ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಲ್ಡೀವ್ಸ್‌ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

Posted On: 04 DEC 2019 5:34PM by PIB Bengaluru

ಪ್ರಧಾನಿ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಲ್ಡೀವ್ಸ್‌ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ 

ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ಜಂಟಿಯಾಗಿ ಮಾಲ್ಡೀವ್ಸ್‌ನಲ್ಲಿನ ಹಲವಾರು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲಿ ತಯಾರಾದ ಕರಾವಳಿ ಕಾವಲು ಪಡೆಯ ಹಡಗು ಕಾಮಿಯಾಬ್ ಅನ್ನು ಮಾಲ್ಡೀವ್ಸ್ ಗೆ ಉಡುಗೊರೆಯಾಗಿ ನೀಡುವುದು, ರುಪೇ ಕಾರ್ಡ್ ಬಿಡುಗಡೆ, ಮಾಲೆಯಲ್ಲಿ ಎಲ್ಇಡಿ ದೀಪಗಳ ಅಳವಡಿಕೆ, ಸಮುದಾಯ ಅಭಿವೃದ್ಧಿ ಯೋಜನೆಗಳು, ಮೀನು ಸಂಸ್ಕರಣಾ ಘಟಕಗಳ ಆರಂಭ ಇವುಗಳಲ್ಲಿ ಸೇರಿವೆ.
ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಸೋಲಿಹ್ ಅವರನ್ನು ಅಭಿನಂದಿಸಿದ ಪ್ರಧಾನಿಯವರು, ಇದು ಭಾರತ - ಮಾಲ್ಡೀವ್ಸ್ ಸಂಬಂಧದಲ್ಲಿ ಮಹತ್ವದ ವರ್ಷವಾಗಿದೆ ಎಂದು ಹೇಳಿದರು.
ಭಾರತದ, ನೆರೆಹೊರೆಯವರು ಮೊದಲು ನೀತಿ ಮತ್ತು ಮಾಲ್ಡೀವ್ಸ್ ನ ಭಾರತವೇ ಮೊದಲು ನೀತಿ ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಿದೆ ಎಂದು ಪ್ರಧಾನಿ ಹೇಳಿದರು.
ತ್ವರಿತ ಇಂಟರ್‌ಸೆಪ್ಟರ್ ಕರಾವಳಿ ಕಾವಲು ಪಡೆಯ ಹಡಗು ಕಾಮಿಯಾಬ್ ಕುರಿತು ಮಾತನಾಡಿದ ಪ್ರಧಾನಿಯವರು, ಇದು ಮಾಲ್ಡೀವ್ಸ್‌ನ ಕಡಲ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಸಾಗರ ಆರ್ಥಿಕತೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದರು.
ದ್ವೀಪ ಸಮುದಾಯದ ಜನ ಜೀವನವನ್ನು ಬೆಂಬಲಿಸುವ ತೀವ್ರ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆಗಳ ಸಹಭಾಗಿತ್ವದ ಬಗ್ಗೆ ಪ್ರಧಾನಿಯವರು ಸಂತಸ ವ್ಯಕ್ತಪಡಿಸಿದರು.
ಜನರ ನಡುವಿನ ಸಂಪರ್ಕವು ಎರಡೂ ದೇಶಗಳ ನಡುವಿನ ನಿಕಟ ಸಂಬಂಧದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದ ಪ್ರಧಾನಿಯವರು, ಈ ಹಿನ್ನೆಲೆಯಲ್ಲಿ, ಮಾಲ್ಡೀವ್ಸ್‌ ಭೇಟಿ ನೀಡುವ ಭಾರತದ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಿಂದ ಮೂರು ನೇರ ವಿಮಾನಗಳು ಈ ವಾರದಲ್ಲಿ ಪ್ರಾರಂಭವಾಗಿವೆ ಎಂದು ಹೇಳಿದರು. ರುಪೇ ಪಾವತಿ ವ್ಯವಸ್ಥೆಯ ಆರಂಭದಿಂದ ಭಾರತೀಯರ ಮಾಲ್ಡೀವ್ಸ್‌ ಪ್ರವಾಸ ಮತ್ತಷ್ಟು ಸುಲಭವಾಗುತ್ತದೆ ಎಂದು ಅವರು ಹೇಳಿದರು.
ಹುಲ್ ಹುಲ್ಮಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, 34 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಯ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಪ್ರಧಾನಿ ಹೇಳಿದರು.
ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ಮಾಲ್ಡೀವ್ಸ್ ಜೊತೆ ಸಹಭಾಗಿತ್ವವನ್ನು ಮುಂದುವರೆಸುವ ತಮ್ಮ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಗಾಗಿ ಎರಡೂ ದೇಶಗಳು ಸಹಕಾರವನ್ನು ಹೆಚ್ಚಿಸುತ್ತವೆ ಎಂದು ಪ್ರಧಾನಿಯವರು  ಹೇಳಿದರು.



(Release ID: 1595025) Visitor Counter : 189