• Sitemap
  • Advance Search
Economy

ಜಿಡಿಪಿಯ ಹೊಸ ಸರಣಿಯನ್ನು ಅರ್ಥಮಾಡಿಕೊಳ್ಳುವುದು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

Posted On: 27 FEB 2026 10:07PM

1. ಒಟ್ಟು ದೇಶೀಯ ಉತ್ಪನ್ನ ಎಂದರೇನು?

ಒಟ್ಟು ದೇಶೀಯ ಉತ್ಪನ್ನ, ಇದನ್ನು ಸಾಮಾನ್ಯವಾಗಿ ಜಿಡಿಪಿ (GDP) ಎಂದು ಕರೆಯಲಾಗುತ್ತದೆ, ಇದು ಒಂದು ಲೆಕ್ಕಪತ್ರ ಅವಧಿಯಲ್ಲಿ ದೇಶೀಯ ಆರ್ಥಿಕತೆಯಲ್ಲಿ ಉತ್ಪಾದಿಸಲಾದ ಅಂತಿಮ ಸರಕು ಮತ್ತು ಸೇವೆಗಳ ಮೌಲ್ಯವಾಗಿದೆ. ಆರ್ಥಿಕತೆಯಲ್ಲಿನ ಬದಲಾವಣೆಯನ್ನು ಒಂದು ಅವಧಿಯಿಂದ ಇನ್ನೊಂದು ಅವಧಿಗೆ ಅರ್ಥಪೂರ್ಣ ರೀತಿಯಲ್ಲಿ ನಿರ್ಣಯಿಸಲು, ಎರಡೂ ಅವಧಿಗಳಿಗೆ ಒಂದೇ ರೀತಿಯ ಮಾಪನ ವಿಧಾನಗಳು ಮತ್ತು ದತ್ತಾಂಶ ಮೂಲಗಳನ್ನು ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.

2. ರಾಷ್ಟ್ರೀಯ ಲೆಕ್ಕಪತ್ರಕ್ಕೆ ಸಂಬಂಧಿಸಿದಂತೆ ಮೂಲ ವರ್ಷ (base year) ಎಂದರೇನು? ರಿಬೇಸಿಂಗ್ (rebasing) ಪ್ರಕ್ರಿಯೆ ಎಂದರೇನು? MoSPI ನಡೆಸುವ ರಿಬೇಸಿಂಗ್ ಪ್ರಕ್ರಿಯೆಯ ಪ್ರಾಮುಖ್ಯತೆ ಏನು?

ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳಲ್ಲಿನ 'ಮೂಲ ವರ್ಷ' ಎನ್ನುವುದು ನೈಜ ಬೆಳವಣಿಗೆಯನ್ನು ಲೆಕ್ಕಹಾಕಲು ಯಾವ ವರ್ಷದ ಬೆಲೆಗಳನ್ನು ಬಳಸಲಾಗುತ್ತದೆಯೋ ಆ ಉಲ್ಲೇಖಿತ ವರ್ಷವಾಗಿದೆ.

ರಿಬೇಸಿಂಗ್ ಎನ್ನುವುದು ಹೊಸ ಆರ್ಥಿಕ ರಚನೆಯನ್ನು ತಲುಪಲು ಹೊಸ ನವೀಕರಿಸಿದ ಅಂಕಿಅಂಶಗಳೊಂದಿಗೆ ಮೂಲ-ಅವಧಿಯ ಮಾನದಂಡಗಳನ್ನು ನವೀಕರಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಇದು ಮುಂದಿನ ದಿನಗಳಲ್ಲಿ ಒಟ್ಟು ದೇಶೀಯ ಉತ್ಪನ್ನ ಮತ್ತು ಅದರ ಘಟಕಗಳು, ಗ್ರಾಹಕ ಬೆಲೆ ಸೂಚ್ಯಂಕ ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕವನ್ನು ಅಂದಾಜು ಮಾಡಲು ಆಧಾರವಾಗಿ ಕಾರ್ಯನಿರ್ವಹಿಸುತ್ತದೆ.

ಒಂದು ನಿರ್ದಿಷ್ಟ ಸರಣಿಯ ಜಿಡಿಪಿ ಮತ್ತು ಇತರ ಸ್ಥೂಲ ಆರ್ಥಿಕ ಸೂಚಕಗಳನ್ನು ಸಂಗ್ರಹಿಸಲು ಬಳಸಲಾಗುವ ವಿಧಾನ ಮತ್ತು ದತ್ತಾಂಶ ಮೂಲಗಳನ್ನು ಮೂಲ ವರ್ಷದ ಪರಿಷ್ಕರಣೆಯ ಸಮಯದಲ್ಲಿ ಅಂತಿಮಗೊಳಿಸಲಾಗುತ್ತದೆ ಮತ್ತು ಮೂಲ ವರ್ಷವನ್ನು ಮತ್ತೆ ಪರಿಷ್ಕರಿಸುವವರೆಗೆ ಮುಂದಿನ ಎಲ್ಲಾ ವರ್ಷಗಳಿಗೂ ಇವೇ ಮುಂದುವರಿಯುತ್ತವೆ.

ವರ್ಷಗಳಲ್ಲಿ ಆರ್ಥಿಕತೆಯಲ್ಲಿ ಸಂಭವಿಸಿದ ಬದಲಾವಣೆಗಳನ್ನು ಪ್ರತಿಬಿಂಬಿಸಲು ಕಾಲಕಾಲಕ್ಕೆ ಮೂಲ ವರ್ಷವನ್ನು ನವೀಕರಿಸಲಾಗುತ್ತದೆ. ಇದು ಆರ್ಥಿಕ ದತ್ತಾಂಶವನ್ನು ಹೆಚ್ಚು ನಿಖರವಾಗಿಸಲು ಸಹಾಯ ಮಾಡುತ್ತದೆ. ಇದು ಅಂದಾಜುಗಳನ್ನು ಲೆಕ್ಕಹಾಕಲು ಹೊಸ ದತ್ತಾಂಶ ಮೂಲಗಳು ಮತ್ತು ಉತ್ತಮ ವಿಧಾನಗಳ ಬಳಕೆಗೆ ಅವಕಾಶ ನೀಡುತ್ತದೆ.

3. MoSPI ಕೈಗೊಳ್ಳುವ ಮೂಲ ವರ್ಷದ ಪರಿಷ್ಕರಣೆಗಳ ಆವರ್ತನ (frequency) ಎಷ್ಟು?

ಸಾಮಾನ್ಯ ಪರಿಸ್ಥಿತಿಗಳಲ್ಲಿ, ಅಂತಾರಾಷ್ಟ್ರೀಯ ಶಿಫಾರಸಿನ ಪ್ರಕಾರ, ಪ್ರತಿ ಐದು ವರ್ಷಗಳಿಗೊಮ್ಮೆ ನಿಯತಕಾಲಿಕವಾಗಿ ಮೂಲ ವರ್ಷವನ್ನು ಪರಿಷ್ಕರಿಸಲು MoSPI ಪ್ರಯತ್ನಿಸುತ್ತದೆ.

4. ಜಿಡಿಪಿ ಮೂಲ ವರ್ಷವನ್ನು ಹಣಕಾಸು ವರ್ಷ 2022-23ಕ್ಕೆ ಏಕೆ ಪರಿಷ್ಕರಿಸಲಾಗುತ್ತಿದೆ?

ರಾಷ್ಟ್ರೀಯ ಲೆಕ್ಕಪತ್ರದ ಮೂಲ ವರ್ಷವನ್ನು 2011-12 ರಿಂದ 2022-23ಕ್ಕೆ ಪರಿಷ್ಕರಿಸಲಾಗುತ್ತಿದೆ. MoSPI ನ ಪ್ರಯತ್ನವು ಪ್ರತಿ ಐದು ವರ್ಷಗಳಿಗೊಮ್ಮೆ ಮೂಲ ವರ್ಷವನ್ನು ಪರಿಷ್ಕರಿಸುವುದಾಗಿದೆ. ಆದಾಗ್ಯೂ, ಹಣಕಾಸು ವರ್ಷ 2017-18 ರಿಂದ ಹಣಕಾಸು ವರ್ಷ 2021-22 ರ ನಡುವಿನ ವರ್ಷಗಳು ಮೂಲ ವರ್ಷವಾಗಲು ಸೂಕ್ತವಾಗಿರಲಿಲ್ಲ:

· ಹಣಕಾಸು ವರ್ಷ 2017-18: ಜಿಎಸ್‌ಟಿ (GST) ಎಂಬ ಪ್ರಮುಖ ಬದಲಾವಣೆಯನ್ನು ಪರಿಚಯಿಸಲಾಯಿತು. ಇದು ಸ್ಥಿರಗೊಳ್ಳಲು ಸಮಯದ ಅಗತ್ಯವಿತ್ತು.

· ಹಣಕಾಸು ವರ್ಷ 2019-20 ಮತ್ತು ಹಣಕಾಸು ವರ್ಷ 2020-21: ಇವು ಕೋವಿಡ್-19 ಸಾಂಕ್ರಾಮಿಕದಿಂದ ಬಾಧಿತವಾಗಿದ್ದವು.

· ಹಣಕಾಸು ವರ್ಷ 2021-22: ಕೋವಿಡ್ ನಂತರದ ಚೇತರಿಕೆಯ 'ಬೇಸ್ ಎಫೆಕ್ಟ್'ನಿಂದಾಗಿ ಜಿಡಿಪಿ ಬೆಳವಣಿಗೆಯು ತೀವ್ರವಾಗಿತ್ತು, ಇದು ಈ ವರ್ಷವನ್ನು ಅಸಮರ್ಪಕವಾಗಿಸಿತು.

ವಿವರವಾದ ಚರ್ಚೆಗಳ ನಂತರ, ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳ ಸಲಹಾ ಸಮಿತಿಯು 2022-23 ಅನ್ನು ಹೊಸ ಮೂಲ ವರ್ಷವಾಗಿ ಶಿಫಾರಸು ಮಾಡಿದೆ. ಈ ಸಮಿತಿಯು ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಸರ್ಕಾರಗಳು, ಶಿಕ್ಷಣ ತಜ್ಞರು ಮತ್ತು ಸಂಶೋಧನಾ ಸಂಸ್ಥೆಗಳ ಸದಸ್ಯರನ್ನು ಒಳಗೊಂಡಿದೆ. ಸಮಿತಿಯು ಹಣಕಾಸು ವರ್ಷ 2022-23 ಅನ್ನು ಸಾಮಾನ್ಯ ಆರ್ಥಿಕ ವರ್ಷವೆಂದು ಕಂಡುಕೊಂಡಿದೆ ಮತ್ತು ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡಲು ಅಗತ್ಯವಿರುವ ಪ್ರಮುಖ ಸಮೀಕ್ಷೆ ದತ್ತಾಂಶಗಳು ಸಹ ಈ ವರ್ಷಕ್ಕೆ ಲಭ್ಯವಿವೆ.

5. ಹೊಸ ಜಿಡಿಪಿ (GDP) ಸರಣಿಯಲ್ಲಿ, ಎಷ್ಟು ವರ್ಷಗಳ ಹಿಂದಿನ ಸರಣಿಯ ದತ್ತಾಂಶವನ್ನು (back-series data) ಒದಗಿಸಲಾಗುತ್ತದೆ? ನಾವು ಇದನ್ನು ಯಾವಾಗ ನಿರೀಕ್ಷಿಸಬಹುದು?

2026ರ ಫೆಬ್ರವರಿ 27 ರಂದು, 2022-23 ರಿಂದ 2025-26 ರವರೆಗಿನ ವಾರ್ಷಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಹಿಂದಿನ ಸರಣಿಯ ದತ್ತಾಂಶವು 2026ರ ಡಿಸೆಂಬರ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಭಾರತದ ರೂಢಿಯಂತೆ, ಹಿಂದಿನ ಸರಣಿಯ ಅಂದಾಜುಗಳನ್ನು ಹೊಸ ಜಿಡಿಪಿ ಸರಣಿಯ ಪರಿಷ್ಕೃತ ವಿಧಾನವನ್ನು ಬಳಸಿ ಹಿಂದಿನ ಮೂಲ ವರ್ಷದವರೆಗೆ ಮರು-ಲೆಕ್ಕಾಚಾರ ಮಾಡಲಾಗುತ್ತದೆ. ಅದರ ನಂತರ, ದತ್ತಾಂಶವನ್ನು ವಿಂಗಡಿತ ಮಟ್ಟದಲ್ಲಿ (disaggregated level) ಜೋಡಿಸಿ 1950-51 ರವರೆಗೆ ವಿಸ್ತರಿಸಲಾಗುತ್ತದೆ. ಆದಾಗ್ಯೂ, ಹಿಂದಿನ ಸರಣಿಯನ್ನು ಸಿದ್ಧಪಡಿಸುವ ಅಂತಿಮ ವಿಧಾನವನ್ನು MoSPI ಗೆ ಮಾರ್ಗದರ್ಶನ ನೀಡಲು ರಚಿಸಲಾದ ಸಲಹಾ ಸಮಿತಿಯೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುತ್ತದೆ.

