ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಎಲ್.ಪಿ.ಜಿ. ಸಿಲಿಂಡರ್ ವಿತರಣೆ ಮತ್ತು ಪಿ.ಎಂ.ಯು.ವೈ. ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಪೂರೈಕೆ ಬಗ್ಗೆ ಡಿ.ಎನ್.ಒ.ಗಳ ಜೊತೆ ಶ್ರೀ ಧರ್ಮೇಂದ್ರ ಪ್ರಧಾನ್ ಸಂವಾದ

Posted On: 03 APR 2020 6:30PM by PIB Bengaluru

ಎಲ್.ಪಿ.ಜಿ. ಸಿಲಿಂಡರ್ ವಿತರಣೆ ಮತ್ತು ಪಿ.ಎಂ.ಯು.ವೈ. ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಪೂರೈಕೆ ಬಗ್ಗೆ ಡಿ.ಎನ್.ಒ.ಗಳ ಜೊತೆ ಶ್ರೀ ಧರ್ಮೇಂದ್ರ ಪ್ರಧಾನ್ ಸಂವಾದ

ಉಜ್ವಲ ಯೋಜನೆ ಸಾಮಾಜಿಕ ಬದಲಾವಣೆಯ ವಾಹನವಾಗಿದ್ದು, ಕೊರೊನಾವೈರಸ್ ವಿರುದ್ದದ ಭಾರತದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿ ಮೂಡಿಬರಲಿದೆ

 

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗು ಉಕ್ಕು ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಂದು ಕೋವಿಡ್ -19 ರ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಅವಧಿಯಲ್ಲಿ ಜಿಲ್ಲೆಗಳಲ್ಲಿ ಎಲ್.ಪಿ.ಜಿ.ಸಿಲಿಂಡರುಗಳ ವಿತರಣೆಯ ಮೌಲ್ಯಮಾಪನಕ್ಕಾಗಿ ತೈಲ ಮಾರುಕಟ್ಟೆ ಕಂಪೆನಿಗಳ ನೂರಾರು ಜಿಲ್ಲಾ ನೋಡಲ್ ಅಧಿಕಾರಿಗಳ (ಡಿ.ಎನ್.ಒ.ಗಳು) ಜೊತೆ ಸಂವಾದ ನಡೆಸಿದರು. ಈ ಡಿ.ಎನ್.ಒ.ಗಳು ತಮಗೆ ನಿಗದಿಪಡಿಸಿದ ಪ್ರದೇಶ ವ್ಯಾಪ್ತಿಯಲ್ಲಿ ಎಲ್.ಪಿ.ಜಿ. ವಿತರಣೆ ಜವಾಬ್ದಾರಿಯನ್ನು ಹೊಂದಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ, ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಎಲ್ಲಾ ಮೂರು ಒ.ಎಂ.ಸಿ.ಗಳಾದ ಐ.ಒ.ಸಿ.ಎಲ್, ಬಿ.ಪಿ.ಸಿ.ಎಲ್., ಎಚ್.ಪಿ.ಸಿ.ಎಲ್. ಈ ವೆಬಿನಾರ್ ನಲ್ಲಿ ಭಾಗವಹಿಸಿದ್ದವು.

ತಮ್ಮ ವೀಡಿಯೋ ಕಾನ್ಫರೆನ್ಸ್ ಮೂಲಕದ ಸಂವಾದದಲ್ಲಿ ಶ್ರೀ ಪ್ರಧಾನ ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನಾ ಸಾಮಾಜಿಕ ಬದಲಾವಣೆಯ ಪ್ರಮುಖ ಸಾಧನವಾಗಿ ಮೂಡಿಬಂದಿದೆ ಮತ್ತು ಅದು ಮತ್ತೊಮ್ಮೆ ನೊವೆಲ್ ಕೊರೊನಾವೈರಸ್ ಪ್ರಸಾರ ವಿರುದ್ದದ ಭಾರತದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿ ಮೂಡಿ ಬರಲಿದೆ ಎಂದರು.ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾದ ವಿವಿಧ ಅಂಶಗಳನ್ನು ಪ್ರಸ್ತಾವಿಸಿದ ಅವರು ಪಿ.ಎಂ.ಯು.ವೈ. ಫಲಾನುಭವಿಗಳಿಗೆ 14.2 ಕಿ.ಗ್ರಾಂನ ಮೂರು ಸಿಲಿಂಡರುಗಳವರೆಗೆ ಮರುಪೂರಣ ಲಭ್ಯತೆ ಮತ್ತು ವಿತರಕರಿಂದ ಅನಿಲ ಮರುಪೂರಣದ ಜಾಡಿಯನ್ನು ಪಡೆಯಲು ಅನುಕೂಲವಾಗುವಂತೆ ಒ.ಎಂ.ಸಿ.ಗಳಿಂದ ಪಿ.ಎಂ.ಯು.ವೈ. ಗ್ರಾಹಕರ ಬ್ಯಾಂಕು ಖಾತೆಗಳಿಗೆ ಚಿಲ್ಲರೆ ಮಾರಾಟ ಬೆಲೆಯ ಮುಂಗಡ ವರ್ಗಾವಣೆಯಿಂದಾಗಿ ಬಹಳ ಉಪಯುಕ್ತವಾಗಲಿದೆ ಎಂದರು. ಈ ಯೋಜನೆಯನ್ನು ಯಾವುದೇ ಅಡೆ ತಡೆ ಇಲ್ಲದಂತೆ ಜಾರಿಯಾಗುವುದನ್ನು ಖಾತ್ರಿಪಡಿಸುವಂತೆ ಅವರು ಸೂಚನೆ ನೀಡಿದರು.

