ಸಂಪುಟ

ಎಡಪಂಥೀಯ ಬಂಡುಕೋರರಿಂದ ಬಾಧಿತ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕ ಒದಗಿಸಲು ಕೇಂದ್ರ ಸಂಪುಟ ಅನುಮೋದನೆ

Posted On: 23 MAY 2018 3:49PM by PIB Bengaluru

ಎಡಪಂಥೀಯ ಬಂಡುಕೋರರಿಂದ ಬಾಧಿತ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕ ಒದಗಿಸಲು ಕೇಂದ್ರ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಏಕರೂಪದ ಸೇವಾ ಪೂರೈಕೆ ನಿಧಿ (ಯುಎಸ್ಒಎಫ್) ನೆರವಿನಿಂದ ಗೃಹ ವ್ಯವಹಾರಗಳ ಸಚಿವಾಲಯ ಗುರುತಿಸಲ್ಪಟ್ಟಿರುವ ನಕ್ಸಲ್ ಬಾಧಿತವಾಗಿರುವ ಹತ್ತು ರಾಜ್ಯಗಳ 96 ಜಿಲ್ಲೆಗಳಲ್ಲಿ ಎರಡನೇ ಹಂತದ ಯೋಜನೆಯಲ್ಲಿ 4,072 ಮೊಬೈಲ್ ಸೇವಾ ಟವರ್ ಗಳನ್ನು ಅಳವಡಿಸಲು ಅನುಮೋದಿಸಲಾಯಿತು. ಈ ಯೋಜನೆಯ ಒಟ್ಟು ವೆಚ್ಚ 7,330 ಕೋಟಿ ರೂ. 

ಈ ಸಂಪರ್ಕಜಾಲವನ್ನು ನಕ್ಸಲ್ ಬಾಧಿತವಾಗಿರುವ ಪ್ರದೇಶಗಳಿಗೆ ನಿಯೋಜಿಸಲ್ಪಟ್ಟ ಭದ್ರತಾ ಸಿಬ್ಬಂದಿಗೆ ನೆರವಾಗುತ್ತದೆ. ಅಲ್ಲದೆ ಈ ಯೋಜನೆಯಿಂದ ಮೊಬೈಲ್ ಸೇವೆ ಲಭ್ಯವಿರದ ಗ್ರಾಮಗಳ ಜನರಿಗೆ ಸಹಾಯವಾಗುವುದಲ್ಲದೆ, ಇದರಿಂದ ಆ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಲಿವೆ. ಅಲ್ಲದೆ ಇದರಿಂದ ಇ-ಆಡಳಿತ ಚಟುವಟಿಕೆಗಳನ್ನು ಉತ್ತೇಜಿಸುವಂತಾಗುವುದಲ್ಲದೆ, ನಕ್ಸಲ್ ಬಾಧಿತವಾದ ಪ್ರದೇಶದಲ್ಲಿ ಡಿಜಿಟಲ್ ಮೊಬೈಲ್ ಸಂಪರ್ಕ ಸೇವೆಯೂ ಲಭ್ಯವಾದಂತಾಗುತ್ತದೆ.

ಒಟ್ಟಾರೆ ಹತ್ತು ರಾಜ್ಯಗಳಲ್ಲಿ ಮೊಬೈಲ್ ಟವರ್ ಅಳವಡಿಕೆಗೆ ಗುರುತಿಸಲ್ಪಟ್ಟಿರುವ ಸ್ಥಳಗಳ ವಿವರ ಈ ಕೆಳಗಿನಂತಿದೆ.


