ಪ್ರಧಾನ ಮಂತ್ರಿಯವರ ಕಛೇರಿ

ಪ್ರಸಕ್ತ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ರೋಗ ನಿಯಂತ್ರಣದ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ

Posted On: 11 AUG 2020 3:10PM by PIB Bengaluru

ನಮಸ್ಕಾರ !.

ನಿಮ್ಮೊಂದಿಗೆ ಸಂವಾದ ನಡೆಸುವುದರಿಂದ ನಮಗೆ ಸಮಗ್ರ ಮಾದರಿಯಲ್ಲಿ ತಳ ಮಟ್ಟದ ವಾಸ್ತವದ ಪರಿಸ್ಥಿತಿಯ ಮಾಹಿತಿ ಲಭ್ಯವಾಗುತ್ತದೆ ಮತ್ತು ಅದು ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ತೋರಿಸುತ್ತದೆ !. ಆಗಾಗ ನಿಯಮಿತವಾಗಿ ಸಭೆ ಸೇರಿ ಚರ್ಚಿಸುವುದು ಬಹಳ ಮುಖ್ಯ, ಯಾಕೆಂದರೆ ಕೊರೊನಾ ಜಾಗತಿಕ ಸಾಂಕ್ರಾಮಿಕದ ನಡುವೆ ದಿನಗಳು ಸಾಗುತ್ತಿರುವಂತೆಯೇ , ಹೊಸ ಪರಿಸ್ಥಿತಿಗಳು ಉದ್ಭವಿಸುತ್ತಿವೆ !.

ಪ್ರತಿ ದಿನವೂ ನಾವು ಆಸ್ಪತ್ರೆಗಳ ಮೇಲಣ ಒತ್ತಡ ಹೆಚ್ಚುತ್ತಿರುವ , ನಮ್ಮ ಆರೋಗ್ಯ ಕಾರ್ಯಕರ್ತರ  ಮೇಲೆ ಒತ್ತಡ ಹೆಚ್ಚುತ್ತಿರುವ ಬಗ್ಗೆ ಮತ್ತು ದೈನಂದಿನ ಕೆಲಸಗಳಲ್ಲಿ ನಿರಂತರತೆಯ  ಕೊರತೆಯನ್ನು ಒಳಗೊಂಡಂತೆ ಹೊಸ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ಪ್ರತಿಯೊಂದು ರಾಜ್ಯವೂ ತನ್ನದೇ ರೀತಿಯಲ್ಲಿ ಈ ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಡುತ್ತಿರುವುದು ನನಗೆ ಸಂತೋಷ ತಂದಿದೆ. ಅದು ಕೇಂದ್ರ ಸರಕಾರ ಇರಲಿ ಅಥವಾ ರಾಜ್ಯ ಸರಕಾರವಿರಲಿ ನಾವು ತಂಡವಾಗಿ ನಿರಂತರವಾಗಿ ತಂಡ ಸ್ಪೂರ್ತಿಯೊಂದಿಗೆ ಕೆಲಸ ಮಾಡಲು ಸಮರ್ಥರಾಗಿದ್ದೇವೆ. ಮತ್ತು ಈ ತಂಡ ಸ್ಪೂರ್ತಿಯು ಫಲಿತಾಂಶಗಳನ್ನು ತರುವಲ್ಲಿ ಸಫಲವಾಗಿದೆ. ಇಂತಹ ಪ್ರಮುಖ ಬಿಕ್ಕಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ದುಡಿದಿದ್ದೇವೆ ಎಂಬುದು ಪ್ರತಿಯೊಬ್ಬರಿಗೂ ಬಹು ಮುಖ್ಯವಾದ ಸಂಗತಿಯಾಗಿದೆ.