15 ಬಂದರು ಟರ್ಮಿನಲ್ ಗಳು , 195 ಬಾಟ್ಲಿಂಗ್ ಸ್ಥಾವರಗಳು ಮತ್ತು ಸಾಗಾಟ ಜಾಲ ಲಾಕ್ ಡೌನ್ ಇದ್ದಾಗ್ಯೂ ದಿನನಿತ್ಯ ಕಾರ್ಯಾಚರಿಸುತ್ತಿದೆ, ಇದರಿಂದಾಗಿ ದೇಶದಲ್ಲಿ ಸಾಕಷ್ಟು ಮತ್ತು ಅಡೆತಡೆ ಇಲ್ಲದೆ ಎಲ್.ಪಿ.ಜಿ.ಉತ್ಪನ್ನಗಳ ಲಭ್ಯತೆ ಖಾತ್ರಿಪಡಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಎಲ್.ಪಿ.ಜಿ. ವಿತರಣ ಸಿಬ್ಬಂದಿಗಳು ಮತ್ತು ಒ.ಎಂ.ಸಿ. ಅಧಿಕಾರಿಗಳನ್ನು ಶ್ಲಾಘಿಸಿದ ಅವರು “ ನಮ್ಮ ತಂಡದ ಸದಸ್ಯರು ದೇಶದ ಪ್ರತೀ ಮೂಲೆಯ ಎಲ್ಲಾ ಮನೆಗಳಿಗೆ ಅಡೆ ತಡೆ ಇಲ್ಲದೆ ಎಲ್.ಪಿ.ಜಿ. ಪೂರೈಸುವ ಮೂಲಕ ಬಹಳ ದೊಡ್ಡ ಕೆಲಸ ಮಾಡುತ್ತಿದ್ದಾರೆ ಎಂದರು. ದಿನ ನಿತ್ಯ 60 ಲಕ್ಷಕ್ಕೂ ಅಧಿಕ ಸಿಲಿಂಡರುಗಳನ್ನು ವಿತರಿಸಲಾಗುತ್ತಿದೆ ಮತ್ತು ಇದು ಡಿ.ಎನ್.ಒ.ಗಳ ಅವಿರತ ಶ್ರಮ ಇಲ್ಲದಿದ್ದರೆ ಹಾಗು ನಮ್ಮ ವಿತರಕರು ಮತ್ತು ವಿತರಣ ಸಿಬ್ಬಂದಿಗಳ ಅರ್ಪಣಾಭಾವದ ದುಡಿಮೆ ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂದೂ ಅವರು ಹೇಳಿದರು. ಜೊತೆಗೆ ವಿತರಣಾ ಸಿಬಂದಿಗಳು ಸಾಕಷ್ಟು ಅವಶ್ಯ ಆರೋಗ್ಯ ಮುಂಜಾಗರೂಕತಾ ಕ್ರಮಗಳನ್ನು ಅವರಿಗಾಗಿ ಮತ್ತು ಸಮಾಜಕ್ಕಾಗಿ ಕೈಗೊಳ್ಳುವಂತೆ ಖಾತ್ರಿಪಡಿಸಿಕೊಳ್ಳುವಂತೆ ಡಿ.ಎನ್.ಒ.ಗಳಿಗೆ ಸಲಹೆ ಮಾಡಿದ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮತ್ತು ತಾತ್ಕಾಲಿಕ ಪರಿಹಾರ 5 ಲಕ್ಷ ರೂಪಾಯಿ ಘೋಷಣೆ ಮಾಡಿರುವುದರ ಸಹಿತ ಸರಕಾರ ಅವರ ಕಲ್ಯಾಣಕ್ಕೆ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವಂತೆಯೂ ಸೂಚಿಸಿದರು.

