ಸಂಪುಟ

ವೈದ್ಯಕೀಯ ಶಿಕ್ಷಣ ಸುಧಾರಣೆಗಳಿಗೆ ದೊರಕಿದೆ ವೇಗ

Posted On: 12 JUN 2019 7:54PM by PIB Bengaluru

ವೈದ್ಯಕೀಯ ಶಿಕ್ಷಣ ಸುಧಾರಣೆಗಳಿಗೆ ದೊರಕಿದೆ ವೇಗ

ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ ) ವಿಧೇಯಕ , 2019 ಕ್ಕೆ ಸಂಪುಟ ಅನುಮೋದನೆ, ಬರಲಿರುವ ಸಂಸತ್  ಅಧಿವೇಶನದಲ್ಲಿ ಮಂಡನೆ.

 

ಭಾರತದ ನಾಗರಿಕರಿಗೆ ಗುಣಮಟ್ಟದ ಆರೋಗ್ಯ ಸುರಕ್ಷಾ ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ತಲುಪುವ ತನ್ನ ಯತ್ನಕ್ಕೆ ಇನ್ನಷ್ಟು ಪುಷ್ಟಿ  ನೀಡಲು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳಿಗೆ ಕೇಂದ್ರ ಸರಕಾರ ಮುಂದಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದ ಎನ್.ಡಿ.ಎ. ಸರಕಾರದ ಪ್ರಮುಖ ಆಧಾರಸ್ತಂಭ ಇದಾಗಿದೆ.

 

ಸರಕಾರದ ಇನ್ನೊಂದು ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ತನ್ನ ಸ್ಪೂರ್ತಿಯನ್ನು ಜೀವಂತವಾಗಿಟ್ಟಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ವಿಧೇಯಕ, 2019 ಕ್ಕೆ ಅನುಮೋದನೆ ನೀಡಿದೆ. ಇದು ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಎರಡನೇ ಅಧ್ಯಾದೇಶ ,2019 ನ್ನು ಸಂಸತ್ತಿನ ಕಾಯ್ದೆ ಮೂಲಕ ಸ್ಥಳಾಂತರಿಸಲಿದೆ. ಈ ವಿಧೇಯಕವನ್ನು ಬರಲಿರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು.

 

ಈ ಕ್ರಮವು ದೇಶದ ವೈದ್ಯಕೀಯ ಶಿಕ್ಷಣ ಆಡಳಿತದಲ್ಲಿ ಗುಣಮಟ್ಟ , ಪಾರದರ್ಶಕತೆ, ಉತ್ತರದಾಯಿತ್ವವನ್ನು ಖಾತ್ರಿಪಡಿಸಲಿದೆ.  

 

ಪರಿಣಾಮ:

·         ಹೊಸ ವಿಧೇಯಕವು  26-09-2018 ರಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವಧಿಗೆ ಎಂ.ಸಿ.ಐ.ಯನ್ನು ಬರ್ಖಾಸ್ತು (ಸೂಪರ್ ಸೀಡ್) ಮಾಡಲು ಅವಕಾಶ ನೀಡುತ್ತದೆ.

 

·         ಈ ಅವಧಿಯಲ್ಲಿ , ಎಂ.ಸಿ.ಐ.ಕಾಯ್ದೆ , 1956 ರಡಿಯಲ್ಲಿ  ಎಂ.ಸಿ.ಐ.ಗೆ ನೀಡಲಾಗಿರುವ ಅಧಿಕಾರಗಳನ್ನು ಮತ್ತು ಅದರ ಕಾರ್ಯಚಟುವಟಿಕೆಗಳನ್ನು ಗವರ್ನರುಗಳ ಮಂಡಳಿಯು ನಿಭಾಯಿಸುತ್ತದೆ.

 

·         ಗವರ್ನರುಗಳ ಮಂಡಳಿಯು (ಬೋರ್ಡ್ ಆಫ್ ಗವರ್ನರುಗಳ) ಸದಸ್ಯರ ಸಂಖ್ಯೆಯನ್ನು ಈಗಿರುವ 7 ರಿಂದ 12 ಕ್ಕೆ ಏರಿಸಲಾಗುವುದು.

