ಪ್ರಧಾನ ಮಂತ್ರಿಯವರ ಕಛೇರಿ
ನಗರಾಭಿವೃದ್ಧಿ ಉಪಕ್ರಮಗಳ ಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ.
Posted On:
28 JUL 2018 8:52PM by PIB Bengaluru
ನಗರಾಭಿವೃದ್ಧಿ ಉಪಕ್ರಮಗಳ ಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಕ್ನೋದಲ್ಲಿ “ನಗರ ಭೂದೃಶ್ಯ ಪರಿವರ್ತನೆ” ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಗರಾಭಿವೃದ್ಧಿಗೆ ಸಂಬಂಧಿಸಿದ ಸರಕಾರದ ಮೂರು ಪ್ರಮುಖ ಯೋಜನೆಗಳ ಮೂರನೆ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಧಾನ ಮಂತ್ರಿ ಆವಾಸ್ ಯೋಜನಾ (ನಗರ); ಅಟಲ್ ನಗರ ಪರಿವರ್ತನೆ ಪುನರುತ್ಥಾನ ಯೋಜನೆ (ಅಮೃತ್) ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳು ಇದರಲ್ಲಿ ಸೇರಿವೆ.
ನಗರಾಭಿವೃದ್ದಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಪ್ರದರ್ಶನಕ್ಕೂ ಪ್ರಧಾನ ಮಂತ್ರಿಗಳು ಭೇಟಿ ನೀಡಿದರು. ಪಿ.ಎಂ.ಎ.ವೈ.(ಯು) ಯೋಜನೆಗೆ ಸಂಬಂಧಿಸಿ ಪ್ರತೀ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ತಲಾ ಒಬ್ಬರು ಫಲಾನುಭವಿಗಳಂತೆ ಒಟ್ಟು 35 ಫಲಾನುಬವಿಗಳ ಜೊತೆ ಅವರು ಸಂವಾದ ನಡೆಸಿದರು.
ಉತ್ತರ ಪ್ರದೇಶದ ವಿವಿಧ ನಗರಗಳ ಪಿ.ಎಂ.ಎ. ವೈ. ಫಲಾನುಭವಿಗಳಿಂದ ಅವರು ವೀಡಿಯೋ ಸಂಪರ್ಕ ಮೂಲಕ ಹಿಮ್ಮಾಹಿತಿ ಪಡೆದರು.
ಅವರು ಉತ್ತರ ಪ್ರದೇಶ ರಾಜ್ಯದಲ್ಲಿ ವಿವಿಧ ಪ್ರಮುಖ ಯೋಜನೆಗಳ ಅಡಿಯಲ್ಲಿ ಅಭಿವೃದ್ದಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು ಸಮಾರಂಭದಲ್ಲಿ ಪಾಲ್ಗೊಂಡಿರುವ ನಗರ ಆಡಳಿತಗಾರರು ನವಭಾರತದ ಮತ್ತು ನವಜನಾಂಗದ ಆಶೋತ್ತರಗಳು ಮತ್ತು ಭರವಸೆಗಳನ್ನು ಸಂಕೇತಿಸುವ ಪ್ರತಿನಿಧಿಗಳು ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ 7000 ಕೋ.ರೂ. ಮೌಲ್ಯದ ಯೋಜನೆಗಳು ಪೂರ್ಣಗೊಂಡಿವೆ ಮತ್ತು 52,000 ಕೋ.ರೂ. ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ ಎಂಬುದರತ್ತ ಗಮನ ಸೆಳೆದ ಪ್ರಧಾನ ಮಂತ್ರಿ ಅವರು ಈ ಯೋಜನೆ ಕೆಳ, ಕೆಳ ಮಧ್ಯಮ, ಮತ್ತು ಮಧ್ಯಮ ವರ್ಗದವರಿಗೆ ಉತ್ತಮ ನಾಗರಿಕ ಸವಲತ್ತುಗಳನ್ನು ಒದಗಿಸಿ ಅವರ ಜೀವನವನ್ನು ಸರಳಗೊಳಿಸುವ ಇರಾದೆ ಹೊಂದಿದೆ ಎಂದರು. ಸಮಗ್ರ ಕಮಾಂಡ್ ಕೇಂದ್ರಗಳು ಈ ಯೋಜನೆಯ ಮಹತ್ವದ ಪ್ರಮುಖ ಭಾಗಗಳು ಎಂದ ಪ್ರಧಾನಿಯವರು 11 ನಗರಗಳಲ್ಲಿ ಕೇಂದ್ರಗಳು ಕಾರ್ಯಾಚರಣೆ ಆರಂಭಿಸಿವೆ, ಇನ್ನಷ್ಟು ನಗರಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಮಾಜಿ ಪ್ರಧಾನ ಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಯತ್ನಗಳನ್ನು ಸ್ಮರಿಸಿಕೊಂಡ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ವಾಜಪೇಯಿ ಸಂಸತ್ ಸದಸ್ಯರಾಗಿದ್ದ ಲಕ್ನೋ ಜೊತೆ ನಗರ ಭಾರತದ ಭೂ ದೃಶ್ಯ ಪರಿವರ್ತನೆಯ ಚಿಂತನೆ ನಿಕಟವಾಗಿ ಹೆಣೆದುಕೊಂಡಿದೆ ಎಂದರು.
ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಕೈಗೊಂಡ ವಿವಿಧ ಉಪಕ್ರಮಗಳನ್ನು ಶ್ಲ್ಯಾಘಿಸಿದ ಪ್ರಧಾನ ಮಂತ್ರಿಯವರು ಆ ಉಪಕ್ರಮಗಳನ್ನು ಹಾಗೆಯೇ ಉಳಿಸಿಕೊಂಡು ವೇಗ, ಪ್ರಮಾಣ ಮತ್ತು ಜೀವಿಸುವ ಗುಣಮಟ್ಟ ಉತ್ತಮೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾರ್ಯನಿರ್ವಹಿಸುತ್ತಿದೆ ಎಂದರು. 2022 ರೊಳಗೆ ಎಲ್ಲರಿಗೂ ವಸತಿ ಒದಗಿಸಲು ಸರಕಾರ ಆಶಿಸಿದೆ ಎಂದವರು ಹೇಳಿದರು. ಈ ನಿಟ್ಟಿನಲ್ಲಿ ಅಂಕಿ ಅಂಶಗಳನ್ನು ಒದಗಿಸಿದ ಪ್ರಧಾನ ಮಂತ್ರಿಗಳು ಸರಕಾರ ಹೇಗೆ ಬಹಳಷ್ಟು ಕೆಲಸಗಳನ್ನು ನಡೆಸಿದೆ ಎಂಬುದನ್ನು ವಿವರಿಸಿದರು. ಇಂದು ನಿರ್ಮಿಸಲಾಗುತ್ತಿರುವ ಮನೆಗಳು ವಿದ್ಯುತ್ ಸಂಪರ್ಕ ಹಾಗು ಶೌಚಾಲಯಗಳನ್ನು ಒಳಗೊಂಡಿರುತ್ತವೆ ಎಂದರು. ಈ ಮನೆಗಳು ಮಹಿಳೆಯರ ಹೆಸರಿನಲ್ಲಿ ನೊಂದಾಯಿಸಲ್ಪಡುತ್ತಿರುವುದರಿಂದ ಅವು ಮಹಿಳಾ ಸಶಕ್ತೀಕರಣದ ಸಂಕೇತಗಳು ಎಂದವರು ಬಣ್ಣಿಸಿದರು.
ಇತ್ತೀಚಿನ ಟೀಕೆಯ ಬಗ್ಗೆ ನಿರ್ಭಾವುಕ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ ಅವರು ತಾವು ಬಡವರು ಮತ್ತು ಸವಲತ್ತುಗಳಿಂದ ವಂಚಿತರಾದವರು , ರೈತರು ಮತ್ತು ಜವಾನರ ಕಷ್ಟಗಳು ಮತ್ತು ದಾರುಣ ಸ್ಥಿತಿಯ ಸಹಭಾಗಿಗಳಾಗಿದ್ದು, ಅವರ ಕಷ್ಟಗಳನ್ನು ನಿರ್ಧಾರಾತ್ಮಕವಾಗಿ ಕೊನೆಗೊಳಿಸಲು ಇಚ್ಚಿಸುತ್ತಿರುವುದಾಗಿ ಹೇಳಿದರು.
ಭಾರತ ಒಂದೊಮ್ಮೆ ಅತ್ಯುತ್ತಮ ಯೋಜಿತ ರೀತಿಯ ನಗರ ಪ್ರದೇಶಗಳನ್ನು ಹೊಂದಿತ್ತು. ಆದರೆ ರಾಜಕೀಯ ಇಚ್ಚಾಶಕ್ತಿ, ಸ್ಪಷ್ಟ ಚಿಂತನೆಯ ಕೊರತೆಯಿಂದಾಗಿ , ವಿಶೇಷವಾಗಿ ಸ್ವಾತಂತ್ರ್ಯಾನಂತರದ ಪರಿಸ್ಥಿತಿಯಲ್ಲಿ ನಮ್ಮ ನಗರ ಕೇಂದ್ರಗಳಿಗೆ ಭಾರೀ ಹಾನಿಯಾಯಿತು ಎಂದು ಪ್ರಧಾನ ಮಂತ್ರಿಗಳು ನುಡಿದರು.
