಜಾಗೃತಿಯನ್ನು ದೇಶದ ಹಳ್ಳಿಗಳಲ್ಲಿ, ಗ್ರಾಮಗಳಲ್ಲಿಯೂ ಕಾಣುತ್ತಿದ್ದೇವೆ. ರೀತಿಯ ವರ್ತನೆ ಬದಲಾವಣೆ ಇತರ ಪ್ರದೇಶಗಳಲ್ಲಿಯೂ ಕಾಣಸಿಗುತ್ತಿದೆ. ಶೌಚಾಲಯಗಳ ಲಭ್ಯತೆ ಜನತೆ ನೈರ್ಮಲ್ಯದ ಬಗೆಗೆ ಹೆಚ್ಚು ಜಾಗರೂಕರಾಗಿರುವಂತೆ ಮಾಡಿದೆ. ಹರ್ ಘರ್ ಜಲ್ ಆಂದೋಲನ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿ ಜಲ ಸಂಬಂಧಿ ರೋಗಗಳನ್ನು ಕಡಿಮೆ ಮಾಡಿದೆ. ಅಡುಗೆ ಅನಿಲ ನಮ್ಮ ಸಹೋದರಿಯರ ಮತ್ತು ಪುತ್ರಿಯರ ಆರೋಗ್ಯವನ್ನು ಸುಧಾರಿಸುತ್ತಿರುವುದು ಮಾತ್ರವಲ್ಲ, ಇಡೀ ಕುಟುಂಬದಲ್ಲಿಯೇ ಧನಾತ್ಮಕ ಮನೋಭೂಮಿಕೆಯನ್ನು ನಿರ್ಮಾಣ ಮಾಡಿದೆ. ಅದೇ ರೀತಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಗರ್ಭಿಣಿ ಮಹಿಳೆಯರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಲು ಉತ್ತೇಜನ ನೀಡಿದೆ. ತಪಾಸಣೆ ವೇಳೆ ಅವರಿಗೆ ಯಾವುದಾದರೂ ಗಂಭೀರ ಸಮಸ್ಯೆಗಳಿದ್ದರೆ ಅವರಿಗೆ ತಿಳಿಸಲಾಗುವುದರಿಂದ ಹೆರಿಗೆ ವೇಳೆ ಯಾವುದಾದರೂ ಸಂಕೀರ್ಣ ಸಮಸ್ಯೆಗಳುಂಟಾಗುವ ಸಾಧ್ಯತೆ ಬಗ್ಗೆ ಮುಂಚಿತವಾಗಿ ತಿಳಿಯಲು ಸಾಧ್ಯವಿದೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಕೊಡಬಹುದಾಗಿದೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನಾವು ಗರ್ಭಿಣಿ ಮಹಿಳೆಯರಿಗೆ  ಸಾಕಷ್ಟು ಪೋಷಕಾಂಶ ಮತ್ತು ಆರೈಕೆ ಲಭ್ಯವಾಗುವಂತೆ ಮಾಡಿದೆ. ಪೋಷಣ್ ಅಭಿಯಾನವು ಅವರಲ್ಲಿ ಜಾಗೃತಿಯನ್ನು ಮೂಡಿಸಿದೆ. ಎಲ್ಲಾ ಪ್ರಯತ್ನಗಳು, ಕ್ರಮಗಳ ಪ್ರಮುಖ ಲಾಭ ಎಂದರೆ ದೇಶದಲ್ಲಿ ಹಿಂದಿನ ಪ್ರಮಾಣಕ್ಕೆ ಹೋಲಿಸಿದರೆ ಮಾತೆಯರ ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಸ್ನೇಹಿತರೇ,

