ಪ್ರಧಾನ ಮಂತ್ರಿಯವರ ಕಛೇರಿ

ಗಾಂಧಿ@150 ಸ್ಮರಣೆಗೆ ಸಾಂಸ್ಕೃತಿಕ ವೀಡಿಯೊಗಳನ್ನು ಬಿಡುಗಡೆ ಮಾಡಿದ ಪ್ರಧಾನಿ

Posted On: 19 OCT 2019 8:25PM by PIB Bengaluru

ಗಾಂಧಿ@150 ಸ್ಮರಣೆಗೆ ಸಾಂಸ್ಕೃತಿಕ ವೀಡಿಯೊಗಳನ್ನು ಬಿಡುಗಡೆ ಮಾಡಿದ ಪ್ರಧಾನಿ

ಚಲನಚಿತ್ರ ಮತ್ತು ಮನರಂಜನಾ ಉದ್ಯಮದ ಪ್ರತಿನಿಧಿಗಳೊಂದಿಗೆ ಪ್ರಧಾನಿಯವರ ಸಂವಹನ

ರಾಷ್ಟ್ರ ನಿರ್ಮಾಣದತ್ತ ಕೆಲಸ ಮಾಡುವಂತೆ ಚಲನಚಿತ್ರ ಕ್ಷೇತ್ರಕ್ಕೆ ಪ್ರಧಾನಿ ಕರೆ

 

ನವದೆಹಲಿಯ 7, ಲೋಕ ಕಲ್ಯಾಣ್ ಮಾರ್ಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಸಾಂಸ್ಕೃತಿಕ ವಿಡಿಯೋಗಳನ್ನು ಬಿಡುಗಡೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಅಮೀರ್ ಖಾನ್, ಶಾರುಖ್ ಖಾನ್, ರಾಜ್ಕುಮಾರ್ ಹಿರಾನಿ, ಕಂಗನಾ ರನೌತ್, ಆನಂದ್ ಎಲ್ ರಾಯ್, ಎಸ್ಪಿ ಬಾಲಸುಬ್ರಹ್ಮಣ್ಯಂ, ಸೋನಮ್ ಕಪೂರ್, ಜಾಕಿ ಶ್ರಾಫ್, ಸೋನು ನಿಗಮ್, ಏಕ್ತಾ ಕಪೂರ್ ಸೇರಿದಂತೆ ಭಾರತೀಯ ಚಲನಚಿತ್ರ ಮತ್ತು ಮನರಂಜನಾ ಉದ್ಯಮದ ಸದಸ್ಯರು ಹಾಗೂ ತಾರಕ್ ಮೆಹ್ತಾ ಗ್ರೂಪ್, ಈಟಿವಿ ಗ್ರೂಪ್ ನ ಸದಸ್ಯರು ಭಾಗವಹಿಸಿದ್ದರು.

ಸಂವಾದ ಅಧಿವೇಶನದಲ್ಲಿ, ತಮ್ಮ ವೈಯಕ್ತಿಕ ಕೋರಿಕೆಯ ಮೇರೆಗೆ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲು ತಮ್ಮ ಸತತ ಕೆಲಸಗಳ ನಡುವೆಯೂ ಸಮಯ ಮೀಸಲಿಟ್ಟ ಸೃಜನಶೀಲ ಮುಖ್ಯಸ್ಥರು ಮತ್ತು ಕೊಡುಗೆದಾರರಿಗೆ ಪ್ರಧಾನಿಯವರು ಧನ್ಯವಾದ ಅರ್ಪಿಸಿದರು.

ಸಾಮಾನ್ಯ ನಾಗರಿಕರನ್ನು ಪ್ರೇರೇಪಿಸಬಲ್ಲ ಮನರಂಜನೆಯ, ಸ್ಪೂರ್ತಿದಾಯಕ ಸೃಜನಶೀಲ ಸೃಷ್ಟಿಗೆ ಚಲನಚಿತ್ರ ಮತ್ತು ಮನರಂಜನಾ ಉದ್ಯಮವು ತನ್ನ ಶಕ್ತಿಯನ್ನು ಬಳಸಿಕೊಳ್ಳಬೇಕೆಂದು ಪ್ರಧಾನಿ ಒತ್ತಾಯಿಸಿದರು. ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರಲು ಉದ್ಯಮಕ್ಕಿರುವ ಅಪಾರ ಸಾಮರ್ಥ್ಯವನ್ನು ಅವರು ನೆನಪಿಸಿದರು.

