ಉಪರಾಷ್ಟ್ರಪತಿಗಳ ಕಾರ್ಯಾಲಯ
ಸಹ ಬಾಳ್ವೆ ಮತ್ತು ಒಗ್ಗೂಡಿ ಕೆಲಸ ಮಾಡುವ ಭಾರತದ ಭವ್ಯ ಸಾಂಸ್ಕೃತಿಕ ಸಂಪ್ರದಾಯ ಸಂರಕ್ಷಿಸಲು ಮತ್ತು ಉತ್ತೇಜಿಸಲು ಉಪ ರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಕರೆ
Posted On:
18 JUL 2020 1:32PM by PIB Bengaluru
ಸಹ ಬಾಳ್ವೆ ಮತ್ತು ಒಗ್ಗೂಡಿ ಕೆಲಸ ಮಾಡುವ ಭಾರತದ ಭವ್ಯ ಸಾಂಸ್ಕೃತಿಕ ಸಂಪ್ರದಾಯ ಸಂರಕ್ಷಿಸಲು ಮತ್ತು ಉತ್ತೇಜಿಸಲು
ಉಪ ರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಕರೆ
ಮೈಸೂರು ಸಂಸ್ಥಾನದ 25 ನೇ ಮಹಾರಾಜ ಶ್ರೀ ಜಯ ಚಾಮರಾಜ ಒಡೆಯರ್ ಅವರ ಶತಮಾನೋತ್ಸವದ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿದ ಶ್ರೀ ವೆಂಕಯ್ಯ ನಾಯ್ಡು
ಮಹಾರಾಜ ಜಯ ಚಾಮರಾಜ ಒಡೆಯರ್ ರಾಷ್ಟ್ರದ ಅತಿ ಎತ್ತರದ ನಾಯಕರು ಮತ್ತು ಜನಮೆಚ್ಚುಗೆ ಗಳಿಸಿದ ಆಡಳಿತಗಾರರಲ್ಲಿ ಒಬ್ಬರು: ಉಪ ರಾಷ್ಟ್ರಪತಿ
ದಿಟ್ಟ ಆಡಳಿತಗಾರರಾಗಿದ್ದರು, ಬಲಿಷ್ಠ, ಸ್ವಾವಲಂಬಿ ಮತ್ತು ಪ್ರಗತಿಪರ ಮೈಸೂರು ರಾಜ್ಯವನ್ನು ಕಟ್ಟಿದರು - ಉಪ ರಾಷ್ಟ್ರಪತಿ
ಮಹಾರಾಜರು ನೈಜ ಜನಪರ ಆಡಳಿತಗಾರ ಮತ್ತು ಪ್ರಜಾಪ್ರಭುತ್ವವಾದಿಯಾಗಿದ್ದರು - ಉಪ ರಾಷ್ಟ್ರಪತಿ
ಬಲಿಷ್ಠ ಪ್ರಜಾಪ್ರಭುತ್ವ ಭಾರತದ ಪರಿವರ್ತನೆಗೆ ಕಾರಣವಾದ ಪ್ರವರ್ತಕ ನಾಯಕರಾಗಿದ್ದರು
ಒಡೆಯರ್ ಅವರು ಉದ್ಯಮಶೀಲತೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರೋತ್ಸಾಹಕರಾಗಿದ್ದರು- ಉಪ ರಾಷ್ಟ್ರಪತಿ
“ಹಂಚಿಕೆ ಮತ್ತು ಕಾಳಜಿ’ಯ ಭಾರತದ ಶ್ರೇಷ್ಠ ತತ್ವದ ನಿಜ ಸ್ಫೂರ್ತಿಯೊಂದಿಗೆ ದೇಶಕ್ಕಾಗಿ, ವಿಶ್ವಕ್ಕಾಗಿ ಮತ್ತು ಇಡೀ ಮನುಕುಲಕ್ಕಾಗಿ ಕೂಡಿ ಬಾಳುವ ಮತ್ತು ಒಗ್ಗೂಡಿ ದುಡಿಯುವ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಂತೆ ಮತ್ತು ಉತ್ತೇಜಿಸುವಂತೆ ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಇಂದು ಮನವಿ ಮಾಡಿದ್ದಾರೆ.
