ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಹೊಸ ಆರ್ಥಿಕ ಸುಧಾರಣೆಗಳು ಭಾರತದ ಬಾಹ್ಯಾಕಾಶ ಮತ್ತು ಅಣು ಸಾಮರ್ಥ್ಯಗಳನ್ನು ಅವುಗಳ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯರೂಪಕ್ಕೆ ತರಲು ವಿಶಿಷ್ಟ ಅವಕಾಶ: ಡಾ. ಜಿತೇಂದ್ರ ಸಿಂಗ್

Posted On: 17 MAY 2020 7:16PM by PIB Bengaluru

ಹೊಸ ಆರ್ಥಿಕ ಸುಧಾರಣೆಗಳು ಭಾರತದ ಬಾಹ್ಯಾಕಾಶ ಮತ್ತು ಅಣು ಸಾಮರ್ಥ್ಯಗಳನ್ನು

ಅವುಗಳ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯರೂಪಕ್ಕೆ ತರಲು ವಿಶಿಷ್ಟ ಅವಕಾಶ: ಡಾ. ಜಿತೇಂದ್ರ ಸಿಂಗ್


ಕೋವಿಡ್ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋ.ರೂ.ಗಳ ಆರ್ಥಿಕ ಪ್ಯಾಕೇಜ್ ನಲ್ಲಿರುವ ಇತರ ಪ್ರಸ್ತಾವನೆಗಳಲ್ಲಿ ವೈದ್ಯಕೀಯ ಐಸೋಟೋಪುಗಳನ್ನು ಬಳಸಿ ಕೈಗೆಟಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುವ ಅಂಶವೂ ಒಳಗೊಂಡಿದೆ ಮತ್ತು ಅದು ಅಣು ಶಕ್ತಿ ಇಲಾಖೆಯ (ಡಿ...) ಆಶ್ರಯದಲ್ಲಿ ಪಿ.ಪಿ.ಪಿ. (ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ) ಮೂಲಕ ವಿಶೇಷ ರಿಯಾಕ್ಟರನ್ನು ಸ್ಥಾಪಿಸುವ ಇರಾದೆಯನ್ನು ಹೊಂದಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಇಂದಿಲ್ಲಿ ಹೇಳಿದ್ದಾರೆ.

ಆರ್ಥಿಕ ಪ್ಯಾಕೇಜನ್ನು ನವೀನ, ಭವಿಷ್ಯವಾದಿ ಮತ್ತು ಧೈರ್ಯಶಾಲೀ ಎಂದು ಬಣ್ಣಿಸಿದ ಅಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆಯ ಉಸ್ತುವಾರಿ ಎಂ..ಎಸ್. ಆಗಿರುವ ಡಾ. ಜಿತೇಂದ್ರ ಸಿಂಗ್, ಆರು ದಶಕಗಳ ಕಾಲ ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಅಣು ಶಕ್ತಿ ಗಳು ರಹಸ್ಯದ ಪರದೆಯಡಿ ಕಾರ್ಯಾಚರಿಸುತ್ತಾ ಬಂದಿವೆ. ಮತ್ತು ಯಾವುದಾದರೂ ಹೊಸತನ್ನು ಯೋಜಿಸುವುದು ಅಥವಾ ಚೌಕಟ್ಟಿನಾಚೆಗೆ ಚಿಂತಿಸುವುದು ವಾಸ್ತವವಾಗಿ ನಿಷೇಧವಾಗಿತ್ತು ಮತ್ತು ಅದು ಒಂದು ಮಿತಿಯಲ್ಲಿ ಮುಂದುವರೆದುಕೊಂಡು ಹೋಗುತ್ತಿತ್ತು ಎಂದು ಹೇಳಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಅಣು ಶಕ್ತಿ ಇಲಾಖೆಯು ವೈವಿಧ್ಯಮಯ ಕ್ಷೇತ್ರಗಳಲ್ಲಿ ಅದರ ಬಳಕೆಯನ್ನು ಅನುಷ್ಟಾನಕ್ಕೆ ತರಲು ಅವಕಾಶಗಳನ್ನು ಪಡೆದಿದೆ ಮತ್ತು ಇದರಿಂದ ನಮ್ಮ ದೈನಂದಿನ ಜೀವನಕ್ಕೂ ಪ್ರಯೋಜನವಾಗಲಿದೆ ಎಂದವರು ಹೇಳಿದರು. ಭಾರತದಲ್ಲಿ ವೈದ್ಯಕೀಯ ಐಸೋಟೋಪುಗಳ ಉತ್ಪಾದನೆಯು ಕ್ಯಾನ್ಸರಿಗೆ ಮತ್ತು ಇತರ ರೋಗಗಳಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆಯ ಅವಕಾಶವನ್ನು ಒದಗಿಸುವುದಲ್ಲದೆ, ಇಡೀ ವಿಶ್ವದ ಮನುಕುಲದ ಸೇವೆಗೆ ಇದು ಲಭ್ಯವಾಗಲಿದೆ ಎಂದೂ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು. ಅದೇ ರೀತಿ ಪ್ಯಾಕೇಜಿನಲ್ಲಿರುವ ಇತರ ಅಣು ಶಕ್ತಿ ಸಂಬಂಧಿ ಸುಧಾರಣೆಗಳು ಆಹಾರ ಸಂರಕ್ಷಣೆಗೆ ವಿಕಿರಣ ತಂತ್ರಜ್ಞಾನದ ಬಳಕೆ ಮತ್ತು ಅದರ ಕೆಡದಿರುವಿಕೆಯ ಅವಧಿಯ ವಿಸ್ತರಣೆ ಮಾಡುವುದಕ್ಕೆ ಸಂಬಂಧಿಸಿದವಾಗಿವೆ ಎಂದರು. ತಿಳಿವು ನಮ್ಮ ವಿಜ್ಞಾನಿಗಳಲ್ಲಿ ಲಭ್ಯ ಇತ್ತು, ಆದರೆ ವಿಕಿರಣ ತಂತ್ರಜ್ಞಾನವನ್ನು ಪಿ.ಪಿ.ಪಿ. ಮಾದರಿಯಲ್ಲಿ ಉತ್ತೇಜಿಸುವ ಕ್ರಮ ಇದೇ ಮೊದಲ ಬಾರಿಗೆ ಆಗಿದೆ ಎಂದೂ ಅವರು ಹೇಳಿದರು.