6. ಪರಿಷ್ಕೃತ ಜಿಡಿಪಿ ಸರಣಿಯು ವಿಶ್ವಸಂಸ್ಥೆಯ ರಾಷ್ಟ್ರೀಯ ಲೆಕ್ಕಪತ್ರ ವ್ಯವಸ್ಥೆಯಂತಹ (UN System of National Accounts) ಅಂತಾರಾಷ್ಟ್ರೀಯ ಅಂಕಿಅಂಶಗಳ ಮಾನದಂಡಗಳೊಂದಿಗೆ ಎಷ್ಟು ಹೋಲಿಕೆಯಾಗುತ್ತದೆ?

ಭಾರತವು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಮಾನದಂಡವಾದ 2008ರ ರಾಷ್ಟ್ರೀಯ ಲೆಕ್ಕಪತ್ರ ವ್ಯವಸ್ಥೆ (SNA 2008) ಪ್ರಕಾರ ತನ್ನ ಜಿಡಿಪಿ ಅಂದಾಜುಗಳನ್ನು ಸಿದ್ಧಪಡಿಸುತ್ತದೆ. ವಿಶ್ವಸಂಸ್ಥೆಯ ಅಂಕಿಅಂಶಗಳ ವಿಭಾಗವು (UNSD) ಈಗ SNA 2008 ರಿಂದ SNA 2025 ಕ್ಕೆ ಬದಲಾಗುತ್ತಿದೆ. ದೇಶಗಳು 2029-30 ರ ಅವಧಿಯಲ್ಲಿ ಹೊಸ ಮಾನದಂಡವನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಭಾರತವು ತನ್ನ ಮುಂದಿನ ಮೂಲ ವರ್ಷದ ಪರಿಷ್ಕರಣೆಯಲ್ಲಿ SNA 2025 ಕ್ಕೆ ಬದಲಾಗಲು ಯೋಜಿಸಿದೆ. ಇದಲ್ಲದೆ, ಭಾರತವು ಐಎಂಎಫ್ (IMF) ನ ವಿಶೇಷ ದತ್ತಾಂಶ ಪ್ರಸರಣ ಮಾನದಂಡದ (SDDS) ಚಂದಾದಾರರಾಗಿದ್ದು, ಇದು ದೇಶವು ಉತ್ತಮ ಸಂಖ್ಯಾಶಾಸ್ತ್ರೀಯ ಪೌರತ್ವದ ಎಲ್ಲಾ ಪರೀಕ್ಷೆಗಳನ್ನು ಪೂರೈಸುತ್ತದೆ ಎಂದು ಸೂಚಿಸುತ್ತದೆ. ಪರಿಷ್ಕೃತ ಸರಣಿಯು ಅಂತಾರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಮಾನದಂಡಗಳೊಂದಿಗೆ ಸಮನ್ವಯದಲ್ಲಿದೆ.

7. ಹೊಸ ಸರಣಿಯಲ್ಲಿ ಬಳಸಲಾದ ವಿಧಾನ ಮತ್ತು ದತ್ತಾಂಶ ಮೂಲಗಳ ಕುರಿತು ವಿವರವಾದ ದಾಖಲೆಯನ್ನು ಬಿಡುಗಡೆ ಮಾಡಲು MoSPI ಯೋಜಿಸುತ್ತಿದೆಯೇ?

ಹೌದು. ಅಂದಾಜುಗಳ ಸಂಕಲನದಲ್ಲಿ ಬಳಸಲಾದ ವಿಧಾನ ಮತ್ತು ದತ್ತಾಂಶ ಮೂಲಗಳನ್ನು MoSPI ನ ಪ್ರಕಟಣೆಯಾದ 'ಮೂಲಗಳು ಮತ್ತು ವಿಧಾನಗಳು' (Sources and Methods) ಎಂಬಲ್ಲಿ ಸಮಗ್ರವಾಗಿ ಪ್ರಸ್ತುತಪಡಿಸಲಾಗುತ್ತದೆ. ಈ ಪ್ರಕಟಣೆಯು ಮುಂದಿನ ಕೆಲವು ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

8. ಹೊಸ ಜಿಡಿಪಿ (GDP) ಸರಣಿಯಲ್ಲಿ ಯಾವ ಹೊಸ ದತ್ತಾಂಶಗಳನ್ನು ಸೇರಿಸಲಾಗುತ್ತಿದೆ?

ಅಂದಾಜುಗಳನ್ನು ಹೆಚ್ಚು ನಿಖರ ಮತ್ತು ವಿಶ್ವಾಸಾರ್ಹವಾಗಿಸಲು ಹೊಸ ಜಿಡಿಪಿ ಸರಣಿಯಲ್ಲಿ ಹಲವಾರು ಹೊಸ ಮತ್ತು ಸುಧಾರಿತ ದತ್ತಾಂಶ ಮೂಲಗಳನ್ನು ಬಳಸಲಾಗುತ್ತಿದೆ.

ಗೃಹ ವಲಯದ ಮಾಪನ: ಈ ಹಿಂದೆ, ಗೃಹ ವಲಯವನ್ನು ಸಮೀಕ್ಷೆಗಳ ನಡುವಿನ ಬೆಳವಣಿಗೆಯ ದರಗಳು ಅಥವಾ ಪ್ರಾಕ್ಸಿ ಸೂಚಕಗಳನ್ನು ಬಳಸಿಕೊಂಡು ಅಂದಾಜಿಸಲಾಗುತ್ತಿತ್ತು. ಹೊಸ ಸರಣಿಯಲ್ಲಿ, ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ASUSE) ಮತ್ತು ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆಯಂತಹ (PLFS) ನಿಯಮಿತ ವಾರ್ಷಿಕ ಸಮೀಕ್ಷೆಗಳನ್ನು ಬಳಸಿಕೊಂಡು ನೈಜ ಮಟ್ಟದ ಅಂದಾಜುಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಸಮೀಕ್ಷೆಗಳು ಗೃಹ ವಲಯದ ಕ್ರಿಯಾಶೀಲತೆಯನ್ನು ಹೆಚ್ಚು ನಿಖರವಾಗಿ ಮತ್ತು ನಿಯಮಿತವಾಗಿ ಅಳೆಯುತ್ತವೆ. ಇತರ ದತ್ತಾಂಶ ಮೂಲಗಳಿಂದ ಪಡೆದ ಅಂದಾಜುಗಳನ್ನು ಕ್ರಾಸ್-ಚೆಕ್ ಮಾಡಲು ಜಿಎಸ್‌ಟಿ (GST) ದತ್ತಾಂಶವನ್ನೂ ಸಹ ಬಳಸಲಾಗುತ್ತದೆ.

ಜಿ ಎಸ್ಟಿ ದತ್ತಾಂಶ: ಖಾಸಗಿ ಕಾರ್ಪೊರೇಟ್ ವಲಯದ ಅಖಿಲ ಭಾರತ ಅಂದಾಜುಗಳನ್ನು ರಾಜ್ಯಗಳಾದ್ಯಂತ ಹಂಚಿಕೆ ಮಾಡಲು ಮತ್ತು ವಾರ್ಷಿಕ ಲೆಕ್ಕಪತ್ರಗಳಲ್ಲಿ ಕ್ರಾಸ್-ವ್ಯಾಲಿಡೇಶನ್‌ ಗಾಗಿ ಜಿ ಎಸ್‌ ಟಿ ದತ್ತಾಂಶವನ್ನು ಬಳಸಲಾಗುತ್ತಿದೆ; ಇದರ ಜೊತೆಗೆ ಕ್ವಾರ್ಟರ್‌ನೈಸೇಶನ್‌ನಲ್ಲಿ ಮತ್ತು ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರಗಳಲ್ಲಿ ಸೂಚಕವಾಗಿಯೂ ಇದರ ವ್ಯಾಪಕ ಬಳಕೆಯಾಗುತ್ತಿದೆ.

-ವಾಹನ (e-Vahan): ರಸ್ತೆ ಸಾರಿಗೆ ಸೇವೆಗಳಿಗೆ ಸಂಬಂಧಿಸಿದ ಖಾಸಗಿ ಅಂತಿಮ ಬಳಕೆ ವೆಚ್ಚವನ್ನು (PFCE) ಅಂದಾಜು ಮಾಡಲು ಇ-ವಾಹನ ದತ್ತಾಂಶವನ್ನು ಬಳಸಲಾಗುತ್ತಿದೆ.

ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS): ಕೇಂದ್ರ ಸರ್ಕಾರದ ಅಂದಾಜುಗಳನ್ನು ಕ್ರೋಢೀಕರಿಸಲು ಮತ್ತು ಅವುಗಳನ್ನು ರಾಜ್ಯಗಳ ನಡುವೆ ಹಂಚಿಕೆ ಮಾಡಲು ಪಿ ಎಫ್‌ ಎಂ ಎಸ್ (PFMS) ದತ್ತಾಂಶವನ್ನು ಬಳಸಲಾಗುತ್ತಿದೆ. ಇದು ಎಫ್‌ ಆರ್‌ ಇ (FRE) ಹಂತದಲ್ಲಿಯೇ ಪರಿಷ್ಕೃತ ಅಂದಾಜುಗಳ (RE) ಬದಲಿಗೆ ನೈಜ ವೆಚ್ಚದ ದತ್ತಾಂಶವನ್ನು ಬಳಸಲು ಅನುವು ಮಾಡಿಕೊಡುತ್ತದೆ.

ಅಧ್ಯಯನಗಳು: ತಜ್ಞ ಸಂಸ್ಥೆಗಳು ನಡೆಸಿದ ಇತ್ತೀಚಿನ ಅಧ್ಯಯನಗಳ ಆಧಾರದ ಮೇಲೆ ಹೊಸ ಮತ್ತು ನವೀಕರಿಸಿದ ದರಗಳು ಮತ್ತು ಅನುಪಾತಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಇವು ಸೇರಿವೆ: (i) ಕೃಷಿಗಾಗಿ 'ಇಂಡಿಯನ್ ಗ್ರಾಸ್‌ ಲ್ಯಾಂಡ್ ಅಂಡ್ ಫೋಡರ್ ರಿಸರ್ಚ್ ಇನ್‌ಸ್ಟಿಟ್ಯೂಟ್' ನಡೆಸಿದ ಹುಲ್ಲು ಮತ್ತು ಮೇವಿನ ಅಧ್ಯಯನ; (ii) 'ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್' ಮತ್ತು 'ಸೆಂಟ್ರಲ್ ಇನ್‌ಲ್ಯಾಂಡ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್' ನಡೆಸಿದ ಮೀನುಗಾರಿಕೆ ಅಧ್ಯಯನಗಳು; (iii) ಖಾಸಗಿ ಅಂತಿಮ ಬಳಕೆ ವೆಚ್ಚದಲ್ಲಿ (PFCE) ಬಳಸಲು 'ನ್ಯಾಷನಲ್ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್' ಹಾಲು ಮತ್ತು ಹಾಲಿನ ಉತ್ಪನ್ನಗಳ ಕುರಿತು ನಡೆಸಿದ ಅಧ್ಯಯನ; ಮತ್ತು (iv) ಖಾಸಗಿ ಅಂತಿಮ ಬಳಕೆ ವೆಚ್ಚಕ್ಕಾಗಿ (PFCE) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ಸಾರಿಗೆ ಸೇವೆಗಳ ಕುರಿತು ನಡೆಸಿದ ಅಧ್ಯಯನ.

9. ಹೊಸ ಜಿಡಿಪಿ (GDP) ಸರಣಿಯಲ್ಲಿನ ಪ್ರಮುಖ ಕ್ರಮಬದ್ಧ ಬದಲಾವಣೆಗಳು ಯಾವುವು?

