ಇಂಧನ ಸಚಿವಾಲಯ

ವಿದ್ಯುತ್ ಭಾರತದ ಭವಿಷ್ಯ: ಬಡವರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲು ಅಡುಗೆಗೆ ವಿದ್ಯುತ್ ಬಳಕೆಗೆ ಉತ್ತೇಜಿಸಲು ಯೋಜನೆ: ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್


ಕೇಂದ್ರ ಸಚಿವರಿಂದ ನಬಿನಗರದ ಎನ್ ಪಿಜಿಸಿಎಲ್ ನಲ್ಲಿ ಸೇವಾ ಕಟ್ಟಡ, ಬರ್ಹಾನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಬರೌನ್ ನ ಎನ್ ಟಿಪಿಸಿಯಲ್ಲಿ ಮುಖ್ಯ ಘಟಕದ ಕ್ಯಾಂಟೀನ್ ಉದ್ಘಾಟನೆ

ಈ ಎಲ್ಲಾ ಸೌಕರ್ಯಗಳಿಂದ ಎನ್ ಟಿಪಿಸಿ ಹಾಗೂ ಅದರ ಜೊತೆ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಅಗತ್ಯ ಸೇವೆ ಒದಗಿಸಿಕೊಡುವ ಗುರಿ ಮತ್ತು ಬಿಹಾರದಲ್ಲಿ ಘಟಕಗಳ ಸುತ್ತಮುತ್ತ ಇರುವ ಜನರ ಜೀವನಮಟ್ಟ ಸುಧಾರಣೆ ಉದ್ದೇಶ

Posted On: 13 SEP 2020 5:59PM by PIB Bengaluru

ಭಾರತ ಸರ್ಕಾರದ ಕೇಂದ್ರ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಖಾತೆ(ಸ್ವತಂತ್ರ ಹೊಣೆಗಾರಿಕೆ) ಸಚಿವ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಸಹಾಯಕ ಸಚಿವ  ಶ್ರೀ ಆರ್.ಕೆ ಸಿಂಗ್ ಅವರು ಇಂದು ಸಮಾಜದ ಕೆಳವರ್ಗದ ಬಡಜನರಿಗೆ ಪ್ರತಿ ದಿನದ ಅಗತ್ಯತೆಗಳಿಗೆ ಕಡಿಮೆ ಖರ್ಚಿನಲ್ಲಿ ಅನುಕೂಲವಾಗುವಂತೆ ಅಡುಗೆಗೆ ವಿದ್ಯುತ್ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು. ಆ ಮೂಲಕ ದೇಶವನ್ನು ಸ್ವಾವಲಂಬಿ ಮಾಡುವುದು ಹಾಗೂ ಆಮದಿನಿಂದ ಸ್ವತಂತ್ರಗೊಳಿಸುವ ಉದ್ದೇಶವಿದೆ ಎಂದರು. 

“ವಿದ್ಯುತ್ ಭಾರತದ ಭವಿಷ್ಯವಾಗಿದೆ. ಬಹುತೇಕ ಮೂಲಸೌಕರ್ಯ ವಿದ್ಯುತ್ ಕೇಂದ್ರಿತವಾಗಿರಲಿದೆ. ಸರ್ಕಾರ ಸಚಿವಾಲಯ ಮಟ್ಟದಲ್ಲಿ ವಿದ್ಯುತ್ ಫೌಂಡೇಷನ್ ಅನ್ನು ಸ್ಥಾಪಿಸಲು ಮುಂದಾಗಿದೆ. ಅದರ ಧ್ಯೇಯೋದ್ದೇಶ, ಅಡುಗೆಯನ್ನು ಸಂಪೂರ್ಣ ವಿದ್ಯುದೀಕರಿಸುವುದಾಗಿದೆ. ಇದರಿಂದ ನಮ್ಮ ಆರ್ಥಿಕತೆ ಸ್ವಾವಲಂಬಿಯಾಗಲಿದೆ ಮತ್ತು ಆಮದಿನಿಂದ ನಮಗೆ ಸ್ವಾತಂತ್ರ್ಯ ದೊರಕಲಿದೆ. ಈ ಸರ್ಕಾರ ಬಡವರ ಪರವಾಗಿದೆ ಮತ್ತು ಈ ಕ್ರಮದಿಂದಾಗಿ ಸಮಾಜದ ಕೆಳವರ್ಗದ ಬಡಜನರು ಕಡಿಮೆ ಖರ್ಚಿನಲ್ಲಿ ಅಡುಗೆ ಇಂಧನ ಪಡೆಯಲು ನೆರವಾಗಲಿದೆ” ಎಂದು ಶ್ರೀ ಸಿಂಗ್ ಹೇಳಿದರು 

