ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಆತ್ಮ ನಿರ್ಭರ ಭಾರತ್ ಯೋಜನೆ ಆರಂಭ

Posted On: 16 MAY 2020 8:00PM by PIB Bengaluru

ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಆತ್ಮ ನಿರ್ಭರ ಭಾರತ್ ಯೋಜನೆ ಆರಂಭ

 

ಎನ್ಎಫ್ಎಸ್ ಅಥವಾ ರಾಜ್ಯ ಪಡಿತರ ಯೋಜನೆಗೆ ವ್ಯಾಪ್ತಿಗೆ ಒಳಪಡದ  ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ  ತಿಂಗಳಿಗೆ 5 ಕೆ.ಜಿ ಆಹಾರ ಧಾನ್ಯಗಳನ್ನು ಎರಡು ತಿಂಗಳವರೆಗೆ ಅಂದರೆ ಮೇ ಮತ್ತು ಜೂನ್ 2020 ರವರೆಗೆ ಆತ್ಮ ನಿರ್ಭರ ಭಾರತ್ ಪ್ಯಾಕೇಜ್ ಅಡಿಯಲ್ಲಿ ಉಚಿತವಾಗಿ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ ಯೋಜನೆ ಅನುಷ್ಠಾನಕ್ಕೆ ಒಟ್ಟು ಅಂದಾಜು ವೆಚ್ಚ ಸುಮಾರು 3500 ಕೋಟಿ ರೂ.ಗಳನ್ನು ಭಾರತ ಸರ್ಕಾರ ಸಂಪೂರ್ಣವಾಗಿ ಭರಿಸಲಿದೆ. ಯೋಜನೆಯಡಿ ದೇಶಾದ್ಯಂತ ಆಹಾರ ಧಾನ್ಯಗಳ ಹಂಚಿಕೆಯು 8 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಆಗಿರುತ್ತದೆ.

ಯೋಜನೆಯಡಿ ಆಹಾರ ಧಾನ್ಯಗಳ ವಿತರಣೆಯನ್ನು ಈಗಾಗಲೇ ಭಾರತ ಆಹಾರ ನಿಗಮ (ಎಫ್ಸಿಐ) ಪ್ರಾರಂಭಿಸಿದೆ. ಅರ್ಹ ವಲಸೆ ಕಾರ್ಮಿಕರಿಗೆ ಹೆಚ್ಚಿನ ವಿತರಣೆಗಾಗಿ ಇಂದು ತಮಿಳುನಾಡಿಗೆ 1109 ಮೆ.ಟನ್ ಅಕ್ಕಿ ಮತ್ತು ಕೇರಳಕ್ಕೆ 151 ಮೆ.ಟನ್ ಅಕ್ಕಿಯನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಯಿತು. ಯೋಜನೆಯಡಿ ದೇಶಾದ್ಯಂತ ಆಹಾರ ಧಾನ್ಯಗಳನ್ನು ತಲುಪಿಸಲು ಈಗಾಗಲೇ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ಭಾರತದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಕಷ್ಟು ದಾಸ್ತಾನು ಮಾಡಲಾಗಿದೆ. ದೇಶದ ಯಾವುದೇ ಭಾಗದಲ್ಲಿನ ಅವಶ್ಯಕತೆಗಳನ್ನು ಪೂರೈಸಲು, ಅಂಡಮಾನ್ ಮತ್ತು ಲಕ್ಷದ್ವೀಪ ದ್ವೀಪಗಳು ಸೇರಿದಂತೆ ದೇಶದ ಉದ್ದಗಲಕ್ಕೂ ಇರುವ 2122 ಗೋದಾಮುಗಳಲ್ಲಿ ಆಹಾರ ಧಾನ್ಯ ಸಂಗ್ರಹ ಮಾಡಲಾಗಿದೆ. ರೈಲು, ರಸ್ತೆ ಮತ್ತು ಸಮುದ್ರ ಮಾರ್ಗಗಳ ಮೂಲಕ ಉತ್ಪಾದನಾ ಪ್ರದೇಶಗಳಿಂದ ಆಹಾರ ಧಾನ್ಯದ ದಾಸ್ತಾನುಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತವಾಗಿ ಒದಗಿಸಲಾಗುತ್ತಿದೆ.

***



(Release ID: 1624634) Visitor Counter : 270