ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ತೃತೀಯ ಲಿಂಗಿ ವ್ಯಕ್ತಿಗಳ ರಾಷ್ಟ್ರೀಯ ಪೋರ್ಟಲ್ ಹಾಗು ಗುಜರಾತ್ ನಲ್ಲಿ ತೃತೀಯ ಲಿಂಗಿ ವ್ಯಕ್ತಿಗಳ ವಸತಿ ಯೋಜನೆ ಗರಿಮಾ ಗೃಹಕ್ಕೆ ಇ - ಚಾಲನೆ ನೀಡಿದ ಕೇಂದ್ರ ಸಚಿವ ಥಾವರ್ ಚಂದ್ ಗೆಹ್ಲೋಟ್

Posted On: 25 NOV 2020 4:09PM by PIB Bengaluru

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರಿಂದು ತೃತೀಯ ಲಿಂಗಿ ವ್ಯಕ್ತಿಗಳ ರಾಷ್ಟ್ರೀಯ ಪೋರ್ಟಲ್ ಗೆ ಚಾಲನೆ ನೀಡಿಗುಜರಾತ್ ವಡೋದರದಲ್ಲಿ ತೃತೀಯ ಲಿಂಗಿ ವ್ಯಕ್ತಿಗಳ ವಸತಿ ಯೋಜನೆ ಗರಿಮಾ ಗೃಹದ -ಉದ್ಘಾಟನೆಯನ್ನು  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರುಗಳಾದ ಶ್ರೀ ಕ್ರಿಶನ್ ಪಾಲ್ ಗುರ್ಜಾರ್, ಶ್ರೀ ರಾಮದಾಸ್ ಅತಾವಲೆ, ಶ್ರೀ ರತನ್ ಲಾಲ್ ಕಟಾರಿಯಾ; ತೃತೀಯ ಲಿಂಗಿಗಳ ರಾಷ್ಟ್ರೀಯ ಮಂಡಳಿಯ ಸದಸ್ಯ ಶ್ರೀ  ಲಕ್ಷ್ಮೀನಾರಾಯಣ ತ್ರಿಪಾಠಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಆರ್. ಸುಬ್ರಹ್ಮಣ್ಯಂ ಅವರ ಸಮ್ಮುಖದಲ್ಲಿ  ನೆರವೇರಿಸಿದರು

