ನೀತಿ ಆಯೋಗ

ಜಾಗತಿಕ ಆವಿಷ್ಕಾರಿ ಸೂಚ್ಯಂಕದಲ್ಲಿ ಅಗ್ರ 50 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನಪಡೆದ ಭಾರತ

Posted On: 02 SEP 2020 9:46PM by PIB Bengaluru

ವಿಶ್ವ ಬೌದ್ಧಿಕ ಹಕ್ಕುಸ್ವಾಮ್ಯ ಸಂಸ್ಥೆ ನಡೆಸಿದ ಜಾಗತಿಕ ಆವಿಷ್ಕಾರಿ (ನಾವಿನ್ಯ) ಸೂಚ್ಯಂಕ 2020 ಶ್ರೇಯಾಂಕದಲ್ಲಿ ನಾಲ್ಕು ಸ್ಥಾನ ಮೇಲೇರಿ 48ನೇ ಸ್ಥಾನಕ್ಕೇರಿದೆ. ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಭಾರತಕ್ಕೆ ಇದು ಅಭಿವೃದ್ಧಿಯ ಶುಭ ಸುದ್ದಿಯಾಗಿದೆ ಮತ್ತು ಸಂಶೋಧನಾ ಮತ್ತು ಅಭಿವೃದ್ಧಿ ಪೂರಕ ವ್ಯವಸ್ಥೆ ಅತ್ಯುತ್ತಮವಾಗಿರುವುದರ ಪ್ರತೀಕವಾಗಿದೆ. 2019ರಲ್ಲಿ ಭಾರತ 52ನೇ ಕ್ರಮಾಂಕದಲ್ಲಿತ್ತು ಮತ್ತು 2015ನೇ ವರ್ಷದಲ್ಲಿ 81ನೇ ಸ್ಥಾನದಲ್ಲಿತ್ತು. ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಆವಿಷ್ಕಾರಿ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದ್ದು, ಇದು ಅತ್ಯುತ್ತಮ ಸಾಧನೆಯಾಗಿದೆ. ವೈಪೋ ಸಂಸ್ಥೆ ಕೂಡ ಕೇಂದ್ರೀಯ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಭಾರತ 2019ರಲ್ಲಿ ಆವಿಷ್ಕಾರಿ ಸಾಧನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರ ಎಂದು ಒಪ್ಪಿಕೊಂಡಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ಅವಿಷ್ಕಾರಿ ಶ್ರೇಯಾಂಕದಲ್ಲಿ ಗಣನೀಯ ಸುಧಾರಣೆಯನ್ನು ಕಾಯ್ದುಕೊಂಡಿದೆ.

ಜಾಗತಿಕ ಆವಿಷ್ಕಾರಿ ಸೂಚ್ಯಂಕದಲ್ಲಿ ಸ್ಥಿರ ಸುಧಾರಣೆ ಕಂಡುಬರುತ್ತಿರುವುದಕ್ಕೆ ಅತ್ಯುತ್ತಮ ಜ್ಞಾನದ ಬಂಡವಾಳ, ಕ್ರಿಯಾಶೀಲ ನವೋದ್ಯಮ ಪೂರಕ ವ್ಯವಸ್ಥೆ ಮತ್ತು ಸಾರ್ವಜನಿಕ ಹಾಗೂ ಖಾಸಗಿ ಸಂಶೋಧನಾ ಸಂಸ್ಥೆಗಳ ಅದ್ಭುತ ಕೆಲಸ ಕಾರ್ಯಗಳು ಕಾರಣವಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಮತ್ತು ಇತರ ಸಚಿವಾಲಯಗಳು ರಾಷ್ಟ್ರೀಯ ಆವಿಷ್ಕಾರ ಪೂರಕ ವ್ಯವಸ್ಥೆಯನ್ನು ಉನ್ನತೀಕರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಿವೆ.

