ಪ್ರಧಾನ ಮಂತ್ರಿಯವರ ಕಛೇರಿ

ಎನ್‌ಸಿಆರ್ ಪ್ರದೇಶದಲ್ಲಿ ವಾಯುಮಾಲಿನ್ಯದ ನಿರ್ವಹಣೆಗಾಗಿ ಪ್ರಧಾನಿ ಕಾರ್ಯಾಲಯ ನೇತೃತ್ವದ ಸಮಿತಿಯಿಂದ ಕಾರ್ಯ ಯೋಜನೆ

Posted On: 19 SEP 2020 6:32PM by PIB Bengaluru

• ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ ಕೆ ಮಿಶ್ರಾ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆಯು 18.09.2020 ರಂದು ಸಭೆ ನಡೆಸಿ ಮುಂಬರುವ ಕೊಯ್ಲು ಹಂಗಾಮಿಗಾಗಿ ಯೋಜನೆಗಳು ಮತ್ತು ಏಜೆನ್ಸಿಗಳು ಕೈಗೊಂಡ ಕ್ರಮಗಳನ್ನು  ಪರಿಶೀಲಿಸಿತು

• ಬೆಳೆಗಳ ಅವಶೇಷಗಳನ್ನು ಸುಡುವುದನ್ನು ತಡೆಯುವುದು ಮತ್ತು ಇತರ ಉಪಕ್ರಮಗಳ ಬಗ್ಗೆ ಸಮಯೋಚಿತ ಕ್ರಮವನ್ನು ಖಚಿತಪಡಿಸಲು ಸಭೆಯನ್ನು ಮುಂಚೆಯೇ ನಡೆಸಲಾಗುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿಯವರು ಸಭೆಯಲ್ಲಿ ಸದಸ್ಯರಿಗೆ ತಿಳಿಸಿದರು. 

• ನೆರೆಯ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ಬೆಳೆಯ ಅವಶೇಷಗಳನ್ನು ಸುಡುವ ಘಟನೆಗಳು ಕಳೆದ ವರ್ಷ ಹೆಚ್ಚಾಗಿಯೇ ಇದ್ದವು ಎಂಬುದನ್ನು ಒಟ್ಟಾರೆ ಪರಿಸ್ಥಿತಿಯನ್ನು ಪರಿಶೀಲಿಸುವಾಗ ಗಮನಿಸಲಾಯಿತು. ಬೆಳೆಗಳ ಅವಶೇಷಗಳನ್ನು ಸುಡುವುದನ್ನು ತಡೆಗಟ್ಟಲು ಯೋಜಿತ ಕ್ರಮಗಳನ್ನು ತೀವ್ರಗೊಳಿಸಲು ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರು ಹಲವಾರು ನಿರ್ದೇಶನಗಳನ್ನು ನೀಡಿದರು.

ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್) ದಲ್ಲಿ ವಾಯು ಗುಣಮಟ್ಟವನ್ನು ಸುಧಾರಿಸಲು ರಚಿಸಲಾದ ಉನ್ನತ ಮಟ್ಟದ ಕಾರ್ಯಪಡೆಯ ಸಭೆಯು ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅಧ್ಯಕ್ಷತೆಯಲ್ಲಿ ನಡೆಯಿತು. ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗಳು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಕೃಷಿ, ರಸ್ತೆ, ಪೆಟ್ರೋಲಿಯಂ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆ / ಸಚಿವಾಲಯಗಳ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಾಯುಮಾಲಿನ್ಯದ ಕಾರಣಗಳನ್ನು ಎದುರಿಸಲು ಸರಿಯಾದ ಮುನ್ನೆಚ್ಚರಿಕೆ ಮತ್ತು ತಡೆಗಟ್ಟುವ ಕ್ರಮಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕೊಯ್ಲು ಮತ್ತು ಚಳಿಗಾಲದ ಆರಂಭಕ್ಕೂ ಮೊದಲೇ ಸಭೆಯನ್ನು ಕರೆಯಲಾಗಿದೆ ಎಂದು ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಹೇಳಿದರು.

