ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶಾಲೆಗಳ ಪುನರಾರಂಭ ಕುರಿತ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಾರ್ಗಸೂಚಿ/ಎಸ್ಒಪಿ ಬಿಡುಗಡೆ

Posted On: 05 OCT 2020 6:58PM by PIB Bengaluru

ಕೇಂದ್ರ ಶಿಕ್ಷಣ ಸಚಿವಾಲಯ ಇಂದು ಶಾಲೆಗಳ ಪುನರಾರಂಭ ಕುರಿತಂತೆ ಮಾರ್ಗದರ್ಶಿ/ಎಸ್ಒಪಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು ತಮ್ಮ ಟ್ವೀಟ್ ಮೂಲಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಶಾಲೆಗಳ ಪುನರಾರಂಭ ಕುರಿತ ಮಾರ್ಗದರ್ಶಿ/ಎಸ್ಒಪಿಯನ್ನು ಪ್ರಕಟಿಸಿದ್ದಾರೆ. 


ಶಾಲೆಗಳ ಪುನರಾರಂಭ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾರ್ಗಸೂಚಿಗಳ ಸಂಕ್ಷಿಪ್ತ ಮುಖ್ಯಾಂಶಗಳು ಹೀಗಿವೆ
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ದಿನಾಂಕ 30.09.2020ರಂದು ತನ್ನ ಆದೇಶ ಸಂಖ್ಯೆ 40-3/2020-ಡಿಎಂ-ಐ(ಎ) ಪ್ಯಾರಾ ಒಂದರಲ್ಲಿ ಶಾಲೆಗಳ ಪುನರಾರಂಭ ಕುರಿತು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹಂತ ಹಂತವಾಗಿ ಸಂಬಂಧಿಸಿದ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಜೊತೆ ಸಮಾಲೋಚನೆಗಳನ್ನು ನಡೆಸಿ, ಅಕ್ಟೋಬರ್ 15ರ ನಂತರ ಶಾಲೆಗಳು ಮತ್ತು ಬೋಧನಾ ಸಂಸ್ಥೆಗಳ ಪುನರಾರಂಭ ಕುರಿತಂತೆ ಸ್ಥಳೀಯ ಸ್ಥಿತಿಗತಿಗಳನ್ನು ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದು ತಿಳಿಸಲಾಗಿತ್ತು. 
ಭಾಗ-1 ರಲ್ಲಿ ಶಾಲೆಗಳ ಪುನರಾರಂಭ ಕುರಿತಂತೆ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಉಲ್ಲೇಖಿಸಲಾಗಿತ್ತು. ಇವುಗಳ ಕೇಂದ್ರ ಗೃಹ ಸಚಿವಾಲಯ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಸೂಚನೆಗಳನ್ನು ಆಧರಿಸಿದ್ದು, ಅದರಲ್ಲಿ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳು ಒಳಗೊಂಡಿವೆ ಮತ್ತು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯ ಸ್ಥಿತಿಗತಿಯನ್ನು ಆಧರಿಸಿ ಅವುಗಳನ್ನು ಅಳವಡಿಸಿಕೊಳ್ಳುವುದು ಮತ್ತು ಜಾರಿಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದು. 
ಶಾಲೆಯ ಎಲ್ಲ ಪ್ರದೇಶಗಳಲ್ಲಿ, ಪೀಠೋಪಕರಣ, ಸಾಮಗ್ರಿ, ಬೋಧನಾ ಸಾಮಗ್ರಿ, ದಾಸ್ತಾನು ಪ್ರದೇಶ, ನೀರಿನ ತೊಟ್ಟಿಗಳು, ಅಡುಗೆ ಕೋಣೆ, ಕ್ಯಾಂಟಿನ್, ಶೌಚಾಲಯಗಳು, ಪ್ರಯೋಗಾಲಯ, ಗ್ರಂಥಾಲಯ ಸೇರಿದಂತೆ ಇಡೀ ಶಾಲಾ ಕ್ಯಾಂಪಸ್ ಆವರಣದಲ್ಲಿ ಸ್ವಚ್ಛತೆ ಮತ್ತು ಸೋಂಕು ನಿವಾರಕ ಕ್ರಮಗಳನ್ನು ಜಾರಿಗೊಳಿಸಬೇಕು ಮತ್ತು ವ್ಯವಸ್ಥೆ ಮಾಡಬೇಕು ಹಾಗೂ ಒಳಾಂಗಣದಲ್ಲಿ ಶುದ್ಧ ಗಾಳಿಯನ್ನು ಖಾತ್ರಿಪಡಿಸಬೇಕು. 
ಶಾಲೆಗಳು ಕಾರ್ಯ ನಿರ್ವಹಣೆಗೆ ತುರ್ತು ಆರೈಕೆ ಬೆಂಬಲ, ನಿರ್ವಹಣಾ ತಂಡ, ಸಾಮಾನ್ಯ ನಿರ್ವಹಣಾ ತಂಡ, ಸಾಮಗ್ರಿ ಬೆಂಬಲ ತಂಡ ಹಾಗೂ ಶುಚಿತ್ವ ತಪಾಸಣಾ ತಂಡ ಮತ್ತಿತರವುಗಳನ್ನು ರಚಿಸಿ, ಅವರಿಗೆ ಜವಾಬ್ದಾರಿಯನ್ನು ವಹಿಸುವುದರಿಂದ ಅದು ನೆರವಾಗಲಿದೆ. 
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊರಡಿಸಿರುವ ಮಾರ್ಗಸೂಚಿಗಳನ್ನು ಆಧರಿಸಿ ಶಾಲೆಗಳು ತಮ್ಮದೇ ಆದ ಎಸ್ಒಪಿಯನ್ನು ರಚಿಸುವುದಕ್ಕೆ ಉತ್ತೇಜನ ನೀಡಬೇಕು. ಆ ವೇಳೆ ಸುರಕ್ಷತಾ ಮತ್ತು ದೈಹಿಕ ಹಾಗೂ ಸಾಮಾಜಿಕ ಅಂತರ ಪಾಲನೆ ನಿಯಮಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಹಾಗೂ ಆ ಕುರಿತಂತೆ  ನೋಟಿಸ್/ ಪೋಸ್ಟರ್ ಅಥವಾ ಸಂದೇಶಗಳನ್ನು ಪೋಷಕರಿಗೆ ತಲುಪಿಸಬೇಕು ಹಾಗೂ ಅವುಗಳನ್ನು ಪ್ರಮುಖವಾಗಿ ಪ್ರದರ್ಶಿಸಬೇಕು/ಪ್ರಚುರಪಡಿಸಬೇಕು.
ಮಕ್ಕಳು ಶಾಲೆಯಲ್ಲಿ ಆಸನಗಳಲ್ಲಿ ಕುಳಿತುಕೊಳ್ಳುವ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ದೈಹಿಕ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಬೇಕು. ಕಾರ್ಯಕ್ರಮಗಳು ಮತ್ತು ಸಮಾರಂಭಗಳನ್ನು ಆದಷ್ಟು ತಪ್ಪಿಸಬೇಕು. ಹಂತ ಹಂತವಾಗಿ ಪ್ರವೇಶ ಮತ್ತು ನಿರ್ಗಮನ ಸಮಯಗಳನ್ನು ಹಾಗೂ ಶಾಲಾ ಪ್ರವೇಶ ದ್ವಾರಗಳನ್ನು ನಿಗದಿಪಡಿಸಬೇಕು ಹಾಗೂ ಅದಕ್ಕೆ ತಕ್ಕಂತೆ ವೇಳಾಪಟ್ಟಿ ರೂಪಿಸಬೇಕು. 
ಶಾಲೆಗೆ ಆಗಮಿಸುವ ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್/ಮುಖಗವಸು ಧರಿಸಿರಬೇಕು ಮತ್ತು ತರಗತಿಯಲ್ಲಿದ್ದಾಗಲೂ ಅಥವಾ ಯಾವುದೇ ಗುಂಪು ಚಟುವಟಿಕೆಗಳಲ್ಲಿ ತೊಡಗಿದ್ದಾಗಲೂ ಅಂದರೆ ಮೆಸ್ ಗಳಲ್ಲಿ ತಿಂಡಿ ತಿನ್ನುವಾಗ, ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸುವಾಗ ಮತ್ತು ಗ್ರಂಥಾಲಯಗಳಲ್ಲಿ ಓದುವಾಗಲೂ ಮಾಸ್ಕ್ ಧರಿಸಿರಬೇಕು. 
