• Sitemap
  • Advance Search
Social Welfare

ಪಿಎಂ ಸ್ವನಿಧಿ: ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಒಳಗೊಳ್ಳುವಿಕೆಯ ಪ್ರಗತಿ

Posted On: 30 MAY 2026 8:39PM

1.  ಪಿಎಂ ಸ್ವನಿಧಿ ಎಂದರೆ ಏನು?

ಪಿಎಂ ಸ್ವನಿಧಿ ಎಂಬುದು ಕೇಂದ್ರ ವಲಯದ ಯೋಜನೆಯಾಗಿದ್ದು, ಇದು ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ದರದಲ್ಲಿ ದುಡಿಯುವ ಬಂಡವಾಳ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಭದ್ರತೆಯ ಕ್ರಮಗಳ ಮೂಲಕ ಬೆಂಬಲ ನೀಡುತ್ತದೆ.

2. ಇದನ್ನು ಏಕೆ ಪ್ರಾರಂಭಿಸಲಾಯಿತು?

ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ, ವ್ಯಾಪಾರದಲ್ಲಿ ತೀವ್ರ ನಷ್ಟ ಅನುಭವಿಸಿದ ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ದರದಲ್ಲಿ ದುಡಿಯುವ ಬಂಡವಾಳ ಸಾಲವನ್ನು ನೀಡಲು ಪಿಎಂ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಲಾಯಿತು. ಅಸಂಘಟಿತ ವಲಯದ ಪ್ರಮುಖ ಭಾಗವಾಗಿದ್ದರೂ, ಬ್ಯಾಂಕುಗಳಿಂದ ಸಾಲ ಪಡೆಯಲು ಕಷ್ಟಪಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗಾಗಿಯೇ ತಂದ ಮೊದಲ ಪ್ರತ್ಯೇಕ ಸೂಕ್ಷ್ಮ-ಸಾಲ ಯೋಜನೆ ಇದಾಗಿದೆ. ಇದು ಅವರ ವ್ಯವಹಾರದ ಬೆಳವಣಿಗೆಗೆ ಬೆಂಬಲ ನೀಡುವ ಜೊತೆಗೆ ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

3. ಪಿಎಂ ಸ್ವನಿಧಿ ಯೋಜನೆಯನ್ನು ಯಾವಾಗ ಪ್ರಾರಂಭಿಸಲಾಯಿತು ಮತ್ತು ಇದನ್ನು ಯಾವ ಸಚಿವಾಲಯಗಳು ಅನುಷ್ಠಾನಗೊಳಿಸುತ್ತವೆ?

ಈ ಯೋಜನೆಯನ್ನು ಜೂನ್ 2020 ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಹಣಕಾಸು ಸೇವೆಗಳ ಇಲಾಖೆ ಜಂಟಿಯಾಗಿ ನಿರ್ವಹಿಸುತ್ತವೆ.

4. ಪಿಎಂ ಸ್ವನಿಧಿ ಅಡಿಯಲ್ಲಿ ವಿಸ್ತರಿಸಲಾದ ಸಾಲದ ಅವಧಿ ಎಷ್ಟು?

ಈ ಯೋಜನೆಯ ಭಾರಿ ಯಶಸ್ಸು ಮತ್ತು ಸಕಾರಾತ್ಮಕ ಪ್ರಭಾವವನ್ನು ಪರಿಗಣಿಸಿ, ಸರ್ಕಾರವು ಪಿಎಂ ಸ್ವನಿಧಿ ಯೋಜನೆಯ ಮರುರಚನೆ ಮತ್ತು ವಿಸ್ತರಣೆಗೆ ಅನುಮೋದನೆ ನೀಡಿದೆ. ಈಗ ಸಾಲ ನೀಡುವ ಅವಧಿಯನ್ನು ಮಾರ್ಚ್ 2030 ರವರೆಗೆ ವಿಸ್ತರಿಸಲಾಗಿದೆ.

