PIB Headquarters
ಆರ್ಥಿಕತೆ ಬಲವರ್ಧನೆಗೆ ಹೆಚ್ಚುವರಿಯಾಗಿ 9 ಕ್ರಮಗಳನ್ನು ಪ್ರಕಟಿಸಿದ ಆರ್ ಬಿಐ
Posted On:
22 MAY 2020 3:36PM by PIB Bengaluru
ಆರ್ಥಿಕತೆ ಬಲವರ್ಧನೆಗೆ ಹೆಚ್ಚುವರಿಯಾಗಿ 9 ಕ್ರಮಗಳನ್ನು ಪ್ರಕಟಿಸಿದ ಆರ್ ಬಿಐ
ಬಡ್ಡಿದರ ಕಡಿತ, ಇಎಂಐ ಪಾವತಿ ಅವಧಿ ಮತ್ತೆ ಮೂರು ತಿಂಗಳು ಮುಂದೂಡಿಕೆ
ರಫ್ತು ಮತ್ತು ಆಮದುದಾರರಿಗೆ ಇನ್ನಷ್ಟು ನಗದು ಸೌಲಭ್ಯ
2020-21ಗೆ ದೇಶೀಯ ಆರ್ಥಿಕತೆ ಕರಾರು, ದ್ವೀತಿಯಾರ್ಧದಲ್ಲಿ ಕ್ರಮೇಣ ಚೇತರಿಕೆ: ಆರ್ ಬಿಐ ಗೌರ್ನರ್
“ಇಡೀ ದಿಗಂತವೇ ಕತ್ತಲಲ್ಲಿ ಮುಳುಗಿರುವಾಗ, ಮನುಕುಲಕ್ಕೆ ಭಾರೀ ಹೊಡೆತ ಬಿದ್ದು ನೆಲಕಚ್ಚಿರುವ ಈ ಸಂದರ್ಭದಲ್ಲಿ ನಂಬಿಕೆ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತದೆ ಮತ್ತು ಅದು ನಮ್ಮ ರಕ್ಷಣೆಗೆ ಬರುತ್ತದೆ’’.
ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್, ರಾಷ್ಟ್ರಪಿತ ಅವರು 1929ರಲ್ಲಿ ನೀಡಿದ್ದ ಹೇಳಿಕೆಯಿಂದ ಸ್ಫೂರ್ತಿ ಮತ್ತು ಭರವಸೆಯನ್ನು ಪಡೆದು, ಕೋವಿಡ್-19 ಸಾಂಕ್ರಾಮಿಕದ ಈ ಅನಿಶ್ಚಿತತೆಯ ಮತ್ತು ಪ್ರಕ್ಷುಬ್ಧ ಸಂದರ್ಭದಲ್ಲಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಮತ್ತು ನಗದು ಹರಿವನ್ನು ಸುಗಮಗೊಳಿಸಲು ಮತ್ತೆ 9 ಕ್ರಮಗಳನ್ನು ಪ್ರಕಟಿಸಿದ್ದಾರೆ. ಇವು ಈ ಹಿಂದೆ ಆರ್ ಬಿಐ, 2020ರ ಏಪ್ರಿಲ್ 17 ಮತ್ತು 2020ರ ಮಾರ್ಚ್ 27ರಂದು ಪ್ರಕಟಿಸಿದ್ದ ಕ್ರಮಗಳ ಮುಂದುವರಿದ ಭಾಗವಾಗಿದೆ.
ಆನ್ ಲೈನ್ ಮೂಲಕ ಈ ಘೋಷಣೆಗಳನ್ನು ಮಾಡಿದ ಗೌರ್ನರ್, ಭಾರತದ (ರಿಸೈಲೆನ್ಸ್) ಸ್ಥಿತಿಸ್ಥಾಪಕತ್ವ ಮತ್ತು ಸಾಮರ್ಥ್ಯದ ಬಗ್ಗೆ ನಾವು ವಿಶ್ವಾಸವಿಟ್ಟು ಅದರಿಂದ ಆ ಎಲ್ಲಾ ಅಡೆತಡೆಗಳಿಂದ ಹೊರಬರಬೇಕಿದೆ ಎಂದರು. ಇಂದಿನ ಆಘಾತಕಾರಿ ಸಂಗತಿಗಳಿಂದ ನಾವು ವಿಜಯಿಯಾಗಿ ಹೊರಹೊಮ್ಮುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಗೌರ್ನರ್, ಒಂದು ರೀತಿಯ ಸ್ಪಂದನಾ ಭಾವನೆಯೊಂದಿಗೆ ಮಾತನಾನಡಿದರು. ಅವರು ಪ್ರಸಕ್ತ ಸ್ಥಿತಿಗತಿಯಲ್ಲಿ “ಕೇಂದ್ರೀಯ ಬ್ಯಾಂಕುಗಳು ದೇಶದ ಆರ್ಥಿಕತೆ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತು ರಕ್ಷಣಾತ್ಮಕವಾಗಿ ಉತ್ತರವನ್ನು ನೀಡಬೇಕಿದೆ” ಎಂದು ಹೇಳಿದರು.
ರೆಪೊ ದರ 40 ಮೂಲಾಂಶ ಇಳಿಕೆ
ಗೌರ್ನರ್ ಮಹತ್ವದ ನೀತಿ ದರದಲ್ಲಿ ಕಡಿತವನ್ನು ಘೋಷಿಸಿದರು. ಕೋವಿಡ್-19 ಪರಿಣಾಮ ತಗ್ಗಿಸಲು ಮತ್ತು ಆರ್ಥಿಕ ಪ್ರಗತಿ ಪುನಶ್ಚೇತನಕ್ಕೆ ಹಣದುಬ್ಬರ ಕೂಡ ಗುರಿಯ ಮಿತಿಯಲ್ಲೇ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು. ರೆಪೊ ದರವನ್ನು ಶೇ.4.4 ರಿಂದ ಶೇ.4.0ಕ್ಕೆ ಅಂದರೆ 40 ಮೂಲಾಂಶವನ್ನು ಇಳಿಕೆ ಮಾಡಲಾಗಿದೆ. ಅಲ್ಲದೆ, ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರವನ್ನು ಬ್ಯಾಂಕುಗಳು ಶೇ.4.65 ರಿಂದ ಶೇ.4.25ಕ್ಕೆ ಇಳಿಕೆ ಮಾಡಬೇಕು. ಅದೇ ರೀತಿ ರಿವರ್ಸ್ ರೆಪೊ ದರವನ್ನು ಶೇ.3.75 ರಿಂದ ಶೇ.3.35ಕ್ಕೆ ಇಳಿಕೆ ಮಾಡಲಾಗಿದೆ.
“ಪ್ರಗತಿಗೆ ಇರುವ ಅಪಾಯಗಳನ್ನು ಲೆಕ್ಕಾಚಾರ ಹಾಕಿ, ಹಣದುಬ್ಬರದ ಅಪಾಯ ಅತ್ಯಲ್ಪ ಅವಧಿ ಇರುವ ಸಾಧ್ಯತೆ ಇದೆ. ಹಣಕಾಸು ನೀತಿ ಸಮಿತಿ ವಿಶ್ವಾಸವನ್ನು ಉಳಿಸಿ, ಆರ್ಥಿಕ ಸ್ಥಿತಿಗತಿಗಳನ್ನು ಮತ್ತಷ್ಟು ಸುಗಮಗೊಳಿಸುವ ಅಗತ್ಯತೆ ಇದೀಗ ಇದೆ ಎಂದು ಹೇಳಿದೆ. ಇದರಿಂದಾಗಿ ಕೈಗೆಟಕುವ ದರದಲ್ಲಿ ನಗದು ಹರಿಯುತ್ತದೆ ಮತ್ತು ಅದು ಹೂಡಿಕೆ ಉದ್ದೇಶಗಳನ್ನು ಈಡೇರಿಸುತ್ತದೆ. ಈ ನಿಟ್ಟಿನಲ್ಲಿ ಎಂಪಿಸಿ ರೆಪೊ ದರವನ್ನು ಮೂಲಾಂಶ 40ರಷ್ಟು ಕಡಿತಗೊಳಿಸಿ, ಶೇ.4.4 ರಿಂದ ಶೇ.4.0ಕ್ಕೆ ಇಳಿಕೆ ಮಾಡಲಾಗಿದೆ” ಎಂದು ಗೌರ್ನರ್ ಹೇಳಿದರು.
ಅಲ್ಲದೆ, ಶ್ರೀ ದಾಸ್ ಅವರು, ಕೆಲವೊಂದು ನಿಯಂತ್ರಣ ಮತ್ತು ಅಭಿವೃದ್ಧಿ ಕ್ರಮಗಳನ್ನು ಘೋಷಸಿದರು. ಅವು ನೀತಿ ದರದಲ್ಲಿ ಕಡಿತ ಮತ್ತು ಪರಸ್ಪರ ಒಂದಕ್ಕೊಂದು ಬಲವರ್ಧನೆಗೊಳಿಸುತ್ತವೆ ಎಂದು ಹೇಳಿದರು.
ಈ ಕ್ರಮಗಳ ಉದ್ದೇಶಗಳನ್ನು ಅವರು ಪ್ರತಿಪಾದಿಸಿದರು:
· ಆರ್ಥಿಕ ವ್ಯವಸ್ಥೆ ಮತ್ತು ಹಣಕಾಸು ಮಾರುಕಟ್ಟೆಗಳನ್ನು ಸದೃಢವಾಗಿಟ್ಟುಕೊಂಡು ನಗದು ಪೂರೈಸುವುದು ಮತ್ತು ಸುಗಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು.
· ಸರ್ವರಿಗೂ ಹಣಕಾಸು ಖಾತ್ರಿಪಡಿಸುವುದು, ವಿಶೇಷವಾಗಿ ಯಾರು ಆರ್ಥಿಕ ಮಾರುಕಟ್ಟೆಗಳಿಂದ ಹೊರಗಿರುತ್ತಾರೋ ಅಂತಹವರನ್ನು.
· ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು.
ಮಾರುಕಟ್ಟೆಗಳ ಕಾರ್ಯವೈಖರಿ ಸುಧಾರಣೆಗೆ ಕ್ರಮಗಳು
· ಮತ್ತೆ 90 ದಿನಗಳ ಅವಧಿಗೆ ಎಸ್ ಐಡಿಬಿಐಗೆ ಮರು ಹಣಕಾಸು ಸೌಕರ್ಯ ವಿಸ್ತರಣೆ
ಸಣ್ಣ ಉದ್ದಿಮೆಗಳಿಗೆ ಹೆಚ್ಚಿನ ಸಾಲವನ್ನು ಪೂರೈಸುವ ಕ್ರಮವಾಗಿ ಆರ್ ಬಿಐ, 2020ರ ಏಪ್ರಿಲ್ 15 ರಂದು 90 ದಿನಗಳ ಅವಧಿಗೆ ಆರ್ ಬಿಐನ ಪಾಲಿಸಿ ರೆಪೊ ದರ ಎಸ್ ಐಡಿಬಿಐಗೆ 15,000 ಕೋಟಿ ರೂ. ವಿಶೇಷ ಮರು ಹಣಕಾಸು ಸೌಕರ್ಯ ಒದಗಿಸಲಾಗುವುದು, ಈ ಸೌಕರ್ಯವನ್ನು ಮತ್ತೆ 90 ದಿನಗಳ ಕಾಲ ವಿಸ್ತರಿಸಲಾಗಿದೆ.
· ಸ್ವಯಂ ಧಾರಣಾ ಮಾರ್ಗದಡಿ ವಿದೇಶಿ ಬಂಡವಾಳ ಹೂಡಿಕೆಗೆ ವಿನಾಯಿತಿ ನಿಯಮಗಳು
ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಆರ್ ಬಿಐ, ವಿಆರ್ ಆರ್ ಮೂಲಕ ಬಂಡವಾಳ ಹೂಡಿಕೆಗೆ ಏಕಗವಾಕ್ಷಿ ಯೋಜನೆ ರೂಪಿಸಿದೆ. ಇದರಡಿ ಹೆಚ್ಚಿನ ಬಂಡವಾಳ ಹೂಡಿಕೆಗೆ ತಮ್ಮ ಬದ್ಧತೆಗಳನ್ನು ತೋರಲು ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ. ನಿಯಮಗಳ ಪ್ರಕಾರ, ಕನಿಷ್ಠ ಶೇ.75ರಷ್ಟು ನಿಗದಿತ ಹೂಡಿಕೆ ಮೂರು ತಿಂಗಳುಗಳಲ್ಲಿ ಮಾಡಬೇಕಾಗುತ್ತದೆ. ಸದ್ಯ ಹೂಡಿಕೆದಾರರು ಕಷ್ಟಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಆ ಸಮಯದ ಮಿತಿಯನ್ನು ಆರು ತಿಂಗಳಿಗೆ ಪರಿಷ್ಕರಿಸಲಾಗಿದೆ.
ಆಮದು ಮತ್ತು ರಫ್ತು ಬೆಂಬಲಕ್ಕೆ ಕ್ರಮಗಳು
· ರಫ್ತುದಾರರು ಹೆಚ್ಚಿನ ಅವಧಿಗೆ ಇದೀಗ ಬ್ಯಾಂಕ್ ಸಾಲಗಳನ್ನು ಪಡೆಯಬಹುದು.
ರಫ್ತುದಾರರು ತಮ್ಮ ಶಿಪ್ ಮೆಂಟ್ ಪೂರ್ವ ಮತ್ತು ಶಿಪ್ ಮೆಂಟ್ ನಂತರದ ರಫ್ತು ಸಾಲ ಸೌಕರ್ಯ ಪಡೆಯುವ ಅವಧಿ 2020ರ ಜುಲೈ 31ರ ವರೆಗೆ ಆಗುವ ಬಟವಾಡೆ (ಡಿಸ್ಪರ್ಸ್ ಮೆಂಟ್ )ಅನ್ನು ಪರಿಗಣಿಸಿ, ಒಂದು ವರ್ಷದಿಂದ 15 ತಿಂಗಳಿಗೆ ಹೆಚ್ಚಿಸಿದೆ.
· ಎಕ್ಸಿಮ್ ಬ್ಯಾಂಕಿಗೆ ಸಾಲ ಸೌಕರ್ಯ
ಆಮದು ಮತ್ತು ರಫ್ತು ಬ್ಯಾಂಕ್ ಗೆ ಹಣಕಾಸು ನೆರವು ಭಾರತದಲ್ಲಿ ವಿದೇಶಿ ವ್ಯಾಪಾರ ಉತ್ತೇಜನ ಮತ್ತು ಸೌಕರ್ಯಕ್ಕೆ 15,000 ಕೋಟಿ ರೂ.ಗಳ ಸಾಲದ ನೆರವನ್ನು ಗೌರ್ನರ್ ಪ್ರಕಟಿಸಿದ್ದಾರೆ. ಈ ಸಾಲ ಸೌಕರ್ಯಗಳನ್ನು 90 ದಿನಗಳ ಅವಧಿಗೆ ನೀಡಲಾಗಿದ್ದು, ಅದನ್ನು ಒಂದು ವರ್ಷದ ವರೆಗೆ ವಿಸ್ತರಿಸಿಕೊಳ್ಳಲು ಅವಕಾಶವಿದೆ. ವಿದೇಶಿ ಕರೆನ್ಸಿ ಸಂಪನ್ಮೂಲ ಅಗತ್ಯತೆಗಳನ್ನು ವಿಶೇಷವಾಗಿ ಅಮೆರಿಕದ ಡಾಲರ್ ಗೆ ಬದಲು ಮಾಡಿಕೊಳ್ಳಲು ಬ್ಯಾಂಕ್ ಗೆ ಅವಕಾಶ ಮಾಡಿಕೊಡಲಾಗಿದೆ.
· ಆಮದುದಾರರಿಗೆ ಪಾವತಿಗೆ ಹೆಚ್ಚಿನ ಸಮಯ
ಸಾಮಾನ್ಯ ಆಮದುಗಳಿಗೆ ಆಮದು ಪಾವತಿ ಅವಧಿ(ಚಿನ್ನ/ವಜ್ರ ಮತ್ತು ಅಮೂಲ್ಯ ಹರಳುಗಳು/ಜ್ಯೂವೆಲರಿ ಆಮದು ಹೊರತುಪಡಿಸಿ) ಇತರೆ ಆಮದಿಗೆ ಶಿಪ್ ಮೆಂಟ್ ಆದ ದಿನದಿಂದ ಆರು ತಿಂಗಳಿಂದ 12 ತಿಂಗಳವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಈ ನಿಯಮ 2020ರ ಜುಲೈ 31ಕ್ಕೆ ಮುನ್ನ ಅಥವಾ ಆನಂತರ ಮಾಡಿಕೊಂಡ ಆಮದುಗಳಿಗೆ ಅನ್ವಯ.
ಆರ್ಥಿಕ ಒತ್ತಡ ತಗ್ಗಿಸುವ ಕ್ರಮಗಳು
· ಮತ್ತೆ ಮೂರು ತಿಂಗಳಕಾಲ ನಿಯಂತ್ರಣ ಕ್ರಮಗಳ ವಿಸ್ತರಣೆ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಮೊದಲು ಘೋಷಿಸಿದ್ದ ಕೆಲವು ನಿಯಂತ್ರಣ ಕ್ರಮಗಳನ್ನು ಮತ್ತೆ ಮೂರು ತಿಂಗಳು 2020ರ ಜೂನ್ 1 ರಿಂದ 2020ರ ಆಗಸ್ಟ್ 31ರ ವರೆಗೆ ವಿಸ್ತರಿಸಿದೆ. ಈ ಕ್ರಮಗಳು ಒಟ್ಟು ಆರು ತಿಂಗಳ ಅವಧಿಗೆ ಅನ್ವಯವಾಗುತ್ತವೆ.(ಅಂದರೆ 2020ರ ಮಾರ್ಚ್ 1 ರಿಂದ 2020ರ ಆಗಸ್ಟ್ 31ರ ವರೆಗೆ) ಈ ಮೇಲಿನ ನಿಯಂತ್ರಣ ಕ್ರಮಗಳೆಂದರೆ (ಎ) ಅವಧಿ ಸಾಲಗಳಿಗೆ ಮೂರು ತಿಂಗಳ ವಿಸ್ತರಣೆ ಕಾಲಾವಕಾಶ(ಮಾರಿಟೋರಿಯಂ): (ಬಿ) ದುಡಿಯುವ ಬಂಡವಾಳ ಸೌಕರ್ಯದ ಮೇಲಿನ ಬಡ್ಡಿ ವಿನಾಯಿತಿ ಮೂರು ತಿಂಗಳು ಮುಂದೂಡಿಕೆ: (ಸಿ) ದುಡಿಯುವ ಬಂಡವಾಳದ ಅಗತ್ಯತೆಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಅಥವಾ ದುಡಿಯುವ ಬಂಡವಾಳದ ಮರು ಮೌಲ್ಯಮಾಪನ: (ಡಿ) ಸಾಲ ಮಾಹಿತಿ ಕಂಪನಿಗಳ ವರದಿಗಳಲ್ಲಿ ಮತ್ತು ಮೇಲ್ವಿಚಾರಣಾ ವರದಿಗಳಲ್ಲಿ ‘ಡಿಫಾಲ್ಟರ್’ ಎಂದು ವರ್ಗೀಕರಿಸುವುದರಿಂದ ವಿನಾಯಿತಿ: (ಇ) ಒತ್ತಡದ ಆಸ್ತಿಗಳಿಗೆ ಕಾಲಮಿತಿ ನಿರ್ಣಯ ವಿಸ್ತರಣೆ ಮತ್ತು (ಎಫ್) ಸ್ವತ್ತು ವರ್ಗೀಕರಣಕ್ಕೆ ಸಾಲ ನೀಡಿಕೆ ಸಂಸ್ಥೆಗಳಿಂದ ಮೂರು ತಿಂಗಳ ಮಾರಿಟೋರಿಯಂ ಹೊರತುಪಡಿಸಿ ಕ್ರಮ ಇತ್ಯಾದಿ. ಸಾಲ ನೀಡಿಕೆ ಸಂಸ್ಥೆಗಳಿಗೆ ತಮ್ಮ ದುಡಿಯುವ ಬಂಡವಾಳದ ಮಿತಿಯನ್ನು ಯಥಾಸ್ಥಿತಿಯನ್ನು 2021ರ ಮಾರ್ಚ್ 31ರ ವರೆಗೆ ಕಾಪಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಂತೆಯೇ ದುಡಿಯುವ ಬಂಡವಾಳ ಚಕ್ರದ ಮೌಲ್ಯಮಾಪನ 2021ರ ಮಾರ್ಚ್ 31ರ ವರೆಗೆ ಮುಂದುವರಿಕೆ.
· ದುಡಿಯುವ ಬಂಡವಾಳವನ್ನು ಬಡ್ಡಿ ಅವಧಿ ಸಾಲವನ್ನಾಗಿ ಪರಿವರ್ತಿಸಲು ಅವಕಾಶ
ಸಾಲ ನೀಡಿಕೆ ಸಂಸ್ಥೆಗಳಿಗೆ ದುಡಿಯುವ ಬಂಡವಾಳ ಸೌಕರ್ಯದ ಮೇಲಿನ ಒಟ್ಟು ಬಡ್ಡಿಯನ್ನು ಒಟ್ಟು ಆರು ತಿಂಗಳವರೆಗೆ ಮುಂದೂಡಿ(ಅಂದರೆ 2020ರ ಮಾರ್ಚ್ 1 ರಿಂದ 2020ರ ಆಗಸ್ಟ್ 31ರ ವರೆಗೆ) ಆ ಮೊತ್ತವನ್ನು ಅವಧಿ ಸಾಲದ ಬಡ್ಡಿಯನ್ನಾಗಿ ಪರಿವರ್ತಿಸಲು ಮತ್ತು ಆ ಮೊತ್ತವನ್ನು 2021ರ ಮಾರ್ಚ್ 31ಕ್ಕೆ ಅಂತ್ಯವಾಗುವ ಪ್ರಸಕ್ತ ಹಣಕಾಸು ವರ್ಷದ ಅವಧಿಯಲ್ಲಿ ಮರುಪಾವತಿಗೆ ಅವಕಾಶ ಕಲ್ಪಿಸುವುದು.
· ಕಾರ್ಪೊರೇಟ್ ಗಳಿಗೆ ಬಂಡವಾಳದ ಹರಿವನ್ನು ಹೆಚ್ಚಿಸಲು ಗ್ರೂಪ್ ಎಕ್ಸ್ ಪ್ರೋಷರ್ ಮಿತಿ ಏರಿಕೆ
ನಿಗದಿತ ಕಾರ್ಪೊರೇಟ್ ಗುಂಪುಗಳಿಗೆ ಬ್ಯಾಂಕುಗಳು ನೀಡಬಹುದಾದ ಗರಿಷ್ಠ ಸಾಲದ ಮಿತಿಯನ್ನು ಬ್ಯಾಂಕುಗಳ ಬಂಡವಾಳ ಮೂಲ ಆಧರಿಸಿ ಶೇ.25 ರಿಂದ ಶೇ.30ಕ್ಕೆ ಹೆಚ್ಚಿಸಲಾಗಿದೆ. ಬ್ಯಾಂಕ್ ಗಳಿಂದ ಕಾರ್ಪೊರೇಟ್ ಗಳ ಹಣದ ಅಗತ್ಯತೆ ಪೂರೈಸಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಂಕಷ್ಟದಲ್ಲಿ ಕಾರ್ಪೊರೇಟ್ ಗಳು, ಮಾರುಕಟ್ಟೆಗಳಿಂದ ಹಣ ಎತ್ತುವಳಿ ಮಾಡುವುದು ಕಷ್ಟಕರವಾಗಿರುವುದರ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹೆಚ್ಚಳದ ಮಿತಿ 2021ರ ಜೂನ್ 30ರ ವರೆಗೆ ಅನ್ವಯವಾಗುತ್ತದೆ.
ರಾಜ್ಯ ಸರ್ಕಾರಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡಲು ಕ್ರಮಗಳು
· ಸಮಗ್ರ ಸಿಂಕಿಂಗ್ ನಿಧಿಯಿಂದ ಹೆಚ್ಚಿನ ಸಾಲ ಪಡೆಯಲು ಅವಕಾಶ
ರಾಜ್ಯ ಸರ್ಕಾರಗಳು ತಮ್ಮ ಬಾಧ್ಯತೆಗಳ ಮರುಪಾವತಿಗೆ ಸಮಗ್ರ ಸಿಂಕಿಂಗ್ ನಿಧಿ(ಸಿಸಿಎಫ್ ) ಯನ್ನು ನಿರ್ವಹಿಸುತ್ತಿವೆ. ಇದೀಗ ಆ ನಿಧಿಯಿಂದ ಹಣಕಾಸು ವಾಪಸಾತಿಗೆ ನಿಯಮಗಳನ್ನು ಸಡಿಲಿಸಲಾಗಿದೆ. ಇದರಿಂದಾಗಿ ರಾಜ್ಯಗಳು, 2020-21ನೆ ಸಾಲಿಗೆ ಬಾಕಿ ಇರುವ ಮೊತ್ತಕ್ಕೆ ಮಾರುಕಟ್ಟೆಗಳಿಂದ ಪಡೆದಿರುವ ತಮ್ಮ ಸಾಲಗಳಿಗೆ ಮರು ಪಾವತಿ ಮಾಡಲು ಅನುಕೂಲವಾಗುತ್ತದೆ. ಹಣ ವಾಪಸಾತಿ ನಿಯಮಗಳಲ್ಲಿನ ಬದಲಾವಣೆಗಳು ತಕ್ಷಣದಿಂದ ಜಾರಿಗೆ ಬರಲಿವೆ ಮತ್ತು ಅವು 2021ರ ಮಾರ್ಚ್ 31ರ ವರೆಗೆ ಅನ್ವಯವಾಗಲಿವೆ. ಗೌರ್ನರ್, ಈ ವಿನಾಯಿತಿಯನ್ನು ನೀಡಿರುವುದರಿಂದ ನಿಧಿಯಲ್ಲಿ ಅಸಮತೋಲನ ವಾಗದಂತೆ ಕ್ರಮಗಳನ್ನು ಖಾತ್ರಿಪಡಿಸಲಾಗಿದೆ ಎಂದರು.
