ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ 
                
                
                
                
                
                
                    
                    
                        ಸಿಂಧ್ರಿ, ಗೋರಖ್‌ಪುರ ಮತ್ತು ಬಾರೌನಿಗಳಲ್ಲಿ ರಸಗೊಬ್ಬರ ಯೋಜನೆಗಳ ಪುನಶ್ಚೇತನ: ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ
                    
                    
                        
ಹಿಂದೂಸ್ತಾನ್ ಉರ್ವಾರಕ್ ಮತ್ತು ರಸಾಯನ್ ಲಿಮಿಟೆಡ್ (ಎಚ್‌ಯುಆರ್‌ಎಲ್) ಗೆ 1257.82 ಕೋಟಿ ರೂ. ಬಡ್ಡಿ ರಹಿತ ಸಾಲ ಒಪ್ಪಂದಕ್ಕೆ ರಸಗೊಬ್ಬರ ಇಲಾಖೆ ಮತ್ತು ಎಚ್‌ಯುಆರ್‌ಎಲ್ ಸಹಿ
                    
                
                
                    Posted On:
                08 SEP 2020 4:44PM by PIB Bengaluru
                
                
                
                
                
                
                ಸಿಂಧ್ರಿ, ಗೋರಖ್‌ಪುರ ಮತ್ತು ಬಾರೌನಿಗಳಲ್ಲಿ ರಸಗೊಬ್ಬರ ಯೋಜನೆಗಳನ್ನು ಪುನಶ್ಚೇತನಗೊಳಿಸಲು ಹಿಂದೂಸ್ತಾನ್ ಉರ್ವಾರಕ್ ಮತ್ತು ರಸಾಯನ್ ಲಿಮಿಟೆಡ್ (ಎಚ್‌ಯುಆರ್‌ಎಲ್) ಗೆ 1257.82 ಕೋಟಿ ರೂ ಬಡ್ಡಿರಹಿತ ಸಾಲ ನೀಡಲು ರಸಗೊಬ್ಬರ ಇಲಾಖೆ ಮತ್ತು ಎಚ್‌ಯುಆರ್‌ಎಲ್ ನಡುವೆ ಸಾಲ ಒಪ್ಪಂದಕ್ಕೆ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ, ಕಾರ್ಯದರ್ಶಿ (ರಸಗೊಬ್ಬರಗಳು), ಹೆಚ್ಚುವರಿ ಕಾರ್ಯದರ್ಶಿ (ರಸಗೊಬ್ಬರಗಳು) ಮತ್ತು ಹಿಂದೂಸ್ತಾನ್ ಉರ್ವಾರಕ್ ಮತ್ತು ರಸಾಯನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರ ಉಪಸ್ಥಿತಿಯಲ್ಲಿ ಸಹಿ ಹಾಕಲಾಯಿತು.

ಬಡ್ಡಿರಹಿತ ಸಾಲ (ಐಎಫ್‌ಎಲ್) ಒಪ್ಪಂದಕ್ಕೆ ರಸಗೊಬ್ಬರ ಇಲಾಖೆ ನಿರ್ದೇಶಕ ಶ್ರೀ ನಿರಂಜನ್ ಲಾಲ್ ರು ಮತ್ತು ಎಚ್‌ಯುಆರ್‌ಎಲ್  ವ್ಯವಸ್ಥಾಪಕ ನಿರ್ದೇಶಕ ಶ್ರೀ ಅರುಣ್ ಕುಮಾರ್ ಗುಪ್ತಾ ಸಹಿ ಹಾಕಿದರು.