5. ಬೀದಿ ಬದಿ ವ್ಯಾಪಾರಿ/ಫೇರಿವಾಲಾ ಎಂದರೆ ಯಾರು?

ತಾತ್ಕಾಲಿಕವಾಗಿ ನಿರ್ಮಿಸಿದ ಅಂಗಡಿಗಳಿಂದ ಅಥವಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುತ್ತಾ ರಸ್ತೆ, ಕಾಲುದಾರಿ ಮುಂತಾದ ಕಡೆಗಳಲ್ಲಿ ದಿನಬಳಕೆಯ ವಸ್ತುಗಳು, ಸರಕುಗಳು, ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಥವಾ ಸಾರ್ವಜನಿಕರಿಗೆ ಸೇವೆಗಳನ್ನು ನೀಡುವ ಯಾವುದೇ ವ್ಯಕ್ತಿಯನ್ನು ಬೀದಿ ಬದಿ ವ್ಯಾಪಾರಿ ಎನ್ನಲಾಗುತ್ತದೆ. ಇವರು ಮಾರಾಟ ಮಾಡುವ ವಸ್ತುಗಳಲ್ಲಿ ತರಕಾರಿಗಳು, ಹಣ್ಣುಗಳು, ಸಿದ್ದ ಆಹಾರ ಇತ್ಯಾದಿಗಳು ಸೇರಿವೆ. ಹಾಗೆಯೇ ಕ್ಷೌರದ ಅಂಗಡಿ, ಚಮ್ಮಾರರು, ಲಾಂಡ್ರಿ ಸೇವೆಗಳು ಇತ್ಯಾದಿಗಳು ಈ ಸೇವೆಗಳ ಅಡಿಯಲ್ಲಿ ಬರುತ್ತವೆ.

6. ಪಿಎಂ ಸ್ವನಿಧಿ ಅಡಿಯಲ್ಲಿ ಯಾವ ಆರ್ಥಿಕ ನೆರವು ಮತ್ತು ಪ್ರಯೋಜನಗಳನ್ನು ನೀಡಲಾಗುತ್ತದೆ?

ಬೀದಿ ಬದಿ ವ್ಯಾಪಾರಿಗಳು ಹಂತ-ಹಂತವಾಗಿ ₹15,000, ₹25,000 ಮತ್ತು ₹50,000 ವರೆಗೆ ಯಾವುದೇ ಗ್ಯಾರಂಟಿ ಇಲ್ಲದ ದುಡಿಯುವ ಬಂಡವಾಳ ಸಾಲವನ್ನು ಪಡೆಯಬಹುದು. ಇದರೊಂದಿಗೆ ಬಡ್ಡಿ ಸಬ್ಸಿಡಿ, ಕ್ರೆಡಿಟ್ ಗ್ಯಾರಂಟಿ ಬೆಂಬಲ ಮತ್ತು ಅರ್ಹ ವ್ಯಾಪಾರಿಗಳಿಗೆ ₹30,000 ವರೆಗಿನ ಯುಪಿಐ-ಸಂಯೋಜಿತ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಸಹ ನೀಡಲಾಗುತ್ತದೆ.

7. ಸಾಲವನ್ನು ಸಮಯಕ್ಕೆ ಸರಿಯಾಗಿ ಅಥವಾ ನಿಗದಿತ ಅವಧಿಗಿಂತ ಮುಂಚಿತವಾಗಿ ಮರುಪಾವತಿ ಮಾಡಿದರೆ ಏನಾದರೂ ಪ್ರೋತ್ಸಾಹಧನವಿದೆಯೇ?