ವಾಯುಮಾಲಿನ್ಯದ ಮುಖ್ಯ ಮೂಲಗಳು ಮತ್ತು ರಾಜ್ಯ ಸರ್ಕಾರಗಳು ಮತ್ತು ವಿವಿಧ ಸಚಿವಾಲಯಗಳು ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಕಳೆದ ಎರಡು ವರ್ಷಗಳಲ್ಲಿ ಬೆಳೆಗಳ ಅವಶೇಷಗಳನ್ನು ಸುಡುವಿಕೆಯು ಶೇ. 50 ರಷ್ಟು ಕಡಿಮೆಯಾಗಿರುವುದು ಮತ್ತು ಉತ್ತಮ ಎಕ್ಯೂಐ ದಿನಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಗಮನಿಸಲಾಯಿತು.

ಬೆಳೆ ಅವಶೇಷಗಳ ಸ್ಥಳ ನಿರ್ವಹಣೆಗೆ ನಿಯೋಜನೆ ಮತ್ತು ಯಂತ್ರೋಪಕರಣಗಳ ಲಭ್ಯತೆ ಸೇರಿದಂತೆ.ಬೆಳೆಯ ಅವಶೇಷಗಳನ್ನು ಸುಡುವುದನ್ನು ನಿಯಂತ್ರಿಸಲು ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಮಾಡಿರುವ ಪ್ರಯತ್ನಗಳು ಮತ್ತು ಯೋಜನೆಯನ್ನು ವಿವರವಾಗಿ ಪರಿಶೀಲಿಸಲಾಯಿತು, 

ಭಾರತೀಯ ರಿಸರ್ವ್ ಬ್ಯಾಂಕ್ ನ ಆದ್ಯತೆಯ ವಲಯದ ಸಾಲದ ಅಡಿಯಲ್ಲಿ ತ್ಯಾಜ್ಯ ಆಧಾರಿತ ವಿದ್ಯುತ್ / ಇಂಧನ ಘಟಕಗಳನ್ನು ಇತ್ತೀಚೆಗೆ ಸೇರಿಸಿದ ನಂತರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಇಂತಹ ಘಟಕಗಳನ್ನು ಶೀಘ್ರವಾಗಿ ಆರಂಭಿಸಲು ಕ್ರಿಯಾ ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಲಾಯಿತು. ಬೆಳೆಯ ವೈವಿಧ್ಯೀಕರಣ ಮತ್ತು ಪೂರೈಕೆ ಸರಪಳಿಗಳ ಬಲವರ್ಧನೆಗೆ ಸಂಬಂಧಿಸಿದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.

ರಾಜ್ಯಗಳ ಕೃಷಿ ಸಚಿವಾಲಯದ ಬೆಳೆ ಅವಶೇಷ ಯೋಜನೆಯ ಸ್ಥಳ ನಿರ್ವಹಣೆಯ ಪರಿಣಾಮಕಾರಿ ಅನುಷ್ಠಾನದ ಮಹತ್ವವನ್ನು ಪ್ರಧಾನ ಕಾರ್ಯದರ್ಶಿಯವರು ತಿಳಿಸಿದರು ಮತ್ತು ಪ್ರಸಕ್ತ ವರ್ಷದಲ್ಲಿ ನಿಯೋಜಿಸಬೇಕಾದ ಹೊಸ ಯಂತ್ರೋಪಕರಣಗಳು ಕೊಯ್ಲು ಹಂಗಾಮಿಗೂ ಮೊದಲು ರೈತರನ್ನು ತಲುಪುವಂತೆ ರಾಜ್ಯ ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವಂತೆ ಕೃಷಿ ಸಚಿವಾಲಯಕ್ಕೆ ನಿರ್ದೇಶನ ನೀಡಲಾಯಿತು.