ಪ್ರಮುಖ ಕ್ರಮಬದ್ಧ ಸುಧಾರಣೆಗಳು ಈ ಕೆಳಗಿನಂತಿವೆ:

· ಗೃಹ ವಲಯದ ಮಾಪನದಲ್ಲಿ ಹೆಚ್ಚಿನ ಕ್ರಿಯಾಶೀಲತೆ: ಹಳೆಯ ಸರಣಿಯಲ್ಲಿ, ಗೃಹ ವಲಯವನ್ನು ಸಮೀಕ್ಷೆಗಳ ನಡುವಿನ ಬೆಳವಣಿಗೆಯ ಮೂಲಕ ಅಥವಾ ಪ್ರಾಕ್ಸಿ ಸೂಚಕಗಳ ಮೂಲಕ ಅಂದಾಜಿಸಲಾಗುತ್ತಿತ್ತು. ಹೊಸ ಸರಣಿಯಲ್ಲಿ, ಪ್ರತಿ ವರ್ಷ ನಡೆಸಲಾಗುವ ನಿಯಮಿತ ಸಮೀಕ್ಷೆಗಳ (ASUSE ಮತ್ತು PLFS) ಮೂಲಕ ಮಟ್ಟದ ಅಂದಾಜುಗಳನ್ನು (level estimates) ಸಿದ್ಧಪಡಿಸಲಾಗುತ್ತಿದೆ.

· ಡಬಲ್ ಡಿಫ್ಲೇಷನ್ ಅಥವಾ ಸಿಂಗಲ್ ಎಕ್ಸ್ಟ್ರಾಪೋಲೇಷನ್ ಬಳಕೆ: ಹೊಸ ಸರಣಿಯಲ್ಲಿ, ಉತ್ಪಾದನಾ ಮತ್ತು ಕೃಷಿ ವಲಯದಲ್ಲಿ 'ಡಬಲ್ ಡಿಫ್ಲೇಷನ್' (double deflation) ಅನ್ನು ಬಳಸಲಾಗುತ್ತಿದೆ ಮತ್ತು ಇತರ ಕಡೆಗಳಲ್ಲಿ 'ಸಿಂಗಲ್ ಎಕ್ಸ್‌ಟ್ರಾಪೋಲೇಷನ್' (single extrapolation) ಬಳಸಲಾಗುತ್ತಿದೆ. 'ಸಿಂಗಲ್ ಡಿಫ್ಲೇಷನ್' ಅನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಡಿಫ್ಲೇಟರ್‌ ಗಳನ್ನು ಇನ್ನಷ್ಟು ಸೂಕ್ಷ್ಮ ಮಟ್ಟದಲ್ಲಿ ಬಳಸಲಾಗುತ್ತದೆ. ಹೊಸ ಜಿಡಿಪಿ ಸರಣಿಯಲ್ಲಿ ವಿವಿಧ ಸರಕು ಮತ್ತು ಸೇವೆಗಳಿಗಾಗಿ 260ಕ್ಕೂ ಹೆಚ್ಚು ಸೂಕ್ಷ್ಮ ಮಟ್ಟದ ಸಿಪಿಐ (CPI) ಗಳನ್ನು ಬಳಸಲಾಗುತ್ತಿದೆ.

· ಪೂರೈಕೆ ಮತ್ತು ಬಳಕೆಯ ಟೇಬಲ್ಗಳ (SUT) ಮೂಲಕ ಕಡಿಮೆ ವ್ಯತ್ಯಾಸ: ಉತ್ಪಾದನೆ ಮತ್ತು ವೆಚ್ಚದ ವಿಧಾನಗಳಿಂದ ಬರುವ ಜಿಡಿಪಿ ನಡುವಿನ ವ್ಯತ್ಯಾಸವನ್ನು ಕನಿಷ್ಠಗೊಳಿಸಲು SUT ಚೌಕಟ್ಟನ್ನು ರಾಷ್ಟ್ರೀಯ ಲೆಕ್ಕಪತ್ರ ಚೌಕಟ್ಟಿನೊಂದಿಗೆ ಸಂಯೋಜಿಸಲಾಗುತ್ತಿದೆ. ಕೈಗಾರಿಕೆಗಳು ಏನನ್ನು ಉತ್ಪಾದಿಸುತ್ತವೆ (ಪೂರೈಕೆ) ಮತ್ತು ಉತ್ಪನ್ನಗಳನ್ನು ಕೈಗಾರಿಕೆಗಳು ಅಥವಾ ಅಂತಿಮ ಗ್ರಾಹಕರು ಹೇಗೆ ಬಳಸುತ್ತಾರೆ (ಬಳಕೆ) ಎಂಬುದನ್ನು SUT ತೋರಿಸುತ್ತದೆ. ಸಮತೋಲಿತ SUT ಆರ್ಥಿಕತೆಯಲ್ಲಿ ಒಟ್ಟು ಪೂರೈಕೆಯು ಒಟ್ಟು ಬೇಡಿಕೆಗೆ ಹೊಂದಿಕೆಯಾಗುವುದನ್ನು ಖಚಿತಪಡಿಸುತ್ತದೆ.

· ನವೀಕರಿಸಿದ ದರಗಳು ಮತ್ತು ಅನುಪಾತಗಳು: ಸಂಕಲನದಲ್ಲಿ ಬಳಸಲಾಗುವ ದರಗಳು ಮತ್ತು ಅನುಪಾತಗಳನ್ನು ಮಧ್ಯಂತರ ಅವಧಿಯಲ್ಲಿ ಲಭ್ಯವಿರುವ ಸಮೀಕ್ಷೆಗಳಿಂದ ಅಥವಾ ಇತರ ತಜ್ಞ ಸಂಸ್ಥೆಗಳ ಸಹಯೋಗದೊಂದಿಗೆ MoSPI ನಡೆಸಿದ ಅಧ್ಯಯನಗಳ ಮೂಲಕ ಪರಿಷ್ಕರಿಸಲಾಗುತ್ತಿದೆ.

· ಬಹು-ಚಟುವಟಿಕೆಯ ಖಾಸಗಿ ಕಾರ್ಪೊರೇಷನ್ಗಳ ಪ್ರತ್ಯೇಕೀಕರಣ: ಹಳೆಯ ಸರಣಿಯಲ್ಲಿ, ಬಹು-ಚಟುವಟಿಕೆಯ ಉದ್ದಿಮೆಗಳ ಒಟ್ಟು ಮೌಲ್ಯವರ್ಧನೆಯನ್ನು ಆ ಉದ್ದಿಮೆಯ ಪ್ರಮುಖ ಚಟುವಟಿಕೆಗೆ ನಿಗದಿಪಡಿಸಲಾಗುತ್ತಿತ್ತು. ಹೊಸ ಸರಣಿಯಲ್ಲಿ, MGT-7/7A ದತ್ತಾಂಶವು ಲಭ್ಯವಿರುವುದರಿಂದ (ಇಲ್ಲಿ ಕಾರ್ಪೊರೇಷನ್‌ಗಳು ವಹಿವಾಟಿನಲ್ಲಿ ಚಟುವಟಿಕೆವಾರು ಪಾಲನ್ನು ವರದಿ ಮಾಡುವುದು ಕಡ್ಡಾಯವಾಗಿದೆ), ಇದನ್ನು ವಿವಿಧ ಚಟುವಟಿಕೆಗಳಾದ್ಯಂತ ಒಟ್ಟು ಮೌಲ್ಯವರ್ಧನೆಯನ್ನು (ಮತ್ತು ಇತರ ಸಮೂಹಗಳನ್ನು) ಪ್ರತ್ಯೇಕಿಸಲು ಬಳಸಲಾಗುತ್ತಿದೆ.

· PFCE ಹೆಚ್ಚು ಸೂಕ್ಷ್ಮ ಅಂದಾಜು: ಹೊಸ ಸರಣಿಯು ಮಿಶ್ರ ವಿಧಾನವನ್ನು ಬಳಸುತ್ತದೆ: (ಎ) ಕುಟುಂಬ ಗ್ರಾಹಕ ವೆಚ್ಚ ಸಮೀಕ್ಷೆಯ ಹೆಚ್ಚಿನ ಬಳಕೆ; (ಬಿ) ಉತ್ಪಾದನೆ ಮತ್ತು ಇತರ ದತ್ತಾಂಶ ಮೂಲಗಳ ಆಧಾರದ ಮೇಲೆ ನೇರ ಅಂದಾಜು; (ಸಿ) ಕಮೊಡಿಟಿ ಫ್ಲೋ ವಿಧಾನ. ಇತ್ತೀಚಿನ ಸಂಬಂಧಿತ ಮಾನದಂಡವಾದ COICOP 2018 ಅನ್ನು ಸಹ ಅಳವಡಿಸಿಕೊಳ್ಳಲಾಗಿದೆ.

· ಹೊಸ ದತ್ತಾಂಶ ಮೂಲಗಳು: ಅಂದಾಜುಗಳ ಸಂಕಲನ ಮತ್ತು ದೃಢೀಕರಣಕ್ಕಾಗಿ ಅಸ್ತಿತ್ವದಲ್ಲಿರುವ ದತ್ತಾಂಶ ಮೂಲಗಳನ್ನು ಹೆಚ್ಚಿಸಲು ಜಿಎಸ್‌ಟಿ (GST) ದತ್ತಾಂಶ, ಪಿ ಎಫ್‌ ಎಂ ಎಸ್ (PFMS), ಇ-ವಾಹನ ಮತ್ತು ಕಡಿಮೆ ಸಮಯದ ಅಂತರದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ಸಮಗ್ರವಾಗಿರುವ ಇತರ ಮೂಲಗಳನ್ನು ಅನ್ವೇಷಿಸಲಾಗಿದೆ.

10. ಮೇಲೆ ಪಟ್ಟಿ ಮಾಡಲಾದ ಸುಧಾರಣೆಗಳ ವಿವರಗಳನ್ನು ಎಲ್ಲಿಂದ ಪಡೆಯಬಹುದು?

ಪದ್ಧತಿಯ ಸುಧಾರಣೆಗಳು, ಹೊಸ ದತ್ತಾಂಶ ಮೂಲಗಳ ಸೇರ್ಪಡೆ ಮುಂತಾದ ವಿಷಯಗಳ ಬಗ್ಗೆ MoSPI ಗೆ ಸಲಹೆ ನೀಡಲು 2024 ರಲ್ಲಿ ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳ ಸಲಹಾ ಸಮಿತಿಯನ್ನು (ACNAS) ರಚಿಸಲಾಯಿತು. ನಿರ್ದಿಷ್ಟ ವಿಷಯಗಳ ಬಗ್ಗೆ ಏಕಕಾಲದಲ್ಲಿ ಚರ್ಚಿಸಲು ACNAS ಅಡಿಯಲ್ಲಿ ಐದು ಉಪ-ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳ ಸದಸ್ಯರಾಗಿದ್ದ 56 ತಜ್ಞರು ಕಳೆದ ಎರಡು ವರ್ಷಗಳಲ್ಲಿ ಈ ವಿಷಯಗಳ ಬಗ್ಗೆ 40 ಸಭೆಗಳಲ್ಲಿ ಚರ್ಚಿಸಿದ್ದಾರೆ.

ಮೇಲೆ ತಿಳಿಸಲಾದ ಸುಧಾರಣೆಗಳ ವಿವರಗಳು ಅಖಿಲ ಭಾರತ ಅಂದಾಜುಗಳಿಗೆ ಸಂಬಂಧಿಸಿದ ಮೂರು ಉಪ-ಸಮಿತಿಗಳ ವರದಿಗಳಲ್ಲಿ ಲಭ್ಯವಿದ್ದು, ಇವು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಪ್ರಾದೇಶಿಕ ಲೆಕ್ಕಪತ್ರಗಳ ಉಪ-ಸಮಿತಿ ಮತ್ತು SNA ಅಪ್‌ಡೇಟ್ ಉಪ-ಸಮಿತಿಯ ವರದಿಯನ್ನು ನಂತರ ಬಿಡುಗಡೆ ಮಾಡಲಾಗುವುದು.

11. ಭಾರತದ ಗೃಹ ವಲಯವನ್ನು ಹೆಚ್ಚು ಸಮಗ್ರವಾಗಿ ಸೆರೆಹಿಡಿಯಲು ಹೊಸ ಸರಣಿಯಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ?

