ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ನವೆಂಬರ್ 26ರಂದು ರಿಇನ್ವೆಸ್ಟ್ -2020 ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ


ಕಳೆದ ಆರು ವರ್ಷಗಳಲ್ಲಿ ಭಾರತದಲ್ಲಿ 4.7ಲಕ್ಷ ಕೋಟಿ ಬಂಡವಾಳ ಹೂಡಿಕೆ; ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಗೆ ಭಾರತ ಅತ್ಯಂತ ಪ್ರಶಸ್ತ ತಾಣ: ಕೇಂದ್ರ ಸಚಿವ ಶ್ರೀ ಆರ್ .ಕೆ. ಸಿಂಗ್

Posted On: 19 NOV 2020 4:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ನವೆಂಬರ್ 26ರಂದು 3ನೇ ಜಾಗತಿಕ ವರ್ಚುವಲ್ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ ಮತ್ತು ಪ್ರದರ್ಶನ- ರಿ-ಇನ್ವೆಸ್ಟ್ 2020 ಅನ್ನು ಉದ್ಘಾಟಿಸಲಿದ್ದಾರೆ. ಬ್ರಿಟನ್ನಿನ ವ್ಯವಹಾರ, ಇಂಧನ ಮತ್ತು ಕೈಗಾರಿಕಾ ಕಾರ್ಯತಂತ್ರ ಕಾರ್ಯದರ್ಶಿ ಮತ್ತು ಸಿಒಪಿ-26 ಅಧ್ಯಕ್ಷರು ಮತ್ತು ಡೆನ್ಮಾರ್ಕ್ ಇಂಧನ, ಬಳಕೆ ಮತ್ತು ಹವಾಮಾನ ವೈಪರೀತ್ಯ ಸಚಿವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು ಮತ್ತು ಮಾತನಾಡುವರು.

ಕೇಂದ್ರ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರು ವಿಷಯ ತಿಳಿಸಿ, 2015 ಹಾಗೂ 2018ರಲ್ಲಿ ನಡೆದ ಮೊದಲೆರಡು ರಿಇನ್ವೆಸ್ಟ್  ಆವೃತ್ತಿಗಳ ಯಶಸ್ಸು ಆಧರಿಸಿ ಮೂರನೇ ಆವೃತ್ತಿಯನ್ನು ರೂಪಿಸಲಾಗಿದೆ ಮತ್ತು ಇದು ನವೀಕರಿಸಬಹುದಾದ ಇಂಧನ ವಲಯದಲ್ಲಿ ಬಂಡವಾಳ ಹೂಡಿಕೆ ಉತ್ತೇಜನಕ್ಕೆ ಅಂತಾರಾಷ್ಟ್ರೀಯ ವೇದಿಕೆಯನ್ನು ಒದಗಿಸಲಿದೆ ಎಂದರು. ಅಲ್ಲದೆ ಇದು ನವೀಕರಿಸಬಹುದಾದ ಇಂಧನ ವಲಯದ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಜಾಗತಿಕ ನವೀಕರಿಸಬಹುದಾದ ಇಂಧನ ಸಮುದಾಯಕ್ಕೆ ಸಂದೇಶವನ್ನು ನೀಡಲಿದ್ದು, ಸುಸ್ಥಿರ ರೀತಿಯಲ್ಲಿ ಕೈಗೊಂಡಿರುವ ಕ್ರಮಗಳನ್ನು ತಿಳಿಸಲಿದೆ.

