ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮ ಮತ್ತು ಸೂಕ್ತ ನಡವಳಿಕೆ ಪಾಲನೆಗೆ ಬಗ್ಗೆ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ಡಾ. ಹರ್ಷವರ್ಧನ್


ಲಸಿಕೆ ಬರುವವರೆಗೆ ಸಾಂಕ್ರಾಮಿಕ ತಡೆಗೆ ಸೂಕ್ತ ನಡವಳಿಕೆ ಪಾಲನೆ ಅತ್ಯಗತ್ಯ

Posted On: 04 NOV 2020 7:55PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ನಾಟಕದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಸಿದ್ಧತಾ ಕ್ರಮಗಳು ಮತ್ತು ಕೋವಿಡ್ ಸೂಕ್ತ ನಡವಳಿಕೆ ಪಾಲನೆಗೆ ಕೈಗೊಂಡಿರುವ ಕ್ರಮಗಳ ಕುರಿತು ಕರ್ನಾಟಕದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

          ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಡಾ. ಹರ್ಷವರ್ಧನ್ ಅವರು “ನಾವು ಸದ್ಯದಲ್ಲೇ ಕೊರೊನಾ ವಿರುದ್ಧದ ಹೋರಾಟದ ಹತ್ತನೇ ತಿಂಗಳು ಪೂರ್ಣಗೊಳಿಸುತ್ತೇವೆ. ದೇಶ ಇದೀಗ ಕೋವಿಡ್ ಮಾನದಂಡಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಕಾಣುತ್ತಿದೆ. ಹೊಸ ಸೋಂಕು ಪ್ರಕರಣಗಳು ಮತ್ತು ಸಾವುಗಳ ಪ್ರಮಾಣ ಹಂತ ಹಂತವಾಗಿ ಇಳಿಕೆಯಾಗುತ್ತಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಕ್ರಮೇಣ ಇಳಿಕೆಯಾಗುತ್ತಿದೆ. ಇಂದು ಭಾರತದಲ್ಲಿ ಚೇತರಿಕೆಯ ಪ್ರಮಾಣ ಶೇ.92ರಷ್ಟು ದಾಟಿದೆ. ಅದೇ ರೀತಿ ಮರಣ ಪ್ರಮಾಣವೂ ಕೂಡ ಇಳಿಮುಖವಾಗಿದ್ದು, ಅದು ಶೇ.1.49ರಷ್ಟಿದೆ. ಸುಮಾರು 2000 ಪ್ರಯೋಗಾಲಯಗಳಿಂದಾಗಿ ಸೋಂಕು ಪತ್ತೆ ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳವಾಗಿದೆ” ಎಂದು ಹೇಳಿದರು.

          ಗೌರವಾನ್ವಿತ ಪ್ರಧಾನಮಂತ್ರಿಗಳು ‘ಜನಾಂದೋಲನದ ಭಾಗವಾಗಿ ಕೋವಿಡ್ ಸೂಕ್ತ ನಡವಳಿಕೆ ಪಾಲನೆಗೆ ಕರೆ ನೀಡಿರುವುದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದ ಕೇಂದ್ರ ಸಚಿವರು, ಎಲ್ಲ ಜನರು ಕೋವಿಡ್ ನಡವಳಿಕೆಯ ನಿಯಮ ಪಾಲಿಸಬೇಕು ಎಂದು ಆಗ್ರಹಿಸಿದರು. ಅವರು “ಮುಂಬರುವ ಹಬ್ಬ ಮತ್ತು ಚಳಿಗಾಲದ ಋತುವಿನಲ್ಲಿ ಸೋಂಕು ಸಂಭಾವ್ಯ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ. ಹಾಗಾಗಿ ಸೋಂಕು ಪ್ರಸರಣಕ್ಕೆ ತಡೆಯೊಡ್ಡಲು ಕೋವಿಡ್ ಸೂಕ್ತ ನಡವಳಿಕೆ ಪಾಲನೆ ಅತ್ಯಂತ ಮುಖ್ಯವಾದುದು. ಮುಂಜಾಗ್ರತಾ ಕ್ರಮಗಳ ಪಾಲನೆಯಲ್ಲಿ ಯಾವಾಗ ನಾವು ನಿರ್ಲಕ್ಷ್ಯ ವಹಿಸುತ್ತೇವೆಯೋ ಅಂತಹ ಸಂದರ್ಭಗಳಲ್ಲಿ ದೇಶಕ್ಕೆ ಹಾನಿಯಾಗಿದೆ” ಎಂದು ಹೇಳಿದರು.

