• Skip to Content
  • Sitemap
  • Advance Search
Infrastructure

ಭಾರತದ ಅಪರೂಪದ ಖನಿಜದ ಕಾರ್ಯತಂತ್ರ: ಉತ್ಪಾದನೆ, ಕಾರಿಡಾರ್‌ಗಳು ಮತ್ತು ಜಾಗತಿಕ ಏಕೀಕರಣ.

Posted On: 02 FEB 2026 6:53PM

ಪ್ರಮುಖ ಮಾರ್ಗಸೂಚಿಗಳು

  • ಕೇಂದ್ರ ಬಜೆಟ್ 2026–27: ಪರೂಪದ ಖನಿಜ  ಅಭಿವೃದ್ಧಿಗೆ ಬೃಹತ್ ಯೋಜನೆ
  • ವಿಶಿಷ್ಟ ಕಾರಿಡಾರ್‌ಗಳ ಸ್ಥಾಪನೆ: ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಗಣಿಗಾರಿಕೆ, ಸಂಸ್ಕರಣೆ, ಸಂಶೋಧನೆ ಹಾಗೂ 'ವಿರಳ ಲೋಹದ ಶಾಶ್ವತ ಮ್ಯಾಗ್ನೆಟ್‌ಗಳ' (ಆರ್‌ಇಪಿಎಂ) ಉತ್ಪಾದನೆಗಾಗಿ ಪ್ರತ್ಯೇಕ ಕಾರಿಡಾರ್‌ಗಳನ್ನು ಘೋಷಿಸಲಾಗಿದೆ.
  • ಆರ್‌ಇಪಿಎಂ ಉತ್ಪಾದನಾ ಯೋಜನೆ: ನವೆಂಬರ್ 2025 ರಲ್ಲಿ ಅನುಮೋದಿಸಲಾದ ₹7,280 ಕೋಟಿ ಮೊತ್ತದ ಆರ್‌ಇಪಿಎಂ ಉತ್ಪಾದನಾ ಯೋಜನೆಗೆ ಚಾಲನೆ ನೀಡಲಾಗಿದೆ.
  • ಉತ್ಪಾದನಾ ಸಾಮರ್ಥ್ಯ: ವಾರ್ಷಿಕ 6,000 ಮೆಟ್ರಿಕ್ ಟನ್ ಸಮಗ್ರ ಆರ್‌ಇಪಿಎಂ ಉತ್ಪಾದನಾ ಸಾಮರ್ಥ್ಯವನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
  • ಮಾರಾಟ ಆಧಾರಿತ ಪ್ರೋತ್ಸಾಹಧನ: ಮುಂದಿನ ಐದು ವರ್ಷಗಳ ಅವಧಿಗೆ ₹6,450 ಕೋಟಿ ಮೊತ್ತದ ಮಾರಾಟ ಆಧಾರಿತ ಪ್ರೋತ್ಸಾಹಧನವನ್ನು ನಿಗದಿಪಡಿಸಲಾಗಿದೆ.
  • ಬಂಡವಾಳ ಸಬ್ಸಿಡಿ: ಅತ್ಯಾಧುನಿಕ ಸೌಲಭ್ಯಗಳ ಸ್ಥಾಪನೆಗಾಗಿ ₹750 ಕೋಟಿ ಬಂಡವಾಳ ಸಬ್ಸಿಡಿಯನ್ನು ಘೋಷಿಸಲಾಗಿದೆ.
  • ಖನಿಜ ಸಂಪನ್ಮೂಲ: ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು ದೇಶದಲ್ಲಿ ಈವರೆಗೆ 482.6 ಮಿಲಿಯನ್ ಟನ್ ವಿರಳ ಲೋಹದ ಅದಿರು ಸಂಪನ್ಮೂಲಗಳನ್ನು ಗುರುತಿಸಿದೆ.

ಪೀಠಿಕೆ

ವಿರಳ ಲೋಹದ ಶಾಶ್ವತ ಮ್ಯಾಗ್ನೆಟ್‌ಗಳ (ಆರ್‌ಇಪಿಎಂ) ದೇಶೀಯ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಭಾರತವು ನಿರ್ಣಾಯಕ ವಸ್ತುಗಳ ವಿಷಯದಲ್ಲಿ ಆತ್ಮನಿರ್ಭರತೆ ಸಾಧಿಸಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಎಲೆಕ್ಟ್ರಿಕ್ ವಾಹನಗಳು, ವಿಂಡ್ ಟರ್ಬೈನ್‌ಗಳು, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಈ ಉನ್ನತ-ಕಾರ್ಯಕ್ಷಮತೆಯ ಮ್ಯಾಗ್ನೆಟ್‌ಗಳು ಅತ್ಯಗತ್ಯವಾಗಿವೆ. ಈ ಗುರಿಯನ್ನು ಬೆಂಬಲಿಸಲು, ಸರ್ಕಾರವು ನವೆಂಬರ್ 2025 ರಲ್ಲಿ ₹7,280 ಕೋಟಿ ಮೊತ್ತದ ಯೋಜನೆಯನ್ನು ಅನುಮೋದಿಸಿದ್ದು, ಇದು ವಿರಳ ಲೋಹದ ಆಕ್ಸೈಡ್‌ಗಳಿಂದ ಹಿಡಿದು ಸಿದ್ಧಪಡಿಸಿದ ಮ್ಯಾಗ್ನೆಟ್‌ಗಳವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ಒಳಗೊಂಡಿದೆ. ಇದರ ಮೂಲಕ ವಾರ್ಷಿಕ 6,000 ಮೆಟ್ರಿಕ್ ಟನ್ ಸಮಗ್ರ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