ಹಳೆಯ ಸರಣಿಯಲ್ಲಿ, ಅಸಂಘಟಿತ ವಲಯದ ಉದ್ದಿಮೆಗಳ ಸಮೀಕ್ಷೆ ಮತ್ತು ಉದ್ಯೋಗ ಸಮೀಕ್ಷೆಯನ್ನು ಬಳಸಿಕೊಂಡು ಮೂಲ ವರ್ಷಕ್ಕಾಗಿ ಗೃಹ ವಲಯವನ್ನು ಅಂದಾಜಿಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ, ಸಮೀಕ್ಷೆಗಳ ನಡುವಿನ ಬೆಳವಣಿಗೆ ಅಥವಾ ಪ್ರಾಕ್ಸಿ ಸೂಚಕಗಳನ್ನು ಬಳಸಿಕೊಂಡು ಮೂಲ ವರ್ಷದ ಅಂದಾಜನ್ನು ವಿಸ್ತರಿಸುವ (extrapolating) ಮೂಲಕ ಅಂದಾಜುಗಳನ್ನು ಮಾಡಲಾಗುತ್ತಿತ್ತು.

ಆದಾಗ್ಯೂ, ಹೊಸ ಸರಣಿಯಲ್ಲಿ, ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ASUSE) ಮತ್ತು ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆಯಂತಹ (PLFS) ನಿಯಮಿತ ಸಮೀಕ್ಷೆಗಳನ್ನು ಬಳಸಿಕೊಂಡು ಪ್ರತಿ ವರ್ಷ ಗೃಹ ವಲಯದ ನೈಜ ಮಟ್ಟದ ಅಂದಾಜುಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ವಿಧಾನವು ಕುಟುಂಬ ವಲಯವನ್ನು ಹೆಚ್ಚು ನಿಖರವಾಗಿ ಮತ್ತು ಕ್ರಿಯಾಶೀಲವಾಗಿ ಅಳೆಯಲು ಅನುವು ಮಾಡಿಕೊಡುತ್ತದೆ, ಹಾಗೂ ಮೂಲ ವರ್ಷದಿಂದ ವಿಸ್ತರಿಸುವ (extrapolation) ಅಗತ್ಯವನ್ನು ನಿವಾರಿಸುತ್ತದೆ.

12. ಕುಟುಂಬಗಳು ನೇಮಿಸಿಕೊಳ್ಳುವ ಮನೆಗೆಲಸದವರ (ಅಡುಗೆಯವರು, ಚಾಲಕರು, ಮನೆ ಸ್ವಚ್ಛಗೊಳಿಸುವವರು ಇತ್ಯಾದಿ) ಕೊಡುಗೆಯನ್ನು ಜಿಡಿಪಿ ಅಂದಾಜಿನಲ್ಲಿ ಸೇರಿಸಲಾಗಿದೆಯೇ?

ಹೌದು, ಇಂತಹ ಚಟುವಟಿಕೆಗಳನ್ನು "ಮನೆಗೆಲಸದ ಸಿಬ್ಬಂದಿಯ ಉದ್ಯೋಗದಾತರಾಗಿ ಕುಟುಂಬಗಳ ಚಟುವಟಿಕೆಗಳು" ಎಂದು ಕರೆಯಲಾಗುತ್ತದೆ ಮತ್ತು ಅವರ ಕೊಡುಗೆಯನ್ನು ಜಿಡಿಪಿ ಅಂದಾಜಿನಲ್ಲಿ ಸೇರಿಸಲಾಗುತ್ತದೆ. ವಾರ್ಷಿಕ PLFS ದತ್ತಾಂಶದಿಂದ ಲಭ್ಯವಿರುವ ಅಂತಹ ಕಾರ್ಮಿಕರ ಸಂಖ್ಯೆ ಮತ್ತು ಅವರ ವೇತನದ ಆಧಾರದ ಮೇಲೆ ಈ ಅಂದಾಜನ್ನು ಮಾಡಲಾಗುತ್ತದೆ.

13. ಪರಿಷ್ಕೃತ ಮೂಲ ವರ್ಷವು ಡಿಜಿಟಲ್ ಸೇವೆಗಳು, ಪ್ಲಾಟ್ಫಾರ್ಮ್ ಎಕಾನಮಿ, ಗಿಗ್ ವರ್ಕರ್ಸ್ ಮುಂತಾದ ಹೊಸ ವಲಯಗಳ ಮಾಪನವನ್ನು ಹೇಗೆ ಸುಧಾರಿಸುತ್ತದೆ?

ಕಾರ್ಪೊರೇಟ್ ವಲಯಕ್ಕೆ ಸಂಬಂಧಿಸಿದ ಡಿಜಿಟಲ್ ಸೇವೆಗಳು ಮತ್ತು ಮಧ್ಯವರ್ತಿ ಪ್ಲಾಟ್‌ ಫಾರ್ಮ್‌ಗಳು ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಈಗಾಗಲೇ MCA-21 ದತ್ತಾಂಶದ ಮೂಲಕ ಒಳಗೊಳ್ಳಲಾಗಿತ್ತು.

2022-23ರ ಸರಣಿಯಲ್ಲಿ, ASUSE ಮತ್ತು PLFS ಎಂಬ ಎರಡು ವಾರ್ಷಿಕ ಸಮೀಕ್ಷೆಗಳ ಲಭ್ಯತೆಯೊಂದಿಗೆ, ಕುಟುಂಬ ವಲಯದಲ್ಲಿನ (ಅಸಂಘಟಿತ ಸಣ್ಣ ಉದ್ಯಮಗಳು, ಸ್ವಯಂ ಉದ್ಯೋಗಿಗಳು, ಅನೌಪಚಾರಿಕ ಆರ್ಥಿಕ ಕೆಲಸ ಇತ್ಯಾದಿ) ಈ ವಲಯಗಳ ಜಿಡಿಪಿ ಕೊಡುಗೆಯನ್ನು ಈ ಸಮೀಕ್ಷೆ ಆಧಾರಿತ ಅಂದಾಜುಗಳ ಮೂಲಕ ವಾರ್ಷಿಕವಾಗಿ ಹೆಚ್ಚು ನಿಖರವಾಗಿ ಸೆರೆಹಿಡಿಯಲಾಗುತ್ತಿದೆ. ಅಗ್ರಿಗೇಟರ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಚಾಲಕರು (ಓಲಾ, ಉಬರ್ ಇತ್ಯಾದಿ) ಮತ್ತು ವಿತರಣಾ ಸೇವಾ ಚಟುವಟಿಕೆಗಳಂತಹ (ಝೊಮ್ಯಾಟೊ, ಸ್ವಿಗ್ಗಿ ಇತ್ಯಾದಿ) ಗಿಗ್ ವರ್ಕರ್ಸ್‌ಗಳನ್ನು ಸೆರೆಹಿಡಿಯಲು ASUSE ಮೀಸಲಾದ ಆರ್ಥಿಕ ಚಟುವಟಿಕೆ ಕೋಡ್‌ಗಳನ್ನು ಹೊಂದಿದೆ. ಹೊಸ ಸರಣಿಯಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚು ಸಮಗ್ರವಾಗಿ ಸೆರೆಹಿಡಿಯಲಾಗುತ್ತಿದೆ.

14. ಜಿಡಿಪಿ ಡಿಫ್ಲೇಟರ್ (GDP deflator) ನಿಖರತೆಗೆ ಸಂಬಂಧಿಸಿದ ನಿರಂತರ ಆತಂಕಗಳನ್ನು ಹೊಸ ಸರಣಿಯು ಸಮಗ್ರವಾಗಿ ಪರಿಹರಿಸುತ್ತದೆಯೇ?

ಹೌದು. ಜಿಡಿಪಿಯ ಮೂಲ ವರ್ಷದ ಪರಿಷ್ಕರಣೆಗೆ ಮಾರ್ಗದರ್ಶನ ನೀಡಲು ಸಲಹಾ ಸಮಿತಿಯನ್ನು ರಚಿಸಲಾಗಿತ್ತು. ಒಂದು ಉಪ-ಸಮಿತಿಯು ವಿಶೇಷವಾಗಿ ಡಿಫ್ಲೇಟರ್‌ ಗಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಿತು. ಸಮಿತಿಯ ಶಿಫಾರಸಿನಂತೆ, ಹೊಸ ಸರಣಿಯಲ್ಲಿ 'ಸಿಂಗಲ್ ಡಿಫ್ಲೇಷನ್' (single deflation) ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ವಾಸ್ತವವಾಗಿ, ಉತ್ಪಾದನಾ ಮತ್ತು ಕೃಷಿಯಂತಹ ವಲಯಗಳಲ್ಲಿ 'ಡಬಲ್ ಡಿಫ್ಲೇಷನ್' (double deflation) ಅನ್ನು ಅನ್ವಯಿಸಲಾಗುತ್ತಿದೆ. ಇತರ ವಲಯಗಳಲ್ಲಿ, 'ಸಿಂಗಲ್ ಎಕ್ಸ್‌ಟ್ರಾಪೋಲೇಷನ್' (single extrapolation) ಅನ್ನು ಬಳಸಲಾಗುತ್ತಿದೆ. ಡಿಫ್ಲೇಟರ್‌ಗಳನ್ನು ಹೆಚ್ಚು ವಿವರವಾದ, ಸೂಕ್ಷ್ಮ ಮಟ್ಟದಲ್ಲಿ (granular level) ಅನ್ವಯಿಸಲಾಗುತ್ತಿದೆ. ಈ ಬದಲಾವಣೆಗಳು ಹೊಸ ಸರಣಿಯಲ್ಲಿ ಜಿಡಿಪಿ ಡಿಫ್ಲೇಟರ್‌ಗಳ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸುವ ನಿರೀಕ್ಷೆಯಿದೆ.

15. ಹೊಸ ಸರಣಿಯಲ್ಲಿ ಜಿಡಿಪಿ ಅಂದಾಜುಗಳನ್ನು ಲೆಕ್ಕಹಾಕಲು MoSPI ಇಂದಿಗೂ 2011-12 ಮೂಲ ವರ್ಷದ WPI ಅನ್ನು ಬಳಸುತ್ತಿದೆಯೇ? ಹೊಸ ಜಿಡಿಪಿ ಸರಣಿಯಲ್ಲಿ DPIIT ಸಿದ್ಧಪಡಿಸಿದ PPI ಅನ್ನು ಸಚಿವಾಲಯವು ಬಳಸುತ್ತದೆಯೇ?

WPI ನ ಮೂಲ ವರ್ಷದ ಪರಿಷ್ಕರಣೆ ಇನ್ನೂ ಪ್ರಗತಿಯಲ್ಲಿದೆ. ನವೀಕರಿಸಿದ WPI ಲಭ್ಯವಾಗುವವರೆಗೆ, ಅಸ್ತಿತ್ವದಲ್ಲಿರುವ WPI ಅನ್ನೇ ಡಿಫ್ಲೇಟರ್ ಆಗಿ ಬಳಸುವುದನ್ನು ಮುಂದುವರಿಸಲಾಗುತ್ತದೆ. ಆದಾಗ್ಯೂ, ಹಳೆಯ ಸರಣಿಗೆ ಹೋಲಿಸಿದರೆ ಹೊಸ ಸರಣಿಯಲ್ಲಿ WPI ಬಳಸುವ ವಿಧಾನವು ಬದಲಾವಣೆಗೆ ಒಳಗಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ. ಹೊಸ ಸರಣಿಯಲ್ಲಿ, WPI ಅನ್ನು ಸೂಕ್ಷ್ಮ ಮಟ್ಟದಲ್ಲಿ ಬಳಸಲಾಗುತ್ತದೆ. ಉತ್ಪಾದನಾ ವಲಯದಲ್ಲಿ ಔಟ್‌ಪುಟ್ (ಉತ್ಪನ್ನ) ಮತ್ತು ಮಧ್ಯಂತರ ಬಳಕೆಗಾಗಿ ಪ್ರತ್ಯೇಕ ಐಟಂ-ಮಟ್ಟದ WPI ಅನ್ನು ಬಳಸಲಾಗುತ್ತದೆ. ಉತ್ಪಾದನಾ ವಲಯದಲ್ಲಿ 'ಡಬಲ್ ಡಿಫ್ಲೇಷನ್' ಅಳವಡಿಕೆಯು ಅದರ GVA ಅಂದಾಜುಗಳ ಸುಧಾರಿತ ಮಾಪನಕ್ಕೆ ಅನುವು ಮಾಡಿಕೊಡುತ್ತದೆ; ಹಳೆಯ ಸರಣಿಯಲ್ಲಿ ಔಟ್‌ಪುಟ್ ಮತ್ತು ಇನ್‌ಪುಟ್ ಎರಡಕ್ಕೂ ಒಂದೇ WPI ಅನ್ನು ಬಳಸಲಾಗುತ್ತಿತ್ತು. ಐಟಂ ಮಟ್ಟದಲ್ಲಿ WPI ಅನ್ನು ಬಳಸುವುದರಿಂದ, ಐಟಂಗಳು ಮತ್ತು ಉಪ-ವರ್ಗಗಳಾದ್ಯಂತ ಒಟ್ಟುಗೂಡಿಸುವಾಗ ತೂಕದಲ್ಲಿನ ಬದಲಾವಣೆಗಳಿಂದ ಉಂಟಾಗುವ ವಿರೂಪಗಳನ್ನು ತಪ್ಪಿಸಬಹುದು.