ಗಾಂಧಿ, ಜಗತ್ತನ್ನು ಸಂಪರ್ಕಿಸುವ ಚಿಂತನೆ

ಪ್ರಸ್ತುತದಲ್ಲಿ ಮಹಾತ್ಮ ಗಾಂಧಿಯವರ ಪ್ರಭಾವವನ್ನು ಒತ್ತಿ ಹೇಳಿದ ಪ್ರಧಾನಿಯವರು, ಒಂದು ಆಲೋಚನೆ ಇದ್ದರೆ, ಒಬ್ಬ ವ್ಯಕ್ತಿ, ಪ್ರಪಂಚದಾದ್ಯಂತದ ಜನರೊಂದಿಗೆ ಸಂಪರ್ಕವನ್ನು ಸಾಧಿಸಬಲ್ಲನು ಎಂದು ತೋರಿಸಿಕೊಟ್ಟವರು ಗಾಂಧೀಜಿಯವರು ಎಂದು ಹೇಳಿದರು.

ಅವರು ಪ್ರಸ್ತಾಪಿಸಿದ ಐನ್ಸ್ಟೈನ್ ಸವಾಲನ್ನು ನೆನಪಿಸಿಕೊಂಡ ಪ್ರಧಾನಿಯವರು, ಚಲನಚಿತ್ರ ಉದ್ಯಮವು ಗಾಂಧಿವಾದಿ ಚಿಂತನೆಯನ್ನು ಮುಂಚೂಣಿಗೆ ತರಲು ತಂತ್ರಜ್ಞಾನವನ್ನು ಬಳಸಬೇಕೆಂದು ಒತ್ತಾಯಿಸಿದರು.

ಭಾರತೀಯ ಮನರಂಜನಾ ಉದ್ಯಮದ ಪರಿಣಾಮ ಮತ್ತು ಸಾಮರ್ಥ್ಯ

ಚೀನಾದಲ್ಲಿ ದಂಗಲ್ ನಂತಹ ಭಾರತೀಯ ಚಲನಚಿತ್ರಗಳ ಜನಪ್ರಿಯತೆ ಕುರಿತು ಚೀನಾ ಅಧ್ಯಕ್ಷರ ಪ್ರಸ್ತಾಪದ ಬಗ್ಗೆ ಮಾಮಲ್ಲಾಪುರದಲ್ಲಿ ಚೀನಾ ಅಧ್ಯಕ್ಷರೊಂದಿಗಿನ ತಮ್ಮ ಸಂವಾದವನ್ನು ನೆನಪಿಸಿಕೊಂಡ ಪ್ರಧಾನಿಯವರು, ಆಗ್ನೇಯ ಏಷ್ಯಾದಲ್ಲಿ ರಾಮಾಯಣದ ಜನಪ್ರಿಯತೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ತಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಪ್ರಧಾನಿಯವತು  ಚಲನಚಿತ್ರ ಉದ್ಯಮಕ್ಕೆ ಕರೆಕೊಟ್ಟರು.

ಭವಿಷ್ಯದ ಹಾದಿ

ಭಾರತವು ತನ್ನ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು 2022 ರಲ್ಲಿ ಆಚರಿಸಲಿದೆ. ಈ ನಿಟ್ಟಿನಲ್ಲಿ, 1857 ರಿಂದ 1947 ರವರೆಗಿನ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸ್ಪೂರ್ತಿದಾಯಕ ಕಥೆಗಳನ್ನು ಮತ್ತು 1947 ರಿಂದ 2022 ರವರೆಗಿನ ಭಾರತದ ಬೆಳವಣಿಗೆಯ ಕಥೆಯನ್ನು ಪ್ರದರ್ಶಿಸುವಂತೆ ಅವರು ಸಭೆಯನ್ನು ಕೋರಿದರು. ಭಾರತದಲ್ಲಿ ವಾರ್ಷಿಕ ಅಂತರರಾಷ್ಟ್ರೀಯ ಮನರಂಜನಾ ಶೃಂಗಸಭೆಯನ್ನು ಆಯೋಜಿಸುವ  ಯೋಜನೆಯ ಬಗ್ಗೆಯೂ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು.

