ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಹಾಜಿರಾದ ರೊ-ಪಾಕ್ಸ್ ಟರ್ಮಿನಲ್ ಉದ್ಘಾಟನೆ; ಘೋಘಾ ಮತ್ತು ಹಾಜಿರಾ ನಡುವೆ ರೊ-ಪಾಕ್ಸ್ ಹಡಗು ಸೇವೆಗಳಿಗೆ ಹಸಿರು ನಿಶಾನೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ



ನೌಕಾ ಸಚಿವಾಲಯಕ್ಕೆ ಬಂದರು, ನೌಕಾ ಮತ್ತು ಜಲಮಾರ್ಗಗಳ ಸಚಿವಾಲಯವೆಂದು ಮರುನಾಮಕರಣ

ಕಳೆದ ಎರಡು ದಶಕಗಳಲ್ಲಿ ಗುಜರಾತ್ ನಲ್ಲಿ  ಸಮುದ್ರ ವ್ಯಾಪಾರ ಗಮನಾರ್ಹ ಹೆಚ್ಚಳ; ಪ್ರಧಾನಮಂತ್ರಿ


ಘೋಘಾ-ದಹೇಜ್ ನಡುವೆ ಸದ್ಯದಲ್ಲೇ ಹಡಗು ಸೇವೆ ಪುನಾರಂಭಕ್ಕೆ ಸರ್ಕಾರ ಕ್ರಮ: ಪ್ರಧಾನಿ ನರೇಂದ್ರ ಮೋದಿ

Posted On: 08 NOV 2020 2:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುಜರಾತ್ ನ ಹಾಜಿರಾದಲ್ಲಿ ರೊ-ಪಾಕ್ಸ್ ಟರ್ಮಿನಲ್ ಉದ್ಘಾಟಿಸಿದರು ಮತ್ತು ಹಾಜಿರಾ ಹಾಗೂ ಘೋಘಾ ನಡುವೆ ಹಡಗು ಸೇವೆಗಳಿಗೆ ಚಾಲನೆ ನೀಡಿದರು. ಅವರು ಸ್ಥಳೀಯ ಬಳಕೆದಾರರೊಂದಿಗೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ಅವರು ನೌಕಾ ಸಚಿವಾಲಯವನ್ನು ಬಂದರು, ನೌಕಾ ಮತ್ತು ಜಲಮಾರ್ಗಗಳ ಸಚಿವಾಲಯ ಎಂದು ಮರು ನಾಮಕರಣ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಗುಜರಾತ್ ನ ಜನತೆಗೆ ದೀಪಾವಳಿಯ ಉಡುಗೊರೆ ಸಿಕ್ಕಿದೆ. ಈ ಉತ್ತಮ ಸಂಪರ್ಕ ಕಲ್ಪಿಸುವ ಯೋಜನೆಯಿಂದಾಗಿ ಪ್ರತಿಯೊಬ್ಬರಿಗೂ ಉಡುಗೊರೆ ದೊರೆತಂತಾಗಿದೆ ಹಾಗೂ ಇದರಿಂದ ವ್ಯಾಪಾರ ವೃದ್ಧಿಯಾಗುವುದಲ್ಲದೆ, ಸಂಪರ್ಕ ಇನ್ನಷ್ಟು ತ್ವರಿತವಾಗಲಿದೆ ಎಂದು ಹೇಳಿದರು. ಹಾಜಿರಾ ಮತ್ತು ಘೋಘಾ ನಡುವಿನ ರೊ-ಪಾಕ್ಸ್ ಸೇವೆಯಿಂದಾಗಿ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನ ಜನರ ಕನಸು ನನಸಾಗಿದೆ. ಈ ಮಾರ್ಗದಲ್ಲಿ ಪ್ರಯಾಣದ ಅವಧಿ ಮೊದಲು ಹತ್ತರಿಂದ ಹನ್ನೆರಡು ಗಂಟೆ ಇತ್ತು, ಇದೀಗ ಆ ಅವಧಿ  ಮೂರರಿಂದ ನಾಲ್ಕು ಗಂಟೆಗೆ ಇಳಿಕೆಯಾಗಿದೆ. ಇದರಿಂದ ಹಣ ಹಾಗೂ ವೆಚ್ಚವೂ ಕೂಡ ಉಳಿತಾಯವಾಗಲಿದೆ. ಈ ಹೊಸ ಸೇವೆಯಿಂದ ಪ್ರತಿ ವರ್ಷ ಸುಮಾರು 80,000 ಪ್ರಯಾಣಿಕರ ರೈಲುಗಳು ಮತ್ತು 30,000 ಟ್ರಕ್ ಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.  