ಇದಕ್ಕೆ ಪೂರಕವಾಗಿ, ಕೇಂದ್ರ ಬಜೆಟ್ 2026–27ರಲ್ಲಿ ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಗಣಿಗಾರಿಕೆ, ಸಂಸ್ಕರಣೆ, ಸಂಶೋಧನೆ ಮತ್ತು ಉತ್ಪಾದನೆಯನ್ನು ಉತ್ತೇಜಿಸಲು 'ವಿಶಿಷ್ಟ ವಿರಳ ಲೋಹ ಕಾರಿಡಾರ್‌ಗಳ' ಸ್ಥಾಪನೆಯನ್ನು ಘೋಷಿಸಲಾಗಿದೆ. ಈ ಉಪಕ್ರಮಗಳು ಆತ್ಮನಿರ್ಭರ ಭಾರತ, ನೆಟ್ ಝೀರೋ 2070 ಮತ್ತು ವಿಕಸಿತ ಭಾರತ @2047 ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿದ್ದು, ಜಾಗತಿಕ ಸುಧಾರಿತ-ವಸ್ತುಗಳ ಮೌಲ್ಯ ಸರಪಳಿಯಲ್ಲಿ ಭಾರತವನ್ನು ಪ್ರಮುಖ ದೇಶವನ್ನಾಗಿ ರೂಪಿಸಲಿವೆ.

ಭಾರತದಲ್ಲಿ ವಿರಳ ಲೋಹದ ಶಾಶ್ವತ ಮ್ಯಾಗ್ನೆಟ್‌ಗಳ (ಆರ್‌ಇಪಿಎಂ) ಕಾರ್ಯತಂತ್ರದ ಮಹತ್ವ ಮತ್ತು ಸಂಪನ್ಮೂಲ ಸಾಮರ್ಥ್ಯ

ವಿರಳ ಲೋಹದ ಶಾಶ್ವತ ಮ್ಯಾಗ್ನೆಟ್‌ಗಳು (ಆರ್‌ಇಪಿಎಂ) ಅತ್ಯಂತ ಶಕ್ತಿಯುತವಾದ ಮ್ಯಾಗ್ನೆಟ್‌ಗಳಾಗಿದ್ದು, ಇವುಗಳ ಕಾಂತೀಯ ಶಕ್ತಿ ಮತ್ತು ಸ್ಥಿರತೆಗಾಗಿ ಜಗತ್ಪ್ರಸಿದ್ಧವಾಗಿವೆ. ಇವುಗಳ ಸಣ್ಣ ಗಾತ್ರ ಮತ್ತು ಪ್ರಬಲ ಕಾರ್ಯಕ್ಷಮತೆಯಿಂದಾಗಿ ಇವು ಎಲೆಕ್ಟ್ರಿಕ್ ವಾಹನಗಳ ಮೋಟಾರ್‌ಗಳು, ವಿಂಡ್ ಟರ್ಬೈನ್ ಜನರೇಟರ್‌ಗಳು, ಗ್ರಾಹಕ ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ವ್ಯವಸ್ಥೆಗಳು, ರಕ್ಷಣಾ ಉಪಕರಣಗಳು ಮತ್ತು ನಿಖರ ಸೆನ್ಸಾರ್‌ಗಳಂತಹ ಸುಧಾರಿತ ಎಂಜಿನಿಯರಿಂಗ್ ಅನ್ವಯಿಕೆಗಳಲ್ಲಿ ಅನಿವಾರ್ಯವಾಗಿವೆ.

ಭಾರತವು ಸ್ವಚ್ಛ ಇಂಧನ, ಸುಧಾರಿತ ಚಲನಶೀಲತೆ ಮತ್ತು ಆಯಕಟ್ಟಿನ ವಲಯಗಳಲ್ಲಿ ತನ್ನ ಉತ್ಪಾದನಾ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಈ ಸಮಯದಲ್ಲಿ, ಆರ್‌ಇಪಿಎಂಗಳ ನಂಬಿಕಸ್ತ ದೇಶೀಯ ಪೂರೈಕೆಯು ಬಹಳ ನಿರ್ಣಾಯಕವಾಗಿದೆ. ಇದು ಕೇವಲ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಸುಧಾರಿತ ವಸ್ತುಗಳ ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತದೆ.