ಫಲಿತಾಂಶಗಳ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಿದರೆ ಸಾಲದು. ಪರಿಣಾಮ ಕೂಡಾ ಬಹಳ ಮುಖ್ಯ. ಅನುಷ್ಟಾನ ಕೂಡಾ ಅಷ್ಟೇ ಮುಖ್ಯ. ಆದುದರಿಂದ, ವರ್ತನೆಯಲ್ಲಿ ಸಮಗ್ರ ಬದಲಾವಣೆ ತರಲು, ನಾವು ಪ್ರಕ್ರಿಯೆಯನ್ನು ಮೊದಲು ಸುಧಾರಿಸಬೇಕು ಎಂಬುದರಲ್ಲಿ ನಾನು ನಂಬಿಕೆ ಇರಿಸಿದ್ದೇನೆ. ವರ್ಷಗಳಿಂದ ದೇಶವು ಇದರ ಮೇಲೆ ಭಾರೀ ಒತ್ತನ್ನು ನೀಡಿದೆ. ಅದರ ಪರಿಣಾಮವಾಗಿ, ನಾವು ದೇಶದ ಆರೋಗ್ಯ ವಲಯದ ತಳಮಟ್ಟದಲ್ಲಿ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಮತ್ತು ಬಹಳ ದೊಡ್ಡ ಸಂಗತಿ ಎಂದರೆ ಜನರಿಗೆ ಆರೋಗ್ಯ ಸವಲತ್ತುಗಳ ಲಭ್ಯತೆ ಸಾಧ್ಯವಾಗಿದೆ. ಮತ್ತು ನಾನು ಇಂದು ಆರೋಗ್ಯ ಮತ್ತು ಶಿಕ್ಷಣ ತಜ್ಞರು ಯೋಜನೆಗಳು ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ಯಾವ   ಪರಿಣಾಮ ಬೀರಿವೆ  ಎಂಬುದರ ಬಗ್ಗೆ ಅಧ್ಯಯನ ಮಾಡಬೇಕು ಎಂದು ಮನವಿ ಮಾಡುತ್ತೇನೆ. ಯೋಜನೆಗಳು ಮತ್ತು ಜಾಗೃತಿ ಶಾಲೆಗಳಲ್ಲಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ತೊರೆಯುವ ಪ್ರಮಾಣವನ್ನು ಕಡಿಮೆ ಮಾಡಲು ಪ್ರಮುಖ ಕಾರಣವಾಗಿದೆ.

ಸ್ನೇಹಿತರೇ,

ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಆಂದೋಲನ ಮಾದರಿಯಲ್ಲಿ ಉತ್ತೇಜಿಸುವ ಕಾರ್ಯ ಆಂದೋಲನದೋಪಾದಿಯಲ್ಲಿ ನಡೆಯುತ್ತಿದೆ. ವೈದ್ಯ ಶಿಕ್ಷಣ ಆಡಳಿತ ಸಂಸ್ಥೆಗಳಲ್ಲಿ ಸುಧಾರಣೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಾಂಪ್ರದಾಯಿಕ ಭಾರತೀಯ ವೈದ್ಯಪದ್ಧತಿ ಶಿಕ್ಷಣಕ್ಕೆ ಸಂಬಂಧಿಸಿ ಅವಶ್ಯ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆಯ ಬಳಿಕ ಆರೋಗ್ಯ ಶಿಕ್ಷಣ ಗುಣಮಟ್ಟ ಸುಧಾರಿಸಲಿದೆ ಮತ್ತು ವ್ಯಾಪ್ತಿಯೂ ವಿಸ್ತಾರವಾಗಲಿದೆ. ಎಂ.ಬಿ.ಬಿ.ಎಸ್. ಬಳಿಕ ಎರಡು ವರ್ಷಗಳ ಅವಧಿಯ ಡಿಪ್ಲೊಮಾ ಅಥವಾ ಸ್ನಾತಕೋತ್ತರ ವೈದ್ಯ ಪದವೀಧರರಿಗೆ ಜಿಲ್ಲಾ ರೆಸಿಡೆನ್ಸಿ ಯೋಜನೆ, ಪದವೀಧರರಿಗೆ ರಾಷ್ಟ್ರೀಯ ನಿರ್ಗಮನ ಪರೀಕ್ಷೆ ಯಂತಹ ಕ್ರಮಗಳನ್ನು ಒಳಗೊಂಡಂತೆ ಅವಶ್ಯಕತೆ ಹಾಗು ಗುಣಮಟ್ಟ ಮಟ್ಟ ವೃದ್ಧಿ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸ್ನೇಹಿತರೇ,

