ಸಂಪುಟ

ಎನ್ ಟಿ ಪಿಸಿ ನಿಯಮಿತ ಕೈಗೊಂಡಿರುವ ವಿದ್ಯುತ್ ಯೋಜನೆಗಳಲ್ಲಿ ಉತ್ಪಾದನೆ ಮಾಡುವ ರಾಜ್ಯಗಳಿಗೆ ಹೆಚ್ಚಿನ ವಿದ್ಯುತ್ ಹಂಚಿಕೆ ಮಾಡುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ

Posted On: 06 FEB 2019 9:43PM by PIB Bengaluru

ಎನ್ ಟಿ ಪಿಸಿ ನಿಯಮಿತ ಕೈಗೊಂಡಿರುವ ವಿದ್ಯುತ್ ಯೋಜನೆಗಳಲ್ಲಿ ಉತ್ಪಾದನೆ ಮಾಡುವ ರಾಜ್ಯಗಳಿಗೆ ಹೆಚ್ಚಿನ ವಿದ್ಯುತ್ ಹಂಚಿಕೆ ಮಾಡುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, ಎನ್ ಟಿ ಪಿ ಸಿ ನಿಯಮಿತ ಕೈಗೊಂಡಿರುವ ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್ ಯೋಜನೆ(4 ಸಾವಿರ ಮೆಗಾವ್ಯಾಟ್) ಮತ್ತು ಎನ್ ಟಿ ಪಿ ಸಿ ಯ ಅಂಗ ಸಂಸ್ಥೆ ಪತ್ರಾತು ವಿದ್ಯುತ್ ಉತ್ಪಾದನ್ ನಿಗಮ ನಿಯಮಿತ(ಪಿವಿಯುಎನ್ಎಲ್)ನ ಪತ್ರಾತು ಥರ್ಮಲ್ ವಿದ್ಯುತ್ ವಿಸ್ತರಣಾ ಯೋಜನೆ(4 ಸಾವಿರ ಮೆಗಾವ್ಯಾಟ್)ಗಳಲ್ಲಿ ಆಯಾ ರಾಜ್ಯಗಳಿಗೆ ಶೇಕಡ 85ರಷ್ಟು ವಿದ್ಯುತ್ ಹಂಚಿಕೆ ಮಾಡುವ ಇಂಧನ ಸಚಿವಾಲಯದ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.

ವಿವರ :-

ಈ ಎರಡು ಯೋಜನೆಗಳನ್ನು ಎರಡು ಹಂತಗಳಲ್ಲಿ ಸ್ಥಾಪಿಸಲಾಗುವುದು. ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್ ಯೋಜನೆ ಪೆದ್ದಪಲ್ಲಿ ಜಿಲ್ಲೆಯ ರಾಮಗುಂಡಂನಲ್ಲಿ ಮತ್ತು ಪತ್ರಾತು ಸೂಪರ್ ಥರ್ಮಲ್ ವಿದ್ಯುತ್ ಯೋಜನೆ ಜಾರ್ಖಂಡ್ ನ ರಾಮಗಢ್ ಜಿಲ್ಲೆಯ ಪತ್ರಾತುವಿನಲ್ಲಿ ಸ್ಥಾಪನೆಯಾಗಲಿದೆ. ಟಿ ಎಸ್ ಟಿ ಪಿ ಪಿ ಯ ಮೊದಲನೇ ಹಂತದಲ್ಲಿ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು ಮತ್ತು ಎರಡನೇ ಹಂತದಲ್ಲಿ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಘಟಕಗಳು ಆರಂಭವಾಗಲಿವೆ. ಹಾಗೆಯೇ ಪತ್ರಾತು ಥರ್ಮಲ್ ವಿದ್ಯುತ್ ಕೇಂದ್ರ(ಪಿಟಿಪಿಎಸ್) ಮೊದಲ ಹಂತದಲ್ಲಿ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಘಟಕಗಳು ಹಾಗೂ ಎರಡನೇ ಹಂತದಲ್ಲಿ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು ತಲೆ ಎತ್ತಲಿವೆ. 

ಸಂವಿಧಾನದ 13ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವಂತೆ 2014ರ ಆಂಧ್ರಪ್ರದೇಶ ಪುನರ್ ವಿಂಗಡಣಾ ಕಾಯ್ದೆಯ ಅನ್ವಯ ಹೊಸದಾಗಿ ರಚನೆಯಾಗಿರುವ ತೆಲಂಗಾಣ ರಾಜ್ಯಕ್ಕೆ 4 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕ ಸ್ಥಾಪಿಸುವುದು ಕಡ್ಡಾಯವಾಗಿದೆ.

