ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಕೋವಿಡ್-19 ಸಾಂಕ್ರಾಮಿಕ ಲಾಕ್ ಡೌನ್ ತೆರವಿನ ನಂತರ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪುನಾರಂಭಕ್ಕೆ ಯುಜಿಸಿ ಮಾರ್ಗಸೂಚಿ ಬಿಡುಗಡೆ
Posted On:
05 NOV 2020 6:33PM by PIB Bengaluru
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪುನಾರಂಭ ಕುರಿತಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪರಿಶೀಲಿಸಿದ್ದು, ಶಿಕ್ಷಣ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಅನುಮೋದಿಸಿದೆ. ಸ್ಥಳೀಯ ಸ್ಥಿತಿಗತಿಗಳನ್ನು ಮತ್ತು ಸರ್ಕಾರಗಳ ನಿರ್ದೇಶನಗಳನ್ನು ಅನುಸರಿಸಿ ಶಿಕ್ಷಣ ಸಂಸ್ಥೆಗಳು ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.
ನಿರ್ಬಂಧಿತ ಪ್ರದೇಶದ ಹೊರಗಿರುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಸಂಬಂಧಿಸಿದ ರಾಜ್ಯ/ಕೇಂದ್ರಾಡಳಿತ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಹಂತ ಹಂತವಾಗಿ ಪುನರಾರಂಭ ಮಾಡಬಹುದು. ಆದರೆ ಆ ವೇಳೆ ಯುಜಿಸಿ ಸಿದ್ಧಪಡಿಸಿರುವ ಆರೋಗ್ಯ ಶಿಷ್ಟಾಚಾರ ಮತ್ತು ಸುರಕ್ಷತೆಗೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾರ್ಗಸೂಚಿಯ ವಿವರಗಳು ಈ ಕೆಳಗಿನಂತಿವೆ:
- ಕೇಂದ್ರದಿಂದ ಆರ್ಥಿಕ ನೆರವು ಪಡೆಯುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಸ್ಥೆಯ ಮುಖ್ಯಸ್ಥರಿಗೆ ಆತ ಅಥವಾ ಆಕೆಗೆ ಭೌತಿಕವಾಗಿ ತರಗತಿಗಳನ್ನು ನಡೆಸುವ ಸಾಧ್ಯತೆಯ ಬಗ್ಗೆ ಮನವರಿಕೆಯಾದರೆ ಅವರು ಅದರಂತೆ ನಿರ್ಧಾರ ಕೈಗೊಳ್ಳಬಹುದು.
- ಇತರೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಅಂದರೆ ರಾಜ್ಯ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತಿತರವುಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ನಿರ್ಧಾರದಂತೆ ಕ್ರಮಗಳನ್ನು ಕೈಗೊಳ್ಳುವುದು.
- ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಮ್ಮ ಕ್ಯಾಂಪಸ್ ಗಳನ್ನು ಹಂತಹಂತವಾಗಿ ಪುನರಾರಂಭ ಮಾಡುವ ಯೋಜನೆಗಳನ್ನು ರೂಪಿಸುವುದು. ಅಂತಹ ಸಂದರ್ಭಗಳಲ್ಲಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಮತ್ತು ಇತರ ರಕ್ಷಣಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಲ್ಲಿ ಆಡಳಿತಾತ್ಮಕ ಕಚೇರಿಗಳು, ಸಂಶೋಧನಾ ಪ್ರಯೋಗಾಲಯಗಳು ಮತ್ತು ಪ್ರಯೋಗಾಲಯಗಳು ಇತ್ಯಾದಿ ಸೇರಿವೆ.
- ಆದ್ದರಿಂದ ಎಲ್ಲ ಸಂಶೋಧನಾ ಕಾರ್ಯಕ್ರಮಗಳ ವಿದ್ಯಾರ್ಥಿಗಳು ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಕಾರ್ಯಕ್ರಮಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಅಂತಹ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕಡಿಮೆ ಪ್ರಮಾಣದಲ್ಲಿ, ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಇತರೆ ಮುನ್ನೆಚ್ಚರಿಕೆ ಕ್ರಮಗಳನ್ನು ಸುಲಭವಾಗಿ ಜಾರಿಗೊಳಿಸಬಹುದು.
- ಅಲ್ಲದೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ನಿರ್ಧಾರಗಳಿಗೆ ಅನುಗುಣವಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಪ್ಲೇಸ್ ಮೆಂಟ್ ಉದ್ದೇಶಗಳಿಗಾಗಿ ಕಾಲೇಜುಗಳಿಗೆ ಮತ್ತೆ ಭೇಟಿ ನೀಡಬಹುದು.
