ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವದ ಅತಿ ಉದ್ದದ ಹೆದ್ದಾರಿ, ಅಟಲ್ ಸುರಂಗ ಉದ್ಘಾಟಿಸಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
Posted On:
01 OCT 2020 1:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಅಕ್ಟೋಬರ್ 3ರಂದು ಬೆಳಗ್ಗೆ 10 ಗಂಟೆಗೆ ರೋಹ್ಟಂಗ್ ನಲ್ಲಿ ವಿಶ್ವದ ಅತಿ ಉದ್ದದ ಹೆದ್ದಾರಿ, ಅಟಲ್ ಸುರಂಗವನ್ನು ಉದ್ಘಾಟಿಸಲಿದ್ದಾರೆ.
ಅಟಲ್ ಸುರಂಗವು ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿಯ ಸುರಂಗವಾಗಿದೆ. 9.02 ಕಿ.ಮೀ ಉದ್ದದ ಈ ಸುರಂಗ ಮನಾಲಿಯಿಂದ ಲಹೌಲ್ –ಸ್ಪಿತಿ ಕಣಿಯನ್ನು ವರ್ಷವಿಡೀ ಸಂಪರ್ಕಿಸಲಿದೆ. ಈ ಮುನ್ನ ಭಾರೀ ಹಿಮವರ್ಷದ ಕಾರಣ 6 ತಿಂಗಳುಗಳ ಕಾಲ ಕಣಿವೆಯ ಸಂಪರ್ಕ ಕಡಿತವಾಗುತ್ತಿತ್ತು.
ಈ ಸುರಂಗವನ್ನು ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಅತ್ಯಾಧುನಿಕ ವಿಶೇಷಣ (ಅಲ್ಟ್ರಾ ಮಾಡರ್ನ್ ಸ್ಪೆಸಿಫಿಕೇಷನ್ಸ್) ಗಳೊಂದಿಗೆ ನಿರ್ಮಿಸಲಾಗಿದ್ದು, ಇದನ್ನು ಸಮುದ್ರ ಮಟ್ಟದಿಂದ ಸರಾಸರಿ (ಎಂಎಸ್ಎಲ್) 3000 ಮೀಟರ್ (10,000 ಅಡಿ) ಎತ್ತರದಲ್ಲಿ ನಿರ್ಮಿಸಲಾಗಿದೆ.
ಈ ಸುರಂಗಮಾರ್ಗವು ಮನಾಲಿ ಮತ್ತು ಲೆಹ್ ನಡುವಿನ ಅಂತರವನ್ನು 46 ಕಿ.ಮೀ. ತಗ್ಗಿಸಲಿದ್ದು, 4ರಿಂದ 5 ಗಂಟೆಗಳ ಸಮಯ ಉಳಿತಾಯವಾಗಲಿದೆ.
ಅಟಲ್ ಸುರಂಗದ ದಕ್ಷಿಣ ಭಾಗ (ಎಸ್.ಪಿ.)ದಲ್ಲಿ ಮನಾಲಿಯಿಂದ 25 ಕಿ.ಮೀ. ದೂರದಲ್ಲಿ, 3060 ಮೀಟರ್ ಎತ್ತರದಲ್ಲಿದ್ದರೆ, ಉತ್ತರದ ಭಾಗ (ಎನ್.ಪಿ.)ದ ಸುರಂಗವು ಲಹೌಲ್ ಕಣಿವೆಯ ಸಿಸ್ಸು, ತೆಲಿಂಗ್ ಗ್ರಾಮದ ಬಳಿಯಿದ್ದು 3071 ಮೀಟರ್ ಎತ್ತರದಲ್ಲಿದೆ. ಇದು ಕುದುರೆಯ ಲಾಳದ ಆಕಾರದಲ್ಲಿರುವ, ಏಕ ಕೊಳವೆಯ ದ್ವಿಪಥ ಮಾರ್ಗದ ಸುರಂಗವಾಗಿದ್ದು, 8 ಮೀಟರ್ ರಸ್ತೆ ಮಾರ್ಗ ಒಳಗೊಂಡಿದೆ. ಇದರ ಎತ್ತರ 5.525 ಮೀಟರ್ ಎತ್ತರದವರೆಗಿನ ವಾಹನಗಳ ಸ್ಪಷ್ಟ ಓಡಾಟಕ್ಕೆ ಅವಕಾಶವಿದೆ.
ಇದು 10.5 ಮೀಟರ್ ಅಗಲವಿದ್ದು, ಮುಖ್ಯ ಸುರಂಗದಲ್ಲಿ 3.6 x 2.25 ಮೀಟರ್ ಅಗ್ನಿನಿರೋಧಕ ತುರ್ತು ನಿರ್ಗಮನದ ಸುರಂಗವನ್ನೂ ಒಳಗೊಂಡಿದೆ.
ಅಟಲ್ ಸುರಂಗವನ್ನು 3000 ಕಾರುಗಳು ಮತ್ತು 1500 ಟ್ರಕ್ ಗಳು ಪ್ರತಿನಿತ್ಯ ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ ಓಡಾಡಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ.