ಭಾರತ ಸರ್ಕಾರ ಎಚ್‌ಯುಆರ್‌ಎಲ್‌ಗೆ 1257.82 ಕೋಟಿ ರೂ. ಬಡ್ಡಿರಹಿತ ಸಾಲಕ್ಕೆ (ಗೋರಖ್‌ಪುರ, ಸಿಂದ್ರಿ ಮತ್ತು ಬಾರೌನಿ ಯೋಜನೆಗಳಿಗೆ ಕ್ರಮವಾಗಿ 422.28 ಕೋಟಿ ರೂ., 415 ಕೋ.ರೂ. ಮತ್ತು 419.77 ಕೋ.ರೂ.) ಅನುಮೋದನೆ ನೀಡಿದೆ. ಬಡ್ಡಿರಹಿತ ಸಾಲದ ಮರುಪಾವತಿಯನ್ನು 2022-23ರಿಂದ ಪ್ರಾರಂಭಿಸಿ 8 ವರ್ಷಗಳಲ್ಲಿ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಯೂರಿಯಾ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ದೂರದೃಷ್ಟಿಗೆ ಅನುಗುಣವಾಗಿ ಎಚ್‌ಯುಆರ್‌ಎಲ್‌ನ ಮೂರು ಘಟಕಗಳಿಗೆ ಬಡ್ಡಿರಹಿತ ಸಾಲವನ್ನು ಅನುಮೋದಿಸಲಾಗಿದೆ ಎಂದು ಹೇಳಿದರು. ಗೋರಖ್‌ಪುರ, ಬಾರೌನಿ ಮತ್ತು ಸಿಂದ್ರಿಯಲ್ಲಿರುವ ಎಚ್‌ಯುಆರ್‌ಎಲ್‌ನ ಮೂರು ಘಟಕಗಳಿಗೆ ಬಡ್ಡಿರಹಿತ ಸಾಲದ ಬಿಡುಗಡೆಯು, ಈ ಘಟಕಗಳು 2021 ರ ವೇಳೆಗೆ ಬೇವು ಲೇಪಿತ ಯೂರಿಯಾದ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಅನೇಕ ಸಮಸ್ಯೆಗಳ ನಡುವೆಯೂ ಗೋರಖ್‌ಪುರ, ಸಿಂಧ್ರಿ ಮತ್ತು ಬಾರೌನಿ ಘಟಕಗಳ ಶೇ. 80.3, ಶೇ.74.2 ಮತ್ತು ಶೇ.72.8 ರಷ್ಟು ಪ್ರಗತಿಯು ಸಾಕಷ್ಟು ತೃಪ್ತಿಕರವಾಗಿದೆ. ಘಟಕಗಳನ್ನು ಯಶಸ್ವಿಯಾಗಿ ನಿಯೋಜಿಸುವುದರಿಂದ ದೇಶೀಯ ಉತ್ಪಾದನೆಗೆ 38.1 ಲಕ್ಷ ಮೆಟ್ರಿಕ್ ಟನ್ ಬೇವು ಲೇಪಿತ ಯೂರಿಯಾವನ್ನು ಸೇರಿಸಲಾಗುತ್ತದೆ ಮತ್ತು ಇದು ಯೂರಿಯಾ ಆಮದಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದು ಭಾರತ ಸರ್ಕಾರದ “ಆತ್ಮನಿರ್ಭರ ಭಾರತ”ಅಭಿಯಾನಕ್ಕೂ ಸಹಾಯ ಮಾಡುತ್ತದೆ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಸಚಿವರು ಹೇಳಿದರು.
13.07.2016 ರಂದು ನಡೆದ ಸಿಸಿಇಎ ಸಭೆಯಲ್ಲಿ ಎಫ್‌ಸಿಐಎಲ್‌ನ ಗೋರಖ್‌ಪುರ ಮತ್ತು ಸಿಂಧ್ರಿ ಘಟಕಗಳು ಮತ್ತು ಎಚ್‌ಎಫ್‌ಸಿಎಲ್‌ನ ಬಾರೌನಿ ಘಟಕಗಳನ್ನು ನಾಮನಿರ್ದೇಶನ ಆಧಾರದ ಮೇಲೆ ನಾಮನಿರ್ದೇಶಿತ ಸಾರ್ವಜನಿಕ ಉದ್ಯಮಗಳ ಜಂಟಿ ಉದ್ಯಮವನ್ನು ರೂಪಿಸುವ ಮೂಲಕ ಪುನಶ್ಚೇತನಗೊಳಿಸಲು ಅನುಮೋದನೆ ನೀಡಲಾಗಿತ್ತು. ಅದರಂತೆ ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ (ಎಚ್‌ಯುಆರ್ಎಲ್) ಅನ್ನು ಜಂಟಿ ಉದ್ಯಮ ಕಂಪನಿಯನ್ನು ಎಂದು ಗುರುತಿಸಲಾಯಿತು. ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಗಳ ಪಾಲು ತಲಾ ಶೇ.29.67 ಆಗಿದ್ದರೆ, ಭಾರತ ರಸಗೊಬ್ಬರ ನಿಗಮ (ಎಫ್‌ಸಿಐಎಲ್) ಪಾಲು ಶೇ.10.99 ಆಗಿದೆ. ಎಚ್‌ಯುಆರ್‌ಎಲ್ ಗೋರಖ್‌ಪುರ, ಸಿಂಧ್ರಿ ಮತ್ತು ಬಾರೌನಿಗಳಲ್ಲಿ ಮೂರು ಅನಿಲ ಆಧಾರಿತ ಯೂರಿಯಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದೆ. ಪ್ರತಿ ಘಟಕದ ಸಾಮರ್ಥ್ಯವು ವರ್ಷಕ್ಕೆ 12.7 ಲಕ್ಷ ಮೆಟ್ರಿಕ್ ಟನ್ ಗಳಾಗಿದೆ.
***
                
                
                
                
                
                (Release ID: 1652367)
                Visitor Counter : 182