ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರಿಂದ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ


ಕೊರೊನಾ ಸಮಯದಲ್ಲಿ ಡಿಜಿಟಲ್ ಮೂಲಕ ಶಿಕ್ಷಣ ನೀಡಿದ ಶಿಕ್ಷಕರ ಪಾತ್ರದ ಬಗ್ಗೆ ಮೆಚ್ಚುಗೆ

ಭವಿಷ್ಯದ ಅಗತ್ಯತೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸಲಿರುವ ರಾಷ್ಟ್ರೀಯ ಶಿಕ್ಷಣ ನೀತಿ

Posted On: 05 SEP 2020 2:57PM by PIB Bengaluru

ಭಾರತದ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರು, ಇದೇ ಮೊದಲ ಬಾರಿ ವರ್ಚುಯಲ್ ರೂಪದಲ್ಲಿ ಇಂದು (ಸೆಪ್ಟೆಂಬರ್ 5, 2020) ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ದೇಶಾದ್ಯಂತ 47 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು ಮತ್ತು ಶಾಲಾ ಶಿಕ್ಷಣದಲ್ಲಿ ಗುಣಾತ್ಮಕ ಸುಧಾರಣೆಗಳನ್ನು ತರಲು ಕ್ರಮಗಳನ್ನು ಕೈಗೊಂಡಿರುವ ಶಿಕ್ಷಕರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರಲ್ಲಿ ಶೇಕಡ 40ರಷ್ಟು ಮಹಿಳೆಯರಿದ್ದಾರೆ ಎಂದ ರಾಷ್ಟ್ರಪತಿಗಳು, ಬೋಧಕರಾಗಿ ಮಹಿಳೆಯರು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ. ಎಸ್. ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸಿ, ಸ್ಮರಣೆ ಮಾಡಿದ ರಾಷ್ಟ್ರಪತಿ ಕೋವಿಂದ್ ಅವರು, ರಾಧಾಕೃಷ್ಣನ್ ಅವರು, ದೂರದೃಷ್ಟಿ ಹೊಂದಿದ್ದ ದಿಗ್ಗಜ ನಾಯಕರಾಗಿದ್ದರು ಮತ್ತು ಎಲ್ಲದಕ್ಕೂ ಮುಖ್ಯವಾಗಿ ಅವರು ಅತ್ಯುತ್ತಮ ಶಿಕ್ಷಕರಾಗಿದ್ದರು ಎಂದರು. ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿರುವುದು ಅವರು ರಾಷ್ಟ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ಸೇವೆಯಾಗಿದೆ ಮತ್ತು ಇಡೀ ಶೈಕ್ಷಣಿಕ ಸಮುದಾಯವನ್ನು ಗೌರವಿಸುವ ಕಾರ್ಯವಾಗಿದೆ ಎಂದು ಹೇಳಿದರು. ಸಂದರ್ಭ ಶಿಕ್ಷಕರೆಡೆಗಿನ ನಮ್ಮ ಬದ್ಧತೆಯನ್ನು ತೋರಿಸಲು ಇದೊಂದು ಸದಾವಕಾಶವಾಗಿದೆ ಮತ್ತು ಅವರು ಸಾರ್ವಜನಿಕ ಜೀವನದಲ್ಲಿ ನೀಡುತ್ತಿರುವ ಪರಮೋಚ್ಛ ಕೊಡುಗೆಯನ್ನು ಸ್ಮರಿಸುವುದಾಗಿದೆ ಎಂದರು. ಯಾವುದೇ ಶಾಲೆಗೆ ಶಿಕ್ಷಕರು ಭದ್ರ ಬುನಾದಿ ಇದ್ದಂತೆ ಎಂದ ಅವರು, ಶಿಕ್ಷಕರು ನೈಜ ರಾಷ್ಟ್ರ ನಿರ್ಮಾಣಕಾರರಾಗಿದ್ದು, ಅವರು ಮಕ್ಕಳ ಜ್ಞಾನ ಮತ್ತು ಅವರ ವ್ಯಕ್ತಿತ್ವ ರೂಪಿಸುವಲ್ಲಿ ಅತ್ಯಂತ ಪ್ರಮುಖವಾದವರು ಎಂದರು.