ಸೂಕ್ತ ಸ್ಥಳಗಳಲ್ಲಿ ಸುರಕ್ಷತ ಶಿಷ್ಟಾಚಾರ ಮತ್ತು ದೈಹಿಕ/ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತಂತೆ ಸೂಕ್ತ ಗುರುತುಗಳನ್ನು ಪ್ರದರ್ಶಿಸಬೇಕು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿರಂತರವಾಗಿ ಪೋಷಕರು/ಪಾಲಕರ ಜೊತೆ ಅವರ ಮಕ್ಕಳು ಶಾಲೆಗೆ ಹಾಜರಾಗುವುದಕ್ಕಿಂತ ಮುಂಚೆ ಸಮಾಲೋಚಿಸಬೇಕು. ಪೋಷಕರ ಒಪ್ಪಿಗೆಯೊಂದಿಗೆ ಯಾವ ವಿದ್ಯಾರ್ಥಿಗಳು ಮನೆಯಿಂದಲೇ ಅಧ್ಯಯನ ನಡೆಸಲು ಬಯಸುತ್ತಾರೋ ಅಂತಹವರಿಗೆ ಅದಕ್ಕೆ ಅವಕಾಶ ಮಾಡಿಕೊಡಬೇಕು. 
ಕೋವಿಡ್-19ಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಸಮುದಾಯದ ಸದಸ್ಯರು ಮತ್ತು ವಿದ್ಯಾರ್ಥಿ ನಿಲಯದ ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕು ಮತ್ತು ಶಿಕ್ಷಣ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಅವರುಗಳು ಅವರವರ ಪಾತ್ರಗಳನ್ನು ನಿರ್ವಹಿಸುವಂತೆ ನೋಡಿಕೊಳ್ಳಬೇಕು. 
ಎಲ್ಲ ತರಗತಿಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ಬಿಡುವಿನ ಅವಧಿಗಳು ಮತ್ತು ಪರೀಕ್ಷೆಗಳ ಕುರಿತಂತೆ ಶೈಕ್ಷಣಿಕ ವೇಳಾಪಟ್ಟಿ ಬದಲಾಗುತ್ತದೆ. ಶಾಲೆ ಆರಂಭಕ್ಕೆ ಮುನ್ನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ನಿಗದಿತ ಪಠ್ಯ ಪುಸ್ತಕ ಲಭ್ಯವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. 
ಶಾಲೆಗಳಲ್ಲಿ ಅಥವಾ ಶಾಲೆಯ ಸಮೀಪದಲ್ಲೇ ಪೂರ್ಣ ಪ್ರಮಾಣದ ತರಬೇತಿ ಹೊಂದಿದ ಆರೋಗ್ಯ ರಕ್ಷಣಾ ಕಾರ್ಯಕರ್ತರು/ನರ್ಸ್/ವೈದ್ಯರು ಮತ್ತು ಸಮಾಲೋಚಕರು ಇರುವುದನ್ನು ಖಾತ್ರಿಪಡಿಸಬೇಕು ಹಾಗೂ ಅವರ ಮೂಲಕ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಬೇಕು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಗಾಗ್ಗೆ ಆಯೋಜಿಸಬೇಕು.
ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಂದ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬೇಕು. ಸ್ಥಳೀಯ ಆಡಳಿತ, ರಾಜ್ಯ ಮತ್ತು ಜಿಲ್ಲಾ ಸಹಾಯವಾಣಿಗಳು ಹಾಗೂ ಸಮೀಪದ ಕೋವಿಡ್ ಕೇಂದ್ರ ಹಾಗೂ ಇತರೆ ತುರ್ತು ಸಂದರ್ಭಗಳಿಗಾಗಿ ಅಗತ್ಯ ಸಂಪರ್ಕ ವಿವರಗಳನ್ನು ಹೊಂದಿರಬೇಕು. 
 ಎಲ್ಲರಿಗೂ ಹೊಂದಿಕೊಳ್ಳುವ ಹಾಜರಾತಿ ಮತ್ತು ಅನಾರೋಗ್ಯ ರಜೆ ನೀತಿಗಳನ್ನು ರೂಪಿಸಿ, ಜಾರಿಗೊಳಿಸಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅನಾರೋಗ್ಯಕ್ಕೊಳಗಾದರೆ ಅವರಿಗೆ ಮನೆಯಲ್ಲೇ ಉಳಿಯುವಂತೆ ಉತ್ತೇಜನ ನೀಡಬೇಕು.
