ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಬೆಂಗಳೂರಿನ ರಾಜಾಜಿನಗರದ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಸಮಂಜಸ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ಸುದ್ದಿವಾಹಿನಿಗಳ ವರದಿಯನ್ನು ಇಎಸ್ಐಸಿ ನಿರಾಕರಿಸಿದೆ

Posted On: 13 OCT 2020 5:27PM by PIB Bengaluru

ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಸಮಂಜಸ ಸೌಲಭ್ಯಗಳು ಮತ್ತು ಚಿಕಿತ್ಸೆಯ ಬಗ್ಗೆ ಕೆಲವು ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿರುವ ವರದಿಗಳನ್ನು ಕೇಂದ್ರ ಕಾರ್ಮಿಕ ಸಚಿವಾಲಯದ ಅಧೀನದಲ್ಲಿರುವ ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್ (ಇಎಸ್ಐಸಿ) ಅಲ್ಲಗಳೆದಿದೆ.
ರಾಜಾಜಿನಗರದ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ವಿಮೆ ಮಾಡಿದ ವ್ಯಕ್ತಿಗಳು ಮತ್ತು ಅವರ ಅವಲಂಬಿತರಿಗೆ ವಿಮಾ ಕಾರ್ಮಿಕರಿಗೆ ಮೀಸಲಾದ ವೈದ್ಯಕೀಯ ಆರೈಕೆ ಮತ್ತು ಎಲ್ಲಾ ರೀತಿಯ ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿದೆ ಎಂದು ಇಎಸ್ಐಸಿ ಸ್ಪಷ್ಟಪಡಿಸಿದೆ.
ರಾಜಾಜಿನಗರದ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು, ಕೋವಿಡ್ ಸ್ಪಂದನೆಯ ಆಸ್ಪತ್ರೆಯಾಗಿ ಮತ್ತು ಗೊತ್ತುಪಡಿಸಿದ ಕೋವಿಡ್ ಹೆಲ್ತ್‌ಕೇರ್ (ಡಿಸಿಎಚ್‌ಸಿ) ಆಗಿ 2020 ರ ಮಾರ್ಚ್‌ನಿಂದ ಸುಮಾರು 60690 ರೋಗಿಗಳಿಗೆ ಚಿಕಿತ್ಸೆ ನೀಡಿದೆ.  ಐಸಿಎಂಆರ್ ಅನುಮೋದಿತ ಆರ್‌ಟಿಪಿಸಿಆರ್ ಮತ್ತು ಕ್ಷಿಪ್ರ ಆಂಟಿಜೆನ್ ಪರೀಕ್ಷೆಗಳನ್ನು ನಡೆಸುವ ಮೂಲಕ ಮಾರ್ಚ್ 2020 ರಿಂದ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಆಸ್ಪತ್ರೆಯಲ್ಲಿ ಕೋವಿಡ್-19 ಪಾಸಿಟಿವ್ ಇರುವವರಿಗೆ ಯಶಸ್ವಿಯಾಗಿ ಹೆರಿಗೆಗಳನ್ನೂ ಮಾಡಿಸಲಾಗಿದೆ. ವಿಮಾ ಕಾರ್ಮಿಕರು ಮತ್ತು ವಿಮಾ ಕಾರ್ಮಿಕರಲ್ಲದವರಿಗೆ ವೈದ್ಯಕೀಯ ಆರೋಗ್ಯ ಸೇವೆಗಳನ್ನು ಒದಗಿಸುವುದರ ಜೊತೆಗೆ, ರೋಗಿಗಳು ಮತ್ತು ವೈದ್ಯಕೀಯ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸುರಕ್ಷತೆಯನ್ನು ಕಲ್ಪಿಸುವುದು ಆಸ್ಪತ್ರೆಯ ಆದ್ಯತೆಯಾಗಿದೆ ಎಂದು ಇಎಸ್ಐಸಿ ತಿಳಿಸಿದೆ.
