ಪ್ರಧಾನ ಮಂತ್ರಿಯವರ ಕಛೇರಿ

ದೈನಿಕ್ ಜಾಗರಣ್ 75 ನೇ ವರ್ದಂತ್ಯುತ್ಸವದ ಸಂದರ್ಭ ಜಾಗರಣ್ ವೇದಿಕೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ 

Posted On: 07 DEC 2018 1:59PM by PIB Bengaluru

ದೈನಿಕ್ ಜಾಗರಣ್ 75 ನೇ ವರ್ದಂತ್ಯುತ್ಸವದ ಸಂದರ್ಭ ಜಾಗರಣ್ ವೇದಿಕೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಿಲ್ಲಿಯಲ್ಲಿ ದೈನಿಕ್ ಜಾಗರಣ್ ಸುದ್ದಿ ಪತ್ರಿಕೆಯ 75 ನೇ ವರ್ದಂತ್ಯುತ್ಸವದ ಸಂದರ್ಭ ಜಾಗರಣ್ ವೇದಿಕೆಯಲ್ಲಿ ಭಾಷಣ ಮಾಡಿದರು. 

ತಾಜ್ ಪ್ಯಾಲೇಸ್ ಹೊಟೇಲಿನಲ್ಲಿ ಗಣ್ಯರನ್ನು ಒಳಗೊಂಡ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಅವರು ದಿನ ನಿತ್ಯ ಪತ್ರಿಕೆಗಳನ್ನು ಹಂಚುವ ವಿತರಕರು ಸಹಿತ ಇತರರನ್ನು ವಿಶೇಷವಾಗಿ ಅಭಿನಂದಿಸಿದರು. ಪತ್ರಿಕಾ ವಿತರಕರು ದಿನನಿತ್ಯ ಮನೆ ಮನೆಗೆ ಪತ್ರಿಕೆಗಳು ತಲುಪುವಂತೆ ಮಾಡುವಲ್ಲಿ ಸಹಕಾರ ನೀಡಿದ್ದಾರೆ ಎಂದರು. 

ಜಾಗೃತಿ ಮೂಡಿಸುವಲ್ಲಿ ಮತ್ತು ರಾಷ್ಟ್ರದ ಪುನರ್ನಿರ್ಮಾಣದಲ್ಲಿ ದೈನಿಕ್ ಜಾಗರಣ್ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. ತನ್ನದೇ ಅನುಭವದ ಆಧಾರದಲ್ಲಿ ಹೇಳುವುದಾದರೆ ದೈನಿಕ್ ಜಾಗರಣ್ ದೇಶ ಮತ್ತು ಸಮಾಜದಲ್ಲಿ ಪರಿವರ್ತನೆ ತರುವಂತಹ ಆಂದೋಲನವನ್ನು ಬಲಪಡಿಸಿದೆ ಎಂದು ನುಡಿದ ಪ್ರಧಾನ ಮಂತ್ರಿಗಳು ಈ ನಿಟ್ಟಿನಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಮತ್ತು ಸ್ವಚ್ಚ ಭಾರತ ಅಭಿಯಾನವನ್ನು ಉಲ್ಲೇಖಿಸಿದರು. ಡಿಜಿಟಲ್ ಕ್ರಾಂತಿಯಿಂದಾಗಿ ಮಾಧ್ಯಮಗಳು ದೇಶವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದವರು ಅಭಿಪ್ರಾಯಪಟ್ಟರು. 

“ಕನಿಷ್ಟ ಸರಕಾರ, ಗರಿಷ್ಟ ಆಡಳಿತ” ವನ್ನು ಉಲ್ಲೇಖಿಸಿದ ಪ್ರಧಾನಿಗಳು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನವಭಾರತದ ಮೂಲ ಮಂತ್ರವಾಗಿರುತ್ತದೆ ಎಂದರು. ಇಂದು ಯುವಕರು ಅಭಿವೃದ್ದಿ ಪ್ರಕ್ರಿಯೆಯಲ್ಲಿ ತಾವೂ ಭಾಗೀದಾರರು ಎಂಬ ಭಾವನೆಯನ್ನು ಹೊಂದಿದ್ದಾರೆ ಎಂದೂ ಪ್ರಧಾನಿಯವರು ನುಡಿದರು. 

ಸ್ವಾತಂತ್ರ್ಯಾನಂತರದ ಇಷ್ಟು ದಶಕಗಳ ಅವಧಿ ಕಳೆದರೂ ನಮ್ಮ ದೇಶ ಯಾಕೆ ಹಿಂದುಳಿದಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟ ಪ್ರಧಾನ ಮಂತ್ರಿಗಳು , ನಮ್ಮ ಜನರ ಸಮಸ್ಯೆಗಳು ಯಾಕೆ ಪರಿಹಾರ ಕಾಣಲಿಲ್ಲ ಎಂದೂ ಪ್ರಶ್ನಿಸಿದರು. ಕಳೆದ 70 ವರ್ಷಗಳಲ್ಲಿ ತಲುಪದ ಸ್ಥಳಗಳಿಗೆ ಈಗ ವಿದ್ಯುತ್ ತಲುಪುತ್ತಿದೆ. ಮತ್ತು ರೈಲ್ವೇ ಸಂಪರ್ಕದಿಂದ ವಂಚಿತವಾಗಿದ್ದ ರಾಜ್ಯಗಳು ರೈಲ್ವೇ ನಕಾಶೆಯಲ್ಲಿ ಸ್ಥಾನ ಪಡೆದಿವೆ ಎಂದವರು ಹೇಳಿದರು. 

