ಸಂಪುಟ

ಭಾರತ ಮತ್ತು ಬ್ರಿಟನ್ ನಡುವಿನ ಕ್ಯಾನ್ಸರ್ ಸಂಶೋಧನಾ ಉಪಕ್ರಮಗಳ ಕುರಿತ ಒಡಂಬಡಿಕೆಗೆ ಸಂಪುಟ ಅನುಮೋದನೆ

Posted On: 07 MAR 2019 2:42PM by PIB Bengaluru

ಭಾರತ ಮತ್ತು ಬ್ರಿಟನ್ ನಡುವಿನ ಕ್ಯಾನ್ಸರ್ ಸಂಶೋಧನಾ ಉಪಕ್ರಮಗಳ ಕುರಿತ ಒಡಂಬಡಿಕೆಗೆ ಸಂಪುಟ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, ಭಾರತ ಮತ್ತು ಬ್ರಿಟನ್ ನಡುವಿನ ಕ್ಯಾನ್ಸರ್ ಸಂಶೋಧನಾ ಉಪಕ್ರಮಗಳ ಕುರಿತ ಒಡಂಬಡಿಕೆ(ಎಂಒಯು)ಗೆ ಅನುಮೋದನೆ ನೀಡಿತು. ಈ ಒಪ್ಪಂದಕ್ಕೆ 2018ರ ನವೆಂಬರ್ 14ರಂದು ಸಹಿ ಹಾಕಲಾಗಿತ್ತು.

 

ವಿವರ:-

ಭಾರತ – ಬ್ರಿಟನ್ ಕ್ಯಾನ್ಸರ್ ಸಂಶೋಧನಾ ಉಪಕ್ರಮಗಳಲ್ಲಿ ಸಂಶೋಧನಾ ಸವಾಲುಗಳು ಮತ್ತು ಕ್ಯಾನ್ಸರ್ ಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ, ಮುನ್ನೆಚ್ಚರಿಕೆ ಮತ್ತು ಕ್ಯಾನ್ಸರ್ ಆರೈಕೆ ವಿಷಯಗಳನ್ನು ಗುರುತಿಸಿ, ಭಾರತ ಮತ್ತು ಬ್ರಿಟನ್ ನ ಖ್ಯಾತ ಪರಿಣಿತರೆಲ್ಲ ಒಗ್ಗೂಡಿ ಕ್ಲಿನಿಕಲ್(ಪ್ರಯೋಗಾಲಯ) ಸಂಶೋಧನೆ, ಜನಸಂಖ್ಯಾ ಸಂಶೋಧನೆ, ಹೊಸ ತಂತ್ರಜ್ಞಾನಗಳು ಮತ್ತು ಭೌತಿಕ ವಿಜ್ಞಾನಗಳ ಕುರಿತು ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ. ಈ ಕ್ರಮಗಳಿಂದಾಗಿ ಹೊಸ ಸಂಶೋಧನೆಗಳನ್ನು ಕೈಗೊಳ್ಳಲು ನೆರವು ನೀಡಲಾಗುವುದು ಮತ್ತು ಕ್ಯಾನ್ಸರ್ ವಿರುದ್ಧ ಮಹತ್ವದ ಪರಿಣಾಮಕಾರಿ ಸಂಶೋಧನೆಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ.

 

ನಿಧಿ ಮಾದರಿ :-

ಐದು ವರ್ಷಗಳಲ್ಲಿ ಈ ಕ್ರಮಗಳಿಗೆ ಒಟ್ಟು 10 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 90 ಕೋಟಿ ರೂಪಾಯಿ)ಗಳನ್ನು ಸಂಶೋಧನಾ ಚಟುವಟಿಕೆಗಳಿಗೆ ಬಳಕೆ ಮಾಡಲಾಗುವುದು. ಇದರಲ್ಲಿ ಕ್ಯಾನ್ಸರ್ ಸಂಶೋಧನಾ ಯುನೈಟೆಡ್ ಕಿಂಗ್ ಡಮ್ – ಸಿ ಆರ್ ಯು ಕೆ ಪಾಲು ಸುಮಾರು 5 ಮಿಲಿಯನ್ ಡಾಲರ್(ಅಂದಾಜು 45 ಕೋಟಿ ರೂ.) ಭಾರತದ ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ) ಕೂಡ ಅಷ್ಟೇ ಸಮನಾದ ಪ್ರಮಾಣದ ನಿಧಿ 5 ಮಿಲಿಯನ್ ಡಾಲರ್(ಅಂದಾಜು 45 ಕೋಟಿ ರೂ.) ನೀಡಲಿದೆ. ಈ ನಿಧಿ ಹೊಂದಾಣಿಕೆ ಹಣಕಾಸು ವರ್ಷದ ಆರಂಭದಲ್ಲಿ ಇದ್ದ ದರದಂತೆ ಅನ್ವಯವಾಗಲಿದೆ.

