ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶಾಲಾ ಶಿಕ್ಷಣ ಸುಧಾರಣೆಗೆ 5718 ಕೋಟಿ ರೂ. ವಿಶ್ವಬ್ಯಾಂಕ್ ನೆರವಿನ ಸ್ಟಾರ್ಸ್ (STARS) ಯೋಜನೆಗೆ ಸಚಿವ ಸಂಪುಟದ ಅನುಮೋದನೆ

Posted On: 14 OCT 2020 4:49PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಶಿಕ್ಷಣಕ್ಕೆ ಸಂಬಂಧಿಸಿದ ಸ್ಟಾರ್ಸ್ ಯೋಜನೆಗೆ ಅನುಮೋದನೆ ನೀಡಿದೆ. ಯೋಜನೆಯ ವಿವರಗಳು ಹೀಗಿವೆ:

  • ವಿಶ್ವ ಬ್ಯಾಂಕಿನ ಆರ್ಥಿಕ ನೆರವು 500 ಮಿಲಿಯನ್ ಡಾಲರ್ (ಅಂದಾಜು 3700 ಕೋಟಿ ರೂ.) ನೊಂದಿಗೆ ಒಟ್ಟು 5718 ಕೋಟಿ ರೂ.ಗಳ ಯೋಜನಾ ವೆಚ್ಚದೊಂದಿಗೆ ರಾಜ್ಯಗಳ ಬೋಧನೆ-ಕಲಿಕೆ ಮತ್ತು ಫಲಿತಾಂಶಗಳನ್ನು ಬಲಪಡಿಸುವ (ಸ್ಟಾರ್ಸ್) ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
  • ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಸ್ಟಾರ್ಸ್ ಯೋಜನೆಯನ್ನು ಹೊಸ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗುವುದು.
  • ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯಾಗಿ ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ -PARAKH -ಸ್ಥಾಪಿಸಲಾಗುವುದು ಮತ್ತು ಬೆಂಬಲಿಸಲಾಗುವುದು.

ಯೋಜನೆಯು ಆರು ರಾಜ್ಯಗಳನ್ನು ಅಂದರೆ, ಹಿಮಾಚಲ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಮತ್ತು ಒಡಿಶಾ ರಾಜ್ಯಗಳನ್ನು ಒಳಗೊಂಡಿರುತ್ತದೆ. ಗುರುತಿಸಲಾದ ರಾಜ್ಯಗಳಿಗೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ಬೆಂಬಲಿಸಲಾಗುತ್ತದೆ. ಯೋಜನೆಯಲ್ಲದೆ, ಗುಜರಾತ್, ತಮಿಳುನಾಡು, ಉತ್ತರಾಖಂಡ, ಜಾರ್ಖಂಡ್ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಇದೇ ರೀತಿಯ ಎಡಿಬಿ ಅನುದಾನಿತ ಯೋಜನೆಯನ್ನು ಜಾರಿಗೆ ತರಲು ಸಹ ಯೋಜಿಸಲಾಗಿದೆ. ಎಲ್ಲಾ ರಾಜ್ಯಗಳು ತಮ್ಮ ಅನುಭವ ಮತ್ತು ಉತ್ತಮ ಅಭ್ಯಾಸಗಳನ್ನು ಬೇರೆ ರಾಜ್ಯದೊಂದಿಗೆ ಹಂಚಿಕೊಳುತ್ತವೆ.