ಹೌದು. ಸಾಲವನ್ನು ಸಮಯಕ್ಕೆ ಸರಿಯಾಗಿ ಅಥವಾ ಮುಂಚಿತವಾಗಿ ಮರುಪಾವತಿ ಮಾಡುವ ವ್ಯಾಪಾರಿಗಳಿಗೆ ವರ್ಷಕ್ಕೆ ಶೇಕಡಾ 7 ರಷ್ಟು ಬಡ್ಡಿ ಸಬ್ಸಿಡಿಯನ್ನು ನೀಡುವ ಮೂಲಕ ಯೋಜನೆಯು ಪ್ರೋತ್ಸಾಹಿಸುತ್ತದೆ. ಇದಲ್ಲದೆ, ಸಮಯಕ್ಕೆ ಸರಿಯಾಗಿ ಸಾಲ ತೀರಿಸುವ ವ್ಯಾಪಾರಿಗಳು ಮುಂದಿನ ಹಂತದಲ್ಲಿ ಹೆಚ್ಚಿನ ಮೊತ್ತದ ಸಾಲವನ್ನು ಪಡೆಯಲು ಅರ್ಹರಾಗುತ್ತಾರೆ.

8. ಸಾಲ ಮಂಜೂರಾತಿಯಾಗಲು ಎಷ್ಟು ದಿನಗಳು ಬೇಕಾಗುತ್ತವೆ?

ಪಿಎಂ ಸ್ವನಿಧಿ ಯೋಜನೆಯು ಸಾಲದ ಅರ್ಜಿ ಮತ್ತು ಮಂಜೂರಾತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಂಪೂರ್ಣ ಡಿಜಿಟಲ್ ವೇದಿಕೆಯನ್ನು ಬಳಸಿಕೊಳ್ಳುತ್ತದೆ. ದಾಖಲೆಗಳ ಪರಿಶೀಲನೆ ಮತ್ತು ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಸರಾಸರಿ 23 ದಿನಗಳಲ್ಲಿ ಸಾಲದ ಪ್ರಕ್ರಿಯೆ ಮುಗಿದು ಮಂಜೂರಾತಿಯಾಗುತ್ತದೆ.

9. ಶಿಫಾರಸು ಪತ್ರ ಅಥವಾ ವ್ಯಾಪಾರ ಪ್ರಮಾಣಪತ್ರ ಹೊಂದಿರುವ ಬೀದಿ ಬದಿ ವ್ಯಾಪಾರಿಗಳು ಸಾಲಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬಹುದು?

ಸಿಂಧುವಾದ ಶಿಫಾರಸು ಪತ್ರ ಅಥವಾ ವ್ಯಾಪಾರ ಪ್ರಮಾಣಪತ್ರ ಹೊಂದಿರುವ ಬೀದಿ ಬದಿ ವ್ಯಾಪಾರಿಗಳು ಯೋಜನೆಯ ವೆಬ್‌ಸೈಟ್ ಪೋರ್ಟಲ್, ಮೊಬೈಲ್ ಆಪ್ ಮೂಲಕ ಅಥವಾ ನಗರ ಸ್ಥಳೀಯ ಸಂಸ್ಥೆಗಳ (ಮುನ್ಸಿಪಾಲಿಟಿ/ಕಾರ್ಪೊರೇಷನ್) ಸಹಾಯದಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

10. ಪಿಎಂ ಸ್ವನಿಧಿ ಯೋಜನೆಯಿಂದ ಇದುವರೆಗೆ ಎಷ್ಟು ಬೀದಿ ಬದಿ ವ್ಯಾಪಾರಿಗಳು ಪ್ರಯೋಜನ ಪಡೆದಿದ್ದಾರೆ?

ಇದುವರೆಗೆ 75.5 ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಅಡಿಯಲ್ಲಿ 112 ಲಕ್ಷಕ್ಕೂ ಹೆಚ್ಚು ಸಾಲಗಳನ್ನು ಪಡೆದುಕೊಂಡಿದ್ದಾರೆ.

11. ಯೋಜನೆಯಡಿ ವಿತರಿಸಲಾದ ಒಟ್ಟು ಆರ್ಥಿಕ ನೆರವು ಎಷ್ಟು?

