ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೋವಿಡ್ 19: ಮಾಧ್ಯಮ ನಿರ್ಮಾಣ ಸಂಸ್ಥೆಗಳಿಗೆ ಸಾಮಾನ್ಯ ಕಾರ್ಯ ವಿಧಾನ ಶಿಷ್ಟಾಚಾರಗಳ ಬಿಡುಗಡೆ – ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್

Posted On: 23 AUG 2020 12:41PM by PIB Bengaluru

ಮಾಧ್ಯಮ ನಿರ್ಮಾಣವು ನಮ್ಮ ದೇಶದ ಜಿಡಿಪಿಗೆ ಅಪಾರ ಕೊಡುಗೆ ನೀಡುತ್ತಿರುವ ಪ್ರಮುಖ ಆರ್ಥಿಕ ಚಟುವಟಿಕೆಯಾಗಿದೆ. ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದಿಂದಾಗಿ, ಮಾಧ್ಯಮ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಗಿರುವವರು ತಮ್ಮ ಚಟುವಟಿಕೆಗಳನ್ನುಪುನರಾರಂಭಿಸುವಾಗ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಪ್ರಮುಖವಾಗಿದೆ, 
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಿರುವ ಮಾಧ್ಯಮ ನಿರ್ಮಾಣ ಚಟುವಟಿಕೆಗಳ ಸಂದರ್ಭದಲ್ಲಿ ರೋಗ ತಡೆಗಟ್ಟುವ ಕ್ರಮಗಳ ಮಾರ್ಗಸೂಚಿ ಮತ್ತು ಸಾಮಾನ್ಯ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು.
ಮಾರ್ಗಸೂಚಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿರುವ ಸಾಮಾನ್ಯ ಸಲಹೆಗಳನ್ನು ಒಳಗೊಂಡಿವೆ. ಕೋವಿಡ್-19 ಕಂಟೈನ್ಮೆಂಟ್ ವಲಯದಲ್ಲಿ ಜೀವನಾವಶ್ಯಕವಲ್ಲದ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡದಿರುವುದು,  ತೀವ್ರ ಅಪಾಯ ಹೊಂದಿರುವ ನೌಕರರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ ಕವಚ / ಮುಖಗವಸು, ಆಗಾಗ್ಗೆ ಕೈ ತೊಳೆಯುವುದು, ಕೈ ಸ್ಯಾನಿಟೈಜರ್‌ಗಳನ್ನು ಒದಗಿಸುವುದು ಮತ್ತು ವಿಶೇಷವಾಗಿ ಉಸಿರಾಟದ ಶಿಷ್ಟಾಚಾರಗಳನ್ನು ಪಾಲಿಸುವುದು ಇದರಲ್ಲಿ ಸೇರಿವೆ. 
ದೈಹಿಕ ಅಂತರ, ಚಿತ್ರೀಕರಣ ಸ್ಥಳಗಳಿಗೆ ಗೊತ್ತುಪಡಿಸಿದ ಪ್ರವೇಶ ಮತ್ತು ನಿರ್ಗಮನ,  ನೈರ್ಮಲ್ಯೀಕರಣ, ಸಿಬ್ಬಂದಿಗಳ ಸುರಕ್ಷತೆ, ಸಂಪರ್ಕವನ್ನು ಕಡಿಮೆಗೊಳಿಸುವುದು ಮತ್ತು ಕ್ವಾರಂಟೈನ್ / ಐಸೋಲೇಷನ್ ಸೇರಿದಂತೆ ಗೃಹ ಸಚಿವಾಲಯ ಹೊರಡಿಸಿರುವ ಪ್ರಯಾಣ ಸಂಬಂಧಿ ಮಾರ್ಗಸೂಚಿಗಳನ್ನು ಒಳಗೊಂಡಂತೆ ಈ ಕ್ಷೇತ್ರದಲ್ಲಿರುವ ಅಂತರರಾಷ್ಟ್ರೀಯ ಅಭ್ಯಾಸಗಳನ್ನು ಗಣನೆಗೆ ತೆಗೆದುಕೊಂಡು ಎಸ್‌ಒಪಿಗಳನ್ನು ರೂಪಿಸಲಾಗಿದೆ. ನಿರ್ದಿಷ್ಟವಾಗಿ, ಮುಖಗವಸುಗಳಿಗೆ ಸಂಬಂಧಿಸಿದಂತೆ, ಅಂತರರಾಷ್ಟ್ರೀಯ ಅಭ್ಯಾಸಗಳ ಪ್ರಕಾರ, ಕ್ಯಾಮೆರಾದ ಮುಂದೆ ನಟರನ್ನು ಹೊರತುಪಡಿಸಿ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಮುಖಗವಸು ಕಡ್ಡಾಯಗೊಳಿಸಲಾಗಿದೆ.
ಮಾಧ್ಯಮ ನಿರ್ಮಾಣ ಕೆಲಸವನ್ನು ಪುನರಾರಂಭಿಸುವಾಗ ಈ ಮಾರ್ಗಸೂಚಿ ಮತ್ತು ಎಸ್‌ಒಪಿಯನ್ನು ಎಲ್ಲಾ ರಾಜ್ಯಗಳು ಮತ್ತು ಇತರ ಪಾಲುದಾರರು ಬಳಸಬಹುದು.
ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು “ಎಸ್‌ಒಪಿ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿದೆ. ಕೊರೊನಾ ವೈರಸ್‌ನಿಂದಾಗಿ ಸುಮಾರು 6 ತಿಂಗಳಿನಿಂದ ಬಾಧಿತವಾಗಿರುವ ಉದ್ಯಮಕ್ಕೆ ಇದು ಉತ್ತೇಜನವನ್ನು ನೀಡುತ್ತದೆ ಮತ್ತು ಸಚಿವಾಲಯದ ಈ ಕ್ರಮವನ್ನು ಜನರು ಸ್ವಾಗತಿಸುತ್ತಾರೆ.” ಎಂದು ಹೇಳಿದರು. ಚಲನಚಿತ್ರ ಮತ್ತು ದೂರದರ್ಶನ ಕ್ಷೇತ್ರವು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಒದಗಿಸುವುದರಿಂದ ಆರ್ಥಿಕತೆಯನ್ನು ಉತ್ತೇಜಿಸುವ  ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಶ್ರೀ ಜಾವಡೇಕರ್ ಹೇಳಿದರು.
ಎಲ್ಲಾ ರಾಜ್ಯಗಳು ಈ ಎಸ್‌ಒಪಿಯನ್ನು ಕಾರ್ಯಗತಗೊಳಿಸುವ ಭರವಸೆ ವ್ಯಕ್ತಪಡಿಸಿದ ಸಚಿವರು ಅಗತ್ಯವಿದ್ದರೆ ಕೆಲವು ಷರತ್ತುಗಳನ್ನು ಸೇರಿಸಬಹುದು ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಗೃಹ ಸಚಿವಾಲಯದೊಂದಿಗೆ ಸಮಾಲೋಚಿಸಿ ಈ ಎಸ್‌ಒಪಿ ಸಿದ್ಧಪಡಿಸಲಾಗಿದೆ.
***



(Release ID: 1648053) Visitor Counter : 206