          ಕರ್ನಾಟಕದ ಕೋವಿಡ್ ಸ್ಥಿತಿಗತಿಯನ್ನು ದೇಶದ ಸ್ಥಿತಿಗತಿ ಜೊತೆ ಹೋಲಿಸಿದ ಡಾ. ಹರ್ಷವರ್ಧನ್ ಅವರು, “ಮಹಾರಾಷ್ಟ್ರ ನಂತರ ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ಎರಡನೇ ರಾಜ್ಯ ಕರ್ನಾಟಕವಾಗಿದೆ. ಕರ್ನಾಟಕದಲ್ಲಿ ಚೇತರಿಕೆಯ ಪ್ರಮಾಣ ಶೇ.93ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ. ಹಾಗೆಯೇ ಮರಣ ಪ್ರಮಾಣ ಶೇ.1.35ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ” ಎಂದು ಹೇಳಿದರು. ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಸುವಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ. ಹರ್ಷವರ್ಧನ್ ಅವರು ಬೆಂಗಳೂರು ನಗರ, ಮೈಸೂರು, ಬಳ್ಳಾರಿ, ದಕ್ಷಿಣ ಕನ್ನಡ, ಹಾಸನ ಮತ್ತು ಬೆಳಗಾವಿಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಹೆಚ್ಚಿನ ಪಾಸಿಟಿವ್ ಪ್ರಕರಣಗಳಿರುವ ಮತ್ತು ಮರಣ ಪ್ರಮಾಣ ಹೆಚ್ಚಿರುವ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಹರ್ಷವರ್ಧನ್ ಅವರು ಮಾತನಾಡಿದರು. ಐಇಸಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವ ಕರ್ನಾಟಕದ ಕಾರ್ಯವನ್ನು ಅವರು ಶ್ಲಾಘಿಸಿದರು. ಕೇಂದ್ರ ಆರೋಗ್ಯ ಸಚಿವರು ಕೋವಿಡ್-19 ಸೂಕ್ತ ನಡವಳಿಕೆ ಪಾಲನೆಗಾಗಿ ವ್ಯಾಪಕ ರೀತಿಯಲ್ಲಿ ಹೆಚ್ಚಿನ ಪ್ರಮಾಣದ ಐಇಸಿ ಚಟುವಟಿಕೆಗಳನ್ನು ಕೈಗೊಂಡಿದೆ ಎಂದು ಹೇಳಿದರು.

          ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಕೇಂದ್ರ ಸಚಿವರಿಗೆ ವಿವರಿಸಿದರು. ಅಧಿಕ ಪ್ರಕರಣಗಳು ಮತ್ತು ಹೆಚ್ಚಿನ ಮರಣ ಪ್ರಮಾಣವಿರುವ ಆರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಕೇಂದ್ರ ಸಚಿವರು ಸಂವಾದ ನಡೆಸಿದರು. ರಾಜ್ಯ 4 ಟಿ’ ಪತ್ತೆ, ಪರೀಕ್ಷೆ, ಚಿಕಿತ್ಸೆ ಮತ್ತು ತಂತ್ರಜ್ಞಾನದ ನೆರವಿನಿಂದ ಕೋವಿಡ್-19 ಎದುರಿಸುತ್ತಿದೆ. ಕಳೆದ ಜೂನ್ ನಲ್ಲಿ ಪ್ರತಿ ದಿನ ಸುಮಾರು 10,000 ಇದ್ದ ಸೋಂಕು ಪತ್ತೆ ಪರೀಕ್ಷೆಗಳನ್ನು ಇದೀಗ ದಿನ 80,000ಕ್ಕೆ ಹೆಚ್ಚಳ ಮಾಡಲಾಗಿದೆ.  

ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲೂ ಪರೀಕ್ಷಾ ಸೌಕರ್ಯ ಕಲ್ಪಿಸಲಾಗಿದೆ. ಇದರಿಂದಾಗಿ ಪರೀಕ್ಷಾ ಸಾಮರ್ಥ್ಯ ಹಲವು ಪಟ್ಟು ಹೆಚ್ಚಳವಾಗಿದೆ. ಈ ವರೆಗೆ ರಾಜ್ಯದಲ್ಲಿ 8 ಮಿಲಿಯನ್ ಗೂ ಅಧಿಕ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯದ ಅಧಿಕಾರಿಗಳು ಶೇ.80ಕ್ಕೂ ಅಧಿಕ ಪರೀಕ್ಷೆಗಳನ್ನು ಆರ್ ಟಿಪಿಸಿಆರ್ ಮೂಲಕ ನಡೆಸಲಾಗಿದೆ ಎಂದು ಹೇಳಿದ್ದಾರೆ. ಅಕ್ಟೋಬರ್ 25 ರಿಂದ ನವೆಂಬರ್ 1ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.37ರಷ್ಟು ಇಳಿಕೆ ಮಾಡಲಾಗಿದೆ.  Random pool testing ಮತ್ತು ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಿ, ಮುಂಚಿತವಾಗಿಯೇ ಸೋಂಕು ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ. ನಗರ ಪ್ರದೇಶಗಳಲ್ಲಿ ನಿರ್ಬಂಧಿತ ವಲಯದ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಐಇಸಿ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಮತ್ತು ಆ ಉದ್ದೇಶಕ್ಕಾಗಿ ಪ್ರತ್ಯೇಕ ನಿಧಿಯನ್ನು ಹಂಚಿಕೆ ಮಾಡಲಾಗಿದೆ.

        ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು, ಕರ್ನಾಟಕದಲ್ಲಿ ಹೊಸ ಸೋಂಕು ಪ್ರಕರಣಗಳು ಮತ್ತು ಮರಣ ಪ್ರಮಾಣ ಇಳಿಕೆಯಾಗಿದ್ದರೂ ಜುಲೈನಲ್ಲಿದ್ದ ಹಂತಕ್ಕೆ ಬರಲು ಇನ್ನೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು. ರಾಜ್ಯ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ತಲುಪಬೇಕು. ರಾಜ್ಯ ಸರ್ಕಾರ ಯಾವ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆಯೋ ಅಂತಹ ಜಿಲ್ಲೆಗಳಲ್ಲಿ ಸಂಬಂಧಿಸಿದವರೊಂದಿಗೆ ಸಮಾಲೋಚನೆಗಳನ್ನು ನಡೆಸಿ, ನಿಯಂತ್ರಣಾ ಕ್ರಮಗಳನ್ನು ಚುರುಕುಗೊಳಿಸಬೇಕು ಎಂದರು.

ಎನ್ ಸಿ ಡಿಸಿ ನಿರ್ದೇಶಕ ಡಾ. ಎಸ್.ಕೆ. ಸಿಂಗ್ ಅವರು, ರಾಜ್ಯದಲ್ಲಿನ ಕೋವಿಡ್-19 ಸದ್ಯದ ಸ್ಥಿತಿಗತಿ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಅವರು ನಿರಂತರ ನಿಗಾ ಮತ್ತು ಕೋವಿಡ್ ಸೂಕ್ತ ನಡವಳಿಕೆ ಪಾಲನೆ ಅಗತ್ಯತೆಯನ್ನು ಪ್ರಮುಖವಾಗಿ ಪ್ರತಿಪಾದಿಸಿದರು.

          ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಆರ್ತಿ ಅಹುಜಾ, ಡಿಜಿಎಚ್ಎಸ್ ಡಾ. ಸುನಿಲ್ ಕುಮಾರ್, ಜಂಟಿ ಕಾರ್ಯದರ್ಶಿ ಶ್ರೀ ಲವ್ ಅಗರ್ವಾಲ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯದ ಇತರೆ ಅಧಿಕಾರಿಗಳೂ ಸಹ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. 

****


(Release ID: 1670250) Visitor Counter : 325