ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಕೃಷಿ ಬಜೆಟ್ ಹತ್ತು ವರ್ಷಗಳಲ್ಲಿ 11 ಪಟ್ಟು ಹೆಚ್ಚಳ
1.34 ಲಕ್ಷ ಕೋಟಿ ರೂ.ಗೆ ಏರಿಕೆ. ಹೊಸ ಕೃಷಿ ಸುಧಾರಣೆಗಳಿಂದ ಅಪಾರ ಲಾಭ: ಕೇಂದ್ರ ಕಾರ್ಮಿಕ ಸಚಿವ ಶ್ರೀ ಸಂತೋಷ್ ಗಂಗ್ವಾರ್
73 ವರ್ಷಗಳಲ್ಲಿ ಮೊದಲ ಬಾರಿಗೆ ಸರ್ಕಾರವು ದೇಶದಲ್ಲಿ ಪಾರದರ್ಶಕ, ಅಂತರ್ಗತ ಮತ್ತು ನೈಜ ಕಾರ್ಮಿಕ ಕಲ್ಯಾಣ ವ್ಯವಸ್ಥೆಯನ್ನು ಒದಗಿಸಿದೆ: ಶ್ರೀ ಗಂಗ್ವಾರ್
ಬಿಎಂಎಸ್ ಮತ್ತು ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವರು
Posted On:
03 OCT 2020 6:22PM by PIB Bengaluru
ಹೊಸ ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಸುಧಾರಣಾ ಕಾನೂನುಗಳು ರೈತರಿಗೆ ಮತ್ತು ಕಾರ್ಮಿಕರಿಗೆ ಅಪಾರ ಪ್ರಯೋಜನವನ್ನು ನೀಡುತ್ತವೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಶ್ರೀ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.
ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಚಿವರು, ಎನ್‌ಡಿಎ ಸರ್ಕಾರದ ರೈತಪರ ಉಪಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಯುಪಿಎ ಆಡಳಿತಾವಧಿಯ 2009-10ರಲ್ಲಿದ್ದ ಕೃಷಿ ಬಜೆಟ್ ಅನ್ನು ಈಗ 11 ಪಟ್ಟು ಹೆಚ್ಚಿಸಲಾಗಿದ್ದು, 1.34 ಲಕ್ಷ ಕೋಟಿ ರೂ.ಗೆ ಏರಿಕಯಾಗಿದೆ. ಇದು ದೇಶದ ರೈತರ ಕಲ್ಯಾಣಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಹೊಸ ಕೃಷಿ ಕಾನೂನುಗಳು ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತವೆ. ರೈತರು ಈಗ ತಮ್ಮ ಉತ್ಪನ್ನಗಳನ್ನು ಇತರ ರಾಜ್ಯಗಳಲ್ಲಿಯೂ ಉತ್ತಮ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದು ಶ್ರೀ ಗಂಗ್ವಾರ್ ಒತ್ತಿ ಹೇಳಿದರು. ಯುಪಿಎ ಆಡಳಿತಗಳಿಗೆ ಹೋಲಿಸಿದರೆ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿವೆ ಎಂದ ಅವರು, ಕನಿಷ್ಠ ಬೆಂಬಲ ಬೆಲೆ ರದ್ದುಪಡಿಸುವುದಿಲ್ಲ, ಈ ಬಗ್ಗೆ ಆತಂಕ ಬೇಡ ಎಂದರು.