4 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಪಿಟಿಪಿಎಸ್ ವಿಸ್ತರಣಾ ಯೋಜನೆಗೆ ಎನ್ ಟಿ ಪಿ ಎಸ್ ನಿಯಮಿತ ಮತ್ತು ಜಾರ್ಖಂಡ್ ಸರ್ಕಾರದ ಜಂಟಿ ಒಪ್ಪಂದದ ಪ್ರಮುಖ ಷರತ್ತಿನಂತೆ ಪಿಟಿಪಿಎಸ್ ವಿಸ್ತರಣಾ ಯೋಜನೆ(4 ಸಾವಿರ ಮೆಗಾವ್ಯಾಟ್)ಯಲ್ಲಿ ಶೇಕಡ 85ರಷ್ಟು ವಿದ್ಯುತ್ ನ್ನು ಹಂಚಿಕೆ ಮಾಡಬೇಕಿದೆ.

ಪ್ರಸ್ತುತ ಈ ಎರಡು ಯೋಜನೆಗಳ ಮೊದಲನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್ ಘಟಕ 2020-21ನೇ ಸಾಲಿನ 3ನೇ ತ್ರೈಮಾಸಿಕದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. 2016ರ ಜನವರಿ 29ರಂದು ಅನುಮೋದಿಸಿದ ಬಂಡವಾಳ ಹೂಡಿಕೆಯಂತೆ ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್ ಯೋಜನೆ(ಟಿ ಎಸ್ ಟಿ ಪಿ ಪಿ)ಗೆ 11,811.26 ಕೋಟಿ ರೂಪಾಯಿ ವ್ಯಯವಾಗಲಿದೆ. ಆ ಪೈಕಿ ಮಾರ್ಚ್ 2018ರ ವರೆಗೆ 1,849 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. 

ಪತ್ರಾತು ಸೂಪರ್ ಥರ್ಮಲ್ ವಿದ್ಯುತ್ ಕೇಂದ್ರದ ಮೊದಲನೇ ಹಂತ 2022-23ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. 2017ರ ಅಕ್ಟೋಬರ್ 30ರಂದು ಅನುಮೋದಿತ ಬಂಡವಾಳ ಪಿಟಿಪಿಎಸ್ ವಿಸ್ತರಣಾ ಯೋಜನೆ ಪೂರ್ಣಗೊಳಿಸಲು 18,668 ಕೋಟಿ ರೂಪಾಯಿ ತಗುಲುವ ಅಂದಾಜಿದೆ. ಮಾರ್ಚ್ 2018ರ ವರೆಗೆ 247.66 ಕೋಟಿ ರೂಪಾಯಿ ವ್ಯಯ ಮಾಡಲಾಗಿದೆ.

ಪರಿಣಾಮ :-

ಟಿ ಎಸ್ ಟಿ ಪಿ ಪಿ ಯಿಂದ ತೆಲಂಗಾಣ ರಾಜ್ಯಕ್ಕೆ ಹೆಚ್ಚಿನ ವಿದ್ಯುತ್ ಹಂಚಿಕೆ ಮಾಡುವುದರಿಂದ 13ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಆಂಧ್ರಪ್ರದೇಶ ಪುನರ್ ವಿಂಗಡಣಾ ಕಾಯ್ದೆಯಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡು ಹೊಸ ರಾಜ್ಯದ ಸುಸ್ಥಿರ ಅಭಿವೃದ್ಧಿ ಮತ್ತು ಪ್ರಗತಿಗೆ ನೆರವು ನೀಡಿದಂತಾಗುತ್ತದೆ.

ಪಿ ಟಿ ಪಿ ಎಸ್ ನಿಂದ ಜಾರ್ಖಂಡ್ ರಾಜ್ಯಕ್ಕೆ ಹೆಚ್ಚಿನ ವಿದ್ಯುತ್ ಹಂಚಿಕೆ ಮಾಡುವುದರಿಂದ ಆ ರಾಜ್ಯದಲ್ಲಿ ವಿದ್ಯುತ್ ಸ್ಥಿತಿಗತಿ ಸುಧಾರಣೆಗೆ ಸಹಾಯಕವಾಗಲಿದೆ ಹಾಗೂ ಇದರಿಂದ ಸರ್ವರಿಗೂ ವಿದ್ಯುತ್ ಒದಗಿಸುವ ಕೇಂದ್ರ ಸರ್ಕಾರದ ಗುರಿ ಸಾಧನೆಗೆ ನೆರವಾಗಲಿದೆ.
 

***


(Release ID: 1563100) Visitor Counter : 113