ಪ್ರತೀ ರಾಜ್ಯಕ್ಕೂ ...ಎಂ.ಎಸ್. ಲಭ್ಯವಾಗುವಂತೆ ಮಾಡುವುದು ಗುರಿಯಾಗಿದೆ. ಮತ್ತು ಪ್ರತೀ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ನಡುವೆ ಒಂದು ವೈದ್ಯಕೀಯ ಕಾಲೇಜು ಇರುವಂತೆ ಮಾಡುವ ಗುರಿಯೂ ಇದೆ. ಎಲ್ಲಾ ಪ್ರಯತ್ನಗಳ ಫಲವಾಗಿ ಕಳೆದ ಆರು ವರ್ಷಗಳಲ್ಲಿ 31,000 ಹೊಸ ಎಂಬಿ.ಬಿ.ಎಸ್. ಸೀಟುಗಳು ಮತ್ತು 24,000 ಹೊಸ ಸ್ನಾತಕೋತ್ತರ ಸೀಟುಗಳು ಲಭ್ಯವಾಗಿವೆ. ಸ್ನೇಹಿತರೇ, ಭಾರತವು ಆರೋಗ್ಯ ವಲಯದ ತಳಮಟ್ಟದಲ್ಲಿ ಪ್ರಮುಖ ಬದಲಾವಣೆಗಳತ್ತ ಹೆಜ್ಜೆ ಹಾಕುತ್ತಿದೆ. 2020 ಆರೋಗ್ಯ ಸವಾಲುಗಳ ವರ್ಷವಾಗಿದ್ದರೆ, 2021 ಆರೋಗ್ಯ ಪರಿಹಾರಗಳ ವರ್ಷವಾಗಿರಲಿದೆ. 2021 ರಲ್ಲಿ ಜಗತ್ತು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕವಾಗಿರುತ್ತದೆ ಮತ್ತು ಪರಿಹಾರಗಳತ್ತ ಸಾಗುತ್ತದೆ. 2020ರಲ್ಲಿ ಆರೋಗ್ಯ ಸವಾಲನ್ನು ಭಾರತ ಹೇಗೆ ನಿಭಾಯಿಸಿತು ಎಂಬುದನ್ನು , ನಿಟ್ಟಿನಲ್ಲಿ ಯಾವ ಕೊಡುಗೆ ನೀಡಿತು ಎಂಬುದನ್ನು ಜಗತ್ತು ಗಮನಿಸಿದೆ. ನಾನು ಅದನ್ನು ಆರಂಭದಲ್ಲಿ ಉಲ್ಲೇಖಿಸಿದ್ದೇನೆ.

ಸ್ನೇಹಿತರೇ,

2021 ರಲ್ಲಿ ಆರೋಗ್ಯ ಪರಿಹಾರಗಳನ್ನು ವಿಸ್ತರಿಸುವಲ್ಲಿ ಭಾರತದ ಕೊಡುಗೆ ಬಹಳ ನಿರ್ಣಾಯಕವಾಗಲಿದೆ. ಭಾರತವು ಆರೋಗ್ಯದ ಭವಿಷ್ಯದಲ್ಲಿ ಮತ್ತು ಭವಿಷ್ಯದ ಆರೋಗ್ಯದಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಲಿದೆ. ಸಮರ್ಥ ವೈದ್ಯಕೀಯ ವೃತ್ತಿಪರರು ಮತ್ತು ಅವರ ಸೇವೆ ವಿಶ್ವಕ್ಕೆ ಇಲ್ಲಿಂದ ಲಭಿಸಲಿದೆ. ಇಲ್ಲಿ ಜಗತ್ತಿಗೆ ಸಾಮೂಹಿಕ ಲಸಿಕಾ ಕಾರ್ಯಕ್ರಮದ ಅನುಭವ ಮತ್ತು ಪರಿಣತಿ ಲಭಿಸಲಿದೆ. ಜಗತ್ತು ನವೋದ್ಯಮಗಳನ್ನು ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಒಳಗೊಂಡ ಆರೋಗ್ಯ ಪರಿಹಾರಗಳು ಮತ್ತು ತಂತ್ರಜ್ಞಾನದ ಸಮಗ್ರೀಕರಣವನ್ನು ಇಲ್ಲಿ ನೋಡಲಿದೆ. ನವೋದ್ಯಮಗಳು ಆರೋಗ್ಯ ಸೇವೆ ಲಭ್ಯತೆಯನ್ನು ಹೆಚ್ಚು ಮಾಡಲಿವೆ ಮತ್ತು ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಲಿವೆ.

