ರಕ್ಷಣಾ ಸಚಿವಾಲಯ

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸ್ಥಳೀಯ ಪ್ರಾಧಿಕಾರಗಳೊಂದಿಗೆ ಸಮರೋಪಾದಿಯಲ್ಲಿ ಶ್ರಮಿಸುತ್ತಿರುವ ಸಶಸ್ತ್ರ ಪಡೆಗಳು

Posted On: 27 MAR 2020 7:11PM by PIB Bengaluru

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ  ಸ್ಥಳೀಯ ಪ್ರಾಧಿಕಾರಗಳೊಂದಿಗೆ ಸಮರೋಪಾದಿಯಲ್ಲಿ ಶ್ರಮಿಸುತ್ತಿರುವ ಸಶಸ್ತ್ರ ಪಡೆಗಳು
ಬಾಧಿತ ದೇಶಗಳಿಂದ 1,073 ಜನರ ಸ್ಥಳಾಂತರ, ಪ್ರಸ್ತುತ ಸಶಸ್ತ್ರ ಪಡೆಗಳ ಸೌಲಭ್ಯದಲ್ಲಿ ದಿಗ್ಭಂದನ


 
ದೇಶ ಕೋವಿಡ್ -19 ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಸಶಸ್ತ್ರ ಪಡೆಗಳು ಸ್ಥಳೀಯ ಪ್ರಾಧಿಕಾರಗಳಿಗೆ ಔಷಧ ಮತ್ತು ಸಾರಿಗೆ ಬೆಂಬಲ ಒದಗಿಸಲು ಅವಿರತವಾಗಿ ಶ್ರಮಿಸುತ್ತಿವೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು (ಎಎಫ್‌.ಎಂಎಸ್) ಎಲ್ಲಾ ಸಂಪನ್ಮೂಲಗಳನ್ನು ನಾಗರಿಕ ಪ್ರಾಧಿಕಾರಗಳಿಗೆ ಸಹಾಯ ಮಾಡಲು ನಿಯೋಜಿಸಿದೆ, ಭೀಕರ ಬಿಕ್ಕಟ್ಟಿನ ಸಮಯದಲ್ಲಿ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಸಶಸ್ತ್ರ ಪಡೆಗಳು ನಡೆಸುತ್ತಿರುವ ಆರು, ಪ್ರತ್ಯೇಕೀಕರಣ ಸೌಲಭ್ಯಗಳು ಪ್ರಸ್ತುತ ಮಣೇಸರ್, ಜೈಸಲ್ಮೀರ್, ಜೋದ್ಪುರ್, ಚೆನ್ನೈ, ಹಿಂದನ್ ಮತ್ತು ಮುಂಬೈನಲ್ಲಿ ಕಾರ್ಯ ನಿರ್ವಹಿಸುತ್ತಿವೆ.  ಈವರೆಗೆ ವಿದೇಶೀಯರು ಸೇರಿದಂತೆ ಒಟ್ಟು 1,463 ಜನರನ್ನು ಕೋವಿಡ್-19 ಬಾದಿತ ರಾಷ್ಟ್ರಗಳಿಂದ ಸ್ಥಳಾಂತರಿಸಲಾಗಿದ್ದು, ಈ ಕೇಂದ್ರ ಗಳಲ್ಲಿ ಅವರು ಆಶ್ರಯ ಪಡೆದು ನಿಗಾದಲ್ಲಿದ್ದಾರೆ. ಈ ಪೈಕಿ 1073 ಜನರು ಪ್ರಸ್ತುತ ದಿಗ್ಬಂಧನದಲ್ಲಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಐಎಎಫ್ ಮತ್ತು ವೈದ್ಯಕೀಯ ಸಿಬ್ಬಂದಿ ಜೊತೆಗೆ ಇರಾನ್, ಇಟಲಿ, ಜಪಾನ್ ಮತ್ತು ಮಲೇಶಿಯಾ ಸೇರಿದಂತೆ ವಿದೇಶದಿಂದ ಇವರನ್ನು ಸ್ಥಳಾಂತರಿಸಲಾಗಿದೆ. ಚೈನಾ, ಜಪಾನ್ ನಿಂದ  ಸ್ಥಳಾಂತರಗೊಂಡ ಮತ್ತು ಐಎಎಫ್ ತೆರವು ವಿಮಾನ ಸಿಬ್ಬಂದಿ ಸೇರಿದಂತೆ ಮುನ್ನೂರ ತೊಂಬತ್ತು  ಜನರನ್ನು ಅವರ ಕಡ್ಡಾಯ ದಿಗ್ಬಂಧನ ಅವಧಿ ಪೂರ್ಣಗೊಂಡ ತರುವಾಯ ಬಿಡುಗಡೆ ಮಾಡಲಾಗಿದೆ.