ಸಮಾರಂಭ ಉದ್ದೇಶಿಸಿ ಮಾತನಾಡಿದ ಶ್ರೀ ಥಾವರ್ ಚಂದ್ ಗೆಹ್ಲೋಟ್, ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಪೋರ್ಟಲ್ ಅನ್ನು 2020 ಸೆಪ್ಟೆಂಬರ್ 29ರಂದು ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ನಿಯಮ 2020 ಅಧಿಸೂಚನೆಯಾದ  ಎರಡು ತಿಂಗಳುಗಳಲ್ಲಿ ರೂಪಿಸಲಾಗಿದೆ ಎಂದರು. ಅತ್ಯಂತ ಹೆಚ್ಚು ಉಪಯುಕ್ತವಾದ ಪೋರ್ಟಲ್ ತೃತೀಯಲಿಂಗಿ ವ್ಯಕ್ತಿಗಳಿಗೆ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಯನ್ನು ಡಿಜಿಟಲ್ ಸ್ವರೂಪದಲ್ಲಿ ದೇಶದ ಎಲ್ಲಿಂದ ಬೇಕಾದರೂ ಪಡೆದುಕೊಳ್ಳಲು ನೆರವಾಗುತ್ತದೆ. ಇದು ತೃತೀಯ ಲಿಂಗಿ ವ್ಯಕ್ತಿಗಳಿಗೆ ಯಾವುದೇ ಕಚೇರಿಗೆ ಖುದ್ದು ಭೇಟಿ ನೀಡುವ ಅವಶ್ಯಕತೆ ಇಲ್ಲದೆ, ಯಾವುದೇ ಮುಖಾಮುಖಿ ಇಲ್ಲದೆ ಗುರುತಿನ ಚೀಟಿ ಪಡೆಯಲು ಅವಕಾಶ ನೀಡುತ್ತದೆ ಎಂದು ಸಚಿವರು ತಿಳಿಸಿದರು. ಪೋರ್ಟಲ್ ಮೂಲಕ, ಅವರು ತಮ್ಮ ಅರ್ಜಿಗಳ ಸ್ಥಿತಿಯನ್ನು ಅರಿಯಬಹುದು ಅದು ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುತ್ತದೆ. ಇದನ್ನು ನೀಡುವ ಪ್ರಾಧಿಕಾರಗಳಿಗೂ ಯಾವುದೇ ಅನಗತ್ಯ ವಿಳಂಬವಿಲ್ಲದೆ ಅರ್ಜಿಯ ಪ್ರಕ್ರಿಯೆ ಪೂರ್ಣಗೊಳಿಸಲು, ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ನೀಡಲು ಕಟ್ಟುನಿಟ್ಟಿನ ಕಾಲಮಿತಿ ನೀಡಲಾಗಿದೆ. ಒಮ್ಮೆ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ನೀಡಿದ ಬಳಿಕ, ಅರ್ಜಿದಾರರು ಅದನ್ನು ಪೋರ್ಟಲ್ ನಿಂದ ಸ್ವತಃ ಡೌನ್ ಲೋಡ್ ಮಾಡಿಕೊಳ್ಳಬಹುದು. ಒಂದೊಮ್ಮೆ ಅರ್ಜಿ ತಿರಸ್ಕರಿಸಿದೆ ಅಥವಾ ವಿಳಂಬವಾದರೆ, ಅರ್ಜಿದಾರರಿಗೆ ಕುಂದುಕೊರತೆಯನ್ನು ಪೋರ್ಟಲ್ ಮೂಲಕ ಸಲ್ಲಿಸಲು ಅವಕಾಶವಿದ್ದು, ಇದನ್ನು ಸಂಬಂಧಿತ ವ್ಯಕ್ತಿಗಳಿಗೆ ರವಾನಿಸಲಾಗುತ್ತದೆ ಮತ್ತು ಇದನ್ನು ಆದಷ್ಟು ಬೇಗ ಪರಿಹರಿಸಲಾಗುತ್ತದೆ. ತಮಗೆ ಒದಗಿಸಲಾದ ಡ್ಯಾಶ್‌ ಬೋರ್ಡ್ ಮೂಲಕ ಅಧಿಕಾರಿಗಳು ಸ್ವೀಕರಿಸಿದ ಅರ್ಜಿಗಳ ಸಂಖ್ಯೆ, ಅನುಮೋದಿತ ಅರ್ಜಿಗಳು ಮತ್ತು ಬಾಕಿ ಇರುವ ಅಥವಾ ತಡೆಹಿಡಿಯಲಾದ ಅರ್ಜಿಗಳನ್ನು ವೀಕ್ಷಿಸಬಹುದು ಇದರಿಂದ ಅವರು ಅಗತ್ಯ ಕ್ರಮಗಳನ್ನು ತಮ್ಮ ಕಡೆಯಿಂದ ಕೈಗೊಳ್ಳಬಹುದು. ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ಸಂರಕ್ಷಣೆ) ಕಾಯ್ದೆ, 2019 ಪ್ರಮುಖ ನಿಬಂಧನೆಯಾಗಿರುವ ಸ್ವಯಂ-ಸೃಷ್ಟಿತ ಗುರುತಿನ ಚೀಟಿ ಮತ್ತು ತೃತೀಯಲಿಂಗಿ ಪ್ರಮಾಣಪತ್ರ ಪಡೆಯಲು ಸಮುದಾಯದವರಿಗೆ ಪೋರ್ಟಲ್ ಸಹಾಯ ಮಾಡುತ್ತದೆ ಎಂದು ಅವರು ಆಶಿಸಿದರು.