  • ಭಾರತದ ಸಂಪನ್ಮೂಲ ಮೂಲ
  • ವಿರಳ ಲೋಹದ ಖನಿಜಗಳ ಗಣನೀಯ ಪ್ರಮಾಣದ ಸಂಗ್ರಹವನ್ನು ಭಾರತ ಹೊಂದಿದೆ. ಇದು ಆರ್‌ಇಪಿಎಂ ಉತ್ಪಾದನೆಯಂತಹ ಮೌಲ್ಯವರ್ಧಿತ ಕೈಗಾರಿಕೆಗಳಿಗೆ ಭದ್ರ ಬುನಾದಿಯನ್ನು ಒದಗಿಸುತ್ತದೆ.
  • ಮೊನಾಜೈಟ್ ನಿಕ್ಷೇಪಗಳು: ಭಾರತವು 13.15 ಮಿಲಿಯನ್ ಟನ್ ಮೊನಾಜೈಟ್ ಸಂಗ್ರಹವನ್ನು ಹೊಂದಿದ್ದು, ಇದು ಅಂದಾಜು 7.23 ಮಿಲಿಯನ್ ಟನ್ ವಿರಳ ಲೋಹದ ಆಕ್ಸೈಡ್‌ಗಳನ್ನು ಒಳಗೊಂಡಿದೆ.
  • ಭೌಗೋಳಿಕ ಹರಡುವಿಕೆ: ಈ ನಿಕ್ಷೇಪಗಳು ಪ್ರಮುಖವಾಗಿ ಒಡಿಶಾ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಹರಡಿಕೊಂಡಿವೆ. ಇವು ಮುಖ್ಯವಾಗಿ ಕರಾವಳಿಯ ಮರಳು, ಕೆಂಪು ಮರಳು ಮತ್ತು ಒಳನಾಡಿನ ಮೆಕ್ಕಲು ಮಣ್ಣಿನಲ್ಲಿ ಕಂಡುಬರುತ್ತವೆ.
  • ಹೆಚ್ಚುವರಿ ಸಂಪನ್ಮೂಲಗಳು: ಗುಜರಾತ್ ಮತ್ತು ರಾಜಸ್ಥಾನದ ಗಟ್ಟಿಯಾದ ಬಂಡೆಗಳ ಪ್ರದೇಶಗಳಲ್ಲಿ 1.29 ಮಿಲಿಯನ್ ಟನ್ ರಷ್ಟು ಸ್ಥಳೀಯ ಆರ್‌ಇಒ ಸಂಪನ್ಮೂಲಗಳನ್ನು ಗುರುತಿಸಲಾಗಿದೆ.
  • ಪರಿಶೋಧನಾ ಪ್ರಯತ್ನಗಳು: ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು 34 ಪರಿಶೋಧನಾ ಯೋಜನೆಗಳ ಮೂಲಕ 482.6 ಮಿಲಿಯನ್ ಟನ್ ವಿರಳ ಲೋಹದ ಅದಿರು ಸಂಪನ್ಮೂಲಗಳನ್ನು ಗುರುತಿಸುವ ಮೂಲಕ ದೇಶದ ಖನಿಜ ಸಂಗ್ರಹವನ್ನು ಮತ್ತಷ್ಟು ವಿಸ್ತರಿಸಿದೆ.

ಈ ಎಲ್ಲಾ ಮೀಸಲು ಸಂಗ್ರಹಗಳು ಒಟ್ಟಾಗಿ, ಸಮಗ್ರ ವಿರಳ ಲೋಹದ ಶಾಶ್ವತ ಮ್ಯಾಗ್ನೆಟ್ (ಆರ್‌ಇಪಿಎಂ) ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಅಗತ್ಯವಾದ ಬಲವಾದ ಕಚ್ಚಾ ವಸ್ತುಗಳ ಮೂಲವನ್ನು ಭಾರತ ಹೊಂದಿದೆ ಎಂಬುದನ್ನು ಸಾಬೀತುಪಡಿಸುತ್ತವೆ.

ಈ ವಲಯದಲ್ಲಿ ಪರಿಶೋಧನೆ ಮತ್ತು ಹೂಡಿಕೆಯ ಅಗತ್ಯತೆ: ಭಾರತವು ಬಲವಾದ ವಿರಳ ಲೋಹದ ಸಂಪನ್ಮೂಲ ಮೂಲವನ್ನು ಹೊಂದಿದ್ದರೂ, ಶಾಶ್ವತ ಮ್ಯಾಗ್ನೆಟ್‌ಗಳ ದೇಶೀಯ ಉತ್ಪಾದನೆಯು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಪ್ರಸ್ತುತ ನಮ್ಮ ಹೆಚ್ಚಿನ ಬೇಡಿಕೆಯನ್ನು (2022-25ರ ನಡುವೆ ಮೌಲ್ಯದ ಆಧಾರದ ಮೇಲೆ ಶೇ. 60–80 ರಷ್ಟು ಮತ್ತು ಪ್ರಮಾಣದ ಆಧಾರದ ಮೇಲೆ ಶೇ. 85–90 ರಷ್ಟು) ಮುಖ್ಯವಾಗಿ ಚೀನಾದಿಂದ ಆಮದು ಮಾಡಿಕೊಳ್ಳುವ ಮೂಲಕ ಪೂರೈಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ವಲಯಗಳ ಕ್ಷಿಪ್ರ ಬೆಳವಣಿಗೆಯಿಂದಾಗಿ, ವಿರಳ ಲೋಹದ ಶಾಶ್ವತ ಮ್ಯಾಗ್ನೆಟ್‌ಗಳ ಬಳಕೆ 2030ರ ವೇಳೆಗೆ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಆದ್ದರಿಂದ, ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೀರ್ಘಕಾಲೀನ ಆತ್ಮನಿರ್ಭರತೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ದೇಶೀಯ ಸಾಮರ್ಥ್ಯವನ್ನು ವಿಸ್ತರಿಸುವುದು ಮತ್ತು ಈ ವಲಯದಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯವಾಗಿದೆ.