ಮೈಸೂರು ಸಂಸ್ಥಾನದ 25 ನೇ ಮಹಾರಾಜರಾದ ಶ್ರೀ ಜಯ ಚಾಮರಾಜ ಒಡೆಯರ್ ಅವರ ಶತಮಾನೋತ್ಸವದ ವರ್ಚುವಲ್ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಉಪರಾಷ್ಟ್ರಪತಿಯವರು ಮಾತನಾಡಿದರು. ನಮ್ಮ ಇತಿಹಾಸವನ್ನು ರೂಪಿಸಿದ ಮಹಾರಾಜ ಜಯ ಚಾಮರಾಜ ಒಡೆಯರ್ ಅವರಂತಹ ಎಲ್ಲ ಶ್ರೇಷ್ಠ ಆಡಳಿತಗಾರರು ಮತ್ತು ಮುತ್ಸದ್ಧಿಗಳ ಜ್ಞಾನ, ಬುದ್ಧಿವಂತಿಕೆ, ದೇಶಭಕ್ತಿ ಮತ್ತು ದೃಷ್ಟಿಕೋನವನ್ನು ಆಚರಿಸುವಂತೆ ಅವರು ಕರೆ ನೀಡಿದರು.
ಶ್ರೀ ಜಯ ಚಾಮರಾಜ ಒಡೆಯರ್ ಅವರನ್ನು ಸಮರ್ಥ ಆಡಳಿತಗಾರ ಎಂದು ಕರೆದ ಉಪ ರಾಷ್ಟ್ರಪತಿಯವರು, “ಅವರು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬಲಿಷ್ಠ, ಸ್ವಾವಲಂಬಿ ಮತ್ತು ಪ್ರಗತಿಪರ ರಾಜ್ಯವೊಂದನ್ನು ಒಂದನ್ನು ಕಟ್ಟಿದ್ದರು” ಎಂದು ಹೇಳಿದರು.
ಮಹಾರಾಜರು ಹೃದಯದಲ್ಲಿ ಪ್ರಜಾಪ್ರಭುತ್ವವಾದಿ ಮತ್ತು ನೈಜ ಜನಪರ ಆಡಳಿತಗಾರರಾಗಿದ್ದರು ಎಂದು ಬಣ್ಣಿಸಿದ ಶ್ರೀ ನಾಯ್ಡು, ಅವರು ಯಾವಾಗಲೂ ತಮ್ಮ ಜನರೊಂದಿಗೆ ಸಂಪರ್ಕದಲ್ಲಿರಲು ಮತ್ತು ಜನಸಾಮಾನ್ಯರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತಿದ್ದರು ಎಂದರು.
ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಶ್ರೀ ಒಡೆಯರ್ ಅವರು ಮೈಸೂರು ರಾಜ್ಯದಲ್ಲಿ ಸಂವಿಧಾನ ಸಭೆಯನ್ನು ರಚಿಸಿದರು ಮತ್ತು ಶ್ರೀ ಕೆ.ಸಿ. ರೆಡ್ಡಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವ ಮೂಲಕ ಜವಾಬ್ದಾರಿಯುತ ಸರ್ಕಾರವನ್ನು ಸ್ಥಾಪಿಸಿದರು.
ಬಲಿಷ್ಠ ಪ್ರಜಾಪ್ರಭುತ್ವ ಭಾರತದ ಪರಿವರ್ತನೆಯ ಶ್ರೇಯ ಮಹಾರಾಜರಿಗೆ ಸಲ್ಲುತ್ತದೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಅವರು ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದ ಉಪ ರಾಷ್ಟ್ರಪತಿಯವರು, ಒಡೆಯರ್ ಅವರುಪ್ರಾಚೀನ ಮೌಲ್ಯಗಳು ಮತ್ತು ಆಧುನಿಕತೆಯ ಪರಿಪೂರ್ಣ ಸಮ್ಮಿಲನವಾಗಿದ್ದರು ಎಂದು ಹೇಳಿದರು.