ಇದು ಸುಸಜ್ಜಿತ ಎಲೆಕ್ಟ್ರೋ ಮೆಕ್ಯಾನಿಕಲ್ ವ್ಯವಸ್ಥೆ ಹೊಂದಿದ್ದು, ಇದರಲ್ಲಿ ಸೆಮಿ ಟ್ರಾನ್ಸ್ ವರ್ಸ್ ವಾತಾಯನ ವ್ಯವಸ್ಥೆ, ಎಸ್.ಸಿ.ಎ.ಡಿ.ಎ. ನಿಯಂತ್ರಿತ ಅಗ್ನಿಶಾಮಕ ಹೋರಾಟ ವ್ಯವಸ್ಥೆ, ಪ್ರಕಾಶಮಾನ ಬೆಳಕು ಮತ್ತು ನಿಗಾ ವ್ಯವಸ್ಥೆಯೂ ಸೇರಿದೆ.
ಸುರಂಗವು ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೆಲವು ಪ್ರಮುಖ ಸುರಕ್ಷತಾ ಲಕ್ಷಣಗಳು ಈ ಕೆಳಗಿನಂತಿವೆ:
(ಎ) ಸುರಂಗದ ಎರಡೂ ಬದಿಗಳಲ್ಲಿ ಪ್ರವೇಶ ನಿರ್ಬಂಧ.
(ಬಿ) ತುರ್ತು ಸಂವಹನಕ್ಕಾಗಿ ಪ್ರತಿ 150 ಮೀಟರಿಗೊಂದರಂತೆ ದೂರವಾಣಿ ಸಂಪರ್ಕಗಳು.
(ಸಿ) ಪ್ರತಿ 60 ಮೀಟರಿಗೊಂದರಂತೆ ಅಗ್ನಿಶಾಮಕ ವ್ಯವಸ್ಥೆಗಳು.
(ಡಿ) ಪ್ರತಿ 250 ಮೀಟರ್ ಗೆ ಒಂದರಂತೆ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಘಟನೆಯ ಸ್ವಯಂ ಪತ್ತೆ ವ್ಯವಸ್ಥೆ.
(ಇ) ಪ್ರತಿ 1 ಕಿ.ಮೀನಲ್ಲಿ ವಾಯು ಗುಣಮಟ್ಟದ ನಿಗಾ.
(ಎಫ್) ಪ್ರತಿ 25 ಮೀಟರ್ ನಲ್ಲಿ ಸ್ಥಳಾಂತರಿಸಬಹುದಾದ ದೀಪ / ನಿರ್ಗಮನ ಚಿಹ್ನೆಗಳು.
(ಜಿ) ಸುರಂಗದುದ್ದಕ್ಕೂ ಪ್ರಸಾರ ವ್ಯವಸ್ಥೆ.
(ಎಚ್) ಪ್ರತಿ 50 ಮೀಟರ್ ನಲ್ಲಿ ಫೈರ್ ರೇಟೆಡ್ ಡ್ಯಾಂಪರ್ ಗಳು.
(ಐ) ಪ್ರತಿ 60 ಮೀಟರ್ ಗೆ ಒಂದು ಕ್ಯಾಮರಾ.
ರೋಹ್ಟಾಂಗ್ ಪಾಸ್ ಕೆಳಗೆ ವ್ಯೂಹಾತ್ಮಕ ಸುರಂಗವನ್ನು ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು 2000ದ ಜೂನ್ 03, ರಂದು ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ತೆಗೆದುಕೊಳ್ಳಲಾಗಿತ್ತು. 2002ರ ಮೇ 26, ರಂದು ಸುರಂಗದ ದಕ್ಷಿಣ ಭಾಗದ ಪ್ರವೇಶ ರಸ್ತೆಗೆ ಅಡಿಪಾಯ ಹಾಕಲಾಯಿತು.
587 ಮೀಟರ್ ಸೆರಿ ನಲ್ಹಾ ಫಾಲ್ಟ್ ವಲಯದಂಥ ಅತ್ಯಂತ ದುರ್ಗಮ ಪ್ರದೇಶವನ್ನು ಒಳಗೊಂಡಿರುವ ಪ್ರಮುಖ ಭೌಗೋಳಿಕ, ಭೂಪ್ರದೇಶ ಮತ್ತು ಹವಾಮಾನ ಸವಾಲುಗಳನ್ನು ಎದುರಿಸಿದ ಗಡಿ ರಸ್ತೆ ಸಂಸ್ಥೆ (ಬಿಆರ್.ಓ) ಪಟ್ಟುಬಿಡದೆ ಕೆಲಸ ಮಾಡಿತು. 2017ರ ಅಕ್ಟೋಬರ್ 15ರಂದು ಎರಡೂ ತುದಿಗಳನ್ನು ಛೇದಿಸಿದ ಪ್ರಗತಿಯನ್ನು ಸಾಧಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 2019ರ ಡಿಸೆಂಬರ್ 24ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರೋಹ್ಟಂಗ್ ಸುರಂಗಕ್ಕೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ ಕೊಡುಗೆಗೆ ಗೌರವ ಸಲ್ಲಿಸಲು ಅಟಲ್ ಸುರಂಗ ಎಂದು ನಾಮಕರಣ ಮಾಡಲು ನಿರ್ಧರಿಸಿತು.
ಮನಾಲಿಯ ದಕ್ಷಿಣ ತುದಿಯಲ್ಲಿ ಅಟಲ್ ಸುರಂಗದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸೋಲಾಂಗ್ ಕಣಿವೆಯ ಲಾಹೂಲ್ ಸ್ಪಿತಿಯ ಸಿಸ್ಸುವಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
***
(Release ID: 1660631)
Visitor Counter : 275
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam