ಪ್ರಧಾನ ಮಂತ್ರಿಯವರ ಕಛೇರಿ

ಬೋಗಿಬೀಲ್ ಸೇತುವೆ ಪ್ರಧಾನಮಂತ್ರಿ ಅವರಿಂದ ಲೋಕಾರ್ಪಣೆ; ಮೊದಲ ಪ್ರಯಾಣಿಕ ರೈಲಿಗೆ ಹಸಿರು ನಿಶಾನೆ.

Posted On: 25 DEC 2018 4:32PM by PIB Bengaluru

ಬೋಗಿಬೀಲ್ ಸೇತುವೆ ಪ್ರಧಾನಮಂತ್ರಿ ಅವರಿಂದ ಲೋಕಾರ್ಪಣೆ; ಮೊದಲ ಪ್ರಯಾಣಿಕ ರೈಲಿಗೆ ಹಸಿರು ನಿಶಾನೆ.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಅಸ್ಸಾಂನಲ್ಲಿ ಬೋಗಿಬೀಲ್ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಅಸ್ಸಾಂನ ಧೀಬ್ರುಗಢ ಮತ್ತು ಧೀಮಜಿ ಜಿಲ್ಲೆಗಳನ್ನು ಸಂಪರ್ಕಿಸುವಂತೆ ನಿರ್ಮಾಣಗೊಂಡಿರುವ ಈ ಸೇತುವೆ ರಾಷ್ಟ್ರದ ಆರ್ಥಿಕ ಮತ್ತು ವ್ಯೂಹಾತ್ಮಕ ಮಹತ್ವವನ್ನು ಒಳಗೊಂಡಿದೆ. ಬ್ರಹ್ಮಪುತ್ರಾದ ಉತ್ತರ ದಡದಲ್ಲಿ ಕರೆಂಗಾ ಚಪೋರಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿ ಅವರು ಈ ಸೇತುವೆಯ ಮೂಲಕ ಕ್ರಮಿಸುವ ಮೊದಲ ಪ್ರಯಾಣಿಕ ರೈಲಿಗೆ ಹಸಿರು ನಿಶಾನೆ ತೋರಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ಇತ್ತೀಚಿಗೆ ಅಗಲಿದ ಅಸ್ಸಾಮೀ ಗಾಯಕ ದೀಪಾಲಿ ಬೋರ್ಥಕುರ್ ಅವರಿಗೆ ಶೃದ್ದಾಂಜಲಿ ಸಲ್ಲಿಸಿದರು. ವಿವಿಧ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಮತ್ತು ದೇಶಕ್ಕೆ ಕೀರ್ತಿ ತಂದ ರಾಜ್ಯದ ಹಲವಾರು ಇತರ ಪ್ರಖ್ಯಾತ ಮತ್ತು ಚಾರಿತ್ರಿಕ ವ್ಯಕ್ತಿಗಳನ್ನು ಸ್ಮರಿಸಿ ಗೌರವ ಸಲ್ಲಿಸಿದರು. ಕ್ರಿಸ್ಮಸ್ ಅಂಗವಾಗಿ ಅವರು ಜನತೆಗೆ ಶುಭ ಕೋರಿದರು. ಇಂದು ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ ಮತ್ತು ಇದನ್ನು ’ಸುಶಾಸನ ದಿನ’ ಅಥವಾ ’ಉತ್ತಮ ಆಡಳಿತ ದಿನ” ವಾಗಿಯೂ ಆಚರಿಸಲಾಗುತ್ತದೆ ಎಂದರು.

 

