ಸಂಪುಟ

ವಿದ್ಯುನ್ಮಾನ ರಾಷ್ಟ್ರೀಯ ನೀತಿ 2019 ಪ್ರಸ್ತಾವಕ್ಕೆ ಸಂಪುಟ ಅನುಮೋದನೆ

Posted On: 19 FEB 2019 8:49PM by PIB Bengaluru

ವಿದ್ಯುನ್ಮಾನ ರಾಷ್ಟ್ರೀಯ ನೀತಿ 2019 ಪ್ರಸ್ತಾವಕ್ಕೆ ಸಂಪುಟ ಅನುಮೋದನೆ 
 

ನಿರ್ಧಾರ :-

 

        ಕೇಂದ್ರ ಸಚಿವ ಸಂಪುಟ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ) ಪ್ರಸ್ತಾಪಿಸಿದ್ದ ವಿದ್ಯುನ್ಮಾನ ರಾಷ್ಟ್ರೀಯ ನೀತಿ 2019(ಎನ್ ಪಿ ಇ – 2019)  ನೀತಿಗೆ ಇಂದು ಅನುಮೋದನೆ ನೀಡಿತು. ಈ ನೀತಿಯ ಉದ್ದೇಶವೆಂದರೆ ಭಾರತವನ್ನು ವಿದ್ಯುನ್ಮಾನ ವ್ಯವಸ್ಥೆ ವಿನ್ಯಾಸ ಮತ್ತು ಉತ್ಪಾದನೆ(ಇ ಎಸ್ ಡಿ ಎಂ)ನಲ್ಲಿ ಜಾಗತಿಕ ತಾಣವನ್ನಾಗಿ ರೂಪಿಸುವುದು, ಆ ಮೂಲಕ ದೇಶದಲ್ಲಿ ಚಿಪ್ ಸೆಟ್ ಸೇರಿದಂತೆ ಹಲವು ಪ್ರಮುಖ ಬಿಡಿ ಭಾಗಗಳನ್ನು ಉತ್ತೇಜನ ನೀಡುವುದು ಹಾಗೂ ಉದ್ಯಮ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುವಂತೆ ಮಾಡಲು ಪೂರಕ ವಾತಾವರಣವನ್ನು ನಿರ್ಮಿಸುವುದಾಗಿದೆ.

 

ಎನ್ ಪಿ ಇ – 2019 ಪ್ರಮುಖಾಂಶಗಳು :-

 

1.    ಇ ಎಸ್ ಡಿ ಎಂ ವಲಯ ಜಾಗತಿಕ ಸ್ಪರ್ಧೆಯನ್ನು ಎದುರಿಸುವಂತಾಗಲು ಪೂರಕ ವಾತಾವರಣ ಸೃಷ್ಟಿ; ದೇಶೀಯ ಉತ್ಪಾದನೆ ಉತ್ತೇಜನ ಮತ್ತು ಇಡೀ ಇ ಎಸ್ ಡಿ ಎಂ ಮೌಲ್ಯ ಸರಣಿಯ ರಫ್ತು ಹೆಚ್ಚಿಸುವುದು.

 

2.  ಪ್ರಮುಖ ಎಲೆಕ್ಟ್ರಾನಿಕ್ಸ್ ಬಿಡಿ ಭಾಗಗಳ ಉತ್ಪಾದನೆಗೆ ಬೆಂಬಲ ಮತ್ತು ಪ್ರೋತ್ಸಾಹಧನ ಒದಗಿಸುವುದು.

 

3.  ಸೆಮಿಕಂಡಕ್ಟರ್ ಪ್ರಯೋಜನ, ಡಿಸ್ ಪ್ಲೆ ಫ್ಯಾಬ್ರಿಕೇಶನ್ ಮತ್ತಿತರ ವಿಭಾಗಗಳಲ್ಲಿ ಭಾರೀ ಬಂಡವಾಳ ಹೂಡಿಕೆಗೆ ಮತ್ತು ಅತ್ಯಾಧುನಿಕ ಬೃಹತ್ ಯೋಜನೆಗಳಿಗೆ ವಿಶೇಷ ರಿಯಾಯಿತಿಗಳ ವಿಶೇಷ ಪ್ಯಾಕೇಜ್ ಒದಗಿಸುವುದು.

 

4.  ಹೊಸ ಘಟಕಗಳ ಉತ್ತೇಜನ ಮತ್ತು ಹಾಲಿ ಇರುವ ಘಟಕಗಳ ವಿಸ್ತರಣೆಗೆ ರಿಯಾಯಿತಿ ಕಾರ್ಯತಂತ್ರ ಮತ್ತು ಸೂಕ್ತ ಸ್ಕೀಂಗಳನ್ನು ರೂಪಿಸುವುದು.