ಹೆಚ್ಚುವರಿಯಾಗಿ, DPIIT ಯಿಂದ ಅಧಿಕೃತವಾಗಿ ಬಿಡುಗಡೆಯಾದ ನಂತರ ಮುಂದಿನ ದಿನಗಳಲ್ಲಿ PPI ಅನ್ನು ಸೇರಿಸಲು ಸಚಿವಾಲಯವು ಯೋಜಿಸಿದೆ.

16. ಪೂರೈಕೆ ಮತ್ತು ಬಳಕೆಯ ಟೇಬಲ್‌ (Supply and Use Table) ಚೌಕಟ್ಟು ಎಂದರೇನು?

ಪೂರೈಕೆ ಮತ್ತು ಬಳಕೆಯ ಟೇಬಲ್‌ ಗಳು ಉತ್ಪನ್ನಗಳನ್ನು (ಸರಕು ಮತ್ತು ಸೇವೆಗಳು) ಆರ್ಥಿಕತೆಗೆ ಹೇಗೆ ತರಲಾಗುತ್ತದೆ (ದೇಶೀಯ ಉತ್ಪಾದನೆಯ ಫಲವಾಗಿ ಅಥವಾ ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಮೂಲಕ) ಮತ್ತು ಅದೇ ಉತ್ಪನ್ನಗಳನ್ನು ಹೇಗೆ ಬಳಸಲಾಗುತ್ತದೆ (ಮಧ್ಯಂತರ ಬಳಕೆಯಾಗಿ ಅಥವಾ ಕುಟುಂಬಗಳು, ಕುಟುಂಬಗಳಿಗೆ ಸೇವೆ ಸಲ್ಲಿಸುವ ಲಾಭರಹಿತ ಸಂಸ್ಥೆಗಳು (NPISHs), ಸಾಮಾನ್ಯ ಸರ್ಕಾರದಿಂದ ಅಂತಿಮ ಬಳಕೆಯಾಗಿ ಅಥವಾ ಒಟ್ಟು ಬಂಡವಾಳ ರಚನೆಯಾಗಿ ಅಥವಾ ರಫ್ತುಗಳಾಗಿ) ಎಂಬುದನ್ನು ವಿವರಿಸುತ್ತದೆ. ಜಿಡಿಪಿಯನ್ನು ಅಳೆಯುವ ಉತ್ಪಾದನೆ, ಆದಾಯ ಮತ್ತು ವೆಚ್ಚದ ವಿಧಾನಗಳ ಎಲ್ಲಾ ಘಟಕಗಳನ್ನು ಸಮತೋಲನಗೊಳಿಸಲು ಮತ್ತು ಸಂಯೋಜಿಸಲು ಪೂರೈಕೆ ಮತ್ತು ಬಳಕೆಯ ಟೇಬಲ್‌ ಗಳು ಪ್ರಬಲವಾದ ಚೌಕಟ್ಟನ್ನು ಒದಗಿಸುತ್ತವೆ.

17. ಪೂರೈಕೆ ಮತ್ತು ಬಳಕೆಯ ಟೇಬಲ್‌ (Supply and Use Table) ಚೌಕಟ್ಟು ಎಂದರೇನು?

ಪೂರೈಕೆ ಮತ್ತು ಬಳಕೆಯ ಟೇಬಲ್‌ ಗಳು ಉತ್ಪನ್ನಗಳನ್ನು (ಸರಕು ಮತ್ತು ಸೇವೆಗಳು) ಆರ್ಥಿಕತೆಗೆ ಹೇಗೆ ತರಲಾಗುತ್ತದೆ (ದೇಶೀಯ ಉತ್ಪಾದನೆಯ ಫಲವಾಗಿ ಅಥವಾ ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಮೂಲಕ) ಮತ್ತು ಅದೇ ಉತ್ಪನ್ನಗಳನ್ನು ಹೇಗೆ ಬಳಸಲಾಗುತ್ತದೆ (ಮಧ್ಯಂತರ ಬಳಕೆಯಾಗಿ ಅಥವಾ ಕುಟುಂಬಗಳು, ಕುಟುಂಬಗಳಿಗೆ ಸೇವೆ ಸಲ್ಲಿಸುವ ಲಾಭರಹಿತ ಸಂಸ್ಥೆಗಳು (NPISHs), ಸಾಮಾನ್ಯ ಸರ್ಕಾರದಿಂದ ಅಂತಿಮ ಬಳಕೆಯಾಗಿ ಅಥವಾ ಒಟ್ಟು ಬಂಡವಾಳ ರಚನೆಯಾಗಿ ಅಥವಾ ರಫ್ತುಗಳಾಗಿ) ಎಂಬುದನ್ನು ವಿವರಿಸುತ್ತದೆ. ಜಿಡಿಪಿಯನ್ನು ಅಳೆಯುವ ಉತ್ಪಾದನೆ, ಆದಾಯ ಮತ್ತು ವೆಚ್ಚದ ವಿಧಾನಗಳ ಎಲ್ಲಾ ಘಟಕಗಳನ್ನು ಸಮತೋಲನಗೊಳಿಸಲು ಮತ್ತು ಸಂಯೋಜಿಸಲು ಪೂರೈಕೆ ಮತ್ತು ಬಳಕೆಯ ಟೇಬಲ್‌ ಗಳು ಪ್ರಬಲವಾದ ಚೌಕಟ್ಟನ್ನು ಒದಗಿಸುತ್ತವೆ.

18. ದತ್ತಾಂಶದಲ್ಲಿ ವ್ಯತ್ಯಾಸವು ಏಕೆ ಉಂಟಾಗುತ್ತದೆ?

ವಿವಿಧ ಮೂಲಗಳಾದ್ಯಂತ ದತ್ತಾಂಶದ ವ್ಯಾಪ್ತಿಯಲ್ಲಿನ ವ್ಯತ್ಯಾಸಗಳು, ಮಾಹಿತಿ ಲಭ್ಯವಾಗುವಲ್ಲಿನ ಕಾಲ ವಿಳಂಬ, ಮುಂಗಡ ಅಂದಾಜುಗಳಿಗಾಗಿ ಪ್ರಾಕ್ಸಿ ದತ್ತಾಂಶದ ಬಳಕೆ ಮತ್ತು ವಿಭಿನ್ನ ಅಂದಾಜು ವಿಧಾನಗಳಿಂದಾಗಿ ವ್ಯತ್ಯಾಸಗಳು ಉಂಟಾಗುತ್ತವೆ.

19. ವ್ಯತ್ಯಾಸವನ್ನು ನಿಭಾಯಿಸಲು SNA ಶಿಫಾರಸುಗಳು ಯಾವುವು?

ರಾಷ್ಟ್ರೀಯ ಲೆಕ್ಕಪತ್ರಗಳ ವ್ಯವಸ್ಥೆ 2008 (SNA 2008) ರ ಪ್ರಕಾರ ಮತ್ತು ರಾಷ್ಟ್ರೀಯ ಲೆಕ್ಕಪತ್ರಗಳ ವ್ಯವಸ್ಥೆ 2025 (SNA 2025) ರಲ್ಲಿ ಮುಂದುವರಿದಂತೆ, ಜಿಡಿಪಿ ಅಂದಾಜುಗಳಲ್ಲಿನ ಸಂಖ್ಯಾಶಾಸ್ತ್ರೀಯ ವ್ಯತ್ಯಾಸವನ್ನು ನಿಭಾಯಿಸಲು ಈ ಕೆಳಗಿನ ಶಿಫಾರಸುಗಳನ್ನು ಮಾಡಲಾಗಿದೆ:

  1. ಸಂಖ್ಯಾಶಾಸ್ತ್ರೀಯ ವ್ಯತ್ಯಾಸವನ್ನು ಅಧಿಕೃತ ಜಿಡಿಪಿ ಅಂದಾಜುಗಳ ಜೊತೆಗೆ ಸ್ಪಷ್ಟವಾಗಿ ತೋರಿಸಬೇಕು ಮತ್ತು ಪ್ರಕಟಿಸಬೇಕು. ಇದು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ, ಸಮಾನತೆಯನ್ನು ತರಲು ಅಂದಾಜುಗಳನ್ನು ಬಲವಂತವಾಗಿ ಹೊಂದಾಣಿಕೆ ಮಾಡುವ ಬದಲು ಬಳಕೆದಾರರಿಗೆ ಸಂಖ್ಯಾಶಾಸ್ತ್ರೀಯ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
  2. ii) ಪೂರೈಕೆ ಮತ್ತು ಬಳಕೆಯ ಟೇಬಲ್‌ (SUT) ಚೌಕಟ್ಟಿನ ಬಲವನ್ನು ಬಳಸಿಕೊಂಡು ಉತ್ಪಾದನೆ/ಆದಾಯ ಮತ್ತು ಉತ್ಪಾದನೆಯ ಬದಿಯ ಅಂದಾಜುಗಳನ್ನು ಸಮನ್ವಯಗೊಳಿಸುವುದು ಇನ್ನೊಂದು ವಿಧಾನವಾಗಿದೆ.

20. ಹೊಸ ಜಿಡಿಪಿ ಸರಣಿಯಲ್ಲಿ ವ್ಯತ್ಯಾಸವನ್ನು ಹೇಗೆ ಹೊಂದಾಣಿಕೆ ಮಾಡಲಾಗುತ್ತದೆ?

ಹೊಸ ಜಿಡಿಪಿ ಸರಣಿಯಲ್ಲಿ, ಉತ್ಪಾದನೆ ಮತ್ತು ವೆಚ್ಚದ ಅಂದಾಜುಗಳ ನಡುವಿನ ವ್ಯತ್ಯಾಸಗಳನ್ನು ಸಮನ್ವಯಗೊಳಿಸಲು ಪೂರೈಕೆ ಮತ್ತು ಬಳಕೆಯ ಟೇಬಲ್‌ ಗಳ (SUT) ಚೌಕಟ್ಟನ್ನು ಬಳಸಲಾಗುತ್ತಿದೆ. SUT ಚೌಕಟ್ಟು ಉತ್ಪನ್ನ-ಸಮತೋಲನ ತತ್ವವನ್ನು ಅನ್ವಯಿಸುತ್ತದೆ, ಇದು ವಿಭಿನ್ನ ದತ್ತಾಂಶಗಳನ್ನು ಒಟ್ಟುಗೂಡಿಸಲು ಮತ್ತು ಎಲ್ಲಾ ವಲಯಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ದೃಢವಾದ ಮಾರ್ಗವನ್ನು ಒದಗಿಸುತ್ತದೆ. ಜಿಡಿಪಿ ಸಂಕಲನದಲ್ಲಿ SUT ಚೌಕಟ್ಟನ್ನು ಸಂಯೋಜಿಸುವ ಮೂಲಕ, ಅಂತಿಮ ಅಂದಾಜುಗಳಲ್ಲಿನ ವ್ಯತ್ಯಾಸಗಳನ್ನು ಪರಿಹರಿಸಲಾಗುತ್ತಿದೆ, ಇದು ಆಂತರಿಕವಾಗಿ ಸ್ಥಿರವಾದ ಜಿಡಿಪಿ ಅಂದಾಜುಗಳಿಗೆ ಕಾರಣವಾಗುತ್ತದೆ.

21. ಸಾಂಸ್ಥಿಕ ವಲಯವಾರು ಅಂದಾಜುಗಳನ್ನು ಕ್ರೋಢೀಕರಿಸಲಾಗುತ್ತದೆಯೇ ಮತ್ತು ಸಾಂಸ್ಥಿಕ ವಲಯವಾರು ಅಂದಾಜುಗಳ ಸಂಕಲನದಲ್ಲಿ ಬಳಸಲಾಗುವ ದತ್ತಾಂಶ ಮೂಲಗಳು ಯಾವುವು?

