ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಎಂಎನ್‌ಆರ್‌ಇ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯಿಂದ ಇ-ಆಫೀಸ್ ಪ್ಲಾಟ್‌ಫಾರ್ಮ್ ಮೂಲಕ ಕೆಲಸ
ಪ್ರಕಟಣಾ ದಿನಾಂಕ:
27 MAR 2020 4:38PM by PIB Bengaluru
ಎಂಎನ್‌ಆರ್‌ಇ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯಿಂದ ಇ-ಆಫೀಸ್ ಪ್ಲಾಟ್‌ಫಾರ್ಮ್ ಮೂಲಕ ಕೆಲಸ
ಶ್ರೀ ಆರ್ ಕೆ ಸಿಂಗ್ ಅವರಿಂದ ವಿಡಿಯೋ ಕಾನ್ಫರೆನ್ಸ್ ಸಭೆಗಳ ಮೂಲಕ ಕೆಲಸಗಳ ಪರಿಶೀಲನೆ
ಎನ್‌ಟಿಪಿಸಿ ಮತ್ತು ಎಸ್‌ಇಸಿಐ ಎರಡು ನವೀಕರಿಸಬಹುದಾದ ಇಂಧನ (ಆರ್‌ಇ) ಯೋಜನೆಗಳ ಪಾರ್ಕ್‌ಗಳನ್ನು ಸ್ಥಾಪಿಸಲು ರಾಜಸ್ಥಾನ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿವೆ
ಮೊಧೇರಾವನ್ನು ಸೌರೀಶಕ್ತೀಕರಣಗೊಳಿಸುವ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ದ ಸಿಬ್ಬಂದಿಗಳು ಮನೆಯಿಂದ ಇ-ಆಫೀಸ್ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಫೈಲ್‌ಗಳು ಮತ್ತು ಟಿಪ್ಪಣಿಗಳನ್ನು ಆನ್‌ಲೈನ್‌ನಲ್ಲಿ ಕಳಿಸುವುದರ ಜೊತೆಗೆ, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲನಾ ಸಭೆಗಳು ಸಹ ನಡೆಯುತ್ತಿವೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರು ನಿನ್ನೆ ಮತ್ತು ಇಂದು ಎಲ್ಲ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಿದರು, ಇದರಲ್ಲಿ ಹೂಡಿಕೆ ಮಾಡಲು ಅನುಕೂಲವಾಗುವಂತೆ ಶೇಖರಣಾ ವ್ಯವಸ್ಥೆ ಸೇರಿದಂತೆ ನವೀಕರಿಸಬಹುದಾದ ಇಂಧನ (ಸೌರ, ಗಾಳಿ, ಹೈಬ್ರಿಡ್) ಸಂಗ್ರಹಕ್ಕಾಗಿ ಎಂಎನ್‌ಆರ್‌ಇ ಏಕರೂಪದ ಸಂಯೋಜಿತ ಮಾರ್ಗಸೂಚಿಗಳನ್ನು ಹೊರಡಿಸಲು ನಿರ್ಧರಿಸಲಾಯಿತು, ಹಾಗು ಹೊಸ ಬಿಡ್‌ಗಳನ್ನು ತರುವುದನ್ನು ಮುಂದುವರೆಸುತ್ತದೆ ಇದರಿಂದ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಯೋಜಿಸಬಹುದು.
ಈ ಸಭೆಗಳಲ್ಲಿ ಎಸ್‌ಇಸಿಐ ಮತ್ತು ಎನ್‌ಟಿಪಿಸಿ ತಲಾ 5000 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಆರ್‌ಇ ಪಾರ್ಕ್ ಸ್ಥಾಪಿಸಲು ರಾಜಸ್ಥಾನ ಸರ್ಕಾರದೊಂದಿಗೆ ತಕ್ಷಣವೇ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ನಿರ್ಧರಿಸಲಾಯಿತು. ಈ ವ್ಯವಸ್ಥೆಯು ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಪ್ರಸ್ತಾಪಿಸಲಾದ 25000 ಮೆಗಾವ್ಯಾಟ್ ಅಲ್ಟ್ರಾ ಮೆಗಾ ಆರ್‌ಇ ಪಾರ್ಕ್‌ನ ಮೊದಲ ಹಂತವನ್ನು ಸೂಚಿಸುತ್ತದೆ. ಇದಲ್ಲದೆ, ಗುಜರಾತ್‌ನ ಖವಾಡಾದಲ್ಲಿ 25000 ಮೆಗಾವ್ಯಾಟ್ ಆರ್‌ಇ ಪಾರ್ಕ್ ಸ್ಥಾಪಿಸುವ ರೂಪುರೇಷೆಗಳನ್ನು ಸಹ ರಕ್ಷಣಾ ಸಚಿವಾಲಯ ಮತ್ತು ಗುಜರಾತ್ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲಾಯಿತು. ಐ ಆರ್ ಇ ಡಿ ಎ (ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ) ನ ಬಂಡವಾಳೀಕರಣದ ವಿವಿಧ ಆಯ್ಕೆಗಳ ಬಗ್ಗೆಯೂ ಚರ್ಚಿಸಲಾಯಿತು.
