ಹಣಕಾಸು ಸಚಿವಾಲಯ
ಜಮ್ಮು-ಕಾಶ್ಮೀರದಲ್ಲಿ ಐಟಿ ದಾಳಿ - ಪ್ರಮುಖ ದಾಖಲೆ ಪತ್ರಗಳ ವಶ
ಪ್ರಕಟಣಾ ದಿನಾಂಕ:
17 SEP 2020 1:10PM by PIB Bengaluru
ಜಮ್ಮು-ಕಾಶ್ಮೀರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೋಟೆಲ್ ಉದ್ಯಮಿಯೊಬ್ಬರ ಕಚೇರಿಗಳು ಮತ್ತು ಮನೆ ಮೇಲೆ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ. ಶ್ರೀನಗರ, ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಪಹಲ್ಗಾಂಗಳಲ್ಲಿ ಸರಣಿ ಹೋಟೆಲ್‍ಗಳು ಮತ್ತು ಲ್ಹೇನಲ್ಲಿ ನಿರ್ಮಾಣ ಹಂತದಲ್ಲಿರುವ ಹೋಟೆಲ್ ಮೇಲೆ ಶೋಧ ಕಾರ್ಯಾಚರಣೆ ನಡೆದಿದೆ.
ಹೋಟೆಲ್‍ಗಳು ಮತ್ತು ಮನೆಗಳ ನಿರ್ಮಾಣ, ಸ್ಥಿರಾಸ್ತಿ ಸೇರಿದಂತೆ ವಿವಿಧೆಡೆ ಮಾಡಿರುವ ಅಪಾರ ಹೂಡಿಕೆಗೆ ಸಂಬಂಧಿಸಿದ ದಾಖಲೆ ಪತ್ರಗಳು ಮತ್ತು ಸಾಕ್ಷ್ಯಾಧಾರವಿರುವ ನಾನಾ ವಸ್ತುಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ನಾನಾ ಮೂಲಗಳಲ್ಲಿ ಮಾಡಿರುವ ಹೂಡಿಕೆ ಮೊತ್ತದ ಸುಮಾರು 25 ಕೋಟಿ ರೂ. ಮೌಲ್ಯದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಉದ್ಯಮಿ 2014-15ರಿಂದಲೂ ನಯಾಪೈಸೆ ತೆರಿಗೆ ಪಾವತಿಸದಿರುವುದು ಪತ್ತೆಯಾಗಿದೆ. ಆತ ಮಾಡಿರುವ ಬಹುತೇಕ ಹೂಡಿಕೆ ನಗದು ರೂಪದಲ್ಲಿದೆ. ಅಧಿಕೃತ ಆದಾಯ ಮೂಲ ಪತ್ತೆಯಾಗಿಲ್ಲ. ಕಳೆದ 2 ವರ್ಷಗಳಲ್ಲಿ ಕೆಲವು ವ್ಯಕ್ತಿಗಳಿಂದ 25 ಕೋಟಿ ರೂ. ಸಾಲ ಪಡೆರುವ ರಸೀದಿಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ನಿಖರ ಮೂಲಗಳಿಂದ ಈ ಸಾಲಗಳನ್ನು ಪಡೆದಿರುವುದು ಖಾತ್ರಿಯಾಗಿಲ್ಲ. ಇವೆಲ್ಲಾ ಅನುಮಾನಾಸ್ಪದ ವಹಿವಾಟುಗಳೆಂದು ತೋರುತ್ತಿವೆ.
ಹೋಟೆಲ್ ಉದ್ಯಮಿಯ ಮಕ್ಕಳು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರಿಗೆ ವಾರ್ಷಿಕ ಸುಮಾರು 25 ಲಕ್ಷ ರೂಪಾಯಿ ಖರ್ಚು ವೆಚ್ಚ ಮಾಡಲಾಗುತ್ತಿದೆ. ಆದರೆ ಮಕ್ಕಳ ವ್ಯಾಸಂಗ ವೆಚ್ಚ ಕುರಿತು ಯಾವುದೇ ನಿಖರ ದಾಖಲೆಗಳಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ, ಈ ಉದ್ಯಮಿಯು ತಾಯಿ ಜತೆಗೂಡಿ ಟ್ರಸ್ಟ್ ಹೆಸರಿನಲ್ಲಿ ಬಿ.ಎಡ್ ಕಾಲೇಜು ನಡೆಸುತ್ತಿದ್ದಾರೆ. ಆದರೆ ಟ್ರಸ್ಟ್ ನೋಂದಣಿ ಆಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ತೆರಿಗೆ ಪಾವತಿಸಬೇಕಾದ ಹೆಚ್ಚಿನ ಆದಾಯ ಹೊಂದಿರುವ ಈ ಕಾಲೇಜಿನಲ್ಲಿ ನಡೆಯುತ್ತಿರುವ ಆದಾಯ ವಹಿವಾಟಿನ ಕುರಿತು ಐಟಿ ಇಲಾಖೆಗೆ ಆದಾಯ ವಿವರ ಒದಗಿಸಿಲ್ಲ. ವಾಸದ ಮನೆ ನವೀಕರಣಕ್ಕೆ 40 ಲಕ್ಷ ರೂಪಾಯಿ ವೆಚ್ಚ ಮಾಡಿರುವುದಾಗಿ ಉದ್ಯಮಿ ಒಪ್ಪಿಕೊಂಡಿದ್ದಾರೆ. ಐಟಿ ಅಧಿಕಾರಿಗಳು ತನಿಖೆ ವೇಳೆ ಬ್ಯಾಂಕ್ ಲಾಕರ್ ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ.
ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶ್ರ್ರೀನಗರದಲ್ಲಿ ಚಿನ್ನಾಭರಣ ವ್ಯಾಪಾರಿಯ ಮಳಿಗೆ ಮತ್ತು ಮನೆಯ ಮೇಲೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಹಿಂದಿನ ವರ್ಷಗಳಲ್ಲಿ ವ್ಯಾಪಾರಿಯು 2 ಕೋಟಿ ರೂ.ನಿಂದ 10 ಕೋಟಿ ರೂ.ವರೆಗೆ ವಾರ್ಷಿಕ ವಹಿವಾಟು ನಡೆಸಿದ್ದರೂ, ಆದಾಯ ಮೂಲದ ಲೆಕ್ಕಪತ್ರ ನಿರ್ವಹಿಸದಿರುವುದು ಪತ್ತೆಯಾಗಿದೆ. ಅಲ್ಲದೆ, ಬ್ಯಾಂಕ್ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ಠೇವಣಿ ಹಣ ಇದ್ದರೂ ತೆರಿಗೆ ಇಲಾಖೆಗೆ ಆದಾಯ ವಿವರ ಘೋಷಿಸದಿರುವುದು ಬೆಳಕಿಗೆ ಬಂದಿದೆ. 2015-16ರಲ್ಲಿ ಶ್ರೀನಗರದಲ್ಲಿ 1.90 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮಾರಾಟ ಮಾಡಿರುವುದು ಪತ್ತೆಯಾಗಿದ್ದು, ಇದರ ಬಂಡವಾಳ ಗಳಿಕೆ ತೆರಿಗೆಯನ್ನು ಪಾವತಿಸಿಲ್ಲ. 2019-20ರ ಸಾಲಿನಲ್ಲಿ 16 ಲಕ್ಷ ರೂ. ಸಾಲ ರೂಪದ ನಗದು ಸ್ವೀಕೃತಿಯ ಬ್ಯಾಂಕ್ ದಾಖಲೆಗಳು ಪತ್ತೆಯಾಗಿವೆ. ಒಂದು ಮಳಿಗೆಯನ್ನು ಲೀಸ್‍ಗೆ ನೀಡಿದಾಗ ಪಡೆದಿರುವ ಹಣ ಇದಾಗಿದೆ. 1961ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 269ಎಸ್‍ಎಸ್ ಅಡಿ ನಿಯಮಗಳನ್ನು ಉಲ್ಲಂಘಿಸಿ ಈ ಎಲ್ಲಾ ವ್ಯವಹಾರಗಳು ನಡೆದಿವೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. 16 ಲಕ್ಷ ರೂ. ಸ್ವೀಕೃತಿ ಕುರಿತು ಚಿನ್ನಾಭರಣ ವ್ಯಾಪಾರಿ ಮತ್ತು ಭೋಗ್ಯದಾರ ಒಪ್ಪಿಕೊಂಡಿದ್ದಾರೆ. ಆದರೆ ಈ ವ್ಯವಹಾರದ ಆದಾಯ ವಿವರ ಘೋಷಿಸಿಲ್ಲ.
ಚಿನ್ನದ ವ್ಯಾಪಾರಿಯ ಪತ್ನಿ ಹೆಸರಿನಲ್ಲಿ 2019-20ರಲ್ಲಿ ದೆಹಲಿಯಲ್ಲಿ 33 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಮಾರಾಟ ಮಾಡಿರುವ ದಾಖಲೆ ಪತ್ರಗಳು ಸಿಕ್ಕಿವೆ. ಈ ವಹಿವಾಟಿನ ಬಂಡವಾಳ ಗಳಿಕೆ ತೆರಿಗೆ ಪಾವತಿಸಿಲ್ಲ. ಅಲ್ಲದೆ, ಈ ವಹಿವಾಟಿನಲ್ಲಿ 13 ಲಕ್ಷ ರೂ. ನಗದು ಸ್ವೀಕರಿಸಲಾಗಿದೆ. ಇದು 1961ರ ಐಟಿ ಕಾಯಿದೆಯ ಸೆಕ್ಷನ್ 269ಎಸ್‍ಎಸ್ ನಿಯಮ ಉಲ್ಲಂಘನೆಯಾಗಿದೆ. ಫ್ಲ್ಯಾಟ್ ಖರೀದಿದಾರರು ಸಹ ಖರೀದಿ ಮೊತ್ತದ ಆದಾಯ ಮೂಲ ಘೋಷಿಸದಿರುವುದು ಪತ್ತೆಯಾಗಿದೆ.
ಚಿನ್ನಾಭರಣ ವ್ಯಾಪಾರಿಯ ಪುತ್ರಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಈಕೆಯ ವ್ಯಾಸಂಗ ವೆಚ್ಚದ ವಿವರವನ್ನು ಐಟಿ ಇಲಾಖೆಗೆ ನೀಡಿಲ್ಲ. ಐಟಿ ಅಧಿಕಾರಿಗಳಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
***
(ಪ್ರಕಟಣೆ ಐ.ಡಿ.: 1655603)
ವಿಸಿಟರ್ ಕೌಂಟರ್ : 210