ಸುಧಾರಿತ ಶಿಕ್ಷಣ ಫಲಿತಾಂಶಗಳಿಗಾಗಿ ನೇರ ಸಂಪರ್ಕದ ಮಧ್ಯಸ್ಥಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ, ಅನುಷ್ಠಾನಗೊಳಿಸುವಲ್ಲಿ, ಮೌಲ್ಯಮಾಪನ ಮಾಡುವಲ್ಲಿ ಮತ್ತು ಸುಧಾರಿಸುವಲ್ಲಿ STARS ಯೋಜನೆಯು ಪ್ರಯತ್ನಿಸುತ್ತದೆ ಮತ್ತು ಸುಧಾರಿತ ಕಾರ್ಮಿಕ ಮಾರುಕಟ್ಟೆ ಫಲಿತಾಂಶಗಳಿಗಾಗಿ ಶಾಲೆಯ ಪರಿವರ್ತನೆಯ ಕಾರ್ಯತಂತ್ರಗಳಲ್ಲಿ ಕೆಲಸ ಮಾಡುತ್ತದೆ. ಗುಣಮಟ್ಟ ಆಧಾರಿತ ಕಲಿಕೆಯ ಫಲಿತಾಂಶಗಳ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ಉದ್ದೇಶಗಳ ಬಗ್ಗೆ ಸ್ಟಾರ್ಸ್ ಯೋಜನೆಯು ಒಟ್ಟಾರೆಯಾಗಿ ಗಮನ ಹರಿಸುತ್ತದೆ.

ಆಯ್ದ ರಾಜ್ಯಗಳಲ್ಲಿ ಹಲವು ಕ್ರಮಗಳ ಮೂಲಕ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಒಟ್ಟಾರೆ ಮೇಲ್ವಿಚಾರಣೆ ಮತ್ತು ಮಾನದಂಡ ಚಟುವಟಿಕೆಗಳನ್ನು ಸುಧಾರಿಸಲು ಯೋಜನೆಯು ಉದ್ದೇಶಿಸಿದೆ.

ಸ್ಟಾರ್ಸ್ ಯೋಜನೆಯು ಎರಡು ಪ್ರಮುಖ ಅಂಶಗಳನ್ನು ಹೊಂದಿದೆ:

1)         ರಾಷ್ಟ್ರಮಟ್ಟದಲ್ಲಿ, ಯೋಜನೆಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಯೋಜನವಾಗುವ ಕೆಳಗಿನ ಮಧ್ಯಸ್ಥಿಕೆಗಳನ್ನು ರೂಪಿಸುತ್ತದೆ:

  • ವಿದ್ಯಾರ್ಥಿಗಳ ಧಾರಣ ಸಾಮರ್ಥ್ಯ, ಪರಿವರ್ತನೆ ಮತ್ತು ಪೂರ್ಣಗೊಳಿಸುವಿಕೆಯ ದರಗಳ ಬಗ್ಗೆ ದೃಢವಾದ ಮತ್ತು ಅಧಿಕೃತ ಅಂಕಿಅಂಶವನ್ನು ಪಡೆಯಲು ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ದತ್ತಾಂಶ ವ್ಯವಸ್ಥೆಗಳನ್ನು ಬಲಪಡಿಸುವುದು.
  • ಎಸ್ಐಜಿ (ರಾಜ್ಯ ಪ್ರೋತ್ಸಾಹಕ ಧನಸಹಾಯ) ಮೂಲಕ ರಾಜ್ಯಗಳ ಆಡಳಿತ ಸುಧಾರಣಾ ಕಾರ್ಯಸೂಚಿಯನ್ನು ಉತ್ತೇಜಿಸುವ ಮೂಲಕ ರಾಜ್ಯಗಳ ಪಿಜಿಐ ಅಂಕಗಳನ್ನು ಸುಧಾರಿಸಲು ಬೆಂಬಲಿಸುವುದು.
  • ಕಲಿಕೆ ಮೌಲ್ಯಮಾಪನ ವ್ಯವಸ್ಥೆಗಳ ಬಲವರ್ಧನೆಯನ್ನು ಬೆಂಬಲಿಸುವುದು.
  • ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರವನ್ನು (PARAKH) ಸ್ಥಾಪಿಸುವ ಶಿಕ್ಷಣಸಚಿವಾಲಯದ ಪ್ರಯತ್ನಗಳನ್ನು ಬೆಂಬಲಿಸುವುದು. ಅಂತಹ ಕೇಂದ್ರದ ಕಾರ್ಯಗಳಲ್ಲಿ ಕಾರ್ಯಾಚರಣೆಗೆ ಆಯ್ಕೆಮಾಡಿದ ರಾಜ್ಯಗಳ ಅನುಭವಗಳನ್ನು ಸಂಗ್ರಹಿಸುವುದು ಮತ್ತು ಆನ್ಲೈನ್ ಪೋರ್ಟಲ್ಗಳ ಮೂಲಕ (ಉದಾ. ಶಗುನ್ ಮತ್ತು ಡಿ.ಕೆ.ಎಸ್.)  ಸಾಮಾಜಿಕ ಮತ್ತು ಇತರ ಮಾಧ್ಯಮಗಳು, ತಾಂತ್ರಿಕ ಕಾರ್ಯಾಗಾರಗಳು, ರಾಜ್ಯಗಳ ಭೇಟಿಗಳು ಮತ್ತು ಸಮಾವೇಶಗಳ ಮೂಲಕ ಹಂಚಿಕೊಳ್ಳುವುದು.