SNA 2008 ಅನ್ನು ಅನುಸರಿಸಿ, ಆರ್ಥಿಕತೆಯನ್ನು ಈ ಕೆಳಗಿನ ಸಾಂಸ್ಥಿಕ ವಲಯಗಳಾಗಿ ವಿಂಗಡಿಸಲಾಗಿದೆ:

  1. ಹಣಕಾಸೇತರ ಖಾಸಗಿ ಕಾರ್ಪೊರೇಷನ್ಗಳ ವಲಯ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ (MCA) ಅವರ ವಾರ್ಷಿಕ ಲಾಭ ಮತ್ತು ನಷ್ಟದ ಖಾತೆ ಮತ್ತು ಬ್ಯಾಲೆನ್ಸ್ ಶೀಟ್ ಇತ್ಯಾದಿ ದತ್ತಾಂಶಗಳನ್ನು ಬಳಸುವ ಮೂಲಕ.
  2.  ಹಣಕಾಸು ಕಾರ್ಪೊರೇಷನ್ಗಳ ವಲಯ: ಹಣಕಾಸು ಕಂಪನಿಗಳು, ನಿಯಂತ್ರಕರ (SEBI, RBI, IRDAI ಇತ್ಯಾದಿ) ಲಾಭ ಮತ್ತು ನಷ್ಟದ ಖಾತೆ ಮತ್ತು ಬ್ಯಾಲೆನ್ಸ್ ಶೀಟ್ ಇತ್ಯಾದಿ ದತ್ತಾಂಶಗಳನ್ನು ಬಳಸುವ ಮೂಲಕ.
  3. ಸಾಮಾನ್ಯ ಸರ್ಕಾರಿ ವಲಯ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ದಾಖಲೆಗಳು ಮತ್ತು ವೆಚ್ಚದ ಕುರಿತು PFMS ದತ್ತಾಂಶವನ್ನು ಬಳಸುವ ಮೂಲಕ.
  4.  ಕುಟುಂಬ ವಲಯ: ಕೃಷಿಗಾಗಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ಬೆಳೆಗಳ ಉತ್ಪಾದನೆಯ ದತ್ತಾಂಶ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಂದ ಬೆಳೆಗಳ ಬೆಲೆ ದತ್ತಾಂಶ, ಸಂಬಂಧಿತ ಸಚಿವಾಲಯಗಳಿಂದ ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ದತ್ತಾಂಶ, ನಿರ್ಮಾಣ ವಲಯಕ್ಕಾಗಿ ವಿವಿಧ ಮೂಲಗಳಿಂದ ಉದ್ದಿಮೆಯಲ್ಲಿ ಬಳಸಲಾಗುವ ವಿವಿಧ ಸರಕುಗಳ ದತ್ತಾಂಶ ಮತ್ತು ಉಳಿದ ವಲಯಗಳಿಗೆ NSO, MoSPI ನಡೆಸಿದ ವಾರ್ಷಿಕ ಸಮೀಕ್ಷೆಗಳಾದ ASUSE ಮತ್ತು PLFS ಅನ್ನು ಬಳಸುವ ಮೂಲಕ.
  5. ಕುಟುಂಬಗಳಿಗೆ ಸೇವೆ ಸಲ್ಲಿಸುವ ಲಾಭರಹಿತ ಸಂಸ್ಥೆಗಳ (NPISH) ವಲಯ: ಪ್ರಸ್ತುತ, ಭಾರತದಲ್ಲಿ, ಸಮೀಕ್ಷೆಯ ದತ್ತಾಂಶವನ್ನು ಬಳಸಿಕೊಂಡು NPISH ಗಾಗಿ ಅಂದಾಜುಗಳನ್ನು ಕುಟುಂಬ ವಲಯದಲ್ಲಿ ಸೇರಿಸಲಾಗಿದೆ.

ಪ್ರತಿ ಉದ್ಯಮದ ಅಂದಾಜುಗಳನ್ನು ಸಾಂಸ್ಥಿಕ ವಲಯವಾರು ಸಿದ್ಧಪಡಿಸಲಾಗುತ್ತದೆ. ಕುಟುಂಬ ವಲಯಕ್ಕೆ ಸಂಬಂಧಿಸಿದಂತೆ, ಕೃಷಿ, ನಿರ್ಮಾಣ ಮತ್ತು ವಸತಿ ಮಾಲೀಕತ್ವದಂತಹ ಉದ್ಯಮಗಳು ಇತರ ಉದ್ಯಮಗಳಿಗಿಂತ ವಿಭಿನ್ನ ವಿಧಾನವನ್ನು ಬಳಸುತ್ತವೆ. ಈ ವಿಧಾನಗಳ ವಿವರವಾದ ವಿವರಣೆಗಳು ಸಂಬಂಧಿತ ಚರ್ಚಾ ಪತ್ರಿಕೆಗಳು ಮತ್ತು ಉಪ-ಸಮಿತಿ ವರದಿಗಳಲ್ಲಿ ಲಭ್ಯವಿವೆ.

22. ಸಾಮಾನ್ಯ ಸರ್ಕಾರಿ ವಲಯದ (General Government Sector) ಅಂದಾಜುಗಳನ್ನು ಕ್ರೋಢೀಕರಿಸಲು ಇರುವ ಪ್ರಮುಖ ದತ್ತಾಂಶ ಮೂಲಗಳು ಯಾವುವು? ಸಾಮಾನ್ಯ ಸರ್ಕಾರಿ ವಲಯದ ಅಂದಾಜುಗಳನ್ನು ಹೇಗೆ ಕ್ರೋಢೀಕರಿಸಲಾಗುತ್ತದೆ?

ಸಾಮಾನ್ಯ ಸರ್ಕಾರಿ ವಲಯದ ಪ್ರಮುಖ ದತ್ತಾಂಶ ಮೂಲಗಳು ಇಂತಿವೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ದಾಖಲೆಗಳು (ಉದಾಹರಣೆಗೆ, ಸ್ವೀಕೃತಿ ಬಜೆಟ್, ಎಲ್ಲಾ ಸಚಿವಾಲಯಗಳು/ಇಲಾಖೆಗಳ ಅನುದಾನಕ್ಕಾಗಿ ವಿವರವಾದ ಬೇಡಿಕೆಗಳು), ಸ್ಥಳೀಯ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ವಾರ್ಷಿಕ ಲೆಕ್ಕಪತ್ರಗಳು.

ಸರ್ಕಾರವು ಮಾರುಕಟ್ಟೆಯೇತರ ಆಧಾರದ ಮೇಲೆ ಸೇವೆಗಳನ್ನು ಒದಗಿಸುವುದರಿಂದ, ಈ ವಲಯದ ಉತ್ಪಾದನೆಯನ್ನು ಅವುಗಳ ತಯಾರಿಕೆಯಲ್ಲಿ ತಗುಲುವ ವೆಚ್ಚಗಳ ಮೊತ್ತದಿಂದ ಅಳೆಯಲಾಗುತ್ತದೆ. ಅಂದರೆ, ಉದ್ಯೋಗಿಗಳ ಪರಿಹಾರ (CE), ಮಧ್ಯಂತರ ಬಳಕೆ (IC) ಮತ್ತು ಸ್ಥಿರ ಬಂಡವಾಳ ಬಳಕೆ (CFC) ಇವುಗಳ ಮೊತ್ತವಾಗಿ ಅಳೆಯಲಾಗುತ್ತದೆ. ಈ ಸಂದರ್ಭದಲ್ಲಿ ಮೂಲಭೂತ ಸಮೀಕರಣಗಳು ಈ ಕೆಳಗಿನಂತಿವೆ:

  • ನಿವ್ವಳ ಮೌಲ್ಯವರ್ಧನೆ (NVA) = CE = ಸಂಬಳ + ವೇತನ + ಪಿಂಚಣಿ + ಇತರ ಪ್ರಯೋಜನಗಳು.
  • ಒಟ್ಟು ಮೌಲ್ಯವರ್ಧನೆ (GVA) = NVA + CFC.
  • ಒಟ್ಟು ಉತ್ಪಾದನಾ ಮೌಲ್ಯ (GVO) = GVA + IC.

23. ಹೊಸ ಸರಣಿಯಲ್ಲಿ ಸಾಮಾನ್ಯ ಸರ್ಕಾರಿ ವಲಯದ ಅಂದಾಜಿನಲ್ಲಿ ಯಾವ ಪ್ರಮುಖ ಬದಲಾವಣೆಗಳನ್ನು ಸೇರಿಸಲಾಗಿದೆ?

ಹೊಸ ಸರಣಿಯಲ್ಲಿ ಸಾಮಾನ್ಯ ಸರ್ಕಾರಿ ವಲಯದ ಅಂದಾಜಿನಲ್ಲಿ ಸೇರಿಸಲಾದ ಕೆಲವು ಪ್ರಮುಖ ಸುಧಾರಣೆಗಳು ಈ ಕೆಳಗಿನಂತಿವೆ:

  • NPS ಜಾರಿಯಿಂದಾಗಿ ಮತ್ತು OPS ಹಾಗೂ NPS ಎರಡೂ ಅಸ್ತಿತ್ವದಲ್ಲಿ ಇರುವುದರಿಂದ ಪಿಂಚಣಿಗಾಗಿ ಹೊಂದಾಣಿಕೆ.
  • HRA ಬದಲಿಗೆ ಸರ್ಕಾರವು ಒದಗಿಸಿದ ವಸತಿ ಸೌಕರ್ಯದ ಮೌಲ್ಯೀಕರಣ (Imputation).
  • ಸ್ಥಳೀಯ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ವಿಷಯದಲ್ಲಿ ಸುಧಾರಿತ ವ್ಯಾಪ್ತಿ.
  • ಸ್ಥಿರ ಬೆಲೆಗಳಲ್ಲಿ ಉತ್ಪನ್ನ ಸಬ್ಸಿಡಿಗಳನ್ನು ಅಂದಾಜು ಮಾಡಲು 'ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್' (Volume Extrapolation) ವಿಧಾನದ ಬಳಕೆ.

ವಿವರಗಳು ಉಪ-ಸಮಿತಿಯ ವರದಿಗಳಲ್ಲಿ ಲಭ್ಯವಿವೆ.

24. ಹೊಸ ಮೂಲ ವರ್ಷ 2022–23 ಅಡಿಯಲ್ಲಿ ತ್ರೈಮಾಸಿಕ ಜಿಡಿಪಿ ಅಂದಾಜಿನಲ್ಲಿ ಯಾವ ಕ್ರಮಬದ್ಧ ಸುಧಾರಣೆಗಳನ್ನು ಪರಿಚಯಿಸಲಾಗಿದೆ?

ಪರಿಷ್ಕೃತ ಮೂಲ ವರ್ಷದ (2022–23) ಅಡಿಯಲ್ಲಿ, ಪ್ರಮುಖ ಕ್ರಮಬದ್ಧ ಸುಧಾರಣೆಗಳ ಮೂಲಕ ತ್ರೈಮಾಸಿಕ ಜಿಡಿಪಿ ಅಂದಾಜು ಚೌಕಟ್ಟನ್ನು ಬಲಪಡಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಹಿಂದಿನ 'ಪ್ರೊ-ರಾಟಾ ಬೆಂಚ್‌ಮಾರ್ಕಿಂಗ್' (Pro-Rata benchmarking) ವಿಧಾನದಿಂದ 'ಪ್ರೊಪೋರ್ಷನಲ್ ಡೆಂಟನ್' (Proportional Denton) ವಿಧಾನಕ್ಕೆ ಬದಲಾವಣೆ ಮಾಡಲಾಗಿದೆ. ಈ ಹೊಸ ಬೆಂಚ್‌ಮಾರ್ಕಿಂಗ್ ವಿಧಾನವು "ಸ್ಟೆಪ್ ಪ್ರಾಬ್ಲಮ್" (step problem) ಎಂದು ಕರೆಯಲ್ಪಡುವ ಕೃತಕ ವ್ಯತ್ಯಾಸಗಳನ್ನು ತೆಗೆದುಹಾಕುತ್ತದೆ ಮತ್ತು ಆರ್ಥಿಕ ಚಟುವಟಿಕೆಯಲ್ಲಿನ ಅಲ್ಪಾವಧಿಯ ಚಲನೆಗಳನ್ನು ಉತ್ತಮವಾಗಿ ಪ್ರತಿಬಿಂಬಿಸುವ ಸುಗಮ ಹಾಗೂ ಹೆಚ್ಚು ಸ್ಥಿರವಾದ ತ್ರೈಮಾಸಿಕ ಸರಣಿಯನ್ನು ಖಚಿತಪಡಿಸುತ್ತದೆ.