ಈವರೆಗೆ ಮೂರು ಕೋವಿಡ್ -19 ದೃಢಪಟ್ಟ ಪ್ರಕರಣಗಳು ವರದಿಯಾಗಿವೆ – ಇಬ್ಬರು ಹಿಂದಾನ್ ನಿಂದ ಮತ್ತು ಒಬ್ಬರು
ಮಣೇಸರ್ ನಿಂದ ಬಂದವರಾಗಿದ್ದಾರೆ.  ಅವರನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಸಕ್ರಿಯವಾಗಿರುವ ಪ್ರತ್ಯೇಕೀಕರಣ ಕೇಂದ್ರಗಳ ಹೊರತಾಗಿ, ಹೆಚ್ಚಿನ ಸೌಲಭ್ಯಗಳು ಸಿದ್ಧವಾಗಿದ್ದು, ಅಗತ್ಯ ಬಿದ್ದರೆ 4872 ಗಂಟೆಗಳಲ್ಲಿ ಕಾರ್ಯಾಚರಣೆಗೊಳ್ಳಲಿವೆ. ಈ ಸೌಲಭ್ಯಗಳು ಕೋಲ್ಕತ್ತಾ, ವಿಶಾಖಪಟ್ಟಣಂ, ಕೋಚಿ, ಹೈದ್ರಾಬಾದ್ ಬಳಿಯ ದುಂಡಿಗಲ್, ಬೆಂಗಳೂರು, ಕಾನ್ಪುರ್, ಜೈಸಲ್ಮೇರ್, ಜೋರ್ಹತ್ ಮತ್ತು ಗೋರಖ್ಪುರದಲ್ಲಿವೆ.
ಇಂದು ಮಾಧ್ಯಮಗಳೊಂದಿಗೆ ಇಲ್ಲಿ ಸಂವಾದ ನಡೆಸಿದ, ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾ ನಿರ್ದೇಶಕರು (ಎಎಫ್.ಎಂ.ಎಸ್.) ಲೆಫ್ಟಿನೆಂಟ್ ಜನರಲ್ ಅನೂಪ್ ಬ್ಯಾನರ್ಜಿ, ಕೊರೋನಾ ವೈರಸ್ ಪ್ರಕರಣಗಳನ್ನು ಮಾತ್ರ ನಿರ್ವಹಿಸಲು 28 ಸೇವಾ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆ ಎಂದು ಮೀಸಲಿಡಲಾಗಿದೆ ಎಂದರು. ಇದರಲ್ಲಿ ಸಶಸ್ತ್ರ ಪಡೆಗಳ ಮತ್ತು ತಮ್ಮ ಸಾಮರ್ಥ್ಯ ಮೀರಿದ ತರುವಾಯ ರಾಜ್ಯಗಳ ಆರೋಗ್ಯ ಪ್ರಾಧಿಕಾರಗಳಿಂದ ವರ್ಗಾವಣೆಗೊಂಡ ನಾಗರಿಕ ರೋಗಿಗಳೂ ಸೇರಲಿದ್ದಾರೆ ಎಂದರು. ಈವರೆಗೆ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರಿ ಐದು ಆಸ್ಪತ್ರೆಗಳಿದ್ದು, ಅವು ಕೋವಿಡ್ ಪರೀಕ್ಷೆ ನಡೆಸಬಲ್ಲವುಗಳಾಗಿವೆ. ಇವುಗಳಲ್ಲಿ ಸೇನಾ ಆಸ್ಪತ್ರೆ ಸಂಶೋಧನೆ ಮತ್ತು ರೆಫರಲ್, ದೆಹಲಿ; ಕಮಾಂಡ್ ಆಸ್ಪತ್ರೆ, ವಾಯುಪಡೆ, ಬೆಂಗಳೂರು; ಮತ್ತು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು, ಪುಣೆ; ಕಮಾಂಡ್ ಆಸ್ಪತ್ರೆ (ಸೆಂಟ್ರಲ್ ಕಮಾಂಡ್) ಲಖನೌ; ಕಮಾಂಡ್ ಆಸ್ಪತ್ರೆ (ನಾರ್ತರನ್ ಕಮಾಂಡ್) ಉದಾಮ್ಪುರ್; ಸೇರಿವೆ ಎಂದೂ ಹೇಳಿದರು. ಪರೀಕ್ಷಾ ಸಂಪನ್ಮೂಲದೊಂದಿಗೆ ಇನ್ನೂ ಆರು ಆಸ್ಪತ್ರೆಗಳನ್ನು ಶೀಘ್ರವೇ ಸಜ್ಜುಗೊಳಿಸಲಾಗುತ್ತಿದೆ ಎಂದರು.