 

5.   ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನ ವಲಯಗಳಾದ 5ಜಿ, ಎಲ್ಒಟಿ, ಸೆನ್ಸಾರ್, ಕೃತಕ ಬುದ್ಧಿಮತ್ತೆ(ಆರ್ಟಿಫಿಷಿಯಲ್ ಇಂಟಲಿಜೆನ್ಸ್-ಎಐ), ಮೆಷಿನ್ ಕಲಿಕೆ, ವರ್ಚುಯಲ್ ರಿಯಾಯಿಟಿ, ದ್ರೋಣ್, ರೋಬೋಟಿಕ್ಸ್ ಅಡಿಕ್ಟಿವ್ ಮ್ಯಾನಿಫ್ಯಾಕ್ಚರಿಂಗ್, ಫೋಟೋನಿಕ್ಸ್, ನ್ಯಾನೋ ಆಧಾರಿತ ಉಪಕರಣ ಮುಂತಾದವುಗಳಲ್ಲಿ ನವೋದ್ಯಮಗಳ ಆರಂಭಿಕ ಹಂತ ಮತ್ತು ತಳಮಟ್ಟದ ಅನ್ವೇಷಣೆಗಳು ಸೇರಿದಂತೆ ವಿದ್ಯುನ್ಮಾನ ವಲಯದ ಎಲ್ಲ ಉಪ ವಿಭಾಗಗಳಲ್ಲಿ ಉದ್ಯಮ ಆಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಅನ್ವೇಷಣೆಗಳನ್ನು ಉತ್ತೇಜಿಸುವುದು.

 

6.  ಮರುಕೌಶಲ್ಯ ವೃದ್ಧಿ ಸೇರಿದಂತೆ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಲಭ್ಯತೆ ಹೆಚ್ಚಿಸಲು ಅಗತ್ಯ ವಿನಾಯಿತಿಗಳನ್ನು ಮತ್ತು ಬೆಂಬಲವನ್ನು ನೀಡುವುದು.

 

7.   ಚಿಪ್ ವಿನ್ಯಾಸ ಉದ್ಯಮ, ವೈದ್ಯಕೀಯ ವಿದ್ಯುನ್ಮಾನ ಉಪಕರಣ ಉದ್ಯಮ, ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಇಂಡಸ್ಟ್ರಿ ಮತ್ತು ಸಂಚಾರ ಹಾಗೂ ಕಾರ್ಯತಂತ್ರ ವಿದ್ಯುನ್ಮಾನ ಕೈಗಾರಿಕಾ ವಲಯಗಳಿಗೆ ವಿಶೇಷ ಒತ್ತು ನೀಡುವುದು.

 

8.  ಇ ಎಸ್ ಡಿ ಎಂ ವಲಯದಲ್ಲ ಐಪಿ(ಬೌದ್ಧಿಕ ಹಕ್ಕುಸಾಮ್ಯ) ಹೊಂದುವುದನ್ನು ಉತ್ತೇಜಿಸಲು ಸಾವರಿನ್ ಪೇಟೆಂಟ್ ಫಂಡ್(ಎಸ್ ಪಿ ಎಫ್) ಸೃಷ್ಟಿಸುವುದು.

 

9.  ರಾಷ್ಟ್ರೀಯ ಸೈಬರ್ ಭದ್ರತಾ ವಿಭಾಗ ಸುಧಾರಣೆಗೆ ವಿಶ್ವಾಸಾರ್ಹ ವಿದ್ಯುನ್ಮಾನ ಮೌಲ್ಯ ಸರಣಿ ವೃದ್ಧಿ ಕಾರ್ಯಕ್ರಮಗಳನ್ನು ಉತ್ತೇಜಿಸುವುದು.

 

ಹಿನ್ನೆಲೆ :-

 

        ರಾಷ್ಟ್ರೀಯ ವಿದ್ಯುನ್ಮಾನ ನೀತಿ 2012(ಎನ್ ಪಿ ಇ 2012) ಅಡಿಯಲ್ಲಿ ಹಲವು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಅವುಗಳಿಂದಾಗಿ ಭಾರತೀಯ ಇ ಎಸ್ ಡಿ ಎಂ ಮೌಲ್ಯಸರಣಿ ಅತ್ಯಂತ ಯಶಸ್ವಿಯಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುವಂತಾಗಿದೆ. ದೇಶದಲ್ಲಿ ಇ ಎಸ್ ಡಿ ಎಂ ಉದ್ಯಮದ ಪ್ರಗತಿಗೆ ಹಾಕಿರುವ ಭದ್ರ ಬುನಾದಿಯ ಮೇಲೆ ಅದನ್ನು ಇನ್ನಷ್ಟು ಬೃಹದಾಕಾರವಾಗಿ ಬೆಳೆಸುವ ಉದ್ದೇಶವನ್ನು ಎನ್ ಪಿ ಇ ಹೊಂದಿದೆ. ವಿದ್ಯುನ್ಮಾನ ರಾಷ್ಟ್ರೀಯ ನೀತಿ – 2019(ಎನ್ ಪಿ ಇ 2019) ಹಿಂದಿನ ರಾಷ್ಟ್ರೀಯ ವಿದ್ಯುನ್ಮಾನ ನೀತಿ 2012(ಎನ್ ಪಿ ಇ 2012) ಬದಲಿಗೆ ಜಾರಿಗೆ ಬರುತ್ತದೆ.