ಆರ್ಥಿಕತೆಯ ಮೌಲ್ಯಮಾಪನ
ಜಾಗತಿಕ ಆರ್ಥಿಕ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಲಾಗಿದೆ ಎಂದ ಗೌರ್ನರ್, ಎಲ್ಲ ವಿಚಾರಗಳಲ್ಲೂ ಸೂಕ್ಷ್ಮ ಆರ್ಥಿಕತೆ ಮತ್ತು ಹಣಕಾಸು ಸ್ಥಿತಿಗತಿಗಳು ಮಿತವ್ಯಯ ಸ್ಥಿತಿಯಲ್ಲಿವೆ ಎಂದರು. ಜಾಗತಿಕ ಆರ್ಥಿಕತೆ ಕಠೋರ ಹಣದುಬ್ಬರದತ್ತ ಸಾಗುತ್ತಿದೆ ಎಂದು ಹೇಳಿದರು.
ದೇಶೀಯ ಆರ್ಥಿಕತೆ ಕೂಡ ಕಳೆದ ಎರಡು ತಿಂಗಳ ಲಾಕ್ ಡೌನ್ ಪರಿಣಾಮ ಭಾರೀ ಪರಿಣಾಮ ಬೀರಿದೆ ಎಂದು ಗೌರ್ನರ್ ತಿಳಿಸಿದರು. “ಆರು ಪ್ರಮುಖ ಕೈಗಾರಿಕಾ ರಾಜ್ಯಗಳಲ್ಲಿ ಶೇ.60ರಷ್ಟು ಮಾತ್ರ ಕೈಗಾರಿಕಾ ಉತ್ಪಾದನೆಯಾಗಿದೆ ಮತ್ತು ಅವು ಬಹುತೇಕ ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿವೆ’’ ಎಂದು ಹೇಳಿದರು. ಬೇಡಿಕೆ ಗಣನೀಯವಾಗಿ ಕುಸಿದಿದೆ, ಉತ್ಪಾದನೆ ಇಳಿಮುಖವಾಗಿದೆ ಇದು ವಿತ್ತೀಯ ಆದಾಯಗಳ ಮೇಲೆ ಪರಿಣಾಮ ಬೀರಿದೆ. ಖಾಸಗಿ ಬಳಕೆ ಗಣನೀಯವಾಗಿ ಇಳಿಕೆಯಾಗಿದೆ.
ತೀವ್ರ ಸಂಕಷ್ಟಗಳ ಮಧ್ಯೆಯೂ ಕೃಷಿ ಮತ್ತು ಅದರ ಸಂಬಂಧಿ ಚಟುವಟಿಕೆಗಳು ಭರವಸೆಯ ಆಶಾಕಿರಣ ಮೂಡಿಸಿವೆ ಎಂದು ಗೌರ್ನರ್ ಹೇಳಿದರು. ಜೊತೆಗೆ 2020ರಲ್ಲಿ ನೈಋತ್ಯ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಭರವಸೆಯ ಬೆಳ್ಳಿ ಕಿರಣವಾಗಿದೆ ಎಂದರು.
ಸಮರ್ಪಕವಾದ ದತ್ತಾಂಶವಿಲ್ಲದೆ ಜನವರಿ 2020ರಲ್ಲಿ ಆಹಾರ ಹಣದುಬ್ಬರ ದರ ಗಣನೀಯವಾಗಿ ಕುಸಿದಿತ್ತು. ಮಾರ್ಚ್ ವರೆಗೆ ಸತತ ಎರಡು ತಿಂಗಳು ಕೂಡ ಕುಸಿದಿತ್ತು. ದಿಢೀರನೆ ಏಪ್ರಿಲ್ ತಿಂಗಳಲ್ಲಿ ಅದು ಶೇ.8.6ಕ್ಕೆ ಹೆಚ್ಚಳವಾಗಿದೆ. ಪೂರೈಕೆ ಅಡೆತಡೆಗಳು ಮುಂದುವರಿದಿದ್ದು, ಪ್ರಸ್ತುತ ಬೇಡಿಕೆ ಕುಸಿದಿದೆ. ಕೋವಿಡ್-19ನಿಂದಾಗಿ ವಿಶ್ವದ ಉತ್ಪಾದನೆ ಮತ್ತು ಬೇಡಿಕೆ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಭಾರತೀಯ ರಫ್ತು ಮತ್ತು ಆಮದು ಕಳೆದ 30 ವರ್ಷಗಳಲ್ಲೇ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಹಣಕಾಸು ನೀತಿ ಸಮಿತಿ ಹಣದುಬ್ಬರ ಅನಿಶ್ಚಿತವಾಗಿದೆ ಎಂದು ಮೌಲ್ಯಮಾಪನ ಮಾಡಿದೆ ಎಂದು ಗೌರ್ನರ್ ತಿಳಿಸಿದರು. ಅಲ್ಲದೆ, ಏಪ್ರಿಲ್, ಮೇ ಮತ್ತು ಮುಂದಿನ ಕೆಲವು ತಿಂಗಳುಗಳ ಕಾಲ ಆಹಾರಧಾನ್ಯಗಳ ಪೂರೈಕೆ ಮೇಲಿನ ಪರಿಣಾಮಗಳು ಮುಂದುವರಿಯಲಿವೆ. ಅವು ಲಾಕ್ ಡೌನ್ ಸ್ಥಿತಿಗತಿ ಮತ್ತು ಆನಂತರ ಪೂರೈಕೆ ಸರಣಿ ಸ್ಥಿತಿಗತಿ ಮಾಮೂಲಿಗೆ ಮರಳುವುದರ ಮೇಲೆ ಅವಲಂಬಿಸಿದೆ. ಬೇಳೆಕಾಳುಗಳ ಹಣದುಬ್ಬರ ಪ್ರಮಾಣ ಕಳವಳಕಾರಿಯಾಗಿದೆ ಎಂದ ಅವರು, ಆಮದು ಸುಂಕಗಳ ಮರು ನಿಗದಿ ಸೇರಿದಂತೆ ತ್ವರಿತ ನಿರ್ವಹಣಾ ಹಸ್ತಕ್ಷೇಪಗಳನ್ನು ಸಕಾಲದಲ್ಲಿ ಕೈಗೊಳ್ಳಬೇಕಾಗಿದೆ ಎಂದರು.
ಆರ್ಥಿಕತೆಯ ಮುಂದಿನ ಹಾದಿಯ ಕುರಿತು ಮಾತನಾಡಿದ ಗೌರ್ನರ್, ಬೇಡಿಕೆ ಒತ್ತಡ ಮತ್ತು ಪೂರೈಕೆ ವ್ಯತ್ಯಯ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕುಗ್ಗಿಸಲಿದೆ ಎಂದರು. ಹಣಕಾಸು ಚಟುವಟಿಕೆಗಳು ಹಂತಹಂತವಾಗಿ ಯಥಾಸ್ಥಿತಿಗೆ ಮರಳಲಿವೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ವಿಶೇಷವಾಗಿ ಈ ವರ್ಷದ ದ್ವಿತೀಯಾರ್ಧದಲ್ಲಿ ಅನುಕೂಲಾತ್ಮಕ ಪರಿಣಾಮಗಳು ಆಗಲಿವೆ. ಈಗ ಕೈಗೊಂಡಿರುವ ವಿತ್ತೀಯ ಹಣಕಾಸು ಮತ್ತು ಆಡಳಿತಾತ್ಮಕ ಕ್ರಮಗಳ ಪರಿಣಾಮ 2020-21ನೇ ಸಾಲಿನ ದ್ವಿತೀಯಾರ್ಧದಲ್ಲಿ ಕ್ರಮೇಣ ಆರ್ಥಿಕ ಚಟುವಟಿಕೆಗಳು ಪುನಶ್ಚೇತನಗೊಂಡು, ಸಹಜಸ್ಥಿತಿಯತ್ತ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಎಲ್ಲ ಅನಿಶ್ಚಿತತೆಗಳ ಮಧ್ಯೆಯೇ 2020-21ನೇ ಸಾಲಿಗೆ ಆರ್ಥಿಕ ಪ್ರಗತಿಯು (ಜಿಡಿಪಿ ಪ್ರಗತಿ) ನಕಾರಾತ್ಮಕವಾಗಿಯೇ ಇರಲಿದೆ. 2020-2021ರ ದ್ವಿತೀಯಾರ್ಧದ ನಂತರ ಬೆಳವಣಿಗೆಯಲ್ಲಿ ಸ್ವಲ್ಪಮಟ್ಟದ ಚೇತರಿಕೆಯಾಗಲಿದೆ. ಬಹುತೇಕ ಕೋವಿಡ್ ಪ್ರಮಾಣ ಹೇಗೆ ದುರ್ಬಲಗೊಳ್ಳುತ್ತದೆ ಮತ್ತು ಪರಿಸ್ಥಿತಿ ಹೇಗೆ ಸಹಜಸ್ಥಿತಿಗೆ ಮರಳುತ್ತದೆ ಎಂಬುದನ್ನು ಅವಲಂಬಿಸಿದೆ.
ಗೌರ್ನರ್ ಅವರ ಪೂರ್ಣ ಹೇಳಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
***
(Release ID: 1626510)
Visitor Counter : 406