ಈವರೆಗೆ ಸೇವಾನಿರತ ಒಬ್ಬನೇ ಒಬ್ಬ ಸೈನಿಕರಿಗೆ ಕೋವಿಡ್ -19 ದೃಢಪಟ್ಟಿದೆ ಎಂದು ಲೆಫ್ಟಿನೆಂಟ್ ಜನರಲ್ ಬ್ಯಾನರ್ಜಿ ತಿಳಿಸಿದರು. ರಜೆಯ ಮೇಲಿದ್ದ ಅವರು ಲೆಹ್ ನಲ್ಲಿ ತಮ್ಮ ಮನೆಯಲ್ಲಿದ್ದು, ಇತ್ತೀಚೆಗಷ್ಟೇ ಇರಾನ್ ನಿಂದ ವಾಪಸಾಗಿದ್ದ ಮತ್ತು ಕೋವಿಡ್ ನಿಂದ ಬಳಲುತ್ತಿದ್ದ ತಮ್ಮ ತಂದೆಯನ್ನು ನೋಡಿಕೊಳ್ಳುತ್ತಿದ್ದರು ಎಂದರು. ಸೈನಿಕರು ಈಗ ಚೇತರಿಸಿಕೊಂಡಿದ್ದಾರೆ. ಪೆರಿಫರಲ್ ಆಸ್ಪತ್ರೆಯ ಪ್ರತ್ಯೇಕೀಕರಣದ ವಾರ್ಡ್ ಗಳನ್ನು  ಗಡಿ ನಿಯಂತ್ರಣ ರೇಖೆ ಮತ್ತು ವಾಸ್ತವ ಗಡಿ ರೇಖೆಯಲ್ಲಿ ಸಕ್ರಿಯಗೊಳಿಸಲಾಗಿದೆ ಎಂದೂ ಡಿಜಿ ಎಎಫ್ಎಂಎಸ್ ತಿಳಿಸಿದರು.   "ಸೇವಾನಿರತ ಸಿಬ್ಬಂದಿಗೆ ವ್ಯಾಪಕ ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನಗಳನ್ನು ನಡೆಸಲಾಗುತ್ತಿವೆ. ರಜೆಯಲ್ಲಿರುವವರ ರಜೆ ವಿಸ್ತರಣೆ ಮತ್ತು ರಜೆಯನ್ನು ಕನಿಷ್ಠಕ್ಕೆ ಮೊಟಕುಗೊಳಿಸುವುದನ್ನು ಜಾರಿ ಮಾಡಲಾಗಿದೆ. ಈಗಾಗಲೇ ವಿವಿಧ ರಾಜ್ಯಗಳಿಂದ ರಜೆಯಿಂದ ಹಿಂತಿರುಗಿರುವ ಸೈನಿಕರನ್ನು ನೋಡಿಕೊಳ್ಳಲು ಪ್ರತ್ಯೇಕ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ” ಎಂದು ಅವರು ತಿಳಿಸಿದರು.