ರಿ-ಇನ್ವೆಸ್ಟ್ 2020ಯಲ್ಲಿ ಎರಡು ದಿನ ವರ್ಚುವಲ್ ಸಮಾವೇಶ ನಡೆಯಲಿದ್ದು, ಅಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಭವಿಷ್ಯದ ಇಂಧನ ಆಯ್ಕೆಗಳು ಹಾಗೂ ಶುದ್ಧ ಇಂಧನ ವಲಯದ ಉತ್ಪಾದಕರು, ಅಭಿವೃದ್ಧಿದಾರರು, ಹೂಡಿಕೆದಾರರು ಮತ್ತು ಆವಿಷ್ಕಾರಿಗಳ ಪ್ರದರ್ಶನಗಳಿರಲಿವೆ. ಕಾರ್ಯಕ್ರಮ ಹಲವು ದೇಶಗಳು, ರಾಜ್ಯಗಳು, ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಕಾರ್ಯತಂತ್ರ ಸಾಧನೆ ಮತ್ತು ಅಪೇಕ್ಷೆಗಳನ್ನು ಪ್ರದರ್ಶಿಸಲು ಉತ್ತಮ ಅವಕಾಶವಾಗಿದೆ. ಭಾರತ ವಿಶ್ವದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಮಾರುಕಟ್ಟೆಯಾಗಿ ರೂಪುಗೊಂಡಿರುವ ಹಿನ್ನೆಲೆಯಲ್ಲಿ ಅದು ಪ್ರಮುಖ ಪಾಲುದಾರರ ಜೊತೆ ಸಹಭಾಗಿತ್ವ ಮತ್ತು ಸಹಕಾರಕ್ಕೆ ಉತ್ತೇಜನ ನೀಡಲಿದೆ. ಜಗತ್ತಿನಾದ್ಯಂತ ಸಚಿವರ ಮಟ್ಟದ ನಿಯೋಗಗಳು, ಜಾಗತಿಕ ಉದ್ಯಮದ ನಾಯಕರು ಮತ್ತು ಬಹುಸಂಖ್ಯೆಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ವೇಳೆ 20 ದೇಶೀಯ ಗೋಷ್ಠಿಗಳು, 20 ತಾಂತ್ರಿಕ ಗೋಷ್ಠಿಗಳು, ಮುಖ್ಯಮಂತ್ರಿಗಳ ವಿಶೇಷ ಪ್ಲಿನರಿ ಸೆಷನ್ ನಡೆಯಲಿವೆ. 80 ಅಂತಾರಾಷ್ಟ್ರೀಯ ಭಾಷಣಕಾರರು ಸೇರಿದಂತೆ ಸುಮಾರು 200 ಸಂಪನ್ಮೂಲ ವ್ಯಕ್ತಿಗಳು, ನಾನಾ ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ. ರಿ-ಇನ್ವೆಸ್ಟ್ ನಲ್ಲಿ ಸುಮಾರು 100 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ.

ಕಳೆದ ಆರು ವರ್ಷಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಎರಡೂವರೆ ಪಟ್ಟು ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು. ಸೌರಶಕ್ತಿ ಸಾಮರ್ಥ್ಯ 13 ಪಟ್ಟು ಹೆಚ್ಚಾಗಿದೆ. ಅಲ್ಲದೆ ಬರಿದಾಗುವ ಇಂಧನ ಸಂಪನ್ಮೂಲದ ಪ್ರಮಾಣಕ್ಕಿಂತ ನಮ್ಮ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 136 ಗಿಗಾವ್ಯಾಟ್ ಗೆ ಅಥವಾ ಒಟ್ಟು ಸಾಮರ್ಥ್ಯದ ಶೇ.36ರಷ್ಟು ಹೆಚ್ಚಳವಾಗಿದೆ. 2022 ವೇಳೆಗೆ ಸಾಮರ್ಥ್ಯ ಸುಮಾರು 220 ಗಿಗಾವ್ಯಾಟ್ ಗೆ ಹೆಚ್ಚಾಗುವ ನಿರೀಕ್ಷೆ ಇದೆ. ಕೋವಿಡ್ ನಿಂದಾಗಿ ಸಾಕಷ್ಟು ತೊಂದರೆಯಾಗಿದೆ ಎಂದು ಉಲ್ಲೇಖಿಸಿದ ಅವರು, ನವೀಕರಿಸಬಹುದಾದ ಇಂಧನ ವಲಯ ಗಮನಾರ್ಹ ರೀತಿಯಲ್ಲಿ ಪುಟಿದೆದ್ದಿದೆ. ನವೀಕರಿಸಬಹುದಾದ ಇಂಧನ ಯೋಜನೆಗಳು ಲಾಕ್ ಡೌನ್ ನಂತರ ಕಳೆದ ವರ್ಷಕ್ಕಿಂತ ಅತ್ಯಂತ ವೇಗ ಪಡೆದುಕೊಂಡಿವೆ ಎಂದು ಅವರು ಹೇಳಿದರು. ಕಳೆದ ಆರು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 4.7 ಲಕ್ಷ ಕೋಟಿ ರೂ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆ ಆಗಿದೆ ಮತ್ತು ಭಾರತ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಗೆ ಪ್ರಶಸ್ತ ತಾಣವಾಗಿದೆ. 2030 ವೇಳೆಗೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ. ಹೂಡಿಕೆ ಮಾಡುವಷ್ಟು ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಭಾರತ ಹೊಂದಿದೆ. ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಅತ್ಯಂತ ಸರಳ ವಿದೇಶಿ ಹೂಡಿಕೆ ನೀತಿಯನ್ನು ಹೊಂದಿದೆ. ವಿದೇಶಿ ಹೂಡಿಕೆದಾರರಿಗೆ ತಾವಾಗಿಯೇ ಅಥವಾ ಭಾರತೀಯ ಪಾಲುದಾರರ ಜೊತೆ ಜಂಟಿಯಾಗಿ ಹೂಡಿಕೆ ಮಾಡಿ, ಭಾರತದಲ್ಲಿ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲು ಅವಕಾಶವಿದೆ.