25. ತ್ರೈಮಾಸಿಕ ಜಿಡಿಪಿ ಕ್ರೋಢೀಕರಣದಲ್ಲಿ ಯಾವ ಹೊಸ ಅಥವಾ ವಿಸ್ತೃತ ದತ್ತಾಂಶ ಮೂಲಗಳನ್ನು ಬಳಸಲಾಗುತ್ತಿದೆ?

ಹೊಸ ಸರಣಿಯು ಉತ್ಪಾದನಾ ಮತ್ತು ಹಣಕಾಸೇತರ ಸೇವಾ ವಲಯಗಳಲ್ಲಿ ಜಿ ಎಸ್‌ ಟಿ (GST) ದತ್ತಾಂಶವನ್ನು ಹೆಚ್ಚು ವಿಸ್ತಾರವಾಗಿ ಮತ್ತು ವ್ಯವಸ್ಥಿತವಾಗಿ ಬಳಸುತ್ತದೆ. ವ್ಯವಹಾರದ ಅವಧಿಯಲ್ಲಿ ಮಾಡಿದ ಹೊರಗಿನ ತೆರಿಗೆಯ ಪೂರೈಕೆಯನ್ನು ಜಿಎಸ್‌ಟಿ ದತ್ತಾಂಶದಲ್ಲಿ ಸಮಗ್ರವಾಗಿ ಒಳಗೊಳ್ಳಲಾಗಿದೆ. ವಿವಿಧ ಆರ್ಥಿಕ ಚಟುವಟಿಕೆಗಳ ಸಂಬಂಧಿತ ಸಾಂಸ್ಥಿಕ ವಲಯಕ್ಕಾಗಿ ಹೊರಗಿನ ತೆರಿಗೆಯ ಪೂರೈಕೆಯಲ್ಲಿನ ಬೆಳವಣಿಗೆಯನ್ನು ತ್ರೈಮಾಸಿಕ ಅಂದಾಜುಗಳ ಸಂಕಲನದಲ್ಲಿ 'ಹೈ ಫ್ರೀಕ್ವೆನ್ಸಿ ಇಂಡಿಕೇಟರ್' (High frequency indicator) ಆಗಿ ಬಳಸಲಾಗುತ್ತಿದೆ.

ತ್ರೈಮಾಸಿಕ ಮಟ್ಟದಲ್ಲಿ ಹಣಕಾಸು ಸೇವೆಗಳಿಗಾಗಿ FISIM ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಉತ್ಪನ್ನ ತೆರಿಗೆಗಳು ಮತ್ತು ಸಬ್ಸಿಡಿಗಳ ಅಂದಾಜು ವಿಧಾನಗಳನ್ನು ಸುಧಾರಿತ ವಾಲ್ಯೂಮ್ ಸೂಚಕಗಳನ್ನು ಬಳಸಿ ಬಲಪಡಿಸಲಾಗಿದೆ. ತ್ರೈಮಾಸಿಕ ಮಟ್ಟದಲ್ಲಿ ಒಟ್ಟು ಸ್ಥಿರ ಬಂಡವಾಳ ರಚನೆ (GFCF) ಮತ್ತು ಸೇವೆಗಳ ವ್ಯಾಪಾರವನ್ನು ಅಂದಾಜು ಮಾಡುವ ವಿಧಾನಗಳನ್ನು ವಾರ್ಷಿಕ ವಿಧಾನಕ್ಕೆ ಹೆಚ್ಚು ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ.

ಹೆಚ್ಚುವರಿಯಾಗಿ, ಒಟ್ಟು ಡಿಫ್ಲೇಟರ್‌ ಗಳ ಬದಲಿಗೆ ಐಟಂ-ಮಟ್ಟದ ಮತ್ತು ವಲಯ-ನಿರ್ದಿಷ್ಟ ಬೆಲೆ ಸೂಚ್ಯಂಕಗಳಿಗೆ ಬದಲಾಗುವ ಮೂಲಕ ಡಿಫ್ಲೇಷನ್ ಪದ್ಧತಿಗಳನ್ನು ಸುಧಾರಿಸಲಾಗಿದೆ. ವಲಯದ ಗುಣಲಕ್ಷಣಗಳಿಗೆ ಅನುಗುಣವಾಗಿ CPI, WPI, ಯುನಿಟ್ ವ್ಯಾಲ್ಯೂ ಇಂಡೆಕ್ಸ್ ಮತ್ತು ಸೇವಾ-ನಿರ್ದಿಷ್ಟ ಡಿಫ್ಲೇಟರ್‌ಗಳಂತಹ ಸೂಕ್ತ ಸೂಚ್ಯಂಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

26. ತ್ರೈಮಾಸಿಕ ಅಂದಾಜುಗಳು ಮತ್ತು ವಾರ್ಷಿಕ ರಾಷ್ಟ್ರೀಯ ಲೆಕ್ಕಪತ್ರಗಳ ನಡುವಿನ ಹೊಂದಾಣಿಕೆಯನ್ನು ಹೇಗೆ ಬಲಪಡಿಸಲಾಗಿದೆ?

ಪರಿಷ್ಕೃತ ತ್ರೈಮಾಸಿಕ ಕ್ರೋಢೀಕರಣ ಚೌಕಟ್ಟನ್ನು ವಲಯವಾರು ವರ್ಗೀಕರಣ, ಡಿಫ್ಲೇಷನ್ ತಂತ್ರಗಳು ಮತ್ತು ಅಂದಾಜು ಪದ್ಧತಿಗಳ ವಿಷಯದಲ್ಲಿ ವಾರ್ಷಿಕ ರಾಷ್ಟ್ರೀಯ ಲೆಕ್ಕಪತ್ರಗಳ ವಿಧಾನದೊಂದಿಗೆ ಹೆಚ್ಚು ನಿಕಟವಾಗಿ ಹೊಂದಿಸಲಾಗಿದೆ. ಈ ಸಮನ್ವಯವು ತ್ರೈಮಾಸಿಕ ಮತ್ತು ವಾರ್ಷಿಕ ಜಿಡಿಪಿ ಹಾಗೂ ಜಿವಿಎ (GVA) ಅಂದಾಜುಗಳ ನಡುವೆ ಹೆಚ್ಚಿನ ಸ್ಥಿರತೆಯನ್ನು ಖಚಿತಪಡಿಸುತ್ತದೆ. ಅಲ್ಲದೆ, ತ್ರೈಮಾಸಿಕ ಸರಣಿಯಲ್ಲಿ ಅಳವಡಿಸಿಕೊಂಡ ಹೊಸ ಬೆಂಚ್‌ಮಾರ್ಕಿಂಗ್ ವಿಧಾನವು ವಾರ್ಷಿಕ ರಾಷ್ಟ್ರೀಯ ಲೆಕ್ಕಪತ್ರ ಸರಣಿಯೊಂದಿಗೆ ಸ್ಥಿರತೆಯನ್ನು ಬಲಪಡಿಸುತ್ತದೆ.

27. ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರಗಳಲ್ಲಿ ಯಾವ ವಲಯ-ನಿರ್ದಿಷ್ಟ ಪರಿಷ್ಕರಣೆಗಳು ಮತ್ತು ಡಿಫ್ಲೇಷನ್ ಪದ್ಧತಿಯ ಸುಧಾರಣೆಗಳನ್ನು ಪರಿಚಯಿಸಲಾಗಿದೆ?

ಡಿಫ್ಲೇಷನ್ ವಿಧಾನದಲ್ಲಿ ಹಲವಾರು ವಲಯ-ನಿರ್ದಿಷ್ಟ ಪರಿಷ್ಕರಣೆಗಳನ್ನು ಪರಿಚಯಿಸಲಾಗಿದೆ. ಉತ್ಪಾದನಾ ವಲಯಕ್ಕಾಗಿ ಈ ಹಿಂದಿನ ಸಿಂಗಲ್ ಡಿಫ್ಲೇಷನ್ ಬದಲಿಗೆ ಡಬಲ್ ಡಿಫ್ಲೇಷನ್ (Double Deflation) ಅಳವಡಿಸಿಕೊಳ್ಳಲಾಗಿದೆ. ಈ ವಿಧಾನದ ಅಡಿಯಲ್ಲಿ, ಔಟ್‌ಪುಟ್ ಮತ್ತು ಇನ್‌ಪುಟ್‌ ಗಳನ್ನು ಆಯಾ ಬೆಲೆ ಸೂಚ್ಯಂಕಗಳನ್ನು ಬಳಸಿ ಪ್ರತ್ಯೇಕವಾಗಿ ಡಿಫ್ಲೇಟ್ ಮಾಡಲಾಗುತ್ತದೆ, ಇದು ಉತ್ಪಾದನಾ ವಲಯದ ನೈಜ ಬೆಳವಣಿಗೆಯ ಹೆಚ್ಚು ನಿಖರವಾದ ಮಾಪನಕ್ಕೆ ಕಾರಣವಾಗುತ್ತದೆ. ಇದಲ್ಲದೆ, CPI, WPI, ಯುನಿಟ್ ವ್ಯಾಲ್ಯೂ ಇಂಡೆಕ್ಸ್ ಮುಂತಾದ ಡಿಫ್ಲೇಟರ್‌ ಗಳನ್ನು ಹಳೆಯ ಸರಣಿಯಲ್ಲಿದ್ದ ಒಟ್ಟು ಮಟ್ಟದಿಂದ ಹೊಸ ಸರಣಿಯಲ್ಲಿನ ಐಟಂ-ಗ್ರೂಪ್ ಮಟ್ಟಕ್ಕೆ ಬದಲಾಯಿಸುವ ಮೂಲಕ ಹೆಚ್ಚು ಸೂಕ್ಷ್ಮ ಮಟ್ಟದಲ್ಲಿ ಬಳಸಲಾಗುತ್ತಿದೆ. ಮುಂದೆ ಬಿಡುಗಡೆಯಾದಾಗ ಹೊಸ ಸರಣಿಯ CPI ಮತ್ತು WPI/PPI ಅನ್ನು ಅಳವಡಿಸಿಕೊಳ್ಳಲು ಪರಿಗಣಿಸಲಾಗಿದೆ.

28. ತ್ರೈಮಾಸಿಕ ಜಿಡಿಪಿ ಅಂದಾಜುಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

MoSPI ಅಡಿಯಲ್ಲಿನ NSO, 'ಬೆಂಚ್‌ಮಾರ್ಕ್-ಇಂಡಿಕೇಟರ್' (Benchmark-Indicator) ಬಳಸಿ ತ್ರೈಮಾಸಿಕ ಜಿಡಿಪಿ ಅಂದಾಜುಗಳನ್ನು ಲೆಕ್ಕ ಹಾಕುತ್ತದೆ. ಇದು SNA 2008 ಮತ್ತು IMF ನ ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರಗಳ ಕೈಪಿಡಿ 2017 ಅನ್ನು ಅನುಸರಿಸಿ ವಿಶ್ವಾದ್ಯಂತ ಬಳಸಲಾಗುವ ಪ್ರಮಾಣಿತ ವಿಧಾನವಾಗಿದೆ. ಈ ವಿಧಾನವು ಈ ಕೆಳಗಿನಂತೆ ಕಾರ್ಯನಿರ್ವಹಿಸುತ್ತದೆ:

  • ವಾರ್ಷಿಕ ಜಿಡಿಪಿ ಅಂದಾಜುಗಳು ಉಲ್ಲೇಖ ಬಿಂದು ಅಥವಾ ಬೆಂಚ್‌ಮಾರ್ಕ್ ಆಗಿ ಕಾರ್ಯನಿರ್ವಹಿಸುತ್ತವೆ.
  • ಮಾಸಿಕ ಅಥವಾ ತ್ರೈಮಾಸಿಕ ಸೂಚಕಗಳಂತಹ ಹೈ-ಫ್ರೀಕ್ವೆನ್ಸಿ ದತ್ತಾಂಶವನ್ನು ತ್ರೈಮಾಸಿಕ ಜಿಡಿಪಿಯನ್ನು ಅಂದಾಜು ಮಾಡಲು ಈ ಬೆಂಚ್‌ ಮಾರ್ಕ್ ಅಂದಾಜುಗಳಿಗೆ ಅನ್ವಯಿಸಲಾಗುತ್ತದೆ.