ಸ್ಥಳೀಯಾಡಳಿತದ ಜೊತೆ ನಿಕಟ ಸಮನ್ವಯದೊಂದಿಗೆ ಕಾರ್ಯಾಚರಿಸುವಂತೆ ಡಿ.ಎನ್.ಒ.ಗಳಿಗೆ ಸಲಹೆ ಮಾಡಿದ ಅವರು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಥಳೀಯ ಸಮುದಾಯದ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು ಅವಶ್ಯಕ ಸಾಮಗ್ರಿಗಳ ಪೂರೈಕೆಯನ್ನು ಖಾತ್ರಿಪಡಿಸುವ ಬಗ್ಗೆ ಸತತ ಭರವಸೆಗಳನ್ನು ನೀಡುತ್ತಿರಬೇಕು ಎಂದೂ ಸೂಚಿಸಿದರು. ಸರಕಾರ ಸಲಹೆ ಮಾಡಿದ ಎಲ್ಲಾ ಸುರಕ್ಷಾ ಪದ್ದತಿಗಳನ್ನು ಅನುಸರಿಸುವಂತೆ ಶ್ರೀ ಪ್ರಧಾನ್ ಕೋರಿದರು. ಆಯುಷ್ ಸಚಿವಾಲಯ ಸಲಹೆ ಮಾಡಿರುವ ವಿವಿಧ ಆರೋಗ್ಯ ಕ್ರಮಗಳನ್ನು ಅನುಸರಿಸಿ ಅವುಗಳ ಬಗ್ಗೆ ಮಾಹಿತಿ ನೀಡುವಂತೆಯೂ ಡಿ.ಎನ್.ಒ.ಗಳಿಗೆ ಅವರು ಸಲಹೆ ಮಾಡಿದರು. ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷ ಕತ್ತಲೆಯಲ್ಲಿ ದೀಪ, ಮೇಣದ ಬತ್ತಿ, ಟಾರ್ಚ್, ಮೊಬೈಲ್ ಫೋನ್ ದೀಪಗಳನ್ನು ಉರಿಸುವುದನ್ನು ಖಾತ್ರಿಪಡಿಸಿ ರಾಷ್ಟ್ರದೊಂದಿಗೆ ಎಲ್ಲರೂ ಇದ್ದೇವೆ ಎಂಬ ಪ್ರಧಾನ ಮಂತ್ರಿ ಅವರ ಮನವಿಗೆ ಗರಿಷ್ಟ ಬೆಂಬಲ ಲಭ್ಯವಾಗುವಂತೆ ಖಾತ್ರಿಪಡಿಸಲು ಡಿ.ಎನ್.ಒ.ಗಳು ಆ ಬಗ್ಗೆ ಮಾಹಿತಿ ಪ್ರಸಾರ ಮಾಡಬೇಕು ಎಂದೂ ಕೋರಿದರು.

ಆರಂಭಿಕ ಕೆಲವು ತೊಂದರೆಗಳನ್ನು ಸರಿಪಡಿಸಿದ ಬಳಿಕ ಎಲ್ಲವೂ ಸರಿಯಾಗುತ್ತಿದೆ ಎಂದು ಡಿ.ಎನ್.ಒ.ಗಳು ವರದಿ ನೀಡಿದರು. ಸಿಲಿಂಡರುಗಳನ್ನು ಆತಂಕದಿಂದ ಮುಂಗಡ ಕಾಯ್ದಿರಿಸುವುದು ಲಾಕ್ ಡೌನ್ ನ ಮೊದಲ ಕೆಲವು ದಿನ ಕಾಣಿಸಿಕೊಂಡಿತ್ತು. ಅದು ಬಳಿಕ ನಿಂತು ಹೋಯಿತು. ಸಿಲಿಂಡರುಗಳ ಪೂರೈಕೆಗಾಗಿ ಕಾಯುವ ಅವಧಿಯಲ್ಲೂ ಇಳಿಕೆಯಾಗಿದೆ. ಎಲ್.ಪಿ.ಜಿ. ವಿತರಣಾ ಸಿಬ್ಬಂದಿಗೆ ಮತ್ತು ವಿತರಣಾ ಸರಪಳಿಯಲ್ಲಿರುವ ಇತರರಿಗೆ 5 ಲಕ್ಷ ರೂಪಾಯಿಗಳ ಎಕ್ಸ್ ಗ್ರೇಶಿಯಾ ಘೋಷಣೆ ಕ್ಷೇತ್ರ ಮಟ್ಟದಲ್ಲಿಯ ಸಿಬ್ಬಂದಿಗಳಲ್ಲಿ ನೈತಿಕ ಬಲವನ್ನು ಹೆಚ್ಚಿಸಿದೆ ಎಂದೂ ಅವರು ಮಾಹಿತಿ ನೀಡಿದರು. ಪಿ.ಎಂ.ಯು.ವೈ.ಫಲಾನುಭವಿಗಳಿಗೆ ಸರಕಾರ ಘೋಷಿಸಿದ ಪರಿಹಾರ ಪ್ಯಾಕೇಜ್ ಬಗ್ಗೆ ಡಿ.ಎನ್.ಒ.ಗಳು ಪ್ರಚಾರ ಮಾಡುತ್ತಿದ್ದಾರೆ.

 



(Release ID: 1610908) Visitor Counter : 129