ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಖಾದಿ ಉತ್ಪನ್ನಗಳ ದಾಖಲೆ ಮಾರಾಟ: 40 ದಿನಗಳಲ್ಲಿ ನಾಲ್ಕು ಬಾರಿ ದೆಹಲಿಯಲ್ಲಿ 1ಕೋಟಿ ರೂಪಾಯಿ ಅಧಿಕ ಮೌಲ್ಯದ ಖಾದಿ ಉತ್ಪನ್ನಗಳ ಮಾರಾಟ

Posted On: 16 NOV 2020 3:43PM by PIB Bengaluru

ಆರ್ಥಿಕ ಸಂಕಷ್ಟಗಳಿಂದ ಹೊರಬಂದು, ಕೊರೊನಾ ಸಾಂಕ್ರಾಮಿಕದ ನಡುವೆಯೂ ಪ್ರಸಕ್ತ ಹಬ್ಬದ ಋತುಮಾನದಲ್ಲಿ ಖಾದಿ ಉತ್ಪನ್ನಗಳು ದಾಖಲೆಯ ಮಾರಾಟವಾಗಿ ಕರಕುಶಲಕರ್ಮಿಗಳಿಗೆ ಉತ್ತಮ ಲಾಭಾಂಶ ದೊರೆತಿದೆ.  ನವದೆಹಲಿಯ ಕನಾಟ್ ಪ್ಲೇಸ್ ನ ಖಾದಿ ಇಂಡಿಯಾ ಮಳಿಗೆಯಲ್ಲಿ ಈ ವರ್ಷದ ಅಕ್ಟೋಬರ್ 2ರಿಂದೀಚೆಗೆ ಕೇವಲ 40 ದಿನಗಳಲ್ಲಿ ಖಾದಿ ಉತ್ಪನ್ನಗಳ ಮಾರಾಟದ ಪ್ರಮಾಣ ನಾಲ್ಕು ದಿನದಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕವಾಗಿದೆ.

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ‘ಸ್ವದೇಶಿ’ ಉತ್ಪನ್ನಗಳು ವಿಶೇಷವಾಗಿ ಖಾದಿ ಬಳಕೆಗೆ ಒತ್ತು ನೀಡಬೇಕು ಎಂದು ಪದೇ ಪದೇ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಬೃಹತ್ ಪ್ರಮಾಣದಲ್ಲಿ ಖಾದಿ ಉತ್ಪನ್ನಗಳು ಮಾರಾಟವಾಗಿವೆ” ಎಂದು ಕೆವಿಐಸಿ ಅಧ್ಯಕ್ಷ ಶ್ರೀ ವಿನಯ್ ಕುಮಾರ್ ಸಕ್ಸೇನಾ ಹೇಳಿದ್ದಾರೆ.  “ಹೆಚ್ಚಿನ ಸಂಖ್ಯೆಯ ಖಾದಿ ಪ್ರಿಯರು ಖಾದಿ ಮತ್ತು ಗ್ರಾಮೋದ್ಯೋಗ ವಲಯದ ಬೆನ್ನೆಲುಬಾದ ಕರಕುಶಲಕರ್ಮಿಗಳ ನೆರವಿಗೆ ಧಾವಿಸುತ್ತಿರುವುದು ಅತ್ಯುತ್ತಮ ಬೆಳವಣಿಗೆಯಾಗಿದೆ. ಸಾಂಕ್ರಾಮಿಕದ ನಡುವೆಯೂ ಖಾದಿ ಕರಕುಶಲಕರ್ಮಿಗಳು ಪೂರ್ಣ ಉತ್ಸಾಹದಿಂದ ಉತ್ಪಾದನಾ ಚಟುವಟಿಕೆಗಳನ್ನು ಮುಂದುವರಿಸಿದರು ಮತ್ತು ಆ ಉತ್ಪನ್ನಗಳನ್ನು ಎಲ್ಲಾ ದೇಶವಾಸಿಗಳು ಅದೇ ಉತ್ಸಾಹದಿಂದ ಸ್ವೀಕರಿಸಿದ್ದಾರೆ” ಎಂದು ಸಕ್ಸೇನಾ ಹೇಳಿದರು. ಆರ್ಥಿಕ ಹಿಂಜರಿತದ ನಡುವೆಯೂ ಕೆವಿಐಸಿ ಖಾದಿ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳುತ್ತಿದೆ ಎಂದು ಅವರು ಹೇಳಿದರು. 

ಈ ವರ್ಷ ಖಾದಿ ಉತ್ಪನ್ನಗಳ ಭರ್ಜರಿ ಮಾರಾಟ ಅತ್ಯಂತ ಮಹತ್ವ ಪಡೆದುಕೊಂಡಿದೆ. ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಬಹುತೇಕ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆದರೆ ಕೆವಿಐಸಿ ಮಾತ್ರ ದೇಶಾದ್ಯಂತ ತನ್ನೆಲ್ಲಾ ನಾನಾ ಬಗೆಯ ಉತ್ಪಾದನಾ ಚಟುವಟಿಕೆಗಳನ್ನು ಮುಂದುವರೆಸಿತು. ಅದರಲ್ಲಿ ಮುಖಗವಸುಗಳ ಉತ್ಪಾದನೆ, ವೈಯಕ್ತಿಕ ಶುಚಿತ್ವ ಸಾಧನಗಳಾದ ಹ್ಯಾಂಡ್ ವಾಶ್, ಹ್ಯಾಂಡ್ ಸ್ಯಾನಿಟೈಸರ್ ಮಾತ್ರವಲ್ಲದೆ, ವಿಭಿನ್ನ ಬಗೆಯ ಜವಳಿ ಮತ್ತು ಗ್ರಾಮೀಣ ಉದ್ಯಮದ ಉತ್ಪನ್ನಗಳ ಉತ್ಪಾದನೆಯೂ ಸಾಗಿತ್ತು. 

ಲಾಕ್ ಡೌನ್ ವೇಳೆ ಖಾದಿ ಕರಕುಶಲಕರ್ಮಿಗಳ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಆದರೆ ಪ್ರಧಾನಮಂತ್ರಿ ಅವರು ಆತ್ಮನಿರ್ಭರ ಭಾರತ ಮನವಿ ಮತ್ತು ‘ವೋಕಲ್ ಫಾರ್ ಲೋಕಲ್’- ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ ಎಂದು ಕರೆ ನೀಡಿದ್ದು, ಸ್ಥಳೀಯ ಉತ್ಪನ್ನಗಳಿಗೆ ವಿಶೇಷವಾಗಿ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ವಲಯಕ್ಕೆ ಹೊಸ ಜೀವ ತುಂಬಿದೆ. 

***


(Release ID: 1673345) Visitor Counter : 200