ಪ್ರಧಾನ ಮಂತ್ರಿಯವರ ಕಛೇರಿ

ಅಹ್ಮದಾಬಾದಿನಲ್ಲಿ ಅತ್ಯಾಧುನಿಕ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೈದ್ಯ ವಿಜ್ಞಾನಗಳ ಸಂಸ್ಥೆ, ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ.  

Posted On: 17 JAN 2019 7:58PM by PIB Bengaluru

ಅಹ್ಮದಾಬಾದಿನಲ್ಲಿ ಅತ್ಯಾಧುನಿಕ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೈದ್ಯ ವಿಜ್ಞಾನಗಳ ಸಂಸ್ಥೆ, ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ.  

ಸರಕಾರ ಬಡವರ ಪರವಾಗಿದೆ, ಆರೋಗ್ಯ ರಕ್ಷಣಾ ಸೇವೆಗಳ ವಿಸ್ತರಣೆಗೆ ಆದ್ಯತೆ : ಪ್ರಧಾನಮಂತ್ರಿ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಅಹ್ಮದಾಬಾದಿನಲ್ಲಿ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಸಾರ್ವಜನಿಕ ಆಸ್ಪತ್ರೆ- ಸರ್ದಾರ್ ವಲ್ಲಭ ಭಾಯಿ ಪಟೇಲ್  ವೈದ್ಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿದರು. ಅಹ್ಮದಾಬಾದ್ ಮಹಾನಗರ ಪಾಲಿಕೆ ನಿರ್ಮಾಣ ಮಾಡಿದ ಈ ಸಂಸ್ಥೆ  78 ಮೀಟರ್ ಎತ್ತರವಿದ್ದು,ಏರ್ ಅಂಬುಲೆನ್ಸ್ ಸಹಿತ ಅತ್ಯಾಧುನಿಕ ಸವಲತ್ತುಗಳುಳ್ಳ  1500 ಹಾಸಿಗೆಗಳ ಆಸ್ಪತ್ರೆ ಯನ್ನು ಹೊಂದಿದೆ. ಪ್ರಧಾನಮಂತ್ರಿ ಅವರು ಆಸ್ಪತ್ರೆಯಲ್ಲಿಯ ಸೌಲಭ್ಯಗಳನ್ನು ಪರಿಶೀಲಿಸಿದರು. ವಿಶ್ವ ದರ್ಜೆಯ ಈ ಆಸ್ಪತ್ರೆಯನ್ನು  ನಿರ್ಮಿಸುವಲ್ಲಿ  ದಾಬಾದ್ ಮಹಾನಗರ ಪಾಲಿಕೆಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ಮತ್ತು “ ಅಹ್ಮದಾಬಾದ್ ಆಸ್ಪತ್ರೆಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೈದ್ಯ ವಿಜ್ಞಾನಗಳು ಹಾಗು ಸಂಶೋಧನಾ ಕೇಂದ್ರ ದೇಶದ ಇತರ ಸರಕಾರಿ ಆಸ್ಪತ್ರೆಗಳಿಗೆ ಮಾದರಿ “ ಎಂದೂ ಹೇಳಿದರು.  

 

750 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ 17 ಮಹಡಿಗಳ ಆಸ್ಪತ್ರೆ ಕೈಗೆಟಕುವ ದರದಲ್ಲಿ ವಿಶ್ವ ದರ್ಜೆಯ ಸೇವೆ ಒದಗಿಸಲಿದೆ ಮತ್ತು ಇದು ಆಯುಷ್ಮಾನ ಭಾರತ್ ಗೆ ಜೋಡಣೆಗೊಂಡಿದೆ. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು “ ಆಯುಷ್ಮಾನ್ ಭಾರತ್ ಇರುವುದರಿಂದಾಗಿ ಸಣ್ಣ ಪಟ್ಟಣಗಳಲ್ಲಿಯೂ ಹೊಸ ಆಸ್ಪತ್ರೆಗಳ ಅಗತ್ಯ ಹೆಚ್ಚುತ್ತಿದೆ . ಹೊಸ ಆಸ್ಪತ್ರೆಗಳು ತ್ವರಿತವಾಗಿ ಆರಂಭಗೊಳ್ಲುತ್ತಿವೆ, ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಬೇಡಿಕೆ ಹೆಚ್ಚುತ್ತಿದೆ , ಆ ಮೂಲಕ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಯುವಕರಿಗೆ ಹಲವು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ” ಎಂದು ಆಯುಷ್ಮಾನ್ ಭಾರತ್ ನ ಮಹತ್ವವನ್ನು ಒತ್ತಿ ಹೇಳಿದರು.

 

ದೇಶವು ಆರೋಗ್ಯ ರಕ್ಷಣಾ ಸೌಲಭ್ಯಗಳಲ್ಲಿ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಮುಖ ವಿಸ್ತರಣೆಯನ್ನು ಕಾಣುತ್ತಿದೆ ಮತ್ತು ಇದು ನಾಗರಿಕರ ಆರೋಗ್ಯ ರಕ್ಷಣಾ ಆವಶ್ಯಕತೆಗಳನ್ನು ಈಡೇರಿಸುವಲ್ಲಿ ದೊಡ್ಡ ನೆರವನ್ನು ನೀಡಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.