ಗೌರವಾನ್ವಿತ ಮುಖ್ಯ ಮಂತ್ರಿಗಳೇ,

ಇಂದು 80 ಶೇಕಡಾದಷ್ಟು ಸಕ್ರಿಯ ಪ್ರಕರಣಗಳು ಈ 10 ರಾಜ್ಯಗಳಲ್ಲಿವೆ. ಆದುದರಿಂದ ಕೊರೊನಾ ವಿರುದ್ದದ ಹೋರಾಟದಲ್ಲಿ ಈ ಎಲ್ಲಾ ರಾಜ್ಯಗಳ ಪಾತ್ರ ಬಹಳ ದೊಡ್ಡದಿದೆ. ಇಂದು, ದೇಶದಲ್ಲಿ 6 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಮತ್ತು ಇವುಗಳಲ್ಲಿ ಬಹುಪಾಲು ಪ್ರಕರಣಗಳು ಈ 10 ರಾಜ್ಯಗಳಲ್ಲಿವೆ !. ಆದುದರಿಂದ ಈ 10 ರಾಜ್ಯಗಳು ಜೊತೆಯಲ್ಲಿ ಕುಳಿತು ಪರಿಸ್ಥಿತಿಯನ್ನು ಅವಲೋಕಿಸುವುದು ಮತ್ತು ಚರ್ಚಿಸುವುದು ಬಹಳ ಅವಶ್ಯವಾಗಿದೆ. ಪ್ರತಿಯೊಬ್ಬರೂ ಈ ರಾಜ್ಯಗಳು ಅಳವಡಿಸಿಕೊಳ್ಳುವ ಹೊಸ ಉಪಕ್ರಮಗಳು ಮತ್ತು ಉತ್ತಮ ಪದ್ದತಿಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಪ್ರತಿಯೊಂದು ರಾಜ್ಯವೂ ತನ್ನದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ ಪರಸ್ಪರ ಅನುಭವಗಳಿಂದ ಕಲಿತುಕೊಳ್ಳುವುದೂ  ಅಗತ್ಯವಿದೆ. ಮತ್ತು ಇಂದಿನ ಚರ್ಚೆ, ಸಮಾಲೋಚನೆಯಿಂದ ನಾವು ಪರಸ್ಪರ ಬಹಳಷ್ಟನ್ನು ಕಲಿತುಕೊಂಡಿದ್ದೇವೆ. ನಾವು ಒಗ್ಗೂಡಿ ಈ ಹತ್ತು ರಾಜ್ಯಗಳಲ್ಲಿ ಕೊರೊನಾವನ್ನು ಸೋಲಿಸಿದರೆ , ದೇಶವೂ ಗೆದ್ದಂತಾಗುತ್ತದೆ !. 

ಸ್ನೇಹಿತರೇ,

ದಿನವೊಂದಕ್ಕೆ  ನಡೆಸುವ ಪರೀಕ್ಷೆಗಳ ಸಂಖ್ಯೆ 7 ಲಕ್ಷಕ್ಕೆ ತಲುಪಿದೆ. ಮತ್ತು ಅದು ಸತತ ಹೆಚ್ಚುತ್ತಿದೆ. ಇಂದು ನಾವು ಸೋಂಕಿನ ಗುರುತಿಸುವಿಕೆ ಮತ್ತು ಹರಡುವಿಕೆ ಪ್ರತಿಬಂಧಿಸಲು ಸಹಾಯ ಮಾಡುವ  ಫಲಿತಾಂಶಕ್ಕೆ ಸಾಕ್ಷಿಯಾಗಿದ್ದೇವೆ. ನಮ್ಮ ದೇಶದಲ್ಲಿ ಸರಾಸರಿ ಮರಣ ಪ್ರಮಾಣ ಜಗತ್ತಿನ ಇತರೆಡೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಈ ಮೊದಲೂ ಅದು ಕಡಿಮೆ ಪ್ರಮಾಣದಲ್ಲಿತ್ತು ಎಂಬುದು ಮತ್ತು ಅದು ಸತತ ಕಡಿಮೆಯಾಗುತ್ತಿರುವುದು ಬಹಳ ಸಮಾಧಾನಕರ ಸಂಗತಿ !.  ಸಕ್ರಿಯ ಪ್ರಕರಣಗಳ ಶೇಕಡಾವಾರು ಪ್ರಮಾಣ ಕಡಿಮೆಯಾಗಿದೆ. ಗುಣಮುಖ ದರ , ಚೇತರಿಕೆ ದರ ಸತತವಾಗಿ ಹೆಚ್ಚುತ್ತಿದೆ ಮತ್ತು ಸುಧಾರಿಸುತ್ತಿದೆ. ಇದರರ್ಥ ನಮ್ಮ ಪ್ರಯತ್ನಗಳು ಪರಿಣಾಮಕಾರಿಯಾಗಿವೆ ಎಂಬುದಾಗಿದೆ !. ಬಹಳ ಪ್ರಮುಖವಾದ ಸಂಗತಿಯೆಂದರೆ ಇದು ಜನತೆಯಲ್ಲಿ ವಿಶ್ವಾಸವನ್ನು ವೃದ್ಧಿಸಿದೆ ಮತ್ತು ಭಯದ ವಾತಾವರಣ ಚದುರತೊಡಗಿದೆ.