ಶಂಕಿತ ಕೋವಿಡ್-19 ಪ್ರಕರಣಗಳು ಪತ್ತೆಯಾದರೆ ಅಂತಹ ಸಂದರ್ಭಗಳಲ್ಲಿ ಶಿಷ್ಟಾಚಾರದಲ್ಲಿ ವ್ಯಾಖ್ಯಾನಿಸಿರುವಂತೆ ಕ್ರಮಗಳನ್ನು ಕೈಗೊಳ್ಳುವುದು. 
ಸೂಕ್ಷ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಗಮನಹರಿಸಬೇಕು(ನಿರಾಶ್ರಿತರು/ವಲಸೆ ವಿದ್ಯಾರ್ಥಿಗಳು, ವಿಶೇಷಚೇತನ ವಿದ್ಯಾರ್ಥಿಗಳು ಮತ್ತು ಸಾವು ಕೋವಿಡ್-19ನಿಂದ ಆಗಿರುವ ಸಾವು ಅಥವಾ ಆಸ್ಪತ್ರೆಗೆ ದಾಖಲಾದ ನಂತರ ನೇರವಾಗಿ ತೊಂದರೆಗೊಳಗಾಗಿರುವ ವಿದ್ಯಾರ್ಥಿಗಳು) ಇವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಸಿಡಬ್ಲ್ಯೂಎಸ್ಎನ್ ಪ್ರಕಾರ ಅವರುಗಳಿಗೆ ಅಗತ್ಯ ಸಾಧನಾ ಮತ್ತು ನೆರವು ಖಾತ್ರಿಪಡಿಸಬೇಕು.
ಮಕ್ಕಳ ಪೌಷ್ಠಿಕಾಂಶ ಅಗತ್ಯತೆಗಳನ್ನು ಪೂರೈಸಲು ಮತ್ತು ಕೋವಿಡ್-19 ವಿರುದ್ಧ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬೇಯಿಸಿದ ಮಧ್ಯಾಹ್ನದ ಬಿಸಿಯೂಟ ನೀಡುವುದು ಅಥವಾ ಬೇಸಿಗೆ ರಜೆಯಲ್ಲಿ ಶಾಲೆ ಮುಚ್ಚಿದ್ದ ವೇಳೆ ಮಕ್ಕಳಿಗೆ ನೀಡಿದ್ದಂತೆ ಈಗಲೂ ಅದಕ್ಕೆ ಸಮನಾದ ಆಹಾರ ಭದ್ರತಾ ಭತ್ಯೆಯನ್ನು ನೀಡುವುದು. ಅಲ್ಲದೆ ಆಹಾರ ಭದ್ರತೆ, ಆರೋಗ್ಯ ಮತ್ತು ಶುಚಿತ್ವದ ಜೊತೆಗೆ ದೈಹಿಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹ ಅಗತ್ಯ ಒತ್ತು ನೀಡುವುದು. 
ಭಾಗ-2 ರಲ್ಲಿ ದೈಹಿಕ/ಸಾಮಾಜಿಕ ಅಂತರದೊಂದಿಗೆ ಕಲಿಯುವುದು ಮತ್ತು ಶಿಕ್ಷಣದ ಬೋಧನೆ, ಪಠ್ಯಕ್ರಮ ಚಟುವಟಿಕೆ, ಭೋದನಾ ಸೂಚನೆ, ವೇಳಾಪಟ್ಟಿ, ಮೌಲ್ಯಮಾಪನ ಮತ್ತಿತರ ಶೈಕ್ಷಣಿಕ ಅಂಶಗಳನ್ನು ಒಳಗೊಂಡಿವೆ. ಇವುಗಳು ಸಲಹಾ ರೂಪದಲ್ಲಿರುತ್ತವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಇವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು, ತಮ್ಮದೇ ಆದ ಮಾರ್ಗಸೂಚಿಗಳನ್ನು ಸಿದ್ಧಪಡಿಸಿಕೊಳ್ಳಬಹುದು. 