ಇದಲ್ಲದೆ, ಸ್ಟಾರ್ಸ್ ಯೋಜನೆಯು ರಾಷ್ಟ್ರೀಯ ಘಟಕದ ಅಡಿಯಲ್ಲಿ ಆಕಸ್ಮಿಕ ತುರ್ತು ಪ್ರತಿಕ್ರಿಯೆ ಘಟಕವನ್ನು (ಸಿಇಆರ್ಸಿ) ಒಳಗೊಂಡಿರುತ್ತದೆ, ಇದು ಯಾವುದೇ ನೈಸರ್ಗಿಕ, ಮಾನವ ನಿರ್ಮಿತ ಮತ್ತು ಆರೋಗ್ಯ ವಿಪತ್ತುಗಳಿಗೆ ಸ್ಪಂದಿಸಲು ಅನುವು ಮಾಡಿಕೊಡುತ್ತದೆ. ಶಾಲೆಗಳ ಮುಚ್ಚುವಿಕೆ/ ಮೂಲಸೌಕರ್ಯಗಳಿಗೆ ಹಾನಿ, ಅಸಮರ್ಪಕ ಸೌಲಭ್ಯಗಳು ಮತ್ತು ದೂರ ಕಲಿಕೆಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಬಳಸುವುದು ಮುಂತಾದ ಕಲಿಕೆಯ ನಷ್ಟಕ್ಕೆ ಕಾರಣವಾಗುವ ಸಂದರ್ಭಗಳಿಗೆ ಸ್ಪಂದಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಸಿಇಆರ್ಸಿ ಘಟಕವು ಹಣಕಾಸಿನ ತ್ವರಿತ ಮರು-ವರ್ಗೀಕರಣ ಮತ್ತು ಸುವ್ಯವಸ್ಥಿತ ಹಣಕಾಸು ಬಳಕೆಯನ್ನು ಸುಲಭಗೊಳಿಸುತ್ತದೆ.

2)         ರಾಜ್ಯ ಮಟ್ಟದಲ್ಲಿ ಯೋಜನೆಯ ಉದ್ದೇಶಗಳು:

  • ಆರಂಭಿಕ ಬಾಲ್ಯ ಶಿಕ್ಷಣ ಮತ್ತು ಮೂಲ ಕಲಿಕೆಯನ್ನು ಬಲಪಡಿಸುವುದು
  • ಕಲಿಕೆ ಮೌಲ್ಯಮಾಪನ ವ್ಯವಸ್ಥೆಗಳನ್ನು ಸುಧಾರಿಸುವುದು
  • ಶಿಕ್ಷಕರ ಅಭಿವೃದ್ಧಿ ಮತ್ತು ಶಾಲಾ ನಾಯಕತ್ವದ ಮೂಲಕ ತರಗತಿಯ ಶಿಕ್ಷಣ ಮತ್ತು ಪರಿಹಾರವನ್ನು ಬಲಪಡಿಸುವುದು
  • ಸುಧಾರಿತ ಸೇವೆಗಾಗಿ ಆಡಳಿತ ಮತ್ತು ವಿಕೇಂದ್ರೀಕೃತ ನಿರ್ವಹಣೆ.
  • ವೃತ್ತಿ ಮಾರ್ಗದರ್ಶನ, ಸಮಾಲೋಚನೆ, ಇಂಟರ್ನ್ಶಿಪ್ ಮತ್ತು ಶಾಲೆಯಿಂದ ಹೊರಗಿರುವ ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಶಾಲೆಗಳಲ್ಲಿ ವೃತ್ತಿ ಶಿಕ್ಷಣವನ್ನು ಬಲಪಡಿಸುವುದು.

ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಪಿಎಂ -ವಿದ್ಯಾ, ಫೌಂಡೇಶನಲ್ ಲಿಟರಸಿ ಅಂಡ್ ನ್ಯೂಮರಸಿ ಮಿಷನ್ ಮತ್ತು ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಮತ್ತು ಶಿಕ್ಷಣ ಚೌಕಟ್ಟುಗಳ ಬಗ್ಗೆಯೂ ಸ್ಟಾರ್ಸ್ ಯೋಜನೆಯು ಗಮನಹರಿಸುತ್ತದೆ.

ಆಯ್ದ ರಾಜ್ಯಗಳಲ್ಲಿ ಗ್ರೇಡ್ 3 ಭಾಷೆಯಲ್ಲಿ ಕನಿಷ್ಠ ಪ್ರಾವೀಣ್ಯತೆಯನ್ನು ಸಾಧಿಸುವ ವಿದ್ಯಾರ್ಥಿಗಳ ಹೆಚ್ಚಳ, ಪ್ರೌಢಶಿಕ್ಷಣ ಪೂರ್ಣಗೊಳಿಸುವಿಕೆಯ ದರದಲ್ಲಿ ಸುಧಾರಣೆ, ಆಡಳಿತ ಸೂಚ್ಯಂಕ ಅಂಕಗಳಲ್ಲಿನ ಸುಧಾರಣೆ, ಬಲವರ್ಧಿತ ಕಲಿಕಾ ಮೌಲ್ಯಮಾಪನ ವ್ಯವಸ್ಥೆಗಳು, ರಾಜ್ಯಗಳ ನಡುವಿನ ಕಲಿಕೆಗೆ ಅನುಕೂಲವಾಗುವಂತೆ ಸಹಭಾಗಿತ್ವ ಅಭಿವೃದ್ಧಿ, ಬಿಆರ್ಸಿ ಮತ್ತು ಸಿಆರ್ಸಿಗಳ ತರಬೇತಿಯ ಮೂಲಕ ವಿಕೇಂದ್ರೀಕೃತ ನಿರ್ವಹಣೆಗೆ ಯೋಜನೆ ಮತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಬಲಪಡಿಸುವುದು, ಸುಧಾರಿತ ಶಿಕ್ಷಣ ಸೇವೆಯ ವಿತರಣೆಗೆ ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರ ತರಬೇತಿಯ ಮೂಲಕ ಶಾಲಾ ನಿರ್ವಹಣೆಯನ್ನು ಬಲಪಡಿಸುವುದು ಮುಂತಾದ ರಾಜ್ಯ ಮಟ್ಟದ ಸೇವಾ ಸುಧಾರಣೆಗಳು ಯೋಜನೆಯ ಕೆಲವು ನಿರೀಕ್ಷಿತ ಫಲಿತಾಂಶಗಳಾಗಿವೆ.

***


(Release ID: 1664413) Visitor Counter : 270