ಮತ್ತು ನಾವು ನಮ್ಮ ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಿಸುತ್ತಾ ಹೋದಂತೆ ನಮ್ಮ ಯಶಸ್ಸು ಕೂಡಾ ದೊಡ್ಡದಾಗುತ್ತಾ ಹೋಗುತ್ತದೆ!. ಮತ್ತು ನಾವು ಮರಣ ಪ್ರಮಾಣವನ್ನು  1 ಶೇಕಡಾಕ್ಕಿಂತ ಕಡಿಮೆ ಮಾಡುವ ನಿಟ್ಟಿನಲ್ಲಿ ಆದ್ಯ ಗಮನ ನೀಡಿ ಸ್ವಲ್ಪ ಹೆಚ್ಚು ಪ್ರಯತ್ನಗಳನ್ನು ಹಾಕಿದರೆ , ನಾವು ಆ ಗುರಿಯನ್ನು ಕೂಡಾ ತಲುಪಲು ಸಾಧ್ಯವಿದೆ. ನಾವು ಮುಂದೇನು ಮಾಡಬೇಕು ಎಂಬುದರ ಬಗ್ಗೆ ಮತ್ತು ಹೇಗೆ ಮುಂದುವರೆಯಬೇಕು ಎಂಬ ಬಗ್ಗೆ ನಮಗೆ ಸಾಕಷ್ಟು ನಿಖರತೆ ಇದೆ. ಮತ್ತು ಆ ದಾರಿಯಲ್ಲಿ ತಳಮಟ್ಟಕ್ಕೆ ತಲುಪಿದ್ದೇವೆ, ಪ್ರತಿಯೊಬ್ಬರೂ ಏನನ್ನು ಮಾಡಬೇಕು, ಹೇಗೆ ಮತ್ತು ಯಾವಾಗ ಆ ಕ್ರಮಗಳನ್ನು ಕೈಗೊಳ್ಳಬೇಕು ಇತ್ಯಾದಿಗಳನ್ನು ತಿಳಿಸಿದ್ದೇವೆ. ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಈ ಸಂದೇಶವನ್ನು ತಲುಪಿಸಲು ನಾವು ಸಮರ್ಥರಾಗಿದ್ದೇವೆ !.

ಈಗ ನೋಡಿ, ಪರೀಕ್ಷೆಗಳ ಪ್ರಮಾಣ ಕಡಿಮೆ ಇರುವಲ್ಲಿ, ಮತ್ತು ಪಾಸಿಟಿವ್ ಪ್ರಕರಣಗಳ ದರ ಹೆಚ್ಚು ಇರುವ ರಾಜ್ಯಗಳಲ್ಲಿ ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ನಮ್ಮ ಸಮಾಲೋಚನೆಗಳು ನಿರ್ದಿಷ್ಟವಾಗಿ ಬಿಹಾರ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣಗಳಲ್ಲಿ ಪರೀಕ್ಷೆಗಳಿಗೆ ಹೆಚ್ಚು ವಿಶೇಷ ಒತ್ತು ನೀಡಬೇಕಾದ ಅವಶ್ಯಕತೆಯನ್ನು ಮನಗಾಣಿಸಿವೆ !.