ಕಲಿಕಾ ಫಲಿತಾಂಶಗಳಿಗೆ ಒತ್ತು ನೀಡಿ, ಇಡೀ ವರ್ಷಕ್ಕೆ ಸಮಗ್ರ ಶೈಕ್ಷಣಿಕ ಪರ್ಯಾಯ ವೇಳಾಪಟ್ಟಿಯ ಚಟುವಟಿಕೆಗಳನ್ನು ರೂಪಿಸಿಕೊಳ್ಳಬಹುದು. ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಇಡೀ ವರ್ಷಕ್ಕೆ ಒಗ್ಗುವಂತೆ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಮರುನಿಗದಿಗೊಳಿಸಿ ಕೊಳ್ಳುವುದು. ಶಿಕ್ಷಣ ಇಲಾಖೆಯ ನಿರ್ದೇಶನಾಲಯದಿಂದ ಬಂದಿರುವ ಮಾರ್ಗಸೂಚಿಗಳನ್ನು ಆಧರಿಸಿ ಸಮಗ್ರ ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸಿಕೊಳ್ಳುವುದು. ಈ ಯೋಜನೆಯಲ್ಲಿ ಎನ್ ಸಿಇಆರ್ ಟಿ ಸಿದ್ಧಪಡಿಸಿರುವ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯ ಮಾರ್ಗಸೂಚಿಗಳನ್ನು ಅನುಸರಿಸುವುದು. 
ಶಾಲೆಯ ಪುನರಾರಂಭದ ನಂತರ ವಿದ್ಯಾರ್ಥಿಗಳ ಮರುಸಂಘಟನೆಯನ್ನು  ಶಾಲೆಯಲ್ಲಿ ಆದ್ಯತೆ ಮೇಲೆ ಪರಿಗಣಿಸುವುದು.
ಶಿಕ್ಷಕರು ಸಾಧ್ಯವಾದಷ್ಟು ಐಸಿಟಿ ಜೊತೆ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಅದಕ್ಕಾಗಿ ತರಬೇತಿ ಮಾದರಿಗಳನ್ನು ಸಿದ್ಧಪಡಿಸಬೇಕು. 
ಪರಿಸರ ವಿಜ್ಞಾನ (ಇವಿಎಸ್) ಭಾಷೆಗಳು, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಹಾಗೂ ಕಲೆ ಮತ್ತಿತರ ವಿಷಯಗಳನ್ನು ಬೋಧಿಸುವಾಗ ಬೋಧನೆಯಲ್ಲಿ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ವಿಷಯಗಳನ್ನು ಸೇರ್ಪಡೆ ಮಾಡಿಕೊಂಡು ಮಕ್ಕಳನ್ನು ಜಾಗೃತಗೊಳಿಸುವುದು. 
ಶಿಕ್ಷಕರು ಪಠ್ಯಕ್ರಮದ ಸ್ಪಷ್ಟ ಮಾರ್ಗಸೂಚಿಯೊಂದಿಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಬೇಕು, ಯಾವ ರೂಪದಲ್ಲಿ ಕಲಿಕೆ ಮಾಡಬೇಕು(ಮುಖಾಮುಖಿ ಬೋಧನೆ/ವೈಯಕ್ತಿಕ ಕೆಲಸ ಅಥವಾ ಗುಂಪು ಆಧಾರಿತ ಚಟುವಟಿಕೆ/ಗುಂಪು ಪ್ರಾತ್ಯಕ್ಷಿಕೆಗಳು ಇತ್ಯಾದಿ) ಮೂಲಕ ಪಾಠಗಳನ್ನು ತಿಳಿಸುವುದು, ಅದಕ್ಕಾಗಿ ಪಡೆಯುವ ಸಮಯ ಶಾಲೆ ಆಧರಿತ ಮೌಲ್ಯಾಂಕನ ದಿನಾಂಕಗಳು, ಬಿಡುವಿನ ಅವಧಿಗಳನ್ನು ನಿರ್ಧರಿಸತಕ್ಕದ್ದು. 