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುತ್ತಿರುವ ಪ್ರಾಮುಖ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ರಾಷ್ಟ್ರಪತಿ ಕೋವಿಂದ್ ಅವರು, ನಮ್ಮ ಶಿಕ್ಷಕರು ತಂತ್ರಜ್ಞಾನದ ಸಹಾಯದಿಂದ ಮಕ್ಕಳನ್ನು ತಲುಪುತ್ತಿದ್ದಾರೆ ಎಂದರು. ತಂತ್ರಜ್ಞಾನ ಆಧಾರಿತ ಬೋಧನೆಗೆ ವರ್ಗಾವಣೆಗೊಳ್ಳುತ್ತಿರುವ ಶಿಕ್ಷಕರ ಕೌಶಲ್ಯದ ಬಗ್ಗೆ ಶ್ಲಾಘಿಸಿದ ಅವರು, ಎಲ್ಲ ಶಿಕ್ಷಕರು ತಮ್ಮ ಕೌಶಲ್ಯವನ್ನು ಉನ್ನತೀಕರಿಸುವುದು ಮತ್ತು ಅಪ್ ಡೇಟ್ ಮಾಡಿಕೊಳ್ಳುವುದು ಅತ್ಯಂತ ಪ್ರಮುಖವಾದುದಾಗಿದೆ. ಅವರು ತಮ್ಮ ಕೌಶಲ್ಯವನ್ನು ಡಿಜಿಟಲ್ ತಂತ್ರಜ್ಞಾನ ವಲಯದಲ್ಲಿ ಹೆಚ್ಚಿಸಿಕೊಂಡು, ಶಿಕ್ಷಣವನ್ನು ಇನ್ನೂ ಹೆಚ್ಚು ಪರಿಣಾಮಕಾರಿಗೊಳಿಸಬೇಕು ಮತ್ತು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವಂತೆ ಮಾಡಬೇಕು ಎಂದರು. ಆನ್ ಲೈನ್ ಶಿಕ್ಷಣ ಪದ್ಧತಿಯಲ್ಲಿ ಪೋಷಕರು ಶಿಕ್ಷಕರ ಜೊತೆ ಕೈಜೋಡಿಸಬೇಕಾದ ಅಗತ್ಯತೆ ಇದೆ ಎಂದ ರಾಷ್ಟ್ರಪತಿ ಕೋವಿಂದ್ ಅವರು, ಮಕ್ಕಳಲ್ಲಿ ಹೊಸ ಬಗೆಯ ಕಲಿಕೆ, ಆಸಕ್ತಿ ಮೂಡಿಸುವುದನ್ನು ಉತ್ತೇಜಿಸಬೇಕು ಎಂದರು. ಡಿಜಿಟಲ್ ಅಂತರವನ್ನು ದೂರ ಮಾಡುವ ಕುರಿತು ಉಲ್ಲೇಖಿಸಿದ ಅವರು, ಬುಡಕಟ್ಟು ಮತ್ತು ದೂರದ ಗುಡ್ಡಗಾಡು ಪ್ರದೇಶದಲ್ಲಿರುವ ಮಕ್ಕಳಿಗೂ ಅದರ ಪ್ರಯೋಜನ ಸಿಗುವಂತಾಗಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಷ್ಟ್ರಪತಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಹೊಸದಾಗಿ ಪರಿಚಯಿಸುತ್ತಿರುವ ನೀತಿ ಭವಿಷ್ಯದ ಅಗತ್ಯತೆಗಳಿಗೆ ನಮ್ಮ ಮಕ್ಕಳನ್ನು ಸಜ್ಜುಗೊಳಿಸಲು ಸಹಕಾರಿಯಾಗಿದೆ. ಸಂಬಂಧಿಸಿದ ಹಲವರ ಅಭಿಪ್ರಾಯಗಳನ್ನು ಪರಿಗಣಿಸಿ, ನೀತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದರು. ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮತ್ತು ಅದರ ಫಲವನ್ನು ಪಡೆಯುವಂತೆ ಮಾಡುವಲ್ಲಿ ಶಿಕ್ಷಕರು ಅತ್ಯಂತ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಅವರು ಹೇಳಿದರು. ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಕರು ಸಮರ್ಥವಾಗಿ ಕಾರ್ಯನಿರ್ವಹಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಮೂಲಕ ಉತ್ತಮವಾದವರನ್ನು ಮಾತ್ರ ಶಿಕ್ಷಣ ಕ್ಷೇತ್ರಕ್ಕೆ ಆಯ್ಕೆ ಮಾಡಲಾಗುವುದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಖ್ ಸ್ವಾಗತ ಭಾಷಣವನ್ನು ಮಾಡಿದರು ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ದೋತ್ರೆ ಅವರು ವಂದನಾರ್ಪಣೆಯನ್ನು ಮಾಡಿದರು.

ರಾಷ್ಟ್ರಪತಿಗಳ ಹಿಂದಿ ಸಂದೇಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

***



(Release ID: 1651697) Visitor Counter : 119