ಸೌರಾಷ್ಟ್ರ ಮತ್ತು ಸೂರತ್ ನಡುವೆ ಉತ್ತಮ ಸಂಪರ್ಕ ಲಭ್ಯವಾಗುವುದರಿಂದ ಆ ಭಾಗದಲ್ಲಿ ಜನರ ಜೀವನ ಬದಲಾಗಲಿದೆ. ಇನ್ನು ಹಾಲು, ಹಣ್ಣು ಮತ್ತು ತರಕಾರಿಯನ್ನು ಸುಲಭವಾಗಿ ಸಾಗಿಸಬಹುದಾಗಿದೆ ಮತ್ತು ಈ ಸೇವೆಯಿಂದಾಗಿ ಮಾಲಿನ್ಯ ಪ್ರಮಾಣ ತಗ್ಗಲಿದೆ ಎಂದರು. ಹಲವು ಸವಾಲುಗಳ ನಡುವೆಯೂ ಈ ಸೌಕರ್ಯವನ್ನು ಅಭಿವೃದ್ಧಿಪಡಿಸಿರುವ ಇಂಜಿನಿಯರ್ ಗಳು, ಕಾರ್ಮಿಕರು ಮತ್ತು ಸಿಬ್ಬಂದಿಗೆ ಪ್ರಧಾನಮಂತ್ರಿ ಅವರು ಧನ್ಯವಾದವನ್ನು ಹೇಳಿದರು. ಭವನಗರ ಮತ್ತು ಸೂರತ್ ನಡುವೆ ಈ ಕಡಲ ಸಂಪರ್ಕ ಸ್ಥಾಪನೆಯಾಗಿರುವುದಕ್ಕೆ ಅವರು ಜನರನ್ನೂ ಸಹ ಅಭಿನಂದಿಸಿದರು. 

ಪ್ರಧಾನಮಂತ್ರಿ ಅವರು, ಕಳೆದ ಎರಡು ದಶಕಗಳಲ್ಲಿ  ಕಡಲ ಮಾರ್ಗದ ಸಾಮರ್ಥ್ಯವನ್ನು ಗುಜರಾತ್ ಸಂಪೂರ್ಣವಾಗಿ ಬಳಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಅವರು, ಬಂದರು ಆಧಾರಿತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು ಮತ್ತು ಇದು ಪ್ರತಿಯೊಬ್ಬ ಗುಜರಾತ್ ಪ್ರಜೆಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಹಡಗು ನಿರ್ಮಾಣ ನೀತಿ, ಹಡಗು ತಯಾರಿಕೆ ಪಾರ್ಕ್ ನಿರ್ಮಾಣ ಮತ್ತು ವಿಶೇಷ ಟರ್ಮಿನಲ್, ನೌಕಾ ಸಂಚಾರ ನಿರ್ವಹಣಾ ವ್ಯವಸ್ಥೆ ಮತ್ತು ಇತರ ಸಂಪರ್ಕ ಯೋಜನೆಗಳು ಸೇರಿದಂತೆ ಸಾಗರ ಮಾರ್ಗದ ಬಳಕೆಗೆ ರಾಜ್ಯ ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಎಲ್ಲಾ ಉಪಕ್ರಮಗಳ ಕಾರಣದಿಂದಾಗಿ ಬಂದರು ವಲಯಕ್ಕೆ ಹೊಸ ಆಯಾಮ ದೊರಕಿದೆ ಎಂದು ಪ್ರಧಾನಿ ಹೇಳಿದರು. ಹಾಲಿ ಇರುವ ಭೌತಿಕ ಮೂಲಸೌಕರ್ಯ ವೃದ್ಧಿಸುವ ಜೊತೆಗೆ ಇಡೀ ಕರಾವಳಿ ಪ್ರದೇಶದಲ್ಲಿ ಆಧುನಿಕ ಜೈವಿಕ ಪರಿಸರವನ್ನು ಅಭಿವೃದ್ಧಿಗೊಳಿಸಲು ಹೆಚ್ಚಿನ ಪ್ರಯತ್ನಗಳನ್ನು ನಡೆಸಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು. 