ವಿರಳ ಲೋಹಗಳ ಉತ್ಪಾದನೆ ಮತ್ತು ಕಾರಿಡಾರ್‌ಗಳಿಗೆ ಬಜೆಟ್ ಉತ್ತೇಜನ: ಇತ್ತೀಚೆಗೆ ಅನುಮೋದಿಸಲಾದ ವಿರಳ ಲೋಹದ ಶಾಶ್ವತ ಮ್ಯಾಗ್ನೆಟ್ (ಆರ್‌ಇಪಿಎಂ) ಉತ್ಪಾದನಾ ಯೋಜನೆ ಮತ್ತು ಹೊಸದಾಗಿ ಘೋಷಿಸಲಾದ ಕಾರಿಡಾರ್ ಆಧಾರಿತ ಉಪಕ್ರಮಗಳ ಮೂಲಕ, 2026-27ರ ಕೇಂದ್ರ ಬಜೆಟ್ ನಿರ್ಣಾಯಕ ವಸ್ತುಗಳ ವಿಷಯದಲ್ಲಿ ಭಾರತದ ಆತ್ಮನಿರ್ಭರತೆಯನ್ನು ಹೆಚ್ಚಿಸಲು ಹೆಚ್ಚಿನ ಒತ್ತು ನೀಡಿದೆ. ಈ ಕ್ರಮಗಳು ದೇಶೀಯ ಸಾಮರ್ಥ್ಯವನ್ನು ಬಲಪಡಿಸಲು, ಆಮದು ಅವಲಂಬನೆಯನ್ನು ತಗ್ಗಿಸಲು ಮತ್ತು ಸುಧಾರಿತ ವಸ್ತುಗಳ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ರೂಪಿಸಲು ಒಂದು ಸಮಗ್ರ ಚೌಕಟ್ಟನ್ನು ಸೃಷ್ಟಿಸಿವೆ.

  • ಆರ್‌ಇಪಿಎಂ ಉತ್ಪಾದನಾ ಯೋಜನೆ

ನಿರ್ಣಾಯಕ ವಸ್ತುಗಳ ವಿಷಯದಲ್ಲಿ ಭಾರತದ ಆತ್ಮನಿರ್ಭರತೆಯನ್ನು ಬಲಪಡಿಸಲು, ಸರ್ಕಾರವು 26 ನವೆಂಬರ್ 2025 ರಂದು ವಿರಳ ಲೋಹದ ಶಾಶ್ವತ ಮ್ಯಾಗ್ನೆಟ್‌ಗಳ (ಆರ್‌ಇಪಿಎಂ) ಅಭಿವೃದ್ಧಿಗಾಗಿ ಬೃಹತ್ ಯೋಜನೆಯನ್ನು ಅನುಮೋದಿಸಿದೆ. ಈ ಉಪಕ್ರಮವು ಸಂಪೂರ್ಣ ಸಂಯೋಜಿತ ದೇಶೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಹಣಕಾಸಿನ ನೆರವು ಮತ್ತು ಪ್ರೋತ್ಸಾಹಕಗಳನ್ನು ಒದಗಿಸುತ್ತದೆ.

  • ಹಣಕಾಸಿನ ಹಂಚಿಕೆ: ₹7,280 ಕೋಟಿ.
  • ಸಾಮರ್ಥ್ಯ ಸೃಷ್ಟಿ: ಜಾಗತಿಕ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಗರಿಷ್ಠ ಐದು ಫಲಾನುಭವಿಗಳನ್ನು ಆಯ್ಕೆ ಮಾಡಿ, ವಾರ್ಷಿಕ 6,000 ಮೆಟ್ರಿಕ್ ಟನ್ ಸಂಯೋಜಿತ 'ಸಿಂಟರ್ಡ್ ಆರ್‌ಇಪಿಎಂ' ಉತ್ಪಾದನಾ ಸಾಮರ್ಥ್ಯವನ್ನು ಸೃಷ್ಟಿಸುವುದು.
  • ಪ್ರೋತ್ಸಾಹಧನ: ಐದು ವರ್ಷಗಳ ಅವಧಿಗೆ ₹6,450 ಕೋಟಿ ಮೊತ್ತದ ಮಾರಾಟ ಆಧಾರಿತ ಪ್ರೋತ್ಸಾಹಧನ.
  • ಬಂಡವಾಳ ಸಬ್ಸಿಡಿ: ಅತ್ಯಾಧುನಿಕ ಸೌಲಭ್ಯಗಳ ಸ್ಥಾಪನೆಗೆ ಬೆಂಬಲ ನೀಡಲು ₹750 ಕೋಟಿ ಬಂಡವಾಳ ಸಬ್ಸಿಡಿ.
  • ಕಾಲಮಿತಿ: ಸೌಲಭ್ಯಗಳ ಸ್ಥಾಪನೆಗಾಗಿ ಎರಡು ವರ್ಷಗಳ ಕಾಲಾವಕಾಶ, ನಂತರ ಉತ್ಪಾದನೆಗೆ ಅನುಗುಣವಾಗಿ ಐದು ವರ್ಷಗಳ ಕಾಲ ಪ್ರೋತ್ಸಾಹಧನ ವಿತರಣೆ.
  • ಉದ್ದೇಶ: ವಿರಳ ಲೋಹದ ಆಕ್ಸೈಡ್‌ಗಳಿಂದ ಹಿಡಿದು ಸಿದ್ಧಪಡಿಸಿದ ಮ್ಯಾಗ್ನೆಟ್‌ಗಳವರೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವುದು. ಈ ಮೂಲಕ ಎಲೆಕ್ಟ್ರಿಕ್ ವಾಹನಗಳು, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ರಕ್ಷಣಾ ವಲಯಗಳಿಗೆ ನಿರಂತರ ಪೂರೈಕೆಯನ್ನು ಖಚಿತಪಡಿಸುವುದು.