ಸ್ವಾತಂತ್ರ್ಯದ ನಂತರ ಭಾರತ ಒಕ್ಕೂಟಕ್ಕೆ ಸೇರಿದ ಮೊದಲ ಪ್ರಮುಖ ರಾಜ್ಯ ಮೈಸೂರು ಎಂದು ಶ್ರೀ ನಾಯ್ಡು ಹೇಳಿದರು. ಶ್ರೀ ಜಯ ಚಾಮರಾಜ ಒಡೆಯರ್ ಅವರು ಬುದ್ಧಿಶಕ್ತಿ ಮತ್ತು ಔದಾರ್ಯದ ಗುಣಗಳನ್ನು ಹೊಂದಿದ್ದರು. ಇದು ಅವರನ್ನು ರಾಷ್ಟ್ರದ ಅತ್ಯಂತ ಎತ್ತರದ ನಾಯಕರನ್ನಾಗಿ ಮತ್ತು ಅತ್ಯಂತ ಮೆಚ್ಚುಗೆ ಗಳಿಸಿದ ಆಡಳಿತಗಾರರನ್ನಾಗಿ ಮಾಡಿತು ಎಂದರು.
“ಅರ್ಥ ಶಾಸ್ತ್ರದಲ್ಲಿ ಚಾಣಕ್ಯ ವಿವರಿಸುವ ಆದರ್ಶ ರಾಜನ ಅನೇಕ ಗುಣಗಳ ಸಾಕಾರವಾಗಿದ್ದರು” ಎಂದು ಅವರು ಹೇಳಿದರು.
ಶ್ರೀ ಜಯ ಚಾಮರಾಜರನ್ನು ಉದ್ಯಮಶೀಲತೆಯ ಪ್ರೋತ್ಸಾಹಕರೆಂದು ಕರೆದ ಶ್ರೀ ನಾಯ್ಡು ಅವರು ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸಲು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಅವರು ನಿರಂತರ ಪ್ರಯತ್ನಗಳನ್ನು ಮಾಡಿದರು ಎಂದು ಹೇಳಿದರು.
ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರ್ಕ್ರಾಫ್ಟ್ಸ್ ಲಿಮಿಟೆಡ್ (ಇದು ನಂತರ ಎಚ್ಎಎಲ್ ಆಗಿ ಬದಲಾಯಿತು), ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಬೆಂಗಳೂರಿನ ರಾಷ್ಟ್ರೀಯ ಕ್ಷಯರೋಗ ಸಂಸ್ಥೆ ಮತ್ತು ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಂತಹ ಆಧುನಿಕ ಭಾರತದ ಅನೇಕ ಪ್ರಮುಖ ಸಂಸ್ಥೆಗಳ ಸ್ಥಾಪನೆಗೆ ನೀಡಿದ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಮೈಸೂರಿನ 25 ನೇ ಮಹಾರಾಜರು ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದಾರೆ ಎಂದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನು ನಡೆಸಲು ಮತ್ತು ಅಗತ್ಯವಿದ್ದಾಗ ಅದರ ವಿಸ್ತರಣೆಗಾಗಿ ಧನ ಸಹಾಯ ಮತ್ತು ವಿದ್ಯಾರ್ಥಿವೇತನವನ್ನು ಒದಗಿಸುವ ತಮ್ಮ ಕುಟುಂಬದ ಸಂಪ್ರದಾಯವನ್ನು ಮುಂದುವರಿಸಿದರು.
ಶ್ರೀ ಜಯ ಚಾಮರಾಜ ಒಡೆಯರ್ ಅವರು ಪ್ರಸಿದ್ಧ ತತ್ವಜ್ಞಾನಿ, ಸಂಗೀತ ತಜ್ಞ, ರಾಜಕೀಯ ಚಿಂತಕ ಮತ್ತು ಜನೋಪಕಾರಿಯಾಗಿದ್ದರು.
ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡುತ್ತಿದ್ದ ಪ್ರೋತ್ಸಾಹದಿಂದಾಗಿ ಅವರನ್ನು ‘ದಕ್ಷಿಣದ ಭೋಜ’ಎಂದು ಕರೆಯಲಾಗುತ್ತಿತ್ತು ಎಂದು ಉಪ ರಾಷ್ಟ್ರಪತಿ ಹೇಳಿದರು.