ಆದರೆ ಮೇಲಿನ ಮಾರ್ಗಸೂಚಿ(iii), (iv) ಮತ್ತು (v)ರ ಪಾಲನೆಯಲ್ಲಿ ಯಾವುದೇ ಸಂದರ್ಭದಲ್ಲಿ ಹಾಜರಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.50ರಷ್ಟು ಮೀರದಂತೆ ಎಚ್ಚರ ವಹಿಸಬೇಕು ಮತ್ತು ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಅಗತ್ಯ ಮಾರ್ಗಸೂಚಿ ಮತ್ತು ಶಿಷ್ಟಾಚಾರಗಳನ್ನು ಪಾಲನೆ ಮಾಡಬೇಕು.
- ಪ್ಯಾರಾ (iv) ಮತ್ತು (v)ರಲ್ಲಿ ಉಲ್ಲೇಖಿಸಲಾಗಿರುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಆನ್ ಲೈನ್/ದೂರ ಶಿಕ್ಷಣ ಕಲಿಕೆಗಳನ್ನು ಅಪೇಕ್ಷಿತ ಕಲಿಕಾ ವಿಧಾನವನ್ನಾಗಿ ಮುಂದುವರಿಸಬಹುದು ಮತ್ತು ಅಂತಹವುಗಳಿಗೆ ಉತ್ತೇಜನ ನೀಡಬೇಕು.
- ಅಗತ್ಯಬಿದ್ದರೆ ವಿದ್ಯಾರ್ಥಿಗಳು ತಮ್ಮ ಬೋಧನಾ ಸಿಬ್ಬಂದಿಯ ಜೊತೆ ಸಮಾಲೋಚನೆ ನಡೆಸಿ, ಪೂರ್ವಾನುಮತಿ ಪಡೆದು, ಸಣ್ಣ ಪ್ರಮಾಣದಲ್ಲಿ ಆಯಾ ವಿಭಾಗಕ್ಕೆ ಭೇಟಿ ನೀಡಬಹುದು. ಆ ವೇಳೆ ದಟ್ಟಣೆಯಾಗದಂತೆ ಕ್ರಮ ಕೈಗೊಳ್ಳಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಸುರಕ್ಷಿತ ಶಿಷ್ಟಾಚಾರಗಳನ್ನು ಪಾಲಿಸಬೇಕು.
- ಕೆಲವು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಮನೆಯಲ್ಲಿದ್ದುಕೊಂಡೇ ಆನ್ ಲೈನ್ ಮೂಲಕ ಅಧ್ಯಯನ ಮುಂದುವರಿಸಲು ಆಯ್ಕೆ ಮಾಡಿಕೊಳ್ಳಬಹುದು. ಅಂತಹ ವೇಳೆ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳಿಗೆ ಅಗತ್ಯ ಆನ್ ಲೈನ್ ಅಧ್ಯಯನ ಸಾಮಗ್ರಿಗಳನ್ನು ಒದಗಿಸಬೇಕು ಮತ್ತು ಆ ವಿದ್ಯಾರ್ಥಿಗಳಿಗೆ ಇ-ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡಬೇಕು.
- ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳು ಅಥವಾ ವೀಸಾ ಸಂಬಂಧಿ ಕಾರಣಗಳಿಂದಾಗಿ ಕೋರ್ಸ್ ಗಳಿಗೆ ಬರಲಾಗದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಸಂಸ್ಥೆಗಳು ಪ್ರತ್ಯೇಕ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು. ಅವರಿಗೆ ಆನ್ ಲೈನ್ ಬೋಧನೆ ಮತ್ತು ಕಲಿಕೆಗೆ ಏರ್ಪಾಡುಗಳನ್ನು ಮಾಡಬೇಕು.
- ಸುರಕ್ಷತಾ ಮತ್ತು ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಅಗತ್ಯವಿರುವೆಡೆ ಹಾಸ್ಟೆಲ್ ಗಳನ್ನು ಪುನರಾರಂಭಿಸಬಹುದು. ಆದರೆ ವಿದ್ಯಾರ್ಥಿ ನಿಲಯಗಳಲ್ಲಿ ಕೋಣೆಗಳ ಹಂಚಿಕೆಗೆ ಅವಕಾಶವಿರುವುದಿಲ್ಲ. ಯಾವುದೇ ಸಂದರ್ಭದಲ್ಲೂ ವಿದ್ಯಾರ್ಥಿ ನಿಲಯಗಳಲ್ಲಿ ಸೋಂಕಿರುವ ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ನೀಡಬಾರದು.