 

ಪರಿಣಾಮ :-

ಕ್ಯಾನ್ಸರ್ ಪರಿಣಾಮಗಳ ಸುಧಾರಣೆ ಗುರಿ ಹೊಂದಿರುವ ವ್ಯಾಪಕ ತಾಂತ್ರಿಕ, ಜೀವ ವೈವಿಧ್ಯಕ, ಪ್ರಯೋಗಾಲಯ ಮತ್ತು ಫಾರ್ಮಸಿಟಿಕಲ್ಸ್ ಆವಿಷ್ಕಾರಗಳು ನಡೆಯುತ್ತಿದ್ದರೂ ಸಹ ಜಾಗತಿಕ ಮಟ್ಟದಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ಭಾರೀ ಹೊರೆ ಬೀಳುತ್ತಿದ್ದು, ಕ್ಯಾನ್ಸರ್ ಆರೈಕೆ ವೆಚ್ಚ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಅದನ್ನು ಎದುರಿಸಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಭಾರತ – ಬ್ರಿಟನ್ ಕ್ಯಾನ್ಸರ್ ಸಂಶೋಧನಾ ಉಪಕ್ರಮಗಳಲ್ಲಿ ಕ್ಯಾನ್ಸರ್ ಆರೈಕೆಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಬಹು ಹಂತದ ಸಂಶೋಧನಾ ಕ್ರಮಗಳನ್ನು ಕೈಗೊಳ್ಳಲು ಉತ್ತಮ ಸಂಶೋಧಕರು, ವಿಜ್ಞಾನಿಗಳು, ಆರೋಗ್ಯ ರಕ್ಷಣಾ ಸಂಸ್ಥೆಗಳ ಜೊತೆಗೂಡಿ ಮಾರ್ಗಸೂಚಿ ಸಿದ್ಧಪಡಿಸಲಾಗುವುದು. ಈ ಕ್ರಮದಿಂದಾಗಿ ಡಾಕ್ಟರಲ್, ಪೋಸ್ಟ್ ಡಾಕ್ಟರಲ್ ಹಂತದ ಸಂಶೋಧಕರ ಮತ್ತು ಕಿರಿಯ ವಿಜ್ಞಾನಿಗಳ ಹಂತದಲ್ಲಿ ಹಲವು ಹುದ್ದೆಗಳು ಸೃಷ್ಟಿಯಾಗಲಿವೆ. ಇವರನ್ನು ತಾಂತ್ರಿಕವಾಗಿ ತರಬೇತುಗೊಳಿಸುವ ಜೊತೆಗೆ ಅವರಲ್ಲಿ ನಾಯಕತ್ವ ಮತ್ತು ಯೋಜನಾ ನಿರ್ವಹಣಾ ಕೌಶಲ್ಯವನ್ನು ಹೆಚ್ಚಿಸಲು ತರಬೇತಿ ನೀಡಲಾಗುವುದು. ಇದರಿಂದ ಶೈಕ್ಷಣಿಕವಾಗಿ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ಬಯೋ ಫಾರ್ಮ ಉದ್ಯಮದಲ್ಲಿ ಕೆಲಸ ಮಾಡಲು ನೆರವು ನೀಡಿದಂತಾಗುತ್ತದೆ.