ಸರಣಿ ಹೋಲಿಕೆಗಳನ್ನು ಪ್ರಧಾನ ಮಂತ್ರಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಸ್ವಾತಂತ್ರ್ಯಾನಂತರದ 67 ವರ್ಷಗಳ ಅವಧಿಯನ್ನು (2014ರವರೆಗೆ ) ತಮ್ಮ ಅಧಿಕಾರದ ನಾಲ್ಕು ವರ್ಷಗಳ (2014-2018 ) ಅವಧಿಗೆ ಅವರು ತುಲನೆ ಮಾಡಿದರು. 

ಈ ಅವಧಿಯಲ್ಲಿ ಗ್ರಾಮೀಣ ಮನೆಗಳಲ್ಲಿ ಶೌಚಾಲಯದ ಪ್ರಮಾಣ 38 ಪ್ರತಿಶತ ಇದ್ದದ್ದು 95 ಪ್ರತಿಶತಕ್ಕೇರಿದೆ ಗ್ರಾಮೀಣ ರಸ್ತೆ ಸಂಪರ್ಕ ಪ್ರಮಾಣ 55 ಪ್ರತಿಶತ ಇದ್ದದ್ದು 90 ಪ್ರತಿಶತಕ್ಕೇರಿದೆ ಎಂದವರು ಅಂಕಿ ಅಂಶ ನೀಡಿದರು. 

ಅಡುಗೆ ಅನಿಲ ಸಂಪರ್ಕ ಒಟ್ಟು ಮನೆಗಳ ಸಂಖ್ಯೆಗೆ ಹೋಲಿಸಿದಾಗ 55 ಪ್ರತಿಶತ ಇದ್ದುದು ಈಗ 90 ಪ್ರತಿಶತಕ್ಕೇರಿದೆ. 

ಗ್ರಾಮೀಣ ಪ್ರದೇಶದ ಪ್ರತಿಶತ 95 ಕುಟುಂಬಗಳಿಗೆ ವಿದ್ಯುತ್ ತಲುಪಿದೆ. ನಾಲ್ಕು ವರ್ಷಗಳ ಹಿಂದೆ ಈ ಪ್ರಮಾಣ 70 ಪ್ರತಿಶತದಷ್ಟಿತ್ತು. 

ನಾಲ್ಕು ವರ್ಷಗಳ ಹಿಂದೆ 50 ಪ್ರತಿಶತದಷ್ಟು ಜನತೆ ಬ್ಯಾಂಕ್ ಖಾತೆ ಹೊಂದಿದ್ದರು, ಈಗ ಬಹುತೇಕ ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗುತ್ತಿವೆ. 

2014ರಲ್ಲಿ ಬರೇ ನಾಲ್ಕು ಕೋಟಿ ಜನರು ಮಾತ್ರವೇ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದರು. ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ಮತ್ತೆ ಮೂರು ಕೋಟಿ ಜನರು ತೆರಿಗೆ ಜಾಲಕ್ಕೆ ಸೇರ್ಪಡೆಯಾದರು. 

ಇತರ ಎಲ್ಲಾ ಸಂಗತಿಗಳೂ ಹಾಗೆಯೇ ಉಳಿದಿದ್ದರೆ ಈ ಬದಲಾವಣೆ ಹೇಗೆ ಸಾಧ್ಯವಾಗುತ್ತಿತ್ತು ? , ಎಂದು ಪ್ರಧಾನ ಮಂತ್ರಿಯವರು ಪ್ರಶ್ನಿಸಿದರು. 

ಬಡವರು ಮತ್ತು ಅನುಕೂಲತೆಗಳಿಲ್ಲದವರು ಮೂಲ ಸೌಲಭ್ಯಗಳನ್ನು ಗಳಿಸಿಕೊಂಡರೆ , ಆಗ ಅವರು ತಾವಾಗಿಯೇ ಬಡತನವನ್ನು ಹಿಮ್ಮೆಟ್ಟಿಸುತ್ತಾರೆ ಎಂದು ನುಡಿದ ಪ್ರಧಾನ ಮಂತ್ರಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಈ ಪರಿವರ್ತನೆ ಕಾಣಸಿಗುತ್ತಿದೆ ಮತ್ತು ಅಂಕಿ ಅಂಶಗಳು ಅದನ್ನು ಸಾಬೀತು ಮಾಡಿವೆ ಎಂದರು. 

