ವಾರ್ತಾ ಮತ್ತು ಪ್ರಸಾರ ಸಚಿವಾಲಯ

ರಾಷ್ಟ್ರೀಯ ಶಿಕ್ಷಣ ನೀತಿ 2020, 21ನೇ ಶತಮಾನದ ಕ್ರಾಂತಿಕಾರಿ ಸುಧಾರಣೆ - ಪ್ರಕಾಶ್ ಜಾವಡೇಕರ್


ಉನ್ನತ ಶಿಕ್ಷಣದಲ್ಲಿ ಒಟ್ಟು ಪ್ರವೇಶ ಪ್ರಮಾಣ ದುಪ್ಪಟ್ಟಾಗಲಿದೆ ಎಂಬ ವಿಶ್ವಾಸ ಸರ್ಕಾರಕ್ಕಿದೆ

ಬಾಲ್ಯದಲ್ಲಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿರುವುದು ಎನ್ಇಪಿಯ ಅತ್ಯಂತ ಪ್ರಮುಖ ಅಂಶ

Posted On: 05 SEP 2020 2:17PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ 2020, 21ನೇ ಶತಮಾನದ ಕ್ರಾಂತಿಕಾರಿ ಸುಧಾರಣೆಯಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ, ಅರಣ್ಯ ಮತ್ತು ಪರಿಸರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಬಣ್ಣಿಸಿದ್ದಾರೆ. ಮುಂಬೈನ ಪಾರ್ಲೆ ತಿಲಕ್ ವಿದ್ಯಾಲಯ ಒಕ್ಕೂಟ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಶತಮಾನೋತ್ಸವ ವರ್ಷದ ಕಾರ್ಯಕ್ರಮದಲ್ಲಿ ವಿಡಿಯೋ ಲಿಂಕ್ ಮೂಲಕ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, ಬಾಲ್ಯದಲ್ಲಿ ಮಕ್ಕಳ ಶಿಕ್ಷಣ, ಪ್ರಶ್ನೆ ಆಧಾರಿತ ಶಿಕ್ಷಣ, ಶಿಕ್ಷಕರ ತರಬೇತಿ ಮೂಲ ಮತ್ತು ಸಂಖ್ಯಾ ಸಾಕ್ಷರತೆ ಅಂಶಗಳಿಗೆ ಹೊಸ ನೀತಿಯಲ್ಲಿ ಒತ್ತು ನೀಡಲಾಗಿದೆ ಎಂದರು. ಎನ್ಇಪಿ 2020 ಯುವಕರನ್ನು ಸಬಲೀಕರಣಗೊಳಿಸಲಿದೆ ಮತ್ತು ಅದು 21ನೇ ಶತಮಾನದಲ್ಲಿ ದೇಶವನ್ನು ಮುನ್ನಡೆಸಲಿದೆ ಎಂದು ಸಚಿವರು ಹೇಳಿದರು. “ಈ ನೀತಿ ಬೋಧನೆ ಮತ್ತು ಕಲಿಕೆಯ ಅನುಭವವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರೂ ಆನಂದಿಸುವಂತೆ ಮಾಡಲಿದೆಎಂದು ಹೇಳಿದರು.

https://static.pib.gov.in/WriteReadData/userfiles/image/javdekarUB63.jpg

https://static.pib.gov.in/WriteReadData/userfiles/image/javdekar11CWQ.jpg

 ಭಾರತದಲ್ಲಿ ಸದ್ಯ ಒಟ್ಟು ಉನ್ನತ ಶಿಕ್ಷಣದ ಪ್ರವೇಶ ಪ್ರಮಾಣ(ಜಿಇಆರ್ ) ಶೇಕಡ 25ರಷ್ಟಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಆ ಪ್ರಮಾಣ ದುಪ್ಪಟ್ಟಾಗಲಿದೆ ಎಂದು ಶ್ರೀ ಪ್ರಕಾಶ್ ಜಾವಡೇಕರ್ ವಿಶ್ವಾಸ ವ್ಯಕ್ತಪಡಿಸಿದರು. ದೇಶಾದ್ಯಂತ ಎಲ್ಲ ವಿದ್ಯಾರ್ಥಿಗಳು ಆಶೋತ್ತರ ಹೊಂದಿದ್ದಾರೆ ಮತ್ತು ಆರ್ಥಿಕ ಪ್ರಗತಿಯಿಂದಾಗಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಮನೋಭಾವ ಹೊಂದುವಂತಾಗಿದೆ ಎಂದರು. ಭೌಗೋಳಿಕವಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಸ್ತೃತ ಕಂದಕವಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೊರತೆ ಇದ್ದು, ಅದಕ್ಕಾಗಿ ಬೇಡಿಕೆ ಹೆಚ್ಚಿರುವುದು ಗಂಭೀರ ಅಂಶವಾಗಿದ್ದು, ಹೊಸ ನೀತಿಯಿಂದಾಗಿ ಭಾರತದಲ್ಲಿ ಜಿಇಆರ್ ವೃದ್ಧಿಯಾಗಲಿದೆ ಎಂದರು.