ಸ್ನೇಹಿತರೇ,

ಇದುವರೆಗಿನ ನಮ್ಮ ಅನುಭವವು ಕೊರೊನಾ ವಿರುದ್ದ ಅತ್ಯಂತ ಪರಿಣಾಮಕಾರಿ ಅಸ್ತ್ರ ಎಂದರೆ ಅದನ್ನು ನಿರ್ಬಂಧಿಸುವುದು, ಸಂಪರ್ಕ ಪತ್ತೆ ಮಾಡುವುದು ಮತ್ತು ನಿಗಾವಹಿಸುವುದು  ಎಂಬುದನ್ನು ಸಾಬೀತು ಮಾಡಿದೆ !. ಈಗ ಸಾರ್ವಜನಿಕರು ಕೂಡಾ ಇದನ್ನು ಅರ್ಥ ಮಾಡಿಕೊಂಡು ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ. ಜಾಗೃತಿಯ ಮಟ್ಟವನ್ನು ಎತ್ತರಿಸುವ ಮೂಲಕ ನಾವು ಉತ್ತಮ ಫಲಿತಾಂಶಗಳನ್ನು ಸಾಧಿಸುವತ್ತ ಮುನ್ನಡೆಯುತ್ತಿದ್ದೇವೆ. ಈ ಕಾರಣದಿಂದಾಗಿ ಇಂದು ಗೃಹ ಕ್ವಾರಂಟೈನ್ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಅನುಷ್ಟಾನಿಸುವುದಕ್ಕೆ ಸಾಧ್ಯವಾಗಿದೆ.

ನಾವು ಪ್ರಕರಣಗಳನ್ನು 72 ಗಂಟೆಗಳ ಒಳಗೆ ಪತ್ತೆ ಹಚ್ಚಲು ಸಾಧ್ಯವಾದರೆ , ಆಗ ಈ ಸೋಂಕು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ ಎಂದು ತಜ್ಞರು ಈಗ ಹೇಳುತ್ತಿದ್ದಾರೆ. ಆದುದರಿಂದ ನನ್ನ ಕಳಕಳಿಯ ಮನವಿ ಏನೆಂದರೆ ನಾವು ಕೈಗಳನ್ನು ತೊಳೆಯುವ ನಿಯಮಗಳ , ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ಮುಖಗವಸುಗಳಿಗೆ ಸಂಬಂಧಿಸಿದ ನಿಯಮಗಳ ಅನುಸರಣೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬುದಾಗಿದೆ. ನಾವು ಎಲ್ಲೂ ಉಗುಳಬಾರದು. ಇದಲ್ಲದೆ ನಾವು ಸರಕಾರಗಳಲ್ಲಿ, ಸರಕಾರಿ ವ್ಯವಸ್ಥೆಗಳಲ್ಲಿ , ಕೊರೊನಾ ವಾರಿಯರ್ ಗಳಲ್ಲಿ ಮತ್ತು ಜನರಲ್ಲಿ ಹೊಸ ಮಂತ್ರವನ್ನು ಹರಡಬೇಕು. ಆ ಹೊಸ ಮಂತ್ರ ಏನೆಂದರೆ , ಯಾರೇ ಒಬ್ಬರು ಕೊರೊನಾ ಸೋಂಕಿಗೆ ಒಳಗಾದರೆ 72 ಗಂಟೆಗಳ ಒಳಗೆ ಅವರ ನಿಕಟ ಸಂಪರ್ಕಗಳನ್ನು ಪತ್ತೆ ಹಚ್ಚಬೇಕು ಮತ್ತು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು. ಮತ್ತು ಅದಕ್ಕಾಗಿ ಎಲ್ಲಾ ಅವಶ್ಯ ಸಿದ್ದತೆಗಳು ಅಲ್ಲಿ ಲಭ್ಯ ಇರಬೇಕು. ನಾವು ಈ 72 ಗಂಟೆಗಳ ಸೂತ್ರಕ್ಕೆ ಒತ್ತು ನೀಡಿದ್ದೇ ಆದರೆ ಇತರೆಲ್ಲಾ ಕೆಲಸಗಳನ್ನು 72 ಗಂಟೆಗಳ ಒಳಗೆ ಮಾಡಬಹುದು.

