ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಎಂಟು ದೂರದರ್ಶನ ಸ್ಟುಡಿಯೋಗಳಲ್ಲಿ ವೀಡಿಯೋ ಗೋಡೆ ಮತ್ತು ದಿಲ್ಲಿ ದೂರದರ್ಶನ ಕೇಂದ್ರದಲ್ಲಿ ಭೂ ಕೇಂದ್ರಿತ ನಿಲಯ ಉದ್ಘಾಟನೆ.

Posted On: 25 JUL 2019 1:53PM by PIB Bengaluru

ಎಂಟು ದೂರದರ್ಶನ ಸ್ಟುಡಿಯೋಗಳಲ್ಲಿ ವೀಡಿಯೋ ಗೋಡೆ ಮತ್ತು ದಿಲ್ಲಿ ದೂರದರ್ಶನ ಕೇಂದ್ರದಲ್ಲಿ ಭೂ ಕೇಂದ್ರಿತ ನಿಲಯ ಉದ್ಘಾಟನೆ.

ದೂರದರ್ಶನ ಕಾರ್ಯಕ್ರಮಗಳ ಗುಣಮಟ್ಟ ಇನ್ನಷ್ಟು ಹೆಚ್ಚಿಸಲು ಸದ್ಯದಲ್ಲಿಯೇ ಸೃಜನಾತ್ಮಕ ಮುಖ್ಯಸ್ಥರ ನೇಮಕ : ಪ್ರಕಾಶ್ ಜಾವಡೇಕರ್

ಕೇಂದ್ರ ಸಚಿವರಾದ ಶ್ರೀ ಪ್ರಕಾಶ್ ಜಾವಡೇಕರ್ ಅವರು ದಿಲ್ಲಿಯಲ್ಲಿ ಇಂದು ಎಲ್ಲಾ ಎಂಟು ದೂರದರ್ಶನ ಸ್ಟುಡಿಯೋಗಳಲ್ಲಿ ವೀಡಿಯೋ ಗೋಡೆಗಳನ್ನು ಉದ್ಘಾಟಿಸಿದರಲ್ಲದೆ ಅದರ ಜೊತೆಗೆ ದೂರದರ್ಶನ ಕೇಂದ್ರದಲ್ಲಿ ಭೂ ನಿಲಯವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಕಾಶ್ ಜಾವಡೇಕರ್ ವೀಕ್ಷಕರ ಅನುಭವವನ್ನು ಹೆಚ್ಚಿಸುವ ವೀಡಿಯೋ ಗೋಡೆಗಳ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೂರು ವರ್ಷಗಳ ಕ್ರಿಯಾ ಯೋಜನೆಯ ಅಡಿಯಲ್ಲಿ ದೂರದರ್ಶನಕ್ಕೆ ಅದರ ಮೂಲಸೌಕರ್ಯವನ್ನು ಆಧುನೀಕರಣಗೊಳಿಸಲು ಬೆಂಬಲವನ್ನು ನೀಡಲಾಗಿದೆ. ಅತ್ಯಾಧುನಿಕ ವೀಡಿಯೋ ಗೋಡೆಗಳ ಸೇರ್ಪಡೆ ಮತ್ತು ತರಂಗಾಂತರ ದಕ್ಷತೆಯ ಉಪಗ್ರಹ ಸಲಕರಣೆ ಸಾರ್ವಜನಿಕ ರಂಗದ ಪ್ರಸಾರ ಸಂಸ್ಥೆಯನ್ನು ಪುನಃಶ್ಚೇತನ ನೀಡುವಲ್ಲಿ ಇಟ್ಟ ಪ್ರಮುಖ ಹೆಜ್ಜೆ ಎಂದರು.

ದೂರದರ್ಶನದ ಪಾತ್ರವನ್ನು ಕೊಂಡಾಡಿದ ಅವರು ಈ ವಾಹಿನಿಯು ವಿಶ್ವಾಸಾರ್ಹತೆಗೆ ಇನ್ನೊಂದು ಹೆಸರಾಗಿ ಗುರುತಿಸಿಕೊಂಡಿದೆ ಎಂದರಲ್ಲದೆ ಡಿ.ಡಿ. ಉಚಿತ ಡಿಶ್ ವ್ಯಾಪ್ತಿಯನ್ನು ಈಗಿರುವ 3.25 ಕೋಟಿ ಮನೆಗಳಿಂದ 5 ಕೋಟಿ ಮನೆಗಳಿಗೆ ವಿಸ್ತರಿಸಬೇಕು ಎಂದೂ ಅಧಿಕಾರಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸೃಜನಾತ್ಮಕ ಮುಖ್ಯಸ್ಥರನ್ನು ಶೀಘ್ರವೇ ನೇಮಿಸಲಾಗುವುದು, ಇದರಿಂದ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡಲು ಉತ್ತೇಜನ ದೊರೆಯಲಿದೆ ಎಂದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖಾರೆ ಸಾರ್ವಜನಿಕ ರಂಗದ ಪ್ರಸಾರ ವ್ಯವಸ್ಥೆಯಾದ ದೂರದರ್ಶನ ಮತ್ತು ಆಕಾಶವಾಣಿಗೆ ಸಮಕಾಲೀನ ಉದ್ಯಮ ಗುಣಮಟ್ಟದಲ್ಲಿ ಸೇವೆಯನ್ನು ನೀಡಲು ಸಮರ್ಥವಾಗುವಂತೆ ಮಾಡಲು , ಭಾರತದ ಎಲ್ಲಾ ಮೂಲೆಗಳನ್ನು ತಲುಪಲು ಸಾಧ್ಯ ಇರುವ ಎಲ್ಲಾ ಬೆಂಬಲವನ್ನು ಒದಗಿಸಲು ಸರಕಾರ ಬದ್ದವಾಗಿದೆ ಎಂದರು.