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರ ಸರಕಾರವು ಉತ್ತಮ ಆಡಳಿತದ ಉದ್ದೇಶವನ್ನು ಅನುಸರಿಸುತ್ತಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಚಾರಿತ್ರಿಕ ಬೋಗಿಬೀಲ್  ರೈಲು ಮತ್ತು ರಸ್ತೆ ಸೇತುವೆ ಈ ಉದ್ದೇಶದ ಒಂದು ಸಂಕೇತ ಎಂದರು. ಈ ಸೇತುವೆ ಒಂದು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಅಚ್ಚರಿ , ಮತ್ತು ಇದು ಭಾರೀ ವ್ಯೂಹಾತ್ಮಕ ಮಹತ್ವವನ್ನು ಹೊಂದಿದೆ ಎಂದವರು ಹೇಳಿದರು. ಈ ಸೇತುವೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಿನ ದೂರವನ್ನು ಕಡಿಮೆ ಮಾಡುತ್ತದೆ , ಈ ಭಾಗದಲ್ಲಿ “ಜೀವಿಸುವ ಅವಕಾಶವನ್ನು”  ಉತ್ತಮಪಡಿಸುತ್ತದೆ ಎಂದೂ  ಪ್ರಧಾನ ಮಂತ್ರಿ ಅವರು ಹೇಳಿದರು. ಹಲವು ತಲೆಮಾರುಗಳಿಂದ ಈ ಸೇತುವೆ ಇಲ್ಲಿನ ಜನರ ಕನಸಾಗಿತ್ತು, ಅದೀಗ ನನಸಾಗಿದೆ . ಡೀಬ್ರುಗಢ ಈ ವಲಯದ ಆರೋಗ್ಯ ರಕ್ಷಣೆಯ, ಶಿಕ್ಷಣ ಮತ್ತು ವಾಣಿಜ್ಯ ಕೇಂದ್ರವಾಗಿದೆ  ಮತ್ತು ಬ್ರಹ್ಮಪುತ್ರಾ ಉತ್ತರ ದಂಡೆಯಲ್ಲಿ ವಾಸಿಸುವ ಜನರು ಈಗ ಈ ನಗರವನ್ನು ಹೆಚ್ಚು ಸುಲಭದಲ್ಲಿ ತಲುಪಬಹುದು  ಎಂದು ಪ್ರಧಾನಮಂತ್ರಿ ಹೇಳಿದರು.

 

ಈ ಸೇತುವೆ ನಿರ್ಮಾಣದಲ್ಲಿ ಭಾಗಿಯಾದ ಎಲ್ಲರನ್ನೂ ಪ್ರಧಾನಮಂತ್ರಿ ಅವರು ಅಭಿನಂದಿಸಿದರು.

 

 

2017 ರ ಮೇ ತಿಂಗಳಲ್ಲಿ ಅಸ್ಸಾಂನ ಸಾಡಿಯಾದಲ್ಲಿ ದೇಶದ ಅತ್ಯಂತ ಉದ್ದದ ರಸ್ತೆ ಸೇತುವೆ ಭುಪೇನ್ ಹಜಾರಿಕಾ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದನ್ನು ಪ್ರಧಾನಮಂತ್ರಿ ಅವರು ಸ್ಮರಿಸಿಕೊಂಡರು.

 

ಕಳೆದ 60-70  ವರ್ಷಗಳಲ್ಲಿ ಬ್ರಹ್ಮಪುತ್ರಾ ನದಿಗೆ ಬರೇ ಮೂರು ಸೇತುವೆಗಳನ್ನು ಕಟ್ಟಲಾಗಿತ್ತು, ಕಳೆದ ಬರೇ ನಾಲ್ಕುವರೆ ವರ್ಷಗಳಲ್ಲಿ ಇನ್ನೂ  ಮೂರು ಸೇತುವೆಗಳು ಪೂರ್ಣಗೊಂಡಿವೆ. ಮತ್ತೆ ಐದು ಸೇತುವೆಗಳು ಪ್ರಗತಿಯಲ್ಲಿವೆ ಎಂದವರು ಹೇಳಿದರು. ಬ್ರಹ್ಮಪುತ್ರಾದ ಉತ್ತರ ಮತ್ತು ದಕ್ಷಿಣ ದಂಡೆಗಳ ನಡುವೆ ಸಂಪರ್ಕ ಹೆಚ್ಚಳಗೊಂಡಿರುವುದು ಉತ್ತಮ ಆಡಳಿತದ ಒಂದಂಶ ಎಂದರು. ಈ ಅಭಿವೃದ್ಧಿಯ ಹಾದಿ ಈಶಾನ್ಯ ಭಾರತವನ್ನು ಪರಿವರ್ತಿಸಲಿದೆ ಎಂದೂ ಪ್ರಧಾನಮಂತ್ರಿ ಹೇಳಿದರು.