ಕೇಂದ್ರ ಬಜೆಟ್ 2026–27: ವಿರಳ ಲೋಹದ ಕಾರಿಡಾರ್‌ಗಳು

ಆರ್‌ಇಪಿಎಂ ಯೋಜನೆಯನ್ನು ಮತ್ತಷ್ಟು ಬಲಪಡಿಸಲು, 2026-27ರ ಕೇಂದ್ರ ಬಜೆಟ್‌ನಲ್ಲಿ ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ 'ವಿಶಿಷ್ಟ ವಿರಳ ಲೋಹ ಕಾರಿಡಾರ್‌ಗಳನ್ನು' ಘೋಷಿಸಲಾಗಿದೆ. ಈ ರಾಜ್ಯಗಳಲ್ಲಿರುವ ಹೇರಳವಾದ ಖನಿಜ ಸಂಪನ್ಮೂಲಗಳನ್ನು ಬಳಸಿಕೊಂಡು ಗಣಿಗಾರಿಕೆ, ಸಂಸ್ಕರಣೆ, ಸಂಶೋಧನೆ ಮತ್ತು ಉತ್ಪಾದನೆಯ ಮೇಲೆ ಈ ಕಾರಿಡಾರ್‌ಗಳು ಗಮನ ಹರಿಸಲಿವೆ. ಈ ಉಪಕ್ರಮವು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಲು, ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಜಾಗತಿಕ ಸುಧಾರಿತ-ವಸ್ತುಗಳ ಮೌಲ್ಯ ಸರಪಳಿಯಲ್ಲಿ ಭಾರತವನ್ನು ಪ್ರಮುಖ ಸ್ಥಾನದಲ್ಲಿರಿಸಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹಿಂದೆ ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ ಎಂದು ಕರೆಯಲ್ಪಡುತ್ತಿದ್ದಐಆರ್‌ಇಎಲ್‌(ಇಂಡಿಯಾ) ಲಿಮಿಟೆಡ್, 1963 ರಿಂದ ಪರಮಾಣು ಇಂಧನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಾರ್ಷಿಕ 10 ಲಕ್ಷ ಟನ್ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿರುವ ಇದು ಇಲ್ಮೆನೈಟ್, ರೂಟೈಲ್, ಜಿರ್ಕಾನ್, ಸಿಲ್ಲಿಮನೈಟ್ ಮತ್ತು ಗಾರ್ನೆಟ್‌ನಂತಹ ಆಯಕಟ್ಟಿನ ಖನಿಜಗಳನ್ನು ಉತ್ಪಾದಿಸುತ್ತದೆ. ಮುಖ್ಯವಾಗಿ, ಐಆರ್‌ಇಎಲ್‌ ಸಂಸ್ಥೆಯು ಒಡಿಶಾದಲ್ಲಿ ಅಪರೂಪದ ಭೂಮಿಯ ಹೊರತೆಗೆಯುವ ಘಟಕವನ್ನು ಮತ್ತು ಕೇರಳದ ಆಲುವಾದಲ್ಲಿ ಅಪರೂಪದ ಭೂಮಿಯ ಶುದ್ಧೀಕರಣ ಘಟಕವನ್ನು ನಡೆಸುತ್ತಿದ್ದು, ಇವೆರಡೂ ಈ ಕಾರಿಡಾರ್ ಉಪಕ್ರಮದೊಂದಿಗೆ ಹೊಂದಾಣಿಕೆಯಾಗುತ್ತವೆ. ಐಆರ್‌ಇಎಲ್‌ ನ ಸುಸ್ಥಾಪಿತ ಸೌಲಭ್ಯಗಳನ್ನು ಹೊಸ ಕಾರಿಡಾರ್‌ಗಳೊಂದಿಗೆ ಸಂಯೋಜಿಸುವ ಮೂಲಕ, ದೇಶೀಯ ಅಪರೂಪದ ಭೂಮಿಯ ಸಾಮರ್ಥ್ಯವನ್ನು ವಿಸ್ತರಿಸಲು, ಸುಧಾರಿತ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಸ್ವಾವಲಂಬನೆ ಹಾಗೂ ಹಸಿರು ಇಂಧನದತ್ತ ಭಾರತದ ಪಯಣವನ್ನು ವೇಗಗೊಳಿಸಲು ಸರ್ಕಾರ ಗುರಿ ಹೊಂದಿದೆ.