ಸ್ನೇಹಿತರೇ,

ಇಂದು, ರೋಗಗಳು ಹೇಗೆ ಜಾಗತೀಕರಣಗೊಳ್ಳುತ್ತಿವೆ ಎಂಬುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಆದುದರಿಂದ, ಆರೋಗ್ಯ ಪರಿಹಾರಗಳೂ ಜಾಗತೀಕರಣಗೊಳ್ಳುವುದಕ್ಕೆ ಇದು ಸಕಾಲ. ಪ್ರಯತ್ನಗಳನ್ನು ಮಾಡಲು ಮತ್ತು ಸೂಕ್ತ ಪ್ರತಿಕ್ರಿಯೆ ನೀಡಲು ಜಗತ್ತು ಒಂದಾಗಬೇಕಾದ ಕಾಲ ಇದು. ಇಂದು ಏಕಾಂಗಿ ಪ್ರಯತ್ನಗಳು ಕೆಲಸ ಮಾಡಲಾರವು. ಪ್ರತಿಯೊಬ್ಬರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಪ್ರತಿಯೊಬ್ಬರ ಬಗ್ಗೆಯೂ ಚಿಂತಿಸಬೇಕಾಗುತ್ತದೆ. ಮತ್ತು ಭಾರತ ಇಂದು ಜಾಗತಿಕ ಮಟ್ಟದಲ್ಲಿ ಗಮನಿಸುವ ರಾಷ್ಟ್ರವಾಗಿದೆ. ಭಾರತವು ತನ್ನ ಬೇಡಿಕೆಗೆ ತಕ್ಕಂತೆ ಹೊಂದಾಣಿಕೆ, ಅನುಸರಣಾ ಸಾಮರ್ಥ್ಯ, ರೂಪಿಸಿಕೊಳ್ಳುವಿಕೆ ಮತ್ತು ಅದನ್ನು ವಿಸ್ತರಿಸಿಕೊಳ್ಳುವ ಸಾಮರ್ಥ್ಯವನ್ನು ಸಾಬೀತು ಮಾಡಿದೆ. ನಾವು ಸಾಮೂಹಿಕ ಪ್ರಯತ್ನಗಳಲ್ಲಿ ಮೌಲ್ಯವರ್ಧನೆ ಒದಗಿಸಿದ್ದೇವೆ ಮತ್ತು ನಾವು ಮಾನವೀಯತೆಯನ್ನು ಕೇಂದ್ರದಲ್ಲಿಟ್ಟುಕೊಂಡು ಎಲ್ಲ ಗಡಿಗಳನ್ನು ಮೀರಿ ಮಾನವತೆಗೆ ಸೇವೆ ಸಲ್ಲಿಸುತ್ತಿದ್ದೇವೆ, ಮೂಲಕ ವಿಶ್ವದ ಜೊತೆ ಮುಂದೆ ಸಾಗುತ್ತಿದ್ದೇವೆ. ಇಂದು, ಭಾರತವು ಸೇವಾ ಮನೋಭಾವ ಮತ್ತು ಅದಕ್ಕೆ ಅನುಗುಣವಾದ ಸಾಮರ್ಥ್ಯವನ್ನು ಹೊಂದಿದೆ. ಅದರಿಂದಾಗಿಯೇ ಭಾರತವು ಜಾಗತಿಕ ಆರೋಗ್ಯದ ನರಮಂಡಲದ ಕೇಂದ್ರ ಬಿಂದುವಾಗಿದೆ. 2021 ರಲ್ಲಿ ನಾವು ಭಾರತದ ಪಾತ್ರವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ.