ಸಚಿವರು, ಶಿಕ್ಷಣ ಕುರಿತಂತೆ ಲೋಕಮಾನ್ಯ ತಿಲಕರ ಅಭಿಪ್ರಾಯಗಳನ್ನು ಮಂಡಿಸುತ್ತಾ ಭಾಷಣ ಆರಂಭಿಸಿ, ತಿಲಕರು ಶಿಕ್ಷಣ ಎಂದರೆ ಜಾಗೃತಿ ಮೂಡಿಸುವುದು ಎಂದರ್ಥ ಎಂದು ಹೇಳಿದ್ದರು. ಹೊಸ ಶಿಕ್ಷಣ ನೀತಿಯಲ್ಲಿ ಮೂಲ ಮತ್ತು ಸಾಂಖ್ಯಿಕ ಸಾಕ್ಷರತೆಗೆ ಒತ್ತು ನೀಡಲಾಗಿದೆ. ರಾಷ್ಟ್ರೀಯ ಮುಕ್ತ ಶಾಲಾ ಕೇಂದ್ರ( ಎನ್ ಐಒಎಸ್ ) ಗಳಂತಹ ಸಂಸ್ಥೆಗಳ ಮೂಲಕ ಎಲ್ಲರಿಗೂ ಶಿಕ್ಷಣ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದರು. ಬಾಲ್ಯದಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವುದು ಎನ್ಇಪಿಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಮೂರರಿಂದ 8 ವರ್ಷಗಳ ವಯೋಮಿತಿಯ ಮಕ್ಕಳಿಗೆ ಅರಿವಿನ ಕೌಶಲ್ಯಗಳನ್ನು, ಕುತೂಹಲಗಳನ್ನು ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವ ವರ್ಷವಾಗಿದೆ ಎಂದರು. ಉರು ಹೊಡೆಯುವಂತೆ, ಸುಮ್ಮನೆ ಕಲಿಸುವುದಕ್ಕಿಂತ ವಿಷಯವನ್ನು ಅರ್ಥೈಸಿಕೊಂಡು ಶಿಕ್ಷಣ ನೀಡುವುದು ಅತ್ಯಂತ ಪ್ರಮುಖವಾಗಿದೆ ಎಂದರು.

ಆರಂಭಿಕ ಹಂತದಲ್ಲಿ ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಲಾಗಿದೆ. 9 ರಿಂದ 12ನೇ ತರಗತಿಯ ಶಿಕ್ಷಣದಲ್ಲಿ ವಿಸ್ತೃತ, ಪ್ರಸ್ತುತ ಮತ್ತು ಹೊಸ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದರು. ಸಂಶೋಧನೆ ಮತ್ತು ಆವಿಷ್ಕಾರ ನಮ್ಮ ಶಿಕ್ಷಣವನ್ನು ಮುಂದುವರಿಸಲು ಪ್ರಮುಖವಾಗಿದ್ದು, ಅವುಗಳಿಂದಾಗಿ ನಾವು ಜಾಗತಿಕವಾಗಿ ಸ್ಪರ್ಧಾತ್ಮಕ ಪ್ರಜೆಗಳನ್ನು ರೂಪಿಸಬಹುದಾಗಿದೆ ಎಂದರು. ಸಂಶೋಧನೆ ಆಧಾರಿತ ಆವಿಷ್ಕಾರಗಳನ್ನು ಉತ್ತೇಜಿಸಲು ಮೂರು ಸಾವಿರ ಅಟಲ್ ಚಿಂತನಾ ಪ್ರಯೋಗಾಲಯಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದ ಅವರು, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಇದು ಅತ್ಯಂತ ಅವಶ್ಯಕ ಎಂದು ಹೇಳಿದರು.