 

ಇಂಧನ ಸಚಿವರು, ನಬಿನಗರದ ಎನ್ ಪಿಜಿಸಿಎಲ್ ನಲ್ಲಿ ಸೇವಾ ಕಟ್ಟಡ, ಬರ್ಹಾದಲ್ಲಿ ಎನ್ ಟಿಪಿಸಿ ಜನರಿಗಾಗಿ ಅಭಿವೃದ್ಧಿಪಡಿಸಿರುವ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಬರೌನಿಯಲ್ಲಿ ಎನ್ ಟಿಪಿಸಿಯ ಆವರಣದಲ್ಲಿ ಸಿಬ್ಬಂದಿ ಮತ್ತು ಸಂಬಂಧಿಸಿದವರಿಗಾಗಿ ಆರಂಭಿಸಿರುವ ಮುಖ್ಯ ಘಟಕದ ಕ್ಯಾಂಟೀನ್ ಅನ್ನು ಉದ್ಘಾಟಿಸಿ ಮಾತನಾಡುತ್ತಾ ಸರ್ಕಾರದ ದೂರದೃಷ್ಟಿಯನ್ನು ಹಂಚಿಕೊಂಡರು. ಪಿಎಂ ಆವಾಸ್ ಯೋಜನೆ ಮತ್ತು ಹರ್ ಘರ್ ಬಿಜಿಲಿ ಮತ್ತಿತರ ಬಡವರ ಪರವಾದ ಹಲವು ಕಾರ್ಯಕ್ರಮಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಲಾಕ್ ಡೌನ್ ಸಮಯದಲ್ಲಿ ಚಾಲನೆ ನೀಡಿದ್ದಾರೆ ಎಂದು ಸಚಿವರು ಹೇಳಿದರು. 

ಎನ್ ಟಿಪಿಸಿಯ ಹಲವು ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಸಿಂಗ್ ಅವರು, ಇವು ವಿದ್ಯುತ್ ಉತ್ಪಾದಕರ ರಾಷ್ಟ್ರದ ಅಭಿವೃದ್ಧಿ ಮತ್ತು  ಆರ್ಥಿಕ ಪ್ರಗತಿಯಡೆಗೆ ದೃಢ ಬದ್ಧತೆಯನ್ನು ತೋರುತ್ತದೆ ಎಂದರು.

 “ಕಳೆದ ಕೆಲವು ವರ್ಷಗಳಿಂದೀಚೆಗೆ ಎನ್ ಟಿಪಿಸಿ ಕಾರ್ಯಗಳನ್ನು ದೇಶಾದ್ಯಂತ ಗುರುತಿಸಲಾಗುತ್ತಿದೆ. ಎನ್ ಟಿಪಿಸಿ ಕುಟುಂಬವನ್ನು ತನ್ನ ವೃತ್ತಿಪರತೆ ಮತ್ತು ದಕ್ಷತೆಯಿಂದ ಗುರುತಿಸಲಾಗುತ್ತಿದೆ ಮತ್ತು ಅದು ಬಿಹಾರದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಒಂದು ಮಾದರಿಯಾಗಿದೆ. ಸಾರ್ವಜನಿಕ ವಲಯದ ಉದ್ದಿಮೆಗಳ ಸಾಧನೆಯ ಬಗ್ಗೆ ಸದಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಎನ್ ಟಿಪಿಸಿ ಮತ್ತು ಇತರೆ ವಿದ್ಯುತ್ ಉತ್ಪಾದನಾ ಸಾರ್ವಜನಿಕ ವಲಯದ ಉದ್ದಿಮೆಗಳ ಸಾಧನೆಯನ್ನು ನೋಡಿದರೆ ಆ ಸಂಸ್ಥೆಗಳು ಖಾಸಗಿ ಸಂಸ್ಥೆಗಳಿಗಿಂತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಸ್ಪಷ್ಟವಾಗುತ್ತವೆ ಮತ್ತು ಅವು ನಿರಂತರವಾಗಿ ಪ್ರಗತಿ ಸಾಧಿಸಿ, ಲಾಭವನ್ನೂ ಗಳಿಸುತ್ತಿವೆ. ಬಿಹಾರ ಸೇರಿದಂತೆ ಹಲವು ರಾಜ್ಯಗಳ ಪ್ರಗತಿಯಲ್ಲಿ ಪಾಲುದಾರರಾಗಿರುವ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಎನ್ ಟಿಪಿಸಿಯನ್ನು ಅಭಿನಂದಿಸಲಾಗುವುದು” ಎಂದರು. 