ರಾಷ್ಟ್ರೀಯ ಗುರಿಗಳೊಂದಿಗೆ ಅಪರೂಪದ ಭೂಮಿಯ ಅಭಿವೃದ್ಧಿಯ ಹೊಂದಾಣಿಕೆ

ಭಾರತದ ಇತ್ತೀಚಿನ ನೀತಿ ಕ್ರಮಗಳು ಅಪರೂಪದ ಭೂಮಿಯ ಅಭಿವೃದ್ಧಿಯನ್ನು ವಿಶಾಲವಾದ ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೇಗೆ ಜೋಡಿಸಲಾಗುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತವೆ. ಈ ಗಮನವು ಕೇವಲ ಕೈಗಾರಿಕಾ ಬೆಳವಣಿಗೆಯ ಮೇಲೆ ಮಾತ್ರವಲ್ಲದೆ, ಹಸಿರು ಇಂಧನ, ರಕ್ಷಣೆ ಮತ್ತು ಆಯಕಟ್ಟಿನ ಸಂಪನ್ಮೂಲ ಭದ್ರತೆಯ ಮೇಲೆಯೂ ಇದೆ.

  • ಸ್ವಾವಲಂಬನೆ (ಆತ್ಮನಿರ್ಭರ ಭಾರತ): 2022-25ರ ನಡುವೆ ಶಾಶ್ವತ ಕಾಂತಗಳ ಮೌಲ್ಯದ ಶೇಕಡಾ 60-80 ರಷ್ಟು ಮತ್ತು ಪ್ರಮಾಣದ ಶೇಕಡಾ 85-90 ರಷ್ಟು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ, ಭಾರತವು ತನ್ನ ದೇಶೀಯ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ನಿರ್ಣಾಯಕ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸಲು ಗುರಿ ಹೊಂದಿದೆ.
  • ಹಸಿರು ಇಂಧನ ಪರಿವರ್ತನೆ: ಅಪರೂಪದ ಭೂಮಿಯ ಕಾಂತಗಳು  ಎಲೆಕ್ಟ್ರಿಕ್ ವಾಹನಗಳ ಮೋಟಾರ್‌ಗಳು ಮತ್ತು ಪವನ ಶಕ್ತಿ ಉತ್ಪಾದಕಗಳಿಗೆ ಅತ್ಯಗತ್ಯ. ಇವೆರಡೂ ಭಾರತದ ನವೀಕರಿಸಬಹುದಾದ ಇಂಧನ ವಿಸ್ತರಣೆ ಮತ್ತು 2070 'ನೆಟ್ ಝೀರೋ' ಗುರಿಗೆ ಕೇಂದ್ರಬಿಂದುವಾಗಿವೆ. ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಕಾರಿಡಾರ್‌ಗಳು ಖನಿಜ ಸಮೃದ್ಧ ರಾಜ್ಯಗಳು ಈ ಪರಿವರ್ತನೆಗೆ ನೇರವಾಗಿ ಕೊಡುಗೆ ನೀಡುವುದನ್ನು ಖಚಿತಪಡಿಸುತ್ತವೆ.
  • ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆ: ಅಪರೂಪದ ಭೂಮಿಯ ಕಾಂತಗಳು ಏರೋಸ್ಪೇಸ್ ವ್ಯವಸ್ಥೆಗಳು, ರಕ್ಷಣಾ ಉಪಕರಣಗಳು ಮತ್ತು ನಿಖರ ಸಂವೇದಕಗಳಿಗೆ ಅತ್ಯಂತ ಪ್ರಮುಖವಾಗಿವೆ. ದೇಶೀಯ ಕಾರಿಡಾರ್‌ಗಳು ಮತ್ತು ಉತ್ಪಾದನಾ ಸಾಮರ್ಥ್ಯವು ಆಯಕಟ್ಟಿನ ಅನ್ವಯಿಕೆಗಳಿಗೆ ಸುರಕ್ಷಿತ ಪ್ರವೇಶವನ್ನು ಖಚಿತಪಡಿಸುತ್ತದೆ, ಇದು ಜಾಗತಿಕ ಪೂರೈಕೆ ಸರಪಳಿಯ ಅಡೆತಡೆಗಳಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
  • ನೀತಿ ಮತ್ತು ಸಾಂಸ್ಥಿಕ ಸುಧಾರಣೆಗಳು: ಈ ಉಪಕ್ರಮಗಳು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ (ಎಂಎಂಡಿಆರ್‌ ಕಾಯ್ದೆ, 2023 ರ ತಿದ್ದುಪಡಿ) ಅಡಿಯಲ್ಲಿ ತರಲಾದ ಸುಧಾರಣೆಗಳಿಗೆ ಪೂರಕವಾಗಿವೆ. ಈ ಕಾಯ್ದೆಯು ನಿರ್ಣಾಯಕ ಖನಿಜಗಳ ಪ್ರತ್ಯೇಕ ಪಟ್ಟಿಯನ್ನು ಪರಿಚಯಿಸಿತು ಮತ್ತು ಖಾಸಗಿ ಸಹಭಾಗಿತ್ವಕ್ಕೆ ಪರಿಶೋಧನೆ ಹಾಗೂ ಗಣಿಗಾರಿಕೆಯನ್ನು ಮುಕ್ತಗೊಳಿಸಿತು. ಇವು ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ (ಎನ್‌ಸಿಎಂಎಂ ಜನವರಿ 2025 ರಲ್ಲಿ ಅನುಮೋದಿಸಲಾಗಿದೆ) ನೊಂದಿಗೆ ಹೊಂದಿಕೆಯಾಗುತ್ತವೆ, ಇದು ಅಪರೂಪದ ಭೂಮಿ ಮತ್ತು ಇತರ ಆಯಕಟ್ಟಿನ ಖನಿಜಗಳ ಸುಸ್ಥಿರ ಪೂರೈಕೆ ಸರಪಳಿಗಳನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.