ವಾರ್ಷಿಕ ಅಂದಾಜುಗಳಿಗೆ ಬೆಂಚ್‌ಮಾರ್ಕಿಂಗ್ ಮಾಡುವುದು ಕಾಲಾನುಕ್ರಮದ ಸ್ಥಿರತೆಯನ್ನು ಖಚಿತಪಡಿಸುತ್ತದೆ. ಅಂದಾಜುಗಳನ್ನು ಪಡೆಯಲು ಬೆಂಚ್‌ಮಾರ್ಕ್ ಅಂದಾಜುಗಳ ಮೇಲೆ ಹೈ-ಫ್ರೀಕ್ವೆನ್ಸಿ ಸೂಚಕಗಳನ್ನು ಅನ್ವಯಿಸಲಾಗುತ್ತದೆ. ವ್ಯಾಖ್ಯಾನ ಮತ್ತು ವ್ಯಾಪ್ತಿಯ ವಿಷಯದಲ್ಲಿ ಸೂಚಕಗಳ ದತ್ತಾಂಶ ಮೂಲಗಳು ಮತ್ತು ವಾರ್ಷಿಕ ಅಂದಾಜುಗಳ ನಡುವಿನ ವ್ಯತ್ಯಾಸದಿಂದಾಗಿ, ತ್ರೈಮಾಸಿಕ ಅಂದಾಜುಗಳು ಸಹಜವಾಗಿಯೇ ಪರಿಷ್ಕರಣೆಗೆ ಒಳಪಡುತ್ತವೆ. ಹೊಸ ಸರಣಿಯಲ್ಲಿ, 'ಪ್ರೊಪೋರ್ಷನಲ್ ಡೆಂಟನ್ ಬೆಂಚ್‌ಮಾರ್ಕಿಂಗ್' ಅಳವಡಿಕೆ, ಹೊಸ ದತ್ತಾಂಶ ಮೂಲಗಳ ಸೇರ್ಪಡೆ ಮತ್ತು ಹೆಚ್ಚಿದ ಸೂಕ್ಷ್ಮತೆ ಹಾಗೂ ಉತ್ತಮ ಡಿಫ್ಲೇಷನ್ ತಂತ್ರವು ಅಂದಾಜುಗಳಲ್ಲಿ ಹೆಚ್ಚಿನ ಸ್ಥಿರತೆ ಮತ್ತು ದೃಢತೆಯನ್ನು ತರುವ ಸಾಧ್ಯತೆಯಿದೆ.

29. ಹೊಸ ಸರಣಿಯಲ್ಲಿ ಹಿಂದೆ ಬಿಡುಗಡೆಯಾದ ಅಂದಾಜುಗಳು ಮತ್ತು ತ್ರೈಮಾಸಿಕ ಬೆಳವಣಿಗೆಯ ದರಗಳು ಬದಲಾವಣೆಗೆ ಒಳಗಾಗುತ್ತವೆಯೇ?

ಹೌದು. ಮೂಲ ವರ್ಷವನ್ನು ಬದಲಾಯಿಸಲಾಗುತ್ತಿರುವುದರಿಂದ ಮತ್ತು ಹೊಸ ಸೂಚಕಗಳನ್ನು ಸೇರಿಸುವುದು, ಹೆಚ್ಚು ವಿವರವಾದ ದತ್ತಾಂಶವನ್ನು ಬಳಸುವುದು ಮತ್ತು ಹಣದುಬ್ಬರಕ್ಕೆ ಹೊಂದಾಣಿಕೆ ಮಾಡುವ ಉತ್ತಮ ಮಾರ್ಗಗಳನ್ನು ಬಳಸುವುದು ಮುಂತಾದ ಲೆಕ್ಕಾಚಾರದ ವಿಧಾನವನ್ನು ನವೀಕರಿಸುತ್ತಿರುವುದರಿಂದ ಬದಲಾವಣೆಗಳು ಆಗುತ್ತವೆ. ಮೂಲ ವರ್ಷ 2022-23 ರ ಪ್ರಕಾರ 2022-23 ರಿಂದ 2025-26 ರವರೆಗಿನ ವಾರ್ಷಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು 27 ಫೆಬ್ರವರಿ 2026 ರಂದು ಬಿಡುಗಡೆ ಮಾಡಲಾಗುವುದು.

30. ಒಟ್ಟು ರಾಜ್ಯ ಆಂತರಿಕ ಉತ್ಪನ್ನದ (GSDP) ಅಂದಾಜಿನಲ್ಲಿ MoSPI ಪಾತ್ರವೇನು?

MoSPI ಅಡಿಯಲ್ಲಿನ NSO, GSDP ಅಂದಾಜುಗಳನ್ನು ಅಂದಾಜು ಮಾಡಲು ಮಾರ್ಗಸೂಚಿಗಳನ್ನು ನೀಡುತ್ತದೆ ಮತ್ತು ಏಕರೂಪದ ವ್ಯಾಖ್ಯಾನ, ಪರಿಕಲ್ಪನೆಗಳು ಮತ್ತು ವಿಧಾನಗಳನ್ನು ಅನುಸರಿಸಿ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡುವ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (UT) ತಮ್ಮದೇ ಆದ GSDP ಯನ್ನು ಸ್ಥಿರವಾದ ರೀತಿಯಲ್ಲಿ ಅಂದಾಜು ಮಾಡಲು ಸಹಾಯ ಮಾಡುತ್ತದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆರ್ಥಿಕ ಮತ್ತು ಅಂಕಿಅಂಶ ನಿರ್ದೇಶನಾಲಯಗಳು (DES) ಹೆಚ್ಚಾಗಿ ಅದೇ ದತ್ತಾಂಶ ಮೂಲಗಳಿಂದ ತಮ್ಮ ರಾಜ್ಯ/UT-ನಿರ್ದಿಷ್ಟ ದತ್ತಾಂಶವನ್ನು ಬಳಸಿಕೊಂಡು ತಮ್ಮ GSDP ಯನ್ನು ಕ್ರೋಢೀಕರಿಸುತ್ತವೆ.

31. ಹೊಸ ಮೂಲದೊಂದಿಗೆ GSDP ಸರಣಿಯನ್ನು ಯಾವಾಗ ನಿರೀಕ್ಷಿಸಬಹುದು?

NSO ನಿಂದ ರಾಷ್ಟ್ರೀಯ ಜಿಡಿಪಿ ಮೂಲ ವರ್ಷವನ್ನು ನವೀಕರಿಸಿದಾಗ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಹ ಅದಕ್ಕೆ ಹೊಂದಿಕೆಯಾಗುವಂತೆ ತಮ್ಮ GSDP ಮೂಲ ವರ್ಷವನ್ನು ನವೀಕರಿಸುತ್ತವೆ. ಇದು ರಾಜ್ಯಗಳ GSDP ಅಂದಾಜುಗಳನ್ನು ರಾಷ್ಟ್ರೀಯ ಅಂದಾಜಿನೊಂದಿಗೆ ಸ್ಥಿರವಾಗಿರಿಸುತ್ತದೆ. 2022-23 ರ ನವೀಕರಿಸಿದ ಮೂಲ ವರ್ಷದೊಂದಿಗೆ ಜಿಡಿಪಿ ಬಿಡುಗಡೆಯಾದ ನಂತರ, NSO ಜಿಎಸ್‌ಡಿಪಿ ಲೆಕ್ಕಾಚಾರ ಮಾಡುವ ವಿಧಾನದಲ್ಲಿನ ಕ್ರಮಬದ್ಧ ಬದಲಾವಣೆಗಳು ಅಥವಾ ಸುಧಾರಣೆಗಳ ಬಗ್ಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸುತ್ತದೆ.

32. ಹೊಸ ಮೂಲ ವರ್ಷದ ಪರಿಷ್ಕರಣೆಯ ಸಮಯದಲ್ಲಿ GSDP ಅಂದಾಜಿನಲ್ಲಿ ಯಾವ ಪ್ರಮುಖ ಕ್ರಮಬದ್ಧ ಸುಧಾರಣೆಗಳನ್ನು ಮಾಡಲಾಗುತ್ತದೆ?

ಪ್ರಮುಖ ಕ್ರಮಬದ್ಧ ಸುಧಾರಣೆಗಳು ಇಂತಿವೆ: (i) ಕೆಲವು ವಲಯಗಳು ಅಥವಾ ಉಪ-ವಲಯಗಳಿಗೆ ನೇರ ಅಂದಾಜಿನ ಪರವಾಗಿ ಹಂಚಿಕೆ-ಆಧಾರಿತ (allocation-based) ವಿಧಾನಗಳ ಕಡಿತ, (ii) ಸ್ಥಿರ ಅನುಪಾತಗಳು ಮತ್ತು ಪ್ರಾಕ್ಸಿಗಳ ಮೇಲಿನ ಅವಲಂಬನೆಯ ಕಡಿತ, (iii) ಆರ್ಥಿಕ ಚಟುವಟಿಕೆಯ ರಾಜ್ಯವಾರು ಮಾಹಿತಿಯ ಸುಧಾರಿತ ಬಳಕೆ, (iv) ರಾಜ್ಯಗಳಾದ್ಯಂತ ಹೆಚ್ಚಿನ ಕ್ರಮಬದ್ಧ ಸ್ಥಿರತೆ.

33. ಜಿಡಿಪಿ ಅಂದಾಜುಗಳು ಸಾಮಾನ್ಯ ನಾಗರಿಕರ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ?

ಜಿಡಿಪಿ ಅಂದಾಜು ಕೇವಲ ಒಂದು ಸ್ಥೂಲ ಆರ್ಥಿಕ ಸೂಚಕ ಮಾತ್ರವಲ್ಲ, ಇದು ರಾಷ್ಟ್ರೀಯ ಮಟ್ಟದಲ್ಲಿ ಮಾನವ ಅಭಿವೃದ್ಧಿಯ ಮಹತ್ವದ ಭಾಗವಾಗಿದೆ. ಜಿಡಿಪಿಯು ಆರ್ಥಿಕತೆಯ ವಿವಿಧ ವಲಯಗಳ ಕೊಡುಗೆಯನ್ನು ಒದಗಿಸುತ್ತದೆ ಮತ್ತು ಸೂಕ್ತ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ, ಇದು ರೈತರು, ಸಣ್ಣ ಉದ್ಯಮಗಳು, ತಯಾರಕರು ಮತ್ತು ಸೇವಾ ಸಂಸ್ಥೆಗಳು ಸೇರಿದಂತೆ ಜನರಿಗೆ ಸಹಾಯ ಮಾಡುತ್ತದೆ.

ಉದಾಹರಣೆಗೆ, ಈ ಹಿಂದೆ ಕೃಷಿಯಲ್ಲಿ ಭತ್ತ, ಗೋಧಿ ಮುಂತಾದ ಬೆಳೆಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಜಿಡಿಪಿ ಅಂದಾಜುಗಳು ಬೆಳೆವಾರು ಉತ್ಪಾದನಾ ಅಂಕಿಅಂಶಗಳನ್ನು ನೀಡುತ್ತವೆ. ಈಗ ಹಣ್ಣುಗಳು, ಎಣ್ಣೆಕಾಳುಗಳು, ಬೇಳೆಕಾಳುಗಳ ಬೆಳೆಯುವಿಕೆ, ಮೀನುಗಾರಿಕೆ ವಲಯ ಇತ್ಯಾದಿಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಅದೇ ರೀತಿ, ಸರ್ಕಾರವು ಉತ್ಪಾದನಾ ವಲಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಜೊತೆಗೆ, ಹೂಡಿಕೆ ನಿರ್ಧಾರಗಳು, ಸಾಲ ಪಡೆಯುವ ಸಾಮರ್ಥ್ಯ ಮುಂತಾದವುಗಳೂ ಸಹ ಜಿಡಿಪಿ ಅಂದಾಜುಗಳಿಂದ ಪ್ರಭಾವಿತವಾಗುತ್ತವೆ. ಹೀಗಾಗಿ, ಇದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

 

*****

(Explainer ID: 157651) आगंतुक पटल : 34
Provide suggestions / comments
इस विज्ञप्ति को इन भाषाओं में पढ़ें: English , हिन्दी
National Portal Of India
STQC Certificate