ಪ್ರಧಾನ ಮಂತ್ರಿಯವರ ಕಛೇರಿ

ಇಂದೋರ್ ನಲ್ಲಿ ಇಮಾಮ್ ಹುಸೇನ್ (ಎಸ್.ಎ.) ಹುತಾತ್ಮರ ಸ್ಮರಣೆ – ಅಶಾರ ಮುಬಾರಕದಲ್ಲಿ ಪ್ರಧಾನಮಂತ್ರಿ ಭಾಗಿ; ಸಭಿಕರನ್ನುದ್ದೇಶಿಸಿ ಭಾಷಣ 

Posted On: 14 SEP 2018 2:59PM by PIB Bengaluru

ಇಂದೋರ್ ನಲ್ಲಿ ಇಮಾಮ್ ಹುಸೇನ್ (ಎಸ್.ಎ.) ಹುತಾತ್ಮರ ಸ್ಮರಣೆ – ಅಶಾರ ಮುಬಾರಕದಲ್ಲಿ ಪ್ರಧಾನಮಂತ್ರಿ ಭಾಗಿ; ಸಭಿಕರನ್ನುದ್ದೇಶಿಸಿ ಭಾಷಣ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದೋರ್ ನಲ್ಲಿಂದು ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ - ಅಶಾರ ಮುಬಾರಕ್ ನಲ್ಲಿ ದಾವೂದಿ ಬೋಹ್ರಾದ ಬೃಹತ್ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು. 

ಇಮಾಮ್ ಹುಸೇನ್ ಅವರ ತ್ಯಾಗವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಇಮಾಮ್ ಅವರು ಸದಾ ಅನ್ಯಾಯದ ವಿರುದ್ಧ ನಿಲ್ಲುತ್ತಿದ್ದರು ಮತ್ತು ಶಾಂತಿ ಹಾಗೂ ನ್ಯಾಯವನ್ನು ಉಳಿಸಲು ಹುತಾತ್ಮರಾದರೆಂದರು. ಇಮಾಮ್ ಅವರ ಬೋಧನೆಗಳು ಇಂದಿಗೂ ಪ್ರಸ್ತುತ ಎಂದೂ ಅವರು ಹೇಳಿದರು. ಡಾ. ಸ್ಯೆದ್ನಾ ಮುಫದ್ದಲ್ ಸೈಫುದ್ದೀನ್ ಅವರು ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ದೇಶದ ಬಗೆಗಿನ ಪ್ರೇಮ ಮತ್ತು ಸಮರ್ಪಣಾ ಮನೋಭಾವ ಅವರ ಬೋಧನೆಯ ಮುಖ್ಯ ಲಕ್ಷಣವೆಂದರು. 

ಪ್ರತಿಯೊಬ್ಬರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಭಾರತದ ಸಂಸ್ಕೃತಿಯು ಭಾರತವನ್ನು ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿ ರೂಪಿಸಿದೆ ಎಂದರು. “ ನಾವು ನಮ್ಮ ಭೂತಕಾಲದ ಬಗ್ಗೆ ಹೆಮ್ಮೆ ಪಡುತ್ತೇವೆ, ವರ್ತಮಾನದ ಬಗ್ಗೆ ನಂಬಿಕೆ ಇಟ್ಟಿದ್ದೇವೆ ಹಾಗೂ ಉಜ್ವಲ ಭವಿಷ್ಯದ ಬಗ್ಗೆ ವಿಶ್ವಾಸ ಹೊಂದಿದ್ದೇವೆ" ಎಂದೂ ಹೇಳಿದರು. 

ದಾವೂದಿ ಬೋಹ್ರಾ ಸಮುದಾಯದ ಕೊಡುಗೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದ ಪ್ರಗತಿ ಮತ್ತು ಅಭಿವೃದ್ಧಿಯ ಗಾಥೆಯಲ್ಲಿ ಈ ಸಮುದಾಯ ಸದಾ ಮಹತ್ವದ ಪಾತ್ರ ನಿರ್ವಹಿಸಿದೆ ಎಂದರು. ವಿಶ್ವಾದ್ಯಂತ ಭಾರತದ ಸಾಂಸ್ಕೃತಿಕ ಬಲವನ್ನು ಪಸರಿಸುವ ಮಹತ್ವದ ಕಾರ್ಯವನ್ನು ಸಮುದಾಯ ಮುಂದುವರಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. 