ಸ್ನೇಹಿತರೇ,

ಸಾಮಾನ್ಯವಾಗಿ ಹೇಳಲಾಗುತ್ತದೆ: 'सर्वम् अन्य परित्यज्य शरीरम् पालयेदतः' ಅಂದರೆ, ದೇಹದ ಆರೋಗ್ಯ ರಕ್ಷಣೆ ಅತ್ಯಂತ ದೊಡ್ಡ ಆದ್ಯತೆ. ಯಾರೇ ಆದರೂ ಎಲ್ಲಕ್ಕಿಂತ ಮೊದಲು ಆರೋಗ್ಯದ ಬಗ್ಗೆ ಚಿಂತಿಸಬೇಕು. ಹೊಸ ವರ್ಷದಲ್ಲಿ ಮಂತ್ರವನ್ನು ನಮ್ಮ ಜೀವನದಲ್ಲಿ ಆದ್ಯತೆಯಾಗಿ ಅಳವಡಿಸಿಕೊಳ್ಳಬೇಕು. ನಾವು ಆರೋಗ್ಯವಾಗಿದ್ದರೆ, ದೇಶ ಆರೋಗ್ಯವಾಗಿರುತ್ತದೆ ಮತ್ತು ನಮಗೆ ಫಿಟ್ ಇಂಡಿಯಾ ಆಂದೋಲನದ ಬಗ್ಗೆ ಗೊತ್ತಿದೆ. ಇದು ಬರೇ ಯುವ ಜನತೆಗೆ ಮಾತ್ರ ಅಲ್ಲ, ಎಲ್ಲಾ ವಯೋಮಾನದ ಜನರೂ ಫಿಟ್ ಇಂಡಿಯಾ ಆಂದೋಲನಕ್ಕೆ ಸೇರಬೇಕು. ಮತ್ತು ಫಿಟ್ ಇಂಡಿಯಾ ಆಂದೋಲನಕ್ಕೆ ವೇಗ ಕೊಡಲು ಇದು ಸಕಾಲ. ಅದು ಯೋಗ ಇರಲಿ ಅಥವಾ ಫಿಟ್ ಇಂಡಿಯಾ ಇರಲಿ, ನಾವು ನಮ್ಮನ್ನು ಆರೋಗ್ಯವಾಗಿಟ್ಟಿರಬೇಕು. ರೋಗಪೀಡಿತರಾದ ಬಳಿಕ ಎದುರಾಗುವ ಕಷ್ಟಗಳನ್ನು ಪರಿಗಣಿಸಿದರೆ ಆರೋಗ್ಯವಾಗಿರುವುದಕ್ಕೆ ಅಷ್ಟೊಂದು ಪ್ರಯತ್ನಗಳನ್ನು ಯಾರೂ ಮಾಡಬೇಕಾಗಿರುವುದಿಲ್ಲ. ಮತ್ತು ಆದುದರಿಂದ,ನಾವು ಫಿಟ್ ಇಂಡಿಯಾ ಬಗ್ಗೆ ನೆನಪು ಮಾಡಿಕೊಳ್ಳುತ್ತಿರಬೇಕು. ನಮ್ಮನ್ನು ನಾವು ಮತ್ತು ದೇಶವನ್ನು ಸದೃಢವಾಗಿರಿಸಿಕೊಳ್ಳುವುದು ನಮ್ಮ ಕರ್ತವ್ಯ. ಗುಜರಾತ್ ಮತ್ತು ರಾಜ್ ಕೋಟ್   ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ; ಕೊರೊನಾ ಸೋಂಕು ಕಡಿಮೆಯಾಗುತ್ತಿದೆಯಾದರೂ ವೈರಸ್ ಬಹಳ ವೇಗವಾಗಿ ಮತ್ತೆ ಆವರಿಸಿಕೊಳ್ಳುತ್ತದೆ ಎಂಬುದನ್ನು ಮರೆಯಬೇಡಿ. ಆದುದರಿಂದ ಎರಡು ಯಾರ್ಡ್ ದೂರ ಕಾಪಾಡುವ  ಬಗ್ಗೆ ಮತ್ತು ಮುಖಗವಸುಗಳನ್ನು ಧರಿಸುವ ಬಗ್ಗೆ ಹಾಗು ಸ್ವಚ್ಛತೆ ಬಗ್ಗೆ ಯಾವುದೇ ರಿಯಾಯತಿ ಇರಬಾರದು. ಹೊಸ ವರ್ಷ ನಮ್ಮೆಲ್ಲರಿಗೂ ತುಂಬಾ ಸಂತೋಷವನ್ನು ತರಲಿ!. ಹೊಸ ವರ್ಷ ದೇಶಕ್ಕೆ ಸಮೃದ್ಧಿ ತರಲಿ!. ಆದರೆ ನಾನು ಮತ್ತೆ ಹೇಳುತ್ತೇನೆ, ಮೊದಲೂ ಪದೇ ಪದೇ ಹೇಳಿದ್ದೇನೆ, ಔಷಧಿ ಬರುವವರಿಗೆ ಯಾವುದೇ ಸಡಿಲಿಕೆ, ಲೋಪಗಳಾಗದಿರಲಿ. ಔಷಧಿ ಬಹುತೇಕ ಬಂದಿದೆ. ಇನ್ನುಳಿದಿರುವುದು ಕಾಲ, ಸಮಯಕ್ಕೆ ಸಂಬಂಧಪಟ್ಟಂತಹ ವಿಷಯಗಳು. ಮೊದಲು ನಾನು ಹೇಳುತ್ತಿದ್ದೆ, ಔಷಧಿ ಇಲ್ಲದಿರುವುದರಿಂದ ಅಲ್ಲಿ ಕಟ್ಟು ನಿಟ್ಟಿನ ಪ್ರತಿಬಂಧಕ ಕ್ರಮಗಳು ಇರಬೇಕು ಎಂದು. ಆದರೆ ನಾನು ಈಗ ಹೇಳುತ್ತಿದ್ದೇನೆ-ಜನರು ಕಟ್ಟುನಿಟ್ಟಾಗಿರಬೇಕು ಮತ್ತು ಔಷಧಿಯನ್ನು ತೆಗೆದುಕೊಳ್ಳಬೇಕು ಎಂದು. ಔಷಧಿ ದೊರೆತರೆ , ಅಲ್ಲಿ ರಿಯಾಯತಿಗಳು ಇರುತ್ತವೆ ಎಂಬ ಭ್ರಮೆಯಲ್ಲಿ ಬದುಕಬೇಡಿ. ಇದನ್ನು ಜಗತ್ತು ಮತ್ತು ವಿಜ್ಞಾನಿಗಳ ಸಮುದಾಯ ಹೇಳುತ್ತಿದೆ, ಮತ್ತು ಆದುದರಿಂದ 2021ರಲ್ಲಿ ನಮ್ಮ ಮಂತ್ರ ಔಷಧಿ ಮತ್ತು ಕಟ್ಟುನಿಟ್ಟು.

