ಹಣಕಾಸು ಸಚಿವಾಲಯ

ವಿಡಿಯೋ ಕಾನ್ಫರೆನ್ಸ್ ಮೂಲಕ ಬ್ರಿಕ್ಸ್ ತೆರಿಗೆ ಪ್ರಾಧಿಕಾರಿಗಳ ಮುಖ್ಯಸ್ಥರ ಸಭೆ

Posted On: 29 MAY 2020 8:46PM by PIB Bengaluru

ವಿಡಿಯೋ ಕಾನ್ಫರೆನ್ಸ್ ಮೂಲಕ ಬ್ರಿಕ್ಸ್ ತೆರಿಗೆ ಪ್ರಾಧಿಕಾರಿಗಳ ಮುಖ್ಯಸ್ಥರ ಸಭೆ

 

ಬ್ರೆಜಿಲ್ ಫೆಡರಲ್ ಒಕ್ಕೂಟ, ರಶ್ಯನ್ ಒಕ್ಕೂಟ, ಭಾರತ ಗಣತಂತ್ರ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ದಕ್ಷಿಣ ಆಫ್ರಿಕಾ ಗಣತಂತ್ರಗಳನ್ನು ಒಳಗೊಂಡ ಬ್ರಿಕ್ಸ್ ದೇಶಗಳ ತೆರಿಗೆ ಪ್ರಾಧಿಕಾರಿಗಳ ಮುಖ್ಯಸ್ಥರ ಸಭೆ 2020 ಮೇ 29 ರಂದು ನಡೆಯಿತು. ಪ್ರಸ್ತುತ ಬ್ರಿಕ್ಸ್ ಅಧ್ಯಕ್ಷತೆ ಹೊಂದಿರುವ ರಶ್ಯಾದ ಫೆಡರಲ್ ತೆರಿಗೆ ಸೇವೆಗಳ ವಿಭಾಗವು ಸಭೆಯನ್ನು ಆಯೋಜಿಸಿತ್ತು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕಕ್ಕೆ ಬ್ರಿಕ್ಸ್ ತೆರಿಗೆ ಪ್ರತಿಕ್ರಿಯೆ ಬಗ್ಗೆ ಚರ್ಚಿಸಲು ಮತ್ತು ತೆರಿಗೆ ವಿಷಯಗಳಲ್ಲಿ ಸಹಕಾರಕ್ಕೆ ಅನುಕೂಲಕರವಾದ ಮಹತ್ವದ ಕ್ಷೇತ್ರಗಳನ್ನು ಅನ್ವೇಷಿಸಲು ಸಭೆಯನ್ನು ಸಂಘಟಿಸಲಾಗಿತ್ತು. ಸಭೆಯು ಮಾಸ್ಕೋದಲ್ಲಿ ನಡೆಯಬೇಕಾಗಿತ್ತಾದರೂ ಕೋವಿಡ್ -19 ಕಾರಣದಿಂದಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.

ಭಾರತ ಸರಕಾರದ ಹಣಕಾಸು ಕಾರ್ಯದರ್ಶಿ ಡಾ. ಅಜಯ್ ಭೂಷಣ್ ಪಾಂಡೆ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಹಣಕಾಸು ಕಾರ್ಯದರ್ಶಿಗಳು ತೆರಿಗೆದಾರರ ಮೇಲೆ ಜಾಗತಿಕ ಸಾಂಕ್ರಾಮಿಕದ ಪರಿಣಾಮವನ್ನು ಕಡಿಮೆ ಮಾಡಲು ಭಾರತ ಸರಕಾರವು ನಿಯಮಾನುಸರಣೆ ಆವಶ್ಯಕತೆಗಳಲ್ಲಿ ರಿಯಾಯತಿ, ತಡ ಪಾವತಿಯ ಮೇಲಿನ ಬಡ್ಡಿ ದರ ಇಳಿಕೆ, ಮತ್ತು ತಡೆ ಹಿಡಿಯುವ ತೆರಿಗೆ ದರದಲ್ಲಿ ಇಳಿಕೆ ಇತ್ಯಾದಿ ಕ್ರಮಗಳನ್ನು ಕೈಗೊಂಡಿರುವುದನ್ನು ಹಂಚಿಕೊಂಡರು. ಕೋವಿಡ್ -19 ಸಂಬಂಧಿ ಆಯಾ ತೆರಿಗೆ ಆಡಳಿತಗಳು ಕಾಲ ಕಾಲಕ್ಕೆ ತೆಗೆದುಕೊಂಡ ತೆರಿಗೆ ಕ್ರಮಗಳನ್ನು ಹಂಚಿಕೊಳ್ಳುವಂತೆ ಅವರು ಬ್ರಿಕ್ಸ್ ರಾಷ್ಟ್ರಗಳನ್ನು ಕೋರಿದರು. ಇದರಿಂದ ಜಾಗತಿಕ ಸಾಂಕ್ರಾಮಿಕವು ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಉಂಟು ಮಾಡಿರುವ ಪರಿಣಾಮವನ್ನು ತಿಳಿದುಕೊಳ್ಳಲು ಮತ್ತು ಜಾಗತಿಕ ಸಾಂಕ್ರಾಮಿಕದ ಹರಡುವಿಕೆ ತಡೆಯಲು ಹಾಗು ಅದರ ಪರಿಣಾಮದಿಂದ ಪುನಶ್ಚೇತನ ಪಡೆಯಲು ನಮ್ಮ ಸರಕಾರದ ಪ್ರಯತ್ನಗಳಿಗೆ ಸಹಾಯ ಮಾಡುವುದಕ್ಕಾಗಿ ಅವುಗಳ ವಿವಿಧ ಸಾಧ್ಯತೆಗಳ ಮೌಲ್ಯಮಾಪನ ಮಾಡಲು ಉತ್ತೇಜನ ಸಿಕ್ಕಂತಾಗುತ್ತದೆ ಎಂದರು.