ಸಿನಿಮಾ ನಟರಿಂದ ಪ್ರಧಾನಿಯವರ ಶ್ಲಾಘನೆ

ಮಹಾತ್ಮ ಗಾಂಧಿಯವರ ಸಂದೇಶವನ್ನು ಜಗತ್ತಿಗೆ ಪ್ರಸಾರ ಮಾಡುವ ಉದ್ದೇಶಕ್ಕೆ ಕೊಡುಗೆ ನೀಡುವ ಆಲೋಚನೆಯನ್ನು ಹುಟ್ಟುಹಾಕಿದ್ದಕ್ಕಾಗಿ ಪ್ರಧಾನಮಂತ್ರಿಯವರೊಂದಿಗಿನ ಸಂವಾದದಲ್ಲಿ ನಟ ಅಮೀರ್ ಖಾನ್ ಅವರು ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು.

ಖ್ಯಾತ ಚಲನಚಿತ್ರ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರು ಇಂದು ಬಿಡುಗಡೆಯಾದ ವೀಡಿಯೊವು ‘ಚೇಂಜ್ ವಿಥಿನ್’ ಎಂಬ ವಿಷಯದೊಂದಿಗೆ ಹೊರಬರುತ್ತಿರುವ ಹಲವಿ ವಿಡಿಯೋಗಳಲ್ಲೊಂದು  ಎಂದು ತಿಳಿಸಿದರು. ನಿರಂತರ ಸ್ಫೂರ್ತಿ, ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಅವರು ಪ್ರಧಾನಿಯವರಿಗೆ ಧನ್ಯವಾದ ತಿಳಿಸಿದರು.

ಚಲನಚಿತ್ರ ಉದ್ಯಮವು ಒಗ್ಗೂಡಿ ಒಂದು ಉದ್ದೇಶಕ್ಕಾಗಿ ಕೆಲಸ ಮಾಡಲು ವೇದಿಕೆಯನ್ನು ರಚಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ ಶಾರುಖ್ ಖಾನ್, ಇಂತಹ ಉಪಕ್ರಮಗಳು ಗಾಂಧಿ 2.0 ಯನ್ನು ಇಡೀ ಜಗತ್ತಿಗೆ ಪ್ರಸ್ತುತಪಡಿಸುವ ಮೂಲಕ ಮಹಾತ್ಮ ಗಾಂಧಿಯವರ ಬೋಧನೆಗಳನ್ನು ಪುನರ್ ಪರಿಚಯಿಸುತ್ತದೆ ಎಂದು ಹೇಳಿದರು.

ಖ್ಯಾತ ಚಲನಚಿತ್ರ ತಯಾರಕ ಆನಂದ್ ಎಲ್ ರಾಯ್ ಅವರು ಮನರಂಜನಾ ಉದ್ಯಮವು ರಾಷ್ಟ್ರ ನಿರ್ಮಾಣದತ್ತ ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳುವಂತೆ ಮಾಡಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು.

ಮನರಂಜನಾ ಉದ್ಯಮದ ಒಟ್ಟಾರೆ ಅಭಿವೃದ್ಧಿಗೆ ತಮ್ಮ ಸರ್ಕಾರದಿಂದ ಎಲ್ಲ ರೀತಿಯ ಬೆಂಬಲ ದೊರೆಯುತ್ತದೆ ಎಂದು ಪ್ರಧಾನಿ ಚಲನಚಿತ್ರ ಉದ್ಯಮಕ್ಕೆ ಭರವಸೆ ನೀಡಿದರು.

ಮಹಾತ್ಮ ಗಾಂಧಿಯವರ 150 ನೇ ಜಯಂತಿಯ ವಿಷಯವನ್ನು ಕೇಂದ್ರೀಕರಿಸಿದ ಈ ವಿಡಿಯೋಗಳನ್ನು ರಾಜ್ಕುಮಾರ್ ಹಿರಾನಿ, ಈಟಿವಿ ಗುಂಪು, ತಾರಕ್ ಮೆಹ್ತಾ ಗುಂಪು ಮತ್ತು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ನಿರ್ಮಿಸಿದೆ.



(Release ID: 1588795) Visitor Counter : 64