ಪ್ರಸಾರ ಭಾರತಿ ಅಧ್ಯಕ್ಷ ಶ್ರೀ ಎ. ಸೂರ್ಯ ಪ್ರಕಾಶ ಅವರು ದೂರದರ್ಶನ ಇತ್ತೀಚೆಗೆ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಿರ್ಮಿಸಿ ಪ್ರಸಾರ ಮಾಡುತ್ತಿರುವುದನ್ನು ಪ್ರಸ್ತಾಪಿಸಿದರು, ಸರಕಾರದ ಪ್ರಮುಖ ಕಾರ್ಯಕ್ರಮಗಳನ್ನು , ಯೋಜನೆಗಳನ್ನು ದೂರದರ್ಶನವು ಜನತೆಯ ಮನೆ ಬಾಗಿಲಿಗೆ ಕೊಂಡೊಯ್ದಿದೆ ಎಂದವರು ಪ್ರಶಂಸಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೂರು ವರ್ಷಗಳ ಕ್ರಿಯಾ ಯೋಜನೆ ಅಂಗವಾಗಿ ಅತ್ಯಾಧುನಿಕ ವೀಡಿಯೋ ಗೋಡೆಗಳನ್ನು 10.75 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇವು ಪ್ರಮುಖ ಅಂತಾರಾಷ್ಟ್ರೀಯ ಪ್ರಸಾರ ಸಂಸ್ಥೆಗಳ ಸ್ಟುಡಿಯೋ ಕೇಂದ್ರಗಳಿಗೆ ಸರಿಸಮಾನವಾಗಿವೆ. ವೀಡಿಯೋ ಗೋಡೆಗಳ ನಿರ್ಮಾಣದಿಂದ ಭೌತಿಕ ಸೆಟ್ ಗಳನ್ನು ಹಾಕಲು ತಗಲುವ ಸಮಯದ ಉಳಿತಾಯವಾಗಲಿದೆ. ಹಿನ್ನೆಲೆಯನ್ನು ಕಾರ್ಯಕ್ರಮಗಳ ಅಗತ್ಯಕ್ಕೆ ತಕ್ಕಂತೆ ತ್ವರಿತವಾಗಿ ಬದಲಾಯಿಸಲು ಇದು ಅನುಕೂಲ ಒದಗಿಸಲಿದೆ.

ಭೂ ಕೇಂದ್ರ ನಿಲಯವು ತರಂಗಾಂತರ ದಕ್ಷತೆಯ ತಂತ್ರಜ್ಞಾನವಾಗಿದ್ದು ಒಂದೇ ಬ್ಯಾಂಡ್ ವಿಡ್ತ್ ನಲ್ಲಿ ವಾಹಿನಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲಿದೆ. ಹೊಸ ಭೂ ಕೇಂದ್ರಿತ ನಿಲಯವು ಎಚ್.ಡಿ. ಸಾಮರ್ಥ್ಯದ್ದಾಗಿದ್ದು , ಡಿ.ಡಿ. ಯ ಎಲ್ಲಾ ರಾಷ್ಟ್ರೀಯ ವಾಹಿನಿಗಳನ್ನು ಎಚ್.ಡಿ.ಯಲ್ಲಿ ನೀಡಲಿದೆ. ಇದರಿಂದ ವೆಚ್ಚದಲ್ಲಿ ಇಳಿಕೆಯಾಗಲಿದೆ.

ಭೂ ಕೇಂದ್ರಿತ ನಿಲಯದ ಹಿನ್ನೆಲೆ

ದಿಲ್ಲಿ ಡಿ.ಡಿ.ಕೆ.ಯ 9 ವಾಹಿನಿಗಳನ್ನು ಉಪಗ್ರಹಕ್ಕೆ ಕಳುಹಿಸುವ ಸೌಲಭ್ಯವನ್ನು ಭೂ ಕೇಂದ್ರಿತ ನಿಲಯ ಎಂದು ಕರೆಯುತ್ತಾರೆ. ಇದನ್ನು 2007 ರಲ್ಲಿ ಆರಂಭಿಸಲಾಯಿತು. ಆ ದಿನಗಳಲ್ಲಿ ಲಭ್ಯ ಇದ್ದ ತಂತ್ರಜ್ಞಾನ ತರಂಗಾಂತರ ದಕ್ಷತೆಯನ್ನು ಹೊಂದಿರಲಿಲ್ಲ. ಹಳೆಯ ತಂತ್ರಜ್ಞಾನವನ್ನು ಸ್ಥಳಾಂತರಿಸಲು ತರಂಗಾಂತರ ದಕ್ಷತೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.


(Release ID: 1580368) Visitor Counter : 297