ಜಾಗತಿಕ ಖನಿಜ ಪಾಲುದಾರಿಕೆಗಳ ಬಲವರ್ಧನೆ

 ಭಾರತದ ಅಪರೂಪದ ಭೂಮಿ ಮತ್ತು ನಿರ್ಣಾಯಕ ಖನಿಜಗಳ ಕಾರ್ಯತಂತ್ರವು ಕೇವಲ ದೇಶೀಯ ಸುಧಾರಣೆಗಳಿಗೆ ಸೀಮಿತವಾಗಿಲ್ಲ; ಇದು ಚೇತೋಹಾರಿ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಅಂತರಾಷ್ಟ್ರೀಯ ಸಹಕಾರದೊಂದಿಗೆ ನಿಕಟವಾಗಿ ಸಂಬಂಧಿಸಿದೆ.

ದ್ವಿಪಕ್ಷೀಯ ಒಪ್ಪಂದಗಳು

  • ಗಣಿ ಸಚಿವಾಲಯವು ಆಸ್ಟ್ರೇಲಿಯಾ, ಅರ್ಜೆಂಟೀನಾ, ಜಾಂಬಿಯಾ, ಮೊಜಾಂಬಿಕ್, ಪೆರು, ಜಿಂಬಾಬ್ವೆ, ಮಲಾವಿ ಮತ್ತು ಕೋಟ್ ಡಿ ಐವರಿಯಂತಹ ಖನಿಜ ಸಮೃದ್ಧ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ.
  • ಈ ಪಾಲುದಾರಿಕೆಗಳು ಹಸಿರು ಇಂಧನ, ಸುಧಾರಿತ ಚಲನಶೀಲತೆ ಮತ್ತು ರಕ್ಷಣಾ ಅನ್ವಯಿಕೆಗಳಿಗೆ ಅಗತ್ಯವಾದ ಅಪರೂಪದ ಭೂಮಿ ಹಾಗೂ ಇತರ ನಿರ್ಣಾಯಕ ಖನಿಜಗಳಿಗೆ ದೀರ್ಘಕಾಲದ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ.

ಬಹುವಿಧದ ವೇದಿಕೆಗಳು

  • ಭಾರತವು ಮಿನರಲ್ಸ್ ಸೆಕ್ಯುರಿಟಿ ಪಾರ್ಟ್‌ನರ್‌ಶಿಪ್ ನಲ್ಲಿ ಭಾಗವಹಿಸುತ್ತಿದೆ; ಇದು ನಿರ್ಣಾಯಕ ಖನಿಜಗಳ ಜಾಗತಿಕ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ಮತ್ತು ಸುರಕ್ಷಿತಗೊಳಿಸಲು ಗಮನಹರಿಸುವ ಪ್ರಮುಖ ಆರ್ಥಿಕತೆಗಳ ಗುಂಪಾಗಿದೆ.
  • ಭಾರತವು ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್‌ವರ್ಕ್ ನ ಭಾಗವೂ ಆಗಿದ್ದು, ಇದು ಹಸಿರು ಇಂಧನ ಮತ್ತು ನಿರ್ಣಾಯಕ ಖನಿಜ ಪೂರೈಕೆ ಸರಪಳಿಗಳ ಮೇಲಿನ ಸಹಕಾರವನ್ನು ಒಳಗೊಂಡಿದೆ.
  • ಈ ವೇದಿಕೆಗಳು ಭಾರತಕ್ಕೆ ತಂತ್ರಜ್ಞಾನ, ಹೂಡಿಕೆ ಮತ್ತು ಸುಸ್ಥಿರ ಗಣಿಗಾರಿಕೆ ಪದ್ಧತಿಗಳಲ್ಲಿ ಸಹಕರಿಸಲು ಅವಕಾಶಗಳನ್ನು ಒದಗಿಸುತ್ತವೆ, ಇದು ಪೂರೈಕೆ ವ್ಯತ್ಯಯದ ಅಪಾಯಗಳನ್ನು ಕಡಿಮೆ ಮಾಡುತ್ತದೆ.

ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್ ನ ಪಾತ್ರ

  • ಕೆಎಬಿಐಎಲ್‌ ಎಂಬುದು ಗಣಿ ಸಚಿವಾಲಯದ ಅಡಿಯಲ್ಲಿರುವ ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್, ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಮತ್ತು ಮಿನರಲ್ ಎಕ್ಸ್‌ಪ್ಲೋರೇಷನ್ ಅಂಡ್ ಕನ್ಸಲ್ಟೆನ್ಸಿ ಲಿಮಿಟೆಡ್ ಗಳ ಜಂಟಿ ಉದ್ಯಮವಾಗಿದೆ.
  • ಭಾರತದ ದೇಶೀಯ ಮೌಲ್ಯ ಸರಪಳಿಗಳನ್ನು ಬಲಪಡಿಸಲು ವಿದೇಶಿ ಖನಿಜ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅಭಿವೃದ್ಧಿಪಡಿಸುವುದು ಇದರ ಮುಖ್ಯ ಜವಾಬ್ದಾರಿಯಾಗಿದೆ.
  • ಕೆಎಬಿಐಎಲ್‌ ಸಂಸ್ಥೆಯು ಅರ್ಜೆಂಟೀನಾದ ಸಿಎಎಂವೈಇಎನ್‌ ಜೊತೆಗೆ ಐದು ಲಿಥಿಯಂ ಬ್ರೈನ್ ಬ್ಲಾಕ್‌ಗಳ ಪರಿಶೋಧನೆ ಮತ್ತು ಗಣಿಗಾರಿಕೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ, ಇದು ವಿದೇಶಿ ನಿರ್ಣಾಯಕ ಖನಿಜ ಆಸ್ತಿಗಳನ್ನು ಪಡೆಯುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

ಉಪಸಂಹಾರ

ಭಾರತದ ಅಪರೂಪದ ಭೂಮಿ ಕಾರ್ಯತಂತ್ರವು ಪ್ರಬಲವಾದ ದೇಶೀಯ ಸಂಪನ್ಮೂಲ ಸಾಮರ್ಥ್ಯದೊಂದಿಗೆ ನಿರ್ದಿಷ್ಟ ನೀತಿ ಮತ್ತು ಆರ್ಥಿಕ ಬೆಂಬಲವನ್ನು ಸಂಯೋಜಿಸುವ ಮೂಲಕ ಸ್ವಾವಲಂಬನೆಯತ್ತ ದೃಢವಾಗಿ ಸಾಗುತ್ತಿದೆ. ₹7,280 ಕೋಟಿ ವೆಚ್ಚದ ಆರ್‌ಇಪಿಎಂ ಉತ್ಪಾದನಾ ಯೋಜನೆ ಮತ್ತು 2026-27ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಮೀಸಲಾದ ಅಪರೂಪದ ಭೂಮಿಯ ಕಾರಿಡಾರ್‌ಗಳು ಒಟ್ಟಾಗಿ ಗಣಿಗಾರಿಕೆ, ಸಂಸ್ಕರಣೆ, ಸಂಶೋಧನೆ ಮತ್ತು ಉತ್ಪಾದನೆಗಾಗಿ ಒಂದು ಸಮಗ್ರ ಚೌಕಟ್ಟನ್ನು ಸೃಷ್ಟಿಸುತ್ತವೆ. ಈ ಕ್ರಮಗಳು ಆಮದು ಅವಲಂಬನೆಯನ್ನು ಕಡಿಮೆ ಮಾಡುವುದಲ್ಲದೆ, ಹಸಿರು ಇಂಧನ ಮತ್ತು ರಕ್ಷಣಾ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತವೆ. ಅಲ್ಲದೆ, ಇವು ಆತ್ಮನಿರ್ಭರ ಭಾರತ, ನೆಟ್ ಝೀರೋ 2070 ಮತ್ತು ವಿಕಸಿತ ಭಾರತ@2047 ರಂತಹ ರಾಷ್ಟ್ರೀಯ ಆದ್ಯತೆಗಳೊಂದಿಗೆ ಸುಸಂಬದ್ಧವಾಗಿ ಹೊಂದಿಕೆಯಾಗುತ್ತವೆ. ಪೂರಕ  ಅಂತರಾಷ್ಟ್ರೀಯ ಪಾಲುದಾರಿಕೆಗಳು ಮತ್ತು ಸಾಂಸ್ಥಿಕ ಸುಧಾರಣೆಗಳು ನಿರ್ಣಾಯಕ ಖನಿಜಗಳ ನಿರಂತರ ಲಭ್ಯತೆಯನ್ನು ಮತ್ತಷ್ಟು ಖಚಿತಪಡಿಸುತ್ತವೆ. ಸಮನ್ವಯದ ದೇಶೀಯ ಮತ್ತು ಜಾಗತಿಕ ಉಪಕ್ರಮಗಳೊಂದಿಗೆ, ಭಾರತವು ಸುಧಾರಿತ ವಸ್ತುಗಳ ಮೌಲ್ಯ ಸರಪಳಿಗಳಲ್ಲಿ ತನ್ನನ್ನು ತಾನು ವಿಶ್ವಾಸಾರ್ಹ ಮತ್ತು ಸ್ಪರ್ಧಾತ್ಮಕ ಶಕ್ತಿಯಾಗಿ ಗುರುತಿಸಿಕೊಳ್ಳುತ್ತಿದೆ.

 

******

 

(Explainer ID: 157191) आगंतुक पटल : 7
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati , Malayalam
Link mygov.in
National Portal Of India
STQC Certificate