 “ಎನ್ ಟಿಪಿಸಿ  ವಿಸ್ತರಣೆ ಕಾರ್ಯ ಮುಂದುವರಿಯಲಿದೆ, ಅದು ವೃತ್ತಿಪರತೆ, ದಕ್ಷತೆ ಮತ್ತು ಆದರ್ಶ ಉದ್ಯೋಗದಾತ ಸಂಸ್ಥೆ, ವೃತ್ತಿಪರತೆ ಮತ್ತು ದಕ್ಷತೆಯಲ್ಲಿ ಹಲವು ಹೆಜ್ಜೆಗುರುತುಗಳನ್ನು ಮೂಡಿಸಲಿ ಎಂದು” ಶ್ರೀ ಆರ್.ಕೆ. ಸಿಂಗ್ ಹೇಳಿದರು.  

ಲಾಕ್ ಡೌನ್ ಸಮಯದಲ್ಲಿ ದಿನದ 24 ಗಂಟೆಗಳು ವಿದ್ಯುತ್ ಪೂರೈಕೆಯಾಗುವುದನ್ನು ಖಾತ್ರಿಪಡಿಸಿದ ಎನ್ ಟಿಪಿಸಿ ಕಾರ್ಯವನ್ನು ಅವರು ಶ್ಲಾಘಿಸಿದರು. ವಿದ್ಯುತ್ ಸರಬರಾಜು ಕಂಪನಿಗಳ ನಿಗದಿತ ಶುಲ್ಕವನ್ನೂ ಸಹ ಮುಂದೂಡಲಾಗಿತ್ತು ಮತ್ತು ಲಾಕ್ ಡೌನ್ ಸಮಯದಲ್ಲಿ ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದಕ ಕಂಪನಿ, ರಾಜ್ಯಗಳಿಗೆ ನೀಡುತ್ತಿದ್ದ ವಿದ್ಯುತ್ ದರಗಳ ಮೇಲೂ ವಿನಾಯಿತಿ ನೀಡಿತ್ತು ಎಂದರು. ಇದು ಸಾಧ್ಯವಾಗಲು ಎನ್ ಟಿಪಿಸಿಯ ವೃತ್ತಿಪರ ನಡವಳಿಕೆ ಮತ್ತು ಬದ್ಧತೆ ಕಾರಣವಾಗಿದೆ. ರಾಷ್ಟ್ರಕ್ಕೆ ಬದ್ಧತೆ ಹೊಂದಿರುವ ಇಂತಹ ಆದರ್ಶ ಕಂಪನಿಯಲ್ಲಿ ಐಐಟಿಗಳು ಮತ್ತು ಎನ್ ಐಟಿಗಳಿಂದ ಬರುವಂತಹ ದೇಶದ ಉತ್ತಮ ಬುದ್ಧಿವಂತ ವರ್ಗ ಕೆಲಸ ಮಾಡಲು ಬಯಸುತ್ತದೆ ಎಂದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಎನ್ ಟಿಪಿಸಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಗುರುದೀಪ್ ಸಿಂಗ್, “ಶ್ರೀ ಆರ್.ಕೆ. ಸಿಂಗ್ ಅವರ ಮಾರ್ಗದರ್ಶನದಲ್ಲಿ ಎನ್ ಟಿಪಿಸಿ, ವಿದ್ಯುತ್ ಆಧಾರಿತ ಅಡುಗೆ ಪದ್ಧತಿಗೆ ಪರಿವರ್ತಿಸಲು ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಮತ್ತು ಇಡೀ ದೇಶಾದ್ಯಂತ ಇದು ಪ್ರತಿಫಲನಗೊಳ್ಳಲಿದೆ ಎಂಬ ವಿಶ್ವಾಸ ನನಗಿದೆ” ಎಂದು ಹೇಳಿದರು. ಅಲ್ಲದೆ “ಲಾಕ್ ಡೌನ್ ಸಮಯದಲ್ಲಿ ಎನ್ ಟಿಪಿಸಿ ಕೇವಲ ಸಿಬ್ಬಂದಿಗೆ ಮಾತ್ರವಲ್ಲ, ಗುತ್ತಿಗೆ ಕಾರ್ಮಿಕರಿಗೂ ಕೂಡ ವೇತನವನ್ನು ಸಕಾಲಿಕವಾಗಿ ಪಾವತಿಸಿದೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಆಹಾರ, ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವೃತ್ತಿಪರ ರೀತಿಯಲ್ಲಿ ಒದಗಿಸಿದೆ. ಲಾಕ್ ಡೌನ್ ಸಮಯದಲ್ಲಿ ಯಾವುದೇ ಅಡೆತಡೆ ಇಲ್ಲದೆ ದೇಶಾದ್ಯಂತ ವಿದ್ಯುತ್ ಪೂರೈಕೆಯನ್ನು ನಾವು ಖಾತ್ರಿಪಡಿಸಿದ್ದೇವೆ” ಎಂದು ಹೇಳಿದರು. “ಎನ್ ಟಿಪಿಸಿ ಬಿಹಾರದಲ್ಲಿ 3800 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಯ ನಿರ್ಮಾಣವನ್ನು ಕೈಗೊಂಡಿದೆ ಮತ್ತು ಆ ರಾಜ್ಯದ ಅಭಿವೃದ್ಧಿಗೆ ನೆರವು ನೀಡುವುದನ್ನು ಮುಂದುವರಿಸುತ್ತದೆ” ಎಂದು ಅವರು ಹೇಳಿದರು.  