ಗುಜರಾತಿನ ಮೊಧೇರಾದ ಸೂರ್ಯ-ದೇವಾಲಯ ಪಟ್ಟಣವನ್ನು ಸಂಪೂರ್ಣ ಸೌರಶಕ್ತೀಕರಣಕ್ಕಾಗಿ ಎಂಎನ್‌ಆರ್‌ಇ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿತು. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸೂರ್ಯ-ದೇವಾಲಯ ಪಟ್ಟಣವಾದ ಮೊಧೇರಾದ ಸೌರಶಕ್ತೀಕರಣವನ್ನಾಗಿಸುವ ಪ್ರಧಾನ ಮಂತ್ರಿಯವರ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಇದನ್ನು ಪ್ರಾರಂಭಿಸಿದೆ. ಮೊಧೇರಾದಲ್ಲಿ 6 ಮೆಗಾವ್ಯಾಟ್ ಸೌರ ಪಿವಿ ವಿದ್ಯುತ್ ಸ್ಥಾವರ, 15 ಮೆಗಾವ್ಯಾಟ್ ಬ್ಯಾಟರಿ ಸಂಗ್ರಹ, ಮೇಲ್ಛಾವಣಿಯ ಸೌರ ಪಿವಿ ವ್ಯವಸ್ಥೆಗಳು, ಸ್ಮಾರ್ಟ್ ಮೀಟರ್, ಸೌರ ಇವಿ ಚಾರ್ಜಿಂಗ್ ಕೇಂದ್ರಗಳು ಮುಂತಾದ ನವೀಕರಿಸಬಹುದಾದ ಇಂಧನದ ಅನುಸ್ಥಾಪನೆಗಳನ್ನು ಸ್ಥಾಪಿಸಲು ಈ ಯೋಜನೆಯು ಯೋಜಿಸಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (ಎಂಎನ್‌ಆರ್‌ಇ) ಮೂಲಕ ಭಾರತ ಸರ್ಕಾರದಿಂದ 50% ಕೇಂದ್ರ ಹಣಕಾಸಿನ ನೆರವು (ಗರಿಷ್ಠ 32.50 ಕೋಟಿ ರೂ.) ಮತ್ತು ಉಳಿದ 50% ಗುಜರಾತ್ ಸರ್ಕಾರದಿಂದ ಬರುವುದು.
ಈ ಯೋಜನೆಯು ಮೊಧೇರಾದ ಎಲ್ಲಾ ಮನೆಗಳ ಮತ್ತು ಕೃಷಿ ವಿದ್ಯುತ್ ಅಗತ್ಯಗಳನ್ನು ಸೌರ ಶಕ್ತಿಯೊಂದಿಗೆ ಪೂರೈಸುತ್ತದೆ, ಆ ಮೂಲಕ ಸೌರಶಕ್ತಿಯ ಮೇಲೆ ಸಂಪೂರ್ಣವಾಗಿ ನಡೆಯುವ ಹಳ್ಳಿ / ಪಟ್ಟಣಕ್ಕೆ ಪ್ರಾಯೋಗಿಕ ಪ್ರದರ್ಶನ ಯೋಜನೆಯನ್ನು ಸ್ಥಾಪಿಸುತ್ತದೆ.
ಸರ್ಕಾರವು ಈಗಾಗಲೇ ಗುಜರಾತ್ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಜಿಪಿಸಿಎಲ್) ಮೂಲಕ ಪ್ರಸ್ತಾವಿತ ಸ್ಥಾಪನೆಗಳಿಗಾಗಿ ಟೆಂಡರ್ ಪ್ರಾರಂಭಿಸಿದೆ ಮತ್ತು ಈ ಯೋಜನೆಯನ್ನು 2020 ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಈ ಯೋಜನೆಯ ಅನುಷ್ಠಾನವನ್ನು ಗುಜರಾತ್ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಜಿಪಿಸಿಎಲ್) ಮಾಡಲಿದೆ.
***
(ಪ್ರಕಟಣೆ ಐ.ಡಿ.: 1608662)
ವಿಸಿಟರ್ ಕೌಂಟರ್ : 159