ಪ್ರಧಾನ ಮಂತ್ರಿಯವರ ಕಛೇರಿ

ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಸಲಹಾ ಮಂಡಳಿಯ (ಪಿ.ಎಮ್.-ಎಸ್.ಟಿ.ಐ.ಎ.ಸಿ.) ಸದಸ್ಯರೊಂದಿಗೆ ಪ್ರಧಾನಮಂತ್ರಿ ಅವರು ಸಂವಾದ ನಡೆಸಿದರು

Posted On: 13 NOV 2018 2:40PM by PIB Bengaluru

ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಸಲಹಾ ಮಂಡಳಿಯ (ಪಿ.ಎಮ್.-ಎಸ್.ಟಿ.ಐ.ಎ.ಸಿ.) ಸದಸ್ಯರೊಂದಿಗೆ ಪ್ರಧಾನಮಂತ್ರಿ ಅವರು ಸಂವಾದ ನಡೆಸಿದರು

 

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಸಲಹಾ ಮಂಡಳಿಯ (ಪಿ.ಎಮ್.-ಎಸ್.ಟಿ.ಐ.ಎ.ಸಿ.) ಸದಸ್ಯರನ್ನು ಭೇಟಿಯಾದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು. ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆಗಳಿಗೆ ಸಂಬಂಧಿತ ಎಲ್ಲಾ ವಿಷಯಗಳಲ್ಲಿ ಸಲಹೆ ನೀಡುವುದು ಹಾಗೂ ಈ ವಿಷಯಗಳಲ್ಲಿ ಪ್ರಧಾನಮಂತ್ರಿ ಅವರ ಸಂಕಲ್ಪ ಯೋಜನೆಗಳ   ಅನುಷ್ಠಾನವನ್ನು ಪರಿವೀಕ್ಷಿಸುವ  ಕಾರ್ಯವನ್ನು  ಮಂಡಳಿ ನಿರ್ವಹಿಸುತ್ತದೆ. 

 

ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳ ಪ್ರೋತ್ಸಾಹಕ್ಕಾಗಿ ಕೈಗೊಂಡ ವಿವಿಧ ಕಾರ್ಯಯೋಜನೆಗಳ ಮಾಹಿತಿಯನ್ನು ಮಂಡಳಿಯ ಸದಸ್ಯರು ಪ್ರಧಾನಮಂತ್ರಿ ಅವರಿಗೆ ವಿವರಿಸಿದರು.    

 

ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಫಲ  ಜನಸಾಮಾನ್ಯರಿಗೆ ತಲುಪಿ  ದೈನಂದಿನ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ಭಾರತದ ಜನರಿಗೆ ಸರಳ ಜೀವನ ಸಾಗಿಸಲು ಅವಕಾಶ ಲಭ್ಯವಾಗುವಂತೆ ಮಾಡಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು(ಆರ್&ಡಿ), ಕೈಗಾರಿಕೋದ್ಯಮಗಳು ಮತ್ತು ಸರಕಾರದ ವಿವಿಧ ಇಲಾಖೆಗಳ ನಡುವೆ   ಬಲಿಷ್ಠ ಸಂಪರ್ಕಕೊಂಡಿಯನ್ನು ಬೆಳೆಸುವ ನಿಟ್ಟಿನಲ್ಲಿ ಮಂಡಳಿಯ ಸದಸ್ಯರು ಶ್ರಮವಹಿಸಬೇಕು ಎಂದು ಪ್ರಧಾನಮಂತ್ರಿ ಒತ್ತಾಯಿಸಿದರು. ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಅಂತರಗಳನ್ನು ತೊಡೆದುಹಾಕುವ ಅಗತ್ಯತೆಯನ್ನು ಪ್ರಧಾನಮಂತ್ರಿ  ಈ ಸಂದರ್ಭದಲ್ಲಿ ಪುನರುಚ್ಛರಿಸಿದರು.

 

ಶಾಲಾ ವಿದ್ಯಾರ್ಥಿಗಳಲ್ಲಿರುವ ವೈಜ್ಞಾನಿಕ ಪ್ರತಿಭೆಗಳನ್ನು ಗುರುತಿಸುವ ವ್ಯವಸ್ಥೆ ಮತ್ತು ಪೋಷಿಸುವ ಸೂಕ್ತ ವೇದಿಕೆಗಳನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಜಿಲ್ಲಾ ಮತ್ತು ಪ್ರಾದೇಶಿಕ ಮಟ್ಟದ ಅಟಲ್ ಥಿಂಕರಿಂಗ್ ಲ್ಯಾಬ್ ಗಳಿಗೆ ಅವುಗಳನ್ನು ಜೋಡಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಕೃಷಿ ಆದಾಯ ಏರಿಕೆ, ಸಿಕ್ಲ್ ಸೆಲ್ ಅನೀಮಿಯ ಮುಂತಾದ ದೀರ್ಘಕಾಲಿಕ ಮತ್ತು ಅನುವಂಶಿಕ ರೋಗಗಳಿಗೆ ಪರಿಹಾರ, ತ್ಯಾಜ್ಯ ನಿರ್ವಹಣೆ ಮತ್ತು ಸೈಬರ್ ಸುರಕ್ಷತೆ ಮೊದಲಾದ ಆದ್ಯತೆಯ ಸಂಶೋಧನಾ ಕ್ಷೇತ್ರಗಳನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. 

 

ಪ್ರಧಾನಮಂತ್ರಿ ಅವರ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಕೆ. ವಿಜಯರಾಘವನ್ , ಮಂಡಳಿಯ ಸದಸ್ಯರು ಮತ್ತು ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.  



(Release ID: 1552679) Visitor Counter : 63