ಶ್ರೀ ಜಯ ಚಾಮರಾಜರ ಒಡೆಯರ್ ಅವರ ಸಂಸ್ಕೃತ ಪಾಂಡಿತ್ಯ ಮತ್ತು ಅವರ ಅತ್ಯುತ್ತಮ ಭಾಷಣ ಕೌಶಲ್ಯವನ್ನು ಶ್ಲಾಘಿಸಿದ ಶ್ರೀ ನಾಯ್ಡು, ಅವರ ‘ಜಯ ಚಾಮರಾಜ ಗ್ರಂಥ ರತ್ನ ಮಾಲಾ’ ಸರಣಿಯು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದು ಹೇಳಿದರು.
ಈ ಶುಭ ಸಂದರ್ಭದಲ್ಲಿ ನಾವು ಕಾಲಾತೀತ ಭಾರತೀಯ ಮೌಲ್ಯಗಳು, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಜಾಪ್ರಭುತ್ವದ ಮನೋಭಾವ ಮತ್ತು ಜನ ಕೇಂದ್ರಿತ ಉತ್ತಮ ಆಡಳಿತವನ್ನು ಆಚರಿಸಬೇಕು ಎಂದು ಉಪ ರಾಷ್ಟ್ರಪತಿ ಎಲ್ಲರಿಗೂ ಮನವಿ ಮಾಡಿದರು.
ಗೌರವಾನ್ವಿತ ಉಪ ರಾಷ್ಟ್ರಪತಿಯವರ ಭಾಷಣದ ಪೂರ್ಣಪಾಠ ಇಲ್ಲಿದೆ:
ಮೈಸೂರು ಸಂಸ್ಥಾನದ 25 ನೇ ಮಹಾರಾಜರಾದ ಶ್ರೀ ಜಯ ಚಾಮರಾಜ ಒಡೆಯರ್ ಅವರ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ನಿಮ್ಮೆಲ್ಲರ ಜೊತೆ ಇರುವುದು ನನಗೆ ಸಂತೋಷ ತಂದಿದೆ.
ಸ್ವಾತಂತ್ರ್ಯ ಪೂರ್ವ ಭಾರತದ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾದ, ಬಲವಾದ ಮತ್ತು ಸ್ವಾವಲಂಬಿ ರಾಜ್ಯವನ್ನು ಕಟ್ಟಿದ ಸಮರ್ಥ ಆಡಳಿತಗಾರನೊಬ್ಬನನ್ನು ಸ್ಮರಿಸಿಕೊಳ್ಳಲು ನಿಜಕ್ಕೂ ಇದೊಂದು ಸೂಕ್ತ ಸಮಯವಾಗಿದೆ.
ಶ್ರೀ ಜಯ ಚಾಮರಾಜ ಒಡೆಯರ್ ಅವರ ಬುದ್ಧಿಶಕ್ತಿ ಮತ್ತು ಹೃದಯವಂತಿಕೆಯ ಗುಣಗಳು, ಅವರನ್ನು ಈ ರಾಷ್ಟ್ರದ ಅತ್ಯಂತ ಎತ್ತರದ ನಾಯಕ ಮತ್ತು ಜನಮೆಚ್ಚುಗೆ ಗಳಿಸಿದ ಆಡಳಿತಗಾರರನ್ನಾಗಿ ಮಾಡಿದವು. ಅವರ ದೂರದೃಷ್ಟಿ, ರಚನಾತ್ಮಕ ಉದ್ಯಮಶೀಲತೆ ಮತ್ತು ಔದಾರ್ಯಕ್ಕಾಗಿ ಅವರನ್ನು ಬಹಳವಾಗಿ ಗೌರವಿಸಲಾಗುತ್ತಿತ್ತು.
ಅವರು ನಿಜವಾದ ಜನಪರ ಆಡಳಿತಗಾರರಾಗಿದ್ದರು, ಯಾವಾಗಲೂ ತಮ್ಮ ಜನರೊಂದಿಗೆ ಸಂಪರ್ಕದಲ್ಲಿರಲು ಮತ್ತು ಜನಸಾಮಾನ್ಯರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಬಯಸುತ್ತಿದ್ದರು.