ಗುಜರಾತ್ ಸರ್ಕಾರ ಇಂದು ಕಡಲ ಪ್ರದೇಶದಲ್ಲಿ ಎಲ್ಲ ಬಗೆಯ ಮೂಲಸೌಕರ್ಯ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಕ್ರಮಗಳಿಂದಾಗಿ ಅದು ಸಮೃದ್ಧಿಯ ಹೆಬ್ಬಾಗಿಲಾಗಿ ಪರಿವರ್ತನೆಗೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ಎರಡು ದಶಕಗಳಿಂದೀಚೆಗೆ ಗುಜರಾತ್ ನಲ್ಲಿ ಸಾಂಪ್ರದಾಯಿಕ ಬಂದರು ಅಭಿವೃದ್ಧಿ ಕಾರ್ಯಾಚರಣೆಗಳನ್ನು ವಿಶಿಷ್ಟ ಬಗೆಯಲ್ಲಿ ಸಮಗ್ರ ರೀತಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಮತ್ತು ಆ ನಿಟ್ಟಿನಲ್ಲಿ ಹಲವು ಮಾನದಂಡಗಳನ್ನು ಅಭಿವೃದ್ಧಿಪಡಿಸಿದೆ ಎಂದರು. ಈ ಎಲ್ಲ ಪ್ರಯತ್ನಗಳ ಫಲವಾಗಿ ಗುಜರಾತ್ ನ ಬಂದರುಗಳು ದೇಶದ ಪ್ರಮುಖ ಕಡಲ ಕೇಂದ್ರಗಳಾಗಿ ರೂಪುಗೊಂಡಿವೆ ಎಂದು ಅವರು ಹೇಳಿದರು. ಕಳೆದ ವರ್ಷ ದೇಶದ ಒಟ್ಟು ಕಡಲ ಮಾರ್ಗದ ವ್ಯಾಪಾರದಲ್ಲಿ ಶೇ.40ಕ್ಕೂ ಅಧಿಕ ಗುಜರಾತ್ ಕರಾವಳಿಯಲ್ಲಿ ನಡೆದಿದೆ.  

ಕಡಲ ಮಾರ್ಗದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮೂಲಸೌಕರ್ಯ ಮತ್ತು ಸಾಮರ್ಥ್ಯವೃದ್ಧಿ ಕಾರ್ಯಗಳು ಗುಜರಾತ್ ನಲ್ಲಿ ಇಂದು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿವೆ ಎಂದು ಪ್ರಧಾನಿ ಅವರು ಹೇಳಿದರು. ಗುಜರಾತ್ ಕಡಲ ಕ್ಲಸ್ಟರ್, ಗುಜಾರಾತ್ ಸಾಗರ ವಿಶ್ವವಿದ್ಯಾಲಯ ಮತ್ತು ಭವನಗರದಲ್ಲಿ ದೇಶದ ಮೊದಲ ಸಿ ಎನ್ ಜಿ ಟರ್ಮಿನಲ್ ಸೇರಿ, ಗುಜರಾತ್ ನಲ್ಲಿ ಹಲವು ಸೌಕರ್ಯಗಳು ಸಿದ್ಧವಾಗುತ್ತಿವೆ ಎಂದು ಹೇಳಿದರು. ಗುಜರಾತ್ ಮ್ಯಾರಿಟೈಮ್ ಕ್ಲಸ್ಟರ್ ನಲ್ಲಿ ಗಿಫ್ಟ್ ಸಿಟಿಯಲ್ಲಿ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅದರಡಿ ನಿರ್ದಿಷ್ಟ ವ್ಯವಸ್ಥೆಯಲ್ಲಿ ಬಂದರುಗಳಿಂದ ಸಾಗರ ಮಾರ್ಗದಲ್ಲಿ ಸಾಗಾಣೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕ್ಲಸ್ಟರ್ ಗಳಿಂದಾಗಿ ಸರ್ಕಾರ, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಸಹಕಾರ ಸಂಬಂಧ ಬಲವರ್ಧನೆಗೆ ಸಹಕಾರಿಯಾಗಲಿದೆ ಮತ್ತು ಈ ವಲಯದ ಮೌಲ್ಯವೃದ್ಧಿಗೂ ನೆರವಾಗಲಿದೆ.  