ಶ್ರೀ ಗೆಹ್ಲೋಟ್ ಗುಜರಾತ್ ವಡೋದರದಲ್ಲಿಂದು - ಉದ್ಘಾಟನೆಗೊಂಡ ತೃತೀಯ ಲಿಂಗಿಗಳಿಗೆ ವಸತಿ ಕಲ್ಪಿಸುವ ಗರಿಮಾ ಗೃಹವು ಸಂಪೂರ್ಣವಾಗಿ ತೃತೀಯ ಲಿಂಗಿಗಳೇ ನಡೆಸುವ ಸಮುದಾಯ ಆಧಾರಿತ ಸಂಘಟನೆ ಲಕ್ಷ್ಯ ಟ್ರಸ್ಟ್ ಸಹಯೋಗದಲ್ಲಿ ನಡೆಯಲಿದೆ ಎಂದು ತಿಳಿಸಿದರು.   ಆಶ್ರಯ, ಆಹಾರ, ವೈದ್ಯಕೀಯ ಆರೈಕೆ ಮತ್ತು ಮನರಂಜನಾ ಸೌಲಭ್ಯಗಳಂತಹ ಮೂಲಭೂತ ಸೌಕರ್ಯಗಳೊಂದಿಗೆ ತೃತೀಯಲಿಂಗಿ ವ್ಯಕ್ತಿಗಳಿಗೆ ವಸತಿ ನೀಡುವುದು ಇದರ ಉದ್ದೇಶವಾಗಿದೆ. ಜೊತೆಗೆ, ಇದು ಸಮುದಾಯದ ವ್ಯಕ್ತಿಗಳ ಸಾಮರ್ಥ್ಯ-ನಿರ್ಮಾಣ / ಕೌಶಲ್ಯ ಅಭಿವೃದ್ಧಿಗೆ ಬೆಂಬಲವನ್ನು ನೀಡುತ್ತದೆ, ಇದು ಅವರಿಗೆ ಘನತೆ ಮತ್ತು ಗೌರವದ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ.

ಸಂದರ್ಭದಲ್ಲಿ ಮಾತನಾಡಿದ ಶ್ರೀ ರತನ್ ಲಾಲ್ ಕಟಾರಿಯಾ, ತೃತೀಯಲಿಂಗಿ ವ್ಯಕ್ತಿಗಳ ರಾಷ್ಟ್ರೀಯ ಪೋರ್ಟಲ್ ಎಂಡ್ ಟು ಎಂಡ್ ಆನ್‌ ಲೈನ್ ಪ್ರಕ್ರಿಯೆಯಾಗಿದೆ ಎಂದು ಹೇಳಿದರು. ತೃತೀಯಲಿಂಗಿ ವ್ಯಕ್ತಿಗಳು ಎಲ್ಲಿಂದಲಾದರೂ ಪೋರ್ಟಲ್ ನೀಡುವ ಸೇವೆಗಳನ್ನು ಪಡೆಯಬಹುದು.

ಶ್ರೀ ಕ್ರಿಶನ್ ಪಾಲ್ ಗುರ್ಜರ್ ಮಾತನಾಡಿ, ತೃತೀಯ ಲಿಂಗಿ ವ್ಯಕ್ತಿಗಳ ರಾಷ್ಟ್ರೀಯ ಪೋರ್ಟಲ್ ಸಮುದಾಯದ ಬಹಳಷ್ಟು ಜನರು ಮುಂದೆ ಬರಲು ಮತ್ತು ತೃತೀಯಲಿಂಗಿ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಗಳನ್ನು ತಮ್ಮ ಸ್ವಯಂ-ಸೃಜಿಸಿಕೊಂಡು ಪಡೆಯಲು ಸಹಾಯ ಮಾಡುತ್ತದೆ, ಇದು ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಪ್ರಮುಖ ನಿಬಂಧನೆಯಾಗಿದೆ ಎಂದರು.