ಕಟ್ಟಾ ರಾಷ್ಟ್ರೀಯವಾದಿಯಾದ ಅವರು ಮೈಸೂರಿನ ಪ್ರಬುದ್ಧ ಆಡಳಿತಗಾರರಾದ ತಮ್ಮ ಪೂರ್ವಿಕರು ಬಿಟ್ಟುಹೋದ ಶ್ರೇಷ್ಠ ಪರಂಪರೆಯನ್ನು ಮುನ್ನಡೆಸಿದರು.
ಸ್ವಾತಂತ್ರ್ಯದ ನಂತರ, ಭಾರತ ಒಕ್ಕೂಟವನ್ನು ಸೇರಿದ ಮೊದಲ ಪ್ರಮುಖ ರಾಜ್ಯ ಮೈಸೂರು. ಮಹಾರಾಜರಿಂದಾಗಿ ಮೈಸೂರು ರಾಜ್ಯವು ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿ ಸೇರ್ಪಡೆಯಾಗುವ ಪ್ರಕ್ರಿಯೆಯು ಸುಗಮ ಮತ್ತು ಸುಲಭವಾಗಿ ನಡೆಯಿತು.
ಪ್ರಜಾಪ್ರಭುತ್ವವಾದಿಯಾದ ಮಹಾರಾಜರು, ಸಂವಿಧಾನ ಸಭೆಯನ್ನು ರಚಿಸಿ, ಶ್ರೀ ಕೆ.ಸಿ. ರೆಡ್ಡಿಯವರನ್ನು ಮುಖ್ಯಮಂತ್ರಿಯಾಗಿ ಮಾಡಿ ರಾಜ್ಯದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಸ್ಥಾಪಿಸಿದರು.
ಮಹಾರಾಜರು ಭಾರತೀಯ ನಾಗರಿಕತೆಯ ಪ್ರಾಚೀನ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಪಾಶ್ಚಿಮಾತ್ಯ ಜಗತ್ತಿನ ಆಧುನಿಕತೆಯ ಪರಿಪೂರ್ಣ ಸಮ್ಮಿಲನವಾಗಿದ್ದರು.
ಪ್ರಜಾಪ್ರಭುತ್ವದ ಸೂಕ್ಷ್ಮ ವ್ಯತ್ಯಾಸಗಳನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.
ಜನರು ತಮ್ಮನ್ನು ತಾವು ಆಳುವ ಅಧಿಕಾರ ಹೊಂದಿರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು
ಅರ್ಥ ಶಾಸ್ತ್ರದಲ್ಲಿ ಚಾಣಕ್ಯ ವಿವರಿಸುವ ಆದರ್ಶ ರಾಜನ ಗುಣಗಳ ಸಾಕಾರವಾಗಿದ್ದರು.
ಶ್ರೀ ಜಯ ಚಾಮರಾಜ ಒಡೆಯರ್ ಅವರು ನಿಜವಾಗಿಯೂ ಪ್ರವರ್ತಕ ನಾಯಕರಾಗಿದ್ದರು. ಭಾರತವು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಪರಿವರ್ತನೆಗೊಳ್ಳಲು, ಹೊಸ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಸಂವಿಧಾನ ಸಭೆಯ ಶಿಫಾರಸುಗಳು ಮತ್ತು ಭಾರತ ಸಂವಿಧಾನವನ್ನು ಅಂಗೀಕರಿಸಲು ಒಪ್ಪಿಕೊಂಡಿದ್ದು ಅವರ ರಾಷ್ಟ್ರೀಯ ದೃಷ್ಟಿಕೋನದ ಬಗ್ಗೆ ಅಪಾರವಾಗಿ ಹೇಳುತ್ತದೆ.
ನನ್ನ ಪ್ರೀತಿಯ ಸೋದರಿ, ಸೋದರರೇ,
ಅವರ ಆಳ್ವಿಕೆಯಲ್ಲಿ ಮತ್ತು ಸ್ವಾತಂತ್ರ್ಯದ ನಂತರವೂ ಶ್ರೀ ಜಯ ಚಾಮರಾಜರು ಮೈಸೂರಿನ ಅಭಿವೃದ್ಧಿಗೆ ದಣಿವಿಲ್ಲದೆ ಶ್ರಮಿಸಿದರು.
ಅವರು ಉದ್ಯಮಶೀಲತೆಯ ಪ್ರಬಲ ಬೆಂಬಲಿಗರಾಗಿದ್ದರು. 1940 ರಲ್ಲಿ ಹಿಂದೂಸ್ತಾನ್ ಏರ್ ಕ್ರಾಫ್ಟ್ ಎಂಬ ಕಂಪನಿಯು ಬೆಂಗಳೂರಿನಲ್ಲಿ ಉದ್ಯಮವನ್ನು ಸ್ಥಾಪಿಸಲು ಸಕ್ರಿಯವಾಗಿ ಪ್ರೋತ್ಸಾಹಿಸಿದರು ಮತ್ತು ಅದು ನಂತರ ಹಿಂದೂಸ್ತಾನ್ ಏರೋನಾಟಿಕ್ಸ್ ಆಗಿ ಮಾರ್ಪಟ್ಟಿತು.
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ಪ್ರಾರಂಭಿಸಲು ಅವರು ಮೈಸೂರಿನ ಭವ್ಯವಾದ ಚೆಲುವಾಂಬಾ ಭವನವನ್ನು ಸರ್ಕಾರಕ್ಕೆ ಉಡುಗೊರೆಯಾಗಿ ನೀಡಿದರು. ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ಷಯರೋಗ ಸಂಸ್ಥೆ ಮತ್ತು ಮೈಸೂರಿನಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಸ್ಥಾಪಿಸಲು ಅವರು ಉದಾರವಾಗಿ ದೇಣಿಗೆ ನೀಡಿದರು.
ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸಲು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಪ್ರಯತ್ನದಲ್ಲಿ ಮಹಾರಾಜರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನು ನಡೆಸಲು ಮತ್ತು ಅಗತ್ಯವಿದ್ದಾಗ ಅದರ ವಿಸ್ತರಣೆಗಾಗಿ ಧನ ಸಹಾಯ ಮತ್ತು ವಿದ್ಯಾರ್ಥಿವೇತನವನ್ನು ಒದಗಿಸುವ ತಮ್ಮ ಕುಟುಂಬದ ಸಂಪ್ರದಾಯವನ್ನು ಮುಂದುವರಿಸಿದರು.
ಶ್ರೀ ಜಯ ಚಾಮರಾಜ ಒಡೆಯರ್ ಅವರು ಪ್ರಸಿದ್ಧ ತತ್ವಜ್ಞಾನಿ, ಸಂಗೀತ ತಜ್ಞ, ರಾಜಕೀಯ ಚಿಂತಕ ಮತ್ತು ಜನೋಪಕಾರಿಯಾಗಿದ್ದರು.
“ಮಹಾರಾಜರು ಭಾರತದ ಪ್ರಾಚೀನ ಪರಂಪರೆಯ ಬಗ್ಗೆ ಪ್ರೀತಿ ಮತ್ತು ಗೌರವ, ಸಾಹಿತ್ಯ ಮತ್ತು ಕಲೆಯ ಬಗ್ಗೆ ಭಕ್ತಿ, ಮಾನವ ಜೀವನದ ಉನ್ನತ ಮೌಲ್ಯಗಳ ಬಗ್ಗೆ ಕಾಳಜಿ ಮತ್ತು ಸಾಂವಿಧಾನಿಕ ಸರ್ಕಾರದ ಆದರ್ಶಗಳು ಮತ್ತು ತತ್ವಗಳ ಬಗ್ಗೆ ಸಹಜ ಭಾವನೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಆತ್ಮಸಾಕ್ಷಿಯ ಗೌರವಗಳ ಸಾಕಾರವಾಗಿದ್ದಾರೆ” ಎಂದು ಕನ್ನಡದ ಶ್ರೇಷ್ಠ ಬರಹಗಾರ ಮತ್ತು ಚಿಂತಕ ಡಿ.ವಿ. ಗುಂಡಪ್ಪ ಅವರು ಒಮ್ಮೆ ಯುವ ರಾಜಕುಮಾರರ ಬಗ್ಗೆ ಹೇಳಿದ್ದರು.