ಸಮಾಜದಲ್ಲಿ ಶಿಕ್ಷಕರ ಪಾತ್ರದ ಕುರಿತಂತೆ ಮಾತನಾಡಿದ ಸಚಿವರು, “ಶಿಕ್ಷಕರು ಕೇವಲ ಪುಸ್ತಕಗಳು ಅಥವಾ ಕಪ್ಪು ಹಲಗೆಗಳ ಮೂಲಕ ಮಾತ್ರ ಬೋಧಿಸಬಾರದು. ಆದರ್ಶ ಶಿಕ್ಷಕ ಎಂದರೆ ಆತ/ಆಕೆ ತನ್ನ ನಡವಳಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತುವಂತಹವರಾಗಬೇಕುಎಂದರು. ಶಿಕ್ಷಕರಿಗೆ ಸಮಗ್ರ ತರಬೇತಿಯನ್ನು ನೀಡಲು ನಾಲ್ಕು ವರ್ಷದ ಸಮಗ್ರ ಬಿ.ಇಡಿ ಪದವಿ ಕೋರ್ಸ್ ಅನ್ನು ಪರಿಚಯಿಸಲಾಗುತ್ತಿದೆ. ಇದರಲ್ಲಿ ವಾಸ್ತವಿಕ ಬೋಧನಾ ಕೌಶಲ್ಯವೂ ಸೇರಿದೆ ಎಂದರು. ಇದರಿಂದ ಶಿಕ್ಷಕರು ಬೋಧನೆ ಕೊನೆಯ ಕೆಲಸ ಎಂಬಂತಾಗದೆ, ಬೋಧಿಸುವುದು ಆಯ್ಕೆ ಎಂಬಂತೆ ಪರಿಗಣಿಸಲು ಸಹಾಯಕವಾಗುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವ್ಯಾಪಕ ಸಮಾಲೋಚನೆಗಳ ನಂತರ ಅಂತಿಮಗೊಳಿಸಲಾಗಿದೆ ಎಂದು ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದರು. ತಾವು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ದಿನಗಳನ್ನು ಸ್ಮರಿಸಿಕೊಂಡ ಅವರು, ಡಾ. ಕಸ್ತೂರಿರಂಗನ್ ಅವರ ನಾಯಕತ್ವದಲ್ಲಿ 13-14 ವಿಷಯ ತಜ್ಞರು ಅತ್ಯಂತ ಬದ್ಧತೆ, ಪ್ರಾಮಾಣಿಕತೆ ಮತ್ತು ಉತ್ಸಾಹದಿಂದ ನೀತಿಗಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.

ಪಾರ್ಲೆ ತಿಲಕ್ ವಿದ್ಯಾಲಯ ಒಕ್ಕೂಟದ ಕುರಿತು

ಪಾರ್ಲೆ ತಿಲಕ್ ವಿದ್ಯಾಲಯ ಒಕ್ಕೂಟ ಒಂದು ಶೈಕ್ಷಣಿಕ ಸಂಸ್ಥೆಯಾಗಿದ್ದು, ಇದು ಮುಖ್ಯವಾಗಿ ಮುಂಬೈನ ಹೊರ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. 2020ರ ಜೂನ್ 9 ರಂದು ಈ ಸಂಸ್ಥೆ ಶತಮಾನೋತ್ಸವಕ್ಕೆ ಕಾಲಿರಿಸಿತು. ಶ್ರೇಷ್ಠ ನಾಯಕರಾದ ಲೋಕಮಾನ್ಯ ತಿಲಕ್ ಅವರಿಂದ ಸ್ಫೂರ್ತಿ ಪಡೆದು, ವಿಲೆ ಪಾರ್ಲೆಯ ಕೆಲವು ದೇಶಭಕ್ತ ನಾಗರಿಕರು, ಈ ಪಾರ್ಲೆ ತಿಲಕ್ ವಿದ್ಯಾಲಯ ಒಕ್ಕೂಟ (ಪಿಟಿವಿಎ) ವನ್ನು ಸ್ಥಾಪಿಸಿದರು. ಮೊದಲ ಮರಾಠಿ ಶಾಲೆಯನ್ನು ಪಾರ್ಲೆ ತಿಲಕ್ ವಿದ್ಯಾಲಯ 1921ರ ಜೂನ್ 9ರಂದು ಆರಂಭಿಸಿತು. ಆರಂಭದಲ್ಲಿ ಆ ಶಾಲೆಯಲ್ಲಿ ಕೇವಲ ನಾಲ್ಕು ವಿದ್ಯಾರ್ಥಿಗಳು ಇದ್ದರು. ಇಂದು ಸಂಸ್ಥೆ, 5 ಶಾಲೆಗಳು, 3 ಕಾಲೇಜುಗಳು ಮತ್ತು ಒಂದು ಮ್ಯಾನೇಜ್ ಮೆಂಟ್ ಸಂಸ್ಥೆಯನ್ನು ನಡೆಸುತ್ತಿದ್ದು, ಒಟ್ಟು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪಾರ್ಲೆ ತಿಲಕ್ ವಿದ್ಯಾಲಯ ಒಕ್ಕೂಟದಲ್ಲಿ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿಗಳಲ್ಲಿ ಮಹಾರಾಷ್ಟ್ರದ ಹೆಸರಾಂತ ಬರಹಗಾರ ಪು.. ದೇಶಪಾಂಡೆ, ಶೇಟ್ ಕರಿ ಸಂಘಟನಾ ಸಂಸ್ಥಾಪಕ ಶರದ್ ಜೋಶಿ, ಭಾರತೀಯ ವಾಯುಪಡೆಯ ಮಾಜಿ ಏರ್ ಚೀಫ್ ಮಾರ್ಷಲ್ ಪ್ರದೀಪ್ ನಾಯಕ್(ನಿವೃತ್ತ) ಇವರು ಸೇರಿದ್ದಾರೆ. ಸಂಸ್ಥೆ, ಹಲವು ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಮತ್ತು ನಟರನ್ನು ಬೆಳೆಸಿದೆ.

***



(Release ID: 1651696) Visitor Counter : 146