  ಹೊಸ ಸೌಕರ್ಯಗಳು ಮತ್ತು ಮೂಲಸೌಕರ್ಯ ನಿರ್ಮಾಣದಿಂದ ಸಿಬ್ಬಂದಿಗೆ ಮತ್ತು ಎನ್ ಟಿಪಿಸಿ ಜೊತೆ ಗುರುತಿಸಿಕೊಂಡಿರುವವರಿಗೆ ಅಗತ್ಯ ಸೌಲಭ್ಯಗಳು ದೊರಕಲಿವೆ ಮತ್ತು ಬಿಹಾರದಲ್ಲಿನ ಘಟಕಗಳ ಸುತ್ತಮುತ್ತ ಇರುವ ಜನರ ಜೀವನಮಟ್ಟ ಸುಧಾರಣೆಯಾಗಲಿದೆ ಎಂದರು. 

ಇಂಧನ ಸಚಿವಾಲಯದ ಹಿರಿಯ ಅಧಿಕಾರಿಗಳು, ಬಿಹಾರ ಆಡಳಿತ, ಎನ್ ಟಿಪಿಸಿಯ ನಿರ್ದೇಶಕರು ಮತ್ತು ಅಧಿಕಾರಿಗಳು ಪೂರ್ವ ಪ್ರಾದೇಶಿಕ ಕೇಂದ್ರ ಕಚೇರಿ, ಬರ್ಹಾ, ನಬಿನಗರ ಮತ್ತು ಬರೌನಿಯ ಅಧಿಕಾರಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

  ಉದ್ಘಾಟನಾ ಸಮಾರಂಭದಲ್ಲಿ ನಬಿನಗರದ ಎನ್ ಪಿಜಿಸಿಎಲ್ ಸೇವಾ ಕಟ್ಟಡದಲ್ಲಿ, ಬರ್ಹಾದ ಶಾಪಿಂಗ್ ಕಟ್ಟಡದಲ್ಲಿ ಮತ್ತು ಬರೌನಿಯ ಎನ್ ಟಿಪಿಸಿ ಮುಖ್ಯ ಘಟಕ ಕ್ಯಾಂಟೀನ್ ನಲ್ಲಿನ ಸೌಕರ್ಯಗಳ ವಿಡಿಯೋ ಪ್ರದರ್ಶಿಸಲಾಯಿತು. 

  ಎನ್ ಟಿಪಿಸಿ ಬಳಗ ಒಟ್ಟು 62.9 ಗಿಗಾವ್ಯಾಟ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದ್ದು, 24 ಕಲ್ಲಿದ್ದಲು, 7 ಕಂಬೈನ್ಡ್ ಸೈಕಲ್ ಗ್ಯಾಸ್/ಲಿಕ್ವಿಡ್ ಫ್ಯುಯಲ್, ಒಂದು ಜಲವಿದ್ಯುತ್, 13 ನವೀಕರಿಸಬಹುದಾದ ಹಾಗೂ 25 ಉಪ ವಿದ್ಯುತ್ ಘಟಕಗಳು ಹಾಗೂ ಜಂಟಿ ಪಾಲುದಾರಿಕೆಯ ವಿದ್ಯುತ್ ಕೇಂದ್ರಗಳು ಸೇರಿ 70 ವಿದ್ಯುತ್ ಕೇಂದ್ರಗಳನ್ನು ಹೊಂದಿದೆ. ಬಳಗ ಸುಮಾರು 20 ಗಿಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆಗಳ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಅದರಲ್ಲಿ 5 ಗಿಗಾವ್ಯಾಟ್ ಸಾಮರ್ಥ್ಯದ ಇಂಧನ ಘಟಕವೂ ಸೇರಿದೆ

********



(Release ID: 1653883) Visitor Counter : 179