ಸೌರ ಪಿವಿ ಸೆಲ್ ಮತ್ತು ಮಾದರಿಗಳ ಉತ್ಪಾದನೆಗೆ ದೇಶದಲ್ಲಿ ಪೂರಕ ವ್ಯವಸ್ಥೆ ಸೃಷ್ಟಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ಶ್ರೀ ಸಿಂಗ್ ತಿಳಿಸಿದರು. ಸರ್ಕಾರದ ಯೋಜನೆಗಳಿಂದಲೇ ದೇಶೀಯ ಬೇಡಿಕೆ ಸೃಷ್ಟಿಯಾಗಿದೆ ಮತ್ತು ದೇಶೀಯವಾಗಿ ಉತ್ಪಾದನೆಯಾದ ಸೌರ ಪಿವಿ ಸೆಲ್ ಮತ್ತು ಮಾರುಕಟ್ಟೆಯಲ್ಲಿ 40 ಗಿಗಾವ್ಯಾಟ್ ಸಾಮರ್ಥ್ಯ  ಮಾದರಿಗಳಿಗೆ ಬೇಡಿಕೆ ಖಾತ್ರಿ ಇದೆ ಎಂದರು. ಸೌರ ಫಲಕಗಳನ್ನು ಉತ್ಪಾದಿಸಲು ಇತ್ತೀಚೆಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಪ್ರಕಟಿಸಿರುವುದರಿಂದ ಇದು ದೇಶೀಯ ಉತ್ಪಾದನೆಗೆ ಭಾರೀ ಪ್ರಮಾಣದ ಉತ್ತೇಜನ ನೀಡಲಿದೆ ಎಂದು ಅವರು ಹೇಳಿದರು.  

ಕೃಷಿ ವಲಯದಲ್ಲಿ ನವೀಕರಿಸಬಹುದಾದ ಇಂಧನ ಪಾತ್ರದ ಕುರಿತು ಉಲ್ಲೇಖಿಸಿದ ಸಚಿವರು, ಪಿಎಂ-ಕುಸುಮ್ ಯೋಜನೆ ಅಡಿ, 20 ಲಕ್ಷ ಡೀಸಲ್ ಪಂಪ್ ಗಳನ್ನು ಸೌರಶಕ್ತಿ ಆಧಾರಿತ ಪಂಪ್ ಗಳನ್ನಾಗಿ ಪರಿವರ್ತಿಸಲು 15 ಲಕ್ಷ ಗ್ರಿಡ್ ಸಂಪರ್ಕಿತ ಸೌರ ಪಂಪ್ ಗಳನ್ನು ಅಳವಡಿಸಲು ಮತ್ತು 15 ಗಿಗಾವ್ಯಾಟ್ ಸಾಮರ್ಥ್ಯದ ವಿಕೇಂದ್ರೀಕೃತ ಸೌರ ವಿದ್ಯುತ್ ಘಟಕಗಳನ್ನು ರೈತರ ಉಪಯೋಗಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ಅಳವಡಿಸುವ ಗುರಿ ಹೊಂದಲಾಗಿದೆ ಎಂದರು. ಅಲ್ಲದೆ ಯೋಜನೆ ಅಡಿ ಕೃಷಿ ಫೀಡರ್ ಗಳಿಗೆ ಸೌರಶಕ್ತಿ ಸೇರ್ಪಡೆ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರಾಜ್ಯಗಳ ಮೇಲಿನ ಸಬ್ಸಿಡಿ ಹೊರೆ ಇಳಿಕೆಯಾಗಲಿದೆ ಎಂದರು.

ದೇಶದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ವಹಿವಾಟಿಗೆ ಸುಗಮ ವಾತಾವರಣ ನಿರ್ಮಿಸಲು ಮತ್ತು ಎದುರಾಗುವ ಯಾವುದೇ ಸವಾಲುಗಳನ್ನು ಹತ್ತಿಕ್ಕಲು ಸರ್ಕಾರ ಹಲವು ಪೂರಕ ನೀತಿ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಹೇಳಿದರು. ರಿ-ಇನ್ವೆಸ್ಟ್ ಮೂಲಕ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಇನ್ನಷ್ಟು ತ್ವರಿತವಾಗಿ ಅನುಷ್ಠಾನಗೊಳಿಸಬಹುದಾಗಿದೆ ಮತ್ತು ಉದ್ಯಮ, ಹೂಡಿಕೆದಾರರ ಹಾಗೂ ಪಾಲುದಾರರ ನಡುವೆ ಸಮನ್ವಯ ಸಾಧಿಸಿ, ಭಾರತದ ನವೀಕರಿಸಬಹುದಾದ ಇಂಧನ ವಲಯದ ಪ್ರಗತಿಗಾಥೆಯನ್ನು ಮುಂದುವರಿಸಲಾಗುವುದು ಎಂದರು.

ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ ನೋಡಿ

Website: https://re-invest.in/

 ***



(Release ID: 1674206) Visitor Counter : 270