 

ಹಿನ್ನೆಲೆ:

ಐ.ಎಂ.ಸಿ. ಕಾಯ್ದೆ 1956 ರ ಪ್ರಸ್ತಾವನೆಗಳು ಮತ್ತು ಅದರಡಿಯಲ್ಲಿ ಮಾಡಲಾದ ನಿಯಂತ್ರಣ ನಿಯಮಾವಳಿಗಳನ್ನು ಮೀರಿ ಎಂ.ಸಿ.ಐ. ಕೈಗೊಂಡ ನಿರ್ದಿಷ್ಟ ಕ್ರಮಗಳು ವಿವಾದವುಂಟು ಮಾಡಿರುವುದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಗಮನಕ್ಕೆ ಬಂದಿತ್ತು. ಇದಲ್ಲದೆ ಎಂ.ಸಿ.ಐ. ಕಾರ್ಯನಿರ್ವಹಣೆ ಬಗ್ಗೆ ನಿಗಾ ಇಡಲು  ಗೌರವಾನ್ವಿತ ಸುಪ್ರೀಂ ಕೋರ್ಟು ನೇಮಿಸಿದ ಮೇಲು ನಿಗಾ ಸಮಿತಿ  ಕೂಡಾ ತನ್ನ ಸೂಚನೆಗಳನ್ನು  ಪಾಲಿಸದಿರುವ ಸಂದರ್ಭಗಳನ್ನು ಉಲ್ಲೇಖ ಮಾಡಿತ್ತು. ಮತ್ತು ಈ ಹಿನ್ನೆಲೆಯಲ್ಲಿ ಮೇಲು ನಿಗಾ ಸಮಿತಿಯ ಎಲ್ಲಾ ಸದಸ್ಯರೂ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದರು.

 

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ , ಮತ್ತು ಎಂ.ಸಿ.ಐ. ಗೆ ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸಿ ದೇಶದ ವೈದ್ಯಕೀಯ ಶಿಕ್ಷಣ ಆಡಳಿತದಲ್ಲಿ ಗುಣಮಟ್ಟ , ಪಾರದರ್ಶಕತೆ , ಉತ್ತರದಾಯಿತ್ವ  ತರುವುದಕ್ಕಾಗಿ,  ಎಂ.ಸಿ.ಐ.ಯನ್ನು ಬರ್ಖಾಸ್ತು (ಸೂಪರ್ ಸೀಡ್ ) ಮಾಡುವುದಕ್ಕಾಗಿ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಅಧ್ಯಾದೇಶ , 2018  ನ್ನು 26-09 -2018 ರಂದು  ಹೊರಡಿಸಲಾಯಿತು ಮತ್ತು ಅದರ ವ್ಯವಹಾರಗಳ ನಿಭಾವಣೆಯನ್ನು  ಪ್ರಖ್ಯಾತ ಮತ್ತು ಸಮರ್ಥ ವೈದ್ಯರನ್ನು ಒಳಗೊಂಡ ಆಡಳಿತ ಮಂಡಳಿ (ಗವರ್ನರುಗಳ ಮಂಡಳಿ-ಬಿ.ಒ.ಜಿ.) ಗೆ ವಹಿಸಿಕೊಡಲಾಯಿತು. ನೀತಿ (ಎನ್.ಐ.ಟಿ.ಐ.) ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಅಧ್ಯಕ್ಷತೆಯಲ್ಲಿ ಇತರ ಆರು ಸದಸ್ಯರನ್ನು ಒಳಗೊಂಡ ಬಿ.ಒ.ಜಿ.ಯನ್ನು ರಚಿಸಲಾಯಿತು.

 

ಶಾಸನಾತ್ಮಕ ಪ್ರಕ್ರಿಯೆ:

ಇದನ್ನನುಸರಿಸಿ , ಮೇಲೆ ಹೇಳಲಾದ ಅಧ್ಯಾದೇಶದ ಬದಲು ಮಾಡಲಾದ  ವಿಧೇಯಕವಾಗಿ  , ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ವಿಧೇಯಕ 2018 ನ್ನು ಲೋಕ ಸಭೆಯಲ್ಲಿ 2018 ರ ಡಿಸೆಂಬರ್ 14 ರಂದು ಮಂಡಿಸಲಾಯಿತು ಮತ್ತು 2018 ರ ಡಿಸೆಂಬರ್ 31 ರಂದು ಸದನವು ಇದನ್ನು ಅಂಗೀಕರಿಸಿತು. ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ 2018 ರ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸಭೆಯಲ್ಲಿ ಇದನ್ನು ಪರಿಗಣಿಸುವುದಕ್ಕೆ ಮತ್ತು ಅಂಗೀಕರಿಸುವುದಕ್ಕೆ ಸಾಧ್ಯವಾಗಲಿಲ್ಲ. ಸದನವನ್ನು 2019 ರ ಜನವರಿ 9 ರ ಬುಧವಾರದಂದು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು. ಆ ಹಿನ್ನೆಲೆಯಲ್ಲಿ ಎಂ.ಸಿ.ಐ.ಯನ್ನು ಸೂಪರ್ ಸೀಡ್ ಮಾಡಿ ನೇಮಿಸಲಾದ  ಗವರ್ನರುಗಳ ಮಂಡಳಿಗೆ (ಬಿ.ಒ.ಜಿ.)ಗೆ  ಎಂ.ಸಿ.ಐ. (ಭಾರತೀಯ ವೈದ್ಯಕೀಯ ಮಂಡಳಿ )ಯ ಅಧಿಕಾರಗಳನ್ನು ಚಲಾಯಿಸುವುದನ್ನು ಮುಂದುವರೆಸಲು ಮತ್ತು ಈ ಮೊದಲಿನ ಅಧ್ಯಾದೇಶದ ಪ್ರಸ್ತಾವನೆಗಳ ಅನ್ವಯ ಈಗಾಗಲೇ ಗವರ್ನರುಗಳ ಮಂಡಳಿಯು ಮಾಡಿರುವ ಕೆಲಸಗಳಗೆ ಮಾನ್ಯತೆ ದೊರಕಿಸಲು ಮತ್ತು ಅದನ್ನು ಮುಂದುವರೆಸಲು      ಹೊಸ ಅಧ್ಯಾದೇಶವಾಗಿ  ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ ) ಅಧ್ಯಾದೇಶ ,2019  ನ್ನು  ಜಾರಿಗೆ ತರಲು ಸರಕಾರವು ನಿರ್ಧರಿಸಿತ್ತು .

 

ಅಧ್ಯಾದೇಶ ಸ್ಥಳಾಂತರಿಸುವ  ವಿಧೇಯಕ ಅಂದರೆ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ವಿಧೇಯಕ 2018 ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತಾದರೂ 2019 ರ ಸಂಸತ್ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸಭೆಯಲ್ಲಿ ಇದನ್ನು ಅಂಗೀಕಾರಕ್ಕೆ ಕೈಗೆತ್ತಿಕೊಳ್ಳುವುದು ಸಾಧ್ಯವಾಗಿರಲಿಲ್ಲ. ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ ) ಎರಡನೇ ಅಧ್ಯಾದೇಶ, 2019  ನ್ನು  21-02-2019 ರಂದು  ಜಾರಿ ಮಾಡಲಾಗಿತ್ತು.

 

ಸ್ಥಳಾಂತರಿತ ವಿಧೇಯಕ ಅಂದರೆ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ ) ವಿಧೇಯಕ , 2018   ಸಂಸತ್ತಿನಲ್ಲಿ ಬಾಕಿಯಾಗಿದ್ದು, 16  ನೇ ಲೋಕ ಸಭೆ ವಿಸರ್ಜನೆಯೊಂದಿಗೆ ಅದು ಅಸ್ತಿತ್ವ ಕಳೆದುಕೊಂಡಿದೆ. ಆ ಹಿನ್ನೆಲೆಯಲ್ಲಿ ಸಂಪುಟವು ಬರಲಿರುವ ಸಂಸತ್ ಅಧಿವೇಶನದಲ್ಲಿ ಭಾರತೀಯ ವೈಧಕೀಯ ಮಂಡಳಿ (ತಿದ್ದುಪಡಿ)  ಎರಡನೇ ಅಧ್ಯಾದೇಶ, 2019 ನ್ನು ಸಂಸತ್ತಿನ ಕಾಯ್ದೆ ಮೂಲಕ ಸ್ಥಳಾಂತರಿಸುವುದಕ್ಕಾಗಿ ಹೊಸ ವಿಧೇಯಕ ಅಂದರೆ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ವಿಧೇಯಕ 2019 ನ್ನು ಮಂಡಿಸುತ್ತಿದೆ.



(Release ID: 1574355) Visitor Counter : 61