ಇಂದು ಪರೀಕ್ಷಾ ಜಾಲವಲ್ಲದೆ , ನಾವು ಆರೋಗ್ಯ ಸೇತು ಆಪ್ ಕೂಡ ಹೊಂದಿದ್ದೇವೆ. ಒಂದು ತಂಡವು ನಿಯಮಿತವಾಗಿ ಆರೋಗ್ಯ ಸೇತು ಆಪ್ ಸಹಾಯದ ಮೂಲಕ ವಿಶ್ಲೇಷಣೆ ನಿರತವಾದಲ್ಲಿ , ಆಗ ನಾವು ಯಾವ ಪ್ರದೇಶದಿಂದ ಹೆಚ್ಚು ದೂರುಗಳು  ವರದಿಯಾಗುತ್ತಿವೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಹರ್ಯಾಣದ ಕೆಲವು ಜಿಲ್ಲೆಗಳು, ಉತ್ತರ ಪ್ರದೇಶದ ಕೆಲವು ಜಿಲ್ಲೆಗಳು  ಮತ್ತು ದಿಲ್ಲಿಯಲ್ಲಿ ಕೆಲವು ಅವಧಿಗಳು ಅತ್ಯಂತ ಕಳವಳಕಾರಿಯಾಗಿರುವುದನ್ನು ನಾವು ಗಮನಿಸಿದೇವೆ. ದಿಲ್ಲಿಯಲ್ಲಿ ದೊಡ್ಡ ಬಿಕ್ಕಟ್ಟೊಂದು ಎದುರಾಗಲಿದೆ ಎಂಬುದನ್ನು ಸರಕಾರವೇ ಘೋಷಿಸಿತ್ತು . ಆದುದರಿಂದ ನಾವು ಪರಾಮರ್ಶನಾ ಸಭೆ ನಡೆಸಿ ನಮ್ಮ ಗೃಹ ಸಚಿವ ಶ್ರೀ ಅಮಿತ್ ಶಾ ಜೀ ಅವರ ನೇತೃತ್ವದಲ್ಲಿ ತಂಡ ರಚಿಸಿ ಹೊಸ ಧೋರಣೆಯನ್ನು ಅಳವಡಿಸಿಕೊಂಡೆವು. ನಾವು ನಿರೀಕ್ಷಿತ ಫಲಿತಾಂಶಗಳನ್ನು ಆ ಐದು ಜಿಲ್ಲೆಗಳಿಂದ ಮಾತ್ರವಲ್ಲ ದಿಲ್ಲಿ ನಗರದಿಂದಲೂ ದೊಡ್ಡ ಪ್ರಮಾಣದಲ್ಲಿ ಪಡೆದುಕೊಂಡೆವು.