ಭಾರತದ ಮೊದಲ ರಾಸಾಯನಿಕ ಟರ್ಮಿನಲ್ ಅನ್ನು ದಹೇಜ್ ನಲ್ಲಿ ಇತ್ತೀಚೆಗೆ ಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ಭಾರತದ ಮೊದಲ ಎನ್ ಎನ್ ಜಿ ಟರ್ಮಿನಲ್ ಅನ್ನು ಸ್ಥಾಪಿಸಲಾಗಿದೆ. ಇದೀಗ ಭಾರತದ ಮೊದಲ ಸಿ ಎನ್ ಜಿ ಟರ್ಮಿನಲ್ ಭವನಗರ ಬಂದರಿನಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು. ಅಲ್ಲದೆ ಭವನಗರ ಬಂದರಿನಲ್ಲಿ ರೊ-ರೊ ಸೇವೆಗಳನ್ನು, ಲಿಕ್ವಿಡ್ ಕಾರ್ಬೊ ಟರ್ಮಿನಲ್ ಅನ್ನು ಸಜ್ಜುಗೊಳಿಸಲಾಗಿದೆ. ಈ ಟರ್ಮಿನಲ್ ಗಳ ಜೊತೆಗೆ ಹೆಚ್ಚುವರಿಯಾಗಿ ಭವನಗರ ಬಂದರಿನ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ ಎಂದರು. 

ಘೋಘಾ-ದಹೇಜ್ ನಡುವೆ ಸದ್ಯದಲ್ಲೇ ಹಡಗು ಸೇವೆಗಳನ್ನು ಪುನರಾರಂಭಿಸುವ ಪ್ರಯತ್ನಗಳನ್ನು ಸರ್ಕಾರ ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಯೋಜನೆಯಲ್ಲಿ ಹಲವು ಪ್ರಾಕೃತಿಕ ಸವಾಲುಗಳು ಎದುರಾಗಿದ್ದವು ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಅವುಗಳನ್ನು ತೊಡೆದು ಹಾಕಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಗುಜರಾತ್ ಮ್ಯಾರಿಟೈಮ್ ವಿಶ್ವವಿದ್ಯಾಲಯ ತರಬೇತಿ ಹೊಂದಿದ ಮಾನವ ಸಂಪನ್ಮೂಲ ಮತ್ತು ತಜ್ಞರಿಗೆ ಒಂದು ದೊಡ್ಡ ಕೇಂದ್ರವಾಗಿದ್ದು, ಅದು ಕಡಲ ವ್ಯಾಪಾರಕ್ಕೆ ಸಜ್ಜಾಗಿದೆ. ಇಂದು ಸಾಗರೋತ್ತರ ಕಾನೂನು ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಕಾನೂನುಗಳ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಅವಕಾಶಗಳನ್ನು ಒದಗಿಸುತ್ತಿದೆ ಮತ್ತು ಮ್ಯಾರಿಟೈಮ್ ನಿರ್ವಹಣೆಯಲ್ಲಿ ಕರಾವಳಿ ನಿರ್ವಹಣೆ, ಬಂದರು ಮತ್ತು ಸಾಗಾಣೆ ಕುರಿತಂತೆ ಎಂಬಿಎ, ಸಾಗರೋತ್ತರ ಕಾನೂನು, ಅಂತಾರಾಷ್ಟ್ರೀಯ ಕಾನೂನು ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಶ್ವವಿದ್ಯಾಲಯ ಮಾತ್ರವಲ್ಲದೆ, ದೇಶದ ಕಡಲ ಪರಂಪರೆಯನ್ನು ಸಂರಕ್ಷಿಸಲು ಲೋಥಾಲ್ ನಲ್ಲಿ ಮೊದಲ ರಾಷ್ಟ್ರೀಯ ಮ್ಯೂಸಿಯಂ ಸ್ಥಾಪಿಸುವ ಕಾರ್ಯ ಆರಂಭವಾಗಲಿದೆ ಎಂದರು. 