 

ಹಿನ್ನೆಲೆ :-

 

ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಬ್ರಿಟನ್ ನ ಕ್ಯಾನ್ಸರ್ ಸಂಶೋಧನಾ ಯುನೈಟೆಡ್ ಕಿಂಗ್ ಡಮ್ ಸಂಸ್ಥೆ(ಸಿ ಆರ್ ಯು ಕೆ) ಸೇರಿ ಕೈಗೆಟಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ಐದು ವರ್ಷ ಜಂಟಿ ಸಂಶೋಧನಾ ಯೋಜನೆ ಭಾರತ – ಬ್ರಿಟನ್ ಕ್ಯಾನ್ಸರ್ ಸಂಶೋಧನಾ ಉಪಕ್ರಮವನ್ನು ಕೈಗೆತ್ತಿಕೊಂಡಿದೆ. ಸಿ ಆರ್ ಯು ಕೆ ಮತ್ತು ಡಿಬಿಟಿ ಎರಡೂ ತಲಾ 5 ಮಿಲಿಯನ್ ಡಾಲರ್(ಅಂದಾಜು 45 ಕೋಟಿ) ರೂ.ಗಳನ್ನು 5 ವರ್ಷಗಳ ಪ್ರಾಯೋಗಿಕ ಯೋಜನೆಗೆ ತೆಗೆದಿರಿಸಿದ್ದು, ಹೆಚ್ಚುವರಿ ಹೂಡಿಕೆಯನ್ನು ಇತರೆ ಸಂಭಾವ್ಯ ಪಾಲುದಾರರಿಂದ ಪಡೆದುಕೊಳ್ಳಲಾಗುವುದು. ಈ ಯೋಜನೆ ಭಾರತದ ಪ್ರಧಾನಮಂತ್ರಿ ಬ್ರಿಟನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎರಡು ದೇಶಗಳ ಪ್ರಧಾನಿಗಳು ನೀಡಿದ್ದ ಜಂಟಿ ಹೇಳಿಕೆಯ ಫಲವಾಗಿದೆ. 2018ರ ಏಪ್ರಿಲ್ 18ರಂದು ಬ್ರಿಟನ್ ಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಕೆಳಗಿನಂತೆ ಹೇಳಿದ್ದರು.

“ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವ ರಾಷ್ಟ್ರಗಳಾದ ನಾವು ಒಗ್ಗೂಡಿ ಕೆಲಸ ಮಾಡುವ ಇಚ್ಛೆ ಹೊಂದಿದ್ದೇವೆ, ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ಒಪ್ಪಿತ ಅಂತಾರಾಷ್ಟ್ರೀಯ ನಿಯಮದಂತೆ ಹಾಗೂ ಅಂತಾರಾಷ್ಟ್ರೀಯ ಆದೇಶಕ್ಕೆ ಅನುಗುಣವಾಗಿ ನಾವು ಎಲ್ಲ ರೀತಿಯ ನೆರವನ್ನು ನೀಡಲಿದ್ದೇವೆ. ಭಾರತ ಮತ್ತು ಬ್ರಿಟನ್ ಎರಡೂ ಒಗ್ಗೂಡಿ ಜಗತ್ತಿಗೆ ಆದಷ್ಟೂ ಒಳ್ಳೆಯದನ್ನು ಮಾಡಲಿವೆ. ಜಾಗತಿಕ ಸವಾಲುಗಳನ್ನು ಎದುರಿಸಲು ನಾವು ನಮ್ಮ ಅನುಭವ ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಭಾರತದ ಜೈವಿಕ ತಂತ್ರಜ್ಞಾನ ಇಲಾಖೆ – ಡಿಬಿಟಿ ಮತ್ತು ಬ್ರಿಟನ್ನಿನ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಎರಡೂ ಜೊತೆಗೂಡಿ ಸುಮಾರು ಹತ್ತು ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 90 ಕೋಟಿ ರೂ.) ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಕಡಿಮೆ ವೆಚ್ಚದ ಔಷಧಗಳನ್ನು ಕಂಡುಹಿಡಿಯಲು ಜಂಟಿ ಸಂಶೋಧನಾ ಕ್ರಮಗಳನ್ನು ಕೈಗೊಳ್ಳಲಿದೆ” ಎಂದಿದ್ದರು.



(Release ID: 1568264) Visitor Counter : 118