 

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿ :-

 

ಅನುಷ್ಠಾನ ಕಾರ್ಯತಂತ್ರ :-   ಈ ನೀತಿಯಿಂದಾಗಿ ದೇಶದ ಇ ಎಸ್ ಡಿ ಎಂ ವಲಯದ ಅಭಿವೃದ್ಧಿಗೆ ಈಗಾಗಲೇ ನಿಗದಿಪಡಿಸಿರುವ ಮಾರ್ಗಸೂಚಿಯಂತೆ ಹಲವು ಯೋಜನೆಗಳನ್ನು, ಉಪಕ್ರಮಗಳು ಮತ್ತು ಕ್ರಮಗಳನ್ನು ರೂಪಿಸಬಹುದಾಗಿದೆ.

 

ಗುರಿ:- ದೇಶೀಯ ಉತ್ಪಾದನೆ ಉತ್ತೇಜನ ಮತ್ತು ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಒಟ್ಟಾರೆ ಇ ಎಸ್ ಡಿ ಎಂ ಮೌಲ್ಯ ಸರಣಿಯ ರಫ್ತು ಪ್ರಮಾಣವನ್ನು 2025ರ ವೇಳೆಗೆ 400 ಬಿಲಿಯನ್ ಅಮೆರಿಕನ್ ಡಾಲರ್(ಅಂದಾಜು 26 ಲಕ್ಷ ಕೋಟಿ)ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರಲ್ಲಿ 2025ರ ವೇಳೆಗೆ 1.0 ಬಿಲಿಯನ್ ಅಮೆರಿಕನ್ ಡಾಲರ್ (ನೂರು ಕೋಟಿ) ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಉತ್ಪಾದಿಸುವ ಗುರಿ ಅದರ ಮೌಲ್ಯ ಸುಮಾರು 190 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 13 ಲಕ್ಷ ಕೋಟಿ ರೂಪಾಯಿ) ಹಾಗೂ 600 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 60 ಕೋಟಿ) ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದನೆ ಅದರ ಮೌಲ್ಯ 110 ಬಿಲಿಯನ್ ಅಮೆರಿಕನ್ ಡಾಲರ್(ಅಂದಾಜು 7 ಲಕ್ಷ ಕೋಟಿ) ರಫ್ತು ಆಗಬೇಕು ಎಂಬ  ಗುರಿ ಇದೆ.

 

ಪ್ರಮುಖ ಪರಿಣಾಮ :-

 

        ಎನ್ ಪಿ ಇ – 2019 ಜಾರಿಗೊಂಡ ನಂತರ ದೇಶದಲ್ಲಿ ಇ ಎಸ್ ಡಿ ಎಂ ವಲಯದ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳು ಮತ್ತು ಸಚಿವಾಲಯಗಳು ಹಲವು ಯೋಜನೆ, ಉಪಕ್ರಮ ಮತ್ತು ಸ್ಕೀಂಗಳನ್ನು ರೂಪಿಸಲಿವೆ. ಇದರಿಂದಾಗಿ ಬಂಡವಾಳ ಹೂಡಿಕೆ ಮತ್ತು ತಂತ್ರಜ್ಞಾನ ಹರಿದು ಬರುವುದಲ್ಲದೆ, ದೇಶೀಯ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆಗೆ ಹೆಚ್ಚಿನ ಮೌಲ್ಯ ವೃದ್ಧಿಯಾಗುತ್ತದೆ. ಜೊತೆಗೆ ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಹಾರ್ಡ್ ವೇರ್ ಉತ್ಪಾದನೆ ಹೆಚ್ಚಾಗಿ ರಫ್ತು ಕೂಡ ಜಾಸ್ತಿಯಾಗಲಿದ್ದು, ಅದಕ್ಕೆ ತಕ್ಕಂತೆ ಭಾರೀ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

 


(Release ID: 1565696)