ಸುದ್ದಿವಾಹಿನಿಗಳ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಇಎಸ್ಐಸಿ, ಆಸ್ಪತ್ರೆಯಲ್ಲಿ ಸಾಕಷ್ಟು ಎನ್ -95 ಮುಖಗವಸುಗಳು, ಪಿಪಿಇ ಸುರಕ್ಷತಾ ಕಿಟ್‌ಗಳು, ಮೂರು ಪದರುಗಳ ಮುಖಗವಸುಗಳು, ಕೈಗವಸುಗಳು ಮತ್ತು ಔಷಧಿಗಳಿವೆ ಎಂದು ತಿಳಿಸಿದೆ. ರೋಗಿಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ಒಂದು ನಿದರ್ಶನವೂ ಆಸ್ಪತ್ರೆಯಲ್ಲಿ ವರದಿಯಾಗಿಲ್ಲ ಎಂದೂ ಅದು ಹೇಳಿದೆ.
ಸರ್ಕಾರದ ನಿರ್ದೇಶನದಂತೆ, ಇಎಸ್ಐಸಿ ಆಸ್ಪತ್ರೆಗಳು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿವೆ. ಇಎಸ್ಐ ಕಾರ್ಪೊರೇಷನ್ ತನ್ನ ವೈದ್ಯಕೀಯ ಸೇವೆಗಳ ಮೂಲಸೌಕರ್ಯವನ್ನು ಸಾರ್ವಜನಿಕರೂ ಸೇರಿದಂತೆ ಎಲ್ಲ ಕೋವಿಡ್-19 ರೋಗಿಗಳಿಗೆ ಮುಕ್ತಗೊಳಿಸಿದೆ. ಭಾರತದಾದ್ಯಂತ ಸುಮಾರು 3597 ಹಾಸಿಗೆಗಳನ್ನು ಹೊಂದಿರುವ ಒಟ್ಟು 23 ಇಎಸ್ಐಸಿ ಆಸ್ಪತ್ರೆಗಳು ಕೋವಿಡ್-19 ಮೀಸಲು ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಆಯಾ ಪ್ರದೇಶಗಳ ಸಾರ್ವಜನಿಕರಿಗೆ ಕೋವಿಡ್ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿವೆ. ಇದಲ್ಲದೆ, 213 ವೆಂಟಿಲೇಟರ್‌ಗಳನ್ನು ಹೊಂದಿರುವ ಒಟ್ಟು 555 ಐಸಿಯು/ ಎಚ್‌ಡಿಯು ಹಾಸಿಗೆಗಳನ್ನು ಸಹ ಈ ಆಸ್ಪತ್ರೆಗಳಲ್ಲಿ ಲಭ್ಯಗೊಳಿಸಲಾಗಿದೆ ಎಂದು ಇಎಸ್ಐಸಿ ತಿಳಿಸಿದೆ.
ಇಡೀ ದೇಶವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಮೂಹವು ನಿಜವಾದ ಯೋಧರಾಗಿದ್ದಾರೆ ಮತ್ತು ಕೋವಿಡ್ 19 ರ ದುಷ್ಪರಿಣಾಮಗಳಿಂದ ಜೀವಗಳನ್ನು ಉಳಿಸಲು ಅವರು ತಮ್ಮ ಕರ್ತವ್ಯದ ಕರೆಯನ್ನು ಮೀರಿ ಕೆಲಸ ಮಾಡುತ್ತಿದ್ದಾರೆ.
ಮಾಧ್ಯಮದ ಪಾತ್ರವನ್ನು ಅಲ್ಲಗಳೆಯಲಾಗುವುದಿಲ್ಲ. ಆದರೂ, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಮೂಹದ ಮನೋಸ್ಥೈರ್ಯವನ್ನು ಹೆಚ್ಚಿಸಲು ಈ ಪರೀಕ್ಷಾ ಸಮಯದಲ್ಲಿ ಇಎಸ್ಐಸಿಯು ಮಾಧ್ಯಮದ ಸಹಕಾರ ಮತ್ತು ಸಹನೆಯನ್ನು ಕೋರುತ್ತದೆ.
ಇಂತಹ ವಿಷಯಗಳನ್ನು ವರದಿ ಮಾಡುವಾಗ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವ ಬದಲು ಅಧಿಕೃತ ವಲಯಗಳಿಂದ ಸತ್ಯಾಸತ್ಯತೆಗಳನ್ನು ಪರಿಶೀಲಿಸುವುದು ನೈತಿಕ ಪತ್ರಿಕೋದ್ಯಮದ ಭಾಗವಾಗಿರಬೇಕು ಎಂದು ಇಎಸ್ಐಸಿ ನಿರೀಕ್ಷಿಸುತ್ತದೆ ಎಂದು ಅದು ತಿಳಿಸಿದೆ.

***

 



(Release ID: 1664108) Visitor Counter : 114