ಬೋಹ್ರಾ ಸಮುದಾಯವನ್ನು ಹೊಗಳಿದ ಪ್ರಧಾನಮಂತ್ರಿ ಮೋದಿ ಅವರು, ಬೋಹ್ರಾ ಸಮುದಾಯದ ವಾತ್ಸಲ್ಯ ದೊರೆತಿರುವುದು ತಮ್ಮ ಸೌಭಾಗ್ಯ ಎಂದರು. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಮುದಾಯ ನೀಡಿದ ಸಹಾಯವನ್ನು ಸ್ಮರಿಸಿದ ಅವರು, ಸಮುದಾಯದ ವಾತ್ಸಾಲ್ಯ ತಮ್ಮನ್ನು ಇಂದೋರ್ ಗೆ ಕರೆತಂದಿದೆ ಎಂದು ಹೇಳಿದರು. 

ದಾವೂದಿ ಬೋಹ್ರಾ ಸಮುದಾಯದ ವಿವಿಧ ಸಾಮಾಜಿಕ ಉಪಕ್ರಮಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ದೇಶದ ಪ್ರಜೆಗಳ ಅದರಲ್ಲೂ ಬಡವರು ಮತ್ತು ಕಡುಬಡವರ ಜೀವನ ಮಟ್ಟ ಸುಧಾರಣೆಗೆ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳ ಕುರಿತು ತಿಳಿಸಿದರು. ಈ ನಿಟ್ಟಿನಲ್ಲಿ ಅವರು ಸರ್ಕಾರದ ವಿವಿಧ ಅಭಿವೃದ್ಧಿ ಪರವಾದ ಉಪಕ್ರಮಗಳಾದ ಆಯುಷ್ಮಾನ್ ಭಾರತ, ಸ್ವಚ್ಛ ಭಾರತ ಅಭಿಯಾನ ಮತ್ತು ಪ್ರಧಾನಮಂತ್ರಿ ಆವಾಜ್ ಯೋಜನೆಯ ಪ್ರಸ್ತಾಪ ಮಾಡಿದರು. ಈ ಉಪಕ್ರಮಗಳು ಶ್ರೀಸಾಮಾನ್ಯರ ಜೀವನವನ್ನು ಬದಲಾಯಿಸುತ್ತಿವೆ ಎಂದರು. 

ಸ್ವಚ್ಛ ಭಾರತ ಅಭಿಯಾನವನ್ನು ಮುಂದುವರಿಸುತ್ತಿರುವ ಇಂದೋರ್ ಜನತೆಯನ್ನು ಪ್ರಧಾನಮಂತ್ರಿ ಅಭಿನಂದಿಸಿದರು. ಸ್ವಚ್ಛತೆಯೇ ಸೇವೆ ಯೋಜನೆಯನ್ನು ನಾಳೆ ಆರಂಭಿಸಲಾಗುತ್ತಿದ್ದು, ಈ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗಿಯವಾಗವಂತೆ ನಾಗರಿಕರಿಗೆ ಮನವಿ ಮಾಡಿದರು. 

ಬೋಹ್ರಾ ಸಮುದಾಯದ ವ್ಯಾಪಾರಿಗಳು ತೋರಿದ ಪ್ರಾಮಾಣಿಕತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ಕಾರ ಪ್ರಾಮಾಣಿಕ ವಾಣಿಜ್ಯೋದ್ಯಮಿಗಳು ಮತ್ತು ಕಾರ್ಯಕರ್ತರನ್ನು ಜಿ.ಎಸ್.ಟಿ., ದಿವಾಳಿ ಮತ್ತು ದಿವಾಳಿತನ ಸಂಹಿತೆ ಮೂಲಕ ಉತ್ತೇಜಿಸುತ್ತಿದೆ ಎಂದರು. ಭಾರತದ ಆರ್ಥಿಕತೆ ಬೆಳೆಯುತ್ತಿದೆ ಎಂದ ಅವರು, ನವ ಭಾರತ ದಿಗಂತದಲ್ಲಿದೆ ಎಂದು ಪುನರುಚ್ಚರಿಸಿದರು. 

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚವ್ಹಾಣ್ ಅವರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಡಾ. ಸ್ಯೆದ್ನಾ ಮುಫದ್ದಲ್ ಸೈಫುದ್ದೀನ್ ಅವರು ಪ್ರಧಾನಮಂತ್ರಿಯವರ ಅನುಕರಣೀಯ ಸೇವೆಯನ್ನು ಶ್ಲಾಘಿಸಿ, ದೇಶಕ್ಕಾಗಿ ಮಾಡುತ್ತಿರುವ ಸೇವೆಗೆ ಯಶಸ್ಸು ಸಿಗಲೆಂದು ಹಾರೈಸಿದರು. 
 

*****



(Release ID: 1546358) Visitor Counter : 60