ಪರಿಸ್ಥಿತಿ ಎಷ್ಟೇ ಕಠಿಣ ಮತ್ತು ಕಷ್ಟಕರ ಎಂದು ಕಂಡು ಬಂದರೂ, ನಾವು ವ್ಯವಸ್ಥಿತವಾಗಿ ಮುನ್ನಡೆದರೆ ಆಗ ನಾವು ಒಂದು ವಾರ ಅಥವಾ 10 ದಿನಗಳಲ್ಲಿ  ಪರಿಸ್ಥಿತಿಯನ್ನು ನಮ್ಮ ಪರವಾಗಿ ತಿರುಗಿಸಿಕೊಳ್ಳಬಹುದು, ಮತ್ತು ನಾವದರ ಅನುಭವ ಪಡೆದಿದ್ದೇವೆ. ಈ ತಂತ್ರದ ಕೇಂದ್ರೀಯ ಅಂಶಗಳೆಂದರೆ : ಕಂಟೈನ್ ಮೆಂಟ್ ವಲಯಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವಿಕೆ, ಅವಶ್ಯವಿದ್ದಲೆಲ್ಲ ಸಣ್ಣ ಕಂಟೈನ್ ಮೆಂಟ್ ವಲಯಗಳ ರಚನೆ, ಶೇಕಡಾ ನೂರರಷ್ಟು ರಿಕ್ಷಾ ವಾಲಾ, ರಿಕ್ಷಾ ಚಾಲಕರು ಮತ್ತು ಮನೆ ಕೆಲಸದವರನ್ನು ತಪಾಸಣೆಗೆ ಒಳಪಡಿಸುವಿಕೆ, ಇಂದು ಈ ಪ್ರಯತ್ನಗಳ ಫಲಿತಾಂಶ ನಮ್ಮೆದುರು ಇದೆ !. ಆಸ್ಪತ್ರೆಗಳಲ್ಲಿ ಉತ್ತಮ ನಿರ್ವಹಣೆ, ಮತ್ತು ಐ.ಸಿ.ಯು. ಹಾಸಿಗೆಗಳ ಸಂಖ್ಯೆಯಲ್ಲಿ ಹೆಚ್ಚಳ ಬಹಳಷ್ಟು ಸಹಾಯವನ್ನು ಈ ನಿಟ್ಟಿನಲ್ಲಿ ನೀಡಿದೆ !.