 

ಬಡವರ ಬಗ್ಗೆ ಕಾಳಜಿ ಮತ್ತು ಅವರ ಆವಶ್ಯಕತೆಗಳನ್ನು ಈಡೇರಿಸುವುದು ಪ್ರಥಮಾದ್ಯತೆ ಎಂದ ಪ್ರಧಾನ ಮಂತ್ರಿ ಅವರು “ ಸರಕಾರ ಬಡವರ ಜೊತೆಗಿದೆ ಮತ್ತು ಅವರ ಬಗ್ಗೆ ಅದರ ಆದ್ಯತೆಗಳು ಆರೋಗ್ಯ ರಕ್ಷಣಾ ಕ್ಷೇತ್ರದ ಸೇವೆಯ ವಿಸ್ತರಣೆಯಲ್ಲಿ ಮತ್ತು  ಪ್ರಧಾನ ಮಂತ್ರಿ ಜನೌಷಧಿ ಯೋಜನಾ ಅಡಿಯಲ್ಲಿ ಕಡಿಮೆ ದರದಲ್ಲಿ ಜೆನೆರಿಕ್ ಔಷಧಿ ಒದಗಿಸುವ ಮೂಲಕ  ಪ್ರತಿಬಿಂಬಿಸಲ್ಪಟ್ಟಿವೆ. ಸುಮಾರು 5,000 ಪ್ರಧಾನಮಂತ್ರಿ ಜನ ಔಷಧಿ ಕೇಂದ್ರಗಳನ್ನು ದೇಶಾದ್ಯಂತ ತೆರೆಯಲಾಗಿದೆ “ ಎಂದರು.

 

ಎಲ್ಲರಿಗೂ ಸಮಾನ ಅವಕಾಶಗಳು ಎಂಬುದಕ್ಕೆ ತಮ್ಮ ಸರಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು ಸಾಮಾನ್ಯ ವರ್ಗದಲ್ಲಿ ಬಡವರಿಗೆ 10% ಮೀಸಲಾತಿ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಎಂದರು. ಈ ಉದ್ದೇಶಕ್ಕಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳ ಸಂಖ್ಯೆಯನ್ನು 10 % ಹೆಚ್ಚಿಸಲಾಗುತ್ತಿದೆ ಎಂದರು. ಸಾಮಾನ್ಯ ವರ್ಗದ ಬಡವರಿಗೆ ಸರಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 10 % ಮೀಸಲಾತಿ ನಿರ್ಧಾರವನ್ನು ಅನುಷ್ಟಾನಕ್ಕೆ ತರುತ್ತಿರುವ ಮೊದಲ ರಾಜ್ಯ ಗುಜರಾತ್ ಆಗಿರುವುದಕ್ಕೆ ಅವರು ಗುಜರಾತ್ ಸರಕಾರವನ್ನು ಶ್ಲಾಘಿಸಿದರು .

 

ಹೊಸ ವರ್ಷದಲ್ಲಿ ಗುಜರಾತಿಗೆ ಇದು ತಮ್ಮ ಮೊದಲ ಭೇಟಿ ಎಂದು ಲಘು ಧಾಟಿಯಲ್ಲಿ ಹೇಳಿದ ಪ್ರಧಾನ ಮಂತ್ರಿ ಅವರು ಅಹಮದಾಬಾದಿನ ಜನತೆಗೆ ದೊಡ್ಡ ಆರೋಗ್ಯ ರಕ್ಷಣಾ ಸವಲತ್ತನ್ನು ಹಬ್ಬದ ಋತುವಿನ ಕಾಲಮಾನದಲ್ಲಿ ಸಮರ್ಪಣೆ ಮಾಡುವುದಕ್ಕಿಂತ ಉತ್ತಮ ಸಮಯ ಬೇರಾವುದೂ ಇರಲಾರದು ಎಂದರು. ದೇಶದ ಕೆಲವೇ ಕೆಲವು ಮಹಾನಗರ ಪಾಲಿಕೆಗಳು ಇಂತಹ ವಿಶ್ವ ದರ್ಜೆಯ ಆರೋಗ್ಯ ರಕ್ಷಣಾ ಸೌಲಭ್ಯ ನಿರ್ಮಾಣಕ್ಕೆ ಮುಂದಾಗಿವೆ ಎಂದರು. ಅಹ್ಮದಾಬಾದಿನ ಮೇಯರ್ ಆಗಿ ಸರ್ದಾರ್ ಪಟೇಲ್ ಅವರ ಪಾತ್ರವನ್ನು ಕೊಂಡಾಡಿದ ಪ್ರಧಾನಮಂತ್ರಿ ಅವರು ಪಟೇಲ್ ಅವರು ನಗರದಲ್ಲಿ ಆರೋಗ್ಯ , ನೈರ್ಮಲ್ಯ ಮತ್ತು ಸ್ವಚ್ಚತೆಯ ತಮ್ಮ ಆಂದೋಲನದಿಂದ ಒಂದು ಉದಾಹರಣೆಯಾಗಿ ನಿಲ್ಲುತ್ತಾರೆ ಎಂದೂ ಹೇಳಿದರು. 

 

ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ತಮ್ಮ ಸರಕಾರದ ಬದ್ದತೆಯನ್ನು ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ವಿಷದಪಡಿಸಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ (ಎಲ್ಲರೊಂದಿಗೆ, ಎಲ್ಲರ ವಿಕಾಸ)  ಎಂಬುದು ನವ ಭಾರತದತ್ತ ಸಾಗುವ ಹಾದಿ ಎಂದವರು ಬಣ್ಣಿಸಿದರು.



(Release ID: 1560435) Visitor Counter : 82