ನಿಟ್ಟಿನಲ್ಲಿ ರಾಷ್ಟ್ರೀಯ ಪ್ರಯತ್ನಗಳನ್ನು ತೀವ್ರಗೊಳಿಸಲು ನೀತಿ ಆಯೋಗ ಅವಿರತವಾಗಿ ಶ್ರಮಿಸುತ್ತಿದ್ದು, ಅದು ಎಲೆಕ್ಟ್ರಿಕ್ ವಾಹನಗಳು, ಜೈವಿಕ ತಂತ್ರಜ್ಞಾನ, ನ್ಯಾನೊ ತಂತ್ರಜ್ಞಾನ, ಬಾಹ್ಯಾಕಾಶ, ಪರ್ಯಾಯ ಇಂಧನ ಮೂಲಗಳು ಮತ್ತಿತರ ನಾನಾ ವಲಯಗಳಲ್ಲಿ ನೀತಿ ಆಧಾರಿತ ಆವಿಷ್ಕಾರಗಳನ್ನು ಕೈಗೊಳ್ಳಲು ಒತ್ತು ನೀಡುತ್ತಿದೆ. ನೀತಿ ಆಯೋಗ ಕಳೆದ ವರ್ಷ ಬಿಡುಗಡೆ ಮಾಡಿದ ಭಾರತೀಯ ಅನ್ವೇಷಣಾ ಸೂಚ್ಯಂಕವನ್ನು ಭಾರತದ ಎಲ್ಲ ರಾಜ್ಯಗಳಲ್ಲೂ ಆವಿಷ್ಕಾರ ಚಟುವಟಿಕೆಗಳನ್ನು ವಿಕೇಂದ್ರೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿದೆ ಎಂದು ವ್ಯಾಪಕ ಪ್ರಸಂಶೆ ವ್ಯಕ್ತವಾಯಿತು. ಜಾಗತಿಕ ಅನ್ವೇಷಣಾ ಸೂಚ್ಯಂಕ ಸೇರಿದಂತೆ ಎಲ್ಲ ಜಾಗತಿಕ ಶ್ರೇಯಾಂಕಗಳಲ್ಲಿ ಭಾರತದ ಸ್ಥಾನಮಾನದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕೆ ನಿರಂತರ ಒತ್ತು ನೀಡುವ ಕೆಲಸವನ್ನು ನೀತಿ ಆಯೋಗ ಮಾಡಿಕೊಂಡು ಬರುತ್ತಿದೆ.

ಭಾರತ, ಜಾಗತಿಕ ಅನ್ವೇಷಣಾ ಸೂಚ್ಯಂಕದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಸುಧಾರಿಸಿಕೊಳ್ಳುವ ಉನ್ನತ ಗುರಿಯನ್ನು ಹೊಂದಬೇಕು ಹಾಗೂ ತನ್ನ ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸಬೇಕಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿಗಳು ನೀಡಿರುವ ಆತ್ಮನಿರ್ಭರ ಭಾರತ ಕನಸು ಸಾಕಾರಗೊಳ್ಳಲು ಭಾರತ ತನ್ನ ಸಾಮರ್ಥ್ಯ ಮೀರಿ ಕೆಲಸ ಮಾಡಬೇಕು ಮತ್ತು  ವೈಜ್ಞಾನಿಕ ಮನೋಭಾವವನ್ನು ಅಭಿವೃದ್ಧಿಪಡಿಸಲು ಜಾಗತಿಕ ಶಕ್ತಿಗಳೊಂದಿಗೆ ಸ್ಪರ್ಧೆ ಮಾಡಬೇಕಿದೆ. ಭಾರತ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಲು ಇದು ಸಕಾಲವಾಗಿದೆ. ಮುಂದಿನ ಜಾಗತಿಕ ಅನ್ವೇಷಣಾ ಸೂಚ್ಯಂಕದಲ್ಲಿ ಭಾರತ ಅಗ್ರ 25 ರಾಷ್ಟ್ರಗಳಲ್ಲಿ ಸ್ಥಾನ ಪಡೆಯುವ ಗುರಿ ಹೊಂದಬೇಕಾಗಿದೆ.

***



(Release ID: 1650902) Visitor Counter : 221