ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
2020ರ ಏಪ್ರಿಲ್-ಜೂನ್ ಅವಧಿಯಲ್ಲಿ 111.61 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಖಲೆಯ ಮಾರಾಟ: ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ
Posted On:
03 JUL 2020 5:24PM by PIB Bengaluru
2020ರ ಏಪ್ರಿಲ್-ಜೂನ್ ಅವಧಿಯಲ್ಲಿ 111.61 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಖಲೆಯ ಮಾರಾಟ:
ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್ ಡೌನ್ ನಡುವೆಯೇ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ರೈತ ಸಮುದಾಯಕ್ಕೆ ದಾಖಲೆಯ ಪ್ರಮಾಣದಲ್ಲಿ ರಸಗೊಬ್ಬರ ಮಾರಾಟ ಮಾಡಿರುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
2020ರ ಏಪ್ರಿಲ್- ಜೂನ್ ನಡುವಿನ ಅವಧಿಯಲ್ಲಿ ಒಟ್ಟು 111.61 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 61.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ದಾಖಲೆಯ ಶೇ.82.81ರಷ್ಟು ಅಧಿಕ ರಸಗೊಬ್ಬರ ಮಾರಾಟವಾಗಿದೆ.
ಏಪ್ರಿಲ್- ಜೂನ್ ಆವಧಿಯಲ್ಲಿ 64.82ಲಕ್ಷ ಮೆಟ್ರಿಕ್ ಟನ್ ಯೂರಿಯಾ (ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.67ರಷ್ಟು ಅಧಿಕ), 22.46ಲಕ್ಷ ಮೆಟ್ರಿಕ್ ಟನ್ ಡಿಎಪಿ (ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.100ಕ್ಕೂ ಅಧಿಕ) ಮತ್ತು 24.32 ಲಕ್ಷ ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರವನ್ನು (ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.120ಕ್ಕೂ ಅಧಿಕ) ರೈತ ಸಮುದಾಯಕ್ಕೆ ಮಾರಾಟ ಮಾಡಲಾಗಿದೆ.
ರಾಷ್ಟ್ರಮಟ್ಟದಲ್ಲಿ ಕೋವಿಡ್ -19 ಲಾಕ್ ಡೌನ್ ನಿಂದಾಗಿ ಸಾಕಷ್ಟು ನಿರ್ಬಂಧಗಳ ನಡುವೆಯೇ, ಸಚಿವಾಲಯ ರೈಲ್ವೆ ಸಚಿವಾಲಯ, ರಾಜ್ಯ ಸರ್ಕಾರಗಳು, ಬಂದರು ಇಲಾಖೆಗಳ ನಿರಂತರ ಸಮಗ್ರ ಪ್ರಯತ್ನಗಳಿಂದಾಗಿ, ದೇಶದಲ್ಲಿ ರಸಗೊಬ್ಬರ ಉತ್ಪಾದನೆ ಮತ್ತು ಸಾಗಾಣೆ ಯಾವುದೇ ಅಡೆತಡೆ ಇಲ್ಲದೇ ಮುಂದುವರಿದಿದೆ.
ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರ ಲಭ್ಯತೆ ಕೊರತೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ನೀಡಿದ್ದ ಬದ್ಧತೆಯ ಭರವಸೆಯಂತೆ ನಡೆದುಕೊಳ್ಳಲಾಗಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಅವರು “ನಾವು ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರ ಲಭ್ಯತೆ ಮತ್ತು ದಾಸ್ತಾನಿನ ಬಗ್ಗೆ ಸತತ ನಿಗಾ ಇರಿಸಿದ್ದೇವೆ. ರಾಜ್ಯಗಳಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲು ಒದಗಿಸಲಾಗಿದೆ. ರಾಜ್ಯಗಳ ಕೃಷಿ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’’ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಸಚಿವಾಲಯ ರೈತ ಸಮುದಾಯಕ್ಕೆ ಬಿತ್ತನೆಗೂ ಮುನ್ನ ರಸಗೊಬ್ಬರ ಲಭ್ಯವಾಗುವುದನ್ನು ಖಾತ್ರಿಪಡಿಸುವ ಬದ್ಧತೆಯನ್ನು ಹೊಂದಿದೆ ಎಂದು ಹೇಳಿದರು.
ಜೂನ್ 30ರ ಒಂದೇ ದಿನ ರಸಗೊಬ್ಬರ ಘಟಕಗಳು ಮತ್ತು ಬಂದರುಗಳಿಂದ 73 ರಸಗೊಬ್ಬರ ರೇಖ್ ಗಳ ಸಾಗಾಣೆ ಮಾಡಲಾಗಿದೆ. ಇದು ಒಂದೇ ದಿನದಲ್ಲಿ ಸಾಗಾಣೆ ಮಾಡಿರುವ ರಸಗೊಬ್ಬರದ ಅತ್ಯಧಿಕ ಪ್ರಮಾಣವಾಗಿದೆ. ಒಂದು ರೇಖ್ ನಲ್ಲಿ ಒಮ್ಮೆಲೆ 3000 ಮೆಟ್ರಿಕ್ ಟನ್ ರಸಗೊಬ್ಬರವನ್ನು ತುಂಬಬಹುದು.
ಭಾರತ ಸರ್ಕಾರ, ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ದೇಶಾದ್ಯಂತ ರಸಗೊಬ್ಬರ ಘಟಕಗಳ ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಟ್ಟಿತ್ತು. ಆ ಮೂಲಕ ಲಾಕ್ ಡೌನ್ ಸಮಯದಲ್ಲಿ ರೈತ ಸಮುದಾಯಕ್ಕೆ ಯಾವುದೇ ಬಿಸಿ ತಟ್ಟದಂತೆ ನೋಡಿಕೊಳ್ಳಲಾಯಿತು.
ರಸಗೊಬ್ಬರ ಘಟಕಗಳು, ರೈಲು ನಿಲ್ದಾಣಗಳು ಮತ್ತು ಬಂದರುಗಳಲ್ಲಿ ರಸಗೊಬ್ಬರವನ್ನು ತುಂಬುವುದು ಮತ್ತು ಇಳಿಸುವುದು ಸಮರೋಪಾದಿಯಲ್ಲಿ ನಡೆದಿದ್ದು, ಈ ವೇಳೆ ಕೋವಿಡ್-19 ತಪ್ಪಿಸಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆ ವಿಷಯದಲ್ಲಿ ರಾಜಿ ಮಾಡಿಕೊಂಡಿಲ್ಲ. ಕಾರ್ಮಿಕರು ಮತ್ತು ಎಲ್ಲಾ ಸಿಬ್ಬಂದಿಗೆ ಮಾಸ್ಕ್ ಹಾಗೂ ಇತರೆ ಮುನ್ನೆಚ್ಚರಿಕೆ ಉಪಕರಣಗಳನ್ನು ಒದಗಿಸಲಾಗಿತ್ತು.
***
(Release ID: 1636235)
Visitor Counter : 250