ಸೂಕ್ಷ್ಮ ವಿದ್ಯಾರ್ಥಿಗಳಿಗೆ (ನಿರಾಶ್ರಿತರು/ವಲಸೆ ವಿದ್ಯಾರ್ಥಿಗಳು/ವಿಶೇಷಚೇತನ ವಿದ್ಯಾರ್ಥಿಗಳು/ ಕೋವಿಡ್-19ನಿಂದಾಗಿ ಕುಟುಂಬದಲ್ಲಿ ಆಗಿರುವ ಸಾವು ಅಥವಾ ಆಸ್ಪತ್ರೆಗೆ ದಾಖಲಾಗಿರುವುದರಿಂದ ತೊಂದರೆಗೊಳಗಾಗಿರುವ ವಿದ್ಯಾರ್ಥಿಗಳು)ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. 
ದೈಹಿಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಇತರೆ ಸುರಕ್ಷಿತ ನಿಯಮಗಳನ್ನು ಗಮನದಲ್ಲಿರಿಸಿಕೊಂಡು ಲಭ್ಯವಿರುವ ಬೋಧನಾ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ಸಂಪನ್ಮೂಲಗಳಲ್ಲಿ ಗುಂಪು ಬೋಧನೆ ಮತ್ತು ಕಲಿಕೆ ಮತ್ತು ವರ್ಕ್ ಬುಕ್ ಹಾಗೂ ವರ್ಕ್ ಶೀಟ್ ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳನ್ನು ತರಗತಿಗಳಲ್ಲಿ ಬಳಕೆ, ಪೋಷಕರು/ಅಜ್ಜ-ಅಜ್ಜಿ, ವೃದ್ಧರನ್ನು ಸಬಲೀಕರಣಗೊಳಿಸಿ ಅವರ ಸೇವೆಗಳನ್ನು ಸ್ವಯಂ ಸೇವಕರಾಗಿ ಬಳಸಿಕೊಳ್ಳುವುದು. 
ಡಿಜಿಟಲ್ ಮತ್ತು ಆನ್ ಲೈನ್ ಶಿಕ್ಷಣಕ್ಕೆ ಪ್ರಾಗ್ಯತಾ ಮಾರ್ಗಸೂಚಿಗಳನ್ನು ಬಳಸಿಕೊಂಡು ಆ ನಿಟ್ಟಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪುನರ್ ಮನನ ಕಾರ್ಯಕ್ಕೆ ಬಳಸಿಕೊಳ್ಳುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಠ್ಯ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಅಳವಡಿಸಿದ್ದರೆ ಅವುಗಳನ್ನು ಹೇಗೆ ಕ್ಯೂಆರ್ ಸಂಕೇತ ಅಲ್ಲದೆ ಬೇರೆ ವಿಧಾನಗಳ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡುವುದು. ಆಫ್ ಲೈನ್ ವಿಧಾನಗಳಲ್ಲಿ ದೀಕ್ಷಾ ಸಂಕೇತಗಳು ಮತ್ತಿತರ ವಿಧಾನವನ್ನು ಬಳಸುವುದು. 
ಶಿಕ್ಷಕರು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಯವರು ಕಲಿಕಾ ಗುರಿಗಳನ್ನು ಸಾಧಿಸಲು ರಚನಾತ್ಮಕ ಮೌಲ್ಯಮಾಪನ ವಿಧಾನಕ್ಕೆ ಒತ್ತು ನೀಡುವ ಅಗತ್ಯವಿದೆ. ಪೋಷಕರಿಗೆ ಎಸ್ ಸಿಇಆರ್ ಟಿ/ಎನ್ ಸಿಇಆರ್ ಟಿ ಮಾರ್ಗಸೂಚಿಗಳ ಬಗ್ಗೆ ಜಾಗೃತಗೊಳಿಸಿ, ಅವರಿಗೆ ರಚನಾತ್ಮಕ ಮೌಲ್ಯಮಾಪನ ವಿಧಾನದ ಬಗ್ಗೆ ಅರ್ಥಮಾಡಿಸುವುದು.
