ಪ್ರಧಾನ ಮಂತ್ರಿಯವರ ಕಛೇರಿ

ಇಂಡಿಯಾ ಪೋಸ್ಟ್ ಪಾವತಿ ಬ್ಯಾಂಕಿಗೆ ಪ್ರಧಾನ ಮಂತ್ರಿ ಅವರಿಂದ ಚಾಲನೆ-ಹಣಕಾಸು ಸೇರ್ಪಡೆಯತ್ತ ಪ್ರಮುಖ ಉಪಕ್ರಮ 

Posted On: 01 SEP 2018 5:56PM by PIB Bengaluru

ಇಂಡಿಯಾ ಪೋಸ್ಟ್ ಪಾವತಿ ಬ್ಯಾಂಕಿಗೆ ಪ್ರಧಾನ ಮಂತ್ರಿ ಅವರಿಂದ ಚಾಲನೆ-ಹಣಕಾಸು ಸೇರ್ಪಡೆಯತ್ತ ಪ್ರಮುಖ ಉಪಕ್ರಮ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ತಲ್ಕತೋರಾ ಕ್ರೀಡಾಂಗಣದಲ್ಲಿ ಇಂಡಿಯಾ ಪೋಸ್ಟ್ ಪಾವತಿ ಬ್ಯಾಂಕ್ (ಐ.ಪಿ.ಪಿ.ಬಿ.) ನ್ನು ಕಾರ್ಯಾರಂಭಗೊಳಿಸಿದರು. ದಿಲ್ಲಿಯ ಮುಖ್ಯ ಕಾರ್ಯಕ್ರಮದೊಂದಿಗೆ ಜೋಡಿಸಲ್ಪಟ್ಟ ದೇಶದ 3000 ಕ್ಕೂ ಅಧಿಕ ಸ್ಥಳಗಳಲ್ಲಿ ಈ ಕಾರ್ಯಕ್ರಮವನ್ನು ಸಾಕ್ಷೀಕರಿಸಲಾಯಿತು. 

ಈ ಸಂಧರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಇಂಡಿಯಾ ಪೋಸ್ಟ್ ಪಾವತಿ ಬ್ಯಾಂಕ್ ಮೂಲಕ ದೇಶದ ಅತ್ಯಂತ ದೂರದ, ದುರ್ಗಮ ಪ್ರದೇಶಗಳಿಗೆ ಮತ್ತು ಅಲ್ಲಿ ವಾಸಿಸುತ್ತಿರುವ ಜನತೆಗೆ ಬ್ಯಾಂಕಿಂಗ್ ಸೇವೆ ಅನುಕೂಲಕರವಾಗಿ ಒದಗಿ ಬರಲಿದೆ ಎಂದರು. 

ಈ ಮೊದಲು ಜನ ಧನ ಯೋಜನೆಯನ್ನು ವಿತ್ತೀಯ ಸೇರ್ಪಡೆಗಾಗಿ ಜಾರಿಗೆ ತರಲಾಯಿತು ಎಂಬುದನ್ನು ಪ್ರಧಾನ ಮಂತ್ರಿ ಅವರು ಸ್ಮರಿಸಿಕೊಂಡರು. ಇಂದು ಐ.ಪಿ.ಪಿ.ಬಿ.ಯನ್ನು ಆರಂಭಿಸುವ ಮೂಲಕ ಈ ನಿಟ್ಟಿನ ಉದ್ದೇಶ ಸಾಧನೆಗೆ ಇನ್ನೊಂದು ಹೆಜ್ಜೆಯನ್ನಿಟ್ಟಂತಾಗಿದೆ ಎಂದರು. ಇಂದು 650 ಜಿಲ್ಲೆಗಳಲ್ಲಿ ಐ.ಪಿ.ಪಿ.ಬಿ. ಶಾಖೆಗಳನ್ನು ತೆರೆಯಲಾಗಿದೆ ಎಂದೂ ಅವರು ಹೇಳಿದರು. 

ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಪೋಸ್ಟ್ ಮ್ಯಾನ್ ಗಳು ಬಹಳ ಹಿಂದಿನಿಂದಲೂ ಅತ್ಯಂತ ಗೌರವಾರ್ಹ ಮತ್ತು ಆದರಣೀಯ ವ್ಯಕ್ತಿಯಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಂದ ಬಳಿಕವೂ ಅಂಚೆ ಪಾಲಕರ ಮೇಲಿನ ನಂಬಿಕೆ ಹಾಗೆಯೇ ಉಳಿದಿದೆ. ಈಗಿರುವ ರಚನೆ ಮತ್ತು ಚೌಕಟ್ಟನ್ನು ಸುಧಾರಿಸಬೇಕೆನ್ನುವುದು ಸರಕಾರದ ಧೋರಣೆಯಾಗಿದೆ ಮತ್ತು ಅದರಿಂದಾಗಿ ಬದಲಾದ ಕಾಲಕ್ಕೆ ಅನುಗುಣವಾಗಿ ಅವರನ್ನು ಪರಿವರ್ತಿಸಲಾಗುತ್ತದೆ ಎಂದವರು ಹೇಳಿದರು. ದೇಶದಲ್ಲಿ 1.5 ಲಕ್ಷಕ್ಕೂ ಅಧಿಕ ಅಂಚೆ ಕಚೇರಿಗಳಿವೆ ಮತ್ತು 3 ಲಕ್ಷಕ್ಕೂ ಅಧಿಕ ಅಂಚೆ ಪಾಲಕರು ಅಥವಾ “ ಗ್ರಾಮೀಣ ಡಾಕ್ ಸೇವಕರು” ಇದ್ದಾರೆ, ಅವರು ಜನರ ಸಂಪರ್ಕ ಹೊಂದಿದ್ದಾರೆ. ಈಗ ಅವರನ್ನು ಹಣಕಾಸು ಸೇವೆ ಒದಗಿಸಲು ಅನುಕೂಲವಾಗುವಂತೆ ಸ್ಮಾರ್ಟ್ ಫೋನ್ ಮತ್ತು ಡಿಜಿಟಲ್ ಯಂತ್ರೋಪಕರಣಗಳ ಮೂಲಕ ಸಶಕ್ತರನ್ನಾಗಿಸಲಾಗಿದೆ ಎಂದರು.

ಐ.ಪಿ.ಪಿ.ಬಿ. ಯ ಪ್ರಯೋಜನಗಳನ್ನು ವಿವರಿಸಿದ ಅವರು ಇದರಿಂದ ಹಣ ವರ್ಗಾವಣೆ, ಸರಕಾರಿ ಸವಲತ್ತುಗಳ ವರ್ಗಾವಣೆ , ಬಿಲ್ ಪಾವತಿ ಮತ್ತು ಇತರ ಸವಲತ್ತುಗಳಾದ ಹೂಡಿಕೆ ಹಾಗು ವಿಮಾ ಸವಲತ್ತುಗಳು ದೊರೆಯುತ್ತವೆ ಎಂದರು. ಅಂಚೆ ಪಾಲಕರು ಈ ಸವಲತ್ತುಗಳನ್ನು ಮನೆಬಾಗಿಲಿಗೆ ತಲುಪಿಸುತ್ತಾರೆ. ಐ.ಪಿ.ಪಿ.ಬಿ. ಡಿಜಿಟಲ್ ವ್ಯವಹಾರಕ್ಕೂ ಅವಕಾಶ ಒದಗಿಸುತ್ತದೆ ಮತ್ತು ರೈತರಿಗೆ ನೆರವಾಗುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಾದಂತಹ ಯೋಜನೆಗಳ ಲಾಭಗಳನ್ನು ವಿತರಿಸಲು ಸಹಾಯ ಮಾಡಲಿದೆ ಎಂದವರು ಹೇಳಿದರು. 

ಯದ್ವಾ ತದ್ವಾ ಸಾಲ ವಿತರಣೆಯಿಂದ ಬ್ಯಾಂಕಿಂಗ್ ವಲಯದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಮತ್ತು ಅವ್ಯವಸ್ಥೆಗಳನ್ನು 2014 ರ ಬಳಿಕ ಕೇಂದ್ರ ಸರಕಾರವು ದೃಢವಾಗಿ ಎದುರಿಸುತ್ತಿದೆ ಮತ್ತು ಕ್ರಮ ವಹಿಸುತ್ತಿದೆ ಎಂದ ಪ್ರಧಾನಿಯವರು , ಹಾಲಿ ಇರುವ ಸಾಲಗಳನ್ನು ಪುನರ್ವಿಮರ್ಶೆ ಮಾಡಲಾಗುತ್ತಿದೆ ಮತ್ತು ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿ ವೃತ್ತಿಪರ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದರು. ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ವಿಧೇಯಕದಂತಹ ಕ್ರಮಗಳ ಮೂಲಕ ತಪ್ಪಿತಸ್ಥರನ್ನು ಶಿಕ್ಷಿಸುವುದನ್ನು ಖಾತ್ರಿಪಡಿಸಲಾಗುತ್ತಿದೆ. ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. 

ಸ್ವದ್ಯೋಗದ ಅವಕಾಶಗಳನ್ನು ಸೃಷ್ಟಿ ಮಾಡಲು ಬಡವರು, ಮಧ್ಯಮ ವರ್ಗದವರಿಗೆ ಮುದ್ರಾ ಯೋಜನೆ ಅಡಿಯಲ್ಲಿ 13 ಲಕ್ಷ ಕೋ.ರೂ.ಗಳ ಮೊತ್ತದ ಸಾಲವನ್ನು ವಿತರಿಸಲಾಗಿದೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. ಇಂದು ಭಾರತ ಹಿಂದೆಂದೂ ಇಲ್ಲದ ಅತ್ಯುತ್ತಮ ಸಾಧನೆಯನ್ನು ಏಶ್ಯನ್ ಗೇಮ್ಸ್ ನಲ್ಲಿ ತೋರಿಸಿದೆ ಮತ್ತು ಆರ್ಥಿಕತೆ ಅತ್ಯುತ್ತಮ ಬೆಳವಣಿಗೆಯ ಅಂಕಿಗಳನ್ನು ತೋರಿಸುತ್ತಿದೆ, ಇಡೀ ದೇಶ ಹೊಸ ಆತ್ಮ ವಿಶ್ವಾಸದಿಂದ ನಳನಳಿಸುತ್ತಿದೆ. ಇದು ಜನತೆಯ ಸಾಮೂಹಿಕ ಪ್ರಯತ್ನದ ಫಲ ಎಂದು ಪ್ರಧಾನ ಮಂತ್ರಿ ಅವರು ಬಣ್ಣಿಸಿದರು. ಇಂದು ಭಾರತ ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವುದು ಮಾತ್ರವಲ್ಲ, ಅತ್ಯಂತ ತ್ವರಿತವಾಗಿ ಬಡತನವನ್ನೂ ನಿರ್ಮೂಲನ ಮಾಡುವ ರಾಷ್ಟ್ರವಾಗಿದೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. 

3 ಲಕ್ಷ “ಡಾಕ್ ಸೇವಕರು” ಗ್ರಾಮಗಳಲ್ಲಿರುವ ಪ್ರತೀ ಮನೆಗಳಿಗೆ, ಪ್ರತೀ ರೈತರಿಗೆ, ಮತ್ತು ಪ್ರತೀ ಸಣ್ಣ ಉದ್ಯಮಗಳಿಗೆ ಹಣಕಾಸು ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಅವರು ಅಭಿಪ್ರಾಯಪಟ್ಟರು. ಇತ್ತೀಚಿನ ತಿಂಗಳುಗಳಲ್ಲಿ “ಡಾಕ್ ಸೇವಕರ” ಅಭ್ಯುದಯಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಅವರ ಧೀರ್ಘ ಕಾಲೀನ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಲಾಗಿದೆ. ಇದರಿಂದ ಅವರ ವೇತನಗಳಲ್ಲಿ ಸಾಕಷ್ಟು ಹೆಚ್ಚಳವಾಗಿದೆ ಎಂದು ಪ್ರಧಾನ ಮಂತ್ರಿ ಅವರು ವಿವರಿಸಿದರು. ಐ.ಪಿ.ಪಿ.ಬಿ. ಯು ಮುಂದಿನ ಕೆಲವು ತಿಂಗಳುಗಳಲ್ಲಿ ದೇಶಾದ್ಯಂತ ಇರುವ 1.5 ಲಕ್ಷಕ್ಕೂ ಅಧಿಕ ಅಂಚೆ ಕಚೇರಿಗಳಲ್ಲಿ ಲಭ್ಯವಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. 



(Release ID: 1545524) Visitor Counter : 190