ಪ್ರತಿಭಾವಂತ ವಿದ್ಯಾರ್ಥಿಯಾದ ರಾಜಕುಮಾರ ಚಾಮರಾಜರು ಜೀವಮಾನವಿಡೀ ಕಲಿಯುತ್ತಿದ್ದವರು. ಅವರು ತಮ್ಮ ನಲವತ್ತನೇ ವಯಸ್ಸಿನ ನಂತರವೂ ವಿಶ್ವವಿದ್ಯಾಲಯದ ಪದವಿಗಳನ್ನು ಪಡೆದುಕೊಳ್ಳುತ್ತಿದ್ದರು ಎಂಬುದು ಅವರ ಜ್ಞಾನದಾಹಕ್ಕೆ ಒಂದು ಜ್ವಲಂತ ಸಾಕ್ಷಿಯಾಗಿದೆ.
ಅವರು ಪ್ರಸಿದ್ಧ ಸಂಗೀತಶಾಸ್ತ್ರಜ್ಞರಾಗಿದ್ದರು, ಪಾಶ್ಚಾತ್ಯ ಮತ್ತು ಕರ್ನಾಟಕ ಸಂಗೀತದ ಅಭಿಜ್ಞರಾಗಿದ್ದರು ಮತ್ತು ಭಾರತೀಯ ತತ್ತ್ವಶಾಸ್ತ್ರದ ಬಗ್ಗೆ ಅಧಿಕಾರಯುತ ಜ್ಞಾನ ಹೊಂದಿದ್ದರು.
ಅವರು ಸಂಸ್ಕೃತ ಭಾಷೆಯ ವಿದ್ವಾಂಸರೂ ಆಗಿದ್ದರು. ಸಂಸ್ಕೃತದ ಬಗ್ಗೆ ಅವರ ಆಸಕ್ತಿ ಕೇವಲ ಶೈಕ್ಷಣಿಕವಾಗಿರಲಿಲ್ಲ. ಅವರು ಅದರೊಂದಿಗೆ ಗಾಢವಾಗಿ ಬೆಸೆದುಕೊಂಡಿದ್ದರು ಮತ್ತು ಅದರಲ್ಲಿ ಪಾಂಡಿತ್ಯ ಪಡೆದಿದ್ದರು.
ಬಹುಮುಖ ಪ್ರತಿಭೆಯಾದ ಶ್ರೀ ಜಯ ಚಾಮರಾಜರು ಅತ್ಯುತ್ತಮ ಬರಹಗಾರ ಮತ್ತು ಉತ್ತಮ ವಾಗ್ಮಿಯಾಗಿದ್ದರು.
ಅವರ ‘ಜಯ ಚಾಮರಾಜ ಗ್ರಂಥ ರತ್ನ ಮಾಲಾ’ಸರಣಿಯು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ.
ಶ್ರೀ ಜಯ ಚಾಮರಾಜರ ಪ್ರಬುದ್ಧ ಉಪನ್ಯಾಸಗಳಿಗೆ ವಿಶ್ವದ ಮೂಲೆ ಮೂಲೆಗಳಲ್ಲಿ ಅಪಾರ ಬೇಡಿಕೆಯಿತ್ತು. ಅವರು ತಮ್ಮ ನಿರೂಪಣೆಯ ಪ್ರತಿಪಾದನೆಗೆ ಬಳಸಿದ ವಿಷಯಗಳು ಹೆಚ್ಚಾಗಿ ಭಾರತೀಯ ಅಲಂಕಾರ ಶಾಸ್ತ್ರ ಮತ್ತು ಭಾರತೀಯ ತರ್ಕ ಶಾಸ್ತ್ರದ ಮೇಲೆ ಕೇಂದ್ರೀಕೃತವಾಗಿರುತ್ತಿದ್ದವು.
ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡುತ್ತಿದ್ದ ಪ್ರೋತ್ಸಾಹದಿಂದಾಗಿ ಅವರನ್ನು ‘ದಕ್ಷಿಣದ ಭೋಜ’ ಎಂದು ಕರೆಯಲಾಗುತ್ತಿತ್ತು. ಅವರಿಗೆ ಗೌರವ ಸಲ್ಲಿಸಿದ ಲಂಡನ್ ಪತ್ರಿಕೆಯೊಂದು ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುವ ಸ್ವಯಂಪ್ರೇರಿತ ಒನ್ ಮ್ಯಾನ್ ಮಿಷನ್ ಎಂದು ಬಣ್ಣಿಸಿದೆ.