ಇಂದು ಚಾಲನೆ ನೀಡಿರುವ ರೊ-ಪಾಕ್ಸ್ ಹಡಗು ಸೇವೆ ಅಥವಾ ಇತ್ತೀಚೆಗೆ ಉದ್ಘಾಟಿಸಿದ  ಸಾಗರ ವಿಮಾನಗಳ(ಸಿ ಪ್ಲೇನ್) ಹಾರಾಟದಿಂದಾಗಿ ಜಲಸಂಪನ್ಮೂಲ ಆಧರಿಸಿದ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಿಂದೀಚೆಗೆ ದೇಶದಲ್ಲಿ ನೀಲಿ ಆರ್ಥಿಕತೆಯನ್ನು ಬಲಗೊಳಿಸಲು ಗಂಭೀರ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದರು. ಕಳೆದ ಕೆಲವು ವರ್ಷಗಳಿಂದೀಚೆಗೆ ಮೀನುಗಾರರಿಗೆ ಆರ್ಥಿಕ ನೆರವು ನೀಡುವುದರಿಂದ ಹಿಡಿದು, ಮೀನುಗಾರರಿಗೆ ಆಧುನಿಕ ಟ್ರೋಲರ್ ಗಳನ್ನು ನೀಡುವುದು ಅಥವಾ ನೌಕಾ ವ್ಯವಸ್ಥೆಗಳನ್ನು ಕಲ್ಪಿಸುವುದು, ಹವಾಗುಣ ಮತ್ತು ಸಮುದ್ರ ಮಾರ್ಗಗಳಲ್ಲಿ ಖಚಿತ ಮಾಹಿತಿ ಒದಗಿಸುವುದು ಸೇರಿದಂತೆ ಹಲವು ಪೂರಕ ಕ್ರಮಗಳನ್ನು ಅವರು ವಿವರಿಸಿದರು. ಮೀನುಗಾರರ ಸುರಕ್ಷತೆ ಮತ್ತು ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಭರವಸೆ ನೀಡಿದರು. ಇತ್ತೀಚೆಗೆ ಆರಂಭಿಸಲಾದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿ ಮೀನು ಸಂಬಂಧಿ ವ್ಯಾಪಾರಕ್ಕೆ ಉತ್ತೇಜನ ನೀಡಲಾಗುತ್ತಿದೆ. ಈ ಯೋಜನೆ ಅಡಿ ಮುಂದಿನ ವರ್ಷಗಳಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಮೂಲಸೌಕರ್ಯವೃದ್ಧಿಗೆ 20 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು. 