..ಸಿ.ಡಿ/ಜಿ-20 ಯೋಜನೆಯಡಿ ಪ್ರಗತಿಯಲ್ಲಿರುವ ಕೆಲಸಕ್ಕೆ ಭಾರತದ ಬೆಂಬಲವನ್ನು ಪ್ರಕಟಿಸಿದ ಹಣಕಾಸು ಕಾರ್ಯದರ್ಶಿಗಳು ಡಿಜಿಟಲೀಕರಣದಿಂದ ಎದುರಾಗಿರುವ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಯೋಜನೆಯ ಹೊಸ ತೆರಿಗೆ ನಿಯಮಗಳು ನ್ಯಾಯೋಚಿತವಾಗಿರಬೇಕು ಮತ್ತು ಸರಳವಾಗಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಅದು ಹೊಸ / ಉದಯಿಸುತ್ತಿರುವ ವ್ಯಾಪಾರೋದ್ಯಮ ಮಾದರಿಗಳನ್ನು ಒಳಗೊಳ್ಳುವಂತೆಯೂ ಇರಬೇಕು ಎಂದರು.

ಗಡಿಯಾಚೆಗಿನ ಹಣಕಾಸು ಅಪರಾಧಗಳನ್ನು ನಿಭಾಯಿಸುವಲ್ಲಿ ಇಡೀ ಸರಕಾರದ ಧೋರಣೆಯನ್ನು ಅಂಗೀಕರಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಡಾ. ಪಾಂಡೇ ಇಂತಹ ಅಪರಾಧಗಳು ತೆರಿಗೆ ಮಾತ್ರವಲ್ಲ ವಿವಿಧ ಸ್ಥರಗಳಲ್ಲಿ ಪರಿಣಾಮವನ್ನು ಉಂಟು ಮಾಡುತ್ತಿರುತ್ತವೆ ಎಂದೂ ಹೇಳಿದರು. ಆದುದರಿಂದ ಬ್ರಿಕ್ಸ್ ರಾಷ್ಟ್ರಗಳ ತೆರಿಗೆ ಒಪ್ಪಂದಗಳಡಿ ಭ್ರಷ್ಟಾಚಾರವನ್ನು ನಿಗ್ರಹಿಸುವುದಕ್ಕಾಗಿ , ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯುವುದಕ್ಕಾಗಿ ವಿಸ್ತಾರ ವ್ಯಾಪ್ತಿಯಲ್ಲಿ ಮಾಹಿತಿ ವಿನಿಮಯ ನಡೆಯಬೇಕು ಎಂಬುದನ್ನು ಪ್ರತಿಪಾದಿಸಿದರು.

ಇತರ ಬ್ರಿಕ್ಸ್ ರಾಷ್ಟ್ರಗಳ ತೆರಿಗೆ ಮುಖ್ಯಸ್ಥರು ಅವರ ತೆರಿಗೆ ಆಡಳಿತಗಳು ಕೈಗೊಂಡ ಕ್ರಮಗಳನ್ನು ಮತ್ತು ಡಿಜಿಟಲೀಕರಣದಿಂದ ಎದುರಾಗಿರುವ ತೆರಿಗೆ ಸವಾಲುಗಳನ್ನು ಕುರಿತ ಹಾಗು ಮಾಹಿತಿ ವಿನಿಮಯ ಕುರಿತ ಇತರ ಕಾರ್ಯಪಟ್ಟಿಯ ವಿಷಯಗಳ ಬಗ್ಗೆ ತಮ್ಮ ಚಿಂತನೆಯನ್ನು ಹಂಚಿಕೊಂಡರು.

ಸಭೆಯ ಮುಕ್ತಾಯದ ಬಗ್ಗೆ ತೆರಿಗೆ ಮುಖ್ಯಸ್ಥರು ಪ್ರಕಟಣೆಯೊಂದನ್ನು ಹೊರಡಿಸಿದರು.

***



(Release ID: 1628047) Visitor Counter : 221