ಪಿಎಚ್‌ಡಿ ಚೇಂಬರ್ಸ್ ಆಫ್ ಕಾಮರ್ಸ್ ಸಭೆಯಲ್ಲಿ ಮತ್ತು ನಂತರ ನಡೆದ ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಸಮ್ಮೇಳನದಲ್ಲಿ ಕಾರ್ಮಿಕರಿಗೆ ಪ್ರಮುಖ ಕಾರ್ಮಿಕ ಸಂಹಿತೆಗಳಿಂದಾಗುವ ಪ್ರಯೋಜನಗಳ ಬಗ್ಗೆ ಶ್ರೀ ಗಂಗ್ವಾರ್ ಮಾತನಾಡಿದರು. ಈ ಸುಧಾರಣೆಗಳು ಮುಂದಿನ ದಿನಗಳಲ್ಲಿ ಕಾರ್ಮಿಕರು ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಮೂರು ಕಾರ್ಮಿಕ ಸಂಹಿತೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ಅವರು ಹೇಳಿದರು.
ಕಾರ್ಮಿಕರ ಕಲ್ಯಾಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವುದರ ಜೊತೆಗೆ ಈ ಕಾರ್ಮಿಕ ಸಂಹಿತೆಗಳು ಸುಲಭ ವ್ಯವಹಾರಕ್ಕೂ ಸಹಾಯ ಮಾಡುತ್ತದೆ ಮತ್ತು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಉದ್ಯಮ ಮತ್ತು ಕಾರ್ಮಿಕರು ಪರಸ್ಪರ ಪೂರಕವಾಗಿ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಸಚಿವರು ಹೇಳಿದರು.
ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಅಂತಿಮ ಗುರಿಯನ್ನು ಸಾಧಿಸಲು ಸರ್ಕಾರಕ್ಕೆ ಬೆಂಬಲ ನೀಡುವಂತೆ ಅವರು ಉದ್ಯಮದ ಮುಖಂಡರಿಗೆ ಮನವಿ ಮಾಡಿದರು.
ಉದ್ಯಮಗಳ ಬೆಳವಣಿಗೆ ಮತ್ತು ವಿಸ್ತರಣೆಯು ಉದ್ಯೋಗ ಸೃಷ್ಟಿಯಲ್ಲಿ ಏರಿಕೆಗೆ ಸಹಕಾರಿಯಾಗಿದೆ ಮತ್ತು ಕೆಲಸದ ಸ್ಥಿತಿಯನ್ನು ಸುಧಾರಿಸಿದೆ ಎಂದು ಅವರು ಒತ್ತಿಹೇಳಿದರು. ಸಾರ್ವತ್ರಿಕ ಮತ್ತು ಕಡ್ಡಾಯ ಕನಿಷ್ಠ ವೇತನ, ಸಮಾನ ವೇತನ ಮತ್ತು ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶಗಳು, ನೇಮಕಾತಿ ಪತ್ರಗಳನ್ನು ಕಡ್ಡಾಯಗೊಳಿಸುವುದು, ಇಪಿಎಫ್ ಮತ್ತು ಐಎಸ್ಐಸಿಯ ಸಾಮಾಜಿಕ ಭದ್ರತಾ ಜಾಲವನ್ನು ದೇಶದ ವ್ಯಾಪಕ ಎಲ್ಲ ಕಾರ್ಮಿಕರಿಗೆ ಮುಕ್ತಗೊಳಿಸುವುದು, ಜಿಐಜಿ, ಪ್ಲಾಟ್‌ಫಾರ್ಮ್ ಮತ್ತು ಪ್ಲಾಂಟೇಶನ್ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಯಲ್ಲಿ ತರುವುದು ಮುಂತಾದ ಉಪಕ್ರಮಗಳ ಬಗ್ಗೆ ಸಚಿವರು ಉಲ್ಲೇಖಿಸಿದರು.
ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ನಿಧಿ, ಉದ್ಯೋಗ ಕಳೆದುಕೊಳ್ಳುವವರಿಗಾಗಿ ಮರು ಕೌಶಲ್ಯ ನಿಧಿ, ವಲಸೆ ಕಾರ್ಮಿಕರ ವ್ಯಾಪಕ ವ್ಯಾಖ್ಯಾನ ಮತ್ತು ಕಲ್ಯಾಣ ಯೋಜನೆಗಳ ಉತ್ತಮ ಅನುಷ್ಠಾನಕ್ಕಾಗಿ ಅವರ ದತ್ತಾಂಶ ಸಂಗ್ರಹಣೆ ಮುಂತಾದ ಉಪಕ್ರಮಗಳ ಪ್ರಯೋಜನಗಳನ್ನು ಸಚಿವರು ವಿವರಿಸಿದರು. 73 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಇದ್ದ ಕೆಲವು ಪುರಾತನ ಕಾನೂನುಗಳಿಗೆ ಸುಧಾರಣೆಯ ಅವಶ್ಯಕತೆ ಇತ್ತು. ಈ ಸುಧಾರಣೆಗಳು ಮಹತ್ವದ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ಅವರು ಒತ್ತಿ ಹೇಳಿದರು. ಒಂದು ನೋಂದಣಿ, ಒಂದು ಪರವಾನಗಿ ಮತ್ತು ಮೊದಲಿದ್ದ ಬಹುಸಂಖ್ಯೆಯ ರಿಟರ್ನ್ ಬದಲು ಒಂದೇ ರಿಟರ್ನ್ ಹೊಂದುವ ಮೂಲಕ ವ್ಯವಹಾರವನ್ನು ಸುಲಭಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಸಚಿವರು ಹೇಳಿದರು. ಈ ಸಂಹಿತೆಗಳನ್ನು ಅಂತಿಮಗೊಳಿಸುವ ಮೊದಲು ಎಲ್ಲಾ ಪಾಲುದಾರರೊಂದಿಗೆ ವ್ಯಾಪಕವಾಗಿ ಸಮಾಲೋಚನೆ ನಡೆಸಲಾಯಿತು ಎಂದು ಶ್ರೀ ಗಂಗ್ವಾರ್ ಹೇಳಿದರು. ಇದುವರೆಗೆ ಇವುಗಳ ವ್ಯಾಪ್ತಿಯಲ್ಲಿ ಬಾರದೆ ಉಳಿದಿದ್ದ ಹಾಗೂ ಈಗಾಗಲೇ ಇದರಡಿಯಲ್ಲಿರುವ ಕೋಟ್ಯಂತರ ಜನರಿಗೆ ಐತಿಹಾಸಿಕ ಪ್ರಯೋಜನಗಳನ್ನು ಒದಗಿಸುವ ಈ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚಿಸದಿರಲು ಪ್ರತಿಪಕ್ಷಗಳು ನಿರ್ಧರಿಸಿದ್ದವು ಎಂದು ಅವರು ವಿಷಾದಿಸಿದರು.
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪಿಂಚಣಿ ಯೋಜನೆ, ಪಿಎಂ ಶ್ರಮಯೋಗಿ ಮಾನ್ ಧನ್, ಮಾತೃತ್ವ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸುವುದು, ಪೋರ್ಟಬಿಲಿಟಿ ಮತ್ತು ಇಪಿಎಫ್ ಮತ್ತು ಇಎಸ್ಐಸಿ ಸೇವೆಗಳ ವಿಸ್ತರಣೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅಧಿಕಾರ ನೀಡುವುದು ಮುಂತಾದ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಳೆದ ವರ್ಷ ಜಾರಿಗೆ ಬಂದ ವೇತನದ ಸಂಹಿತೆಯಲ್ಲದೆ, ಇನ್ನೂ 3 ಪ್ರಮುಖ ಸಂಹಿತೆಗಳಾದ ಸಾಮಾಜಿಕ ಭದ್ರತೆ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆಯನ್ನು ಸಂಸತ್ತು ಇತ್ತೀಚೆಗೆ ಅಂಗೀಕರಿಸಿತ್ತು ಮತ್ತು ಅವುಗಳನ್ನು ಈಗ ಜಾರಿಗೆ ತರಲಾಗಿದೆ.
***
(Release ID: 1661409)
Visitor Counter : 137