ಜನರ ಆಶೋತ್ತರಗಳನ್ನು ಈಡೇರಿಸಲು ಸರಕಾರ ಆಸಕ್ತವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ ಪ್ರಧಾನ ಮಂತ್ರಿ ಅವರು, ಭಾರತವು ತಂತ್ರಜ್ಞಾನವನ್ನು ಬಳಸಿಕೊಂಡ ಪರಿ ಅಭಿವೃದ್ದಿಶೀಲ ದೇಶಗಳಿಗೆ ಮಾದರಿಯಾಗಿದೆ ಎಂದೂ ಹೇಳಿದರು. ತಂತ್ರಜ್ಞಾನ ಮತ್ತು ಮಾನವ ಸೂಕ್ಷ್ಮತೆಗಳ ಸಮ್ಮಿಳನ “ಜೀವಿಸಲು ಉತ್ತಮ ಅವಕಾಶಗಳನ್ನು” ಖಾತ್ರಿಪಡಿಸುತ್ತಿದೆ ಎಂದ ಪ್ರಧಾನ ಮಂತ್ರಿಗಳು ಜಲ ಮಾರ್ಗ ಮತ್ತು ವಾಯು ಯಾನ ಕ್ಷೇತ್ರದಲ್ಲಿ ಮಾಡಲಾದ ದಾಪುಗಾಲಿನ ಸಾಧನೆಗಳನ್ನು ಉದಾಹರಿಸಿದರು. ಅಡುಗೆ ಅನಿಲ ಸಿಲಿಂಡರುಗಳ ಮರು ಪೂರಣ ಅವಧಿಯಲ್ಲಾದ ಕಡಿತ, ಆದಾಯ ತೆರಿಗೆ ಮರುಪಾವತಿಗೆ ಸಂಬಂಧಿಸಿದಂತೆ ಕಾಯುವಿಕೆ ಅವಧಿಯ ಕಡಿತ, ಪಾಸ್ ಪೋರ್ಟ್ ಇತ್ಯಾದಿಗಳಿಗೆ ಅನುಗುಣವಾಗಿ ಕಾಯುವ ಅವಧಿಯ ಕಡಿತಗಳನ್ನು ಪ್ರಧಾನಿಯವರು ಪ್ರಸ್ತಾಪಿಸಿದರು. ಪ್ರಧಾನ ಮಂತ್ರಿ ಆವಾಸ್ ಯೋಜನಾ , ಉಜ್ವಲಾ, ಸೌಭಾಗ್ಯ ಇತ್ಯಾದಿ ಯೋಜನೆಗಳ ಮೂಲಕ ಅದರ ಪ್ರಯೋಜನದ ಅವಶ್ಯಕತೆ ಇರುವ ಜನರ ಬಳಿಗೆ ಸರಕಾರವೇ ಹೋಗುತ್ತಿದೆ ಎಂದು ಹೇಳಿದ ಪ್ರಧಾನ ಮಂತ್ರಿಗಳು ಆಯುಷ್ಮಾನ ಭಾರತ್ ಯೋಜನಾವನ್ನೂ ಪ್ರಸ್ತಾಪಿಸಿದರು. 

ಇಂತಹ ಯೋಜನೆಗಳ ಫಲಾನುಭವಿಗಳು ಕಾರ್ಮಿಕರು, ಕೆಲಸಗಾರರು, ರೈತರು ಮತ್ತು ಇತರರು ಆಗಿದ್ದಾರೆ. ಬಡವರನ್ನು ಸಶಕ್ತರನ್ನಾಗಿಸುವ ಈ ಆಂದೋಲನ ಇನ್ನೂ ಮುಂದುವರಿಯಲಿದೆ ಎಂದು ನುಡಿದ ಪ್ರಧಾನ ಮಂತ್ರಿ ಅವರು ಭಾರತದ ಪ್ರಗತಿಯ ಬಗ್ಗೆ ವಿಶ್ವ ಕೂಡಾ ಗಮನವಿಟ್ಟು ನೋಡುತ್ತಿದೆ ಎಂದರು. 

ಆರ್ಥಿಕ ಅಪರಾಧಿಗಳು ಇತರೆಡೆಗಳಲ್ಲಿ ಸುರಕ್ಷಿತ ಧಾಮಗಳನ್ನು ಹೊಂದದಿರುವುದನ್ನು ಖಾತ್ರಿಪಡಿಸಲು ಭಾರತವು ಅಂತಾರಾಷ್ಟ್ರೀಯ ಸಮುದಾಯದೆದುರು ಕೆಲವು ಪ್ರಸ್ತಾಪಗಳನ್ನಿರಿಸಿದೆ ಎಂದೂ ಪ್ರಧಾನ ಮಂತ್ರಿ ಅವರು ತಿಳಿಸಿದರು. 



(Release ID: 1555503) Visitor Counter : 55