ನನ್ನ ಪ್ರೀತಿಯ ಸೋದರಿಯರೇ ಮತ್ತು ಸೋದರರೇ,
ನಾವು ಇಂದು ಒಬ್ಬ ಮಹಾನ್ ಆಡಳಿತಗಾರರೊಬ್ಬರ ಜೀವನ ಮತ್ತು ಕೆಲಸಗಳನ್ನು ಆಚರಿಸುತ್ತಿದ್ದೇವೆ. ಇದರೊಂದಿಗೆ ನಮ್ಮ ಇತಿಹಾಸವನ್ನು ರೂಪಿಸಿದ ಮಹಾರಾಜ ಜಯ ಚಾಮರಾಜ ಒಡೆಯರ್ ಅವರಂತಹ ಎಲ್ಲ ಶ್ರೇಷ್ಠ ಆಡಳಿತಗಾರರು ಮತ್ತು ಮುತ್ಸದ್ಧಿಗಳ ಜ್ಞಾನ, ಬುದ್ಧಿವಂತಿಕೆ, ಉತ್ಸಾಹ, ದೇಶಭಕ್ತಿ, ದೂರದೃಷ್ಟಿ ಮತ್ತು ಧ್ವನಿಯನ್ನು ನಾವು ಆಚರಿಸುತ್ತಿದ್ದೇವೆ.
ನಾವೆಲ್ಲರೂ ಪೂರ್ಜರಿಂದ ಪಡೆದ ಕಾಲಾತೀತ ಭಾರತೀಯ ಮೌಲ್ಯಗಳು, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಉದಾತ್ತ ದೃಷ್ಟಿಕೋನವನ್ನು ನಾವು ಆಚರಿಸುತ್ತೇವೆ.
ಪ್ರಜಾಪ್ರಭುತ್ವದ ಚೈತನ್ಯವನ್ನು, ಜನ ಕೇಂದ್ರಿತ ಉತ್ತಮ ಆಡಳಿತವನ್ನು ನಾವು ಆಚರಿಸುತ್ತೇವೆ.
ವೈವಿಧ್ಯತೆಯಲ್ಲಿ ಏಕತೆ, ಶಾಂತಿ ಮತ್ತು ಸಾಮರಸ್ಯದ ಮನೋಭಾವವನ್ನು ನಾವು ಆಚರಿಸುತ್ತೇವೆ.
ವಿಶೇಷವಾಗಿ ಈ ಸಂದರ್ಭದಲ್ಲಿ, ನಮ್ಮ ದೇಶದ ಹೆಮ್ಮೆಯ ಮಕ್ಕಳು ಬಿಟ್ಟುಹೋಗಿರುವ ಅಳಿಸಲಾಗದ ಗುರುತುಗಳನ್ನು ಆಚರಿಸುತ್ತೇವೆ.
ಈ ಶುಭ ಸಂದರ್ಭದಲ್ಲಿ ಮಹಾರಾಜ ಚಾಮರಾಜ ಒಡೆಯರ್ ಅವರಿಗೆ ನನ್ನ ತುಂಬು ಗೌರವ ಮತ್ತು ವಿನಮ್ರ ನಮನಗಳನ್ನು ಅರ್ಪಿಸುತ್ತೇನೆ.
ಶ್ರೀ ಜಯ ಚಾಮರಾಜರಂತಹ ಶ್ರೇಷ್ಠರಿಗೆ ನಾವು ಸಲ್ಲಿಸಬಹುದಾದ ಬಹುದೊಡ್ಡ ಗೌರವವೆಂದರೆ ದೇಶ, ಜಗತ್ತು ಮತ್ತು ಇಡೀ ಮನುಕುಲ ಒಂದಾಗಿ ಬಾಳುವ ಮತ್ತು ಒಟ್ಟಾಗಿ ಕೆಲಸ ಮಾಡುವ ಭಾರತದ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವುದು ಮತ್ತು ಉತ್ತೇಜಿಸುವುದೇ ಆಗಿದೆ.
ಧನ್ಯವಾದಗಳು!
ಜೈ ಹಿಂದ್!
***
(Release ID: 1639614)
Visitor Counter : 301