ಶ್ರೀ ರಾಮ್ ದಾಸ್ ಅತಾವಲೆ ಮಾತನಾಡಿ, ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಕಾಯಿದೆ 2020 ಜನವರಿ 10ರಿಂದ ಜಾರಿಗೆ ಬಂದಿದ್ದು, ತೃತೀಯ ಲಿಂಗಿ ವ್ಯಕ್ತಿಗಳ ಕಲ್ಯಾಣದ ಖಾತ್ರಿಯ ನಿಟ್ಟಿನಲ್ಲಿ ಕೈಗೊಂಡ ಪ್ರಥಮ ಸಮಗ್ರ ಕ್ರಮವಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಇನ್ನೂ ಬಲಪಡಿಸಲಾಗುತ್ತದ್ದು, ಸರ್ಕಾರಗಳಿಂದ ತೃತೀಯ ಲಿಂಗಿ ಸಮುದಾಯಕ್ಕೆ ಯೋಜಿಸುವ  ವಿವಿಧ ಕಲ್ಯಾಣ ಕ್ರಮಗಳನ್ನು ಕೈಗೊಳ್ಳಲು ಮತ್ತು ಪ್ರಯೋಜನ ಪಡೆಯಲು ಇದು ಸಮುದಾಯಕ್ಕೆ ಒಂದು ಕೇಂದ್ರವಾಗುತ್ತದೆ ಎಂದರು.

ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ಸಂರಕ್ಷಣೆ) ಕಾಯ್ದೆ 2019 ಜನವರಿ 10 ರಂದು ಜಾರಿಗೆ ಬಂದಿತು, ಇದು ತೃತೀಯ ಲಿಂಗಿ ವ್ಯಕ್ತಿಗಳ ಕಲ್ಯಾಣವನ್ನು ಖಾತ್ರಿಪಡಿಸುವ ಮೊದಲ ದೃಡವಾದ ಹೆಜ್ಜೆಯಾಗಿದೆ. ಕಾಯಿದೆಯ ನಿಬಂಧನೆಗಳನ್ನು ಕಾರ್ಯಗತಗೊಳಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2020 ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ಸಂರಕ್ಷಣೆ) ನಿಯಮಗಳನ್ನು ಹೊರಡಿಸಿದೆ, ಇದನ್ನು ಭಾರತದ ಗೆಜೆಟ್‌ ನಲ್ಲಿ ಅಧಿಸೂಚಿಸಲಾಗಿದೆ. ಸಮಗ್ರ ಕಲ್ಯಾಣ ಕ್ರಮಗಳು ತೃತೀಯಲಿಂಗಿ ಸಮುದಾಯವನ್ನು ತಲುಪುತ್ತವೆ ಮತ್ತು ಸಮಾಜದ ಮುಖ್ಯವಾಹಿನಿಗೆ ತರಲು ಸಹಾಯ ಮಾಡುತ್ತದೆ ಎಂಬುದನ್ನು ನಿಯಮಗಳು ಖಚಿತಪಡಿಸುತ್ತವೆ. ಸ್ವಯಂ-ಸೃಷ್ಟಿತ ಲಿಂಗ ಗುರುತಿಸುವಿಕೆಯ ಹಕ್ಕು ಮತ್ತು ತೃತೀಯಲಿಂಗಿ  ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ನೀಡುವ ವಿಧಾನವನ್ನು ನಿಯಮಗಳಲ್ಲಿ ವ್ಯಾಖ್ಯಾನಿಸಲಾಗಿದೆ. ತೃತೀಯಲಿಂಗಿ ವ್ಯಕ್ತಿಗಳು ಯಾವುದೇ ಅನಾನುಕೂಲತೆ ಇಲ್ಲದೆ ತಮ್ಮ ಸ್ವಯಂ-ಸೃಷ್ಟಿತ ಗುರುತಿನ ಚೀಟಿಯನ್ನು ಪಡೆಯಲು ಸಮರ್ಥರಾಗಿರುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಪ್ರಕ್ರಿಯೆಯನ್ನು ಸುಗಮ ಮತ್ತು ತೊಡಕು ಮುಕ್ತಗೊಳಿಸಲಾಗಿದೆ.