ಎರಡನೆಯದಾಗಿ, ನಮ್ಮ ದೇಶದಲ್ಲಿ ವದಂತಿಗಳು ಸಾಮಾನ್ಯವಾಗಿ ಹರಡುತ್ತಿರುತ್ತವೆ. ವಿವಿಧ ರೀತಿಯ ಜನರು ತಮ್ಮ ಸ್ವಾರ್ಥ ಮತ್ತು ವೈಯಕ್ತಿಕ ಹಿತಾಸಕ್ತಿಗಾಗಿ ಬೇಜವಾಬ್ದಾರಿಯುತವಾಗಿ ವದಂತಿಗಳನ್ನು ಹರಡುತ್ತಿರುತ್ತಾರೆ. ನಾವು ಲಸಿಕಾ ಕಾರ್ಯಕ್ರಮ ಆರಂಭಿಸುವಾಗಲೂ ವದಂತಿಗಳು ಹರಡಬಹುದು. ಅಸಂಖ್ಯ ಕಲ್ಪಿತ ವದಂತಿಗಳನ್ನು ಹರಡಿ ಇನ್ನೊಬ್ಬರನ್ನು ಕಳಂಕಿತರಂತೆ ತೋರಿಸಿ ಹಾನಿಯನ್ನು ಮಾಡುವುದಕ್ಕೂ ಸಾಧ್ಯವಿದೆ. ಅದು ಆರಂಭವಾಗಿದೆ ಮತ್ತು ಕೆಲವು ಬಡ ಜನರು ಅಥವಾ ಕೆಲವು ದುಷ್ಟ ಉದ್ದೇಶಗಳಿಂದ ಕಾರ್ಯಾಚರಿಸುತ್ತಿರುವವರು ಇದನ್ನು ಬಹಳ ನಿಷ್ಟೆಯಿಂದ ಹರಡುತ್ತಿದ್ದಾರೆ. ನಾನು ದೇಶವಾಸಿಗಳಿಗೆ ಮನವಿ ಮಾಡುತ್ತೇನೆ ಏನೆಂದರೆ ನಾವು ಕೊರೊನಾ ವಿರುದ್ಧ ಹೋರಾಡುವಾಗ ಅಗೋಚರ ವೈರಿ ವಿರುದ್ಧವೂ ಹೋರಾಡಬೇಕಾಗಿದೆ ಎಂಬುದಾಗಿ. ವದಂತಿಗಳೇ ಕಾರುಬಾರು ಮಾಡಲು ಬಿಡಬೇಡಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬರುವುದನ್ನು ಮುಂದಕ್ಕೆ ಬೇರೆಯವರಿಗೆ ಕಳುಹಿಸಬೇಡಿ. ನಾವೆಲ್ಲರೂ ಶೀಘ್ರದಲ್ಲಿಯೇ ಆರಂಭಗೊಳ್ಳಲಿರುವ ಆರೋಗ್ಯ ಆಂದೋಲನಕ್ಕೆ ಜವಾಬ್ದಾರಿಯುತ ನಾಗರಿಕರಾಗಿ ದೇಶಕ್ಕೆ ಕೊಡುಗೆ ನೀಡಬೇಕಾಗಿದೆ. ಯಾರಿಗೆ ಮೊದಲು ಅವಶ್ಯ ಎಂಬ ಸುದ್ದಿಯನ್ನು ಪ್ರಚುರಪಡಿಸುವಲ್ಲಿ ನಾವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ನೋಡುವ ಜವಾಬ್ದಾರಿಯನ್ನು ನಾವೆಲ್ಲರೂ ಕೈಗೆತ್ತಿಕೊಳ್ಳಬೇಕು. ಲಸಿಕೆಗೆ ಸಂಬಂಧಿಸಿದ ವಿಷಯದಲ್ಲಿ ಪ್ರಗತಿಯಾಗುತ್ತಿರುವಂತೆ, ದೇಶವಾಸಿಗಳಿಗೆ ಸಕಾಲದಲ್ಲಿ ಮಾಹಿತಿ ಲಭಿಸುತ್ತದೆ. ನಾನು ಮತ್ತೊಮ್ಮೆ ನಿಮಗೆಲ್ಲರಿಗೂ 2021 ಶುಭ ತರಲಿ ಎಂದು ಹಾರೈಸುತ್ತೇನೆ.

ಧನ್ಯವಾದಗಳು!

ಘೋಷಣೆಪ್ರಧಾನಮಂತ್ರಿ ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರುಇದು ಅದರ ಅಂದಾಜು ಅನುವಾದ.

***


(Release ID: 1685895) Visitor Counter : 339