ದೇಶಾದ್ಯಂತ ಬೀದಿ ಬದಿ ವ್ಯಾಪಾರಿಗಳಿಗೆ ₹17,800 ಕೋಟಿಗೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ. ಅಲ್ಲದೆ, ಫಲಾನುಭವಿಗಳು ಬಡ್ಡಿ ಸಬ್ಸಿಡಿ ಮತ್ತು ಡಿಜಿಟಲ್ ಕ್ಯಾಶ್‌ಬ್ಯಾಕ್ ಪ್ರೋತ್ಸಾಹಧನದ ಮೂಲಕ ಸುಮಾರು ₹800 ಕೋಟಿ ಹಣವನ್ನು ಪಡೆದಿದ್ದಾರೆ.

12. ಪಿಎಂ ಸ್ವನಿಧಿ ಯೋಜನೆಯು ವ್ಯಾಪಾರಿಗಳಲ್ಲಿ ಡಿಜಿಟಲ್ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಹೇಗೆ ಉತ್ತೇಜಿಸುತ್ತದೆ?

ಈ ಯೋಜನೆಯು ₹1,600 ರವರೆಗಿನ ಕ್ಯಾಶ್‌ಬ್ಯಾಕ್ ಪ್ರೋತ್ಸಾಹಧನ ಮತ್ತು ಆರ್ಥಿಕ ಸಾಕ್ಷರತಾ ಬೆಂಬಲದ ಮೂಲಕ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತದೆ. 55 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳು ಸುಮಾರು ₹8.96 ಲಕ್ಷ ಕೋಟಿ ಮೌಲ್ಯದ 841 ಕೋಟಿಗೂ ಹೆಚ್ಚು ಡಿಜಿಟಲ್ ವಹಿವಾಟುಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

13. 'ಸ್ವನಿಧಿಯಿಂದ ಸಮೃದ್ಧಿ' ಎಂದರೇನು ಮತ್ತು ಇದು ಫಲಾನುಭವಿಗಳಿಗೆ ಹೇಗೆ ಸಹಾಯ ಮಾಡುತ್ತದೆ?

'ಸ್ವನಿಧಿಯಿಂದ ಸಮೃದ್ಧಿ' ಕಾರ್ಯಕ್ರಮವು ಫಲಾನುಭವಿಗಳ ಕುಟುಂಬಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಗುರುತಿಸಿ, ಅವರನ್ನು ಕೇಂದ್ರ ಸರ್ಕಾರದ ಪ್ರಮುಖ ಎಂಟು ಕಲ್ಯಾಣ ಯೋಜನೆಗಳೊಂದಿಗೆ ಜೋಡಿಸುತ್ತದೆ. ಈ ಉಪಕ್ರಮದ ಅಡಿಯಲ್ಲಿ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳ ವಿವರಗಳನ್ನು ಸಂಗ್ರಹಿಸಲಾಗಿದ್ದು, 1.52 ಕೋಟಿಗೂ ಹೆಚ್ಚು ಕಲ್ಯಾಣ ಸೌಲಭ್ಯಗಳನ್ನು ಮಂಜೂರು ಮಾಡಲಾಗಿದೆ.

14. ಪಿಎಂ ಸ್ವನಿಧಿ ಅಡಿಯಲ್ಲಿ ಯಾವ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಬೆಂಬಲವನ್ನು ನೀಡಲಾಗುತ್ತದೆ?

FSSAI ಸಹಯೋಗದೊಂದಿಗೆ ಈ ಯೋಜನೆಯು ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ ಮತ್ತು ಆಹಾರ ಸುರಕ್ಷತೆಯ ಅಭ್ಯಾಸಗಳ ಬಗ್ಗೆ ತರಬೇತಿಯನ್ನು ನೀಡುತ್ತದೆ. ಸುಮಾರು 6 ಲಕ್ಷ ಬೀದಿ ಬದಿ ಆಹಾರ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಮಾನದಂಡಗಳ ಕುರಿತು ತರಬೇತಿ ನೀಡಲಾಗಿದೆ.