ತೃತೀಯ ಲಿಂಗಿಗಳಿಗೆ ಆಶ್ರಯ ಮನೆ ಯೋಜನೆಯಲ್ಲಿ ಆಶ್ರಯ ಸೌಲಭ್ಯ, ಆಹಾರ, ವಸ್ತ್ರಮನರಂಜನಾ ಸೌಲಭ್ಯಗಳು, ಕೌಶಲ್ಯ ಅಭಿವೃದ್ಧಿ ಅವಕಾಶಗಳು, ಯೋಗ, ಧ್ಯಾನ / ಪ್ರಾರ್ಥನೆಗಳು, ದೈಹಿಕ ಸದೃಢತೆ, ಗ್ರಂಥಾಲಯ ಸೌಲಭ್ಯಗಳು, ಕಾನೂನು ಬೆಂಬಲ, ಲಿಂಗ ಪರಿವರ್ತನೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ತಾಂತ್ರಿಕ ಸಲಹೆ, ಸಾಮರ್ಥ್ಯ ವೃದ್ಧಿ ತೃತೀಯಲಿಂಗಿ-ಸ್ನೇಹಿ ಸಂಸ್ಥೆಗಳು, ಉದ್ಯೋಗ ಮತ್ತು ಕೌಶಲ್ಯ-ನಿರ್ಮಾಣ ಬೆಂಬಲ, ಇತ್ಯಾದಿ ಒಳಗೊಂಡಿದೆ. ತೃತೀಯಲಿಂಗಿ ವ್ಯಕ್ತಿಗಳ ಸ್ಥಿತಿ ಸುಧಾರಣೆಗೆ ನೋಡಲ್ ಸಚಿವಾಲಯ ಪ್ರಥಮ ಹೆಜ್ಜೆ ಇಟ್ಟಿದ್ದು, ಪ್ರಯೋಗಿಕವಾಗಿ 13 ಸಿಬಿಓಗಳೊಂದಿಗೆ  13 ಆಶ್ರಯ ಮನೆಗಳನ್ನು ನಿರ್ಮಿಸಲು ಮತ್ತು ತೃತೀಯಲಿಂಗಿ ವ್ಯಕ್ತಿಗಳಿಗೆ ವಿಸ್ತರಿಸಲು 10 ನಗರಗಳನ್ನು ಗುರುತಿಸಿದೆ. ವಡೋದರಾ, ನವದೆಹಲಿ, ಪಾಟ್ನಾ, ಭುವನೇಶ್ವರ, ಜೈಪುರ, ಕೋಲ್ಕತಾ, ಮಣಿಪುರ, ಚೆನ್ನೈ, ರಾಯ್ಪುರ, ಮುಂಬೈ ಮುಂತಾದವು ನಗರಗಳಲ್ಲಿ ಸೇರಿವೆ. ಯೋಜನೆಯು ಸಚಿವಾಲಯದಿಂದ ಗುರುತಿಸಲ್ಪಟ್ಟ ಪ್ರತಿ ಮನೆಗಳಲ್ಲಿ ಕನಿಷ್ಠ 25 ತೃತೀಯಲಿಂಗಿಗಳಿಗೆ ಪುನರ್ವಸತಿ ಕಲ್ಪಿಸುತ್ತದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಇದೇ ರೀತಿಯ ಯೋಜನೆಗಳನ್ನು ದೇಶದ ಇತರ ಭಾಗಗಳಿಗೆ ವಿಸ್ತರಿಸಲಾಗುವುದು.

***(Release ID: 1675968) Visitor Counter : 985