ಕ್ರ.ಸಂ. ರಾಜ್ಯಗಳು ಜಿಲ್ಲೆಗಳು ಟವರ್ ಅಳವಡಿಕೆ ಸ್ಥಳಗಳ ಸಂಖ್ಯೆ 
1. ಆಂಧ್ರ ಪ್ರದೇಶ 8 429 
2. ಬಿಹಾರ 8 412 
3. ಚತ್ತೀಸ್ ಗಢ 16 1028 
4. ಜಾರ್ಖಂಡ್ 21 1054 
5. ಮಧ್ಯಪ್ರದೇಶ 1 26 
6. ಮಹಾರಾಷ್ಟ್ರ 2 136 
7. ಒಡಿಶಾ 18 483 
8. ತೆಲಂಗಾಣ 14 118 
9. ಉತ್ತರ ಪ್ರದೇಶ 3 179 
10. ಪಶ್ಚಿಮ ಬಂಗಾಳ 5 207 
ಒಟ್ಟು 10 ರಾಜ್ಯಗಳು 96 4,072


ಹಿನ್ನೆಲೆ:

ಎ. ಎಡಪಂಥೀಯ ಬಂಡುಕೋರರಿಂದ ಬಾಧಿತ (ಎಲ್ ಡಬ್ಲ್ಯೂ ಇ) ಒಂದನೇ ಹಂತದ ಯೋಜನೆ

1. ಎಲ್ ಡಬ್ಲ್ಯೂ ಇ ಒಂದನೇ ಹಂತದ ಯೋಜನೆಯಲ್ಲಿ ಒಟ್ಟಾರೆ 4,080.78 ಕೋಟಿ ರೂ. ವೆಚ್ಚದಲ್ಲಿ ನಕ್ಸಲ್ ರಿಂದ ಬಾಧಿತವಾದ ಪ್ರದೇಶಗಳಲ್ಲಿ 2ಜಿ ತಂತ್ರಜ್ಞಾನ ಬಳಸಿ ಮೊಬೈಲ್ ಸೇವೆಗಳನ್ನು ಒದಗಿಸುವ ಕಾರ್ಯ ಪೂರ್ಣಗೊಂಡಿದೆ.

2. ಈವರೆಗೆ ಒಟ್ಟು 2,355ರ ಪೈಕಿ 2,335 ಮೊಬೈಲ್ ಟವರ್ ಗಳನ್ನು ಅಳವಡಿಸಲಾಗಿದೆ.

ಬಿ. ಎಲ್ ಡಬ್ಲ್ಯೂ ಇ ಎರಡನೇ ಹಂತದ ಯೋಜನೆ

1. ಗೃಹ ವ್ಯವಹಾರಗಳ ಸಚಿವಾಲಯ ಸಂಬಂಧಿಸಿದ ರಾಜ್ಯಗಳೊಡನೆ ಚರ್ಚಿಸಿ, ಹತ್ತು ರಾಜ್ಯಗಳ 96 ಜಿಲ್ಲೆಗಳಲ್ಲಿ ನಿಯೋಜಿಸಲ್ಪಟ್ಟಿರುವ ಭದ್ರತಾ ಸಿಬ್ಬಂದಿಗಳಿಗೆ ಅಗತ್ಯ ಸಂವಹನ ಸೇವೆ ಒದಗಿಸಲು 4,072 ಟವರ್ ಗಳನ್ನು ಅಳವಡಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ದೂರಸಂಪರ್ಕ ಸಚಿವಾಲಯ 2017ರ ಅಕ್ಟೋಬರ್ 27ಕ್ಕೆ ಈ ಮಾಹಿತಿ ಒದಗಿಸಿತ್ತು.

2. ಸಂಬಂಧಿಸಿದವರ ಅಗತ್ಯತೆಗೆ ತಕ್ಕಂತೆ ಎರಡನೇ ಹಂತದ ಯೋಜನೆಯಲ್ಲಿ ಉದ್ದೇಶಿತ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲಾಗುವುದು. ಮೊಬೈಲ್ ಸಂಪರ್ಕ ಒದಗಿಸಲು 2ಜಿ ಮತ್ತು 4ಜಿ ತಂತ್ರಜ್ಞಾನವನ್ನು ಇದೀಗ ಈ ಯೋಜನೆಯಲ್ಲಿ ಬಳಸಿಕೊಳ್ಳಲಾಗುವುದು.



(Release ID: 1533461) Visitor Counter : 107