 

ಸಾರಿಗೆ ಮೂಲಕ ಪರಿವರ್ತನೆ ಎಂಬ ಕೇಂದ್ರ ಸರಕಾರದ ಚಿಂತನೆಯ ಬಗ್ಗೆ ಪ್ರಧಾನ ಮಂತ್ರಿ ಅವರು ಮಾತನಾಡಿದರು. ದೇಶದಲ್ಲೀಗ ಮೂಲಸೌಕರ್ಯಗಳು ತ್ವರಿತಗತಿಯಿಂದ ಬೆಳೆಯುತ್ತಿವೆ  ಎಂದು ಪ್ರಧಾನಮಂತ್ರಿ ಅವರು ನುಡಿದರು.

 

ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಅಸ್ಸಾಂ ರಾಜ್ಯ ಸರಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಕೊಂಡಾಡಿದರು. ನಾಲ್ಕೂವರೆ ವರ್ಷಗಳಲ್ಲಿ ಸುಮಾರು 700 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಲಾಗಿದೆ ಎಂದ ಅವರು ಈಶಾನ್ಯ ವಲಯದಲ್ಲಿಯ ಹಲವಾರು ಸಂಪರ್ಕ ಸಂಬಂಧಿ ಯೋಜನೆಗಳನ್ನು ಪ್ರಸ್ತಾಪಿಸಿದರು. ಬಲಿಷ್ಟ ಮತ್ತು ಪ್ರಗತಿಪರ ಪೂರ್ವ ಭಾರತ ಬಲಿಷ್ಟ ಮತ್ತು ಪ್ರಗತಿಪರ ಭಾರತಕ್ಕೆ ಕೀಲಿಕೈ ಎಂದು ಪ್ರಧಾನ ಮಂತ್ರಿ ಅವರು ಬಣ್ಣಿಸಿದರು. ಮೂಲಸೌಕರ್ಯಗಳ ಜೊತೆಗೆ ಪ್ರಧಾನ  ಮಂತ್ರಿ ಅವರು ಇತರ ಹಲವು ಉಪಕ್ರಮಗಳಾದ ಉಜ್ವಲಾ ಮತ್ತು ಸ್ವಚ್ಚ ಭಾರತ್ ಅಭಿಯಾನವನ್ನು ಪ್ರಸ್ತಾಪಿಸಿ ಇವುಗಳು ಅಸ್ಸಾಂನಲ್ಲಿ ಭಾರೀ ಪ್ರಗತಿ ಸಾಧಿಸಿವೆ ಎಂದರು.

 

ಇಂದು ದೇಶದ ಯುವಕರು , ಬಹಳ ದೂರ ಪ್ರದೇಶಗಳಿಂದ ಬಂದವರು ಭಾರತಕ್ಕೆ ಕೀರ್ತಿಯನ್ನು ತರುತ್ತಿದ್ದಾರೆ  ಎಂದು  ಪ್ರಧಾನ ಮಂತ್ರಿ ಅವರು ಹೇಳಿದರು. ಅಸ್ಸಾಂನ ಪ್ರಖ್ಯಾತ ಅಥ್ಲೀಟ್ ಹಿಮಾ ದಾಸ್ ಅವರನ್ನು ಪ್ರಧಾನಮಂತ್ರಿಗಳು ಪ್ರಸ್ತಾಪಿಸಿದರು. ಯುವಕರು ನವ ಭಾರತದ ಅತ್ಮವಿಶ್ವಾಸದ ಸಂಕೇತಗಳಾಗುತ್ತಿದ್ದಾರೆ ಎಂದರು.

 

 

ಭಾರತದ ಭವಿಷ್ಯದ ಆವಶ್ಯಕತೆಗಳಿಗಾಗಿ ಮೂಲಸೌಕರ್ಯಗಳನ್ನು ನಿರ್ಮಿಸಲು ಸರಕಾರ ಪ್ರಯತ್ನಗಳನ್ನು ಮಾಡುತ್ತಿದೆ ಎಂದೂ  ಪ್ರಧಾನಮಂತ್ರಿ ಅವರು ನುಡಿದರು.


(Release ID: 1557362) Visitor Counter : 142