ಸ್ನೇಹಿತರೆ,

ಅತ್ಯಂತ ಪರಿಣಾಮಕಾರಿ ಅನುಭವವೆಂದರೆ ಅದು ನಿಮ್ಮದು !. ನಿಮ್ಮ ರಾಜ್ಯಗಳಲ್ಲಿ ತಳಮಟ್ಟದ ವಾಸ್ತವತೆಯನ್ನು ಸತತ ನಿಗಾ ಮಾಡುವ ಮೂಲಕ ಯಶಸ್ಸಿನ ದಾರಿಯನ್ನು ರೂಪಿಸಲಾಗುತ್ತದೆ !. ನಿಮ್ಮ ಅನುಭವಗಳು ನಾವು ಇಂದು ಏನನ್ನು ಸಾಧಿಸಲು ಸಾಧ್ಯವಾಗಿದೆಯೋ ಅದಕ್ಕೆ ನೆರವಾಗಿವೆ. ಈ ಅನುಭವಗಳ, ಪರಿಣತಿಯ ಬಲದೊಂದಿಗೆ ದೇಶವು ಈ ಯುದ್ದವನ್ನು ಸಂಪೂರ್ಣವಾಗಿ ಗೆಲ್ಲುವುದೆಂಬ ಬಗ್ಗೆ ನನಗೆ ವಿಶ್ವಾಸವಿದೆ. ಮತ್ತು ಅದು ಹೊಸ ಅರುಣೋದಯಕ್ಕೆ ಕಾರಣವಾಗಲಿದೆ !. ನಿಮ್ಮಲ್ಲಿ ಬೇರಾವುದಾದರೂ ಸಲಹೆಗಳಿದ್ದರೆ, ಸೂಚನೆಗಳಿದ್ದರೆ ನಾನು ನಿಮಗೆ ಸದಾ ಲಭ್ಯನಿದ್ದೇನೆ !. ನೀವು ನನಗೆ ಹೇಳಬೇಕು. ಸರಕಾರದ ಎಲ್ಲಾ ಅಧಿಕಾರಿಗಳೂ ಇಂದು ಹಾಜರಿದ್ದಾರೆ. ಆದುದರಿಂದ ನಾನು ನಿಮಗೆ ಭರವಸೆ ನೀಡುತ್ತೇನೆ ಏನೆಂದರೆ ನೀವು ಪ್ರಸ್ತಾಪಿಸಿದ ವಿಷಯಗಳು ಮತ್ತು ನೀವು ಕಳವಳ ವ್ಯಕ್ತಪಡಿಸಿದ ಎಲ್ಲಾ ಅಂಶಗಳ ಬಗ್ಗೆಯೂ ತಂಡವು ತಕ್ಷಣ ಗಮನ ಹರಿಸುತ್ತದೆ. ಮತ್ತು ಈ ಅವಧಿಯಲ್ಲಿ ಸಾವನ್ (ಶ್ರಾವಣದಿಂದ) ನಿಂದ ದೀಪಾವಳಿಯವರೆಗೆ ಇತರ ಕೆಲವು ಖಾಯಿಲೆಗಳ ಅಪಾಯವೂ ಹೆಚ್ಚು ಇರುತ್ತದೆ ಎಂಬುದೂ ನಮಗೆ ಗೊತ್ತಿದೆ. ಆ ರೋಗಗಳನ್ನೂ ನಾವು ನಿಭಾಯಿಸಬೇಕಿದೆ. ಎಲ್ಲಾ ಸಂಪರ್ಕ ವ್ಯಕ್ತಿಗಳನ್ನು 72 ಗಂಟೆಗಳ ಒಳಗೆ ತಲುಪುವ ಮೂಲಕ,  ಮರಣ ಪ್ರಮಾಣವನ್ನು ಶೇಕಡಾ ಒಂದಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಸಾಧಿಸಲು ಮತ್ತು ಗುಣಮುಖ ದರವನ್ನು ತ್ವರಿತವಾಗಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಈ ನಿಟ್ಟಿನಲ್ಲಿ ಗಮನ ಕೊಟ್ಟರೆ ಮತ್ತು ಮಂತ್ರಗಳನ್ನು ಅನುಸರಿಸಿದರೆ ಆಗ 80 ಶೇಕಡಾದಷ್ಟು ಪ್ರಕರಣಗಳ ಭಾರವನ್ನು ಮತ್ತು 82 ಶೇಕಡಾ ಮರಣ ಪ್ರಮಾಣವನ್ನು ಹೊಂದಿರುವ ನಮ್ಮ 10 ರಾಜ್ಯಗಳು ಈ ಪರಿಸ್ಥಿತಿಯನ್ನು ಬದಲಾಯಿಸಿ, ಒಗ್ಗೂಡಿ ಭಾರತವನ್ನು ಜಯಶೀಲವನ್ನಾಗಿಸಬಹುದು ಮತ್ತು ಅದನ್ನು ನಾವು ಮಾಡಬಲ್ಲೆವು ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ನಾನು ಮತ್ತೊಮ್ಮೆ ನಿಮ್ಮ ಸಮಯವನ್ನು ತೆಗೆದುಕೊಂಡುದಕ್ಕಾಗಿ ನಿಮಗೆಲ್ಲಾ ಧನ್ಯವಾದ ಸಲ್ಲಿಸುತ್ತೇನೆ. ಸಮಯದ ಪರಿಮಿತಿ ಇದ್ದಾಗ್ಯೂ ನೀವು ನಿಮ್ಮ ಆತಂಕಗಳನ್ನು , ಕಳವಳಗಳನ್ನು ಉತ್ತಮವಾಗಿ ವ್ಯಕ್ತಪಡಿಸಿದ್ದೀರಿ .

ನಿಮಗೆ ತುಂಬಾ ಧನ್ಯವಾದಗಳು .



(Release ID: 1648441) Visitor Counter : 172