ಸಾಮರ್ಥ್ಯವರ್ಧನೆ ಕ್ರಮ ಮತ್ತು ಸ್ವಂತ ಪರೀಕ್ಷಾ , ಚಿಕಿತ್ಸೆ ಮತ್ತು ಪ್ರತ್ಯೇಕೀಕರಣ ಸಾಮರ್ಥ್ಯ ರೂಪಿಸಿಕೊಳ್ಳಲು ನೆರವಾಗಲು ಮಾಲ್ಡೀವ್ಸ್ ಗೆ ಸೇನಾ ವೈದ್ಯ ಪಡೆಯ 14 ಸದಸ್ಯರ ವೈದ್ಯಾಧಿಕಾರಿಗಳು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ತಂಡವನ್ನು ಕಳುಹಿಸಲಾಗಿದೆ. ಈ ತಂಡ ಮಾಲ್ಡೀವ್ಸ್ ನಲ್ಲಿ 10 ದಿನಗಳ ಕಾಲ ಇದ್ದು, 2020ರ ಮಾರ್ಚ್ 23ರಂದು ದೇಶಕ್ಕೆ ಮರಳಿದೆ ಎಂದು ಲೆಫ್ಟಿನೆಂಟ್ ಜನರಲ್ ಬ್ಯಾನರ್ಜಿ ತಿಳಿಸಿದರು. ಮಾಲ್ಡೀವ್ಸ್ ಜೊತೆಗೆ ನೇಪಾಳಕ್ಕೂ ಸಹ ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ನೆರವಾಗಲು ಎಎಫ್ಎಂಎಸ್ ತ್ವರಿತ ಸ್ಪಂದನಾ ಪಡೆ ಕಳುಹಿಸಲು ಸಜ್ಜಾಗಿದೆ ಎಂದರು.   ಇತರ ರಾಷ್ಟ್ರಗಳಿಗೂ ಯಾವಾಗ ಅಗತ್ಯ ಇದೆಯೋ ಆಗ ಇತರ ನೆರವು ಒದಗಿಸಲಾಗುವುದು ಎಂದೂ ಅವರು ಹೇಳಿದರು.
ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ಲಭ್ಯತೆಯ ಬಗ್ಗೆ ಮಾತನಾಡಿದ ಡಿಜಿ ಎಎಫ್‌ಎಂಎಸ್, ಇದು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಒಂದು ಸವಾಲಾಗಿದೆ, ಪಿಪಿಇ ಯ ತರ್ಕಬದ್ಧ ಬಳಕೆಗೆ ಸಲಹೆಯನ್ನು ಸೇನಾ ಪಡೆಗಳಿಗೆ ನೀಡಲಾಗಿದೆ ಎಂದು ಹೇಳಿದರು. “ಎಎಫ್‌ಎಂಎಸ್ ಪ್ರಸ್ತುತ ತನ್ನ ಆಸ್ಪತ್ರೆಗಳಲ್ಲಿ ಬಳಸಲು ಸಾಕಷ್ಟು ಪಿಪಿಇಗಳೊಂದಿಗೆ ಸಜ್ಜಾಗಿದೆ. ಮುಂಬರುವ ವಾರ ಮತ್ತು ತಿಂಗಳುಗಳಲ್ಲಿ ಎದುರಾಗಬಹುದಾದ ಬಿಕ್ಕಟ್ಟನ್ನು ಎದುರಿಸಲು ಹೆಚ್ಚುವರಿ ಸಂಗ್ರಹಣೆಗೆ ಯೋಜಿಸಲಾಗುತ್ತಿರುವುದರಿಂದ ಸಶಸ್ತ್ರ ಪಡೆಗಳಿಗೆ ನಾಗರಿಕ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ಸಂಪನ್ಮೂಲಗಳನ್ನು ಹೆಚ್ಚಿಸಲು ನಿರ್ದೇಶಿಸಲಾಗಿದೆ, ”ಎಂದು ಅವರು ಹೇಳಿದರು.
ಯಾವುದೇ ಸಂದರ್ಭದಲ್ಲಿ ಅಗತ್ಯಬಿದ್ದರೆ ರೈಲು ಬೋಗಿಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಲು ಎಎಫ್‌.ಎಂಎಸ್.ಗೆ ಸೂಚಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಕೋರ್ಸ್‌ಗಳು ಮತ್ತು ತರಬೇತಿಯನ್ನು ರದ್ದುಪಡಿಸುವುದು, ಮಾಸ್ಕ್ ಗಳ ಬಳಕೆ, ಕಾರ್ಯ ಸ್ಥಳದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಮತ್ತು ಕೋವಿಡ್ ಕಣ್ಗಾವಲು ಮತ್ತು ಸಂಪರ್ಕ ಪತ್ತೆ ಹಚ್ಚುವಿಕೆಯ ಕುರಿತು ಮಾರ್ಗಸೂಚಿಗಳ ಕುರಿತಂತೆ ಎಎಫ್‌.ಎಂಎಸ್ ಹಲವು ಸಲಹೆಗಳನ್ನು ನೀಡಿದೆ ಎಂದೂ ತಿಳಿಸಿದರು.

***



(Release ID: 1608735) Visitor Counter : 109