- ಯಾವುದೇ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ಆರಂಭಕ್ಕೆ ಮುನ್ನ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಶಿಕ್ಷಣ ಸಂಸ್ಥೆಯ ಆರಂಭಕ್ಕೆ ಆಯಾ ಪ್ರದೇಶ ಸುರಕ್ಷಿತವಾಗಿದೆ ಎಂದು ಘೋಷಿಸಬೇಕು. ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು ಕೋವಿಡ್-19 ಹಿನ್ನೆಲೆಯಲ್ಲಿ ಹೊರಡಿಸಿರುವ ಎಲ್ಲಾ ಸುರಕ್ಷತಾ ಮತ್ತು ಆರೋಗ್ಯ ನಿರ್ದೇಶನಗಳು, ಸೂಚನೆಗಳು, ಮಾರ್ಗಸೂಚಿಗಳು ಮತ್ತು ಆದೇಶಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು.
ಈ ಮಾರ್ಗಸೂಚಿಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್ ಗಳನ್ನು ಪುನರಾರಂಭಿಸುವ ಮುನ್ನ ಪಾಲಿಸಬೇಕಾಗಿರುವ ನಿಯಮಗಳನ್ನು ವಿವರವಾಗಿ ನೀಡಲಾಗಿದೆ. ಇದರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರವೇಶ/ನಿರ್ಗಮನ ದ್ವಾರಗಳು, ತರಗತಿ ಕೊಠಡಿಗಳು ಮತ್ತು ಬೋಧನಾ ಸ್ಥಳಗಳು, ಕ್ಯಾಂಪಸ್ ಆವರಣ ಮತ್ತು ಹಾಸ್ಟೆಲ್ ಗಳಲ್ಲಿ ಕೈಗೊಳ್ಳಬೇಕಾಗಿರುವ ಸುರಕ್ಷತಾ ಕ್ರಮಗಳನ್ನು ವಿವರಿಸಿದೆ. ಆಪ್ತ ಸಮಾಲೋಚನೆ ಮತ್ತು ಮಾನಸಿಕ ಆರೋಗ್ಯ ಮಾರ್ಗದರ್ಶನಕ್ಕೂ ಇದರಲ್ಲಿ ನಿಯಮಗಳಿವೆ.
ಇದಕ್ಕೂ ಮುನ್ನ ವಿಶ್ವವಿದ್ಯಾಲಯ ವೇತನ ಆಯೋಗ, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆ ಹಾಗೂ ಆನಂತರದ ಲಾಕ್ ಡೌನ್ ವೇಳೆ 2020ರ ಏಪ್ರಿಲ್ 29 ಹಾಗೂ 2020ರ ಜುಲೈ 6 ರಂದು ಪರೀಕ್ಷೆಗಳ ಕುರಿತಂತೆ ಮಾರ್ಗಸೂಚಿಗಳನ್ನು ಮತ್ತು ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿ ಕುರಿತ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಈ ಮಾರ್ಗಸೂಚಿಗಳಲ್ಲಿ ಪರೀಕ್ಷೆಗಳು, ಶೈಕ್ಷಣಿಕ ವೇಳಾಪಟ್ಟಿ, ಪ್ರವೇಶ, ಆನ್ ಲೈನ್ ಬೋಧನೆ ಮತ್ತು ವಿಶ್ವವಿದ್ಯಾಲಯಗಳು ಸರಳ ರೀತಿಯಲ್ಲಿ ಅಳವಡಿಸಿಕೊಳ್ಳಬಹುದಾದ ಎಲ್ಲಾ ಪ್ರಮುಖ ವಿಚಾರಗಳನ್ನು ಒಳಗೊಂಡಿವೆ.
ನಂತರ ಕೋವಿಡ್-19 ಹಿನ್ನೆಲೆಯಲ್ಲಿ 2020ರ ಸೆಪ್ಟೆಂಬರ್ 24ರಂದು ಯುಜಿಸಿ 2020-21ನೇ ಸಾಲಿಗೆ ಮೊದಲನೇ ವರ್ಷದ ಪದವಿ ಮತ್ತು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.
Click here for the detailed UGC guidelines for Re-opening the Universities and Colleges Post Lockdown
Click here for the salient features of UGC guidelines for Re-opening the Universities and Colleges Post Lockdown
*****
(Release ID: 1670458)
Visitor Counter : 285