ದೇಶಾದ್ಯಂತ ಇದೀಗ ಬಂದರುಗಳ ಸಾಮರ್ಥ್ಯವನ್ನು ಹೆಚ್ಚಳ ಮಾಡಲಾಗಿದೆ ಮತ್ತು ಹೊಸ ಬಂದರುಗಳ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ 21,000 ಕಿ.ಮೀ. ಜಲಮಾರ್ಗವನ್ನು ದೇಶದ ಅಭಿವೃದ್ಧಿಗಾಗಿ ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಪ್ರಯತ್ನಗಳು ಸಾಗಿವೆ ಎಂದು ಅವರು ಹೇಳಿದರು. ಸಾಗರಮಾಲಾ ಯೋಜನೆ ಅಡಿ ದೇಶಾದ್ಯಂತ ಸುಮಾರು 500 ಯೋಜನೆಗಳಲ್ಲಿ ಕಾಮಗಾರಿಗಳು ನಡೆದಿವೆ ಎಂದರು. ಜಲಮಾರ್ಗದ ಮೂಲಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ರಸ್ತೆ ಮತ್ತು ರೈಲು ಮಾರ್ಗಕ್ಕೆ ಹೋಲಿಸಿದರೆ ಅತಿ ಕಡಿಮೆ ವೆಚ್ಚದ್ದಾಗಿದೆ ಮತ್ತು ಇದು ಪರಿಸರಕ್ಕೆ ಕಡಿಮೆ ಹಾನಿಯನ್ನು ಉಂಟುಮಾಡುತ್ತದೆ. ಆದರೂ 2014ರ ನಂತರ ಆ ನಿಟ್ಟಿನಲ್ಲಿ ಸಮಗ್ರ ಕಾರ್ಯಗಳು ನಡೆಯುತ್ತಿವೆ. ದೇಶಾದ್ಯಂತ ಒಳನಾಡು ನದಿಗಳಲ್ಲಿ ಆ ಕಾರ್ಯ ಭರದಿಂದ ಸಾಗಿದೆ. ಸಮುದ್ರದಿಂದ ಆವರಿಸಿರುವ ರಾಜ್ಯಗಳು ಮತ್ತು ಭೂಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ನಡೆದಿವೆ. ಇಂದು ಬಂಗಾಳಕೊಲ್ಲಿಯಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ಅನಿರೀಕ್ಷಿತ ರೀತಿಯಲ್ಲಿ ನಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು. ಕಡಲ ವ್ಯಾಪಾರ ದೇಶದ ಅತ್ಯಂತ ಪ್ರಮುಖ ಭಾಗವಾಗಿ ರೂಪುಗೊಳ್ಳುತ್ತಿದ್ದು, ಇದು ಆತ್ಮನಿರ್ಭರ ಭಾರತದ ಅತ್ಯಂತ ಪ್ರಮುಖ ಭಾಗವಾಗಿ ಬೆಳವಣಿಗೆ ಹೊಂದಿದೆ. 

ಪ್ರಧಾನಮಂತ್ರಿ ಅವರು ನೌಕಾ ಸಚಿವಾಲಯವನ್ನು ಬಂದರು, ನೌಕಾ ಮತ್ತು ಜಲಮಾರ್ಗಗಳ ಸಚಿವಾಲಯ ಎಂದು ಮರು ನಾಮಕರಣ ಮಾಡಿದರು, ಬಹುತೇಕ ದೇಶಗಳಲ್ಲಿ ನೌಕಾ ಸಚಿವಾಲಯ ಬಂದರು ಹಾಗೂ ಜಲಮಾರ್ಗಗಳನ್ನು ನಿರ್ವಹಿಸಲಿದೆ ಎಂದು ಹೇಳಿದರು. ಇದೀಗ ಹೆಸರಿನಲ್ಲಿ ಅತ್ಯಂತ ಸ್ಪಷ್ಟತೆ ಇದ್ದು, ಕೆಲಸದಲ್ಲಿ ಇನ್ನೂ ಹೆಚ್ಚು ಸ್ಪಷ್ಟತೆ ದೊರಕಲಿದೆ ಎಂದರು. 