ಬೆಳೆಯ ಅವಶೇಷಗಳನ್ನು ಸುಡುವಿಕೆಯನ್ನು ನಿಯಂತ್ರಿಸಲು, ಸಾಕಷ್ಟು ಸಂಖ್ಯೆಯ ತಂಡಗಳನ್ನು ನಿಯೋಜಿಸಬೇಕು ಮತ್ತು ವಿಶೇಷವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಯಾವುದೇ ಸುಡುವಿಕೆ ನಡೆಯದಂತೆ ನೋಡಿಕೊಳ್ಳಬೇಕು. ಈ ರಾಜ್ಯಗಳಲ್ಲಿ ವಿಶೇಷವಾಗಿ ಸಂಬಂಧಿತ ಜಿಲ್ಲೆಗಳಲ್ಲಿ ಹೆಚ್ಚುವರಿ ಪ್ರಯತ್ನಗಳು ಮತ್ತು ಸೂಕ್ತ ಪ್ರೋತ್ಸಾಹಗಳನ್ನು ನೀಡಬೇಕಾಗಿದೆ ಎಂದು ತಿಳಿಸಲಾಯಿತು.

ಸ್ಥಳೀಯ ಮಾಲಿನ್ಯ ಮೂಲಗಳನ್ನು ನಿಯಂತ್ರಿಸುವ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಜಿಎನ್‌ಸಿಟಿ-ದೆಹಲಿ ಸರ್ಕಾರವನ್ನು ಕೋರಲಾಯಿತು. ತ್ಯಾಜ್ಯವನ್ನು ಮುಕ್ತವಾಗಿ ಸುಡುವುದು, ಯಾಂತ್ರಿಕ ರಸ್ತೆ ಸ್ವಚ್ಛಕಾರಕಗಳ ಐಟಿ-ಬೆಂಬಲಿತ ಮೇಲ್ವಿಚಾರಣೆ, ನಿರ್ಮಾಣ ಮತ್ತು ಕೆಡವಿದ ತ್ಯಾಜ್ಯಗಳ ಬಳಕೆಯಲ್ಲಿ ಸುಧಾರಣೆ ಮತ್ತು ಗುರುತಿಸಲಾದ ಹಾಟ್‌ ಸ್ಪಾಟ್‌ಗಳಿಗಾಗಿ ಪ್ರದೇಶ ನಿರ್ದಿಷ್ಟ ಕ್ರಿಯಾ ಯೋಜನೆಯ ಅನುಷ್ಠಾನಕ್ಕೆ ತಂಡಗಳ ನಿಯೋಜನೆಗೆ ವಿಶೇಷ ಒತ್ತು ನೀಡಬೇಕು ಎಂದು ಪ್ರಧಾನ ಕಾರ್ಯದರ್ಶಿಯವರು ತಿಳಿಸಿದರು. ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಎನ್‌ಸಿಆರ್ ಅಡಿಯಲ್ಲಿ ಬರುವ ಪ್ರದೇಶದಲ್ಲಿ ಇದೇ ರೀತಿಯ ಪ್ರದೇಶ ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಕಾರ್ಯಗತಗೊಳಿಸಲು ನಿರ್ಧರಿಸಲಾಯಿತು.

ಪರಿಸ್ಥಿತಿಯು ತೀವ್ರವಾಗುವ ಮೊದಲೇ ಉದ್ದೇಶಿತ ಕ್ರಮಗಳನ್ನು ಸಮರ್ಥವಾಗಿ ಜಾರಿಗೆ ತರಬೇಕು ಮತ್ತು ಸ್ಯಾಟಲೈಟ್ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಗಳು ಹೊರಸೂಸುವಿಕೆ ಮಾನದಂಡಗಳನ್ನು ಪಾಲಿಸುತ್ತಿರುವ  ಬಗ್ಗೆಯೂ ಗಮನಹರಿಸಬೇಕು ಎಂದು ಪ್ರಧಾನ ಕಾರ್ಯದರ್ಶಿಯವರು ಒತ್ತಿ ಹೇಳಿದರು.

***



(Release ID: 1656747) Visitor Counter : 197