ಲಾಕ್ ಡೌನ್ ಸಂದರ್ಭದಲ್ಲಿ ನೀಡುತ್ತಿರುವ ಗೃಹ ಆಧಾರಿತ ಶಾಲಾ ಪದ್ಧತಿಯಿಂದ ಮಾಮೂಲಿ ಶಾಲಾ ಪದ್ಧತಿಗೆ ವರ್ಗಾವಣೆಗೊಳ್ಳಲು ಶಾಲೆಗಳು, ವಿದ್ಯಾರ್ಥಿಗಳಿಗೆ ಸುಗಮ ರೀತಿಯಲ್ಲಿ ಅವಕಾಶ ಮಾಡಿಕೊಡಬೇಕು. ಶಾಲೆಗಳು ಮರು ಹೊಂದಾಣಿಕೆ ಮಾಡಲ್ಪಟ್ಟ ಶಾಲಾ ವೇಳಾಪಟ್ಟಿಯನ್ನು ಜಾರಿಗೊಳಿಸಬೇಕು ಮತ್ತು ಮರುವಿನ್ಯಾಸಗೊಳಿಸಿದ ವಾರ್ಷಿಕ ಪಠ್ಯಕ್ರಮ (ಎಸಿಪಿ), ಪರಿಹಾರ ತರಗತಿಗಳು ಅಥವಾ ಶಾಲೆಗೆ ಮರಳಿ ಬನ್ನಿ ಮತ್ತಿತರ ಅಭಿಯಾನಗಳನ್ನು ಕೈಗೊಳ್ಳಬಹುದು. 
ಶಿಕ್ಷಕರು ಶಾಲಾ ಆಪ್ತ ಸಮಾಲೋಚಕರು ಮತ್ತು ಶಾಲಾ ಆರೋಗ್ಯ ಕಾರ್ಯಕರ್ತರು ಎಲ್ಲರೂ ಒಗ್ಗೂಡಿ ವಿದ್ಯಾರ್ಥಿಗಳ ಭಾವನಾತ್ಮಕ ಸುರಕ್ಷತೆಯನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳಬೇಕು. ‘ಮನೋದರ್ಪಣ’ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅವರ ಕುಟುಂಬದವರಿಗೆ ಮಾನಸಿಕ ಸಾಮಾಜಿಕ ಬೆಂಬಲ ನೀಡಲು ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಹಾಗೂ ಆನಂತರ ಮಾನಸಿಕ ಆರೋಗ್ಯ ಹಾಗೂ ಭಾವನಾತ್ಮಕ ಸೌಖ್ಯ ಕಾಯ್ದುಕೊಳ್ಳಲು ಒತ್ತು ನೀಡಬೇಕು.
ಈ ಮಾರ್ಗಸೂಚಿ/ಎಸ್ ಒಪಿ ಆಧರಿಸಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ನಿರ್ದಿಷ್ಟ ಕಾರ್ಯಾಚರಣೆ ವಿಧಾನ(ಎಸ್ಒಪಿ)ಯನ್ನು ಶಾಲೆಗಳ ಆರಂಭಕ್ಕೆ ರೂಪಿಸಬೇಕು ಮತ್ತು ಶಾಲೆಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಸಂಬಂಧಪಟ್ಟವರಿಗೆ ಅಗತ್ಯ ತರಬೇತಿಗಳನ್ನು ನೀಡುವುದು. 
ಸುರಕ್ಷಿತ ಶಾಲಾ ವಾತಾವರಣ ನಿರ್ಮಾಣಕ್ಕೆ ಅಗತ್ಯ ಚೆಕ್ ಲಿಸ್ಟ್ ಗಳನ್ನು ರೂಪಿಸುವುದು.  ಬೇರೆ ಬೇರೆಯವರಿಗೆ ಅವುಗಳ ಬಗ್ಗೆ ಶೈಕ್ಷಣಿಕ ಯೋಜನೆ ಶಾಲಾ ಕಾರ್ಯನಿರ್ವಹಣೆಗೆ ಮತ್ತು ಸ್ಥಿತಿಸ್ಥಾಪಕತ್ವ ಸ್ಥಾಪನೆಗೆ ಬಳಕೆ ಮಾಡುವುದು. 
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಇಲಾಖೆಗಳು ಶಾಲೆಗಳ ಆರಂಭಕ್ಕೂ ಮುನ್ನ ಶಾಲಾ ಮುಖ್ಯಸ್ಥರು, ಶಿಕ್ಷಕರು ಮತ್ತು ಪೋಷಕರು, ಡಿಐಇಟಿಯ ಬೋಧನಾ ಸಿಬ್ಬಂದಿಗೆ ಸಾಮರ್ಥ್ಯವೃದ್ಧಿ ಕಾರ್ಯಕ್ರಮಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. 


*****


(Release ID: 1661904) Visitor Counter : 1754