ಆತ್ಮನಿರ್ಭರ ಭಾರತ ಅಭಿಯಾನದಡಿ ನೀಲಿ ಆರ್ಥಿಕತೆಯನ್ನು ಬಲವರ್ಧನೆಗೊಳಿಸಲು ಕಡಲ ಸಾಗಾಣೆ ಜಾಲವನ್ನು ಬಲವರ್ಧನೆಗೊಳಿಸುವ ಅಗತ್ಯವಿದೆ ಎಂದರು. ಇಂದು ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸರಕುಗಳನ್ನು ಸಾಗಾಣೆ ಮಾಡುವುದಕ್ಕೆ ಹೊರದೇಶಗಳಿಗೆ ಸಾಗಾಣೆ ಮಾಡುವುದಕ್ಕಿಂತ ಹೆಚ್ಚಿನ ವೆಚ್ಚವಾಗುತ್ತಿದೆ. ಜಲಸಾರಿಗೆಯಿಂದ ಸಾರಿಗೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಅವರು ಸಲಹೆ ಮಾಡಿದರು. ಆದ್ದರಿಂದ ನಾವು ಯಾವುದೇ ಅಡೆತಡೆ ಇಲ್ಲದೆ ಸರಕು ಸಾಗಾಣೆಗೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಬೇಕಾಗಿದೆ ಎಂದು ಅವರು ಹೇಳಿದರು. ದೇಶದಲ್ಲಿ ಇದೀಗ ಬಹು ಮಾದರಿ (ಮಲ್ಟಿ ಮಾಡಲ್) ಸಂಪರ್ಕ ನಿಟ್ಟಿನಲ್ಲಿ ಹಲವು ಕ್ಷಿಪ್ರ ಕಾರ್ಯಗಳು ನಡೆಯುತ್ತಿವೆ ಎಂದ ಅವರು, ಸಾಗಾಣೆ ವೆಚ್ಚ ಇಳಿಸುವುದು ಮತ್ತು ರಸ್ತೆ, ರೈಲು, ವಾಯು ಮತ್ತು ಹಡಗು ಮೂಲಸೌಕರ್ಯದ ಮೂಲಕ ಸಂಪರ್ಕವೃದ್ಧಿಗೆ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಮತ್ತ ನಿರ್ಲಕ್ಷ್ಯದಿಂದ ಹೊರಬರಲು ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಬಹು ಮಾದರಿಯ ಸಾರಿಗೆ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮಲ್ಟಿಮಾಡಲ್ ಸಂಪರ್ಕವನ್ನು ನೆರೆಯ ರಾಷ್ಟ್ರಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಎಲ್ಲ ಪ್ರಯತ್ನಗಳ ಪರಿಣಾಮ ದೇಶದಲ್ಲಿ ಸಾರಿಗೆ ವೆಚ್ಚ ತಗ್ಗಲಿದೆ ಮತ್ತು ನಮ್ಮ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. 

ಅಲ್ಲದೆ ಪ್ರಧಾನಮಂತ್ರಿ ಅವರು, ಈ ಹಬ್ಬದ ಋತುವಿನಲ್ಲಿ ‘ವೋಕಲ್ ಫಾರ್ ಲೋಕಲ್’ (ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ) ಅಡಿಯಲ್ಲಿ ಜನರು ಹೆಚ್ಚಾಗಿ ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸುವಂತೆ ಕರೆ ನೀಡಿದರು. ಸಣ್ಣ ವರ್ತಕರು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಮೀಣ ಕರಕುಶಲಕರ್ಮಿಗಳಿಂದ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಖರೀದಿಸಬೇಕೆಂದು ಅವರು ತಾಕೀತು ಮಾಡಿದರು. ಈ ಪ್ರಯತ್ನಗಳ ಮೂಲಕ ದೀಪಾವಳಿಯ ಸಂದರ್ಭದಲ್ಲಿ ಗ್ರಾಮೀಣ ಕರಕುಶಲಕರ್ಮಿಗಳ ಮನೆಗಳಲ್ಲೂ ಈ ಬೆಳಕು ಮೂಡುವಂತಾಗಲಿ ಎಂದು ಪ್ರಧಾನಮಂತ್ರಿ ಹೇಳಿದರು. 

 

***


(Release ID: 1671254) Visitor Counter : 285