15. ಪಿಎಂ ಸ್ವನಿಧಿ ಯೋಜನೆಯು ಜನರ ಜೀವನೋಪಾಯ ಮತ್ತು ಆರ್ಥಿಕ ಸಬಲೀಕರಣದ ಮೇಲೆ ಎಂತಹ ಪ್ರಭಾವ ಬೀರಿದೆ?

2023 ಮತ್ತು 2025ರಲ್ಲಿ ನಡೆಸಲಾದ ಸ್ವತಂತ್ರ ಅಧ್ಯಯನಗಳ ಪ್ರಕಾರ, ಫಲಾನುಭವಿಗಳ ವ್ಯವಹಾರದಲ್ಲಿ ಸ್ಥಿರತೆ, ಹೆಚ್ಚಿನ ಆದಾಯ ಮತ್ತು ಬಲವಾದ ಆರ್ಥಿಕ ಒಳಗೊಳ್ಳುವಿಕೆ ಕಂಡುಬಂದಿದೆ. ಸುಮಾರು ಶೇಕಡಾ 95 ರಷ್ಟು ಫಲಾನುಭವಿಗಳು ಈ ಯೋಜನೆಯ ಮೂಲಕ ಮೊದಲ ಬಾರಿಗೆ ಅಧಿಕೃತ ಬ್ಯಾಂಕಿಂಗ್ ಸಂಸ್ಥೆಗಳಿಂದ ಸಾಲ ಪಡೆದಿದ್ದಾರೆ. ಸುಮಾರು ಶೇಕಡಾ 30 ರಷ್ಟು ಫಲಾನುಭವಿಗಳು ಪಿಎಂ ಸ್ವನಿಧಿ ಸಾಲದ ಮಿತಿಯಾಚೆಗೂ ಹೆಚ್ಚಿನ ಸಾಲದ ಸೌಲಭ್ಯಗಳನ್ನು ಪಡೆದಿದ್ದಾರೆ. ಫಲಾನುಭವಿಗಳ ವಾರ್ಷಿಕ ಆದಾಯದಲ್ಲಿ ಸರಾಸರಿ ಶೇಕಡಾ 20 ರಷ್ಟು ಹೆಚ್ಚಳ ದಾಖಲಾಗಿದೆ.

16. ಪಿಎಂ ಸ್ವನಿಧಿ ಯೋಜನೆಯು ಸಾಮಾಜಿಕ ಒಳಗೊಳ್ಳುವಿಕೆ ಮತ್ತು ನಗರ ಜೀವನೋಪಾಯವನ್ನು ಹೇಗೆ ಬಲಪಡಿಸಿದೆ?

ಈ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಸುಮಾರು ಶೇಕಡಾ 46 ರಷ್ಟು ಮಹಿಳೆಯರಾಗಿದ್ದಾರೆ ಮತ್ತು ಸುಮಾರು ಶೇಕಡಾ 70 ರಷ್ಟು ಜನರು ಹಿಂದುಳಿದ/ವಂಚಿತ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಈ ಯೋಜನೆಯು ಸೂಕ್ಷ್ಮ ಉದ್ಯಮಗಳು, ಸ್ಥಳೀಯ ಪೂರೈಕೆ ಸರಪಳಿಗಳು ಮತ್ತು ವ್ಯಾಪಾರಿಗಳನ್ನು ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಸಂಯೋಜಿಸುವ ಪ್ರಕ್ರಿಯೆಯನ್ನು ಬಲಪಡಿಸಿದೆ.

 

*****

 

 

(Explainer ID: 158736) आगंतुक पटल : 10
Provide suggestions / comments
इस विज्ञप्ति को इन भाषाओं में पढ़ें: English , हिन्दी , Telugu_Vw