ಬಾಹ್ಯಾಕಾಶಕ್ಕೆ ಸಂಬಂಧಿಸಿ ಆರ್ಥಿಕ ಪ್ಯಾಕೇಜ್ ಬಾಹ್ಯಾಕಾಶ/ಇಸ್ರೋ ಕಾರ್ಯಗಳಲ್ಲಿ ಖಾಸಗಿ ವಲಯಕ್ಕೆ ಅವಕಾಶ ನೀಡುವ ಮೂಲಕ ಸುಧಾರಣಾ ಹಾದಿಯನ್ನು ತೆರೆದಿದೆ ಎಂದಿರುವ ಡಾ. ಜಿತೇಂದ್ರ ಸಿಂಗ್ ಮೂಲಕ ಉಪಗ್ರಹ ಉಡಾವಣೆಯಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳಲ್ಲಿ ಖಾಸಗಿ ಕಂಪೆನಿಗಳಿಗೆ ಸಮಾನ ಆಟದ ಅವಕಾಶವನ್ನು ಒದಗಿಸಲಾಗಿದೆ ಎಂದರು. ತಾಂತ್ರಿಕ ಉದ್ಯಮಶೀಲರಿಗೆ ದೂರಸಂವೇದಿ ದತ್ತಾಂಶ ಒದಗಿಸುವ ಮೂಲಕ ಮುಕ್ತ ಭೂ-ಬಾಹ್ಯಾಕಾಶ ನೀತಿಗೆ ಅವಕಾಶ ಮಾಡಿಕೊಡಲು ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಹೊಸ ಆರ್ಥಿಕ ಸುಧಾರಣೆಗಳು , ಭಾರತದ ಬಾಹ್ಯಾಕಾಶ ಮತ್ತು ಅಣು ಸಾಮರ್ಥ್ಯಗಳನ್ನು ಅವುಗಳ ಪೂರ್ಣ ಶಕ್ತಿಯೊಂದಿಗೆ ಕಾರ್ಯರೂಪಕ್ಕೆ ತರಲು ಒಂದು ವಿಶಿಷ್ಟ ಅವಕಾಶವನ್ನು ಒದಗಿಸುತ್ತವೆ ಎಂದೂ ಡಾ. ಜಿತೇಂದ್ರ ಸಿಂಗ್ ಹೇಳಿದರು.

***



(Release ID: 1625000) Visitor Counter : 198