ಭಾರತವಿಂದು ತ್ವರಿತವಾಗಿ ಬೆಳೆಯುತ್ತಿದೆ, ಮತ್ತು ನಗರಗಳು ಇದರ ಬೆಳವಣಿಗೆಯ ಯಂತ್ರಗಳಾಗಿವೆ, ಇವುಗಳು ಇನ್ನು ಮುಂದೆಯೂ ಯದ್ವಾತದ್ವಾ ರೀತಿಯಲ್ಲಿ ಬೆಳೆಯುವುದು ಸರಿಯಲ್ಲ ಎಂದರು. ಸ್ಮಾರ್ಟ್ ಸಿಟಿ ಯೋಜನೆ ನವಭಾರತದ ಸವಾಲುಗಳನ್ನು ಎದುರಿಸಲು ತಯಾರಿ ಮಾಡುವುದಕ್ಕೆ ಸಹಕಾರಿಯಾಗಲಿದೆ, ಮತ್ತು 21 ನೇ ಶತಮಾನಕ್ಕಾಗಿ ಭಾರತದಲ್ಲಿ ವಿಶ್ವದರ್ಜೆ ಬುದ್ದಿಮತ್ತೆಯ ನಗರ ಕೇಂದ್ರಗಳನ್ನು ರೂಪಿಸಲಿದೆ, ಜೀವಿಸುವ ಅವಕಾಶಗಳು 5 ಇ ಗಳನ್ನು ಹೊಂದಿರಬೇಕಾಗುತ್ತದೆ, ಅವುಗಳೆಂದರೆ ಜೀವಿಸಲು ಅನುಕೂಲಕರ ವಾತಾವರಣ, ಶಿಕ್ಷಣ, ಉದ್ಯೋಗ, ಆರ್ಥಿಕತೆ ಮತ್ತು ಮನೋರಂಜನೆ ಎಂದೂ ಪ್ರಧಾನಿಯವರು ನುಡಿದರು.
ಸ್ಮಾರ್ಟ್ ಸಿಟಿ ಯೋಜನೆ ನಾಗರಿಕರ ಸಹಭಾಗಿತ್ವ, ನಾಗರಿಕರ ಆಶೋತ್ತರ ಮತ್ತು ನಾಗರಿಕ ಜವಾಬ್ದಾರಿಯನ್ನು ಆಧರಿಸಿರುತ್ತದೆ. ಪುಣೆ, ಹೈದರಾಬಾದ್, ಮತ್ತು ಇಂಧೋರ್ ನಗರಗಳು ಸಾಕಷ್ಟು ಪ್ರಮಾಣದಲ್ಲಿ ಹಣಕಾಸನ್ನು ಮುನ್ಸಿಪಲ್ ಬಾಂಡುಗಳ ಮೂಲಕ ಸಂಗ್ರಹಿಸಿವೆ. ಮತ್ತು ಇತರ ನಗರಗಳಾದ ಲಕ್ನೋ, ಗಾಜಿಯಾಬಾದ್ ಗಳು ಕೂಡಾ ಇದೇ ಹಾದಿಯನ್ನು ಅನುಸರಿಸಲಿವೆ ಎಂದು ಪ್ರಧಾನ ಮಂತ್ರಿ ಹೇಳಿದರು. ನಾಗರಿಕ ಸವಲತ್ತುಗಳು ಆನ್ ಲೈನ್ ಮೂಲಕ ದೊರೆಯಲಿದ್ದು, ಭ್ರಷ್ಟಾಚಾರಕ್ಕೆ ಮೂಲವಾಗಿರುವ ಸರತಿ ಸಾಲುಗಳು ನಿವಾರಣೆಯಾಗಲಿವೆ. ಸ್ಮಾರ್ಟ್, ಭದ್ರತೆಯ, ಸಹ್ಯ ಮತ್ತು ಪಾರದರ್ಶಕ ವ್ಯವಸ್ಥೆಗಳು ಕೋಟ್ಯಾಂತರ ಜನರ ಜೀವನವನ್ನು ಬದಲಾಯಿಸುತ್ತವೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು.
***
(Release ID: 1540590)